ಭಾಗ - ೬ "ಭೀಷ್ಮ ಯುಧಿಷ್ಠಿರ ಸಂವಾದ: ಕಾಲಕವೃಕ್ಷ ಮುನಿಯ ವೃತ್ತಾಂತವು

ಭಾಗ - ೬ "ಭೀಷ್ಮ ಯುಧಿಷ್ಠಿರ ಸಂವಾದ: ಕಾಲಕವೃಕ್ಷ ಮುನಿಯ ವೃತ್ತಾಂತವು

       ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
       ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯ ಪರಿಪಾಲನೆ ಎಂದರೆ ಮಕ್ಕಳಾಟವಲ್ಲ ಎನ್ನುವ ಸಂಗತಿ ನನಗೆ ತಿಳಿದಿದೆ. ರಾಜ್ಯ ಪರಿಪಾಲನೆ ಎನ್ನುವುದು ನನ್ನೊಬ್ಬನಿಂದಲೇ ನಡೆಯುವ ಕ್ರಿಯೆಯಲ್ಲವೆಂದೂ ಸಹ ನನಗೆ ತಿಳಿದಿದೆ. ನನಗೆ ಸಹಾಯ ಸಹಕಾರಗಳನ್ನು ಒದಗಿಸಿ ರಾಜ್ಯದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಬೇಕಾದ ನಂಬಿಗಸ್ಥರ ಮಂತ್ರಿಮಂಡಲವನ್ನು ಏರ್ಪಡಿಸಿಕೊಳ್ಳಬೇಕಾಗುತ್ತದೆ. ಮಂತ್ರಿಗಳನ್ನು ನಿಯಮಿಸಿಕೊಳ್ಳುವುದರಲ್ಲಿ ನಾನು ಅನುಸರಿಸಬೇಕಾದ ಪದ್ದತಿ ಏನು? ಅದನ್ನು ವಿಶದೀಕರಿಸಿ ಎಂದು ಬೇಡಿಕೊಳ್ಳುತ್ತಿದ್ದೇನೆ". ಹೀಗೆಂದು ಹೇಳಿದ ಧರ್ಮಜನು ಅಂಜಲಿಬದ್ಧನಾಗಿ ಬದಿಗೆ ಸರಿದು ನಿಂತುಕೊಂಡನು.
      ಭೀಷ್ಮ ಪಿತಾಮಹನು ಉತ್ತರವನ್ನು ಹೇಳಿದನು,"ಕುಂತಿಪುತ್ರನೇ! ಈ ವಿಷಯವಾಗಿ ಒಂದು ಕಥೆ ಇರುವುದು, ಕೇಳುವಂತಹವನಾಗು. ಕಾಲಕವೃಕ್ಷ ಎನ್ನುವ ಮುನಿಯೊಬ್ಬನಿದ್ದ. ಆ ಮುನಿಯು ಕೋಸಲ ದೇಶಕ್ಕೆ ಹೋಗಲು ನಿಶ್ಚಯಿಸಿಕೊಂಡ. ಕೋಸಲ ದೇಶಕ್ಕೆ ಕ್ಷೇಮದರ್ಶಿ ಎನ್ನುವವನು ಹೊಸದಾಗಿ ಸಿಂಹಾಸನವೇರಿದ್ದ. ಅವನು ರಾಜನೇನೋ ಆದ, ಆದರೆ ಅವನಿಗೆ ರಾಜ್ಯಾಡಳಿತವೆಲ್ಲವೂ ಅಪರಿಚಿತವಾಗಿತ್ತು. ಇದರಿಂದಾಗಿ ಅವನ ರಾಜ್ಯವೆಲ್ಲವೂ ಅಲ್ಲೋಲಕಲ್ಲೋಲವಾಗಿ, ಆಡಳಿತ ಯಂತ್ರಾಂಗವು ಕೊಳೆತು ನಾರುತ್ತಿತ್ತು. ಅನೀತಿ, ಆಶ್ರಿತಪಕ್ಷಪಾತ, ಮೊದಲಾದವುಗಳು ತಾಂಡವವಾಡುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಕಾಲಕವೃಕ್ಷ ಮುನಿಯು ಮಹಾರಾಜನಿಗೆ ಸಹಾಯ ಮಾಡಬೇಕೆಂದು ಬಯಸಿದ, ಏಕೆಂದರೆ ಅವನಿಗೆ ರಾಜನು ಆತ್ಮೀಯನಷ್ಟೇ ಅಲ್ಲ ಅವನಿಗೆ ದೂರದ ಬಂಧುವೂ ಆಗಿದ್ದ."
     "ಮುನೀಶ್ವರನು ಮೊದಲು ಒಂದು ಪಂಜರವನ್ನು ಸಂಪಾದಿಸಿದನು. ಅದರೊಳಗೆ ಒಂದು ಕಾಗೆಯನ್ನು ಇಟ್ಟುಕೊಂಡನು. ಆ ಪಂಜರದೊಂದಿಗೆ ಅವನು ದೇಶವನ್ನೆಲ್ಲಾ ಸಂಚರಿಸಿದನು. ಅವನು ಪ್ರತಿ ಊರಿನಲ್ಲೂ ’ಕಾಕ ಭವಿಷ್ಯ’ವನ್ನು ಹೇಳುವುದಾಗಿ ಪ್ರವೇಶಿಸುತ್ತಿದ್ದ. ತನ್ನ ಬಳಿಯಲ್ಲಿರುವ ಕಾಗೆಗೆ ಭೂತ, ಭವಿಷ್ಯತ್, ವರ್ತಮಾನಗಳು ತಿಳಿದಿದೆಯೆಂದೂ ಮತ್ತು ತನಗೆ ಕಾಗೆಗಳ ಭಾಷೆಯೂ ಬರುತ್ತದೆಂದೂ ಹೇಳಿಕೊಳ್ಳುತ್ತಿದ್ದ. ಈ ವಿಧವಾಗಿ ಅವನು ಸಮಸ್ತ ದೇಶವನ್ನು ಸುತ್ತಿ, ದೇಶದಲ್ಲಿ ಎಲ್ಲೆಲ್ಲಿ ಪ್ರಭುತ್ವ ಉದ್ಯೋಗಿಗಳು ಯಾವ ಯಾವ ವಿಧವಾದ ಅನೀತಿಯುತ ಕಾರ್ಯಗಳಿಗೆ ಪಾಲ್ಪಡುತ್ತಿದ್ದಾರೋ ಅವನ್ನೆಲ್ಲಾ ಕಣ್ಣಾರೆ ಕಂಡನು. ಯಾವ ಯಾವ ಅಧಿಕಾರಿ, ಯಾವ ಯಾವ ಮಂತ್ರಿಗಳು ರಾಜ್ಯದ್ರವ್ಯವನ್ನು ಯಾವ ಯಾವ ವಿಧವಾಗಿ ಅಪಹರಿಸಿದ್ದಾರೋ ಅವನ್ನೆಲ್ಲಾ ಕೂಲಂಕಷವಾಗಿ ತಿಳಿದುಕೊಂಡನು. ಕಡೆಗೆ ತನ್ನ ಕಾಗೆಯೊಂದಿಗೆ ರಾಜದರ್ಶನಕ್ಕೆ ಹೊರಟನು. ರಾಜನ ಒಡ್ಡೋಲಗದ ಒಳಗೆ ಅವನು ತನ್ನ ಪಂಜರವನ್ನು ಹೊರಕ್ಕೆ ತೆಗೆದನು."
       "ಅಲ್ಲಿ ರಾಜನ ಮುಂದೆ ಮಂತ್ರಿಗಳು, ಸಾಮಂತರು, ಉದ್ಯೋಗಿಗಳು, ಸಕಲ ವೈಭವಗಳೊಂದಿಗೆ ಆಸೀನರಾಗಿದ್ದರು. ಮುನೀಶ್ವರನು ತನ್ನ ಕಾಗೆಯೊಂದಿಗೆ ಸ್ವಲ್ಪ ಹೊತ್ತು ಮೌನವಾಗಿ ಸಂಭಾಷಣೆ ನಡೆಸಿದ. ಆಮೇಲೆ ಅವನು ಒಬ್ಬೊಬ್ಬ ಮಂತ್ರಿ, ಒಬ್ಬೊಬ್ಬ ಉದ್ಯೋಗಿಯನ್ನು ನೋಡಿ, "ನೋಡಿಲ್ಲಿ, ನೀನು ಇಂತಹ ಅನೀತಿಯುತ ಕಾರ್ಯದಲ್ಲಿ ಭಾಗಿಯಾಗಿದ್ದೀಯ, ನೀನು ಈ ಹಗರಣದಲ್ಲಿ ಭಾಗಿಯಾಗಿದ್ದೀಯ, ನೀನು ಇಷ್ಟು ದ್ರವ್ಯವನ್ನು ಅಪಹರಿಸಿದ್ದೀಯ, ಇಷ್ಟು ದ್ರವ್ಯವನ್ನು ಕರ್ತವ್ಯ ನಿರ್ವಹಿಸುವಾಗ ಪಾರಿತೋಷಕದ ರೂಪದಲ್ಲಿ ಪಡೆದಿದ್ದೀಯ, ಇಂತಹ ಪ್ರಸಂಗಗಳಲ್ಲಿ ಸ್ವಜನ ಪಕ್ಷಪಾತವೆಸಗಿದ್ದೀಯ - ಎಂದು ಈ ಕಾಗೆಯು ಹೇಳುತ್ತಿದೆ. ಇದಕ್ಕೆ ಸಕಲವೂ ತಿಳಿದಿದೆ, ಇದು ಸರ್ವಜ್ಞ, ನಿನ್ನ ಅಪರಾಧವನ್ನು ಅಂಗೀಕರಿಸು" ಎಂದು ಗದರಿಸಿ ಹೇಳಿದ. ತನ್ನ ಕಾಗೆ ಹುಸಿಯಾಡದು ಎಂದನು. ಸಭಾಸದರೆಲ್ಲರೂ ದಿಗ್ಭ್ರಾಂತರಾದರು"
      "ಅಂದು ರಾತ್ರಿ ಮುನೀಶ್ವರನಿಂದ ಅವಮಾನಿಸಲ್ಪಟ್ಟ ರಾಜೋದ್ಯೋಗಿಗಳೆಲ್ಲರೂ ಕತ್ತಲೆಯಾವರಿಸುತ್ತಿದ್ದಂತೆ ಬಾಣವನ್ನು ಹೂಡಿ ಮುನೀಶ್ವರನ ಬಳಿಯಲ್ಲಿದ್ದ ಕಾಗೆಯನ್ನು ಕೊಂದು ಬಿಟ್ಟರು. ಮರುದಿನ ಬೆಳಿಗ್ಗೆ ಮುನೀಶ್ವರನು ಕಾಗೆಯ ಕಳೇಬರವನ್ನು ರಾಜನ ಮುಂದಿರಿಸಿ, ಹೀಗೆಂದು ನುಡಿದನು, "ರಾಜಾ! ನಿನ್ನ ಒಳಿತನ್ನು ಬಯಸಿ ಹೇಳುತ್ತಿದ್ದೇನೆ. ನೋಡು, ಏನಾಗಿದೆಯೋ ಎನ್ನುವುದನ್ನು! ನಿನ್ನ ಒಳಿತು ಕೆಡುಕುಗಳನ್ನು ನೀನೇ ನಿರ್ಣಯಿಸಿಕೊ! ಯಾರನ್ನೂ ನಂಬಬೇಡ. ನಿನ್ನ ಆಧೀನದಲ್ಲಿರುವವರೇ ನಿನ್ನ ಕೋಶಾಗಾರವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಅವರಿಗೆ ಪ್ರಜಾಕ್ಷೇಮದ ಮೇಲೆ ಲಕ್ಷ್ಯವಿಲ್ಲ, ಆದ್ದರಿಂದ ಅವರು ನನ್ನನ್ನು ಅಂತ್ಯಗೊಳಿಸುವ ಮೊದಲ ಹೆಜ್ಜೆಯಾಗಿ ಕಾಗೆಯನ್ನು ಕೊಂದರು. ನಾಳೆ ಅವರು ನನ್ನನ್ನೂ ಕೊಲ್ಲಲು ಹೇಸುವುದಿಲ್ಲ. ಇರಲಿ, ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ. ನೀನು ಮಾತ್ರ ಜಾಗ್ರತೆಯಾಗಿ ಇರಬೇಕು. ನಿನ್ನನ್ನು ಸ್ಥಾನಚ್ಯುತಗೊಳಿಸಿ ತಾವೇ ಸಿಂಹಾಸನವನ್ನು ಅಧಿರೋಹಿಸಬೇಕೆಂದು ಅವರು ಹೊಂಚು ಹಾಕುತ್ತಿದ್ದಾರೆ. ರಾಜ್ಯಾಡಳಿತವೆನ್ನುವುದು ಒಂದು ಮಹಾನದಿ ಇದ್ದಂತೆ, ರಾಜೋದ್ಯೋಗಿಗಳು ಇದರಲ್ಲಿರುವ ಮೊಸಳೆ, ತಿಮಿಂಗಿಲಗಳು" 
      "ಹಿಮಾಲಯ ಪರ್ವತಗಳು ಒಳ್ಳೆಯವೇ, ಅದರಲ್ಲಿರುವ ಗುಹೆಗಳೂ ಒಳ್ಳೆಯವೆ. ಆದರೆ ಅವುಗಳಲ್ಲಿ ಹುಲಿ, ಸಿಂಹಗಳು ವಾಸವಾಗಿ ಮನುಷ್ಯರನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಈ ರಾಜ್ಯಾಡಳಿತದ ಪ್ರವಾಹದಲ್ಲಿ ನೌಕೆಗಳೇ ಮುಳುಗಿ ಹೋಗುತ್ತವೆ. ನೀನು ಜೇನುನೊಣಗಳು ಗೂಡು ಕಟ್ಟಿಕೊಂಡಿರುವ ಕೊಂಬೆಯಂತಿದ್ದೀಯ, ಅ ಕೊಂಬೆಯನ್ನು ಯಾರಾದರೂ ಹಿಡಿಯಲು ಬಂದರೆ ಅವನನ್ನು ಆ ಜೇನು ನೊಣಗಳು ಕಚ್ಚಿ ಹಾಕುತ್ತವೆ." 
        "ನೀನು ವಿಷಸರ್ಪಗಳಿಂದ ಆವೃತವಾದ ಸಿಹಿನೀರಿನ ಬಾವಿಯಂತಿರುವೆ. ನಾಯಿ, ನರಿಗಳು, ಗಾರ್ದಭಗಳಿಂದ ಪರಿವೃತವಾದ ರಾಜಹಂಸದಂತೆ ಇದ್ದೀಯ!" 
        "ನೀನು ಯಾರನ್ನು ಮಂತ್ರಿಗಳಾಗಿ ನಿಯಮಿಸಿಕೊಂಡಿರುವೆಯೋ ಅವರು ಕಪಟಿಗಳು, ದ್ರೋಹಿಗಳು ಎನ್ನುವುದನ್ನು ಗಮನಿಸು, ಅವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸು. ಹಾವು ಹೊಕ್ಕ ಮನೆಯಲ್ಲಿ ಎಚ್ಚರಿಕೆಯಿಂದಿರುವಂತೆ ಮೈಯೆಲ್ಲಾ ಕಣ್ಣಾಗಿಸಿಕೊಂಡಿರು, ಎಲ್ಲರನ್ನೂ ಸಂಶಯದ ದೃಷ್ಟಿಯಿಂದ ನೋಡು".
       "ಋಷಿವರ್ಯರೇ, ನಿಮಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮನ್ನು ಅಂತ್ಯಗೊಳಿಸಲು ಬಯಸಿದವರು ನನಗೂ ಸಹ ಶತ್ರುಗಳೇ, ಅವರ ಅಂತ್ಯವನ್ನು ನಾನು ನೋಡಿಕೊಳ್ಳುತ್ತೇನೆ. ತಕ್ಷಣವೇ ನಾನು ಕೈಗೊಳ್ಳಬೇಕಾಗಿರುವ ಕರ್ತವ್ಯವನ್ನು ನನಗೆ ಉಪದೇಶಿಸುವಂತವರಾಗಿರಿ" ಎಂದು ರಾಜನು ಆ ಮುನಿಯನ್ನು ವಿನಂತಿಸಿದ. 
    ಆಗ ಮುನಿಯು ಹೀಗೆ ಹೇಳಿದ, "ರಾಜಾ ಚಾತುರ್ಯದಿಂದ ವ್ಯವಹರಿಸಬೇಕಾದ ಸಮಯವಿದು. ಕಾಗೆಯನ್ನು ಕೊಂದ ಅಪರಾಧವನ್ನು ಎಲ್ಲಿಯೂ ಎತ್ತಿ ಆಡಬೇಡ. ಕೇವಲ ಇದರ ನೇತೃತ್ವ ವಹಿಸಿಕೊಂಡ ಮಂತ್ರಿಯನ್ನು ಪದಚ್ಯುತಗೊಳಿಸು. ಆಗ ಅವನು ಸಹಜವಾಗಿಯೇ ದುರ್ಬಲನಾಗುತ್ತಾನೆ. ತದನಂತರ ಕಾಗೆಯನ್ನು ಕೊಂದ ಅಪರಾಧದಲ್ಲಿ ಭಾಗಿಯಾದ ಪ್ರತಿಯೊಬ್ಬರ ಸಂಗತಿಗಳನ್ನೂ ಒಂದೊಂದಾಗಿ ರಹಸ್ಯವಾಗಿ ಶೇಖರಿಸಿ, ಅವರ ಮೇಲೆ ಪ್ರತ್ಯೇಕವಾಗಿ ಕ್ರಮ ಜರುಗಿಸು". 
      "ಅನೇಕ ಮಂದಿಯ ಮೇಲೆ ಒಂದೇ ವಿಧವಾದ ಅಪರಾಧವನ್ನು ಹೊರೆಸಿದರೆ ಅವರೆಲ್ಲಾ ಒಗ್ಗಟ್ಟಾಗಿ ನಿನಗೆ ದೊಡ್ಡ ಕಂಟಕವಾಗಿ ತಯಾರಾಗಿ ನಿನಗೆ ಮುಳುವಾಗುತ್ತಾರೆ. ಆದ್ದರಿಂದ ರಹಸ್ಯವಾಗಿ ಅವರ ವಿಷಯವನ್ನು ಸಂಗ್ರಹಿಸಿಕೊಂಡು ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು."
      "ಕಾಲಕವೃಕ್ಷ ಮುನಿಯು ಈ ವಿಧವಾಗಿ ತನ್ನ ಬುದ್ಧಿಬಲದಿಂದ ಕ್ಷೇಮದರ್ಶಿ ಮಹಾರಾಜನಿಗೆ ಮಾರ್ಗದರ್ಶನವನ್ನು ಮಾಡಿದನು. ಅವನ ಸಲಹೆಯನ್ನು ಅನುಸರಿಸಿ ಕ್ಷೇಮದರ್ಶಿಯು ನಿರಾತಂಕವಾಗಿ ಚಕ್ರವರ್ತಿಯಂತೆ ರಾಜ್ಯವನ್ನು ಪರಿಪಾಲಿಸಿದನು". 
       ಧರ್ಮನಂದನನೇ! ನೀನು ಕೇಳಿದ ಪ್ರಶ್ನೆಗೆ ಇದೇ ಸೂಕ್ತವಾದ ಉತ್ತರ. ನೀನೂ ಸಹ ಕ್ಷೇಮದರ್ಶಿಯಂತೆ ವರ್ತಿಸು" 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
 
ಹಿಂದಿನ ಲೇಖನ ಭಾಗ - ೫ "ಭೀಷ್ಮ ಯುಧಿಷ್ಠಿರ ಸಂವಾದ: ಬೂರುಗ ವೃಕ್ಷದ ವೃತ್ತಾಂತವು" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AD...
 

Rating
No votes yet

Comments

Submitted by makara Thu, 09/20/2018 - 19:25

ಈ ಲೇಖನದ ಮುಂದಿನ ಭಾಗ - ೭ "ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಘ್ರಗೋಮಾಯ ಅಥವಾ ಹುಲಿ ನರಿಯ ಸಂವಾದ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AD...

Submitted by makara Wed, 09/26/2018 - 16:29

ಭೀಷ್ಮ ಯುಧಿಷ್ಠಿರ ಸಂವಾದ ಸರಣಿಯ ಈ ಲೇಖನವನ್ನು ವಾರದ ವಿಶೇಷ ಬರಹವಾಗಿ ಆಯ್ಕೆ ಮಾಡಿ ಲೇಖನಗಳನ್ನು ಬರೆಯಲು ಉತ್ತೇಜನ ನೀಡುತ್ತಿರುವ ಸಂಪದ ನಿರ್ವಹಣಾ ಮಂಡಳಿ ಮತ್ತು ನಾಡಿಗರಿಗೆ ಧನ್ಯವಾದಗಳು. ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ವಾಚಕ ಮಿತ್ರರಿಗೂ ಕೃತಜ್ಞತೆಗಳು :)