ಮೌನ ಮಾತಾಡಿತು

ಮೌನ ಮಾತಾಡಿತು

 ಕೌಸಲ್ಯಾ ಸುಪ್ರಜಾ....ದೂರದ ಗುಡಿಯಿಂದ ಕೇಳಿಬರುತ್ತಿದ್ದ ಇಂಪಾದ ಸುಪ್ರಭಾತದ ಅಲೆ ಮುಂಜಾನೆಯ ಸಕ್ಕರೆಯ ನಿದ್ದೆಯನ್ನು ಹೊಡೆದೋಡಿಸಿತು. ಗಡಿಯಾರದ ಮುಳ್ಳು ಆಗಲೇ 5-45 ಕ್ಕೆ ಬಂದು ನಿಂತಿತ್ತು. ಥಟ್ಟನೆ ಎದ್ದವಳೇ ರೆಡಿಯಾಗಿ ವಾಕಿಂಗ್ ಗಾಗಿ ಹೊರಬಂದೆ. ಆಹಾ! ಎಂಥಹ ಸುಂದರ ಮುಂಜಾವು...ಬಹುಷಃ ನನ್ನಂಥ ನಿಸರ್ಗ ಪ್ರೇಮಿಗಳಿಗಾಗಿಯೇ ಈ ಬೆಳಗಿನ ನಡಿಗೆ ಕಂಡುಹಿಡಿದಿರಬೇಕು. ಮೆಲ್ಲನೆ ಗೇಟು ಎಳೆದು ಕೊಂಡವಳೇ ಮುಂದಿರುವ ವಿಶಾಲ ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ಹೊರಳಿ,ಕಿರಿದಾದ ಕಚ್ಚಾರಸ್ತೆ ಬಳಸಿ ಮೆಲ್ಲನೆ ನಡೆಯತೊಡಗಿದೆ. ಅದೇಕೋ ಆ ಪುಟ್ಟ ದಾರಿ ನನ್ನನ್ನು ತುಂಬಾ ಸೆಳೆಯುತ್ತದೆ. ಬಹುಷಃ ಆ ವಾತಾವರಣದಲ್ಲಿ ನನ್ನ ಸುಂದರ ಬಾಲ್ಯ ನೆನಪಿಸುವಂತಹ ವಿಶೇಷತೆಯಿದೆಯೆನ್ನಿಸುತ್ತದೆ. ಥಟ್ಟನೆ ಮೂಗನ್ನು ಮುತ್ತಿದ ಗಬ್ಬು ವಾಸನೆಗೆ ಹೆಜ್ಜೆ ಹಾಕಲಾರದೆ ಕ್ಷಣಕಾಲ ನಿಂತು ಗಮನಿಸಿದೆ.ಓ! ಆಗಲೇ ಈ ಗಟಾರದ ದಂಡೆಯ ಮೇಲೆ ನಿಂತಿದ್ದೇನೆ. ಅದೊಂದು ಊರಿನ ಹೊಲಸನ್ನೆಲ್ಲಾ ಹೊತ್ತುನಿಂತ ತಿಪ್ಪೆಯಂತಿತ್ತು. "ಮಂದಿಗೆ ಮರಾ ಮರಾ ಅನ್ಸಿದ್ರ,ಮಂದಿರೊಕ್ಕಾ ತಿಂದ್ರ,ತಿಪ್ಯಾಗಿನ ಹುಳಾ ಆಗ್ತಾರವ್ವಾ"ಪಕ್ಕದ ಮನೆಯ ಅಜ್ಜಿ ನಿನ್ನೆ ಯಾರಿಗೋ ಹೇಳುತ್ತಿದ್ದ ಮಾತು ನೆನಪಾಯಿತು. ಹಾಗಾದರೆ ನಮ್ಮೂರ ತಿಮ್ಮಪ್ಪಯ್ಯನೇನಾದರೂ ಇದೇ ತಿಪ್ಪೆಯಲ್ಲಿ ಹುಳವಾಗಿ ತೇಲುತ್ತಿರಬಹುದಾ? ಕುತೂಹಲ ತಡೆಯಲಾರದೇ ಆಳದಲ್ಲಿ ಇಣುಕಿದೆ. ಆಗತಾನೇ ಬೆಳಗಾಗುತ್ತಿದ್ದರಿಂದ ಮಬ್ಬುಬೆಳಕಿನಲ್ಲಿ ಏನೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಮತ್ತಷ್ಟು ಕಣ್ಣಗಲಿಸಿ ನೋಡಿದರೆ,ಒಂದು ದೊಡ್ಡಮೂಟೆ ಗಟಾರದ ಬಹುಭಾಗವನ್ನೆಲ್ಲಾ ಆಕ್ರಮಿಸಿತ್ತು.ಏನಿರಬಹುದು? ಅರೆ! ಏನೋ ಅಸ್ಪಷ್ಟ ಆಕಾರವೊಂದು ಮೂಟೆಯ ಒಳಗಿನಿಂದ ಇಣುಕುತ್ತಿದೆ. ಒಂದು ಕ್ಷಣ ಬೆಚ್ಚಿಬಿದ್ದೆ. ಒಂದು ಕೈ ಹೊರಕ್ಕೆ ಬಂದಿರುವದು ಕಾಣಿಸುತ್ತಿತ್ತು.ಆ ಛಳಿಯಲ್ಲೂ ಸಣ್ಣಗೆ ಬೆವರಿದೆ. ದಿನಬೆಳಗಾದರೆ ಪೇಪರ್ ನಲ್ಲಿ ದೊಡ್ಡ ಅಕ್ಷರಗಳಲ್ಲಿ ಭೀತಿ ಹುಟ್ಟಿಸುವಂತೆ ಅಚ್ಚಾಗುವ ಕೊಲೆ ಪ್ರಕರಣಗಳು ಕಣ್ಣುಮುಂದೆ ಹಾದು ಹೋದವು. ಯಾಕೋ ಅಲ್ಲಿ ಒಂದು ಕ್ಷಣ ನಿಲ್ಲಲೂ ಧೈರ್ಯ ಸಾಲದೇ ಅಲ್ಲಿಂದ ಕಾಲ್ಕಿತ್ತೆ.

 ಎಂದಿಗಿಂತ ಬೇಗನೇ ವಾಕಿಂಗ್ ಮುಗಿಸಿದ್ದರಿಂದ ಪೇಪರ್ ಇನ್ನೂ ಬಾಗಿಲಲ್ಲೇ ಇತ್ತು.ಲಗುಬಗೆಯಲ್ಲಿ ಪೇಪರ್ ಅಗಲಿಸಿ ಕಣ್ಣಾಡಿಸಿದರೆ, ಅದೇ ಕೊಳಕು ರಾಜಕಾರಣ ಬಿಟ್ಟರೆ ನಾನು ನಿರೀಕ್ಷಿಸಿದ ಯಾವ ಕೇಸೂ ಕಾಣಸಿಗಲಿಲ್ಲ. ಕೈಗಳು ಯಾಂತ್ರಿಕವಾಗಿ ಕೆಲಸದಲ್ಲಿ ತಲ್ಲೀನವಾದರೂ ತಲೆತುಂಬಾ ಅದೇ ವಿಚಾರ. ಯಾರದಿರಬಹುದು? ಆ ದೇಹವಿಲ್ಲದ ಕೈ?  ಯಾಕೋ ಅದು ಸುಕೋಮಲ ಹೆಣ್ಣಿನ ಕೈಯಂತೆ ಗುಂಡು ಗುಂಡಾಗಿ ಕಾಣುತ್ತಿತ್ತು. ಥೂ! ಯಾವ ಪಾಪಿ ತನ್ನ ತೀಟೆ ತಿರಿಸಿಕೊಂಡು ಆ ಹೆಣ್ಣನ್ನು ಕೊಚ್ಚಿ ಮೂಟೆ ತುಂಬಿದ್ದಾನೋ. ಹೇಗೆ ಹೇಳೋದು?ಈಗಿನ ಹುಡ್ಗೀರೇನು ಕಮ್ಮೀನೇ? ಮನಸ್ಸು ಪಿಸುಗುಟ್ಟಿತು. ಕೆಲಸದಾಕೆ ಮೊನ್ನೆ ಗೋಳಾಡಿದಳಲ್ಲಾ "ಅವ್ವಾರೆ ನಮ್ ಹುಡ್ಗೀಗೇನ್ ಧಾಡಿ ಬಡ್ದೈತಿ ನೋಡ್ರಿ.ಮನ್ಯಾಗಿನ ಒಂದ್ ಕೆಲ್ಸಾ ಮಾಡಾಕ ಒಲ್ಲೆ ಅಂತಾಳ. ಅದೇನೋ ಹುಚ್ಚುಚ್ಚು ಅರಬಿ ಉಟ್ಗೊಂಡು ಗೆಳ್ತ್ಯಾರ ಕೂಡ ಶೋಕಿ ಮಾಡ್ಕೋತ ಅಡ್ಯಾಡ್ತಾಳ್ರೀ,ಆಕಿನ್ನ ನೋಡಿದ್ರ ಹೊಟ್ಟಿ ರುಮ್ ಅಂತೈತ್ರಿ''...ಮತ್ತೆ ಅವಳೇ ಯಾಕಾಗಿರಬಾರದು?ಹಾಗಾಗದಿರಲೆಂದು ಪ್ರಾರ್ಥಿಸಿದೆ. ಯಾಕೋ ಇಷ್ಟು ಹೊತ್ತಾದರೂ ಕೆಲಸದವಳ ಪತ್ತೆಯೇ ಇಲ್ಲ. ದೇವರೇ ಏನೂ ಆಗದಿರಲಿ. ಅಷ್ಟರಲ್ಲಿ ರತ್ನವ್ವ ಬಾಗಿಲು ದೂಗಿಸಿಕೊಂಡು ರಭಸದಿಂದ ಓಳಗೆ ಬಂದಳು. ಅವ್ವಾರ ತಡಾ ಆತ್ರಿ ನಮ್ ಹುಡ್ಗೀ ನೋಡಾಕ ಗಂಡ್ ಬಂದಿತ್ರಿ. ಯಲ್ಲಾ ಮುಗ್ಸಿ ಬರೋ ಮಟಾ ಅಂದ್ರ ಇಷ್ಟ್ ಹೊತ್ತಾತು. ಒಂದು ತರಹ ಸಮಾಧಾನವಾದರೂ ನನ್ನ ಸಮಸ್ಯೆ ಬಗೆಹರಿಯದೆ ಚಡಪಡಿಸಿದೆ. ಕಡೆಯ ಪ್ರಯತ್ನವೆಂಬಂತೆ ಚಪ್ಪಲಿ ಮೆಟ್ಟಿಕೊಂಡು ಮೆಲ್ಲನೆ ಹೊರಬಿದ್ದೆ. ಅಂಜುತ್ತಲೇ ಗಟಾರ ಸಮೀಪಿಸಿದ್ದೆ. ಅಲ್ಲಿ ನಿಜಕ್ಕೂ ಜನ ಅಂದರೆ,ಮುನಿಸಿಪಾಲಿಟಿ ಕೆಲಸಗಾರರು ಜಮಾಯಿಸಿದ್ದರು. ಬಹುಷಃ ಎರಡು ಮೂರು ಜನ ಗಟಾರದಲ್ಲಿ ಇಳಿದಿರಬೇಕು. ಮೇಲೆ ನಿಂತವ ಜೋರಾಗಿ ಸೂಚನೆ ಕೊಡುತ್ತಿದ್ದ. ಅಬ್ಬಾ! ರಹಸ್ಯ ಸ್ಪೋಟವಾಗಲಿದೆ ಈಗ.ಏನಾಶ್ಚರ್ಯ? ಪೋಲೀಸರಿಲ್ಲ,ವರದಿಗಾರರಿಲ್ಲ. ಯಾಕೋ ಏನೋ ಅರ್ಥವಾಗುತ್ತಿಲ್ಲ.ಕೆಳಗಿಳಿದವರು ಮೂಟೆಯನ್ನು ಹಗ್ಗದ ಕೊಕ್ಕೆಗೆ ಸಿಕ್ಕಿಸುವ ಸಾಹಸದಲ್ಲಿದ್ದರು. ಏನಾತ್ರಿ ಅಣ್ಣಾರೆ? ತಡೆಯಲಾರದೇ ಪಕ್ಕದಲ್ಲಿದ್ದ ಕೆಲಸಗಾರರನ್ನು ವಿಚಾರಿಸಿದೆ.``ಥೂ!ಹೊಲಸು ಸೂ...ಮಕ್ಕಳು ಬಾಜೂಕಿನ ಗಾರ್ಡನ್ ಸ್ವಚ್ಛಮಾಡಿ ಅಲ್ಲಿನ ಕಸಾ ಪಸಾ ಒಡಕು ಮೂರ್ತಿಯ ಚೂರು ಎಲ್ಲ ಕಟ್ಟಿ ಇಲ್ಲಿ ಚಲ್ಯಾರ. ಮೋರಿಕಟ್ಟಿ ಸುತ್ತಾ ಮುತ್ತಾ ಮಂದಿ ಬೊಬ್ಬೆ ಹೊಡ್ಯಾಕ್ ಹತ್ಯಾರ್ರೀ" ಗುಡ್ಡದಂತೆ ಕಂಡಿದ್ದು  ಕಡ್ಡಿಯಂತೆ ಕರಗಿಹೋಯ್ತು. ಅಂದರೆ... ನಾನು ನೋಡಿದ್ದು?ಶಿ..ಲಾ..ಬಾ..ಲಿ..ಕೆ..ಯ ಕೈ.!
Rating
No votes yet

Comments

Submitted by ಮಮತಾ ಕಾಪು Sat, 01/12/2013 - 12:41

ರೂಪಕ್ಕ ನಿಮ್ಮ ಲೇಖನವನ್ನು ಓದಿದ ಕೂಡಲೇ " ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು" ಎಂಬ ಗಾದೆ ಮಾತು ನೆನಪಿಗೆ ಬಂತು. ಉತ್ತಮ ನಿರೂಪಣೆ. ಶುಭವಾಗಲಿ.