ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು

ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು

ಚಿತ್ರ

ಮನುವಿನ ಧರ್ಮ
(ನಮಗೆ ಬೇಡವಾದ ಮನು)
ತೆಲುಗು ಮೂಲ: ಎಂ.ವಿ.ಆರ್ ಶಾಸ್ತ್ರಿ
ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು
          “Manu belongs to no single nation or race; he belongs to the whole world. His teachings are not addressed to an isolated group, caste or sect, but to humanity. They transcend time and address themselves to the eternal in man. There is a need for a fresh statement. In the light of modern Knowledge and experience of the fundamental teachings of Manu.”
           “ಮನುವು ಯಾವುದೇ ದೇಶ ಅಥವಾ ಜನಾಂಗಕ್ಕೆ ಸೇರಿದವನಲ್ಲ; ಅವನು ಸಮಸ್ತ ವಿಶ್ವಕ್ಕೆ ಸೇರಿದವನು. ಅವನ ಬೋಧನೆಗಳು ಯಾವುದೋ ಒಂದು ನಿರ್ಧಿಷ್ಠ ಗುಂಪು, ಜಾತಿ ಅಥವಾ ಪಂಗಡವನ್ನು ಉದ್ದೇಶಿಸಿಲ್ಲ ಅವು ಸಮಸ್ತ ಮಾನವ ಜನಾಂಗಕ್ಕೆ ಹೇಳಲ್ಪಟ್ಟಿವೆ. ಅವು ಕಾಲಾತೀತವಾಗಿದ್ದು ಅವು ಮಾನವನಲ್ಲಿ ಅಂತರ್ಗವಾಗಿರುವ ಸನಾತನ(ಶಾಶ್ವತ)ವಾದುದರ ಕುರಿತು ಹೇಳಲ್ಪಟ್ಟಿರುವುವು. ಮನುವು ಹೇಳಿರುವ ಮೂಲ ಸೂತ್ರಗಳನ್ನು ಆಧುನಿಕ ವಿಜ್ಞಾನ ಮತ್ತು ಅನುಭವಗಳ ಹಿನ್ನಲೆಯಲ್ಲಿ  ಹೊಸದಾಗಿ ವಿಶ್ಲೇಷಿಸಬೇಕಾದ ಅವಶ್ಯಕತೆಯಿದೆ." 
            ಈ ಮಾತುಗಳನ್ನು ಹೇಳಿದವನು ತಾನು ಜಾತಿಯಿಂದ ಶ್ರೇಷ್ಠನೆನ್ನುವ ಅಹಂಕಾರದ ಪೊರೆಯಿಂದ ಕಣ್ಣು ಕುರುಡಾದ ಮೇಲ್ಜಾತಿಯವನಲ್ಲ, ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಮೂಢನಂಬಿಕೆಯುಳ್ಳವನಲ್ಲ, ಯಾವುದೋ ಕರ್ಮಠ ಬ್ರಾಹ್ಮಣನೂ ಅಲ್ಲ, ಬ್ರಾಹ್ಮಣರ ಅಧಿಪತ್ಯವನ್ನು ಉಳಿಸಿಕೊಳ್ಳಲು ಕೆಳವರ್ಗದವರನ್ನು ತುಳಿಯಲು ಕಂಕಣ ಬದ್ಧನಾದ ಅರಬೆಂದ ಜ್ಞಾನವುಳ್ಳ ಬ್ರಾಹ್ಮಣ ಪಕ್ಷಪಾತಿಯೊ ಅಲ್ಲ. ಇಂದಿಗೆ ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಸಮಾಜವಾದಿ ಶ್ರೀ ಕೇವಲ್ ಮೊಟ್ವಾನಿಯವರು ತಮ್ಮ ಪ್ರೌಢ ಪ್ರಭಂದದಲ್ಲಿ (Thesis) ಹೇಳಿರುವ ಮಾತುಗಳಿವು. ಕ್ರಿ.ಶ.೧೯೫೮ರಲ್ಲಿ ಆ ಪ್ರೌಢ ಪ್ರಭಂದವು "Manu Dharma Shastra.... A Sociological And Historical Study" ಎಂಬ ಹೆಸರಿನ ಪುಸ್ತಕವಾಗಿ ಪ್ರಕಟಿಸಲ್ಪಟ್ಟು ಹಲವು ದೇಶಗಳ ವಿದ್ವಾಂಸರ ಮನ್ನಣೆಯನ್ನು ಪಡೆದಿದೆ. 
           ಮನುವಿನ ಹೆಸರು ಹೇಳಿದರೆ ಸಾಕು ನಮ್ಮ ಮೇಧಾವಿಗಳನೇಕರಿಗೆ ನಡುಕವುಂಟಾಗುತ್ತದೆ. ಮನುವೆಂದರೆ ಭಯಂಕರವಾದ ಬ್ರಹ್ಮರಾಕ್ಷಸನೆಂದೂ, ಕೆಳ ವರ್ಗದವರನ್ನು ಅದರಲ್ಲೂ ವಿಶೇಷವಾಗಿ ದಲಿತರನ್ನೂ, ಮಹಿಳೆಯರನ್ನೂ ಹುರಿದು ಮುಕ್ಕುವ ಕರ್ಕೋಟಕ ಜಾತಿ ವ್ಯವಸ್ಥೆ ರೂಪುಗೊಳ್ಳಲು ಅವನೇ ಕಾರಣ ಪುರುಷನೆನ್ನುವುದು ಅವರ ಭಾವನೆ. ಬ್ರಾಹ್ಮಣರ ದೊಡ್ಡಸ್ತಿಕೆಯನ್ನು, ಬ್ರಾಹ್ಮಣರ ಅಧಿಪತ್ಯವನ್ನು, ಪುರುಷಾಹಂಕಾರವನ್ನು ನೂರಾರು, ಸಾವಿರಾರು ವರ್ಷಗಳಿಂದ ಕೋಟ್ಯನುಕೋಟಿ ಬಡ, ಬಲಹೀನ, ದಲಿತ ವರ್ಗದವರ ಮೇಲೆ ಬಲವಂತಾವಾಗಿ ಹೇರಿ ಅವರು ದಾರುಣವಾದ ಅವಮಾನಗಳಿಗೆ, ಅನ್ಯಾಯಗಳಿಗೆ, ಅತಿಕ್ರೂರವಾದ ಶಿಕ್ಷೆಗಳಿಗೆ ತುತ್ತಾಗುವಂತೆ ಮಾಡಿದ್ದು ಅವನಿಂದ ರಚಿಸಲ್ಪಟ್ಟ ಮನುಧರ್ಮಶಾಸ್ತ್ರ ಅಥವಾ ಮನಸ್ಮೃತಿ  ಎಂದು ಬಹಳಷ್ಟು ಜನ ನಂಬುತ್ತಿದ್ದಾರೆ. 
           ಹಾಗಿರುವಾಗ ಅಂತಹ ನೀಚ, ನಿಕೃಷ್ಟ, ಮಹಾದುಷ್ಟನ ಪರವಹಿಸಿ, "ಸಮಸ್ತ ಮನುಕುಲಕ್ಕೆ ಮೂಲಪುರುಷ, ಮನುಕುಲವು ಹೆಮ್ಮೆ ಪಡುವಂತಹವನು" ಎಂದು ಈ ಮೊಟ್ವಾನಿ ಅವನನ್ನು ಆಕಾಶದೆತ್ತರಕ್ಕೆ ಹೊಗಳಿ ಅಟ್ಟಕ್ಕೇರಿಸುತ್ತಿರುವುದಾದರೂ ಏಕೆ? 
           ಇದರಲ್ಲಿ ಆಶ್ಚರ್ಯಪಡುವುದಕ್ಕೇನಿದೆ? ಅವನೂ ಕೂಡ ಒಬ್ಬ ಮನುವಾದಿಯಷ್ಟೆ! ಅವನು ಬ್ರಾಹ್ಮಣ ಪಕ್ಷಪಾತಿ, ಓದಿಕೊಂಡವನಾದರೂ ಬುದ್ಧಿಯಿಲ್ಲದ ಮೂರ್ಖ - ಎನ್ನುವ ನಿರ್ಣಯಕ್ಕೆ ಬರುವ ಮುನ್ನ ಆತ ಏನು ಹೇಳಿದ್ದಾನೆ ಎನ್ನುವುದನ್ನು ಸ್ವಲ್ಪ ಪರಿಶೀಲಿಸೋಣ: 
ಇದು ಕೇವಲ ಒಂದು ಧರ್ಮಶಾಸ್ತ್ರವಷ್ಟೇ ಹೊರತು ಅದು ಶಿಕ್ಷಾರ್ಹ ಶಾಸನಗಳ ಸಂಹಿತೆ ಅಥವಾ ಶಿಕ್ಷಾವಿಧಾನಗಳನ್ನು ನಿರ್ದೇಶಿಸುವ ಕಟ್ಟಳೆಗಳ ಗ್ರಂಥವಲ್ಲ. ಇದು ಯಾವುದೇ ಭೌಗೋಳಿಕ ಪ್ರದೇಶದಲ್ಲಿ ನಿವಸಿಸುವ ಯಾವುದೋ ಒಂದು ವರ್ಗ, ಜನಾಂಗ ಅಥವಾ ಸಮುದಾಯವನ್ನು ಉದ್ದೇಶಿಸಿ ರಚಿಸಲ್ಪಟ್ಟ ನೀತಿನಿಯಮಗಳ ಸಂಹಿತೆಯಲ್ಲ. ಪ್ರಧಾನವಾಗಿ ಈ ಧರ್ಮಶಾಸ್ತ್ರದಲ್ಲಿ ಎಲ್ಲಾ ಕಾಲಕ್ಕೂ, ಎಲ್ಲಾ ದೇಶಗಳಿಗೂ ಸಮಸ್ತ ಮಾನವರ ಸಾಮಾಜಿಕ ಜೀವನಕ್ಕೆ ಅನ್ವಯವಾಗುವ ಸೂತ್ರಗಳಿವೆ. ಮಾನವನ ವ್ಯಕ್ತಿಗತ ಜೀವನ ಮತ್ತು ಸಾಮಾಜಿಕ ಜೀವನದಲ್ಲಿ ನಿತ್ಯವೂ, ಶಾಶ್ವತವೂ ಆಗಿರುವ ಅಂಶಗಳನ್ನು ಒತ್ತಿ ಹೇಳುವ ನೀತಿಗಳನ್ನು ಇದು ಒಳಗೊಂಡಿರುವುದರಿಂದ ವಿಶ್ವವ್ಯಾಪಕವಾಗಿ ಅದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. (Manu Dharma Shastra, Kewal Motwani, p - xi ಮನುಧರ್ಮ ಶಾಸ್ತ್ರ, ಕೇವಲ್ ಮೊಟ್ವಾನಿ, ಮುನ್ನುಡಿ ಪುಟ ೧೧)
          ನಮಗೆ ಗೊತ್ತಿಲ್ಲದೇ ಇರಬಹುದು; ಆದರೆ ಪ್ರಾಚೀನ ಮತ್ತು ಆಧುನಿಕ ಪ್ರಪಂಚದಲ್ಲಿ ಪ್ರಬಲವಾಗಿ ಕೇಳಿಬರುವ ಹೆಸರು ಮನುವಿನದಾಗಿದೆ. ಆರ್ಯ ನಾಗರಿಕತೆ ವ್ಯಾಪಿಸಿದ ಪ್ರತಿಯೊಂದು ಪ್ರದೇಶವೂ ಮನುವಿನ ಪ್ರಭಾವಕ್ಕೆ ಒಳಗಾಗಿದೆ. ಉತ್ತರ ಚೈನಾ, ಜಪಾನ್, ಫಾರ್ಮೋಸ (ತೈವಾನ್), ಆಸ್ಟ್ರೇಲಿಯ, ನ್ಯೂಜಿಲೆಂಡ್, ಇರಾನ್, ಸುಮೇರಿಯ, ಈಜಿಪ್ತುಗಳಿಗೆ..... ತದನಂತರ ಕಾಲದಲ್ಲಿ ಬ್ಯಾಬಿಲೋನಿಯ, ಅಸ್ಸೀರಿಯ, ಪಾಲಸ್ತೀನ್, ಗ್ರೀಸ್ ಮತ್ತು ರೋಮ್ ದೇಶಗಳಿಗೆ ಮನುವಿನ ಬೋಧನೆಗಳು ಹೋಗಿವೆ. ಪೂರ್ವ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಮನುವು ಅತ್ಯಂತ ಗೌರವಕ್ಕೆ ಪಾತ್ರನಾಗಿದ್ದಾನೆ. ಬರ್ಮಾ, ಸಯಾಂ (ಥೈಲ್ಯಾಂಡ್), ಮಲಯ, ಇಂಡೋನೇಷಿಯಾ, ಇಂಡೋಚೀನಾ, ಬಾಲಿ, ಫಿಲಿಪ್ಪೈನ್ಸ್‌ ಮತ್ತು ಸಿಂಹಳ ದ್ವೀಪಗಳು ಮನುವಿನ ನೆನಪನ್ನು ಜೋಪಾನವಾಗಿರಿಸಿಕೊಂಡು ಅವನ ಧರ್ಮಶಾಸ್ತ್ರವನ್ನು ಇಂದಿಗೂ ಅನುಸರಿಸುತ್ತಿವೆ. ಆ ದೇಶಗಳ ನ್ಯಾಯ ಮತ್ತು ಸಾಮಾಜಿಕ ವ್ಯವಸ್ಥೆಗಳು ಮನುವಿನ ಉಪದೇಶಗಳನ್ನು ಆಧರಿಸಿವೆ. (ಅದೇ ಗ್ರಂಥ ಪುಟ ೫, ೬) 
          ಕೇವಲ ಹೆಸರುಗಳನ್ನು ಪಟ್ಟಿಮಾಡುವುದಷ್ಟೆ ಅಲ್ಲ. ಆಯಾ ದೇಶಗಳಿಗೆ ಮನುವಿನೊಂದಿಗೆ ಇರುವ ಗಾಢವಾದ ಐತಿಹಾಸಿಕ ಸಂಬಂಧಗಳನ್ನು ಕುರಿತಾಗಿಯೂ ಕೂಡ ಮೊಟ್ವಾನಿಯವರು ತಮ್ಮ ಪುಸ್ತಕದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. 
          ಮೊಟ್ವಾನಿಯವರಷ್ಟೆ ಅಲ್ಲ, ಮನುಕುಲದ ಮೂಲಪುರುಷನಾಗಿ, ಪ್ರಪ್ರಥಮ ನ್ಯಾಯಸೂತ್ರಗಳ ಪ್ರದಾತನಾಗಿ, ಮೊಟ್ಟಮೊದಲಿನ ಸಾಮಾಜಿಕ ತತ್ತ್ವಜ್ಞಾನಿಯಾದ ಮನುವಿಗಿರುವ ಖ್ಯಾತಿಯನ್ನು, ಕೇಂಬ್ರಿಡ್ಜ್‌ ಭಾರತೀಯ ಚರಿತ್ರೆ (ಕೇಂಬ್ರಿಡ್ಜ್‌ ಹಿಸ್ಟರಿ ಆಫ್ ಇಂಡಿಯಾ), ಬಿಟ್ರಿಷ್ ವಿಶ್ವಕೋಶ (ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ), ಅಮೇರಿಕಾ ಸಮಾಜವಿಜ್ಞಾನ ವಿಶ್ವಕೋಶ (ಅಮೇರಿಕನ್ ಎನ್‌ಸೈಕ್ಲೋಪೀಡಿಯಾ ಆಫ್ ಸೋಷಿಯಲ್ ಸೈನ್ಸ್‌) ಮೊದಲಾದ ಗ್ರಂಥಗಳು ಗುರುತಿಸಿವೆ. ಮನುಸ್ಮೃತಿಯಲ್ಲಿ ಹೇಳಿರುವ ನ್ಯಾಯಸೂತ್ರಗಳು ಸಮಸ್ತ ಮಾನವ ಜನಾಂಗಕ್ಕೆ ಅನ್ವಯವಾಗುತ್ತವೆಂದೂ, ಸಕಲ ಮಾನವರಿಗೂ ಒಳಿತುಂಟು ಮಾಡುತ್ತವೆಂದು ಎ.ಎ. ಮ್ಯಾಕ್‌ಡೊನ್ನೆಲ್, ಎ.ಬಿ.ಕೀಥ್, ಪಿ. ಥಾಮಸ್, ಲೂಯಿ ರಿನಾಯ್ ಮೊದಲಾದ ಲೇಖಕರು ಪ್ರಶಂಸಿಸಿದ್ದಾರೆ. ಜರ್ಮನಿಯ ಪ್ರಸಿದ್ಧ ತತ್ತ್ವಜ್ಞಾನಿಯಾದ ’ಫ್ರೆಡರಿಕ್ ನೀಟ್ಷೆ’ಯಂತೂ (FREDERICH NEITSCHE) ಬೈಬಲ್‌ ಗ್ರಂಥಕ್ಕಿಂತಲೂ ಪರಮ ಪವಿತ್ರವಾದ ಗ್ರಂಥವೆಂದು ಮನುಸ್ಮೃತಿಯನ್ನು ಅಭಿವರ್ಣಿಸಿದ್ದಾನೆ. 
           ಒಬ್ಬರು ಅನುಸರಿಸುವ ವೃತ್ತಿಯನ್ನು ಆಧರಿಸಿ ಮನುವು ಏರ್ಪಡಿಸಿದ ವರ್ಣ ವ್ಯವಸ್ಥೆಯು ಬಾಲಿ, ಬರ್ಮಾ, ಫಿಲಿಪ್ಪೈನ್ಸ್‌, ಕಂಬೋಡಿಯಾ, ವಿಯತ್ನಾಂ, ಥೈಲ್ಯಾಂಡ್, ಮಲೇಸಿಯಾ, ನೇಪಾಲ್, ಶ್ರೀಲಂಕಗಳಲ್ಲಿ ಜಾರಿಯಲ್ಲಿದ್ದುದನ್ನು ದೃಢೀಕರಿಸಲು ಅನೇಕ ಚಾರಿತ್ರಿಕ ಆಧಾರಗಳಿವೆ. ಮನುವು ಬರೆದಿರುವ ಧರ್ಮಸೂತ್ರಗಳನ್ನು ಆಧರಿಸಿಯೇ ಹಿಂದಿನ ಕಾಲದಲ್ಲಿ ಅನೇಕ ದೇಶಗಳ ರಾಜರು ನ್ಯಾಯನಿರ್ಣಯವನ್ನು ಕೈಗೊಳ್ಳುತ್ತಿದ್ದರು. ಮನುಧರ್ಮಕ್ಕೆ ಸಂಬಂಧಿಸಿದ ಶ್ಲೋಕಗಳು ವಿವಿಧ ದೇಶಗಳ ಶಿಲ್ಪಗಳಲ್ಲಿ ಕಂಡು ಬರುತ್ತವೆ. ಅನೇಕ ದೇಶಗಳ ರಾಜರುಗಳು, ಚಕ್ರವರ್ತಿಗಳು ತಾವು ಮನುವನ್ನು ಅನುಸರಿಸುವವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಉದಾಹರಣೆಗೆ ಚಂಪ (ವಿಯತ್ನಾಂ) ದೇಶದ ರಾಜ ಜಯೇಂದ್ರ ವರ್ಮದೇವ ತಾನು ಮನುವಾದಿಯೆಂದು ಒಂದು ಶಿಲಾಶಾಸನದಲ್ಲಿ ಗರ್ವದಿಂದ ಹೇಳಿಕೊಂಡಿದ್ದಾನೆ. ಉದಯನ ವರ್ಮ, ರಾಜ ಜಯವರ್ಮರ ಶಿಲಾಶಾಸನಗಳಲ್ಲಿ ಮನು ಮತ್ತು ಮನುವಿನ ನೀತಿನಿಯಮಗಳ ಪ್ರಸ್ತಾವನೆಯು ಪ್ರಶಂಸಾಪೂರ್ವಕವಾಗಿ ಕಂಡುಬರುತ್ತದೆ. 
           ಚಿತ್ರ- ೧ನ್ನು ನೋಡಿ. ಫಿಲಿಪ್ಪೈನ್ಸ್‌ ದೇಶದ ಶಾಸನಸಭೆಯ ಸಭಾಂಗಣದ ಹಿಂದಿನ ಭಾಗದಲ್ಲಿ ಕಂಡು ಬರುವ ಶಿಲ್ಪವದು. "Manu the first, the wisest and the greatest Law giver of mankind" "ಮನು - ಮಾನವ ಜನಾಂಗಕ್ಕೆ ಪ್ರಪ್ರಥಮವಾಗಿ ನ್ಯಾಯ ವ್ಯವಸ್ಥೆಯನ್ನು ಪ್ರದಾನ ಮಾಡಿದ, ಅತ್ಯಂತ ಪ್ರತಿಭಾವಂತ ಮತ್ತು ಅತ್ಯಂತ ಮಹೋನ್ನತ ವ್ಯಕ್ತಿತ್ವವುಳ್ಳವನು" ಎಂದು ಅದರ ಕೆಳಗೆ ಕೆತ್ತಲಾಗಿದೆ. ಎಲ್ಲಿಯೋ ಹಿಂದೂದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಹುಟ್ಟಿ, ಯಾವುದೋ ಧರ್ಮಶಾಸ್ತ್ರವನ್ನು ಬರೆದವನ ಶಿಲ್ಪವನ್ನು ತಂದು ಇಲ್ಲೇಕೆ ಪ್ರತಿಷ್ಠಾಪಿಸಿದ್ದೀರಿ ಎಂದು ಫಿಲಿಪ್ಪೈನ್ಸ್‌ ದೇಶದ ಯಾವ ಮೇಧಾವಿಯಾಗಲಿ, ಸಂಪ್ರದಾಯಗಳನ್ನು ಧಿಕ್ಕರಿಸುವ ಯಾವುದೇ ರಾಜಕೀಯ ಪಕ್ಷದ ಯಾವುದೇ ವಾದಿಯಾಗಲಿ ಇಲ್ಲಿಯವರೆಗೂ ಅದಕ್ಕೆ ಆಕ್ಷೇಪಣೆಯನ್ನು ಎತ್ತಿಲ್ಲ. 
          ಆದರೆ ಅದೇ ಮನುವು ಹುಟ್ಟಿದ ನಮ್ಮ ಪುಣ್ಯಭೂಮಿಯಲ್ಲಿ....... ? 
          ೧೯೮೯ನೇ ಇಸವಿಯಲ್ಲಿ ಜೈಪುರದಲ್ಲಿರುವ ರಾಜಸ್ಥಾನದ ಉಚ್ಛ ನ್ಯಾಯಾಲಯ ಪ್ರಾಂಗಣದಲ್ಲಿ ಅಲ್ಲಿನ ನ್ಯಾಯವಾದಿಗಳ ಸಂಘವು ಮನುವಿನ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮನುವನ್ನು ಮತ್ತು ಮನುವಾದವನ್ನು ಅಸಹ್ಯಪಟ್ಟುಕೊಳ್ಳುವ ಸಂಘ ಸಂಸ್ಥೆಗಳು ಅದನ್ನು ಆಕ್ಷೇಪಿಸಿ ಅಲ್ಲಿಂದ ಆ ವಿಗ್ರಹವನ್ನು ತೊಲಗಿಸಬೇಕೆಂದು ಪಟ್ಟು ಹಿಡಿದರು. ಇದಕ್ಕಾಗಿ ಅವರು ರಾಜಸ್ಥಾನದ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದರು ಮತ್ತು ಒಂದು ಹಂತದಲ್ಲಿ ವಿಗ್ರಹವನ್ನು ತೊಲಗಿಸಲು ನ್ಯಾಯಾಲಯವು ಅಲ್ಲಿನ ರಾಜ್ಯ ಸರ್ಕಾರವನ್ನು ಆದೇಶಿಸಿತು. ಆ ಆದೇಶವನ್ನು ಪ್ರಶ್ನಿಸಿ ಆರ್ಯಸಮಾಜದ ಪ್ರಮುಖರು ಮೇಲ್ಮನವಿ ಸಲ್ಲಿಸಿ ತಾತ್ಕಾಲಿಕ ತಡೆಯಾಜ್ಞೆ ತಂದದ್ದರಿಂದ ಮನುವಿನ ವಿಗ್ರಹವನ್ನು ಸ್ಥಳಾಂತರಿಸುವ ಕಾರ್ಯವು ನಿಂತಿತು. ಆದರೆ ಇಪ್ಪತ್ತೈದು ವರ್ಷಗಳಿಗೂ ಅಧಿಕಕಾಲ ಆರ್ಯಸಮಾಜದ ಈ ಮೇಲ್ಮನವಿಯನ್ನು ಪುರಸ್ಕರಿಸಿ  ರಾಜಾಸ್ಥಾನದ ಉಚ್ಛನ್ಯಾಯಾಲವು ಅಂತಿಮ ತೀರ್ಪುನ್ನು ಕೊಟ್ಟಿಲ್ಲ, ಆ ವ್ಯಾಜ್ಯವು ಇನ್ನೂ ಅದೇ ನ್ಯಾಯಾಲಯದಲ್ಲಿ ಕೊಳೆಯುತ್ತಾ ಬಿದ್ದಿದೆ. ಈ ಅವಧಿಯಲ್ಲಿ ರಾಜಸ್ಥಾನ ಸರ್ಕಾರಕ್ಕೆ ಉಚ್ಛನ್ಯಾಯಾಲವು ಆ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆಗಳನ್ನು ಕೊಟ್ಟಿದೆ. ಸೋಜಿಗದ ಸಂಗತಿ ಏನೆಂದರೆ ಪ್ರಪ್ರಥಮ ಶಾಸನಕರ್ತನೆಂದು ಪ್ರಪಂಚವೆಲ್ಲಾ ಮನುವನ್ನು ಅವನಿಗೆ ಸಮುಚಿತವಾದ ಗೌರವಾದರಗಳಿಂದ ಕಾಣುತ್ತಿದ್ದರೆ ....... ನಮ್ಮ ದೇಶದಲ್ಲಿ...   ?!....
         ತನ್ನ ಜನ್ಮಭೂಮಿಯಲ್ಲಿ ಮಾತ್ರ ಮನುವನ್ನು ಒಬ್ಬ ದುಷ್ಟನನ್ನಾಗಿ, ಭಾರತೀಯ ಸಮಾಜವನ್ನು, ಸಾಮಾಜಿಕ ವ್ಯವಸ್ಥೆಯನ್ನು ದಾರುಣವಾಗಿ ಹಾಳುಗೆಡವಿದ ಒಬ್ಬ ಮಹಾಪಾಪಿಯೆಂದೂ, ಅತಿಕ್ರೂರನೆಂದೂ, ವಿದ್ಯಾವಂತರೂ ಮತ್ತು ಸಂಸ್ಕಾರವಂತರನೇಕರು ನಿಂದಿಸಿ ಹೀಗಳೆಯುತ್ತಿದ್ದಾರೆ. ದೇಶದಲ್ಲಿ ತಲೆದೋರಿರುವ ಎಲ್ಲಾ ಸಮಸ್ಯೆಗಳಿಗೂ ಮತ್ತು ಎಲ್ಲಾ ಅನಿಷ್ಠಗಳಿಗೂ ಮನುವಾದವೇ ಪ್ರಮುಖ ಕಾರಣವೆಂದು ಅವರು ದೃಢವಾಗಿ ನಂಬುತ್ತಿದ್ದಾರೆ! 
         ಈ ವಿಚಿತ್ರವಾದ ವೈರುಧ್ಯಕ್ಕೆ ಮೂಲಕಾರಣವಾದರೂ ಯಾವುದು? ದೋಷವು ಮನುವಿನದೆ? ಅವನು ಹೇಳಿದ ಧರ್ಮಶಾಸ್ತ್ರದ್ದೆ? ಅಥವಾ ಮನುವಾದವನ್ನು ಖಂಡಿಸುವವರ ಆಲೋಚನಾ ವಿಧಾನದ್ದೆ? ನಿಜವಾಗಿಯೂ ಮನುವು ಹೇಳಿದ್ದೇನು? ಆಧುನಿಕರು ಅವನ ಮೇಲೆ ಆರೋಪ ಹೊರಸಿ, ಅವನಿಗೆ ತಳುಕು ಹಾಕುತ್ತಿರುವ ಅಪರಾಧಗಳಿಗೆ ಅವನು ಎಷ್ಟರವರೆಗೆ ಜವಾಬುದಾರ? ಮನುವಾದವೇ ಸಂಪೂರ್ಣವಾಗಿ ದೋಷ ಭೂಯಿಷ್ಟವಾಗಿದೆಯೆ? ಅಥವಾ ಅದರಲ್ಲಿ ಈ ಕಾಲಕ್ಕೂ ಕೆಲಸಕ್ಕೆ ಬರುವ ಅಂಶಗಳೇನಾದರೂ ಇವೆಯೆ? 
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಮೊದಲನೆ ಅಧ್ಯಾಯ).
*****
ಚಿತ್ರಗಳ ಕೃಪೆ: ಗೂಗಲ್ 

ಚಿತ್ರ - ೧: ಫಿಲಿಪ್ಪೈನ್ಸ್‌ ದೇಶದ ಶಾಸನಸಭೆಯ ಸಭಾಂಗಣದ ಹಿಂದಿರುವ ಮನುವಿನ ಶಿಲ್ಪ. 
ಚಿತ್ರ - ೨ ‍& ೩: ರಾಜಸ್ಥಾನದ ಉಚ್ಛ ನ್ಯಾಯಾಲಯದಲ್ಲಿ ಸ್ಥಾಪಿತವಾಗಿರುವ ಮನುವಿನ ಮೂರ್ತಿ.
ಚಿತ್ರ - ೪: ’ಫ್ರೆಡರಿಕ್ ನೀಟ್ಷೆ’ಯ (FREDERICH NEITSCHE) ಚಿತ್ರ 
ಚಿತ್ರ - ೫: ಮೊಟ್ವಾನಿಯವರು ರಚಿಸಿರುವ ಪುಸ್ತಕ
 

 

Rating
Average: 5 (1 vote)

Comments