ಮೂರು ವಾರಗಳು , ಮತ್ತಷ್ಟು ಪುಸ್ತಕಗಳು ( "ಬಾಯಿ ಬಿಟ್ಟರೆ ಎಲ್ಲರೂ ತಪ್ಪು ಮಾತಾಡ್ತಾರೆ")

ಮೂರು ವಾರಗಳು , ಮತ್ತಷ್ಟು ಪುಸ್ತಕಗಳು ( "ಬಾಯಿ ಬಿಟ್ಟರೆ ಎಲ್ಲರೂ ತಪ್ಪು ಮಾತಾಡ್ತಾರೆ")

ಕಳೆದು ಮೂರು ವಾರಗಳಲ್ಲಿನ ನನ್ನ ಓದಿನ ಕಿರುಬರಹ ಇಲ್ಲಿದೆ.
೧-೨) ಸಾಹಿತ್ಯ ಅಕಾಡೆಮಿಯ ಎರಡು ಅನುವಾದ ಪುಸ್ತಕಗಳು . ಆವುಗಳ ಬಗ್ಗೆ ಈ ನಡುವಿನ ಬ್ಲಾಗೊಂದರಲ್ಲಿ ಬರೆದಿದ್ದೇನೆ .ಒಂದು ಖುಶಿ ಕೊಟ್ಟಿತು . ಇನ್ನೊಂದು ತಳಬುಡ ತಿಳಿಯದೆ ಕೆಳಗಿಡಬೇಕಾಯಿತು.

೩) ತೇಜಸ್ವಿಯವರ ಮಾಯಾಲೋಕ ಕೂಡ ಓದಿದೆ . ನಿರೀಕ್ಷಿಸಿದಂತೆ ಇದೂ ಓದಿಸಿಕೊಂಡು ಹೋಯಿತು- ಎಂದಷ್ಟೇ ಅಂದುಬಿಟ್ಟರೆ ತಪ್ಪಾದೀತೇನೋ ಎಂಬ ಅಳುಕು ನನಗಿದೆ. ಪತ್ರಿಕೆಯ ವಿರುದ್ಧ ಪ್ರತಿಭಟನೆ ಮಾಡಲು ಪೇಪರ್ ಸುಡಬಂದವರನ್ನು ಸುಮ್ಮನೆ ವಾಪಸ್ ಕಳಿಸಿದ ಪ್ರಸಂಗ , ನಾಯಿಗೆ ಹೆದರಿ ಮಂಗನಾಡಿಸುವವನ ಮಂಗ ಮರಏರಿದ ಪ್ರಸಂಗ ಮತ್ತು ರಾಸ್ತಾ ರೋಕೋ ನಿಸರ್ಗದಿಂದಾಗಿ ವಿಫಲವಾಗಿ , ರಾಸ್ತಾರೋಕೋ ಮಾಡಹೊರಟವರು ರಸ್ತೆ ತೆರವು ಮಾಡಲು ಹಳ್ಳಿ ಹಳ್ಳಿ ಓಡಾಡಬೇಕಾದ ಸಂಗತಿಗಳು ನೆನಪಿನಲ್ಲಿ ಉಳಿಯುವವು .

ಮತ್ತೆ ಡಿಜಿಟಲ್ ಲೈಬ್ರರಿಯಿಂದ ಇಳಿಸಿಕೊಂಡು ಓದಿದ ಪುಸ್ತಕಗಳಿವು .
೪) ಬೇಡರ ಹುಡುಗ ಮತ್ತು ಗಿಳಿ - ಮಕ್ಕಳಿಗಾಗಿ ಚಂದ್ರಶೇಖರ ಕಂಬಾರರು ಹೇಳಿದ ಕತೆಗಳು . ಜನಪದ ಕತೆ ಮುಗಿಸುವಾಗ ' ಆಮೇಲೆ ಅವರು ಅಲ್ಲಿ ಹಾಯಾಗಿ ಇದ್ರು. ನಾವಿಲ್ಲಿ ಹೀಗಿದೀವಿ :( ' ಅಂತ ಮುಗಿಸೋದನ್ನ ನೋಡಿದ್ದೀರಾ ?
೫) ಮರೆತ ಸಾಲುಗಳು - ಎಚ್. ಎಸ್ . ವೆಂಕಟೇಶಮೂರ್ತಿಯವರ ಕವನ ಸಂಕಲನ . ಈ ಬಗ್ಗೂ ಈಗಾಗ್ಲೇ ಬರೆದಿದ್ದೀನಿ .
೬) ಇಪ್ಪತ್ತು ಭಾರತೀಯ ಕತೆಗಳು - ಭಾರತದ ಬೇರೆಬೇರೆ ಭಾಷೆಗಳಿಂದ ಆಯ್ದ ಕತೆಗಳ ಅನುವಾದ. ಏಳೆಂಟು ಕತೆಗಳು ಚೆನ್ನಾಗಿದ್ದವು. ಇದು ನ್ಯಾಶನಲ್ ಬುಕ್ ಟ್ರಸ್ಟಿನದು.
೭) ಐ-wonder ಇದು ವೈಎನ್ಕೆ ರವರ ಪುಸ್ತಕ . ಪತ್ರಕರ್ತರಾದ ಇವರು ಸ್ವಾರಸ್ಯಕರ ಸುದ್ದಿಸಂಗತಿಗಳೊಂದಿಗೆ ಇತಿಹಾಸ-ಸಾಹಿತ್ಯದ ಕಿರು ಪರಿಚಯವನ್ನೂ ಮಾಡುತ್ತಾರೆ. ಇವರ ಅನೇಕ ಪುಸ್ತಕಗಳು ಈಗ ಪೇಟೆಯಲ್ಲಿವೆ . ಅಲ್ಲವೇ ?
೮) ಝೆನ್ ಸೂಫಿ ಗಿಬ್ರಾನ ಕತೆಗಳು ಎಂಬ ಪುಸ್ತಕ . ಇಲ್ಲಿನ ಕತೆಗಳು ವಿಶೇಷವೆನಿಸಲಿಲ್ಲ . ಒಂದನ್ನು ಬಿಟ್ಟು . ಆ ಝೆನ್ ಕತೆಯನ್ನ ನೀವು ಓದಿರಬಹುದು . ಕೊನೆಗೆ ಒಂದು ಸಾಲು ಹೆಚ್ಚಿಗಿದೆ . ಇಲ್ಲಿ ಇನ್ನೊಮ್ಮೆ ಹೇಳ್ತಿದ್ದೀನಿ . ಕೇಳಿ .

ಇಬ್ಬರು ಸನ್ಯಾಸಿಗಳು ಒಂದು ಧ್ವಜದ ಬಗ್ಗೆ ಮಾತಾಡುತ್ತಾರೆ .
ಒಬ್ಬ - 'ಧ್ವಜ ಹಾರಾಡ್ತಿದೆ' .
ಇನ್ನೊಬ್ಬ-' ಅಲ್ಲ , ಗಾಳಿ ಹಾರಾಡ್ತಿದೆ'
ಅಲ್ಲಿ ಇದ್ದ ಗುರು - ' ಎರಡೂ ಅಲ್ಲ ; ನಿಮ್ಮ ಮನಸ್ಸು ಹಾರಾಡ್ತಿದೆ '

ಇಷ್ಟನ್ನು ಓದಿದ್ದೆ ಇನ್ನೊಂದೆಡೆ . ಇದರ ಮುಂದೆ ಇಲ್ಲಿ ಇದೆ .....

ಈ ಸಂವಾದವನ್ನು ಝೆನ್ ಶ್ರೇಷ್ಠ ಮುಮೋನ್ ಹೀಗೆ ವಿವರಿಸ್ತಾನೆ .
"ಬಾಯಿ ಬಿಟ್ಟರೆ ಎಲ್ಲರೂ ತಪ್ಪು ಮಾತಾಡ್ತಾರೆ"

೯) 'ಎಲ್ಲ ಕಾಲಕ್ಕೂ ಬರುವ ಕತೆಗಳು ' ಇದು ನ್ಯಾಶನಲ್ ಬುಕ್ ಟ್ರಸ್ಟ್ ನ ಪುಸ್ತಕ . ಮಕ್ಕಳಿಗಾಗಿ ಪುರಾಣಗಳಿಂದ ಆಯ್ದ ಕತೆಗಳನ್ನು ಒಳ್ಳೆಯ ಮುದ್ರಣದಲ್ಲಿ ಕೊಟ್ಟಿದ್ದಾರೆ . ಹೇಳುವ ರೀತಿಯೂ ಚೆನ್ನಾಗಿದೆ. ಈಗಾಗಲೇ ಗೊತ್ತಿದ್ದ ಸತ್ಯವಾನ್ ಸಾವಿತ್ರಿಯ ಕತೆಯನ್ನು ಇಲ್ಲಿಯ ವಿಶಿಷ್ಟ ಶೈಲಿಯಲ್ಲಿ ಓದಿ ಸಂತಸವಾಯಿತು. ಸಾವನ್ನು ಗೆಲ್ಲುವ ಶಕ್ತಿ ಪ್ರೇಮದಲ್ಲಿದೆ ಅಂತ ಈ ಕತೆಯಲ್ಲಿ ಸಾವಿತ್ರಿ ಹೇಳಿದ್ದಾಳೆ.

೧೦) ದಂಗೆಯ ಮುಂಚಿನ ದಿನಗಳು - ಪ್ರಸನ್ನ ಅವರ ನಾಟಕ . ಅಕ್ಷರ ಪ್ರಕಾಶನದ್ದು . ಬ್ರಿಟಿಶರು ಕುತಂತ್ರದಿಂದ ಇಲ್ಲಿಯ ರಾಜ್ಯಗಳನ್ನು ನುಂಗಿ ನೀರು ಕುಡಿಯುತ್ತಿರಬೇಕಾದರೆ , ರಾಜರು , ಜಹಗೀರುದಾರರು ಐಷಾರಾಮದಲ್ಲಿ , ಜನಸಾಮಾನ್ಯರು ಯಾರು ಆಳಿದರೆ ನಮಗೇನು ಎಂದು ಉದಾಸೀನವಾಗಿರುವುದನ್ನು ಚಿತ್ರಿಸುತ್ತದೆ .

ಅಂದ ಹಾಗೆ ಈ ಸಲದ ಮಯೂರದಲ್ಲಿ ... ಹೀಗಿದೆ
"ಇಂಟರ್ನೆಟ್ ಬಂದು ಪುಸ್ತಕದ ಯುಗ ಮುಗಿಯಿತು ಎಂದು ಕೆಲವರು ಹೇಳುತ್ತಾರೆ . ನನ್ನ ದೃಷ್ಟಿಯಲ್ಲಿ ಇಂಟರ್ನೆಟ್ ಎಂಬುದು ಗ್ರಂಥಾಲಯದ ಇನ್ನೊಂದು ರೂಪ . ವೆಬ್ ಸೈಟ್ ಗಳು ಪುಸ್ತಕದ ಕೆಲಸವನ್ನೇ ಇನ್ನೊಂದು ರೂಪದಲ್ಲಿ ಮಾಡುತ್ತಿವೆ. ಇಂಟರ್ನೆಟ್ಟಲ್ಲಾದರೂ ಸರಿ , ಒಟ್ಟಿನಲ್ಲಿ ಓದಬೇಕು , ಜ್ಞಾನಾರ್ಜನೆ ಮಾಡಬೇಕು " .

ಹರಿದಾಸ.ಇನ್ ಗಾಗಿ ದಾಸ ಸಾಹಿತ್ಯ ಸೇರಿಸುವ ನನ್ನ ಪ್ರಯತ್ನ ದಿಂದಾಗಿ ಓದು ಕೊಂಚ ಹಿಂದೆ ಬಿದ್ದಿದೆ ಆದರೂ . ಅಷ್ಟೊಂದೇನೂ ಹಿಂದೆ ಬಿದ್ದ್ದಿಲ್ಲ ; ಅಲ್ಲವೇ ?

ಉಶ್ಶಪ್ಪಾ .......
( ಕೈ ನೋವಾಯ್ತು )

Rating
No votes yet