ಯೇಸು ಜನನ

ಯೇಸು ಜನನ

ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂಬಡಿಕೆ (New Testament) ನಲ್ಲಿ, ಇಂತಹದ್ದೇ ದಿನ ಕ್ರಿಸ್ತ ಹುಟ್ಟಿದ್ದು ಅನ್ನುವುದಕ್ಕೆ ಸರಿಯಾದ ಆಧಾರಗಳಿಲ್ಲವಂತೆ. ಅಲ್ಲದೇ, ಬೈಬಲ್ಲಿನಲ್ಲಿ ವಿವರಿಸಿರುವ ಘಟನೆಗಳನ್ನು ನೋಡಿದರೆ, ಡಿಸೆಂಬರ್ ಕೊನೆಯ ಚಳಿಗಾಲದಲ್ಲಿ ಕ್ರಿಸ್ತ ಹುಟ್ಟಿರುವುದು ಸಾಧ್ಯವಿಲ್ಲವೆಂದೂ, ಆ ದಿನ ವಸಂತದಲ್ಲೋ, ಹೇಮಂತದಲ್ಲೋ ಆಗಿರಬೇಕೆಂದೂ ಅಂತ ಕೆಲವು ಬೈಬಲ್ ವಿದ್ವಾಂಸರ ಅಭಿಪ್ರಾಯ ಕೂಡ ಇದೆ. ಪಂಚಾಗ ನೋಡಿ, ಇಂತಹ ತಿಥಿ ವಾರ ನಕ್ಷತ್ರ ಎಂದು ಬರೆದಿಟ್ಟಿದ್ದರೆ ನೋಡಿ, ಸರಿಯಾಗಿರುತ್ತಿತ್ತು, ಅಲ್ವೇ? ಆ ಸಮಯದಲ್ಲು  ಆಗಸದಲ್ಲಿ ಕಂಡವೆನ್ನಲಾದ ಕೆಲವು ಆಧಾರಗಳಿಂದ ಕ್ರಿಸ್ತ ಹುಟ್ಟಿದ ದಿನವನ್ನು ಸರಿಯಾಗಿ ಹೇಳಲು ಪ್ರಯತ್ನಗಳು ನಡೆದಿವೆಯಾದರೂ, ಇದಮಿತ್ಥಂ ಎಂದು ಒಂದು ತೀರ್ಮಾನಕ್ಕೆ ಬರಲಾಗಿಲ್ಲವಂತೆ.
 



ಅದಿರಲಿ. ನೆನ್ನೆ ನಾನು ಓದುವ ಫೇಸ್ ಬುಕ್ ಬಳಗದಲ್ಲೊಂದು ಪದ್ಯ ಬರೆಯುವ ಸಮಸ್ಯೆ ನೋಡಿದೆ.  ಸಮಸ್ಯೆ ಹೀಗಿತ್ತು.

ಮೇರಿ ಪಡೆದಳೇಸುತನಯನಿಂ ಕೀರ್ತಿಸುಖಂ"

 ಕಂದ ಪದ್ಯದ ಕಡೆಯ ಸಾಲು ಹೀಗೆ ಬರುವಂತೆ ಪದ್ಯವನ್ನು ಮುಗಿಸಿರೆಂಬುದು ಪ್ರಶ್ನೆ.

ಆದರೆ ನನಗೆ ಕಂದವನ್ನು ಬರೆಯಲು ಬರುವುದಿಲ್ಲವಲ್ಲ? ಆದರೇನಾಯಿತು? ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ ಪ್ರಶ್ನೆಯನ್ನೇ ಬದಲಿಸಿ ಅದಕ್ಕೆ ತಮಗೆ ಗೊತ್ತಿರುವ ಉತ್ತರ ಬರೆಯುವ ಹಲವು ವಿದ್ಯಾರ್ಥಿಗಳನ್ನು ನಾವು ನೋಡಿಲ್ಲವೇ? ನಾನೂ ಅದೇ ದಾರಿ ಹಿಡಿದೆ ಅಷ್ಟೇ!

ನನ್ನ ಕೈ ಹಿಡಿದಕ್ಕೆ ಸ್ವಲ್ಪ ದಕ್ಕಿರುವ ಭಾಮಿನಿ ಷಟ್ಪದಿಯಲ್ಲಿ ಈ ಸಮಸ್ಯೆಯನ್ನು ನಾನು ಮುಗಿಸಹೊರಟಿದ್ದರಿಂದ , ಲಲಿತಾ ಕಲ್ಯಾಣಪುರ ಅವರು ಕೊಟ್ಟ ಸಮಸ್ಯೆಯ ಸಾಲನ್ನೇ ಕೊಂಚ ಬದಲಾಯಿಸಿದ್ದಾಯಿತು. ಸದ್ಯ, ವಿಷಯಾಂತರವನ್ನು ಮಾಡಲಿಲ್ಲ ಅನ್ನುವುದೇ ಹೆಚ್ಚಾಯ :) . ನಾನು ಮಾಡಿದ ಪೂರಣ, ಕ್ರಿಸ್ತ ಜನನದ ಬಗ್ಗೆ ಹೀಗೆ:


ಸಾರಬೇಕೆನ್ನುತಲಿ ಶಾಂತಿಯ
ಸಾರವನೆ ಮಿಗೆ ಪೇಳ್ವೆನಾ ಸಂ-
ಸಾರಸಾಗರವನ್ನು ದಾಂಟುವ ದಾರಿ ಮನುಕುಲಕೆ

ತೋರುತ ಪ್ರೀತಿಯನು ಕರುಣಾ-
ಗಾರನೆನಿಸಲು ಕರ್ತ ಬಯಸಲು
ಮೇರಿ ಪಡೆದಳು ಯೇಸು ತನಯನ ಕನ್ನೆಯಾಗಿದ್ದೇ!


 -ಹಂಸಾನಂದಿ

ಕೊ: ಈಚೆಗೆ ನಮ್ಮೂರಿನವರೇ ಆದ ಪ್ರೊ.ವಿ.ನರಹರಿ ಅವರು ಯೇಸುವಿನ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ಯೇಸುಚರಿತೆ ಎಂಬ ಕಾವ್ಯವನ್ನೇ ಬರೆದಿದ್ದಾರೆಂದು ಪತ್ರಿಕೆಯಲ್ಲಿ ಓದಿದೆ. ಅದು ಮನಸ್ಸಿನಲ್ಲಿ ಇದ್ದೋ ಏನೋ, ನನಗೆ ಹೊಳೆದ ಪದ್ಯವೂ ಭಾಮಿನಿಯಲ್ಲೇ ಬಂದಿತು.

ಚಿತ್ರ ಕೃಪೆ: ವಿಕಿಪೀಡಿಯದಿಂದ   ಲಿಯೊನಾರ್ಡೋ ಡಾವಿಂಚಿಯ ಚಿತ್ರಿಸಿದ ಮೇರಿ, ಮತ್ತೆ ಯೇಸು.

Rating
No votes yet

Comments

Submitted by hamsanandi Wed, 12/26/2012 - 00:24

ಸಾರಬೇಕೆನ್ನುತಲಿ ಶಾಂತಿಯ
ಸಾರವನೆ ಮಿಗೆ ಪೇಳ್ವೆನಾ ಸಂ-
ಸಾರಸಾಗರವನ್ನು ದಾಂಟುವ ದಾರಿ ಮನುಕುಲಕೆ
ತೋರುತ ಪ್ರೀತಿಯನು ಕರುಣಾ-
ಗಾರನೆನಿಸಲು ಕರ್ತ ಬಯಸಲು
ಮೇರಿ ಪಡೆದಳು ಯೇಸು ತನಯನ ಕನ್ನೆಯಾಗಿದ್ದೇ!

ಷಟ್ಪದಿ ಸರಿಯಾಗಿ ಕಾಣುತ್ತಿರಲಿಲ್ಲವೆಂದು ಇಲ್ಲಿ ಮತ್ತೆ ಹಾಕಿದ್ದೇನೆ.

Submitted by hamsanandi Wed, 12/26/2012 - 00:46

In reply to by hamsanandi

ಸಾರಬೇಕೆನ್ನುತಲಿ ಶಾಂತಿಯ
ಸಾರವನೆ ಮಿಗೆ ಪೇಳ್ವೆನಾ ಸಂ-
ಸಾರಸಾಗರವನ್ನು ದಾಂಟುವ ದಾರಿ ಮನುಕುಲಕೆ
ತೋರುತ ಪ್ರೀತಿಯನು ಕರುಣಾ-
ಗಾರನೆನಿಸಲು ಕರ್ತ ಬಯಸಲು
ಮೇರಿ ಪಡೆದಳು ಯೇಸು ತನಯನ ಕನ್ನೆಯಾಗಿದ್ದೇ!

Submitted by partha1059 Wed, 12/26/2012 - 13:18

... ಕನ್ನೆಯಾಗಿದ್ದೆ..
ಇಲ್ಲಿ ಕು0ತಿಗು ಮೇರಿಗು ಎ0ತದೋ ಒ0ದು ಹೋಲಿಕೆ ಇದೆ
ಇಬ್ಬರು ಕನ್ನೆಯಾಗಿದ್ದು ಮಕ್ಕಳನ್ನು ಹೆತ್ತವರು, ಅಲ್ಲಿ ಕರ್ಣ‌ ಇಲ್ಲಿ ಏಸು
ಮದುವೆಯಾಗದವರನ್ನ ಕನ್ಯೆ ಎನ್ನುವುದು ಸಾಮಾನ್ಯ ಇಲ್ಲಿ ಮಕ್ಕಳಾದ‌ ಮೇಲು ಕನ್ನೆ ಎನ್ನುವಾಗ‌ ಕನ್ಯೆ ಎನ್ನುವ‌ ಪದದ‌ ಅರ್ಥ‌ ವಿವರಣೆ ಏನೋ ತಿಳಿಯುವದಿಲ್ಲ

ಹುಡುಕು ಪದ: ಕನ್ಯೆ
ದಾಸ ಸಾಹಿತ್ಯ ಕೋಶ

ಕನ್ಯೆ -
ಮೈನೆರೆಯದ ಹೆಣ್ಣು