ಭಾಗ - ೪: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!

Submitted by makara on Tue, 09/04/2018 - 19:51

ಕುಸಿದು ಬಿದ್ದ ಕೋಟೆಗಳು!
ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ
ರಕ್ತದಾಹದಲಿ ರಾಜ್ಯವನಾಳಿದ ಕೋಟೆ
ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ
ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು! 
       ಆ ಬಿರುಕು ಬಿಟ್ಟದ್ದು ಈಗಲ್ಲ. ಅದು ೧೯೮೦ ದಶಕದ ಆರಂಭದಲ್ಲಿ ಪೋಲೆಂಡಿನ ಒಂದು ಕೋಟಿ ಕಾರ್ಮಿಕರು ಪ್ರಜಾಪ್ರಭುತ್ವ ವ್ಯವಸ್ಥೆ ಏರ್ಪಡಬೇಕೆಂದು ತಿರುಗಿಬಿದ್ದ ದಿನದಂದೇ ಆ ಕಮ್ಯೂನಿಷ್ಟ್ ಕೋಟೆ ಕಂಪಿಸಲಾರಂಭಿಸಿತು. ಅದು ಕಮ್ಯೂನಿಷ್ಟ್‌ ಕೋಟೆ, ಮಾರಣಹೋಮಕ್ಕೆ ಬಲಿಯಾದ ಮಾನವರ ರಕ್ತದಿಂದ ಕಟ್ಟಲ್ಪಟ್ಟ ಕೋಟೆ, ಮಾನವನ ಅಭ್ಯುದಯದ ಪಥದಲ್ಲಿ ಅಡ್ಡಗೋಡೆಯಾಗಿ ನೆಲಸಿದ ಕೋಟೆ. ಈಗ ಆ ಕೋಟೆಯಲ್ಲಿ ಬಿರುಕುಗಳಿಲ್ಲ, ಏಕೆಂದರೆ ಈಗ ಆ ಕೋಟೆಯೇ ಇಲ್ಲ! ಅದೀಗ ಕುಸಿದು ಬಿದ್ದಿದೆ. ಇನ್ನು ಹತ್ತು ವರ್ಷಗಳಲ್ಲಿ ಈ ಶತಮಾನದ ಕುರಿತು ಸಮೀಕ್ಷಿಸುವ ಬರಹಗಾರರು ಹೀಗೆ ಬರೆಯಬಹುದು - "ಸಾಮ್ರಾಜ್ಯವಾದ, ವಸಾಹತುಶಾಹಿ ಪದ್ಧತಿ, ಬಂಡವಾಳಶಾಹಿ ಪದ್ಧತಿ ಮೊದಲಾದವುಗಳು ಹಿಂದಿನ ಶತಮಾನದಿಂದ ಈ ಶತಮಾನಕ್ಕೆ ಸಾಂಕ್ರಮಿಕ ಬಳುವಳಿಯಾಗಿ ಬಂದಿವೆ. ಆದರೆ ಕಮ್ಯೂನಿಸಂ ಈ ಶತಮಾನದಲ್ಲಿಯೇ ಹುಟ್ಟಿ ಇದೇ ಶತಮಾನದಲ್ಲಿ ಅವಸಾನವಾಯಿತು". 
        ಎಷ್ಟೊಂದು ಆರ್ಭಟದಿಂದ ಆರಂಭವಾದ ಕಮ್ಯೂನಿಸಂ ಇಷ್ಟರಲ್ಲೇ ಏಕೆ ಅಂತ್ಯವಾಗಿ ಹೋಯಿತು? ಏಕೆಂದರೆ ಪ್ರಜೆಗಳ ಏಳಿಗೆಗೆ ಅದು ಮಾರಕವಾಗಿರುವುದರಿಂದ! 
ಪೂರ್ವ ಯೂರೋಪಿನಲ್ಲಿ ಕಮ್ಯೂನಿಷ್ಟ್ ವಿಷವೃಕ್ಷವು ಬೇರು ಸಮೇತ ಬುಡಮೇಲಾಗಿದೆ. ಒಂದು ಸಣ್ಣ ಕೊಂಬೆ (ಅಲ್ಬೇನಿಯಾ) ಇನ್ನೂ ತನ್ನ ವಿಷಜ್ವಾಲೆಗಳನ್ನು ಕಕ್ಕುತ್ತಿದೆ. ಪೋಲೆಂಡ್, ಹಂಗೇರಿ, ಪೂರ್ವ ಜರ್ಮನಿ, ಜೆಕಸ್ಲೋವಕೀಯ, ರುಮೇನಿಯಾ, ಬಲ್ಗೇರಿಯಾ ಪ್ರಾಂತಗಳಲ್ಲಿ ಪ್ರಜಾಪ್ರಭುತ್ವದ ಚೈತನ್ಯವು ಪುಟಿದೇಳುತ್ತಿದೆ, ಅಲ್ಲಿ ಪ್ರಜಾತಂತ್ರವು ಏರ್ಪಡಲಿದೆ. ದಶಕಗಳ ಕಾಲ ಶೇಖರಗೊಂಡ ಕಮ್ಯೂನಿಷ್ಟ್ ದುರ್ಗಂದ ತೊಲಗಿ ಹೋಗುತ್ತಿದೆ. ಮತ್ತೊಂದು ಪೂರ್ವ ಐರೋಪ್ಯ ರಾಷ್ಟ್ರವಾದ ಯುಗೊಸ್ಲೋವಿಯಾದಲ್ಲಿಯೂ ಸಹ ಪ್ರಜಾಪ್ರಭುತ್ವದ ಚೈತನ್ಯವು ಪುಟಿದೇಳುತ್ತಿದೆ. 
      ಚೀನಾ ದೇಶದಲ್ಲಿ ಕಮ್ಯೂನಿಷ್ಟ್ ಕೋಟೆಯ ಬುನಾದಿಯೇ ಸಡಲಿ ಹೋಗಿದೆ. ಪ್ರಜಾಪ್ರಭುತ್ವವನ್ನು ಬಯಸಿ ಪ್ರಜೆಗಳು ಅಲ್ಲಿ ಚಳವಳಿ ಮಾಡಿದರು. ಕೋಟೆಗೆ ಬಿದ್ದ ಬಿರುಕನ್ನು ಸರಿಪಡಿಸಲು ಚೀನಾ ಪ್ರಭುತ್ವವು ಪುನಃ ಮಾರಣಹೋಮವನ್ನು ಆರಂಭಿಸಿದೆ. ಮಾನವ ದೇಹಗಳಿಂದ ಬಿರುಕುಗಳನ್ನು ಮುಚ್ಚಬೇಕೆಂದು, ಬುನಾದಿ ಸಡಿಲಿದ ಕೋಟೆಯನ್ನು ಸರಿಪಡಿಸಬೇಕೆಂದು ತಾಪತ್ರಯ ಪಡುತ್ತಿದ್ದಾರೆ. ಅದಕ್ಕಾಗಿ ೧೯೮೯ರಲ್ಲಿ ತೀವ್ರವಾದ ರಾಕ್ಷಸಕಾಂಡವನ್ನು ಅದು ಕೈಗೊಂಡಿತು. 
ನವಚೀನಾ ನಡು ಬೀದಿಯಲಿ
ನರಮೇಧವು ನಡೆದ ಸಮಯದಲಿ
ಶವ ಭಕ್ಷಣ ಚರಿತ್ರೆಯ ಪುಟಗಳು
ಚರಿತಾರ್ಥವಾದ ಸಮಯದಲಿ
ಪ್ರಜೆಗಳ ನೆತ್ತರ ಕಾಲುವೆಯಲಿ
ಜಳಕವಾಡುತಿಹವು ’ಪ್ರಜಾ’ ಸೇನೆಗಳು
ಪ್ರಜಾಪ್ರಭುತ್ವದ ತರಂಗಗಳನು
ಒಣಗಿಸಲು ಹವಣಿಸಿವೆ ಕೆಂಪು ಜ್ವಾಲೆಗಳು!
ಸುಧೆಯ ವರ್ಷಿಸುವ ಹಸುಗೂಸುಗಳ
ಎದೆಗಳ ಸೀಳಿ, ಶ್ರಮಿಸುವ ವರ್ಗಗಳ
ಕಷ್ಟಗಳ ಪರಿಹರಿಸಬಲ್ಲರೇ?
ರುಧಿರಕೇತನ ಶಿಥಿಲ ನಿಕೇತನರು! 
 
      ಚೀನಾದ ಈ ಬೀಭತ್ಸಕಾಂಡದಿಂದ ಸುಮಾರು ನಾಲ್ಕು ಸಾವಿರ ಜನ ಮರಣಿಸಿದರು. ಚಿಕ್ಕ ಮಕ್ಕಳೂ ಸಹ ಸೈನಿಕರ ವಾಹನಗಳ ಕೆಳಗೆ ಸಿಲುಕಿ ಸಾವನ್ನಪ್ಪಿದರು. ಇಷ್ಟೆಲ್ಲಾ ನಡೆದರೂ ಸಹ ಚೀನಾದಲ್ಲಿ ಪ್ರಜಾಪ್ರಭುತ್ವ ಉದ್ಯಮದ ಸದ್ದಡಗಿಲ್ಲ. ಪ್ರಜಾಪ್ರಭುತ್ವದ ಆಕಾಂಕ್ಷೆ ಇನ್ನೂ ನಾಶವಾಗಿಲ್ಲ. 
       ಕಮ್ಯೂನಿಸಂ ಒಂದು ಚರಂಡಿ ನೀರಿನ ಕಾಲುವೆ. ಮಾನವತಾವಾದವು ಪರಿಶುಭ್ರವಾದ ನದಿ. ಏಳು ದಶಕಗಳ ಹಿಂದೆ ಮಾನವತಾವಾದದೊಳಗೆ ಕಮ್ಯೂನಿಷ್ಟರ ಚರಂಡಿ ನೀರು ಸೇರಿಕೊಂಡಿತು. ನೀರು ಹರಿಯುತ್ತಿದ್ದರೆ ಅದರಲ್ಲಿನ ಕಲ್ಮಶಗಳೆಲ್ಲಾ ಮಾಯವಾಗುತ್ತಿತ್ತು. ಆದರೆ ಸೋವಿಯತ್ ರಷ್ಯಾದಲ್ಲಿ ಲೆನಿನ್, ಸ್ಟ್ಯಾಲಿನ್, ಚೀನಾದಲ್ಲಿ ಮಾವೊ ಮೊದಲಾದವರು ಈ ಕೊಳೆತ ನೀರಿಗೆ ಆಣೆಕಟ್ಟು ಕಟ್ಟಿದರು. ನಿಧಾನವಾಗಿ ಈ ಕೊಳೆತ ನೀರಿನಲ್ಲಿ ದುರ್ವಾಸನೆ ಹೆಚ್ಚಾಯಿತು. ಕಮ್ಯೂನಿಸಂ ಶವಗಳು ತುಂಬಿದ ಕೆರೆಯಾಯಿತು. ಪೂರ್ವ ಐರೋಪ್ಯ ದೇಶಗಳೂ ಸಹ ಇದೇ ವಿಧವಾದ ದುರ್ವಾಸನೆ ಬೀರುವ ಕೆರೆಗಳಾದವು. ಹೊರಗಿನಿಂದ ಹೊಸನೀರು ಬಂದು ಸೇರುವುದಕ್ಕೆ ಸಾಧ್ಯವಿಲ್ಲದಂತೆ ಕಮ್ಯೂನಿಷ್ಟ್ ಆಡಳಿತಗಳು ಉಕ್ಕಿನ ಕೋಟೆಗಳನ್ನು ಕಟ್ಟಿದವು. ಇವೆಲ್ಲದರ ಪರಿಣಾಮ ಆ ದೇಶಗಳ ಪ್ರಜೆಗಳು ಈ ದುರ್ಗಂದಪೂರಿತ ಚರಂಡಿ ನೀರಿನ ಮಡುಗಳಲ್ಲಿ ಉಸಿರಾಡಲಾಗದೆ ವಿಲವಿಲ ಒದ್ದಾಡಿದರು. ಕಟ್ಟಕಡೆಗೆ ಎದುರು ತಿರುಗಿದರು, ಭಗೀರಥರಾಗಿ, ಪ್ರಜಾಪ್ರಭುತ್ವದ ಗಂಗೆಯನ್ನು ತರಲು ಟೊಂಕಕಟ್ಟಿ ನಿಂತರು. ಕಟಿಬದ್ಧರಾದವರಿಂದ ಹರಿದು ಬರುತ್ತಿದ್ದ ಪ್ರಜಾಪ್ರಭುತ್ವದ ಝರಿಗಳು ತಮ್ಮ ಕೆರೆಗಳ ಕಟ್ಟೆಗಳನ್ನು ಕೊಚ್ಚಿಕೊಂಡು ಹೋಗದಂತೆ ತಡೆಯಲು ಕಮ್ಯೂನಿಷ್ಟ್ ರಷ್ಯಾದ ಗೋರ್ಬಚೇವ್ ನಾಯಕತ್ವವು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಅದು ಪೆರಸ್ಟ್ರೋಯಿಕಾ ಎನ್ನುವ ಹೆಸರಿನಲ್ಲಿ ಸುಧಾರಣೆಗಳನ್ನು ಜಾರಿಗೆ ತಂದಿತು. ಅದು ನಿಧಾನವಾಗಿ ಕೆರೆಗಳ ತೂಬುಗಳನ್ನು ಎತ್ತಿತ್ತು, ಅದರಿಂದಾಗಿ ಕಮ್ಯೂನಿಷ್ಟ್ ಕಲ್ಮಶದ ನೀರು ಸೋವಿಯತ್ ರಷ್ಯಾದಿಂದ ನಿಧಾನವಾಗಿ ಹೊರಹೋಗುತ್ತಿದೆ. ಪ್ರಜಾಪ್ರಭುತ್ವದ ಗಂಗಾ ಜಲವು ಆ ಜಾಗವನ್ನು ಭರ್ತಿ ಮಾಡುತ್ತಿದೆ, ಕೆರೆಯು ಶುಭ್ರವಾಗುತ್ತಿದೆ. 
ಆದರೆ ಪೂರ್ವ ಯೂರೋಪ್ - ಪೋಲೆಂಡ್, ಪೂರ್ವ ಜರ್ಮನಿ, ಹಂಗೇರಿ, ಜಕಸ್ಲೋವಕೀಯಾ, ಬಲ್ಗೇರಿಯಾ, ರುಮೇನಿಯಾ ದೇಶಗಳ ಕಮ್ಯೂನಿಷ್ಟ್ ನಾಯಕರು ಕೊಳೆತು ನಾರುತ್ತಿರುವ ನೀರನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಬಯಸಿದರು. ಹಾಗೆ ಮಾಡಿದ್ದರಿಂದ ಪ್ರಜಾಪ್ರಭುತ್ವದ ಗಂಗೆಯ ರಭಸಕ್ಕೆ ಅಲ್ಲಿದ್ದ ಕಮ್ಯೂನಿಷ್ಟ್ ಕೆರೆಯ ಕಟ್ಟೆಗಳು ಒಡೆದುಹೋದವು. ಆ ದೇಶಗಳನ್ನು ಪ್ರಜಾಪ್ರಭುತ್ವದ ನದಿಗಳು ಶುದ್ಧಪಡಿಸುತ್ತಿವೆ. ಸೋವಿಯತ್ ರಷ್ಯಾದಲ್ಲಿ ಕಮ್ಯೂನಿಸಂಗೆ ಅಂತ್ಯಕಾಲವು ಸನ್ನಿಹಿತವಾಗಿದೆ. ಪೂರ್ವ ಯೂರೋಪಿನ ದೇಶಗಳಲ್ಲಿ ಮಾತ್ರ ಅದು ಅಕಾಲ ಮರಣಕ್ಕೆ ತುತ್ತಾಯಿತು. 
          ಕಮ್ಯೂನಿಷ್ಟರ ಚರಿತ್ರೆಯ ಪುಟಗಳಲಿ
          ಏನಿವೆ ಹೆಮ್ಮೆಪಡುವ ಸಂಗತಿಗಳು?
          ದಶಕಗಳ ನಿರಂಕುಶಾಡಳಿತದಲಿ
         ನಡೆದವು ಮಾರಣ ಹೋಮಗಳು!
ತೊಲಗಿದ ಭ್ರಮೆಗಳು!
       ಉತ್ತರ ಕೊರಿಯಾದಲ್ಲಿ ಕಮ್ಯೂನಿಷ್ಟ್ ಆಡಳಿತ ಏರ್ಪಟ್ಟ ಕೂಡಲೇ ಅಲ್ಲಿ ಭೂತಲ ಸ್ವರ್ಗದ ಉದಯವಾಯಿತು ಎನ್ನುವ ಭ್ರಮೆಯು ವ್ಯಾಪಿಸಿತು. ಜಪಾನಿನಲ್ಲಿ ವಾಸಿಸುತ್ತಿದ್ದ ಕೊರಿಯನ್ನರು ೧೯೫೯-೬೦ನೆ ಇಸವಿಯಲ್ಲಿ ಸುಖವಾಗಿ ಜೀವಿಸಬಹುದೆನ್ನುವ ಆಸೆಯಿಂದ ಉತ್ತರ ಕೊರಿಯಾದತ್ತ ಪ್ರಯಾಣಿಸಿದರು. ಹೀಗೆ ಸುಮಾರು ೯೫ ಸಾವಿರ ಮಂದಿ ಕೊರಿಯನ್ನರು ಜಪಾನಿನಿಂದ ಹೊರಟರು. ಕೊರಿಯಾ ದೇಶಸ್ಥರನ್ನು ವಿವಾಹ ಮಾಡಿಕೊಂಡ ಜಪಾನಿ ಮಹಿಳೆಯರೂ ಸಹ (ಸುಮಾರು ೬,೦೦೦ ಮಂದಿ) ಉತ್ತರ ಕೊರಿಯಾಕ್ಕೆ ಹೊರಟು ಹೋದರು. ಆದರೆ ಅಂದಿನಿಂದ ಇಂದಿನವರೆಗೆ ಜಪಾನಿಗೆ ಭೇಟಿ ಕೊಡುವುದಕ್ಕೆ ಅವರಾರಿಗೂ ಅವಕಾಶವನ್ನು ಉತ್ತರ ಕೊರಿಯಾ ಪ್ರಭುತ್ವವು ಅನುಮತಿಸಿಲ್ಲ. ಹಾಲು-ಜೇನುಗಳು ಪ್ರವಹಿಸುವ ಭೂಮಿ ಕೊರಿಯಾ ಎನ್ನುವ ಪ್ರಚಾರವು ಜರುಗಿತು. ಆದರೆ ಜಪಾನಿನಿಂದ ಉತ್ತರ ಕೊರಿಯಾಕ್ಕೆ ಹೋದವರಿಗೆ ಹಾಲು, ಜೇನು ಒತ್ತಟ್ಟಿಗಿರಲಿ ಅವರಿಗೆ ಉಣ್ಣಲು ಅನ್ನವಾಗಲಿ, ಉಡಲು ಸರಿಯಾದ ಬಟ್ಟೆಗಳಾಲಿ ದೊರೆಯುತ್ತಿಲ್ಲ. ಬಡತನ, ನಿತ್ಯಾವಸರ ವಸ್ತುಗಳ ತೀವ್ರ ಕೊರತೆಯಿಂದಾಗಿ ಜಪಾನಿನ ಮಹಿಳೆಯರು ತಮ್ಮ ಬಳಿಯಿದ್ದ ಸಣ್ಣ-ಪುಟ್ಟ ಒಡವೆಗಳನ್ನೂ ಸಹ ಮಾರಿಕೊಳ್ಳಬೇಕಾದ ಪರಿಸ್ಥಿತಿ ಏರ್ಪಟ್ಟಿತು. ಉತ್ತರ ಕೊರಿಯಾಕ್ಕೆ ಹೋದ ಶೇಖಡಾ ೭೦ರಷ್ಟು ಜಪಾನಿನ ಮಹಿಳೆಯರ ಕುರಿತು ಅವರ ಬಂಧುಗಳಿಗೆ ಯಾವುದೇ ಸಮಾಚಾರವಿಲ್ಲ. ಅವರು ಹೇಗಿರುವರೋ ಎನ್ನುವುದೂ ಸಹ ಅವರಿಗೆ ಗೊತ್ತಿಲ್ಲ! ಉತ್ತರ ಕೊರಿಯಾದಿಂದ ಒಬ್ಬ ಜಪಾನೀ ಮಹಿಳೆ ಬರೆದ ಪತ್ರವನ್ನು ಆ ದೇಶಕ್ಕೆ ಭೇಟಿಯಿತ್ತ ಜಪಾನಿ ಪ್ರಜೆಯೊಬ್ಬನು ಆಕೆಯ ಬಂಧುಗಳಿಗೆ ಮುಟ್ಟಿಸಿದ. ಅದರಲ್ಲಿ ಉತ್ತರ ಕೊರಿಯಾದಲ್ಲಿ ಇರುವ ಭೂತಲ ನರಕದ ಕುರಿತು ಆ ಪತ್ರದಲ್ಲಿ ಅನೇಕ ವಿಷಯಗಳನ್ನು ಆಕೆ ಬಿಚ್ಚಿಟ್ಟಿದ್ದಾರೆ. ಉತ್ತರ ಕೊರಿಯಾದಲ್ಲಿ ಲಭ್ಯವಾಗುವ ಅತ್ಯಂತ ಪೌಷ್ಠಿಕವಾದ ಆಹಾರವೆಂದರೆ ತೌಡಿನಿಂದ ತೆಗೆದ ಎಣ್ಣೆ ಮಾತ್ರ ಎಂದು ಆ ಜಪಾನಿನ ಮಹಿಳೆ ಅಲವತ್ತುಕೊಂಡಿದ್ದಾಳೆ. ಆದರೆ ಆ ಎಣ್ಣೆಯನ್ನು ಕೊಳ್ಳಲೂ ಸಹ ಆಕೆ ತಮ್ಮ ಬಟ್ಟೆಬರೆಗಳನ್ನು ಅಥವಾ ಪಾತ್ರೆಪಡಗಗಳನ್ನು ಮಾರಿಕೊಳ್ಳಬೇಕಾಗಿ ಬರುತ್ತದೆಂದು ವಿವರಿಸಿದ್ದಾಳೆ. 
ಈಗ, ೧೯೪೯ರಿಂದ ೧೯೮೯ರವರೆಗೆ ಪೂರ್ವ ಐರೋಪ್ಯ ರಾಷ್ಟ್ರಗಳ ಕಥೆಯಲ್ಲಿನ ಆರ್ಥಿಕ ವಿಷಯಗಳತ್ತ ಸ್ವಲ್ಪ ಗಮನ ಹರಿಸೋಣ. 
       ಯೂರೋಪಿನ ಹೃದಯ ಭಾಗವೆಂದು ಪರಿಗಣಿಸಲ್ಪಡುವ ಪೋಲೆಂಡ್ ದೇಶದಲ್ಲಿ ೪೦ ವರ್ಷಗಳ ಕಮ್ಯೂನಿಷ್ಟ್ ಆಡಳಿತದಲ್ಲಿ ವೈದ್ಯಕೀಯ ಸೌಲಭ್ಯಗಳು ಪಾತಾಳ ಸೇರಿವೆ. ಪ್ರತಿ ವರ್ಷ ಅಲ್ಲಿ ಲಕ್ಷ ಮಂದಿಗೆ ಹೃದಯಾಘಾತವಾಗುತ್ತದೆ. ಇವರಲ್ಲಿ ಶೇಖಡಾ ೫೦ರಷ್ಟು ಜನರು ವೈದ್ಯಕೀಯ ಚಿಕಿತ್ಸೆಗಳು ಅಂದದೆ ಸಾವನ್ನಪ್ಪುತ್ತಾರೆ. ಹೃದಯದ ಖಾಯಿಲೆಗಳಿಂದ ಬಳಲುತ್ತಿರುವವರ ಜನಸಂಖ್ಯೆಯಲ್ಲಿ ಪೋಲೆಂಡ್ ವಿಶ್ವದಲ್ಲೇ ಪ್ರಪ್ರಥಮ ಸ್ಥಾನದಲ್ಲಿದೆ. ಪೂರ್ವ ಯೂರೋಪಿನ ದೇಶಗಳಲ್ಲಿ ಪೂರ್ವ ಜರ್ಮನಿಯ ನಂತರ ಅತಿ ಹೆಚ್ಚಿನ ಅಭಿವೃದ್ಧಿ ಹೊಂದಿರುವ ರಾಷ್ಟ್ರವೆಂದರೆ ಹಂಗೇರಿ. ಈ ದೇಶದ ನಾಗರೀಕರ ಸರಾಸರಿ ವಿದೇಶಿ ಸಾಲದ ಪ್ರಮಾಣವು ಯೂರೋಪಿನಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿದೆ. ಆ ದೇಶವು ಇತರೇ ದೇಶಗಳಿಂದ ಪಡೆದುಕೊಂಡಿರುವ ಹಣಕಾಸಿನ ಸಾಲದ ಮೊತ್ತವೊಂದರಿಂದಲೇ ಹಂಗೇರಿ ದೇಶವು ಸಾಧಿಸಿರುವ ಅಭಿವೃದ್ಧಿಯನ್ನು ನಿರ್ಧರಿಸಬಹುದು. ಅಲ್ಲಿಯ ದ್ರವ್ಯೋಲ್ಬಣವು ಶೇಖಡಾ ೩೦ಕ್ಕೆ ಏರಿದೆ. ೧೯೬೦ರ ದಶಕದಲ್ಲಿ ಆರ್ಥಿಕ ಸುಧಾರಣೆಗಳನ್ನು ತರಲು ಹಂಗೇರಿ ಪ್ರಭುತ್ವವು ಪ್ರಯತ್ನಿಸಿತು, ಆದರೆ ಅದು ಫಲ ನೀಡಲಿಲ್ಲ.
 
ನರಕ ಕೂಪ
        ರುಮೇನಿಯಾದಲ್ಲಿ ಕಮ್ಯೂನಿಷ್ಟ್ ಪ್ರಭುತ್ವವು ಏರ್ಪಟ್ಟದ್ದರಿಂದ ಅಲ್ಲಿ ಗಾಢಾಂಧಕಾರ ಕವಿಯಿತು. ದೊಡ್ಡ ದೊಡ್ಡ ನಗರಗಳಲ್ಲಿಯೂ ಸಹ ರಾತ್ರಿ ಹೊತ್ತಿನಲ್ಲಿ ಅಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ. ಕಮ್ಯೂನಿಷ್ಟರ ದೃಷ್ಟಿಯಲ್ಲಿ ಅತ್ಯಂತ ಹೀನವಾದ ಭಾರತ ದೇಶದಲ್ಲಿಯೂ ಈ ಪರಿಸ್ಥಿತಿ ಇಲ್ಲ. ಒರೇಡಿಯಾದಂತಹ ನಗರಗಳಲ್ಲಿ ರಾತ್ರಿ ಹತ್ತು ಘಂಟೆಯ ನಂತರ ಮನೆಗಳಲ್ಲಿ ಮಿಣುಕು-ಮಿಣುಕೆನ್ನುವಂತಹ ದೀಪಗಳು ಆರಿದ ನಂತರ, ನರಕವು ತಾಂಡವವಾಡುತ್ತಿತ್ತು. ಅಲ್ಲಿ ಕೇವಲ ನಾಲ್ಕು ಘಂಟೆಗಳಷ್ಟು ಕಾಲ ಮಾತ್ರವೇ ದೂರದರ್ಶನದ ಪ್ರಸಾರಗಳಿರುತ್ತಿದ್ದವು. ಆ ಪ್ರಸಾರಗಳಲ್ಲಿಯೂ ಸಹ ಅಧಿಕ ಭಾಗ ನಿರಂಕುಶ ಆಡಳಿತಾಧಿಕಾರಿ ’ನಿಕೊಲಾಯ್ ಚೌಸೆಸ್ಕೂ’ ಕುರಿತ ಪ್ರಶಂಸೆಗಳು, ಹೊಗಳಿಕೆಗಳು ಪ್ರಸರಣಗೊಳ್ಳುತ್ತಿದ್ದವು. ಇನ್ನು ಬೆಳಕು ಹರಿದರೆ ಸರ್ಕಾರಿ ಹೋಟೆಲ್ಲುಗಳಲ್ಲಿ ಕಾಫಿಗಾಗಿ ಜನ ಸರತಿಯ ಸಾಲಿನಲ್ಲಿ ನಿಲ್ಲಬೇಕು. ಕಾಫೀ ಎಂದು ಕಿರುಚುವ ಪ್ರತಿಯೊಬ್ಬರಿಗೂ ಅಲ್ಲಿ ಕಾಫಿ ಸಿಗುವುದಿಲ್ಲ. ಮತ್ತೊಂದೆಡೆ ಸೀಮೆ ಎಣ್ಣೆಗಾಗಿ ಘಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕು. ಸಿಗರೇಟುಗಳು ಮಾತ್ರ ಸುಲಭವಾಗಿ ಸಿಗುತ್ತವೆ - ಆದರಲ್ಲೂ ಕೆಂಟ್ ಬ್ರ್ಯಾಂಡ್ ಮಾತ್ರವೇ ಸಿಗುತ್ತದೆ. ಮಾಂಸ ಬೇಕಾದರೆ ಮತ್ತೊಂದು ರೇಷನ್ ಷಾಪ್ - ಅದೇ ಪಡಿತರ ಅಂಗಡಿ ಮುಂದೆ ತಾಸುಗಟ್ಟಲೆ ನಿಲ್ಲಬೇಕು. ಎಲ್ಲಾ ದಿನಸಿ ಅಂಗಡಿಗಳಲ್ಲೂ ದೊರಕುವುದು ಕಳಪೆ ದರ್ಜೆಯ ಸರಕುಗಳು ಮಾತ್ರ!
       ೧೯೮೯ರವರೆಗೆ ನಿರಂಕುಶಾಧಿಕಾರವನ್ನು ಚಲಾಯಿಸಿದ ನಿಕೊಲಾಯ್ ಚೌಸೆಸ್ಕೂ ಕ್ರೌರ್ಯದಲ್ಲಿ ಸ್ಟ್ಯಾಲಿನ್‌ಗೆ ಸರಿಸಮಾನನಾದವನು. ಇವನ ಆಡಳಿತಾವಧಿಯಲ್ಲಿ ರುಮೇನಿಯಾ ಪ್ರಜೆಗಳ ಕಣ್ಣಲ್ಲಿ ರಕ್ತ ಒಸರುತ್ತಿತ್ತು. ೧೯೮೮ರಲ್ಲಿ ಚೌಸೆಸ್ಕೂ ಒಂದು ಹೊಸ ಯೋಜನೆಯನ್ನು ಅಮಲಿಗೆ ತಂದ. ಆಡಳಿತವನ್ನು ಸುಧಾರಿಸುವ ನೆಪದಲ್ಲಿ ಮತ್ತು ಪ್ರಜೆಗಳನ್ನು ಮೂರ್ಖರನ್ನಾಗಿಸಲು ಅವನು ಕೈಗೊಂಡ ಈ ಯೋಜನೆಯ ಮುಖ್ಯ ಲಕ್ಷಣ ವಿಧ್ವಂಸವೆ! ಅದರ ಪ್ರಕಾರ ಆ ದೇಶದಲ್ಲಿದ್ದ ೧೩,೦೦೦ ಗ್ರಾಮಗಳಲ್ಲಿ ೧೦, ೦೦೦ ಗ್ರಾಮಗಳು ಧ್ವಂಸವಾಗುತ್ತವೆ. ಆ ಧ್ವಂಸವಾದ ಗ್ರಾಮಗಳಲ್ಲಿನ ಪ್ರಜೆಗಳನ್ನು ಸಾಂಧ್ರೀಕೃತ ವ್ಯವಸಾಯ ಉದ್ಯಮ ಕೇಂದ್ರಗಳಿಗೆ (Concentrated Centres) ಕಳುಹಿಸುತ್ತಾರೆ. ಆ ೧೦,೦೦೦ ಗ್ರಾಮಗಳ ಜಾಗದಲ್ಲಿ ೫೫೮ ಸಾಂಧ್ರೀಕೃತ ಕೇಂದ್ರಗಳು ಮಾತ್ರವೇ ಉಳಿಯುತ್ತವೆ. ಇದರಿಂದಾಗಿ ಸಾವಿರಾರು ಮಂದಿ ನಿರಾಶ್ರಿತರಾಗುತ್ತಾರೆ, ಅವರು ಮನೆಮಠಗಳನ್ನು ಕಳೆದುಕೊಂಡು ಗುಲಾಮರಾಗುತ್ತಾರೆ. ಸಣ್ಣ ಪುಟ್ಟ ಹಿಡುವಳಿ ಹೊಂದಿದ ರೈತರನ್ನು ಗ್ರಾಮಗಳಿಂದ ತೊಲಗಿಸಿ ಅವರನ್ನು ಜೀತದಾಳುಗಳಾಗಿ ಮಾರ್ಪಡಿಸುವುದೇ ಈ ಯೋಜನೆಯ ಹಿಂದಿರುವ ಉದ್ದೇಶ. ಈ ಸಣ್ಣಪುಟ್ಟ ಹಿಡುವಳಿದಾರರಲ್ಲಿ ಹಂಗೇರಿ, ಜರ್ಮನಿ ಮೂಲದ ಜನಾಂಗಗಳಿಗೆ ಸೇರಿದ ಅಲ್ಪಸಂಖ್ಯಾತರಿದ್ದಾರೆ. ಅವರನ್ನು ದೇಶದಿಂದ ಹೊಡೆದೋಡಿಸಬೇಕೆನ್ನುವುದು ಚೌಸೆಸ್ಕೂನ ಮತ್ತೊಂದು ಉದ್ದೇಶ. ಸಹವರ್ತಿ ಕಮ್ಯೂನಿಷ್ಟ್ ದೇಶಗಳಾದ ಹಂಗೇರಿ ಹಾಗು ಜರ್ಮನಿ ಮೂಲದ ಜನಾಂಗಗಳ ಕುರಿತು ರುಮೇನಿಯಾ ಕಮ್ಯೂನಿಷ್ಟರು ಪ್ರವರ್ತಿಸುತ್ತಿರುವ ರೀತಿ ಇದು. ಇಲ್ಲಿ ಭಾರತದಲ್ಲಿನ ಕಮ್ಯೂನಿಷ್ಟರು ಮಾತ್ರ ಅಲ್ಪಸಂಖ್ಯಾತರ ಸಂಕ್ಷೇಮ ಹಾಗು ಅಭಿವೃದ್ಧಿಗಳ ಕುರಿತು ಆರ್ಭಟಿಸುತ್ತಾರೆ. ಚೌಸೆಸ್ಕೂ ಯೋಜನೆಯ ಜಾರಿಯಿಂದಾಗಿ ಸುಮಾರು ೩೩,೦೦೦ ಮಂದಿ ಹಂಗೇರಿಯನ್ ಮೂಲದ ಜನರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಹಂಗೇರಿಗೆ ಓಡಿಹೋದರು. ಆದರೆ ಚೌಸೆಸ್ಕೂವನ್ನು ಹೊಸ ಪ್ರಭುತ್ವವು ಗಲ್ಲಿಗೇರಿಸಿದ್ದರಿಂದ ಈ ಭೀಭತ್ಸ ಯೋಜನೆಯು ಮಧ್ಯದಲ್ಲಿಯೇ ನಿಂತು ಹೋಗಿದೆ. 
ಮುಂದುವರೆಯುವುದು.........
*****
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್‌ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು  ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ. 
 
ಹಿಂದಿನ ಲೇಖನ ಭಾಗ - ೩: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು  ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A9-%E0%B2%95...
 
 
 
 
 
 

Rating
No votes yet

Comments

manjunatha

Wed, 09/05/2018 - 18:30

ಈ ಲೇಖನಗಳು ಸ್ವಲ್ಪ‌ ಕಡಿಮೆ ನಾಟಕೀಯವಾಗಿದ್ದರೆ ಚೆನ್ನಾಗಿರುತ್ತಿತ್ತು :‍). ಕೆಲವು ವಿಚಾರಗಳನ್ನು ನಾವು ಗಮನದಲ್ಲಿಟ್ಟುಕೊಂಡರೆ, ಕಮ್ಯುನಿಸ್ಟ್ ಆಂದೋಳನವನ್ನು ಇನ್ನಷ್ಟು ವಸ್ತುನಿಷ್ಟವಾಗಿ ವಿಶ್ಲೇಷಿಸಬಹುದು.
‍* ಕಮ್ಯುನಿಸ್ಟ್ ಆಂದೋಳನ ಹೆಚ್ಚಾಗಿ ಊಳಿಗಮಾನ್ಯ‌ ದೇಶಗಳಲ್ಲಿ ಕಂಡು ಬರುತ್ತದೆ
‍* ಪಶ್ಚಿಮ‌ ಯೂರೋಪ್ ೧೯ನೆಯ‌ ಶತಮಾನದಲ್ಲೆ, ಏಳಿಗೆ(welfare) ಸಮಾಜಕ್ಕೆ ಒತ್ತು ನೀಡಿ, ಸಮಾಜವಾದದ‌ ಹೆಚ್ಚಿನ‌ ಬೇಡಿಕೆಗಳನ್ನು ಒಪ್ಪಿಕೊಂಡಿತ್ತು. ಹಾಗೆ ನೋಡಿದರೆ, ಅವರ‌ ಶಿಕ್ಷಣ‌ ಮತ್ತು ಆರೋಗ್ಯ‌ ವ್ಯವಸ್ಥೆ, ನಮ್ಮ‌ ದೇಶಕ್ಕಿಂತ‌ ಮಿಗಿಲು. ಇಲ್ಲಿ ನಾವು ಸಂವಿಧಾನಬದ್ಧ‌ ಸಮಾಜವಾದಿಗಳು!
* ಕಮ್ಯುನಿಸ್ಟರ‌ ಹೆದರಿಕೆ, ಆ ಕಾಲದಲ್ಲಿ ಹೆಚ್ಚಿನ‌ ಬಂಡವಾಳಶಾಹಿ ದೇಶಗಳು ತಮ್ಮ‌ ನಿಮ್ನ‌ ವರ್ಗಗಳ‌ ಏಳಿಗೆಗೆ ಗಮನ‌ ಕೊಡುವಂತೆ ಮಾಡಿತು
* ಕಮ್ಯುನಿಸಂನ‌ ನಿರ್ಗಮನ‌, ಆರ್ಥಿಕ‌ ಅಸಮಾನತೆ ಮತ್ತೆ ಹೆಚ್ಚಾಗುವಂತೆ ಮಾಡಿದೆ
* ಹೆಚ್ಚಿನ‌ ದೇಶಗಳು ಈಗ‌ ಮಿಶ್ರ‌ ವ್ಯವಸ್ಥೆ ತೋರುತ್ತವೆ. ಸಮಾಜವಾದದ‌ ಸಾಮಾಜಿಕ‌ ವ್ಯವಸ್ಥೆ ಮತ್ತು ಮಿಶ್ರ‌ ಆರ್ಥಿಕ‌ ವ್ಯವಸ್ಥೆ
* ಲೆನಿನ್ ವಾದಿ ಮತ್ತು ಮಾವೋವಾದಿಗಳ‌ ಸರ್ವಾದಿಕಾರತ್ವದ‌ ಕಮ್ಯುನಿಸಂ, ಕಮ್ಯುನಿಸಂನ‌ ಒಂದು ಅಂಶ‌ ಅಷ್ಟೆ. ಪ್ರಜಾಪ್ರಭುತ್ವವಾದಿ ಕಮ್ಯುನಿಸ್ಟ್ ಪಕ್ಷಗಳು ಇನ್ನೂ ಇವೆ(ಕೆಲವರು ಕಮ್ಯುನಿಸ್ಟ್ ಅಂತ‌ ಹೆಸರು ಹಾಕುವುದಿಲ್ಲ‌, ಉದಾ. ಗ್ರೀಸ್)
* ಸ್ಟಾಲಿನ್ ಅಥವಾ ಮಾವೊ ಅವರ‌ ಮಾರಣಹೋಮ‌ ಕಮ್ಯುನಿಸ್ಟ್ ಸರಕಾರದ‌ ಪ‌ತನಕ್ಕೆ ಕಾರಣವಾಗಲಿಲ್ಲ‌. ಈ ಲೇಖನ‌ ೧೯೯೦ರಲ್ಲಿ ಬರೆದ‌ ಕಾರಣ‌ ಸ್ವಲ್ಪ‌ ಲಿಮಿಟೆಡ್ ಆಗಿದೆ. ಕಮ್ಯುನಿಸ್ಟ್ ರ‌ ಪತನಕ್ಕೆ ಮುಖ್ಯ‌ ಕಾರಣ‌ ಅವರ‌ ಆರ್ಥಿಕ‌ ನೀತಿಯಾಗಿದೆ
* ಬಂಡವಾಳಶಾಹಿ ಸರ್ವಾಧಿಕಾರದ‌ ಸರಕಾರಗಳು, ದಕ್ಷಿಣ‌ ಅಮೆರಿಕಾದಲ್ಲಿ ಮತ್ತು ದ‍‍_ಪೂ ಏಶಿಯಾಗಳಲ್ಲಿ, ಮಾರಣಹೋಮಗಳಿಗೆ ಕಾರಣವಾಗಿವೆ. ನಂತರ‌ ಅಲ್ಲಿ, ಸಮಾಜವಾದದ‌ ಸರಕಾರಗಳು ಅಧಿಕಾರಕ್ಕೆ ಬಂದವು(ಚಿಲಿ, ಇಂಡೋನೇಶಿಯಾ). ಮಾರಣಹೋಮ‌ ಹೆಚ್ಚಾಗಿ, ಸರ್ವಾಧಿಕಾರದ‌ ಒಂದು ಲಕ್ಷಣ‌
* ಚೀನದ‌ ಆರ್ಥಿಕ‌ ವ್ಯವಸ್ಥೆ ಚೆನ್ನಾಗಿರುವ‌ ಕಾರಣ‌, ಕಮ್ಯುನಿಸ್ಟರ‌ ಹಿಡಿತ‌ ಸದ್ಯಕ್ಕೆ ಇನ್ನು ಇದೆ
* ಭಾರತದಲ್ಲಿ, ಎಡಪಂಥೀಯ‌ ಕಾಂಗ್ರೆಸ್ಸ್ ಮತ್ತು ಸಿಪಿಎಂ, ಮಾವೋವಾದಿ(ನಕ್ಸಲ್)ಗಳನ್ನು ಮಟ್ಟ‌ ಹಾಕಲು ಪ್ರಯತ್ನಿಸಿದ್ದಾರೆ. ಬಂಗಾಳದಲ್ಲಿ ಅದು ಯಶಸ್ವಿಯಾಗಿದೆ
* ಇಂದು ಎಡಪಂಥೀಯ‌ ಧೋರಣೆಯುಳ್ಳವರು, ತಮ್ಮನ್ನು 'ಲಿಬರಲ್' ಎಂದು ಗುರುತಿಸುಕೊಳ್ಳುತ್ತಾರೆ. ಅವರು ಲೆನಿನ್ ವಾದ‌ ಮತ್ತು ಕಮ್ಯುನಿಸ್ಟ್ ಆರ್ಥಿಕ‌ ವ್ಯವಸ್ಥೆ ಒಪ್ಪಿಕೊಳ್ಳದಿರಬಹುದು. ಆದರೆ, ಸಾಮಾಜಿಕ‌ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್ ಸಮತಾವಾದ ಮೂಲ‌ ನಂಬಿಕೆಯಾಗಿದೆ
* ಆದರೆ ಎಲ್ಲಿ ಊಳಿಗಮಾನ್ಯ‌ ಇನ್ನೂ ಬಲಶಾಲಿಯಾಗಿದೆಯೊ, ಅಲ್ಲಿ ಕಮ್ಯುನಿಸ್ಟರ‌ ಹೋರಾಟದ‌ ಸ್ಪೂರ್ಥಿ ಇನ್ನೂ ಅಪ್ಯಾಯಮಾನವಾಗಿರುತ್ತದೆ

ಮಂಜುನಾಥ ಅವರೆ,
ನೀವು ಎತ್ತಿರುವ‌ ಪ್ರಶ್ನೆಗಳು ಸಮಂಜಸವಾಗಿಯೇ ಇವೆ. ಈ ಸರಣಿಯ‌ ಹಿಂದಿನ‌ ಹಾಗು ಮುಂದಿನ‌ ಲೇಖನಗಳನ್ನು ಓದಿದಲ್ಲಿ ಖಂಡಿತ‌ ನಿಮ್ಮ‌ ಪ್ರಶ್ನೆಗಳಿಗೆ ಉತ್ತರ‌ ಸಿಕ್ಕುತ್ತದೆ. ಮಧ್ಯದಲ್ಲಿ ಸಮಯ‌ ಮಾಡಿಕೊಂಡು ನಿಮ್ಮ‌ ಪ್ರಶ್ನೆಗಳಿಗೆ ಉತ್ತರಿಸುವ‌ ಪ್ರಯತ್ನ‌ ಮಾಡುತ್ತೇನೆ. :)

ಈ ಸರಣಿಯ ಒಟ್ಟು ನಾಲ್ಕು ಬರಹಗಳನ್ನು ವಾರದ ವಿಶೇಷ ಲೇಖನಗಳಲ್ಲೊಂದನ್ನಾಗಿ ಆರಿಸಿದ ಸಂಪದ ನಿರ್ವಹಣ ಮಂಡಳಿ ಹಾಗು ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ನಾನು . ಈ ಸರಣಿಯ ಲೇಖನಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದಿಗರಿಗೂ ನಾನು ಚಿರಋಣಿ. ಪ್ರತಿಯೊಂದು ಲೇಖನವೂ ಶತಕ ಬಾರಿಸುತ್ತಿರುವುದೇ ನಿಮ್ಮಲ್ಲರ ಉತ್ತೇಜನಕ್ಕೆ ಮಾನದಂಡವಾಗಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)