ಮರೆವು..........

ಮರೆವು..........

 

 

 
          ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು ಬಿಸಿ ಬಿಸಿಯಾಗಿ ತಿನ್ನುವುದು ರೂಢಿಯಾಗಿಬಿಟ್ಟಿದೆ.  ಒಂದು ಕಡೆ ವಾತಾವರಣ ಬದಲಾದರೆ ಇನ್ನೊಂದು ಕಡೆ ತಿನ್ನುವ ಆಹಾರ ಪದಾರ್ಥಗಳಲ್ಲೂ ಬದಲಾವಣೆ.... ಪರಿಣಾಮ ...... ಅನಾರೋಗ್ಯ ಎಂದು ಎಲ್ಲರಿಗೂ ಗೊತ್ತು. 
          
          ಇಂದು ಒಂದೇ ಸಮನೆ ಎಡೆ ಬಿಡದೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಿರುವಾಗ ಮೇಲೆ ಹೇಳಿದ ತಿಂಡಿಗಳು ನೆನಪಿಗೆ ಬಂದು ಬಾಯಲ್ಲಿ ನೀರು ಬಂತು.... ಪತ್ರಡೆ ನೆನಪಾದೊಡನೆ ನಮ್ಮೂರಲ್ಲಿ ನೆಡೆದ ಒಂದು ಘಟನೆಯೂ ನೆನಪಾಯಿತು.  ಸ್ವಾರಸ್ಯಕರವಾಗಿರುವುದರಿಂದ ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಬರೆಯುತ್ತಿದ್ದೇನೆ.
 
          ಸಾಧಾರಣ ಹತ್ತು ಹನ್ನೆರಡು ವರ್ಷಗಳ ಕೆಳಗೆ ನಡೆದ ಘಟನೆ ಇದು......  ಮಳೆಗಾಲದಲ್ಲಿ ನಮ್ಮೂರಿನ ಕೂಲಿ ಕೆಲಸಗಾರನೊಬ್ಬನಿಗೆ ಅನಾರೋಗ್ಯ ಉಂಟಾಯಿತು.  ಒಂದೆರಡು ದಿನ ಮನೆ ಮದ್ದು, ಕಷಾಯ ಇತ್ಯಾದಿಗಳನ್ನು ತೆಗೆದುಕೊಂರೂ ಕಡಿಮೆಯಾಗದಿದ್ದಾಗ ಆತ ವೈದ್ಯರ ಬಳಿಗೆ ಹೋದ.  ಒಂದೇ ಊರಿನವರಾದ ವೈದ್ಯರಿಗೂ ಕೂಲಿಯವನಿಗೂ ಪರಸ್ಪರ ಪರಿಚಯ ವಿದ್ದಿದ್ದರಿಂದ ಕುಶಲ ಪ್ರಶ್ನೆಗಳನ್ನು ಮಾಡಿದ ಬಳಿಕ ಏನಾಗಿದೆ ಎಂದು  ಕೇಳಿದರು...  ಕೂಲಿಯವನು ತನ್ನ ರೋಗವನ್ನು ಹೇಳಿಕೊಂಡ ಬಳಿಕ ವೈದ್ಯರು ಅವನಿಗೆ ಇನ್ನೆರಡು ದಿನದಲ್ಲಿ ಮಲ ಪರೀಕ್ಷೆಯಾಗಬೇಕೆಂದೂ ಪರೀಕ್ಷೆಗಾಗಿ  ಮಲವನ್ನು ತರಬೇಕೆಂದು ಹೇಳಿದರು.  ನಂತರ ಕೂಲಿಯವನು ಹೊರಡುವಾಗ ವೈದ್ಯರು ಅವನನ್ನು ಕರೆದು ಎಲ್ಲಾದರೂ ಸ್ವಲ್ಪ ಪತ್ರಡೆ ಸಪ್ಪು (ಮರಗೆಸು) ಸಿಕ್ಕಿದರೆ ತೆಗೆದುಕೊಂಡುಬಾ ಪತ್ರಡೆ ತಿನ್ನದೇ ಬಹಳ ವರ್ಷಗಳಾದವು ಎಂದರು.  ಆಯ್ತು ಡಾಕ್ಟ್ರೇ ಎಂದು ಹೋದವನು ಎರಡು ದಿನಗಳ ನಂತರ ಒಂದು ಕಾಯಿಸಿದ ಬಾಳೆಯಲೆಯಲ್ಲಿ ಮಲವನ್ನು ಪಟ್ಟಣ ಕಟ್ಟಿಕೊಂಡು ವೈದ್ಯರ ಬಳಿಗೆ ಬಂದನು.  ಇವನು ರೋಗಿ ಎನ್ನುವುದು ವೈದ್ಯರಿಗೆ ಮರೆತು ಹೋಗಿ ಪತ್ರಡೆ ಸೊಪ್ಪಿನ ನೆನಪು ಮಾತ್ರ ಉಳಿದಿತ್ತು.  ಚೀಲದಿಂದ ಮಲದ ಪಟ್ಟಣವನ್ನು ತೆಗೆಯಲು ಹೊರಟ ಅವನನ್ನು ವೈದ್ಯರು ತಡೆದು (ಪತ್ರಡೆ ಸೊಪ್ಪು ತೆಗೆಯುತ್ತಿರಬಹುದೆಂದು ಭಾವಿಸಿ) ಇಲ್ಲಿ ಕೊಡಬೇಡ ಮನೆಗೆ ಹೋಗಿ ನನ್ನ ಹೆಂಡತಿಯ ಹತ್ತಿರ ಕೊಟ್ಟುಹೋಗು ಅಂದರು.   ಕೂಲಿಯವನು ವೈದ್ಯರು ಮಲವನ್ನು ಮನೆಯಲ್ಲಿ ಪರೀಕ್ಷೆ ಮಾಡಬಹುದೆಂದು ಭಾವಿಸಿ ಅವರ ಮನೆಗೆ ಹೋಗಿ ವೈದ್ಯರ ಹೆಂಡತಿಯ ಹತ್ತಿರ "ಡಾಕ್ಟ್ರು ಇದನ್ನ ನಿಮ್ಗೆ ಕೊಡಕ್ಕೆ ಹೇಳಿದಾರೆ" ಅಂತ ಕೊಟ್ಟು ಹೋದನು.  ಸರಿ ಎಂದು ಅದನ್ನು ತೆಗೆದುಕೊಂಡಾಕೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದಳು......... ಪಟ್ಟಣವನ್ನು ಬಿಚ್ಚಿ ನೋಡಿದಾಗ.........  
 
          ಮುಂದೆ ವೈದ್ಯರ ಪರಿಸ್ಥಿತಿ ಏನಾಗಿರಬಹುದೆಂದು ನೀವೇ ಊಹಿಸಿ.....   :)
Rating
No votes yet

Comments