ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ?
ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ತೆಲುಗಿನ ರಂಗನಾಯಕಮ್ಮ ಎನ್ನುವ ಲೇಖಕಿ ಒಂದು ವಿಧವಾಗಿ ಹೇಳಿದರೆ ರಾಂಗೋಪಾಲ್ ವರ್ಮ ಎನ್ನುವ ಮತ್ತೊಬ್ಬ ಲೇಖಕರು ಇನ್ನೊಂದು ವಿಧವಾಗಿ ಹೇಳುತ್ತಾರೆ. ಅವರಿಬ್ಬರ ಬರಹಗಳಲ್ಲಿ ಎಲ್ಲಿಯೂ ಸಮನ್ವಯವಿರದು. ಆದರೆ ಒಬ್ಬರೇ ಬರೆದಿರುವ ವಿಷಯಗಳಲ್ಲಿ ಒಂದಕ್ಕೊಂದು ಸಂಬಂಧವಿರುತ್ತದೆಯಲ್ಲವೇ?
ಸಾಮಾನ್ಯವಾಗಿ ಪ್ರಪಂಚದಲ್ಲಿ ಯಾವುದೇ ಲೇಖಕನಾಗಲಿ ತಾನು ಬರೆದ ವಿಷಯಗಳು ಒಂದಕ್ಕೊಂದು ಪರಸ್ಪರ ಪೂರಕವಾಗಿ ಮತ್ತು ಸಾಧ್ಯವಾದಮಟ್ಟಿಗೆ ವಿರೋಧಾಭಾಸಗಳಿಲ್ಲದಿರುವಂತೆ ಒಂದಕ್ಕೊಂದು ತಾಳೆಯಾಗುವಂತೆ ನೋಡಿಕೊಳ್ಳುತ್ತಾನಲ್ಲವೇ?! ಪ್ರಾಜ್ಞನೂ, ವಿಶಾಲ ದೃಷ್ಟಿಯುಳ್ಳನೂ, ವಿಶ್ವದ ಮಾನವರೆಲ್ಲರಿಗೂ ಎಲ್ಲ ಕಾಲಕ್ಕೂ ಉಪಯೋಗಕ್ಕೆ ಬರುವ ವಿಷಯಗಳನ್ನು ಹೇಳಿದವನು ಎಂದು ಎಷ್ಟೋ ಜನ ಪಾಶ್ಚಿಮಾತ್ಯ ವಿದ್ಯಾಂಸರೇ ಮೆಚ್ಚಿಕೊಂಡ ಮನು ಮಹರ್ಷಿ ತಾನು ಹೇಳಿರುವ ಧರ್ಮಸೂತ್ರಗಳು ಒಂದಕ್ಕೊಂದು ತಾಳೆಯಾಗುವಂತೆ, ಅಸಂಬದ್ಧತೆಯಿಲ್ಲದೆ ಸೂತ್ರಬದ್ಧವಾಗಿರುವಂತೆ ನೋಡಿಕೊಂಡಿರುವುದಿಲ್ಲವೇ? ಸ್ವಯಂ ಮನುವೇ ಸ್ಪಷ್ಟವಾಗಿ ಹೇಳಿರುವ ನಿಯಮಗಳಿಗೆ, ಪ್ರಮಾಣಗಳಿಗೆ, ಸಮಗ್ರವಾಗಿ ಅವನ ಧರ್ಮಶಾಸ್ತ್ರದ ಓಘಕ್ಕೆ, ತತ್ತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವ ಯಾವುದಾದರೂ ಅಬದ್ಧಗಳು, ಅಪಭ್ರಂಶಗಳು ಕಂಡುಬಂದರೆ ಅವನ್ನು ಕಾಲಾನಂತರದಲ್ಲಿ ಯಾರೋ ಅತಿಬುದ್ಧಿವಂತರು ಸೇರಿಸಿರಬಹುದೆನ್ನುವುದು ಸ್ಪಷ್ಟವಲ್ಲವೇ? ಮಧ್ಯದಲ್ಲಿ ಯಾರೋ ಸೇರಿಸಿದ ವಿಷಯಗಳ ಪಾಪಕ್ಕೆ ಮೂಲ ಕೃತಿಕಾರನನ್ನು ಹೊಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಯುಗಯುಗಗಳಿಂದಲೂ ಯಾವದ್ಭರತಭೂಮಿಗೆ ಪರಮಪವಿತ್ರ ಗ್ರಂಥವಾದ ರಾಮಾಯಣದಲ್ಲಿಯೇ ಎಷ್ಟೋ ಪ್ರಕ್ಷಿಪ್ತ ಭಾಗಗಳಿವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ನೇಪಾಳದಲ್ಲಿ ಸಾವಿರಾರು ವರ್ಷಗಳ ಹಿಂದೆ ಭದ್ರವಾಗಿರಿಸಿದ ತಾಳೆಗರಿಯ ಮೂಲಪ್ರತಿಯಲ್ಲಿ ಇರದೇ ಇರುವ ಕೆಲವೊಂದು ಶ್ಲೋಕಗಳು ಈಗ ನಮಗೆ ಲಭ್ಯವಿರುವ ಪ್ರತಿಗಳಲ್ಲಿ ಸೇರಿಕೊಂಡಿವೆ. ಇತ್ತೀಚಿನ ವೇಮನನು ಬರೆದದ್ದು ಕೇವಲ ನೂರೇ ನೂರು ಪದ್ಯಗಳು. ಆದರೆ ಅವನ ಹೆಸರಿನಲ್ಲಿ ಪ್ರಚಲಿತವಿರುವ ಸಾವಿರಾರು ಪದ್ಯಗಳು ನಮಗೆ ಇಂದು ದೊರೆಯುತ್ತವೆ! (ವೇಮನನು ಸರ್ವಜ್ಞನ ಸಮಕಾಲೀನನಾಗಿದ್ದವನು. ಅವನು ತೆಲುಗಿನಲ್ಲಿ ಬರೆದಿರುವ ನೂರು ಪದ್ಯಗಳು ’ವೇಮನ ಶತಕಂ’ ಎಂದು ಪ್ರಸಿದ್ಧವಾಗಿವೆ). ಜನಸಾಮಾನ್ಯರು ಆ ಸಾವಿರಾರು ಪದ್ಯಗಳನ್ನು ನೋಡಿ ಮೋಸಹೋಗಬಹುದು. ಆದರೆ ಮೂಲತತ್ತ್ವವನ್ನು ಆಧರಿಸಿ, ಶೈಲಿಯನ್ನು ನೋಡಿ, ಭಾಷೆಯನ್ನು ನೋಡಿ, ಅಸಲಿ ಯಾವುದು ನಕಲಿ ಯಾವುದು ಎನ್ನುವುದನ್ನು ಭಾಷಾ ಪಂಡಿತರು ಕಂಡುಹಿಡಿದಿದ್ದಾರೆ. ವೇಮನನ ಅಂಕಿತನಾಮವಾದ "ವಿಶ್ವದಾಭಿರಾಮ, ವಿನುರ ವೇಮ" ಎನ್ನುವುದು ಕಡೆಯಲ್ಲಿ ಇರುವುದರಿಂದ ಯಾರೋ ಬರೆದು ಗೀಚಿದ ಗಾರ್ದಭ ಕವಿತೆಗಳಿಗೆಲ್ಲಾ ವೇಮನನೇ ಅಪರಾಧಿ ಎಂದು ಬುದ್ಧಿಯಿರುವವರಾರೂ ಹೇಳುವುದಿಲ್ಲ. ನೀತಿಯನ್ನು ಬೋಧಿಸಲು ಉದ್ದೇಶಿಸಿದ ಪ್ರಾಚೀನ ರಾಮಾಯಣದಂತಹ ಗ್ರಂಥಗಳಲ್ಲೇ, ಆಧುನಿಕವೆನಿಸುವ ನೀತಿ ಶತಕಗಳಲ್ಲೇ ಹಸ್ತಕ್ಷೇಪಗಳು ಇರುವುದರಿಂದ ಸಮಾಜದಲ್ಲಿ ವಿವಿಧ ವರ್ಗಗಳ ಜೀವನಕ್ರಮಕ್ಕೆ, ಅನೇಕಾನೇಕ ಸಾರ್ವಜನಿಕ ಕಾರ್ಯಕಲಾಪಗಳಿಗೆ, ಸಾಮಾಜಿಕ ಕಟ್ಟುಪಾಡುಗಳಿಗೆ, ಅಪರಾಧಗಳು ಮತ್ತು ಅಪರಾಧಿಗಳಿಗೆ ವಿಧಿಸಬೇಕಾದ ಶಿಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕವೆಂದು ನಂಬುತ್ತಿರುವ ಧರ್ಮಶಾಸ್ತ್ರಗಳಲ್ಲಿ ಕಲಬೆರೆಕೆ, ಕೈಕೆಲಸಗಳು ಇಲ್ಲದೆ ಇರುತ್ತವೆಯೇ?
ಮನುಸ್ಮೃತಿಯಲ್ಲಿನ ಪ್ರಕ್ಷಿಪ್ತ ವಿಷಯಗಳ ಕುರಿತು ಗಟ್ಟಿಯಾದ ಪ್ರತಿರೋಧವು ಬಾಧೆಗೊಳಪಟ್ಟ ಸಾಮಾಜಿಕ ವರ್ಗಗಳಲ್ಲಿ ತಿಳುವಳಿಕೆಯು ಹೆಚ್ಚಾದ ನಂತರದ ಇತ್ತೀಚಿನ ದಶಕಗಳಿಂದಷ್ಟೆ ಕಂಡುಬರುತ್ತಿದೆ ಎನ್ನುವುದು ಸರಿಯಲ್ಲ. ಈಚೆಗೆ ಕೇಳಿ ಬರುತ್ತಿರುವ ಆಕ್ಷೇಪಣೆಗಳು, ಶತಮಾನಕ್ಕೂ ಹಿಂದೆ ಸ್ವಾಮಿ ದಯಾನಂದ ಸರಸ್ವತಿ, ಶ್ರೀಯುತರಾದ ವಿಶ್ವನಾಥ ನಾರಾಯಣ ಮಾಂಡಲೀಕ್, ತುಲಸೀರಾಂ, ಭಾರತರತ್ನ ಪಿ.ವಿ.ಕಾಣೆ ಮೊದಲಾದ ಎಷ್ಟೋ ಜನ ವಿದ್ವಾಂಸರು ಗುರುತಿಸಿ ವಿವರವಾಗಿ ಚರ್ಚಿಸಲ್ಪಟ್ಟಿರುವಂತಹ ವಿಷಯಗಳೇ ಆಗಿವೆ. ಮರೆತುಹೋಗಿ ಮರೆಯಾಗಿದ್ದ ಮನುಸ್ಮೃತಿಯನ್ನು ಆಧುನಿಕ ಪ್ರಪಂಚಕ್ಕೆ ಪರಿಚಯಿಸಿದವರಲ್ಲಿ ಜಾರ್ಜ್ ಬೂಲ್ಹರನದು ಪ್ರಸ್ತಾಪಿಸಬಹುದಾದಂತಹ ಹೆಸರು. ಮನುಸ್ಮೃತಿಗೆ ಸಂಬಂಧಿಸಿದಂತೆ ಆಧುನಿಕರೆಲ್ಲರೂ ಪ್ರಾಮಾಣಿಕವಾಗಿ ಪರಿಗಣಿಸುತ್ತಿರುವುದು ಬೂಲ್ಹರನ ಗ್ರಂಥವನ್ನೇ! ಕ್ರಿ.ಶ.೧೮೮೬ರಲ್ಲಿ Laws of Manu ಎನ್ನುವ ಹೆಸರಿನಲ್ಲಿ ಬೂಲ್ಹರನು ಪ್ರಕಟಿಸಿರುವ ಸಂಶೋಧನಾ ಗ್ರಂಥದ ಪೀಠಿಕೆಯಲ್ಲಿ ಅವನು ಬರೆದಿರುವ ಕೆಲವು ವಾಕ್ಯಗಳನ್ನು ಉದಾಹರಣೆಯಾಗಿ ನೋಡೋಣ.
This work contains also an admixture of modern elements ..... If we examine Manu's text according to these principles, the whole first chapter must be considered as a later additions..... Chapters II-IV, on the other hand, seem to represent with tolerable faithfulness the contents of the corresponding sections of the Manava Dharma-Sutra....... Nevertheless, the hand of the remodeller is not rarely visible.... There are a considerable number of smaller and some larger interpolations..... More doubtful are the discussions on the duty of conjugal intercourse (vv. 46-50), on the honour due to women (vv 55-60), on the excellence of the order of householders (vv. 79-80)..... ......
(LAWS OF MANU by George Buhler, Introduction pp.ixvi-ixviii)
ಈ ಕೃತಿಯಲ್ಲಿ ಆಮೇಲೆ ಬಂದು ಸೇರಿಕೊಂಡ ನೂತನ ಅಂಶಗಳೂ ಸಹ ಇವೆ.... ಈ ಸೂತ್ರಗಳನ್ನಾಧರಿಸಿ ಮನುವಿನ ಗ್ರಂಥವನ್ನು ಪರಿಶೀಲಿಸಿದರೆ, ಮೊದಲನೇ ಅಧ್ಯಾಯವು ಸಂಪೂರ್ಣವಾಗಿ ಹೊಸದಾಗಿ ಸೇರಿಸಲ್ಪಟ್ಟಿದೆ ಎಂದು ಭಾವಿಸಬೇಕಾಗಿದೆ.... ಆದರೆ, ೨ರಿಂದ ೪ರವರೆಗಿನ ಅಧ್ಯಾಯಗಳು ಸ್ವಲ್ಪ ಹೆಚ್ಚೂ ಕಡಿಮೆ ಒಪ್ಪಿಕೊಳ್ಳಬಹುದಾದಂತಹ ಪ್ರಾಮಾಣಿಕತೆಯಿಂದ ಕೂಡಿದ್ದು ಅವು ಮಾನವ ಧರ್ಮಸೂತ್ರಗಳ ವಿವಿಧ ಅಧಿಕರಣಗಳಿಗೆ ಅನುಗುಣವಾಗಿ ಇವೆ..... ಆದರೂ ಸಹ ಪ್ರಕ್ಷಿಪ್ತ ಭಾಗಗಳನ್ನು ಸೇರಿಸಿದ ಆಧುನಿಕರ ಹಸ್ತಕ್ಷೇಪವು ವಿರಳವಾಗೇನೂ ಇಲ್ಲ....... ಅದರಲ್ಲಿ ಸಾಕಷ್ಟು ಚಿಕ್ಕ ಮತ್ತು ಗಣನೀಯವಾದ ದೊಡ್ಡ ಪ್ರಕ್ಷಿಪ್ತ ಭಾಗಗಳೂ ಇವೆ..... ಇದರಲ್ಲಿ ಹೆಚ್ಚು ಅನುಮಾನಕ್ಕೆಡೆ ಮಾಡಿಕೊಡುವುದು ವೈವಾಹಿಕ ಸಂಭೋಗಕ್ಕೆ ಸಂಬಂಧಿಸಿದ ಚರ್ಚೆಗಳು, ಮಹಿಳೆಯರಿಗೆ ಸಲ್ಲಬೇಕಾಗಿರುವ ಗೌರವ, ಗೃಹಸ್ಥಾಶ್ರಮದ ಪ್ರಾಮುಖ್ಯತೆಯ ಕುರಿತಾದ ವಿಷಯಗಳು........ (ಮನುವಿನ ಧರ್ಮಸೂತ್ರಗಳು - ಆಂಗ್ಲ ಪುಸ್ತಕಕ್ಕೆ ಜಾರ್ಜ್ ಬೂಲ್ಹರ್ ಅವರು ಬರೆದಿರುವ ಪರಿಚಯ ಭಾಗದ ಪುಟಗಳು ೯೬ರಿಂದ ೯೮)
ವಿವಿಧ ವರ್ಣಗಳ ಮಧ್ಯೆ ವಿವಾಹಗಳು, ಎಂಟು ವಿಧವಾದ ವಿವಾಹಗಳ ಒಳಿತು ಕೆಡಕುಗಳು, ಶ್ರಾದ್ಧ ಮತ್ತು ಯಜ್ಞಗಳಲ್ಲಿನ ಪ್ರಾಣಿವಧೆ, ಮಾಂಸ ಭಕ್ಷಣೆ, ಬಂಜೆಯರು ನಿಯೋಗದ ಮೂಲಕ ಸಂತಾನವನ್ನು ಪಡೆಯುವಂತಹ ವಿಷಯಗಳಲ್ಲಿ.... ಶೂದ್ರರಿಗೂ, ಸ್ತ್ರೀಯರಿಗೂ ಸಂಬಂಧಿಸಿದ ಅಂಶಗಳಲ್ಲಿ ಪರಸ್ಪರ ವಿರುದ್ಧವಾದ ಹಲವಾರು ಆದೇಶಗಳು ಮನುಸ್ಮೃತಿಯಲ್ಲಿ ಕಂಡುಬರುತ್ತವೆ. ಈ ವಿಧವಾಗಿ ಮಾಡಬೇಕೆಂದು ನಿರ್ದೇಶಿಸಿ ಹೇಳಿದ ಮೇಲೆ ಕೂಡಲೇ ಹಾಗೆ ಮಾಡುವುದು ಬಹಳ ತಪ್ಪು, ನಿಕೃಷ್ಟವಾದದ್ದು ಎಂದು ಖಂಡಿಸಿರುವುದು ಒಪ್ಪಿಕೊಳ್ಳತಕ್ಕಂತಹುದಲ್ಲ. ಒಂದು ಕಡೆ ಹೇಳಿರುವ ವಿಷಯಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಮತ್ತೊಂದು ಕಡೆ ಮತ್ತೊಂದು ವಿಧವಾಗಿ ಹೇಳಿರುವುದೂ ಇದೆ. ಇದು ಕಾಲಕ್ರಮದಲ್ಲಿ ಜರುಗಿದ ಸೇರ್ಪಡೆಯಲ್ಲದೆ ಮತ್ತೇನೂ ಅಲ್ಲ.
ಯಾವ ಯಾವ ವಿಷಯಗಳು ಪ್ರಕ್ಷಿಪ್ತವೆಂದು ನಿರ್ಧರಿಸುವುದು ತುಸು ಕಷ್ಟವಾದ ಕೆಲಸ ಆದರೆ ಖಂಡಿತ ಅಸಾಧ್ಯವಾದುದಲ್ಲ. ತಾನು ಬೋಧಿಸುತ್ತಿರುವ ಧರ್ಮದ ಲಕ್ಷಣಗಳೇನು ಎಂದು ಮಹರ್ಷಿ ಮನು ಮುಂಚೆಯೇ ಸುಸ್ಪಷ್ಟವಾಗಿ ಘಂಟಾಘೋಷವಾಗಿ ಹೀಗೆ ಹೇಳಿದ್ದಾನೆ:
ವೇದೋ ಖಿಲೋ ಧರ್ಮ ಮೂಲಂ...... (೨ - ೬)
(ವೇದವೇ ಸಮಸ್ತ ಧರ್ಮಕ್ಕೆ ಮೂಲ)
ವೇದಃ ಸ್ಮೃತಿಸ್ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಂ
ಏತಚ್ಚತುರ್ವಿಧಂ ಪ್ರಾಹುಃ ಸಾಕ್ಷಾದ್ಧರ್ಮಸ್ಯ ಲಕ್ಷಣಂ (೨ - ೧೨)
(ವೇದ, ಸ್ಮೃತಿ, ಸದಾಚಾರ ಮತ್ತು ತನ್ನ ಮನಸ್ಸಿಗೆ ಸರಿಯೆನಿಸುವುದು; ಎನ್ನುವ ನಾಲ್ಕು ವಿಷಯಗಳು ಧರ್ಮದ ಲಕ್ಷಣಗಳು).
ಎಲ್ಲದಕ್ಕಿಂತಲೂ ಪರಮ ಪ್ರಮಾಣವಾದದ್ದು ವೇದ. ಅದರಲ್ಲಿ ಪ್ರಕ್ಷಿಪ್ತ ಭಾಗಗಳು ಇಲ್ಲ. ಅದರಲ್ಲಿ ಪಾಠಾಂತರಗಳೂ ಇಲ್ಲ. ಎಲ್ಲಿಯೂ ಒಂದು ಅಕ್ಷರವೂ ಸಹ ತಪ್ಪದಂತೆ, ಯಾರಿಂದಲೂ ಬದಲಾಯಿಸಲು ಸಾಧ್ಯವಾಗದಂತಹ, ಪ್ರಶ್ನಾತೀತವಾದ ನಿಯಮಗಳ ಮೂಲಕ ವೇದಗಳು ಸಾಗಿಬಂದಿರುವುದರಿಂದ ವೇದಗಳ ವಿಷಯದಲ್ಲಿ ಸಂದಿಗ್ಧತೆ ಇಲ್ಲ. ಧರ್ಮದ ವಿಷಯದಲ್ಲಿ ವೇದಗಳು ಆದಿಮೂಲವೆಂದು ಮನುವೇ ಹೇಳಿರುವುದರಿಂದ ವೇದಗಳಲ್ಲಿ ಹೇಳಿರುವುದಕ್ಕೆ ವಿರುದ್ಧವಾಗಿ ಮನುಸ್ಮೃತಿಯಲ್ಲಿ ಏನಾದರೂ ಹೇಳಿದ್ದರೆ ಅದು ಮನುವಿನ ಅಭಿಪ್ರಾಯವಲ್ಲವೆಂದು ನಿರ್ಧರಿಸಬಹುದು. "ಧರ್ಮಶಾಸ್ತ್ರಂ ತು ವೈ ಸ್ಮೃತಿಃ" ಎಂದು ಅದಕ್ಕೂ ಮುಂಚಿನ ಶ್ಲೋಕದಲ್ಲಿ (೨-೧೦) ಇರುವುದರಿಂದ ಸ್ಮೃತಿ ಎಂದರೆ ಧರ್ಮಶಾಸ್ತ್ರ. ಸ್ಮೃತಿಗಳು ಎಷ್ಟೇ ಇದ್ದರೂ ಸಹ ಅವುಗಳ ಬೋಧನೆಗಳ ಸಾರವಾದ ಧರ್ಮಶಾಸ್ತ್ರವು ಏನು ಹೇಳುತ್ತದೆ ಎನ್ನುವುದು ಪಂಡಿತರಿಗೆ ತಿಳಿದಿರುತ್ತದೆ. ಆದ್ದರಿಂದ ಧರ್ಮಕ್ಕೆ ವಿರುದ್ಧವಾದ ಅಂಶಗಳು ಎಲ್ಲೇ ಇರಲಿ ಅವನ್ನು ಕಂಡುಹಿಡಿಯಬಹುದು, ಅದರಲ್ಲಿ ಅನುಮಾನಗಳೇನಾದರೂ ಇದ್ದರೆ ಮೂರನೆಯ ಪ್ರಮಾಣವಾದ ಸದಾಚಾರವನ್ನು ಗಮನಿಸಬಹುದು. ವೇದವಿಶಾರದರಾದ ಧರ್ಮವೇತ್ತರು ನಿರ್ದೇಶಿಸಿದ, ಅನುಸರಿಸುತ್ತಿರುವ ಒಳ್ಳೆಯ ಆಚಾರಗಳನ್ನು ಗಮನಿಸಿ ಒಪ್ಪು-ತಪ್ಪುಗಳನ್ನು ನಿರ್ಣಯಿಸಬಹುದು. ಒಂದು ವೇಳೆ ವೇದಗಳಲ್ಲಿ ಅಭ್ಯಂತರವಿಲ್ಲದಿದ್ದರೂ, ಧರ್ಮಶಾಸ್ತ್ರಗಳಲ್ಲಿ ನಿಷೇಧಿಸಲ್ಪಡದೇ ಇದ್ದರೂ, ಶಿಷ್ಠಾಚಾರಕ್ಕೆ ವ್ಯತಿರೇಕವಾಗಿಲ್ಲದಿದ್ದರೂ ಸಹ........ ಅವೆಲ್ಲವನ್ನು ತಿಳಿದಿದ್ದೂ ಕೂಡಾ, ಅವೆಲ್ಲವುಗಳ ಮೇಲೆ ಪರಿಪೂರ್ಣವಾದ ಗೌರವವಿದ್ದಾಗ್ಯೂ ಸಹ ಯಾವುದಾದರೂ ವಿಷಯವನ್ನು ತನ್ನ ಅಂತರಾತ್ಮವು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದರೆ, ಆತ್ಮವಂಚನೆ ಮಾಡಿಕೊಂಡು ಅದನ್ನು ಪಾಲಿಸಬೇಕಾಗಿಲ್ಲವೆಂದು ಸ್ವಯಂ ಮನುವೇ ವಿನಾಯತಿಯನ್ನು ಕೊಟ್ಟಿದ್ದಾನೆ. ಪ್ರಪಂಚದಲ್ಲಿರುವ ಯಾವುದೇ ಬೇರೆ ಧರ್ಮವಾಗಲಿ, ಅನ್ಯಮತಗಳಿಗೆ ಸಂಬಂಧಿಸಿದ ಧರ್ಮಶಾಸ್ತ್ರಗಳಾಗಲಿ ಮಾನವರಿಗೆ ಕೊಟ್ಟಿರುವ ಅಪೂರ್ವವಾದ ಅವಕಾಶವಿದು. ವಿಜ್ಞಾನದಲ್ಲಿ ಆಮ್ಲ ಮತ್ತು ಕ್ಷಾರಗಳನ್ನು ಕಂಡುಹಿಡಿಯಲು ಉಪಯೋಗಿಸುವ ’ಲಿಟ್ಮಸ್ ಪರೀಕ್ಷೆ’ಯಂತೆ ಅಂದರೆ ಅಗ್ನಿಪರೀಕ್ಷೆಗೆ ಈ ನಾಲ್ಕು ಪ್ರಮಾಣಗಳ ಸಹಾಯದಿಂದ ಮನುಸ್ಮೃತಿಯಲ್ಲಿರುವ ಜೊಳ್ಳುಕಾಳುಗಳನ್ನು ಬೇರ್ಪಡಿಸುವುದು ಅಸಾಧ್ಯವಾದ ಕೆಲಸವೇನೂ ಅಲ್ಲ.
ಈ ದಿಶೆಯಲ್ಲಿ ಈಗಾಗಲೇ ಸ್ವಲ್ಪ ಪ್ರಯತ್ನವೂ ನಡೆದಿದೆ. ೧) ವಿಷಯಕ್ಕೆ ವಿರುದ್ಧವಾದದ್ದು ೨) ಪ್ರಸಂಗ ವಿರುದ್ಧವಾದದ್ದು ೩) ಪರಸ್ಪರ ವಿರುದ್ಧವಾದದ್ದು ೪) ಪುನರುಕ್ತಿದೋಷವುಳ್ಳದ್ದು ೫) ಶೈಲಿಗೆ ವಿರುದ್ಧವಾದದ್ದು ೬) ಅವಾಂತರಕ್ಕೆ (ಅಧಿಕರಣ) ವಿರುದ್ಧವಾದದ್ದು ಮತ್ತು ೭) ವೇದ ವಿರುದ್ಧವಾದದ್ದು ಎನ್ನುವ ಏಳು ಸೂತ್ರಗಳ ಮಾನದಂಡವನ್ನಿಟ್ಟುಕೊಂಡು, ಆ ದೋಷಗಳಲ್ಲಿ ಯಾವುದೇ ಒಂದು ಅಂಶವಿದ್ದರೂ ಸಹ ಅದು ಧರ್ಮಕ್ಕೆ ವಿರುದ್ಧವೆಂದೂ, ಈ ಏಳು ದೋಷಗಳಲ್ಲಿ ಯಾವುದೂ ಅಂಟದೇ ಇದ್ದರೆ ಅದು ಶುದ್ಧವೆಂದು ನಿರ್ಧರಿಸಿ ಪ್ರೊಫೆಸರ್ ಆರ್. ಸುರೇಂದ್ರಕುಮಾರ್ ಕೆಲವು ವರ್ಷಗಳ ಹಿಂದೆ "ವಿಶುದ್ಧ ಮನುಸ್ಮೃತಿ" ಎನ್ನುವ ಗ್ರಂಥವನ್ನು ಹಿಂದಿಯಲ್ಲಿ ಪ್ರಕಟಿಸಿದ್ದಾರೆ. ತೆಲುಗಿನಲ್ಲಿ ಈ ಗ್ರಂಥವು ಅನುವಾದಗೊಂಡಿದೆ (ಬಹುಶಃ ಕನ್ನಡದಲ್ಲೂ ಇದು ಅನುವಾದಗೊಂಡಿದೆ). ಸುರೇಂದ್ರಕುಮಾರ್ ಅವರು ಇಟ್ಟುಕೊಂಡಿರುವ ಮಾನದಂದಡಗಳ ಕುರಿತು ಆಕ್ಷೇಪಣೀಯವಾದುದೇನೂ ಇಲ್ಲ, ಆದರೆ ಆ ಮಾನದಂಡಗಳ ಹೆಸರಿನಲ್ಲಿ... ತಮ್ಮ ದೃಷ್ಟಿಯಲ್ಲಿ ಈ ಕಾಲಕ್ಕೆ ಸರಿಹೊಂದದ, ಇಂದಿನ ದೇಶಕಾಲ ಪರಿಸ್ಥಿತಿಗಳಲ್ಲಿ ಸಮರ್ಥನೀಯವಲ್ಲದ ಮತ್ತು ವಿವಾದಾಸ್ಪದವಾದವುಗಳನ್ನು ಅವರು ಸಾರಾಸಗಟಾಗಿ ತೆಗೆದುಹಾಕಿರುವುದರಿಂದ ಒಟ್ಟು ೨೬೮೫ ಶ್ಲೋಕಗಳಲ್ಲಿ ಅನಾಮತ್ತಾಗಿ ೧೪೭೧ ಶ್ಲೋಕಗಳು ಅಂದರೆ ಅರ್ಧಕ್ಕರ್ಧದಷ್ಟು ಶ್ಲೋಕಗಳನ್ನು ಕೈಬಿಡಲಾಗಿದೆ.
ಮೊದಲನೇ ಅಧ್ಯಾಯದಲ್ಲಿ ವಿವಿಧ ಮನುಗಳ ಪ್ರಜಾಸೃಷ್ಟಿ, ಯುಗಧರ್ಮಗಳು, ತಪಃ ಪ್ರಶಂಸೆ.... ಎರಡನೇ ಅಧ್ಯಾಯದಲ್ಲಿ ಓಂಕಾರ, ಗಾಯತ್ರೀ ಮಂತ್ರ, ಮೂರನೇ ಅಧ್ಯಾಯದಲ್ಲಿ ಅತಿಮುಖ್ಯವಾದ ಶ್ರಾದ್ಧ ಕರ್ಮವಿಧಾನ, ನಾಲ್ಕನೆಯ ಅಧ್ಯಾಯದಲ್ಲಿ ಆಹಿತಾಗ್ನಿ ವಿಧಗಳು, ಅನಧ್ಯಾಯಗಳು..... ಐದನೆಯ ಅಧ್ಯಾಯದಲ್ಲಿ ಸಾಪಿಂಡ್ಯ ಲಕ್ಷಣಗಳು, ಅಶೌಚ ವಿಧಿ.... ಹತ್ತನೆ ಅಧ್ಯಾಯದಲ್ಲಿ ಸಂಕೀರ್ಣ ಜಾತಿಗಳು, ಆಪದ್ಧರ್ಮಗಳು...... ಹನ್ನೊಂದನೆ ಅಧ್ಯಾಯದಲ್ಲಿ ಪ್ರಾಯಶ್ಚಿತ್ತ ಕಾಂಡಗಳಿಗೆ ಸಂಬಂಧಿಸಿದಂತೆ ಅತಿಮುಖ್ಯವಾದ ಶ್ಲೋಕಗಳಲ್ಲಿ ನೂರಾರು ಶ್ಲೋಕಗಳು ಕತ್ತರಿಸಲ್ಪಟ್ಟಿವೆ. ಈ ಕಾಲದ ಕೆಲವು ಅಪಕ್ವವೆನಿಸುವ ಆಲೋಚನೆಯುಳ್ಳವರನ್ನು ಮೆಚ್ಚಿಸಲೊ ಎಂಬಂತೆ ಮಹತ್ತರವಾದ ಧರ್ಮಶಾಸ್ತ್ರವನ್ನು ಅನಾವಶ್ಯಕವಾಗಿ ಅತಿಜಾಗರೂಕತೆಯಿಂದ ತುಂಡರಿಸಿದ್ದರಿಂದ ಪ್ರೊಫೆಸರ್ ಸುರೇಂದ್ರಕುಮಾರ್ ಅವರು ಪಟ್ಟ ಬೆಲೆಕಟ್ಟಲಾಗದ ಶ್ರಮವು ಆರ್ಯಸಮಾಜದವರನ್ನು ಹೊರತುಪಡಿಸಿ ವಿಶಾಲವಾದ ಪ್ರಾಜ್ಞ ಸಮಾಜವನ್ನು ಮೆಚ್ಚಿಸುವಲ್ಲಿ ವಿಫಲವಾಯಿತು. ಮನುಸ್ಮೃತಿಯಲ್ಲಿರುವ ಪ್ರಕ್ಷಿಪ್ತ ಭಾಗಗಳನ್ನು ಗುರುತಿಸಲು ದೊಡ್ಡ ಪ್ರಮಾಣದಲ್ಲಿ ಅಖಿಲಭಾರತ ಸ್ಥಾಯಿಯಲ್ಲಿ ದೊಡ್ಡ ಪ್ರಮಾಣದ ಕೆಲಸವಾಗಬೇಕಿದೆ. (ಹೆಚ್ಚಿನ ವಿವರಗಳಿಗೆ ಲೇಖನದ ಕೊನೆಯಲ್ಲಿ ಕೊಟ್ಟಿರುವ ಟಿಪ್ಪಣಿಯನ್ನು ನೋಡಿ)
ಈ ಕಾಲದ ಪ್ರಮಾಣಗಳಿಗೆ, ಆಧುನಿಕ ಆಲೋಚನಾ ವಿಧಾನಗಳಿಗೆ ಅನುಗುಣವಾಗಿ ನೋಡಿದರೂ ಸಹ ಮನುಸ್ಮೃತಿಯಲ್ಲಿ ಅಭ್ಯಂತರಕರವಾದ ಶ್ಲೋಕಗಳ ಸಂಖ್ಯೆಯು ಬಹಳವೆಂದರೆ ಮುನ್ನೂರನ್ನೂ ಮೀರದು. ಮನುಸ್ಮೃತಿಯಲ್ಲಿರುವ ಒಟ್ಟು ೨೬೮೫ ಶ್ಲೋಕಗಳಲ್ಲಿ ಇದು ಶೇಖಡಾ ಒಂಬತ್ತರಷ್ಟು ಮಾತ್ರ. ಇದರರ್ಥ ಪ್ರತಿ ಒಂಭೈನೂರು ಶ್ಲೋಕಗಳಲ್ಲಿ ಎಂಟುನೂರು ಶ್ಲೋಕಗಳಿಗೆ ಧರ್ಮ ಮತ್ತು ಮನುಸ್ಮೃತಿಯ ಪೂರ್ವಾಪರಗಳನ್ನು ತಿಳಿದವರಾರೂ ಆಕ್ಷೇಪಣೆ ವ್ಯಕ್ತಮಾಡುವ ಕೆಲಸವಿಲ್ಲ. ಯಾವುದೇ ಧರ್ಮಶಾಸ್ತ್ರವನ್ನಾಗಲಿ ಅದು ಪ್ರಚುರಣಗೊಂಡ ಅಂದಿನ ಪರಿಸ್ಥಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸಬೇಕೇ ಹೊರತು ಇಂದಿನ ಆಲೋಚನಾ ಲೋಚನದಿಂದ ಅಂದಿನ ಭಾವನೆಗಳ ಕುರಿತು ತೀರ್ಮಾನ ಕೈಗೊಳ್ಳುವುದು ಸಮಂಜಸವಲ್ಲ. ಹಾಗೆ ಆಧುನಿಕ ಪ್ರಮಾಣಗಳೊಂದಿಗೆ ಪರಿಶೀಲಿಸಿ ಕೃತಿಯೊಂದರ ಮೌಲ್ಯಮಾಪನವನ್ನು ಮಾಡುವುದಾದರೆ ನಮ್ಮ ಬುದ್ಧಿಜೀವಿಗಳು ಮುದ್ದಾಡುವ ವಿದೇಶಿ ಮತಗಳ ಧರ್ಮ ಗ್ರಂಥಗಳಾವುವೂ ಕೆಲಸಕ್ಕೆ ಬಾರವು.
ಮನುಸ್ಮೃತಿಯಲ್ಲಿರುವ ಕೆಲವು ಶ್ಲೋಕಗಳಲ್ಲಿನ ಅಸಂಬದ್ಧತೆಯಾಗಲಿ, ವೈಪರೀತ್ಯಗಳಾಗಲಿ ಹೊಸದಾಗಿ ಬೆಳಕಿಗೆ ಬಂದಂತಹವುಗಳಲ್ಲ. ವಿಶ್ವದಲ್ಲಿರುವ ವಿದ್ವಾಂಸರೆಲ್ಲರೂ ಪ್ರಾಮಾಣಿಕ ಗ್ರಂಥವೆಂದು ಪರಿಗಣಿಸುತ್ತಿರುವ ಕುಲ್ಲೂಕ ಭಟ್ಟನ ವ್ಯಾಖ್ಯಾನವನ್ನೊಳಗೊಂಡ ಕೃತಿಯಲ್ಲೂ ಕೂಡ ಮೇಲೆ ಹೇಳಿರುವ ಅಂಶಗಳಿವೆ. ಆ "ಕಲ್ಕತ್ತಾ ಮ್ಯಾನುಸ್ಕ್ರಿಪ್ಟ್" ಗ್ರಂಥವನ್ನು ಆಧರಿಸಿಯೇ ಸರ್ ವಿಲಿಯಂ ಜೋನ್ಸ್ ೧೭೯೨(೬?)ರಲ್ಲಿ "Institutes of Hindu Law or Ordinances of Menu" ಎನ್ನುವ ಹೆಸರಿನಲ್ಲಿ ಮನುಸ್ಮೃತಿಗೆ ಸಂಬಂಧಿಸಿದಂತೆ ಮೊಟ್ಟಮೊದಲ ಇಂಗ್ಲೀಷ್ ಅನುವಾದದ ಗ್ರಂಥವನ್ನು ಕಲ್ಕತ್ತಾದಲ್ಲಿ ಪ್ರಕಟಿಸಿದ.
ಆ ಗ್ರಂಥದಲ್ಲಿ ಇಂದು ನಮ್ಮನ್ನು ರೊಚ್ಚಿಗೆಬ್ಬಿಸುವ ಹಲವಾರು ಶ್ಲೋಕಗಳನ್ನೊಳಗೊಂಡಂತೆ ಒಟ್ಟು ೨೬೮೫ ಶ್ಲೋಕಗಳಿವೆ. ನಡುವೆ ಸೇರಿಸಿದವುಗಳು, ಪ್ರಕ್ಷಿಪ್ತ ಭಾಗಗಳು, ಮೊದಲಾದವು ಎಂದು ನಾವು ಅಂದುಕೊಳ್ಳುತ್ತಿರುವ ಅಭ್ಯಂತರಕರವಾದ ಶ್ಲೋಕಗಳನ್ನು ನೋಡಿದ ನಂತರವೂ ಸಹ ಮನುಸ್ಮೃತಿಯನ್ನು ತುರ್ತಾಗಿ ಸುಟ್ಟುಹಾಕಬೇಕೆಂದು ಜೋನ್ಸ್ ಭಾವಿಸಲಿಲ್ಲ. ಅವನು ದಾರಿಯಲ್ಲಿ ಹೋಗುವ ದಾಸಯ್ಯನೇನೂ ಆಗಿರಲಿಲ್ಲ. ಕಲಕತ್ತಾದಲ್ಲಿದ್ದ ಅಂದಿನ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸುತ್ತಿದ್ದವನು. ಭಾರತಕ್ಕೆ ಬಂದ ನಂತರ ಪಂಡಿತರ ಹತ್ತಿರ ಸಂಸ್ಕೃತವನ್ನು ಕಲಿತುಕೊಂಡು ಧರ್ಮಶಾಸ್ತ್ರಗಳನ್ನೇ ಅನುವಾದ ಮಾಡುವಂತಹ ಪ್ರಾವೀಣ್ಯವನ್ನು ಸಂಪಾದಿಸಿದಂತಹವನು. ಹುಟ್ಟಿನಿಂದ ವಿದೇಶೀಯ ಮತ್ತು ಕ್ರೈಸ್ತನಾದರೂ ಸಹ ನಮ್ಮ ಮನುಸ್ಮೃತಿಯನ್ನು ತನ್ನ ಮುನ್ನುಡಿಯಲ್ಲೇ ಜೋನ್ಸ್ ಎಷ್ಟರ ಮಟ್ಟಿಗೆ ಕೊಂಡಾಡಿದ್ದಾನೆಂದು ನೋಡಿ :
A spirit of sublime devotion of benevolence to mankind, and of amiable tenderness to all sentient creatures, pervaddes the whole work. The style of it has a certain austere majesty, that sounds like the language of legislation and extorts a respectful awe. The harsh admonitions even to the kings are truly noble.... Whatever opinion in short may be formed of Manu and his Laws, in a country happily enlightened by sound philosophy and only true revelation, it must be remembered that these laws are actually revered as the words of the most high.
[Institutes of Hindu Law, Sir William Jones, Preface]
ಮಾನವ ಜನಾಂಗದ ಬಗ್ಗೆ ನಿರ್ವಿವಾದವಾದ ಔದಾರ್ಯ, ಚೈತನ್ಯವಿರುವ ಪ್ರಾಣಿಗಳೆಲ್ಲವುಗಳ ಮೇಲೆ ದಯಾರ್ದ್ರತೆ ಈ ಕೃತಿಯ ತುಂಬಾ ತುಂಬಿ ತುಳುಕುತ್ತಿವೆ. ಇದರ ಶೈಲಿಯಲ್ಲಿ ಸ್ವಲ್ಪ ಕಠೋರವೆನಿಸುವ ಭವ್ಯತೆ ಇದೆ. ಇದರ ಭಾಷೆ ಶಾಸನದಂತೆ ಧ್ವನಿಸುತ್ತಾ ವಿನಮ್ರವಾದ ಸಂಭ್ರಮವನ್ನು ಹುಟ್ಟುಹಾಕುತ್ತದೆ. ರಾಜರನ್ನೂ ಸಹ ಕಠಿಣವಾದ ಶಾಸನಗಳಿಗೆ ಒಳಪಡಿಸಿರುವುದು ನಿಜವಾಗಿಯೂ ಉದಾತ್ತವಾಗಿದೆ........ ಮನುವಿನ ಮೇಲೆ, ಅವನ ಅನುಶಾಸನಗಳ ಮೇಲೆ ಸ್ಥೂಲವಾಗಿ ಒಂದು ಅಭಿಪ್ರಾಯಕ್ಕೆ ಬರುವ ಮುಂಚೆ..... ಉನ್ನತವಾದ ತಾತ್ವಿಕ ಚಿಂತನೆಗಳಿಂದ, ನಿಜವಾದ ದಿವ್ಯಜ್ಞಾನದಿಂದ ವಿರಾಜಿಸುವ ದೇಶದಲ್ಲಿ ಆ ಶಾಸನಗಳು ದೈವವಾಕ್ಯಗಳಂತೆ ಶಿರಸಾವಹಿಸಿ ಪಾಲಿಸಲ್ಪಡುತ್ತಿವೆ ಎನ್ನುವುದನ್ನು ಮರೆಯಬಾರದು.
ಎಲ್ಲಿಯೋ ವಿದೇಶದಲ್ಲಿ ಹುಟ್ಟಿ, ವಯಸ್ಸು ಮೀರಿದ ಮೇಲೆ ಸಂಸ್ಕೃತವನ್ನು ಕಲಿತುಕೊಂಡು ಮನುಧರ್ಮವನ್ನು ಅಧ್ಯಯನ ಮಾಡಿದ ಜೋನ್ಸ್ ದೊರೆಗೆ, ಮನುವು ಯಾವ ಪ್ರಾಣಿಗೂ ಹಿಂಸೆಯಾಗಬಾರದೆಂದು ಬಯಸುವ ಕರುಣಾಸಾಗರನಾದ ಮಾನವತೆಯೇ ಮೂರ್ತಿವೆತ್ತಂತವನಾಗಿ, ರಾಜರನ್ನೂ ಸಹ ಕಠಿಣವಾಗಿ ನಿಯಂತ್ರಿಸಬಲ್ಲ ಶಾಸನಕರ್ತನಾಗಿ ಕಂಡು ಬಂದು ಅವನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾನೆ. ಆದರೆ, ವೇದಭೂಮಿಯಲ್ಲಿ, ಸನಾತನ ಸಂಸ್ಕೃತಿಯಲ್ಲಿ ಹುಟ್ಟಿದ್ದಕ್ಕಾಗಿ ನಾಚಿಕೆಪಟ್ಟುಕೊಳ್ಳುವ ನಾವೇನೊ ಮನುವನ್ನು ಮಹಾಕ್ರೂರಿಯಾಗಿ, ಸಭ್ಯ ಸಮಾಜಕ್ಕೆ ಪೀಡೆಯುಂಟು ಮಾಡಿದವನನ್ನಾಗಿ ನೋಡುತ್ತಿದ್ದೇವೆ. ಮನುಸ್ಮೃತಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ವಿಲಿಯಂ ಜೋನ್ಸನ ವಿಗ್ರಹವನ್ನು ಅವನು ಮಾಡಿದ ಮಹೋನ್ನತ ಕಾರ್ಯಕ್ಕೆ ದ್ಯೋತಕವಾಗಿ ಲಂಡನ್ನಿನ ಸೇಯಿಂಟ್ ಪಾಲ್ಸ್ ಕೆಥೆಡ್ರೆಲ್ಲಿನಲ್ಲಿ (ಚಿತ್ರ ನೋಡಿ) ಬ್ರಿಟಿಷರು ಸ್ಥಾಪಿಸಿದ್ದಾರೆ. ನಾಗರಿಕರೆಂದು ಕರೆದುಕೊಳ್ಳುವ ನಾವೇನೋ ಮನುಸ್ಮೃತಿಯನ್ನು ಸುಟ್ಟುಹಾಕುವುದೇ ನಾಗರಿಕತೆಗೆ, ಸಾಮಾಜಿಕ ನ್ಯಾಯಕ್ಕೆ, ಪ್ರಗತಿಪರ ದೃಷ್ಟಿಕೋನಕ್ಕೆ ಸಾಕ್ಷಿಯೆಂದು ದೃಢವಾಗಿ ನಂಬುತ್ತೇವೆ!
ಮನುಸ್ಮೃತಿಯ ಕುರಿತ ಹೆಚ್ಚಿನ ವಿವರಗಳು:
ಇಂದು ದೊರೆತಿರುವ ಮನುಸ್ಮೃತಿಯು ೧೨ ಅಧ್ಯಾಯಗಳನ್ನು ಹೊಂದಿದ್ದು; ಇದರಲ್ಲಿ ಧಾರ್ಮಿಕ ವಿಧಿಗಳು, ಸಂಸ್ಕಾರಗಳು, ಗೃಹಸ್ಥ ಧರ್ಮ, ವಿವಾಹದ ನಿಯಮಗಳು, ನಿತ್ಯ ವಿಧಿಗಳು, ಶ್ರಾದ್ಧಗಳು, ವಿವಿಧ ವೃತ್ತಿಗಳು, ವೇದಾಧ್ಯಯನ, ಸ್ನಾತಕನ ನಿಯಮಗಳು, ವಿಹಿತ ಹಾಗು ನಿಷಿದ್ಧ ಆಹಾರಗಳು, ಅಶುದ್ಧಿ, ಶುದ್ಧೀಕರಣ, ಸ್ತ್ರೀಯ ಕರ್ತವ್ಯಗಳು, ಅರಣ್ಯದಲ್ಲಿನ ಆಶ್ರಮವಾಸಿಗಳು, ಯತಿಗಳು ಮತ್ತು ಅರಸನ ಕರ್ತವ್ಯಗಳನ್ನು ವಿವರಿಸಲಾಗಿದೆ.
ನಂತರ ಪೌರ ಹಾಗು ಅಪರಾಧ ಕಟ್ಟಳೆಗಳಲ್ಲಿ ಅವುಗಳ ವಿವರಣೆ ನೀಡುತ್ತಾ, ನ್ಯಾಯ ವಿಧಾನ, ಕೊಟ್ಟ ಸಾಲವನ್ನು ಪಡೆಯುವುದು, ಚಿನ್ನದ ತೂಕ, ಇತ್ಯಾದಿಗಳು, ಒಡೆತನವಿಲ್ಲದ ಮಾರಾಟ, ಮದುವೆಯ ಕರಾರು, ಕಾಣಿಕೆಗಳ ಹಂಚಿಕೆ, ವೇತನದ ವಿವಾದ, ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರದೆ ಇರುವುದು, ಒಡೆಯ ಹಾಗೂ ದನಗಾಹಿಗಳು, ಮಾನಹಾನಿ, ಗಾಯಗೊಳಿಸುವುದು, ಕಳವು, ಹಿಂಸೆ, ವ್ಯಭಿಚಾರ, ಸಂಕೀರ್ಣ ನಿಯಮಗಳು, ಪತಿ-ಪತ್ನಿಯರ ಕರ್ತವ್ಯಗಳು, ಪಿತ್ರಾರ್ಜಿತ ಆಸ್ತಿ ಹಾಗೂ ಪಾಲು, ಜೂಜಾಟ, ಸಂಕೀರ್ಣ ದಂಡನೆಗಳು, ಆಪದ್ಧರ್ಮ, ಮಿಶ್ರ ಜಾತಿಗಳು, ದಾನ, ಯಜ್ಞಯಾಗಾದಿಗಳು, ಆವಶ್ಯಕ ಪ್ರಾಯಶ್ಚಿತ್ತಗಳು, ಅಪರಾಧಗಳ ವರ್ಗೀಕರಣ, ಜನ್ಮಾಂತರ, ಮೋಕ್ಷ ಇತ್ಯಾದಿಗಳನ್ನು ಆ ನಂತರದಲ್ಲಿ ವಿವರಿಸಲಾಗಿದೆ.
ಈ ಸ್ಮೃತಿಯಲ್ಲಿ ಕೇವಲ ವೈದಿಕ ಆಚಾರ-ವಿಚಾರಗಳನ್ನಷ್ಟೆ ಅಲ್ಲದೆ ಒಟ್ಟಾರೆ ಒಂದು ಸಮಾಜದ ರೂಪುರೇಷೆಗಳನ್ನು ಚಿತ್ರಿಸಲಾಗಿದೆ. ಜಾತಿಗಳ ವ್ಯಕ್ತಿಗತ ವಿವಾದಗಳ ಬಗ್ಗೆಯೇ ಅಲ್ಲದೆ ಅವರುಗಳ ನಡುವೆ ಇರುವ ಸಹಯೋಗ, ಸದ್ಭಾವನೆ, ಸ್ನೇಹಗಳ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ. ವರ್ಣಾಶ್ರಮ ಧರ್ಮಗಳ ವಿವರ, ವ್ಯಕ್ತಿಯ ನಾಲ್ಕು ಆಶ್ರಮಗಳು, ಶಾಸ್ತ್ರೋಕ್ತವಾಗಿ ಆಯಾ ಆಶ್ರಮದ ನಿಯಮಗಳನ್ನು ಪಾಲಿಸುವುದು, ಅದರಿಂದ ವ್ಯಕ್ತಿಗೆ ಆಗುವ ಶುಭ ಇತ್ಯಾದಿಗಳನ್ನು ’ಸ್ವಧರ್ಮ’ ಎಂದು ಮನುವು ವಿವರಿಸಿದ್ದಾನೆ.
ಮನುಸ್ಮೃತಿಯು ಒಂದು ಸಂಪೂರ್ಣ ರೂಪದ ಧರ್ಮಶಾಸ್ತ್ರವಾಗಿದೆ. ಮಾನವ ಜೀವನದ ಪೂರ್ಣರೂಪದ ದರ್ಶನವನ್ನು ಬಹಳ ಸುಂದರವಾಗಿ ಇದರಲ್ಲಿ ಪ್ರತಿಪಾದಿಸಲಾಗಿದೆ. ಇಂತಹ ದೃಷ್ಟಿಕೋನ ಬೇರೆ ಧರ್ಮಶಾಸ್ತ್ರಗಳಲ್ಲಿಲ್ಲ.
ಇದರ ಪ್ರಥಮಾಧ್ಯಾಯದಲ್ಲಿ ಜಗತ್ತಿನ ಉತ್ಪತ್ತಿ; ಎರಡನೇ ಅಧ್ಯಾಯದಲ್ಲಿ ಜಾತಕರ್ಮ ಮುಂತಾದವುಗಳ ಸಂಸ್ಕಾರ ವಿಧಿಗಳು, ಬ್ರಹ್ಮಚರ್ಯ ವಿಧಿ, ಗುರು-ಅಭಿವಾದನ ವಿಧಿ; ಮೂರನೇ ಅಧ್ಯಾಯದಲ್ಲಿ ಸಮಾವರ್ತನೆ, ಸಂಸ್ಕಾರ, ಪಂಚ ಮಹಾಯಜ್ಞ ವಿಧಿ, ನಿತ್ಯ ಶ್ರಾದ್ಧೇಯ ವಿಧಿ; ನಾಲ್ಕನೇ ಅಧ್ಯಾಯದಲ್ಲಿ ಗೃಹಸ್ಥನ ನಿಯಮಗಳು, ಐದನೇ ಅಧ್ಯಾಯದಲ್ಲಿ ಹಾಲು-ಮೊಸರು ಇತ್ಯಾದಿಗಳ ಭಕ್ಷ್ಯಾಭಕ್ಷ್ಯಾಗಳ ವಿವರ, ದಶಾಹಾದಿಗಳ ಮುಖಾಂತರ ಜನನ-ಮರಣ ಅಶೌಚಗಳಲ್ಲಿ ಬ್ರಾಹ್ಮಣಾದಿಗಳ ಧರ್ಮ, ಸ್ತ್ರೀ ಧರ್ಮಗಳು; ಆರನೇ ಅಧ್ಯಾಯದಲ್ಲಿ ವಾನಪ್ರಸ್ಥ ಹಾಗೂ ಸನ್ಯಾಸಾಶ್ರಮಗಳ ವಿವರ, ಏಳನೇ ಅಧ್ಯಾಯದಲ್ಲಿ ಮೊಕದ್ದಮೆಗಳ ನಿರ್ಣಯ ಹಾಗೂ ಕಂದಾಯ ವಸೂಲಿ ಇತ್ಯಾದಿಗಳ ರಾಜಧರ್ಮದ, ಆಡಳಿತದ ವಿವರ; ಎಂಟನೇ ಅಧ್ಯಾಯದಲ್ಲಿ ಸ್ನೇಹಿತರೊಂದಿಗೆ ಪ್ರಶ್ನೆ ಕೇಳುವ ವಿಧಾನ; ಒಂಬತ್ತನೇ ಅಧ್ಯಾಯದಲ್ಲಿ ಒಟ್ಟಿಗೆ ಅಥವಾ ಬೇರೆ ಬೇರೆ ಇರುವಾಗಿನ ಗಂಡು, ಹೆಣ್ಣಿನ ಧರ್ಮ, ವೈಶ್ಯ ಹಾಗೂ ಶೂದ್ರರ ಸ್ವಧರ್ಮಗಳ ಅನುಷ್ಠಾನ; ಹತ್ತನೇ ಅಧ್ಯಾಯದಲ್ಲಿ ಅನುಲೋಮ ಹಾಗೂ ಪ್ರತಿಲೋಮ ಜಾತಿಗಳ ಉತ್ಪತ್ತಿ ಹಾಗೂ ಆಪತ್ತಿನ ಕಾಲದಲ್ಲಿನ ಕರ್ತವ್ಯ ಮತ್ತು ಧರ್ಮಗಳು; ಹನ್ನೊಂದನೇ ಅಧ್ಯಾಯದಲ್ಲಿ ಮಾಡಿದ ಪಾಪದ ನಿವೃತ್ತಿಗಾಗಿ ಮಾಡಬೇಕಾದ ವ್ರತಗಳ ಪ್ರಾಯಶ್ಚಿತ್ತ ವಿಧಿ; ಹನ್ನೆರಡನೇ ಅಧ್ಯಾಯದಲ್ಲಿ ಕರ್ಮಾನುಸಾರ ಉತ್ತಮ, ಮಧ್ಯಮ ಹಾಗೂ ಅಧಮ ಗತಿಗಳು, ಮೋಕ್ಷಪ್ರದ ಆತ್ಮಜ್ಞಾನ, ವಿಹಿತ ಹಾಗೂ ನಿಷಿದ್ಧ ಗುಣದೋಷಗಳ ಪರೀಕ್ಷೆ, ದೇಶಧರ್ಮ, ರಾಷ್ಟ್ರಧರ್ಮಗಳು ಇತ್ಯಾದಿಗಳ ವರ್ಣನೆ ಇದೆ.
ಈ ರೀತಿಯಲ್ಲಿ ಮನುವು ಮಾನವ ಸಮಾಜದ ಮಾನವ ಸಂಸ್ಕೃತಿಯ ನಿರ್ಮಾಣಕ್ಕಾಗಿ ಮಾನವ ಧರ್ಮಶಾಸ್ತ್ರದ ರಚನೆ ಮಾಡಿದನು. ಇದೇ ಮಾನವ ಸಮಾಜದ ಮೊಟ್ಟಮೊದಲ ’ಸಂವಿಧಾನ’ವಾಯಿತು. ಮಾನವನು ನಿಜ ಅರ್ಥದಲ್ಲಿ ಮಾನವನಾಗಿ, ಸ್ವತಃ ನಾರಯಣನಾಗುವ ರೀತಿಯೇ ಈ ಮಹಾನ್ ಗ್ರಂಥದ ಸಂದೇಶವಾಗಿದೆ.
ಈ ಸರಣಿಯ ಹಿಂದಿನ ಲೇಖನ ಭಾಗ - ೨ ಮನುವಿನ ಧರ್ಮ: ಇದೆಲ್ಲಿಯ ನ್ಯಾಯ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%AE...
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು ಪುಸ್ತಕದ ಮೂರನೆಯ ಅಧ್ಯಾಯ).
ಚಿತ್ರಕೃಪೆ: ಗೂಗಲ್
ಚಿತ್ರ - ೧: ಲಂಡನ್ನಿನ ಸೇಂಟ್ ಪಾಲ್ಸ್ ಕೆಥಡ್ರಲ್ಲಿನಲ್ಲಿರುವ ಸ್ಥಾಪಿತವಾಗಿರುವ ವಿಲಿಯಂ ಜೋನ್ಸ್‌ನ ಮೂರ್ತಿ
ಚಿತ್ರ - ೨: ಸರ್ ವಿಲಿಯಂ ಜೋನ್ಸ್ ಬರೆದ ಪುಸ್ತಕ
ಚಿತ್ರ - ೩: ಜಾರ್ಜ್ ಬೂಲ್ಹರನ ಚಿತ್ರ
ಚಿತ್ರ - ೪: ಜಾರ್ಜ್ ಬೂಲ್ಹರ್ ವಿರಚಿತ ಪುಸ್ತಕ
ಚಿತ್ರ - ೫: ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ
Comments
ಉ: ಭಾಗ - ೩ ಮನುವಿನ ಧರ್ಮ: ಮನುಸ್ಮೃತಿಯನ್ನು ಸುಟ್ಟು ಹಾಕಲೇಬೇಕೆ?
ಈ ಸರಣಿಯ ಮುಂದಿನ ಲೇಖನ: "ಭಾಗ - ೪ ಮನುವಿನ ಧರ್ಮ: ಪರಂಗಿಗಳು ತಂದಿಟ್ಟ ಪಜೀತಿ" ಓದಲು ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AE...