ಭಾಗ - ೨ ಮನುವಿನ ಧರ್ಮ: ಇದೆಲ್ಲಿಯ ನ್ಯಾಯ?

ಭಾಗ - ೨ ಮನುವಿನ ಧರ್ಮ: ಇದೆಲ್ಲಿಯ ನ್ಯಾಯ?

ಚಿತ್ರ

        ಅನುಮಾನವೇ ಬೇಡ, ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಎಂಥವರಿಗೂ ಯಾವುದೇ ವಿಧವಾದ ಅಭ್ಯಂತರ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ; ಇವು ಖಂಡಿತವಾಗಿಯೂ ಖಂಡನಾರ್ಹವೇ! 
       "ಮನುಸ್ಮೃತಿ"ಯ ಹೆಸರಿನಲ್ಲಿ ಇಂದು ಲಭ್ಯವಿರುವ ಅನೇಕಾನೇಕ ಪುಸ್ತಕಗಳಲ್ಲಿ ಅವನ್ನು ಯಾರೇ ಪ್ರಕಟಿಸಿರಲಿ ಅಥವಾ ಯಾರೇ ಬರೆದಿರಲಿ ಅವನ್ನು ಓದಿದರೆ ಅವುಗಳಲ್ಲಿ ಶೂದ್ರರ ಮೇಲೆ, ಚಂಡಾಲ ಮೊದಲಾದ ಕೆಳ ಜಾತಿಗಳ ಮೇಲೆ ಕಣ್ಣಿಗೆ ರಾಚುವಷ್ಟು ಕ್ರೂರತ್ವ, ಜಾತಿಭೇದ, ಜಾತಿವೈಷಮ್ಯ, ಮುಂತಾದವುಗಳನ್ನು ನೋಡಿದರೆ ಮನುಷ್ಯನೆನ್ನಿಸಿಕೊಂಡ ಯಾರಿಗೇ ಆಗಲಿ ನಖಶಿಖಾಂತ ಉರಿದುಹೋಗುತ್ತದೆ. ಏನು ಇಂತಹ ಅಮಾನುಷವಾದ ಶಿಕ್ಷೆಗಳೇ ಎಂದು ತೀವ್ರವಾದ ಜುಗುಪ್ಸೆಯುಂಟಾಗುತ್ತದೆ. ಕೆಳ ಜಾತಿಗಳನ್ನು ಉದ್ದೇಶಿಸಿ ಅವುಗಳಲ್ಲಿ ನಿರ್ದೇಶಿಸಲ್ಪಟ್ಟ ಶಿಕ್ಷಗಳನ್ನಾಗಲಿ ಅದರ ಹಿಂದಿರುವ ಬ್ರಾಹ್ಮಣಾಧಿಪತ್ಯದ ಮನೋಧರ್ಮವನ್ನಾಗಲಿ ಈ ಕಾಲದಲ್ಲಿ ಯಾರೂ ಸಮರ್ಥಿಸುವುದಿಲ್ಲ, ಸಮರ್ಥಿಸಕೂಡದು ಕೂಡ! 
       ಇದೇ ಸಮಯದಲ್ಲಿ "ಮನುಸ್ಮೃತಿ" ಎಂದು ಕರೆಯಲ್ಪಡುವ ಇಂತಹ ರಚನೆಗಳನ್ನು ಮುಂದಿಟ್ಟುಕೊಂಡು ಅದರಲ್ಲಿ ಹೇಳಲ್ಪಟ್ಟಿರುವ ಕ್ರೂರವಾದ ಶಿಕ್ಷೆಗಳನ್ನು, ಜಾತಿಭೇದವನ್ನು ಅನಾದಿಕಾಲದಿಂದಲೂ ಯುಗಯುಗಳಿಂದಲೂ ಹಿಂದು ಸಮಾಜ ಮತ್ತು ಹಿಂದು ಧರ್ಮವು ಕೆಳಜಾತಿಗಳ ಮೇಲೆ ಹೇರಿತ್ತೆಂದು ಆರೋಪಿಸುವುದು ಕೇವಲ ತಪ್ಪಷ್ಟೇ ಅಲ್ಲ...... ಅದು ಶುದ್ಧ ತಪ್ಪು! 
        ಈ ಹಿನ್ನಲೆಯಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಕೆಲವೊಂದು ವಾಸ್ತವ ಸಂಗತಿಗಳಿವೆ: 
೧) "ಮನು ಧರ್ಮಶಾಸ್ತ್ರ"ವೇ ಬೇರೆ, ಈ ಆಧುನಿಕ ಯುಗದಲ್ಲಿ "ಮನುಸ್ಮೃತಿ" ಎಂದು ಪ್ರಚಲಿತವಿರುವ ಹತ್ತು ಹಲವು ಕಡೆ ಹರಿದು, ಲೆಕ್ಕವಿಲ್ಲದಷ್ಟು ಹೊಲಿಗೆಗಳನ್ನು ಹಾಕಿ ತೇಪೆ ಹಾಕಿರುವ ಪುಸ್ತಕಗಳ ಕಂತೆಯೇ ಬೇರೆ. 
೨) ರಾಮಾಯಣ, ಮಹಾಭಾರತಗಳಲ್ಲಿ ಮನುವು ಹೇಳಿದ ಮಾನವ ಧರ್ಮದ ಪ್ರಸ್ತಾವನೆಯು ಅತ್ಯಂತ ಗೌರವ ಪೂರ್ವಕವಾಗಿ, ಪರಮ ಪ್ರಮಾಣವಾಗಿ ಕಂಡುಬರುತ್ತದೆ. ಶ್ರೀರಾಮನ ಪೂರ್ವಿಕರಾದ ರಘುವಂಶದ ರಾಜರೆಲ್ಲರೂ ಮನುವನ್ನು ಅನುಸರಿಸಿ ಧರ್ಮಪಾಲನೆಯನ್ನು ಮಾಡಿದರೆಂದು "ರಘವಂಶ"ದಲ್ಲಿ ಮಹಾಕವಿ ಕಾಳಿದಾಸನು ವರ್ಣಿಸಿದ್ದಾನೆ. 
ಇತ್ತೀಚೆಗೆ ರಾಮಸೇತುವಿಗೆ ಸಂಬಂಧಿಸಿದಂತೆ ಬೆಳಕಿಗೆ ಬಂದ ವೈಜ್ಞಾನಿಕ ಆಧಾರಗಳನ್ನು ಪರಿಶೀಲಿಸಿ ನೋಡಿದರೂ ಸಹ ರಾಮನು ಏಳುಸಾವಿರದಿಂದ ಹತ್ತು ಸಾವಿರ ವರ್ಷಗಳಷ್ಟು ಹಿಂದಿನವನು ಎಂದು ಹೇಳಬಹುದಾಗಿದೆ. ಇತಿಹಾಸಕಾರರನೇಕರು ನಿರ್ಣಯಿಸಿರುವಂತೆ ಮಹಾಭಾರತ ಯುದ್ಧವು ಕ್ರಿಸ್ತಪೂರ್ವ ೩೧೩೮ ಇಸವಿ ಅಂದರೆ ಇಂದಿಗೆ ಕನಿಷ್ಠ ಐದು ಸಾವಿರ ವರ್ಷಗಳ ಹಿಂದೆ ನಡೆದಿದೆ. ಇದನ್ನು ಆಧರಿಸಿ ಮನುಧರ್ಮವು ಕೆಲವು ಸಹಸ್ರ ವರ್ಷಗಳಿಂದ ಸುಪ್ರಸಿದ್ಧವಾಗಿತ್ತು ಎನ್ನುವುದು ಸುಸ್ಪಷ್ಟ. 
೩) ಇನ್ನು ನಾವು ನೋಡುತ್ತಿರುವ "ಮನುಸ್ಮೃತಿ"ಯು ಯಾವ ಕಾಲಘಟ್ಟದಲ್ಲಿ ರಚಿಸಲ್ಪಟ್ಟಿತ್ತೆಂದು ಹೇಳುವಲ್ಲಿ ಇತಿಹಾಸಕಾರರಲ್ಲಿ ಒಮ್ಮತವಿಲ್ಲ, ಒಬ್ಬೊಬ್ಬರು ಒಂದೊಂದು ರೀತಿಯಾಗಿ ಅದರ ಕಾಲವನ್ನು ನಿರ್ಣಯಿಸಿದ್ದಾರೆ. ಕೆಲವರು ಇದು ಕ್ರಿ.ಪೂ. ಎರಡನೇ ಶತಮಾನದ್ದು ಎಂದರೆ, ಇನ್ನೂ ಕೆಲವರು ಇದು ಕ್ರಿ.ಶ. ಮೂರನೇ ಶತಮಾನದ್ದು ಎಂದು ಅಭಿಪ್ರಾಯಪಡುತ್ತಾರೆ. ಬಹುತೇಕ ಇವರೆಲ್ಲರೂ ಹೇಳುವುದನ್ನು ಒಪ್ಪಿಕೊಂಡರೂ ಸಹ ಮನುಸ್ಮೃತಿಯ ರಚನಾ ಕಾಲವು ಬಹಳವೆಂದರೆ ೨೦೦೦ ಸಾವಿರ ವರ್ಷಗಳ ಹಿಂದಿನ ರಚನೆಯಾಗಿರಬಹುದಷ್ಟೆ. 
೪) ಹೋಗಲಿ ಈ ಎರಡು ಸಾವಿರ ವರ್ಷಗಳಿಂದಲಾದರೂ ವ್ಯವಹಾರದಲ್ಲಿ ಪ್ರಚಲಿತವಿರುವ "ಮನುಸ್ಮೃತಿ" ಇದೇ ಎಂದು ಖಚಿತವಾಗಿ ಹೇಳಬಲ್ಲೆವೇ?
      Over fifty manuscripts of the Manusmriti are now known, but the earliest discovered, most translated and presumed authentic version since the 18th century has been the “Calcutta manuscript with Kulluka Bhatta commentary”. Modern Scholarship states this presumed authenticity is false, and the various manuscripts of Manusmriti discovered in India are inconsistent with each other, and within themselves, raising concerns of its authenticity, insertions and interpolations made into the text in later times. 
(Patrick Olivelle in “Manu’s code of Law”, Oxford University Press)
        ಮನುಸ್ಮೃತಿಗೆ ಸಂಬಂಧಿಸಿದಂತೆ ೫೦ಕ್ಕೂ ಹೆಚ್ಚು ಹಸ್ತಲಿಖಿತ ಪುಸ್ತಕಗಳು ದೊರೆತಿವೆ, ಆದರೆ ಬೆಳಕಿಗೆ ಬಂದ ಕೃತಿಗಳಲ್ಲಿ ಅತಿ ಪ್ರಾಚೀನವಾದುದು, ಅತಿ ಹೆಚ್ಚು ಬಾರಿ ಅನುವಾದಿತಗೊಂಡಿರುವ ಮತ್ತು ಪ್ರಾಮಾಣಿಕವಾದದ್ದು ಎಂದು ೧೮ನೇ ಶತಮಾನದಿಂದಲೂ ಊಹಿಸಲ್ಪಟ್ಟಿರುವುದು ಕುಲ್ಲೂಕ ಭಟ್ಟನ ವ್ಯಾಖ್ಯಾನಗಳನ್ನೊಳಗೊಂಡ "ಕಲ್ಕತ್ತಾ ಹಸ್ತಪ್ರತಿ". ಆದರೆ ಅದರ ಪ್ರಾಮಾಣಿಕತೆಯೂ ಸಹ ನಂಬಲರ್ಹವಾದುದೆಲ್ಲವೆಂದು ಆಧುನಿಕ ವಿದ್ವಾಂಸರನೇಕರು ನಿರ್ಣಯಿಸಿದ್ದಾರೆ. ಇದುವರೆಗೆ ದೊರೆತ ವಿವಿಧ ಹಸ್ತಪ್ರತಿಗಳಲ್ಲಿ ಒಂದು ಮತ್ತೊಂದಕ್ಕೆ ತಾಳೆಯಾಗುವುದಿಲ್ಲವೆಂದೂ, ಒಂದೇ ಪ್ರತಿಯಲ್ಲಿಯೂ ಸಹ ಹೇಳಿರುವ ವಿಷಯಗಳಲ್ಲಿ ವೈರುಧ್ಯಗಳಿವೆಯೆಂದು ಸಂಶೋಧಕರು ನಿರ್ಧರಿಸಿದ್ದಾರೆ. ಇದರಿಂದಾಗಿ ಯಾವ ಹಸ್ತಪ್ರತಿಯು ಪ್ರಾಮಾಣಿಕವಾದದ್ದು, ಕಾಲಾಂತರದಲ್ಲಿ ಸೇರಿಸಿದ ಸೂತ್ರಗಳು, ಪ್ರಕ್ಷಿಪ್ತ ಭಾಗಗಳು ಯಾವುವು, ಮೊದಲಾದ ವಿಷಯಗಳಲ್ಲಿ ಗೊಂದಲಗಳಿವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. 
        "ಸ್ವಲ್ಪ ಕಾಳಿದಾಸನ ಕವಿತ್ವ ಸ್ವಲ್ಪ ನನ್ನ ಪಿತ್ಥದ ಕಪಿತ್ವ" ಎನ್ನುವಂತೆ ಒಂದೊಂದು ಕಾಲದಲ್ಲಿ ಒಬ್ಬೊಬ್ಬರು ತಮಗೆ ತಿಳಿದಂತೆ ಇಷ್ಟಾನುಸಾರವಾಗಿ ಇಲ್ಲಸಲ್ಲದ ವಿಷಯಗಳನ್ನು ಸೇರಿಸಿ ಗ್ರಂಥವನ್ನು ಹಿಗ್ಗಾ ಮುಗ್ಗಾ ಎಳೆದದ್ದರ ಫಲವಾಗಿ ಇಂದು ನಮಗೆ ದೊರೆತಿರುವ ಮನುಸ್ಮೃತಿಯು "ಹದಿನಾರು ಸಮಗಾರರು ಸೇರಿ ಹದಗೆಡಿಸಿದ ಚರ್ಮ"ದಂತಾಗಿದೆ. 
೫) ಮಹಮ್ಮದೀಯರ ಷರಿಯತ್‌ನಂತಲ್ಲ ಹಿಂದುಗಳ ಮನುಸ್ಮೃತಿ. ಅದು ಕೇವಲ ಧರ್ಮಶಾಸ್ತ್ರವೇ ಹೊರತು ಶಿಕ್ಷಾಸ್ಮೃತಿ ಎಳ್ಳಷ್ಟೂ ಅಲ್ಲ. ಇಂದಿನ ಭಾರತೀಯ ಶಿಕ್ಷಾಸ್ಮೃತಿಗಿರುವಂತೆ (INDIAN PENAL CODE) ಅದಕ್ಕೆ ಯಾವುದೇ ಶಾಸನಬದ್ಧ ಅಧಿಕಾರವಾಗಲಿ, ಶಾಸನಬದ್ಧ ಅನುಮೋದನೆಯಾಗಲಿ ಇಲ್ಲ. ಹಿಂದು ದೇಶದಲ್ಲಿ ಯಾವ ಕಾಲದಲ್ಲೂ ಯಾವ ರಾಜನೂ ಸಹ ಮನುಸ್ಮೃತಿಯನ್ನು ಅಧಿಕಾರಿಕ, ಏಕೈಕ ರಾಜ್ಯಾಂಗ ಅಥವಾ ಆಡಳಿತದ ನೀತಿ ನಿಯಮಾವಳಿಗಳ ಗ್ರಂಥವೆಂದು ಪ್ರಕಟಿಸಿರುವುದಕ್ಕೆ ದಾಖಲೆಗಳು ನಮಗೆ ಲಭ್ಯವಿಲ್ಲ. ಅತ್ಯಂತ ಪ್ರಖರವಾದ ಪಂಜು ಹಿಡಿದು ಹುಡುಕಿದರೂ ಸಹ ಒಂದೇ ಒಂದು ಆಧಾರವು ನಮಗೆ ದೊರೆಯದು. ಹಿಂದಿನ ಕಾಲದಲ್ಲಿ ಆಯಾ ರಾಜ್ಯಗಳಲ್ಲಿನ ಆಯಾ ರಾಜ್ಯಗಳ ಮತ್ತು ಆಯಾ ಜನಾಂಗ ಅಥವಾ ಸಮುದಾಯದಾಗಳು ಅನುಸರಿಸುವ ಅವರವರ ಆಚಾರ, ಸಂಪ್ರದಾಯ, ಆಲೋಚನಾ ವಿಧಾನಗಳನ್ನನುಸರಿಸಿ ಅವರವರ ಅಪರಾಧಗಳು ಮತ್ತು ಅವರವರಿಗೆ ವಿಧಿಸಬೇಕಾದ ಶಿಕ್ಷೆಗಳು ನಿರ್ಣಯಿಸಲ್ಪಡುತ್ತಿದ್ದವೇ ಹೊರತು ಈಗ ನಮ್ಮ ಕಾಲದಲ್ಲಿರುವಂತೆ ದೇಶಾದ್ಯಂತ ಒಂದೇ ರೀತಿಯ ನ್ಯಾಯವಿಧಾನ ಮತ್ತು ಒಂದೇ ರೀತಿಯ ಶಿಕ್ಷಾಸ್ಮೃತಿಗಳು ಇರಲಿಲ್ಲ. 
೬) ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತೆ, ಮನುಸ್ಮೃತಿ ಹಿಂದುಗಳಿಗೆ ಪವಿತ್ರವಾದ ಧರ್ಮಗ್ರಂಥವಾಗಿ ಯಾವ ಕಾಲಕ್ಕೂ ಇರಲಿಲ್ಲ. "ಮನುಸ್ಮೃತಿ"ಯು ವಿಧಿಬದ್ಧವಾಗಿ ಆಚರಿಸಲೇಬೇಕಾದ ಅನುಲ್ಲಂಘನೀಯವಾದ ಧರ್ಮಶಾಸನವೆಂದು ಅದು ಆಚರಣೆಗೆ ಬಂದ ಎರಡು ಸಾವಿರ ವರ್ಷಗಳಲ್ಲಿ ಎಂದಿಗೂ ಭಾರತೀಯ ಸಮಾಜವು ಭಾವಿಸಲಿಲ್ಲ. ಅದು ಕೇವಲ ಧರ್ಮಶಾಸನವೇ ಹೊರತು ನ್ಯಾಯಶಾಸನವಾಗಿ ಎಂದಿಗೂ ಜಾರಿಯಲ್ಲಿರಲಿಲ್ಲ. ನಮಗೆ ಇನ್ನೂ ಅಂತಹ ಹತ್ತು ಹಲವಾರು ಧರ್ಮಶಾಸ್ತ್ರಗಳಿವೆ - ಯಾಜ್ಞವಲ್ಕ್ಯಸ್ಮೃತಿ, ಗೌತಮಸ್ಮೃತಿ, ಮೊದಲಾದವುಗಳು. 
ಕೃತೇತು ಮಾನವ ಧರ್ಮಾಃ ತ್ರೇತಾಯಾಂ ಗೌತಮಾಃ ಸ್ಮೃತಾಃ l
ದ್ವಾಪರೇ ಶಂಖಲಿಖಿತಾಃ ಕಲೌ ಪರಾಶರಾ ಸ್ಮೃತಾಃ ll
      "ಕೃತಯುಗದಲ್ಲಿ ಮನುವು ಹೇಳಿದ ನಿಯಮಗಳು, ತ್ರೇತಾಯುಗದಲ್ಲಿ ಗೌತಮನ ಸೂತ್ರಗಳು, ದ್ವಾಪರದಲ್ಲಿ ಶಂಖಲಿಖಿತರ ಕೃತಿಗಳು ಮತ್ತು ಕಲಿಯುಗದಲ್ಲಿ ಪರಾಶರರ ಸ್ಮೃತಿಗಳಲ್ಲಿ ಹೇಳಿದ ನಿಯಮಗಳನ್ನು ಪಾಲಿಸಬೇಕು" ಎಂದು ನಮ್ಮ ಪೂರ್ವಿಕರು ಬಹು ಹಿಂದೆಯೇ ಹೇಳಿದ್ದಾರೆ. ನಾವಿಂದು ಜೀವಿಸುತ್ತಿರುವ ಕಲಿಯುಗದಲ್ಲಿ ವಿಧಿಬದ್ಧವಾಗಿ ಮನುಸ್ಮೃತಿಯನ್ನು ಆಚರಿಸಬೇಕೆಂದು ಯಾವ ಮೂಲಭೂತವಾದಿಯಾಗಲಿ, ಮತಾಂಧನಾಗಲಿ ಅಥವಾ ಕಟ್ಟಾ ಸಂಪ್ರದಾಯವಾದಿಯಾಗಲಿ ಹೇಳಿಲ್ಲ. ಈ ಯುಗದಲ್ಲಿ ಯಾರೂ ಅನುಸರಿಸದೇ ಇರುವ ಮನುಸ್ಮೃತಿಯಲ್ಲಿರುವ ಯಾವ ಕಾಲದಲ್ಲೋ ಯಾರೋ ಕೆಲವು ಸ್ವಾರ್ಥಿಗಳು ಸೇರಿಸಿದ ಬರವಣಿಗೆಗಳಿಗೆ ಸಮಸ್ತ ಹಿಂದು ಜನಾಂಗವನ್ನು, ಹಿಂದು ಸಮಾಜವನ್ನು ಮತ್ತು ಹಿಂದು ಧರ್ಮವನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? 
೭) ಮನುಸ್ಮೃತಿಯಲ್ಲಿ ನಮಗೆ ಕಂಡುಬರುವ ಶೂದ್ರರ, ದಲಿತರ ದ್ವೇಷವಾಗಲಿ, ನಿಮ್ನ ಜಾತಿಗಳನ್ನು ಅನ್ಯಾಯವಾಗಿ, ಅಮಾನುಷವಾಗಿ ಹುರಿದು ಮುಕ್ಕಿರುವ ವಿಷಯಗಳು ವೇದರಚನಾ ಕಾಲದಲ್ಲಾಗಲಿ, ಪುರಾಣಯುಗಗಳಲ್ಲಾಗಲಿ ಇವೆಯೇ ಎಂದರೆ ಅದಕ್ಕೆ ಖಚಿತವಾದ ಒಂದೇ ಒಂದು ಆಧಾರವೂ ಸಿಗದು. 
           ತಪಸ್ಸು ಮಾಡುತ್ತಿದ್ದ ಶೂದ್ರನಾದ ಶಂಬೂಕನನ್ನು ರಾಮನು ಹತ್ಯೆಮಾಡಿದ.
           ಆದಿವಾಸಿಯಾದ ಏಕಲವ್ಯನ ಹೆಬ್ಬೆರಳನ್ನು ದ್ರೋಣನು ಕತ್ತಿರಿಸಿಸಿದ. 
           ಕರ್ಣನನ್ನು ಸೂತಪುತ್ರಾ...... ಎಂದು ಸಂಬೋಧಿಸಿ ಅವಮಾನಿಸಿದರು. 
           ಹರಿಶ್ಚಂದ್ರ ತನ್ನ ಸ್ವಂತ ಹೆಂಡತಿಯನ್ನೇ ಮಾರಿದ.
           ಧರ್ಮರಾಯನು ಹೆಂಡತಿಯನ್ನೇ ಪಗಡೆಯಾಟದಲ್ಲಿ ಪಣವಾಗಿ ಇಟ್ಟ.
           ರಾಮ ತನ್ನ ಪತ್ನಿಯನ್ನು ವನವಾಸಕ್ಕೆ ಕಳುಹಿಸಿದ. 
         ಯಾರೇ ಆಗಲಿ, ಯಾವಾಗಲಾದರೂ ಆಗಲಿ, ಅದೆಷ್ಟು ಬಾರಿ ನಿಂದಿಸಿ ಮಾತನಾಡಿದರೂ ಸಹ ಮೇಲೆ ಹೇಳಿರುವ ಉದಾಹರಣೆಗಳನ್ನೇ ಅಲ್ಲವೇ ಪ್ರಧಾನವಾಗಿ ತೋರಿಸಿ ಶೂದ್ರರಿಗೆ, ಮಹಿಳೆಯರಿಗೆ ಅನ್ಯಾಯವಾಗಿದೆ ಎನ್ನುತ್ತಿರುವುದು. ಇವೆಲ್ಲಾ ವ್ಯಕ್ತಿಗತ, ವ್ಯಕಿಗಳಿಬ್ಬರ ಮಧ್ಯೆ ನಡೆದ ವಿರಳ ಸಂಘಟನೆಗಳಷ್ಟೆ ಅಲ್ಲವೇ? ಇವನ್ನು ಮುಂದಿಟ್ಟುಕೊಂಡು ಅಂದಿನ ಕಾಲದ ರಾಜರೆಲ್ಲರೂ ಶೂದ್ರರನ್ನು ಹತ್ಯೆಗೈದರು. ಅಸ್ತ್ರವಿದ್ಯೆ ಕಲಿತುಕೊಂಡ ಗಿರಿಜನರ ಬೆರಳುಗಳನ್ನೆಲ್ಲಾ ಕತ್ತರಿಸಿಸಿದರು, ಶೂದ್ರರನ್ನೆಲ್ಲಾ ಅವಮಾನಿಸಿದರು, ಗಂಡಂದಿರೆಲ್ಲಾ ಕಟ್ಟಿಕೊಂಡ ಹೆಂಡತಿಯರನ್ನು ಮಾರಿಕೊಳ್ಳುತ್ತಿದ್ದರು, ಅವರನ್ನು ಜೂಜಿನಲ್ಲಿ ಪಣವಾಗಿ ಇಡುತ್ತಿದ್ದರು, ಅನುಮಾನ ಬಂದ ತಕ್ಷಣ ಹೆಂಡತಿಯನ್ನು ಕಾಡಿಗಟ್ಟುತ್ತಿದ್ದರು..... ಎಂದು ಸಾರ್ವತ್ರಿಕಗೊಳಿಸುವುದು ಎಷ್ಟು ಸಮಂಜಸ? 
          ಅವು ಕೇವಲ ಆಕಸ್ಮಿಕವಾಗಿ ನಡೆದ ಕೆಲವು ಘಟನೆಗಳಷ್ಟೇ ಹೊರತು....ಮತ್ತೇನೂ ಅಲ್ಲ. 
 
          ವೇದ ಶ್ರವಣ ಮಾಡಿದ ಶೂದ್ರನ ಕಿವಿಯಲ್ಲಿ ಕಾದ ಸೀಸವನ್ನು ಸುರಿದರೆಂದು........
          ವೇದ ಪಠಣ ಮಾಡಿದ ಶೂದ್ರನ ನಾಲಿಗೆಯನ್ನು ಕತ್ತಿರಿಸಿಸಿದರೆಂದು.......
          ಬ್ರಾಹ್ಮಣನನ್ನು ನಿಂದಿಸಿದ ಶೂದ್ರನ ಬಾಯಿಯಲ್ಲಿ ಕಾದ ಕಬ್ಬಿಣದ ಸಲಾಕೆಯನ್ನು ತುರುಕಿದರೆಂದು....
          ಬ್ರಾಹ್ಮಣನನ್ನು ಯಾವ ಅಂಗದಿಂದ ಶೂದ್ರನು ಅವಮಾನಿಸಿದರೆ ಅವನ ಆ ಅಂಗವನ್ನು ಕತ್ತಿರಿಸಿಸಿ ಬಿಸಾಡಿದರೆಂದು......
       ಮೇಲಿನ ವಿಷಯಗಳು ಯಾವುದಾದರೂ ಪುರಾಣೇತಿಹಾಸಗಳಲ್ಲಾಗಲಿ, ಚಾರಿತ್ರಿಕ ಗ್ರಂಥಗಳಲ್ಲಾಗಲಿ, ಎಲ್ಲಿಯಾದರೂ ಇವೆಯೇ? ಇಲ್ಲವೆಂದಾದಮೇಲೆ.... ಮನುಸ್ಮೃತಿಯಲ್ಲಿ ಕಂಡುಬರುತ್ತವಾದ್ದರಿಂದ ಅಂತಹ ಕ್ರೂರವಾದ, ಅಮಾನುಷವಾದ ಶಿಕ್ಷೆಗಳು ಪೂರ್ವದಲ್ಲಿ ಎಲ್ಲಾ ಕಾಲಗಳಲ್ಲೂ ಅಮಲಿನಲ್ಲಿದ್ದವು ಎಂದು ಊಹಿಸುವುದು, ಸಮಸ್ತ ಹಿಂದು ಧರ್ಮವನ್ನು ಶೂದ್ರರನ್ನು ದ್ವೇಷಿಸುವ ಮತ್ತು ದಲಿತ ವಿರೋಧಿಯಾಗಿ ಚಿತ್ರಿಸುವುದು ಎಷ್ಟು ಸರಿ? ಇತ್ತೀಚಿನ ಕಾಲದಲ್ಲಿ ಅನೇಕಾನೇಕ ಕಾರಣಗಳಿಂದ ವಿಕಾರಗಳು ತಲೆದೋರಿ, ಸಮಾಜದಲ್ಲಿನ ಕೆಳಜಾತಿಗಳ ಮೇಲೆ, ಬಡ ಬಲಹೀನ ವರ್ಗದವರ ಮೇಲೆ ಮೇಲ್ಜಾತಿಯ ಕೆಲವು ಅಸುರೀ ಶಕ್ತಿಗಳು ನಡೆಸಿದ ದೌರ್ಜನ್ಯ, ಅತ್ಯಾಚಾರಗಳಿಗೆಲ್ಲಾ ಮನುವನ್ನು, ಮನುಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟರಮಟ್ಟಿಗೆ ಸಮಂಜಸ? 
ಮುಂದುವರಿಯುವುದು................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಎರಡನೆಯ ಅಧ್ಯಾಯ).
ಚಿತ್ರಕೃಪೆ: ಗೂಗಲ್ 
ಚಿತ್ರ - ೧: ಕುಲ್ಲೂಕ ಭಟ್ಟನ ವ್ಯಾಖ್ಯಾನಗಳನ್ನೊಳಗೊಂಡ ಮನುಸ್ಮೃತಿಯ "ಕಲ್ಕತ್ತಾ ಹಸ್ತಪ್ರತಿ"ಯ ಮುಖಪುಟ 
ಚಿತ್ರ - ೨: (Cover page of Patrick Olivelle's Book “Manu’s code of Law”, Oxford University Press)
 

Rating
No votes yet

Comments

Submitted by makara Sun, 01/13/2019 - 17:18

ಈ ಸರಣಿಯ‌ ಮುಂದಿನ ಲೇಖನ ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ? ಓದಲು ಈ ಕೊಂಡಿಯನ್ನು ನೋಡಿ:https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%AE...