ಭಾಗ - ೨೦ ಭೀಷ್ಮ ಯುಧಿಷ್ಠಿರ ಸಂವಾದ: ಚಿರಕಾರಿಯ ಉಪಾಖ್ಯಾನ

ಭಾಗ - ೨೦ ಭೀಷ್ಮ ಯುಧಿಷ್ಠಿರ ಸಂವಾದ: ಚಿರಕಾರಿಯ ಉಪಾಖ್ಯಾನ

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
       ಯುಧಿಷ್ಠಿರನು ಕೇಳಿದನು, "ಪಿತಾಮಹಾ! ದೊಡ್ಡವರು ಒಮ್ಮೊಮ್ಮೆ ಸಲಹೆ ಸೂಚನೆಗಳನ್ನು ಕೊಡುತ್ತಾ ಇರುತ್ತಾರೆ. ಅವರು ಒಳ್ಳೆಯ ಉದ್ದೇಶದಿಂದಲೇ ಅವನ್ನು ಕೊಟ್ಟಿರುತ್ತಾರೆ. ಆದರೆ ಕೆಲವೊಮ್ಮೆ ಅವರು ಹೇಳಿದ ಕಾರ್ಯಗಳು ಹಿಂಸೆಯಿಂದ ಕೂಡಿರುತ್ತವೆ. ಆಗ ಅದು ದುಷ್ಕರವಾದ ಕಾರ್ಯ ಅಥವಾ ಅನುಚಿತವಾದ ಕಾರ್ಯ ಎಂದು ಮನಸ್ಸಿಗೆ ತೋಚಬಹುದು. ಆಗ ಏನು ಮಾಡುವುದು ಉಚಿತವೆನಿಸುತ್ತದೆ. ದೊಡ್ಡವರು ಹೇಳಿದರೆಂದು ಅದನ್ನು ಆಚರಿಸಬೇಕೆ? ಅಥವಾ ಸ್ವಲ್ಪ ಸುಧಾರಿಸಿಕೊಂಡು ಅದರ ಪೂರ್ವಾಪರಗಳನ್ನು ಅಲೋಚಿಸುವುದು ಒಳ್ಳೆಯದೆ? ಹಿರಿಯರಾದ ನೀವು ಇದನ್ನು ಕುರಿತು ವಿವರಿಸಿ ಹೇಳುವಂತಹವರಾಗಿರಿ."
      ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ಈ ವಿಷಯದಲ್ಲಿ ಚಿರಕಾರಿಯ ಉಪಾಖ್ಯಾನವು ಪ್ರಸಿದ್ಧವಾಗಿದೆ. ಅದನ್ನು ನಿನಗೆ ಹೇಳುತ್ತೇನೆ, ಚಿತ್ತವಿರಿಸಿ ಕೇಳುವಂತಹವನಾಗು. ಗೌತಮ ಮಹರ್ಷಿಗೆ ಒಬ್ಬ ಕುಮಾರನಿದ್ದನು. ಅವನ ಹೆಸರು ಚಿರಕಾರಿ. ಅವನಿಗೆ ತಂದೆತಾಯಿಗಳು ಇಟ್ಟ ಹೆಸರು ಸಾರ್ಥಕವಾಗಿತ್ತು, ಏಕೆಂದರೆ ಅವನು ಯಾವುದೇ ಕಾರ್ಯವನ್ನು ಕೈಗೊಂಡರೂ ಸಹ ಅದನ್ನು ಚಿರಂತರ ಕಾಲವೂ ಅಂದರೆ ಅದನ್ನೇ ನಿರಂತರವಾಗಿ ಮಾಡುತ್ತಿದ್ದ. ಮಹಾಬುದ್ಧಿಶಾಲಿಯಾಗಿದ್ದ ಅವನು ಪ್ರತಿಯೊಂದು ಕಾರ್ಯದ ಕುರಿತೂ ದೀರ್ಘವಾಗಿ ಆಲೋಚಿಸಿ, ತನ್ನ ಕರ್ತವ್ಯವೇನು, ಕರ್ತವ್ಯವಲ್ಲದ್ದು ಏನು ಎಂದು ಅಳೆದು, ಸುರಿದು, ಸೂಕ್ತವಾದುದ್ದನ್ನು ಕೈಗೊಳ್ಳುತ್ತಿದ್ದ. ಯಾವುದೇ ವಿಷಯದಲ್ಲೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ಸ್ವಲ್ಪ ನಿಧಾನವಾಗಿಯೇ ಮಾಡುತ್ತಿದ್ದ. ನಿಧಾನವೇ ಪ್ರಧಾನವೆಂದು ಭಾವಿಸಿ ಅವನು ಎಲ್ಲಾ ವಿಷಯಗಳಲ್ಲೂ ಇದೇ ಸೂತ್ರವನ್ನು ಅನುಸರಿಸುತ್ತಿದ್ದ. ಪ್ರತಿ ವಿಷಯಕ್ಕೂ ಬಹುಕಾಲ ತೆಗೆದುಕೊಳ್ಳುತ್ತಿದ್ದ. ಎಚ್ಚರವಾಗಿದ್ದರೆ ಎಷ್ಟು ಹೊತ್ತಾದರಾಗಲಿ ಎಚ್ಚರವಾಗಿಯೇ ಇರುತ್ತಿದ್ದ. ನಿದ್ದೆ ಮಾಡುತ್ತಿದ್ದರೆ ಎಷ್ಟು ಹೊತ್ತಾಗಲಿ ನಿದ್ರಿಸುತ್ತಲೇ ಇದ್ದ. ಕೆಲಸ ಮಾಡಲು ಆರಂಭಿಸಿದರೆ ಕೆಲಸ ಮಾಡುತ್ತಲೇ ಇರುತ್ತಿದ್ದ. ಅದಕ್ಕಾಗಿ ಚಿರಕಾರಿ ಎನ್ನುವ ಅವನ ಹೆಸರು ಸಾರ್ಥಕವಾಗಿತ್ತು."
         "ದೂರಾಲೋಚನೆ ಮಾಡಲಾಗದ ಕೆಲವರು ಅವನನ್ನು ಶುದ್ಧ ಸೋಮಾರಿ ಎಂದು ಹೀಗಳೆಯುತ್ತಿದ್ದರು. ಇನ್ನೂ ಕೆಲವರು ಅವನದು ದೂರಾಲೋಚನೆಯಲ್ಲ, ಅದು ದುರಾಲೋಚನೆ ಎಂದೂ ಹಂಗಿಸುತ್ತಿದ್ದರು."
      "ಹೀಗಿರಲಾಗಿ ಒಂದು ದಿನ ಗೌತಮ ಮುನಿಯು ತನ್ನ ಪತ್ನಿಯ ಶೀಲವನ್ನು ಶಂಕಿಸಿ ವ್ಯಗ್ರಗೊಂಡನು. ಅವನು ಕ್ರೋಧಾವೇಶದಿಂದ ತನ್ನ ಕುಮಾರನನ್ನು ಕರೆದನು. "ಕುಮಾರಾ! ಪಾಪಾತ್ಮಳಾದ ನಿನ್ನ ತಾಯಿಯ ತಲೆಯನ್ನು ಕೂಡಲೇ ಕತ್ತರಿಸಿ ಬಿಸಾಕು" ಎಂದು ಆಜ್ಞಾಪಿಸಿ ವನದೊಳಕ್ಕೆ ಹೊರಟು ಹೋದನು. 
        "ಚಿರಕಾರಿಯು ತನ್ನ ಅಭ್ಯಾಸದಂತೆ ತಂದೆಯ ಮಾತನ್ನು ಕೇಳಿ, ಒಂದು ಕ್ಷಣ ಸುಧಾರಿಸಿಕೊಂಡು, "ಹಾಗೇ ಆಗಲಿ" ಎಂದು ಹೇಳಿದನು. ಅವನು ಚಿರಕಾರಿಯಲ್ಲವೇ? ಆದ್ದರಿಂದ ತಂದೆ ಹೇಳಿದ ಕಾರ್ಯದ ಕುರಿತು ಆಲೋಚನೆಗೆ ತೊಡಗಿದ. ನನಗೆ ತಂದೆಯು ಆಜ್ಞೆಯನ್ನು ವಿಧಿಸಿ ಹೋಗಿದ್ದಾನೆ. ತಂದೆಯ ಆಜ್ಞೆಯನ್ನು ಪಾಲಿಸದೇ ಹೋದರೆ ತಪ್ಪಾಗುತ್ತದೆ. ಪುತ್ರನಾದವನಿಗೆ ತಂದೆಯ ಆಧೀನದಲ್ಲಿ ಇರುವುದೇ ಶ್ರೇಷ್ಠವಾದ ಕರ್ತವ್ಯವೆನಿಸುತ್ತದೆ."
          "ಆದರೆ ತಾಯಿಯನ್ನು ಹತ್ಯೆಗೈಯ್ಯುವುದು ಸಮುಚಿತವಾದ ಕಾರ್ಯವೆನಿಸಿಕೊಳ್ಳುತ್ತದೆಯೇ? ಮಾತೃಹತ್ಯೆಗಿಂತ ಘೋರವಾದ ಪಾಪವು ಮತ್ತೊಂದು ಇರಲಾರದು! ಸ್ತ್ರೀ ಹತ್ಯೆ ಅದರಲ್ಲೂ ಮಾತೃಹತ್ಯೆ! ಎಲ್ಲಾದರೂ ಉಂಟೇ?"
       "ತಂದೆಯಾದವನು ಜಾತಕರ್ಮಾದಿ ಸಂಸ್ಕಾರಗಳನ್ನು ನೆರವೇರಿಸುತ್ತಾನೆ, ಆಶೀರ್ವದಿಸುತ್ತಾನೆ, ಪೋಷಿಸಿ ಬೆಳೆಸುತ್ತಾನೆ, ವಿದ್ಯಾಬುದ್ಧಿಗಳನ್ನು ಕಲಿಸಿಕೊಡುತ್ತಾನೆ. ಆದ್ದರಿಂದ ಪುತ್ರನಾದವನಿಗೆ ತಂದೆಯೇ ಪ್ರಧಾನವಾದ ಗುರುವಾಗಿರುತ್ತಾನೆ. ತಂದೆಯಾದವನು ಯಾವುದೇ ಆಜ್ಞೆಯನ್ನು ವಿಧಿಸಿದರೂ ಸಹ ಅದನ್ನು ಪಾಲಿಸಬೇಕಾದದ್ದು ಪುತ್ರನಾದವನ ಕರ್ತವ್ಯ. ಅದಕ್ಕಾಗಿ ಆಲೋಚಿಸಬೇಕಾದ ಕೆಲಸವೇನೂ ಇಲ್ಲ. ತಂದೆಯೇ ಧರ್ಮ, ತಂದೆಯೇ ದೇವರು, ತಂದೆಯೇ ತಪಸ್ಸು. ತಂದೆಯು ಪ್ರಸನ್ನನಾದರೆ ದೇವತಗಳೂ ಸಹ ಪ್ರಸನ್ನರಾಗುತ್ತಾರೆ!"
        "ಆದರೆ ಇನ್ನೊಂದು ವಿಷಯವೂ ಇದೆ. ಪಂಚಭೂತಾತ್ಮಕವಾದ ನನ್ನ ಈ ಶರೀರವು ಜನಿಸಲು ತಾಯಿಯೇ ಪ್ರಧಾನ ಕಾರಣಳು. ತಾಯಿ ಬದುಕಿರುವವರೆಗೆ ಒಬ್ಬ ಮನುಷ್ಯನು "ಸನಾಥ" ತಾಯಿಯಿಲ್ಲದವನು "ಅನಾಥ"ನಾಗುತ್ತಾನೆ. ತಾಯಿಯು ಬಳಿ ಇದ್ದರೆ ಮನುಷ್ಯನಾದವನಿಗೆ ಚಿಂತೆಯು ಬಳಿ ಸುಳಿಯದು. ತಾಯಿಯಿರುವವರೆಗೆ ಪುತ್ರನಾದವನಿಗೆ ಮುದಿತನವು ಹತ್ತಿರಬಾರದು. "ಅಮ್ಮಾ" ಎಂದು ಕರೆಯುತ್ತಾ ಕಡುಬಡವನಾದ ವ್ಯಕ್ತಿಯು ತಾಯಿಯ ಬಳಿಗೆ ಸಾರಿದರೆ ಸಾಕ್ಷಾತ್ "ಅನ್ನಪೂರ್ಣೆ"ಯ ಬಳಿಗೆ ಹೋದಂತೆಯೇ! ತನಗೆ ಪುತ್ರಪೌತ್ರಾದಿಗಳು ಜನಿಸಿದರೂ ಸಹ, ನೂರು ವರ್ಷಗಳು ತುಂಬಿದರೂ ಸಹ ತನ್ನ ತಾಯಿಯ ಬಳಿಗೆ ಹೋಗುವಾಗ ಎರಡು ವರುಷದ ಹಸುಳೆಯಂತೆ ಮನುಷ್ಯನು ವ್ಯವಹರಿಸುತ್ತಾನೆ. ಮಗನಾದವನು ಒಳ್ಳೆಯವನಾಗಲಿ, ಕೆಟ್ಟವನಾಗಲಿ, ಸಮರ್ಥನಾಗಲಿ, ಅಸಮರ್ಥನಾಗಲಿ ಅದ್ಯಾವುದನ್ನೂ ಪರಿಗಣಿಸದೆ ತಾಯಿಯಾದವಳು ಅವನನ್ನು ಪ್ರೀತಿ ವಾತ್ಸಲ್ಯಗಳಿಂದ ಬೆಳೆಸುತ್ತಾಳೆ. ತಾಯಿಯನ್ನು ಮೀರಿದ ನೆರಳಿಲ್ಲ, ತಾಯಿಯನ್ನು ಮೀರಿದ ಆಶ್ರಯವಿಲ್ಲ, ತಾಯಿಯನ್ನು ಮೀರಿದ ರಕ್ಷಣೆಯಿಲ್ಲ, ತಾಯಿಯನ್ನು ಮೀರಿದ ಪ್ರಿಯವಾದ ವಸ್ತುವು ಈ ಪ್ರಪಂಚದಲ್ಲಿ ಇಲ್ಲ. ಪುತ್ರನಾದವನ ತಂದೆ ಯಾರು, ಪುತ್ರನ ಗೋತ್ರವಾವುದು ಎಂದು ತಿಳಿದಿರುವುದು ತಾಯಿ ಒಬ್ಬಳಿಗೆ ಮಾತ್ರವೇ"
      "ಚಿರಕಾರಿ ಈ ವಿಧವಾಗಿ ತಂದೆಯ ಆಜ್ಞೆಯನ್ನು ಕುರಿತು, ತಾನು ನೆರವೇರಿಸಬೇಕಾದ ಕಾರ್ಯವನ್ನು ಕುರಿತು ಆಲೋಚಿಸಲು ಮೊದಲು ಮಾಡಿದನು. ಎಷ್ಟು ಆಲೋಚಿಸಿದರೂ ಸಹ ಅವನಿಗೆ ಒಂದು ನಿರ್ಣಯಕ್ಕೆ ಬರಲಾಗಲಿಲ್ಲ. ಅವನು ಇನ್ನೂ ಹೀಗೆ ಆಲೋಚಿಸುವುದನ್ನು ಮುಂದುವರೆಸಿದನು"
         "ಆದರೆ ಇನ್ನೂ ಒಂದು ವಿಷಯವಿದೆ. ನನ್ನ ತಾಯಿಯ ಶೀಲವನ್ನೇ ಕುರಿತು ತಂದೆಯು ಮಾತನಾಡಿದ್ದಾನೆ. ವಾಸ್ತವವಾಗಿ ಸ್ತ್ರೀಯರದು ತಪ್ಪಲ್ಲ, ಅದರಲ್ಲಿ ಪುರುಷರದೇ ತಪ್ಪು ಇರುತ್ತದೆ. ಸ್ತ್ರೀಯರು ಅಬಲರು, ಅವರು ಬಲಾತ್ಕಾರಕ್ಕೊಳಗಾದರೆ ಅದರ ತಪ್ಪು ಪುರುಷರದೇ ಆಗುತ್ತದೆ". ಹೀಗೆ ಆಲೋಚಿಸುತ್ತಾ ಕಾರ್ಯಪ್ರವೃತ್ತನಾಗುವುದರಲ್ಲಿ ಆಲಸ್ಯವನ್ನು ಚಿರಕಾರಿಯು ತೋರಿದನು. 
        "ಇತ್ತಕಡೆ, ಗೌತಮನು ತನ್ನ ಕ್ರೋಧಕ್ಕೆ ಪಶ್ಚಾತ್ತಾಪ ಪಟ್ಟುಕೊಂಡು ತನ್ನ ಮಗನು ಏನು ಮಾಡಿ ಬಿಟ್ಟನೋ ಎಂದು ಕಳವಳಗೊಳ್ಳುತ್ತಾ ಮನೆಗೆ ಓಡೋಡಿ ಬಂದನು. "ಚಿರಕಾರಿ"ಯಲ್ಲವೇ ಎನ್ನುವ ಧೈರ್ಯದಿಂದ ಅವನು ಒಳಗೆ ಬಂದ. ನೋಡಿದರೆ, ಚಿರಕಾರಿಯು ಕತ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಆಲೋಚನೆಯಲ್ಲಿ ಮುಳುಗಿದ್ದ. ಆಗ ಗೌತಮನು, "ಮಗೂ! ಒಳ್ಳೆಯ ಕೆಲಸವನ್ನೇ ಮಾಡಿದ್ದೀಯ. ನೀನು ಚಿರಕಾಲವೂ ಇಂತಹ ಸ್ವಭಾವವನ್ನೇ ಬೆಳೆಸಿಕೊ, ಹಾಗೆ ಮಾಡುವುದರಿಂದ ನಾನೂ ಸಹ ಚಿರಕಾಲ ಸುಖವಾಗಿ ಇರುತ್ತೇನೆ" ಎಂದು ಹೇಳಿದನು."
         "ಆದ್ದರಿಂದ ಧರ್ಮನಂದನನೇ! ಯಾವುದೇ ಕೆಲಸವನ್ನಾಗಿ ಚೆನ್ನಾಗಿ ಆಲೋಚಿಸಿ ಕೈಗೊಳ್ಳುವುದು ಉತ್ತಮ. ಧರ್ಮೋಪದೇಶವನ್ನು ಮಾಡಲು ಉಪಕ್ರಮಿಸುವ ಹಿರಿಯರೂ ಸಹ ಆಲೋಚಿಸಿ ಸಲಹೆ ಸೂಚನೆಗಳನ್ನು ನೀಡಬೇಕು. ಸಲಹೆಗಳನ್ನು ಕಾರ್ಯಗತಗೊಳಿಸುವಾಗಲೂ ಸಹ ಪ್ರತಿಯೊಬ್ಬರೂ ಅವನ್ನು ಶುಭ್ರ ಮನಸ್ಸಿನಿಂದ ಆಳವಾಗಿ ಆಲೋಚಿಸಿ ಆಚರಣೆಗೆ ತರಬೇಕು." 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
 
ಹಿಂದಿನ ಲೇಖನ ಭಾಗ - ೧೮ ಭೀಷ್ಮ ಯುಧಿಷ್ಠಿರ ಸಂವಾದ: ಜಾಜಲಿ ಮುನಿಯ ಉಪಾಖ್ಯಾನ  ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AF-...

Rating
No votes yet

Comments

Submitted by makara Tue, 10/23/2018 - 05:56

ಈ ಲೇಖನದ ಮುಂದಿನ ಭಾಗ - ೨೧ ಭೀಷ್ಮ ಯುಧಿಷ್ಠಿರ ಸಂವಾದ: ದ್ಯುಮತ್ಸೇನ ಮತ್ತು ಸತ್ಯವಾನರ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A7-...