ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಬ್ರಹ್ಮದತ್ತ ಪೂಜನಿ ಸಂವಾದ

ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಶತ್ರುಗಳನ್ನು ನಂಬಬೇಡ ಎಂದು ನೀವು ಸಲಹೆಯನ್ನಿತ್ತಿದ್ದೀರಿ. ಒಳ್ಳೆಯದು, ಆದರೆ ’ರಾಜನಾದವನು ಯಾರನ್ನೂ ವಿಶ್ವಸಿಸಬಾರದು’ ಎಂದು ಕೂಡಾ ತಾವು ಹೇಳುತ್ತಿದ್ದೀರಿ. ಆಡಳಿತಾರೂಢರು ಯಾವಾಗಲೂ ಅವಿಶ್ವಾಸದಿಂದ ಇದ್ದರೆ ರಾಜ್ಯದ ವ್ಯವಹಾರಗಳು ಹೇಗೆ ನಡೆಯುತ್ತವೆ? ವಿಶ್ವಾಸವಿರಿಸುವ ರಾಜರಿಗೇ ಪ್ರಮಾದಗಳು ಉಂಟಾಗುವಾಗ ಇನ್ನು ಯಾರನ್ನೂ ನಂಬದಿರುವ ರಾಜನು ಶತ್ರುಗಳ ಮೇಲೆ ವಿಜಯವನ್ನು ಹೇಗೆ ತಾನೆ ಗಳಿಸಬಲ್ಲ? ಈ ’ಅವಿಶ್ವಾಸ ಸಿದ್ಧಾಂತ’ದಿಂದ ಅದೇಕೊ ನನಗೆ ಮತಿಭ್ರಮಣೆಯಾಗುತ್ತಿದೆ. ದಯವಿಟ್ಟು ನನ್ನ ಸಂಶಯವನ್ನು ನಿವಾರಿಸುವಂತಹರಾಗಿ"
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ನಿನ್ನ ಸಂಶಯವನ್ನು ನಿವಾರಿಸುವುದಕ್ಕೆ ಬ್ರಹ್ಮದತ್ತನೆಂಬ ರಾಜನಿಗೂ ಪೂಜನಿ ಎನ್ನುವ ಶುಕಕ್ಕೂ ಜರುಗಿದ ಸಂವಾದವನ್ನು ತಿಳಿಸುತ್ತೇನೆ, ಚಿತ್ತವಿರಿಸಿ ಕೇಳಿಸಿಕೊಳ್ಳುವಂತಹವನಾಗು"
"ಪೂರ್ವದಲ್ಲಿ ಕಾಂಪಿಲ್ಯನಗರದಲ್ಲಿ ಬ್ರಹ್ಮದತ್ತನೆಂಬ ರಾಜನಿದ್ದನು. ಅವನ ಅಂತಃಪುರದಲ್ಲಿ ಪೂಜನಿ ಎನ್ನುವ ಶುಕವೊಂದಿತ್ತು. ಅದು ಬಹು ದೀರ್ಘಕಾಲದಿಂದ ಅಲ್ಲಿಯೇ ವಾಸಿಸುತ್ತಿತ್ತು. ಆ ಗಿಳಿಗೆ ಸಕಲ ಪ್ರಾಣಿಗಳ ಭಾಷೆಗಳ ಪರಿಣಿತಿಯಿತ್ತು. ಸ್ವಲ್ಪಕಾಲಕ್ಕೆ, ಅದಕ್ಕೆ ಒಂದು ಮರಿಯು ಜನಿಸಿತು. ಕಾಕತಾಳೀಯವೆಂಬಂತೆ ಇದೇ ಕಾಲಕ್ಕೆ ರಾಣಿಯೂ ಸಹ ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪೂಜನಿ ಗಿಳಿಯು ಅದೆಲ್ಲಿಂದಲೋ ದಿನವೂ ಎರಡು ಹಣ್ಣುಗಳನ್ನು ತರುತ್ತಿತ್ತು. ಒಂದನ್ನು ತನ್ನ ಮರಿಗೆ ಕೊಟ್ಟರೆ ಇನ್ನೊಂದನ್ನು ರಾಜಕುಮಾರನಿಗೆ ಕೊಡುತ್ತಿತ್ತು. ಗಿಳಿಯ ಮರಿ ಹಾಗು ರಾಜ ಕುವರನೂ ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯತೊಡಗಿದರು. ಒಂದು ದಿನ ದಾಸಿಯೊಂದಿಗೆ ಬಂದ ರಾಜಕುಮಾರನು ಗಿಳಿಯ ಮರಿಯೊಂದಿಗೆ ಆಟವಾಡುತ್ತಾ ಆಡುತ್ತಾ ಅದರ ಕುತ್ತಿಗೆಯನ್ನು ಹಿಡಿದುಕೊಂಡು ಗಟ್ಟಿಯಾಗಿ ಹಿಸುಕಿದ. ಇದರಿಂದಾಗಿ ಆ ಗಿಳಿಮರಿ ಉಸಿರುಗಟ್ಟಿ ಅಲ್ಲೇ ಪ್ರಾಣಬಿಟ್ಟಿತು. ಆ ಗಿಳಿಮರಿಯನ್ನು ಅಲ್ಲಿ ಬಿಟ್ಟವನೇ ರಾಜಕುಮಾರ ಓಡಿಹೋಗಿ ದಾಸಿಯ ಮಡಿಲನ್ನು ಸೇರಿಕೊಂಡ".
ಎಂದಿನಂತೆ, ಎರಡು ಹಣ್ಣುಗಳನ್ನು ತೆಗೆದುಕೊಂಡು ಪೂಜನಿಯು ಅಲ್ಲಿಗೆ ಬಂದಿತು. ಅದು ತನ್ನ ಮರಿಯು ಸತ್ತು ಬಿದ್ದಿರುವುದನ್ನು ನೋಡಿತು, ಅದಕ್ಕೆ ಏನು ನಡೆದಿರಬಹುದೆನ್ನುವ ವಿಷಯದ ಅರಿವಾಯಿತು. ಅದು ಕೋಪದಿಂದ ಕೆಂಡಾಮಂಡಲವಾಯಿತು. ಆ ಕೋಪದ ಭರದಲ್ಲಿ ಅಲ್ಲಿಂದ ಅದು ವೇಗವಾಗಿ ರಾಜಕುಮಾರನಿದ್ದಲ್ಲಿಗೆ ಹೋಗಿ ಅವನ ಎರಡೂ ಕಣ್ಣುಗುಡ್ಡೆಗಳನ್ನು ತನ್ನ ಉಗುರುಗಳಿಂದ ಕಿತ್ತು ಹಾಕಿತು. ಆ ಹುಡುಗನು ಕಣ್ಣಿಲ್ಲದ ಕುರುಡನಾದನು. ಕೂಡಲೇ ಗಿಳಿಯು ಆಕಾಶಕ್ಕೆ ಹಾರಿ, ಬ್ರಹ್ಮದತ್ತನನ್ನು ಉದ್ದೇಶಿಸಿ, "ರಾಜಾ! ನಿನ್ನ ಕುಮಾರನು ಮಾಡಿದ ಪಾಪಕ್ಕೆ ಫಲವಿದು. ಅದರಲ್ಲಿ ನನ್ನ ತಪ್ಪೇನೂ ಇಲ್ಲ. ಅವನು ನನಗೆ ಕೇಡನ್ನು ಮಾಡಿದ, ನಾನು ಪ್ರತೀಕಾರ ಮಾಡಿದೆನಷ್ಟೆ, ಅದರಿಂದ ನನಗೆ ಯಾವುದೇ ದೋಷ ತಟ್ಟುವುದಿಲ್ಲ" ಎಂದು ಹೇಳಿತು. ಆಗ ಬ್ರಹ್ಮದತ್ತನು, "ನಮ್ಮಿಂದಾಗಿ ನಿನಗೆ ಅಪಕಾರವುಂಟಾಯಿತು. ಅದಕ್ಕೆ ನೀನು ಪ್ರತೀಕಾರವನ್ನು ತೀರಿಸಿಕೊಂಡಿದ್ದೀಯ, ’ಮುಯ್ಯಿಗೆ ಮುಯ್ಯಿ’ ಸರಿಯಾಯಿತು. ಇನ್ನು ನೀನು ಇಲ್ಲಿಯೇ ಇರು, ಎಲ್ಲಿಗೂ ಹೋಗಬೇಡ" ಎಂದು ಹೇಳಿದನು.
"ಪೂಜನಿಯು ಹೀಗೆ ಹೇಳಿತು, " ರಾಜಾ! ಒಬ್ಬರಿಗೆ ಅಪಕಾರ ಮಾಡಿ, ಅವರ ಆಶ್ರಯದಲ್ಲಿಯೇ ಪುನಃ ಇರುವುದಕ್ಕೆ ಯಾರೂ ಹರ್ಷಿಸುವುದಿಲ್ಲ. ಆದ್ದರಿಂದ ಅಲ್ಲಿಂದ ನಿರ್ಗಮಿಸುವುದೇ ಉತ್ತಮವಾದ ಕಾರ್ಯ"
"ಯಾರೊಂದಿಗಾದರೂ ಶತ್ರುತ್ವವು ಉಂಟಾದರೆ, ಆ ಮಾತು ಈ ಮಾತು ಕೇಳಿ ಮೋಸಹೋಗಿ ಪುನಃ ಅವರನ್ನು ನಂಬುವುದು ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ವೈರತ್ವವೆಂಬ ಅಗ್ನಿಯು ಶಮನವಾಗುವುದಿಲ್ಲ. ವಂಶಪಾರಂಪರ್ಯವಾಗಿ ಹಾಗೆ ನಂಬಿಕೊಂಡಿರುವುದೂ ಸಹ ಮೂರ್ಖತನವೇ ಆಗುತ್ತದೆ. ಹಾಗೆ ನಂಬಿದವನು ಶೀಘ್ರದಲ್ಲಿಯೇ ನಾಶವಾಗುತ್ತಾನೆ"
"ಎಲ್ಲಿಯಾದರೂ ಪರಸ್ಪರ ಶತ್ರುತ್ವವು ಏರ್ಪಟ್ಟಿದ್ದರೆ ಆ ವೈರತ್ವವು ಶಮನವಾಗದು. ವಂಶಪಾರಂಪರ್ಯವಾಗಿ ಪುತ್ರಪೌತ್ರಾದಿಗಳವರೆಗೆ ಅದು ಮುಂದುವರೆಯುತ್ತದೆ. ಅವರು ನಾಶವಾದ ಮೇಲೂ ಸಹ ಪರಲೋಕದಲ್ಲಿಯೂ ಸಹ ಅದು ದೂರವಾಗುವುದಿಲ್ಲ."
"ಆದ್ದರಿಂದ ಪರಸ್ಪರ ಶತ್ರುತ್ವವನ್ನು ಬೆಳೆಸಿಕೊಂಡವರು ಸುಖವಾಗಿರಲು ಇರುವ ಏಕೈಕ ಉಪಾಯವು, ಅವರು ಪರಸ್ಪರರನ್ನು ನಂಬದೇ ಇರುವುದಾಗಿದೆ. ಇನ್ನು ವಿಶ್ವಾಸಘಾತುಕರನ್ನು ಯಾವ ಕಾರಣಕ್ಕೂ ನಂಬಕೂಡದು".
"ವಿಶ್ವಾಸಪಾತ್ರರಲ್ಲದವರನ್ನಷ್ಟೇ ಅಲ್ಲ ವಿಶ್ವಾಸಪಾತ್ರರಾದವರನ್ನೂ ಸಹ ಅತಿಯಾಗಿ ನಂಬಬಾರದು"
"ಆದ್ದರಿಂದ ರಾಜಾ! ನಾನು ನಿನ್ನ ಬಳಿಯಲ್ಲಿರುವುದು ಇಬ್ಬರಿಗೂ ಕ್ಷೇಮವಲ್ಲ"
"ಪೂಜನಿಯ ಮಾತುಗಳಿಗೆ ಪ್ರತ್ಯುತ್ತರಿಸುತ್ತಾ ಬ್ರಹ್ಮದತ್ತನು, "ಸೇಡಿಗೆ ಸೇಡು ತೀರಿಸಿಕೊಂಡ ಬಳಿಕವೂ ಇನ್ನೆಲ್ಲಿಯ ಶತ್ರುತ್ವವು ಇರುತ್ತದೆ?" ಎಂದು ಕೇಳಿದನು"
"ರಾಜಾ! ಸೇಡು ತೀರಿಸಿಕೊಂಡ ಮಾತ್ರಕ್ಕೆ ವೈರಾಗ್ನಿಯು ತಣ್ಣಗಾಗುತ್ತದೆ ಎಂದುಕೊಳ್ಳುತ್ತಿರುವೆಯಾ?" ಎಂದು ಪೂಜನಿಯು ಬ್ರಹ್ಮದತ್ತನನ್ನು ಮರುಪ್ರಶ್ನೆ ಮಾಡಿತು. ಆಗ ಬ್ರಹ್ಮದತ್ತನು, "ಇಬ್ಬರೂ ಕೂಡಿಕೊಂಡು ಸಹಬಾಳ್ವೆ ಮಾಡಿಕೊಂಡಿದ್ದರೆ ವೈರತ್ವವು ತನ್ನಷ್ಟಕ್ಕೇ ತಾನೇ ಕೊನೆಯಾಗುತ್ತದೆ" ಎಂದು ಹೇಳಿದನು. ಪೂಜನಿ ಅದನ್ನು ಅಂಗೀಕರಿಸದೆ, "ರಾಜಾ! ಶತ್ರುತ್ವವೆನ್ನುವುದು ಐದು ಕಾರಣಗಳಿಂದ ಉಂಟಾಗುತ್ತದೆ. ಸ್ತ್ರೀಯಿಂದ, ಭೂಮಿಯಿಂದ, ಕಟುನುಡಿಗಳಿಂದ, ಜಾತಿಗತ ದ್ವೇಷದಿಂದ (ಹಾವು ಮುಂಗುಸಿಗಳು ಜಾತಿಗತ ದ್ವೇಷಿಗಳು) ಮತ್ತು ಹಿಂದೆ ಮಾಡಿದ ಅಪರಾಧದಿಂದ. ಹೀಗೆ ಹುಟ್ಟಿದ ವೈರತ್ವವು ಕಟ್ಟಿಗೆಯೊಳಗೆ ಅಡಗಿದ ಬೆಂಕಿಯಂತೆ ಹೃದಯದಲ್ಲಿ ಮರೆಯಾಗಿರುತ್ತದೆ. ಇದು ಧನದಿಂದಾಗಲಿ, ಮಧುರವಾಗಿ ಪರಸ್ಪರ ಸಂಭಾಷಿಸುವುದರಿಂದಾಗಲಿ, ಶಾಸ್ತ್ರಜ್ಞಾನದಿಂದಾಗಲಿ ಶಾಂತವಾಗದು"
"ಗಾಯವಾದ ಕಾಲಿನಿಂದ ನಡೆಯುತ್ತಿದ್ದರೆ, ಗಾಯವು ಇನ್ನೂ ಹೆಚ್ಚಾಗುತ್ತದೆ."
"ನೇತ್ರರೋಗಿಯ ಕಣ್ಣು ಅವನ್ನು ತೆರೆಯುವುದರಿಂದಲೇ ಗಾಳಿಯ ಹೊಡೆತಕ್ಕೆ ಗುರಿಯಾಗುತ್ತವೆ"
"ಬರಡು ಭೂಮಿಯನ್ನು ಉತ್ತರೆ ಪ್ರಯೋಜನವಿಲ್ಲ"
"ನಾನು ನಿನ್ನ ಮಗನ ಮೇಲೆ ಸೇಡು ತೀರಿಸಿಕೊಂಡಿದ್ದೇನೆ. ಇನ್ನು ಇಲ್ಲಿ ಇರುವುದು ಅಪಾಯದೊಂದಿಗೆ ಚಲ್ಲಾಟವಾಡಿದಂತೆ. ನೀನೇನೋ ಬಲವಂತ. ಬಲವಂತನೊಂದಿಗೆ ವಿರೋಧವನ್ನು ಕಟ್ಟಿಕೊಂಡವನು ಸದಾ ಜಾಗೃತನಾಗಿ ಇರಬೇಕು, ಹಾಗಾಗಿ ನಾನಿದೋ ಹೊರಡುತ್ತೇನೆ" ಎಂದು ಹೇಳಿ ಪೂಜನಿಯು ತನ್ನ ದಾರಿಯನ್ನು ಹಿಡಿದು ಹೊರಟಿತು."
"ಆದ್ದರಿಂದ ಯುಧಿಷ್ಠಿರಾ! ಕಣ್ಣುಮುಚ್ಚಿಕೊಂಡು ಅಡವಿಯಲ್ಲಿ ಗಡ್ಡೆಗೆಣೆಸುಗಳನ್ನು ಸೇವಿಸುತ್ತಾ ತಪವನ್ನಾಚರಿಸುವವರಿಗೆ ಅವಿಶ್ವಾಸವೆನ್ನುವುದು ಕೆಲಸಕ್ಕೆ ಬಾರದೇ ಹೋಗಬಹುದು, ಆದರೆ ಪ್ರಜೆಗಳ ನಡುವೆ ಇರುತ್ತಾ ಅವರನ್ನು ಪಾಲಿಸಬೇಕಾದ ಕ್ಷತ್ರಿಯನಿಗೆ ರಾಜ್ಯಾಡಳಿತ ನಿರ್ವಹಣೆಯಲ್ಲಿ ’ಅವಿಶ್ವಾಸ ಸಿದ್ಧಾಂತ’ದ ಅವಶ್ಯಕತೆ ಖಂಡಿತವಾಗಿ ಇದೆ!"
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಚಿತ್ರಕೃಪೆ: ಗೂಗಲ್
ಹಿಂದಿನ ಲೇಖನ ಭಾಗ - ೧೭ ಭೀಷ್ಮ ಯುಧಿಷ್ಠಿರ ಸಂವಾದ: ಮಂಕಿ ಮುನಿಯ ಉಪಾಖ್ಯಾನ ಅಥವಾ ನಿಷ್ಕಾಮ ಭಾವನೆ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AD-...
Comments
ಉ: ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಬ್ರಹ್ಮದತ್ತ ಪೂಜನಿ ಸಂವಾದ
ಈ ಲೇಖನದ ಮುಂದಿನ ಭಾಗ - ೧೯ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AF-...