ರಾಯನ ದಿನಚರಿ - ದಿನ ಒಂದು

ರಾಯನ ದಿನಚರಿ - ದಿನ ಒಂದು

ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು ಗೊತ್ತಾದೀತು? ಅವನು ಇವತ್ತು ಏನು ಮಾಡುತ್ತಿದ್ದಾನೆ ಎನ್ನುವುದಷ್ಟನ್ನೇ ನೋಡೋಣ ಆಯಿತೆ? ಅವನು ಕೇ. ಫ. ಅವರ ಹಾಸ್ಯ ಲೇಖನಗಳಲ್ಲಿನ ಪಾಂಡು ತರಹದ ಮನುಷ್ಯ ಎ೦ದು ನನಗೆ ಅನಿಸುತ್ತದೆ. ( ಆ ಪಾಂಡು ಎಂಥವನು ಅಂತ ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ನಿಮಗೆ ಇನ್ನೊಂದು ದಿನ ತಿಳಿಸುತ್ತೇನೆ) ಅವನು ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ಕುತೂಹಲದ ವಿಷಯ. ದಿನಕ್ಕೆ ಒಮ್ಮೆ ನನಗೆ ಸಿಕ್ಕೇ ಸಿಗುತ್ತಾನೆ. ಆಗ ಅವನಿಂದ ಅವನ ದಿನದ ಕುರಿತು ಮಾಹಿತಿ ಪಡೆಯುತ್ತೇನೆ.

ಯಾವುದೇ ವ್ಯಕ್ತಿಯು ಕಲಿಯುತ್ತ ಇರಬೇಕಂತೆ , ಕಲಿಸುತ್ತಾ ಇರಬೇಕಂತೆ, ಇಲ್ಲವೆ ದುಡಿದು ಹಣ ಗಳಿಸುತ್ತ ಇರಬೇಕಂತೆ. ಅವನೀಗ ಕಲಿಯುವ ಅಗತ್ಯವಿಲ್ಲ, ಹಣಗಳಿಸುವ ಅಗತ್ಯವಿಲ್ಲ, ಹೀಗಾಗಿ ಅವನು ಕಲಿಸಲು ಪ್ರಯತ್ನ ಮಾಡಿದನು. ಬೇರೊಂದು ಊರಿನ ಕಾಲೇಜಿನಲ್ಲಿ ಇತಿಹಾಸ ಕಲಿಯುತ್ತಿರುವ ಕುರುಡು ಹುಡುಗರು ಅವನನ್ನು ಸಂಪರ್ಕಿಸಿದ್ದರು. ಅವರಿಗೆ ಇತಿಹಾಸ ಪಾಠದ ಅಗತ್ಯಇತ್ತು. ಮೊಬೈಲ್ ಮೂಲಕ ಅವರಿಗೆ ಪಾಠ ಹೇಳಬಹುದಿತ್ತು. ಇವನು ಅವರಿಗಾಗಿ ಇತಿಹಾಸ ಪುಸ್ತಕವೊಂದನ್ನು ಕೊಂಡು ತಂದನು . ಆದರೆ ಇಡೀ ಪುಸ್ತಕವನ್ನು ಓದಿ ಹೇಳುವುದು ಕಾರ್ಯಸಾಧುವಲ್ಲ ಎಂದೆನಿಸಿತು. ಇಂಟರ್ನೆಟ್ ನಿಂದ ಹಿಂದಿನ 5 ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಇಳಿಸಿಕೊಂಡು ಪ್ರಶ್ನೆಗಳನ್ನು ಅಧ್ಯಯನ ಮಾಡಿ ಸಂಭಾವ್ಯ ಪ್ರಶ್ನೆಗಳನ್ನು ಗುರುತಿಸಿದ. ಅವರಿಗಾಗಿ ಮೂರುದಿನ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಓದಿ ರೆಕಾರ್ಡ್ ಮಾಡಿ ಮೊಬೈಲ್ ಮೂಲಕ ಅವರಿಗೆ ಕಳಿಸಿದ. ಅವರು ಅವನ್ನು ಮೇಲಿಂದ ಮೇಲೆ ಕೇಳಿ ಇನ್ನೇನು ಬರಲಿರುವ ಪರೀಕ್ಷೆಗೆ ಸಿದ್ಧರಾಗಬಹುದಿತ್ತು. ಯಾಕೋ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಹಾಗಾಗಿ ಈ ಕೆಲಸವನ್ನು ಅವನು ಕೈಬಿಟ್ಟನು! ಅವರಿಂದ ಏನಾದರೂ ಫೋನ್ ಬಂದಾಗ ನೋಡೋಣ ಎಂದು ಅಂದುಕೊಂಡನು.

 

ಇವತ್ತು ಮಧ್ಯಾಹ್ನ ಅವನು ಕೂತ್ಕೊಂಡು ತನ್ನ ದೊಡ್ಡ HD ಟಿವಿಯಲ್ಲಿ ತಾನು ನೋಡಬಹುದಾದ ಟೀವಿ ಸ್ಟೇಶನ್ಗಳನ್ನು ಹೊಂದಿಸಿಕೊಂಡು ಅಂದರೆ ಅವುಗಳನ್ನು ಆಯ್ದುಕೊಂಡು ಒಂದು ಕ್ರಮದಲ್ಲಿ ಜೋಡಿಸಿ ಇಟ್ಟುಕೊಂಡನು. 

 

ಆಮೇಲೆಅವನು ಅರ್ಧ ಓದಿಟ್ಟಿದ್ದ ಎಂ ಎಸ್ ಶ್ರೀರಾಮ್ ಅವರ 'ಭಾಸ್ಕರ್ ರಾಯರ ಕಥೆಗಳು - ನಡೆಯಲಾರದ ದೂರ, ಹಿಡಿಯಲಾರದ ಬಸ್' ಎಂಬ ಪುಸ್ತಕದ ಓದನ್ನು ಮುಂದುವರಿಸಿದ. ಇವತ್ತು ಓದಿದ ಭಾಗವನ್ನು ಹಿಂದೆಂದೋ ಓದಿದ ಹಾಗೆ ಅನಿಸಿತು. ಭಾಸ್ಕರ್ ರಾಯನು 80 ವರ್ಷದ ವೃದ್ಧ. ಅಷ್ಟೇನೂ ಸಾಹಸದ ಜೀವನವನ್ನು ನಡೆಸಿದವನಲ್ಲ. ಇದ್ದಕ್ಕಿದ್ದ ಹಾಗೆ ಒಬ್ಬ ಹೆಂಗಸಿನ ಜೊತೆ ಮಕ್ಕಳಿಗೆ ಹೆಚ್ಚಿನ ವಿವರ ಹೇಳದೆ ಬೇರೊಂದು ಊರಿಗೆ ಹೊರಟು ಬಿಡುತ್ತಾನೆ: ಇತ್ತ ಟಿವಿಯವರಿಗೆ ಮಸಾಲೆ ಸುದ್ದಿ ಆಗುತ್ತದೆ!

 

ಸಂಜೆ ಟಿವಿ ಚಾನೆಲ್ಗಳನ್ನು ಬದಲಿಸುತ್ತಿದ್ದಾಗ ಅವನಿಗೆ ಒಂದು ಹಿಂದಿ ಚಲನಚಿತ್ರ ಚಾನೆಲ್ನಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಅಮೇರಿಕ ಪಡೆಗಳು ಕೊಂದ ಕಥೆಯ ಹಿಂದಿ ಡಬ್ ಆವೃತ್ತಿ ಸಿಕ್ಕಿತು. ಪ್ರೊಜೆಕ್ಟ್ ಜೆರೋನಿಮೋ ಎಂದೆನೋ ಅದರ ಹೆಸರು ಇತ್ತು. ಶುರುವಾಗಿ ಅರ್ಧ ಗಂಟೆ ಆಗಿತ್ತುಆದರೆ ಅಲ್ಲಿಂದ ಅದನ್ನು ನೋಡಿ ಮುಗಿಸಿದ. 9:00 ಗಂಟೆಗೆ 2 ಚಾನೆಲ್ಗಳಲ್ಲಿ ಜೇಮ್ಸ ಬಾಂಡ್ ಸಿನಿಮಾಗಳು ಬರಲಿದ್ದವು ಈ ತನಕ ಒಂದು ಬಾಂಡ್ ಸಿನಿಮಾ ಅನ್ನು ಕೂಡ ಪೂರ್ತಿ ನೋಡಿರಲಿಲ್ಲ. ಇವತ್ತು ಒಂದನ್ನಾದರೂ ನೋಡುವುದೇ ಸೈ ಎಂದು ದಿ ಮ್ಯಾನ್ ವಿಥ್ ದಿ ಗೋಲ್ಡನ್ ಗನ್ ನೋಡಿಯೇ ಮಲಗಿದನಂತೆ .

Rating
Average: 4 (1 vote)