ಭಾಗ - ೫: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಸಹ ಮಾನವರಿಗೆ ಅನ್ನವಿಕ್ಕುವುದು
ತಮ್ಮ ಗುರಿಯೆಂದು ಬೊಗಳೆ ಬಿಟ್ಟವರು
ಮಾನವರ ಹಸಿಮಾಂಸಕ್ಕೆ ಎರಗುವ
ಮೃಗಗಳಾಗಿ ವಿಜೃಂಭಿಸಿಹರು!
ಮಾರ್ಕ್ಸ್ವಾದದ ಅಮಲೇರಿಸಿಕೊಂಡು
ಮಾನವತ್ವವನ್ನೇ ಮರೆತಿಹರು
ಮುಳ್ಳ ಬೇಲಿಗಳ ಬೆಳೆಸಿ ಪ್ರಗತಿಗೆ
ಪಂಜರಗಳನು ನಿರ್ಮಿಸಿಹರು!
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೋಚುವವರ, ಶೋಷಕರ ಆಡಳಿತವೆಂದು ವರ್ಣಿಸಿದ ಕಮ್ಯೂನಿಷ್ಟರು ರುಮೇನಿಯಾ ದೇಶದಲ್ಲಿ ಮಾಡಿದ್ದೇನು? ತಮಗಿಂತಲೂ ಪ್ರಪಂಚದ ಇತಿಹಾಸದಲ್ಲಿ ಘೋರವಾದ, ಕ್ರೂರಾತಿಕ್ರೂರರಾದ ದರೋಡೆಕೋರರು ಇಲ್ಲವೆಂದು ಅವರು ನಿರೂಪಿಸಿದರು. ರುಮೇನಿಯಾ ದೇಶದ ಪ್ರಜೆಗಳು ತುತ್ತು ಕೂಳಿಗಾಗಿ ವಿಲವಿಲ ಒದ್ದಾಡುತ್ತಿದ್ದರೆ ಕಮ್ಯೂನಿಷ್ಟ್ ನಿರಂಕುಶ ಆಡಳಿತಗಾರನಾದ ಚೌಸೆಸ್ಕೂ ವಿಲಾಸವಂತ ಜೀವನವನ್ನು ಸಾಗಿಸುತ್ತ ’ಸ್ವಪ್ನಸೌಧ’ದಲ್ಲಿ ಓಲಾಡುತ್ತಿದ್ದ. ೪೦ ಕೊಠಡಿಗಳಿದ್ದ ಅವನ ನಿವಾಸ ಗೃಹಕ್ಕೆ ಬೆಳ್ಳಿ ಬಂಗಾರದ ತಗಡುಗಳನ್ನು ಹೊದಿಸಲಾಗಿತ್ತು. ಅತ್ಯಂತ ಬೆಲೆಬಾಳುವ ಕಲಾಕಂಡಗಳನ್ನು ಅವನ ಅರಮನೆಯಲ್ಲಿ ಅಳವಡಿಸಲಾಗಿತ್ತು. “ಪಾಶ್ಚಿಮಾತ್ಯ ದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯನ್ನುಳ್ಳ ಶ್ರೀಮಂತರೂ ಸಹ ಇಂತಹ ವೈಭವೋಪೇತವಾದ ಬಂಗಲೆಗಳಲ್ಲಿ ನಿವಸಿಸುವುದಿಲ್ಲ” ಎಂದು ಚೌಸೆಸ್ಕೂ ಮರಣಾನಂತರ ಒಬ್ಬ ಸೈನ್ಯಾಧಿಕಾರಿ ವ್ಯಾಖ್ಯಾನಿಸಿದ. ಆ ಮನೆಯ ಸುತ್ತ ನಿರಂತರವಾಗಿ ೫೦೦ ಜನ ಗಸ್ತಿ ತಿರುಗುತ್ತಿದ್ದರು. ಚೌಸೆಸ್ಕೂವಿನ ಹೆಂಡತಿ ಇನ್ನೂ ಹೆಚ್ಚಿನ ಆಡಂಬರದ ಜೀವನವನ್ನು ಸಾಗಿಸುತ್ತಿದ್ದಳು. ಈ ದಂಪತಿಗಳ ಬೂಟುಗಳಿಗೆ ವಜ್ರಗಳನ್ನು ಸಹ ಅಮರಿಸಲಾಗಿತ್ತು. ಕೆಲವೊಂದು ವಜ್ರಗಳನ್ನು ಫ್ರಾನ್ಸ್ ದೇಶದಿಂದಲೂ ಆಮದು ಮಾಡಿಕೊಳ್ಳಲಾಗಿತ್ತು. ಚಕ್ರವರ್ತಿಗಳೂ ಸಹ ವಜ್ರಖಚಿತ ಪಾದರಕ್ಷೆಗಳನ್ನು ಧರಿಸಿರಲಿಕ್ಕಿಲ್ಲ. ಚೌಸೆಸ್ಕೂ ದಂಪತಿಗಳ ಬಟ್ಟೆಗಳೂ ಸಹ ಹಲವು ಕೋಟಿ ಬೆಲೆ ಬಾಳುವಂತಹುವುಗಳಾಗಿದ್ದವು.
ಈ ನಿರಂಕುಶ ಪ್ರಭುವಿನ ಪರಿಪಾಲನೆಯಲ್ಲಿ ರುಮೇನಿಯಾ ದೇಶದ ಪ್ರಜೆಗಳಿಗೆ ದಿನವೊಂದಕ್ಕೆ ನಾಲ್ಕು ಅಥವಾ ಐದು ಘಂಟೆಗಳ ಅವಧಿಗೆ ಮಾತ್ರ ವಿದ್ಯುತ್ ಲಭ್ಯವಿತ್ತು. ಮೈ ಕೊರೆಯುವ ಚಳಿಯಿರುವ ಆ ದೇಶದಲ್ಲಿ ಪ್ರಜೆಗಳಿಗೆ ಬಿಸಿನೀರಿನ ಮಾತು ದೂರವೇ ಇತ್ತು. ಆದರೆ ಚೌಸೆಸ್ಕೂವಿನ ಭವ್ಯಬಂಗಲೆಯಲ್ಲಿ ಮಾತ್ರ ಸ್ನಾನದ ಮನೆಯಲ್ಲಿ ಬಂಗಾರದ ಕೊಳವೆಗಳನ್ನು ಅಳವಡಿಸಿದ ನಲ್ಲಿಗಳ ಮೂಲಕ ಬಿಸಿಬಿಸಿ ನೀರು ನಿರಂತರವಾಗಿ ಸರಬರಾಜಾಗುತ್ತಿತ್ತು. ತಾವು ತಿಂದು ಉಳಿದ ಆಹಾರವನ್ನು ಕೂಡಾ ತಮ್ಮ ಕೆಲಸದವರಿಗೆ ಉಣ್ಣಲಿಕ್ಕುತ್ತಿರಲಿಲ್ಲ ಈ ಚೌಸೆಸ್ಕೂ ದಂಪತಿಗಳು. ತಿನ್ನದೇ ಉಳಿದ ಮಾಂಸ ಮತ್ತು ಹಣ್ಣುಗಳನ್ನೂ ಸಹ ಮಾರುಕಟ್ಟೆಗೆ ಕಳುಹಿಸಿ ಅದನ್ನೂ ದುಡ್ಡಿಗೆ ಮಾರಿಕೊಳ್ಳುತ್ತಿದ್ದರು ಈ ಮಹಾನ್ ದಂಪತಿಗಳು. "ಈ ಭವನವು ರಾಕ್ಷಸ ಉನ್ಮಾದಕ್ಕೆ ಸಂಕೇತವಾಗಿ ಚರಿತ್ರೆಯಲ್ಲಿ ನಿಲ್ಲುತ್ತದೆ" ಎಂದು ಒಬ್ಬ ಸೈನ್ಯಾಧಿಕಾರಿ ವ್ಯಾಖ್ಯಾನಿಸಿದ್ದಾನೆ. ಇದು ಕಮ್ಯೂನಿಸಂನ ನಿಜ ಸ್ವರೂಪ.
ದೋಚುವ ಪರ್ವವ ಹೆಚ್ಚಿಸಿದ
ದುರ್ಮಾರ್ಗಿಗಳು ಕಮ್ಯೂನಿಷ್ಟರು
ಪಾಪದ ಮೂಟೆಗಳ ಕಟ್ಟಿಕೊಂಡ
ಪಿಶಾಚಿಗಳು ಕಮ್ಯೂನಿಷ್ಟರು!
ಭೌತಿಕವಾದಿಗಳ ರಾಜ್ಯವದು
ಭೀಭತ್ಸಕ್ಕೆ ನಿಲಯವಾಗಿಹುದು
ಪ್ರಜೆಗಳ ಉಸಿರು ಕಟ್ಟಿಸಿಹುದು
ದ್ವೇಷ ಜ್ವಾಲೆಗಳ ಉಗುಳುತಿಹುದು!
’ಬಂಧು ಪ್ರೀತಿ ಸರ್ವತ್ರ ಅನೀತಿ’ ಎಂದು ಸಂಬಂಧಿಕರನ್ನು ಅಧಿಕಾರದಲ್ಲಿರಿಸಿಕೊಳ್ಳುವುದು ಅಕ್ರಮಗಳಿಗೆ ದಾರಿ ಮಾಡಿಕೊಡುತ್ತದೆಂದೂ, ಸ್ವಜನಪಕ್ಷಪಾತವು ಅಭ್ಯುದಯಕ್ಕೆ ಕಂಟಕವೆಂದೂ ಭಾಷಣಗಳನ್ನು ಬಿಗಿಯುವ ಕಮ್ಯೂನಿಷ್ಟರು ಪ್ರಜೆಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಚೌಸೆಸ್ಕೂ ತನ್ನ ಹತ್ತಿರದ ಸಂಬಂಧಿಗಳಾದ ಸುಮಾರು ೪೦ ಜನರನ್ನು ಉನ್ನತಾಧಿಕಾರಗಳಲ್ಲಿ ನೇಮಿಸಿಕೊಂಡಿದ್ದ. ಅವನ ಹೆಂಡತಿ ದೇಶದ ಉಪಾಧ್ಯಕ್ಷೆಯಾಗಿದ್ದರೆ ಅವನ ಒಬ್ಬ ತಮ್ಮ ದೇಶದ ರಕ್ಷಣಾಮಂತ್ರಿಯಾಗಿದ್ದ. ಮತ್ತೊಬ್ಬನು ಆಸ್ಟ್ರಿಯಾ ದೇಶದಲ್ಲಿ ರುಮೇನಿಯಾ ದೇಶದ ರಾಯಭಾರಿಯಾಗಿದ್ದ. (೧೯೮೯ರ ಪ್ರಜಾ ಕ್ರಾಂತಿಯ ನಂತರ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡರು). ಚೌಸೆಸ್ಕೂವಿನ ಮಗ ಪೋಲೀಸ್ ಇಲಾಖೆಯಲ್ಲಿ ಅತ್ಯುನ್ನತ ಅಧಿಕಾರಿ. ಕಮ್ಯೂನಿಸಂ ಎಂದರೆ ಇದೇ!
ಸಾಲದ ರಾಶಿ!
ಯುಗೋಸ್ಲೋವಿಯಾ ಸ್ವಲ್ಪ ಹೆಚ್ಚೂ ಕಡಿಮೆ ಆಂಧ್ರಪದೇಶದಷ್ಟು ವಿಶಾಲ ಪ್ರದೇಶವುಳ್ಳ ದೇಶ. ಅಲ್ಲಿಯ ಜನಸಂಖ್ಯೆ ಎರಡೂವರೆ ಕೋಟಿ. ಕಮ್ಯೂನಿಷ್ಟ್ ಆಡಳಿತದ ಪುಣ್ಯವಿಶೇಷದಿಂದಾಗಿ ೨,೧೦೦ ಕೋಟಿ ಡಾಲರುಗಳ ಋಣಭಾರ ಅದರ ಮೇಲಿದೆ. ಯುಗೋಸ್ಲೋವಿಯಾವು ಸಾಲವನ್ನು ತೀರಿಸಲಾಗದೇ ಹೋಗಬಹುದು ಎಂದು ಸಾಲಕೊಟ್ಟವರು ಕಳವಳಗೊಂಡಿದ್ದಾರೆ. ಅಲ್ಲಿ ದ್ರವ್ಯೋಲ್ಭಣವು ಶೇಖಡಾ ೨೫೦ಕ್ಕೆ ಸೇರಿದೆ. ಅಲ್ಲಿಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ೧೯೮೯ರಲ್ಲಿ ಆ ದೇಶದ ಪ್ರಧಾನಿ ಬ್ರಾಂಕೋಮಿಕೂಲಿಕ್ ರಾಜೀನಾಮೆ ಕೊಡಬೇಕಾಯಿತು. ಆತನ ಮೇಲೆ ಹಲವಾರು ಆರ್ಥಿಕ ಅಪರಾಧಗಳನ್ನೆಸಗಿದ ಆರೋಪಗಳಿವೆ. ಅವನ ವಿಲಾಸಮಯವಾದ ಜೀವನವೂ ಸಹ ಚರ್ಚೆಗೆ ಒಳಪಟ್ಟಿತ್ತು. ಸೋಜಿಗದ ಸಂಗತಿ ಏನೆಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ ಕಮ್ಯೂನಿಷ್ಟ್ ದೇಶಗಳೆಲ್ಲವೂ (ಸೋವಿಯತ್ ರಷ್ಯಾವನ್ನೊಳಗೊಂಡು) ಬಂಡವಾಳಶಾಹಿ ವ್ಯವಸ್ಥೆಯುಳ್ಳ ಪ್ರಜಾಪ್ರಭುತ್ವವಿರುವ ದೇಶಗಳಿಂದ ಆರ್ಥಿಕ ಸಹಾಯವನ್ನು ಬೇಡುತ್ತಿವೆ, ಹಣಕಾಸಿನ ಸಾಲ ಪಡೆದುಕೊಳ್ಳುತ್ತಿವೆ! ೧೯೮೯ರಲ್ಲಿ ಕಮ್ಯೂನಿಷ್ಟ್ ಸಂಕೋಲೆಗಳನ್ನು ತುಂಡರಿಸಿಕೊಂಡ ಪೂರ್ವ ಯೂರೋಪಿನ ದೇಶಗಳೆಲ್ಲಾ ’ಪ್ರಪಂಚ ಬ್ಯಾಂಕ್ (World Bank)' ಮತ್ತು ಅಂತರ್ರಾಷ್ಟ್ರೀಯ ಹಣಕಾಸು ನಿಧಿ (IMF - International Monetary Fund) - ಇವುಗಳಿಂದ ಸಾಲ ಪಡೆಯಲು ಅರ್ಜಿ ಹಾಕಿಕೊಂಡಿವೆ. ಮೂವ್ವತ್ತು ಲಕ್ಷ ಜನರಿರುವ ಅಲ್ಬೇನಿಯಾ, ಪಶ್ಚಿಮ ಜರ್ಮನಿಯಿಂದ ಹಣಕಾಸು ನೆರವನ್ನು ಪಡೆಯುತ್ತಿದೆ. ಮತ್ತೊಂದು ಕಡೆ ಅಲ್ಬೇನಿಯಾ ಚೀನಾ ಪ್ರಭುತ್ವದಂತೆ ನಿರಂಕುಶ ಕಮ್ಯೂನಿಷ್ಟ್ ಆಡಳಿತವನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ ಮಹಾವೃಕ್ಷಗಳನ್ನು ಉರುಳಿಸಿದ ಚಂಡಮಾರುತಕ್ಕೆ ತರಗಲೆಯೊಂದು ಲೆಕ್ಕವೇ?
ಮಾರ್ಕ್ಸಿಸ್ಟ್ ವಿಧಾನಗಳಿಂದಾಗಿ ರಷ್ಯಾದಲ್ಲಿ ಉತ್ಪನ್ನವು ಕುಂಠಿತಗೊಂಡಿತು. ಉತ್ಪನ್ನಗಳ ಗುಣಮಟ್ಟದ ವಿಷಯದಲ್ಲಿ ರಷ್ಯಾದ ಉದ್ದಿಮೆಗಳು ಪ್ರಜಾತಂತ್ರವಿರುವ ಪಾಶ್ಚಾತ್ಯ ದೇಶಗಳ ಪೈಪೋಟಿಯನ್ನು ಎದುರಿಸಲಾಗದೆ ಮಖಾಡೆ ಮಲಗಿದವು. ಪ್ರಸ್ತುತ ರಷ್ಯಾದ ಅಧ್ಯಕ್ಷರಾಗಿರುವ ಗೋರ್ಬಚೇವ್ ’ಪೆರಸ್ಟ್ರೋಯಿಕಾ’ (ಪುನರ್ ನಿರ್ಮಾಣ), ಮತ್ತು ”ಗ್ಲಾಸ್ನಾಸ್ಟ್’ಗಳನ್ನು (ಸ್ವತಂತ್ರ್ಯ ಚರ್ಚಾ ವಿಧಾನ) ಪ್ರತಿಪಾದಿಸುವ ಮುಂಚಿನಿಂದಲೇ ಸೋವಿಯತ್ ರಷ್ಯಾದಲ್ಲಿ ಆರ್ಥಿಕ ಸಂಸ್ಕರಣಗಳು ಆರಂಭವಾದವು. ೧೯೮೪ರ ಸರಿಸುಮಾರಿನಲ್ಲೇ ಉದ್ದಿಮೆಗಳಲ್ಲಿ ಉತ್ಪನ್ನದ ಪ್ರಮಾಣವನ್ನು ಆಧರಿಸಿ ವೇತನಗಳನ್ನು ಕೊಡುವ ಪದ್ಧತಿಯು ಜಾರಿಗೆ ಬಂದಿತ್ತು. ಇದರರ್ಥ ಉತ್ಪನ್ನಗಳನ್ನು ಹೆಚ್ಚು ಉತ್ಪಾದಿಸುವ ಉದ್ದಿಮೆಗಳ ಕಾರ್ಮಿಕರಿಗೆ ಹೆಚ್ಚಿನ ವೇತನವು ದೊರೆಯುತ್ತದೆ. ಇದರ ಪರಿಣಾಮವಾಗಿ, "ಒಂದೇ ಸ್ಥಾಯಿಯ ಉದ್ಯೋಗಿಗಳಿಗೆ ಒಂದೇ ವಿಧವಾದ ವೇತನ" ಎನ್ನುವ ವಿಧಾನವು ಹೋಗಿ ಶ್ರಮಕ್ಕೆ ತಕ್ಕ ವೇತನವನ್ನು ಕೊಡುವ ಪದ್ಧತಿಯು ಆರಂಭವಾಯಿತು. ೧೯೮೦ರ ಆಸುಪಾಸಿನಲ್ಲೇ ಭೂಮಿಯ ಹಕ್ಕು ಮತ್ತು ಆಸ್ತಿ ಹಕ್ಕನ್ನು ಕೂಡಾ ಸೋವಿಯತ್ ರಷ್ಯಾದ ಪಾಲಕ ಮಂಡಳಿಯು ಒದಗಿಸಿತು. ಹೀಗೆ ನಿಧಾನವಾಗಿ ಕಮ್ಯೂನಿಷ್ಟ್ ಆರ್ಥಿಕ ನೀತಿಗಳನ್ನು ನಿರ್ಮೂಲಿಸುವುದಕ್ಕೆ ಆಡಳಿತ ಮಂಡಳಿಯು ಸನ್ನದ್ಧವಾಗಿದೆ. ಇದೇ ಸಮಯದಲ್ಲಿ, ಕಮ್ಯೂನಿಷ್ಟ್ ಆಡಳಿತದ ನಿರಂಕುಶ ಪರಿಪಾಲನೆಯನ್ನು ಅಂತ್ಯಗೊಳಿಸುವ ದಿಸೆಯಲ್ಲಿ ಪ್ರಜೆಗಳು ಕಾರ್ಯೋನ್ಮುಖರಾಗಿದ್ದಾರೆ.
೧೯೮೯ರ ಅಕ್ಟೋಬರ್ ತಿಂಗಳಿನಲ್ಲಿ ಸೋವಿಯತ್ ರಷ್ಯಾ ಪ್ರಭುತ್ವವು ’ರೂಬಲ್’ನ (ರಷ್ಯಾದ ನಾಣ್ಯ) ಬೆಲೆಯನ್ನು ವಿಪರೀತವಾಗಿ ತಗ್ಗಿಸಿತು. ಅದಕ್ಕೂ ಮುಂಚೆ ಅಮೇರಿಕಾದ ಡಾಲರಿನ ಬೆಲೆಯು ರಷ್ಯಾದ ರೂಬಲಿಗಿಂತ ಕಡಿಮೆ ಬೆಲೆಯುಳ್ಳದ್ದಾಗಿತ್ತು. ಒಂದು ಡಾಲರಿನ ಬೆಲೆ ಕೇವಲ ೬೦ಕೋಪೆಕ್ಕುಗಳು ಮಾತ್ರವೇ ಇತ್ತು. ಆದರೆ ತಗ್ಗಿದ ರೂಬೆಲ್ನ ಬೆಲೆಯಿಂದಾಗಿ ಪ್ರತಿ ಡಾಲರಿನ ಬೆಲೆ ಆರು ರೂಬಲ್ ಇಪ್ಪತ್ತಾರು ಕೋಪೆಕ್ಕುಗಳಿಗೆ ಏರಿತು. ಹೀಗಾಗಿ ರೂಬೆಲ್ಲಿನ ಬೆಲೆ ಒಟ್ಟಾರೆಯಾಗಿ ಹತ್ತುಪಟ್ಟು ಕಡಿಮೆಯಾಯಿತು. ಕಮ್ಯೂನಿಷ್ಟ್ ಆಡಳಿತ ವ್ಯವಸ್ಥೆಯು ಸೋವಿಯತ್ ರಷ್ಯಾವನ್ನು ದಿವಾಳಿಯ ಅಂಚಿಗೆ ತಳ್ಳಿತು ಎಂದು ನಿರೂಪಿಸಲು ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಬೇಕೆ? ಅಕ್ಟೋಬರ್ ಕ್ರಾಂತಿಯ (೧೯೧೭ರಲ್ಲಿ ಸೋವಿಯತ್ ದೇಶದಲ್ಲಿ ಕಮ್ಯೂನಿಷ್ಟ್ ಆಡಳಿತದ ಅಂಕುರಾರ್ಪಣಕ್ಕೆ ಕಾರಣವಾದ ಘಟನೆ) ವಾರ್ಷಿಕೋತ್ಸವಕ್ಕೆ ಮೊದಲು ತೆಗೆದುಕೊಂಡ ಈ ನಿರ್ಣಯವು ಮಾರ್ಕ್ಸ್ವಾದದ ಪತನಕ್ಕೆ ಅಶನಿಪಾತವಾಗಿದೆ (ಬರಸಿಡಿಲಿನಂತೆ ಎರಗಿದೆ).
ಒಂದಾನೊಂದು ಕಾಲದಲ್ಲಿ ತಮ್ಮ ದೇಶವು ಉಕ್ಕು, ವಿದ್ಯುಚ್ಛಕ್ತಿ ಮತ್ತು ಆಹಾರ ಧಾನ್ಯಗಳ ವಿಷಯದಲ್ಲಿ ಸ್ವಾವಲಂಬಿಯಾಗಿತ್ತೆಂದೂ, ಇಂದು ಅವಕ್ಕೆಲ್ಲಾ ಬರ ಉಂಟಾಗಿದೆ ಎಂದೂ ಸೋವಿಯತ್ ರಷ್ಯಾದ ಕಮ್ಯೂನಿಷ್ಟ್ ಪಕ್ಷದ ನಾಯಕರಾದ ಗೋರ್ಬಚೇವ್ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ. ಈಗ ದೇಶದ ಗಡಿಯುದ್ದಕ್ಕೂ ಗೋಡೆಯನ್ನು ನಿರ್ಮಿಸಿ ಪ್ರಜೆಗಳನ್ನು ಖೈದಿಗಳನ್ನಾಗಿ ಪರಿವರ್ತಿಸಲು ಅವಶ್ಯವಾದ ಕಬ್ಬಿಣದ ಸರಳೂಗಳೂ ಸಹ ಕಮ್ಯೂನಿಷ್ಟರಿಗೆ ಇಲ್ಲವಾಗಿವೆ ಪಾಪ! ಇದು ೧೯೮೯ರ ಕಾಲದಲ್ಲಿದ್ದ ಪರಿಸ್ಥಿತಿ.
ಕಮ್ಯೂನಿಷ್ಟ್ ಸಿದ್ಧಾಂತದ ಮೇಲೆ ಪ್ರಜೆಗಳಲ್ಲಿ ದಿನದಿನಕ್ಕೂ ಉಲ್ಬಣಿಸುತ್ತಿರುವ ವಿರೋಧದ ಪರಿಣಾಮವಾಗಿ ಗೋರ್ಬಚೇವ್ ’ಪೆರಸ್ಟ್ರೋಯಿಕಾ’ ಹೆಸರಿನಲ್ಲಿ ತಮ್ಮ ಕಪಿಮುಷ್ಟಿಯನ್ನು ಸಡಲಿಸಬೇಕಾಯಿತು. ೧೯೮೯ರಲ್ಲಿ ಸೈಬೀರಿಯಾ ಪ್ರಾಂತದ ಗಣಿ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದರು. ಅವರ ಬೇಡಿಕೆಗಳು ಇವು - ತಮಗೆ ನೀಡುತ್ತಿರುವ ಸಂಬಳವನ್ನು ಹೆಚ್ಚಿಸಬೇಕು, ವರ್ಷಕ್ಕೆ ೪೫ ದಿವಸ ವೇತನ ಸಹಿತ ರಜೆಯನ್ನು ಕೊಡಬೇಕು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನವನ್ನು ನೀಡಬೇಕು. ಇದರ ಅರ್ಥವೇನೆಂದರೆ ೭೦ ವರ್ಷಗಳ ಅವಧಿಯಲ್ಲಿ ಇಂತಹ ಸೌಲಭ್ಯಗಳು ಕಾರ್ಮಿಕರಿಗೆ ಇರಲಿಲ್ಲ ಎಂದಲ್ಲವೇ?! ಆದರೆ ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಕಾರ್ಮಿಕರಿಗೆ ನ್ಯಾಯವು ಸಿಗುತ್ತಿಲ್ಲವೆಂದು ನಮ್ಮ ಕಮ್ಯೂನಿಷ್ಟರು ಅರಚುತ್ತಿರುತ್ತಾರೆ!
ಆಕಾಶದೆತ್ತರಕ್ಕೆ ಸಿಡಿದ ಜ್ವಾಲೆಗಳು!
ರಾಷ್ಟ್ರಜೀವನ ವಿಧಾನವ ಮರೆತಿಹ
ಮಾನವ ಧರ್ಮವ ಅಳಿಸಿ ಹಾಕಿಹ
’ಅರ್ಥ’ವೇ ಪರಮಾರ್ಥವೆನ್ನುವ
ಅಸುರ ಗಣಗಳ ಅಂತ್ಯವಾಗಲಿ!
ವಿವಿಧ ಜನಾಂಗಗಳ ಹೃದಯದಿ
ಅಡಗಿ ಕುಳಿತಿಹ ಮಾನವತ್ವದ
ಮಧುರ ತತ್ತ್ವದ ಬೀಜಕಣಗಳು
ಮೊಳೆಯಲಿ ಹೆಮ್ಮರವಾಗಲಿ!
ಕಮ್ಯೂನಿಷ್ಟ್ ಸಿದ್ಧಾಂತದ ಕಾರ್ಮೋಡಗಳು ಯೂರೋಪನ್ನು ಸುತ್ತುವರೆಯುತ್ತಿವೆ. ಈ ಸಿದ್ಧಾಂತಗಳನ್ನು ಸುಮಾರು ೧೫೦ ವರ್ಷಗಳ ಹಿಂದೆ ಕಾರ್ಲ್ಮಾರ್ಕ್ಸ್, ಫೆಡರಿಕ್, ಏಂಜೆಲ್ಸ್ ಅವರುಗಳು ತಮ್ಮ ’ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ’ದಲ್ಲಿ ಪ್ರಕಟಿಸಿದ್ದಾರೆ. ಇಂದು ಪ್ರಜಾಪ್ರಭುತ್ವದ ಕಾಂತಿಕಿರಣಗಳು ಯೂರೋಪಿನ ರಾಷ್ಟ್ರಗಳನ್ನು ಬೆಳಗುತ್ತಿವೆ, ಅವು ಕಮ್ಯೂನಿಷ್ಟ್ ಕತ್ತಲೆಯನ್ನು ಹೊಡೆದೋಡಿಸುತ್ತಿವೆ. ಜನಾಂಗ, ದೇಶ, ಸರಿಹದ್ದು ಮೊದಲಾದವು ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳಾಗಿರುವುದರಿಂದ ಅವನ್ನು ಹೊಸಕಿ ಹಾಕುತ್ತೇವೆಂದು ಕಮ್ಯೂನಿಷ್ಟರು ಪ್ರಕಟಿಸಿದ್ದಾರೆ. ತಮಾಷೆಯ ಸಂಗತಿ ಏನೆಂದರೆ ರಷ್ಯನ್ ಜನಾಂಗವು ಇತರೇ ಜನಾಂಗಗಳನ್ನು ನಿರ್ಮೂಲಿಸಲು ಪ್ರಯತ್ನಪಡುತ್ತಿದೆ. ಒಂದೇ ಜನಾಂಗವಿದ್ದ ಜರ್ಮನಿಯನ್ನು ತುಂಡರಿಸಿದರು. ಇಂದು ಸುಮಾರು ೭೦ವರ್ಷಗಳ ಕಮ್ಯೂನಿಷ್ಟ್ ಪ್ರಭುತ್ವವನ್ನು ಹೊಂದಿರುವ ರಷ್ಯಾದಲ್ಲಿನ ವಿವಿಧ ಜನಾಂಗಗಳು ಇಂತಹ ಜನಾಂಗರಹಿತ ಅಂತರಾಷ್ಟ್ರೀಯ ಸಿದ್ಧಾಂತದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಎರಡು ಹೋಳಾಗಿರುವ ಜರ್ಮನ್ ಜನಾಂಗವು ೪೦ ವರ್ಷಗಳ ನಂತರ ಒಂದಾಗಲು ಪ್ರಯತ್ನಿಸುತ್ತಿದೆ.
ಮೊದಲನೇ ಪ್ರಪಂಚ ಯುದ್ಧದ ಸಮಯದಲ್ಲಿ ತಮ್ಮ ಜನಾಂಗವು ಸೋಲಬೇಕು ಎಂದು ರಷ್ಯಾದ ಕಮ್ಯೂನಿಷ್ಟರು ಬಯಸಿದರು. ಇದು ದೇಶದ್ರೋಹವಲ್ಲ, ಏಕೆಂದರೆ ಸೋತುಹೋದ ತಮ್ಮ ದೇಶದ ಪ್ರಜೆಗಳು ಆಗಿನ ರಾಜ್ಯಾಡಳಿತದ ವಿರುದ್ಧ ಸಿಡಿದೇಳಬೇಕು. ಇದನ್ನನುಸರಿಸಿ ತಾವು ಅಧಿಕಾರವನ್ನು ಕೈವಶ ಮಾಡಿಕೊಳ್ಳಬೇಕು! ಹೀಗೇ ಆಯಿತು. ಮೊದಲನೇ ಪ್ರಪಂಚ ಯುದ್ಧ ಮುಗಿಯುವುದಕ್ಕೆ ಮೊದಲೇ ೧೯೧೭ರಲ್ಲಿ ರಷ್ಯಾವು ಕಮ್ಯೂನಿಷ್ಟರ ಆಡಳಿತಕ್ಕೆ ಒಳಪಟ್ಟಿತು. ಆದರೆ ಎರಡನೇ ಪ್ರಪಂಚ ಯುದ್ಧದ ಸಮಯಕ್ಕಾಗಲೇ ಕಮ್ಯೂನಿಷ್ಟರು ಜನಾಂಗೀಯ ಭಾವನೆಯನ್ನು ರಷ್ಯನ್ ದೇಶದ ಪ್ರಜೆಗಳಲ್ಲಿ ತುರುಕಿದರು. ರೇಡಿಯೋಗಳು ರಷ್ಯಾದ ಜನಾಂಗೀಯ ಗೀತೆಗಳನ್ನು ಪ್ರಸಾರ ಮಾಡಿದವು. ಈ ವಿಧವಾಗಿ ಕಮ್ಯೂನಿಷ್ಟ್ ಸಿದ್ಧಾಂತವು ಮೊಟ್ಟಮೊದಲ ಬಾರಿಗೆ ವೈಫಲ್ಯವನ್ನು ಹೊಂದಿತು. ಸಮಸ್ತ ಮಾನವ ಜನಾಂಗವು ಒಂದೇ ಎಂದು ಹೇಳಿಕೊಂಡರು, ತಮ್ಮದು ವಿಶ್ವಭ್ರಾತೃತ್ವ ಭಾವನೆಯೆಂದು ಕೊಚ್ಚಿಕೊಂಡರು! ಆ ವಿಶ್ವಮಾನವ ಭಾವನೆ ಕಮ್ಯೂನಿಷ್ಟ್ ಚಿಂತನೆಯ ಕೂಸು ಅದು ತಮಗೆ ಮಾತ್ರ ಹೊಳೆದ ವಿಶಿಷ್ಠವಾದ ಭಾವನೆ ಎಂದೆಲ್ಲಾ ಬೊಗಳೆಬಿಟ್ಟರು. ಎಲ್ಲಾ ಸರಿ, ಆದರೆ ಬಲ್ಗೇರಿಯಾ ದೇಶದಲ್ಲಿ ಅಲ್ಪಸಂಖ್ಯಾತರಾದ ಟರ್ಕಿ ಜನಾಂಗದವರನ್ನು ಕಮ್ಯೂನಿಷ್ಟ್ ಆಡಳಿತವು ಹೇಳ ಹೆಸರಿಲ್ಲದಂತೆ ನಿರ್ಮೂಲನೆ ಮಾಡಿತು.
ಮುಂದುವರೆಯುವುದು.........
ವಿ.ಸೂ.: ಇದು ೧೯೯೦ರಲ್ಲಿ ಮೂಲತಃ ತೆಲುಗಿನಲ್ಲಿ ಪ್ರಕಟಗೊಂಡ ಸುಡುಗಾಡು ಸೇರುತ್ತಿರುವ ಸಮತಾವಾದ - ಕಾಟಿಕಿ ಪೋತುನ್ನ ಕಮ್ಯೂನಿಜಂ, ಲೇಖಕರು - ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಕೃತಿಯ ಕನ್ನಡ ಅನುವಾದ. ಇಪ್ಪತ್ತೇಳು - ಇಪ್ಪತ್ತೆಂಟು ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯ ದೇಶಗಳಲ್ಲಿನ ಕಮ್ಯೂನಿಸಂನ ನಿಜವಾದ ಮುಖವೇನು, ಕಮ್ಯೂನಿಸಂನ ಸಿದ್ಧಾಂತ ಎಲ್ಲಿ ಎಡವಿತು ಮತ್ತು ಕಮ್ಯೂನಿಷ್ಟ್ ಪ್ರಭುತ್ವಗಳು ಮಾಡಿದ ಮಾರಣ ಹೋಮ, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಫಲವಾದ ಕಮ್ಯೂನಿಷ್ಟರ ಆರ್ಥಿಕ ನೀತಿ, ನಿರಂಕುಶ ಆಡಳಿತ, ಮೊದಲಾದ ವಿಷಯಗಳ ಸಮಗ್ರ ಚಿತ್ರಣವನ್ನು ಆ ಕಿರುಹೊತ್ತಗೆ ಸಫಲವಾಗಿ ಹಿಡಿದುಕೊಟ್ಟಿದೆ.
ಹಿಂದಿನ ಲೇಖನ ಭಾಗ - ೪: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ ಓದಲು ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%95...
Comments
ಉ: ಭಾಗ - ೫: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!
ಸರಣಿಯ ಮುಂದಿನ ಲೇಖನಕ್ಕೆ (ಭಾಗ - ೬: ಕೊನೆಯುಸಿರೆಳೆಯುತ್ತಿರುವ ಕಮ್ಯೂನಿಸಂ!)ಈ ಕೊಂಡಿಯನ್ನು ಚಿವುಟಿಸಿ https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%95...