ಭಾಗ - ೧೯ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ

ಭಾಗ - ೧೯ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ

ಚಿತ್ರ

          ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
          ಯುಧಿಷ್ಠಿರನು ಕೇಳಿದನು, "ಪಿತಾಮಹಾ! ಸತ್ಪ್ರವರ್ತನೆಯೇ ಧರ್ಮವೆಂದು ಉಪದೇಶಿಸಿದ್ದೀರಿ. ಸತ್ಪ್ರವರ್ತನೆ ಎಂದರೆ ಏನು ಎನ್ನುವುದನ್ನು ವಿವರಿಸಿ ನನ್ನ ಸಂಶಯವನ್ನು ನಿವಾರಿಸುವಂತಹರಾಗಿ"
          ಭೀಷ್ಮನು ಹೀಗೆ ಉತ್ತರಿಸಿದನು. "ಧರ್ಮನಂದನನೇ! ಈ ವಿಷಯದಲ್ಲಿ ಜಾಜಲಿ ಮುನಿಯ ಉಪಾಖ್ಯಾನವು ಪ್ರಸಿದ್ಧವಾಗಿದೆ. ಅದನ್ನು ನಿನಗೆ ಅರಹುತ್ತೇನೆ ಆಲಿಸುವಂತಹವನಾಗು!"
       "ಪೂರ್ವದಲ್ಲಿ ಜಾಜಲಿ ಎನ್ನುವ ಮಹಾತಪಸ್ವಿಯಿದ್ದನು. ಅವನು ಕಠೋರವಾದ ನಿಯಮಗಳನ್ನು ಪಾಲಿಸುತ್ತಾ ಘೋರವಾದ ತಪಸ್ಸಿನಲ್ಲಿ ನಿರತನಾಗಿದ್ದನು. ಬಿಸಲು ಮಳೆಗಳನ್ನು ಲೆಕ್ಕಿಸದೆ ಒಂದೆಡೆ ಕಂಬದಂತೆ ಕದಲದೆ ನಿಂತುಕೊಂಡು ತಪವನ್ನಾಚರಿಸುತ್ತಿದ್ದನು. ಹಾಗೆ ಅವನು ಹಗಲೂ ಇರುಳೂ ವೃಕ್ಷದಂತೆ, ದೀಪಸ್ತಂಭದಂತೆ ಕದಲದೆ ನಿಂತುಕೊಂಡಿರುತ್ತಿದ್ದನು. ಕೆಲವು ದಿನಗಳಿಗೆ ಅವನ ಜಟೆಯೆಲ್ಲಾ ಜಡ್ಡುಗಟ್ಟಿ ಅದರಲ್ಲಿ ಗುಬ್ಬಿಗಳು ಗೂಡುಕಟ್ಟಿ ವಾಸಿಸತೊಡಗಿದವು. ಸ್ವಲ್ಪ ಕಾಲಕ್ಕೆ ಗುಬ್ಬಿಗಳು ಆ ಗೂಡಿನಲ್ಲಿ ಮೊಟ್ಟೆಗಳನ್ನೂ ಇಟ್ಟವು, ಅನತಿ ಕಾಲಕ್ಕೆ ಆ ಮೊಟ್ಟೆಗಳಿಂದ ಗುಬ್ಬಿಯ ಮರಿಗಳೂ ಹೊಬರಬಂದವು. ಆ ಮರಿಗಳೂ ಸಹ ಬೆಳೆದು ದೊಡ್ಡವಾಗಿ ಅದರಲ್ಲೇ ವಾಸಿಸತೊಡಗಿದವು. ಜಾಜಲಿ ಮುನಿ ಒಂದು ದಿನ ತನ್ನ ಮನಸ್ಸಿನಲ್ಲಿ ಹೀಗೆ ಆಲೋಚಿಸಿದನು, "ಏನು ನನ್ನಂತಹ ತಪಸ್ವಿ, ನನ್ನಂತಹ ಸಂನ್ಯಾಸಿ ಈ ಲೋಕದಲ್ಲಿ ಇರುವುದುಂಟೇ?" ಅವನು ಹಾಗೆಂದುಕೊಂಡನೋ ಇಲ್ಲವೋ, ಕೂಡಲೇ ಅವನಿಗೆ ಆಕಾಶವಾಣಿಯೊಂದು ಕೇಳಿಸಿತು, "ಜಾಜಲಿ ಗರ್ವಿಸಬೇಡ, ತೋರ್ಪಡಿಕೆಯ ಕಷ್ಟಗಳಿಂದ ನೀನು ದೊಡ್ಡ ತಪಸ್ವಿಯೆಂದೂ, ನೀನೊಬ್ಬ ಯೋಗಿಪುಂಗವನೆಂದೂ ಸಂಭ್ರಮಿಸಬೇಡ. ನಿನಗಿಂತಲೂ ಅಧಿಕವಾದವರು ಬಹಳಷ್ಟು ಜನರಿದ್ದಾರೆ. ಕಾಶೀನಗರದಲ್ಲಿ ತುಲಾಧರನೆಂಬ ವೈಶ್ಯನಿದ್ದಾನೆ. ಅವನು ನಿನಗಿಂತಲೂ ಜ್ಞಾನವೃದ್ಧನು, ಹೋಗಿ ಅವನನ್ನು ಆಶ್ರಯಿಸು!"
      "ಜಾಜಲಿಯು ಇದನ್ನು ಕೇಳಿ ಆಶ್ಚರ್ಯಪಟ್ಟನು. ಕೂಡಲೇ ತನ್ನ ತಪಶ್ಶಕ್ತಿಯಿಂದ ಆಕಾಶ ಮಾರ್ಗದಲ್ಲಿ ಕಾಶಿಗೆ ಹೊರಟನು. ಕಾಶಿಯಲ್ಲಿ ತುಲಾಧರನು ವ್ಯಾಪಾರವನ್ನು ಮಾಡಿಕೊಂಡಿದ್ದನು. ವಸ್ತುಗಳನ್ನು ಅಳೆಯುವುದು, ತೂಗುವುದು, ಅವುಗಳ ಬೆಲೆಯನ್ನು ಹೇಳಿ ಅವುಗಳನ್ನು ವಿಕ್ರಿಯಿಸುವುದು, ಮೊದಲಾದ ಕೆಲಸಗಳನ್ನು ಮಾಡುತ್ತಿದ್ದನು. ಜಾಜಲಿಯನ್ನು ದೂರದಿಂದಲೇ ತುಲಾಧರನು ಗಮನಿಸಿದನು. "ಬನ್ನಿ ಮುನಿವರ್ಯರೇ, ನೀವು ಏಕೆ ಬಂದಿರುವಿರೋ ಅದನ್ನು ಅರಿತುಕೊಂಡಿದ್ದೇನೆ. ಗುಬ್ಬಿಗಳು ಜಟೆಯಲ್ಲಿ ಗೂಡು ಕಟ್ಟುವಷ್ಟು ಕಠಿಣ ತಪಸ್ಸು ಮಾಡುತ್ತಿದ್ದೇನೆಂದು ಗರ್ವಪಟ್ಟುಕೊಂಡು ಚಿತ್ತವಿಕಾರವನ್ನು ಹೊಂದಿರುವಿರಿ. ಅಷ್ಟು ಮಾತ್ರಕ್ಕೇ ಚಿತ್ತವಿಕಾರವನ್ನು ಹೊಂದಿದರೆ ಇನ್ನು ತಪಸ್ಸನ್ನಾದರೂ ಹೇಗೆ ಆಚರಿಸುವಿರಿ?" ಎಂದು ಕೇಳಿದನು. 
      "ಜಾಜಲಿ ಮುನಿಯು ತುಲಾಧರನಿಗೆ ನಮಸ್ಕರಿಸಿದನು. "ನೀನು ಹೇಳುತ್ತಿರುವುದನ್ನು ಕೇಳಿದರೆ ಬಹಳ ಆಶ್ಚರ್ಯವಾಗುತ್ತಿದೆ. ನಿನಗೆ ಇಷ್ಟೊಂದು ಜ್ಞಾನವು ಹೇಗೆ ಲಭ್ಯವಾಯಿತು? ಈ ವಿಶೇಷವನ್ನು ತಿಳಿಸುವಂತಹವನಾಗು ಎಂದು ಪ್ರಾರ್ಥಿಸುತ್ತೇನೆ" ಎಂದು ಹೇಳಿದನು. ಆಗ ತುಲಾಧರನು ಜಾಜಲಿ ಮುನಿಗೆ ಜ್ಞಾನವನ್ನು ಬೋಧಿಸಿದನು. 
        "ಜಾಜಲಿ ಮುನಿಗಳೆ! ನಾನು ಮಾಡುವುದು ಕೇವಲ ವ್ಯಾಪರವನ್ನಷ್ಟೆ. ಬೇರೆ ಏನೂ ಮಹತ್ತರವಾದ ಕೆಲಸವನ್ನೇನೂ ಮಾಡುವುದಿಲ್ಲ. ನನ್ನ ವೃತ್ತಿಯೂ ಸಹ ನನ್ನ ಅಂತಸ್ತನ್ನು ಹೆಚ್ಚಿಸುವಂತಹುದ್ದೇನೂ ಅಲ್ಲ. ನಿಜವೇ, ಆದರೆ ನಾನು ವಸ್ತುಗಳನ್ನು ವಿಕ್ರಿಯಿಸುವಾಗ ತೂಕದಲ್ಲಾಗಲಿ, ಕ್ರಯದಲ್ಲಾಗಲಿ ಮೋಸವನ್ನು ಮಾಡುವುದಿಲ್ಲ. ಉಚಿತವಾದ ಲಾಭವನ್ನು ಮಾತ್ರವೇ ಸಂಪಾದಿಸುತ್ತೇನೆ, ಅನುಭವಿಸುತ್ತೇನೆ. ಅಂದರೆ ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತೇನೆ, ದೈವವಶಾತ್ ಅದರಲ್ಲಿ ಲಾಭ ಬರಬಹುದು ಅಥವಾ ಬಾರದೇ ಹೋಗಬಹುದು, ಅದಕ್ಕೆ ನಾನು ಬಾಧೆಪಡುವುದಿಲ್ಲ. ಹಿಂಸೆಗೆ ಎಂದಿಗೂ ಆಸ್ಪದಕೊಡುವುದಿಲ್ಲ. ನನ್ನನ್ನು ನಾನು ಎಂದಿಗೂ ಹೊಗಳಿಕೊಳ್ಳುವುದಿಲ್ಲ. ಭೂತದಯಾಪರನಾಗಿ ಸರ್ವಭೂತ ದಯಾಪರನಾಗಿ ಇರಲು ಪ್ರಯತ್ನಿಸುತ್ತೇನೆ. ತ್ಯಾಗಬುದ್ಧಿಯಿಂದ ಅಹಂಕಾರ, ಮಮಕಾರಗಳಿಗೆ ಅತೀತನಾಗಿರುತ್ತೇನೆ. ಪ್ರಪಂಚದಲ್ಲಿ, ’ತಾವರೆ ಎಲೆಯ ಮೇಲಿನ ನೀರಿನ ಹನಿ’ಯಂತೆ ವ್ಯವಹರಿಸುತ್ತೇನೆ. ಸಮದೃಕ್ಪಥದಿಂದ ಕೂಡಿದ ಇಂತಹ ಧಾರ್ಮಿಕ ವರ್ತನೆಯೇ ನಾನು ಮಾಡುತ್ತಿರುವ ತಪಸ್ಸು. ನಾನು ಮಾಡುತ್ತಿರುವ ಯಜ್ಞ. ನಾನು ಕಾಷಾಯ ವಸ್ತ್ರಗಳನ್ನು ಧರಿಸದೇ ಇರಬಹುದು, ನನಗೆ ಯಾವುದೇ ಪದವಿಗಳಿಲ್ಲದೇ ಇರಬಹುದು, ಯಾವುದೇ ಅಧಿಕಾರವೂ ಇಲ್ಲದೇ ಇರಬಹುದು, ಆದರೂ ಸಹ ನನಗೆ ಏನೂ ಇಲ್ಲದೇ ಇದ್ದರೂ ಸಹ ಎಲ್ಲವೂ ಇದ್ದಂತೆ ತೃಪ್ತಿಪಟ್ಟುಕೊಂಡು ನಿತ್ಯತೃಪ್ತನಾಗಿರುತ್ತೇನೆ. ನನ್ನ ಮನಸ್ಸೇ ನನಗೆ ಸಾಕ್ಷಿ, ನಾನು ಮನಸ್ಸಂನ್ಯಾಸಿ" 
      "ಜಾಜಲಿ ಮುನಿವರ್ಯನೇ! ನಾನು ಹೇಳಿದುದರ ಕುರಿತು ನಿನಗೇನಾದರೂ ಅನುಮಾನಗಳಿದ್ದರೆ ನಿನ್ನ ತಲೆಯ ಮೇಲೆ ಗೂಡುಕಟ್ಟಿಕೊಂಡಿರುವ ಗುಬ್ಬಿಗಳ ಸಾಕ್ಷ್ಯವನ್ನು ಕೇಳು" ಎಂದು ಹೇಳಿ ತುಲಾಧರನು ಆ ಗುಬ್ಬಿಗಳನ್ನು ಪ್ರಶ್ನಸಿದನು. ಅವು, "ಅಷ್ಟೇ" ಎನ್ನುವಂತೆ ತಮ್ಮ ತಲೆಯನ್ನಾಡಿಸಿ. "ಈರ್ಷ್ಯೆ, ಮಾತ್ಸರ್ಯಗಳಿರುವ ಮನಸ್ಸಿನಲ್ಲಿ ಹಿಂಸೆಯೇಪರ್ಪಡುತ್ತದೆ" ಎಂದು ಹೇಳಿ ಹಾರಿಹೋದವು".
       "ಆದ್ದರಿಂದ ಧರ್ಮನಂದನನೇ ಸ್ವಾರ್ಥ, ಅಸೂಯೆ, ದ್ವೇಷ, ಮೊದಲಾದ ದುರ್ಗುಣಗಳನ್ನು ಹೋಗಲಾಡಿಸಿಕೊಂಡು, ಅಹಿಂಸ, ಸತ್ಯ, ದಯೆ, ಪ್ರೇಮ, ಮೊದಲಾದ ಸದ್ಗುಣಗಳನ್ನು ರೂಢಿಸಿಕೊಂಡರೆ ಸತ್ಪ್ರವರ್ತನೆಯುಂಟಾಗುತ್ತದೆ. ಅದೇ ತಪಸ್ಸಾಗುತ್ತದೆ. ಅಂತಹವನೇ ಯೋಗಿ, ಅಂತಹವನೇ ಸಂನ್ಯಾಸಿ ಎನಿಸಿಕೊಳ್ಳುತ್ತಾನೆ" 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AE-...

Rating
No votes yet

Comments

ಹೌದು ಮಿಶ್ರಿಕೋಟಿಗಳೆ, ಅದೂ ಸಹ ಮಹಾಭಾರತದ್ದೇ ಕಥೆ. ಈ ಕಥೆ ಶಾಂತಿಪರ್ವದಲ್ಲಿ ಬರುತ್ತದೆ :)

Submitted by makara Sun, 10/21/2018 - 16:22

ಈ ಲೇಖನದ ಮುಂದಿನ ಭಾಗ - ೨೦ ಭೀಷ್ಮ ಯುಧಿಷ್ಠಿರ ಸಂವಾದ: ಚಿರಕಾರಿಯ ಉಪಾಖ್ಯಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A6-...