ರಾಯನ ದಿನಚರಿ

ಗೆಳೆಯ ರಾಯ ನಿವೃತ್ತನಾಗಿ ತನ್ನ ಊರು ಸೇರಿಕೊಂಡಿದ್ದ. ಅದಕ್ಕೂ ಮೊದಲು ನನಗೆ ಆಗೀಗ ಭೆಟ್ಟಿಯಾಗುತ್ತಿದ್ದನಷ್ಟೇ. ಆ ಕುರಿತು ಕೆಲ ಸಂಗತಿಗಳನ್ನು ಸುಮಾರು ಮೂರು ವರ್ಷಗಳ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈಗ ಬಹಳ ದಿನಗಳ ನಂತರ ನಮ್ಮ ಊರಿಗೆ ಬಂದಿದ್ದ . ನನಗೆ ಅವನ ಭೆಟ್ಟಿಯಾಯಿತು.  

ಈಚಿನ ದಿನಗಳಲ್ಲಿ ಈತ ಏನು ಮಾಡಿಕೊಂಡಿದ್ದಾನೆ ಎಂಬ ನನ್ನ ಕುತೂಹಲವನ್ನು ತಣಿಸಿದ್ದು ಹೀಗೆ - ಇವನಿಗೆ Star Maker ಮತ್ತು Smule ಎಂಬ ಮೊಬೈಲ್ ಆ್ಯಪ್ ಗಳ ಪರಿಚಯ ಆಯಿತಂತೆ. ಅವುಗಳು ಹಾಡುಗಳ ಹುಚ್ಚು ಇರುವವರಿಗೆ ನೆರವಾಗುವ ಆ್ಯಪ್ ಗಳು. ಜನಪ್ರಿಯ ಹಾಡುಗಳ ಹಿನ್ನೆಲೆ ಸಂಗೀತ ಒದಗಿಸಿ ಆ ಹಾಡಿನ ಸಾಹಿತ್ಯ ಒದಗಿಸಿ ಯಾವಾಗ ಅದರ ಸಾಲುಗಳನ್ನು ಹಾಡಬೇಕು, ಯಾವಾಗ ನಿಲ್ಲಿಸಬೇಕು ಎಂದು ಸೂಚಿಸುತ್ತವಂತೆ, ಕಮೆಂಟ್ ಗಳನ್ನು ತೋರಿಸುತ್ತವಂತೆ. (ಅವು ಬಹುಶಃ ಸುಳ್ಳು ಎಂದು ರಾಯನ ಅನಿಸಿಕೆ). ಅಲ್ಲಿ ಕೆಲವರು ಅರ್ಧಂಬರ್ಧ ಹಾಡಿ ಉಳಿದ ಭಾಗವನ್ನು ಇತರರಿಗೆ ಹಾಡಿ ಪೂರ್ಣಗೊಳಿಸಲು ಬಿಡುತ್ತಾರಂತೆ. ಅಲ್ಲಿ ಅವನಿಗೆ ತುಂಬ ಚೆನ್ನಾಗಿ ಹಾಡುವವರ ಪರಿಚಯ ಆಯಿತಂತೆ . ಅವರುಗಳು ಹಾಡಿದ ತುಂಬಾ ಹಾಡುಗಳನ್ನು ಇವನು ತನ್ನ ಸಾಧಾರಣ ದನಿಯಲ್ಲಿ ಆದರೆ ಮೂಲದಂತೆ ಹಾಡಿ ಪೂರ್ಣಗೊಳಿಸಿ ಡೌನ್ ಲೋಡ್ ಮಾಡಿ ತನ್ನ ಕೇಳುವ ಸಂತೋಷಕ್ಕೆ ಇಟ್ಟುಕೊಂಡಿದ್ದಾನಂತೆ . ಅವುಗಳನ್ನು ನನ್ನೊಂದಿಗೆ ರಾಯ ಹಂಚಿಕೊಂಡಿದ್ದಾನೆ.  

ನನಗೂ ಅವು ಇಷ್ಟವಾದವು . ಅಲ್ಲಿ ಒಬ್ಬ ಗಾಯಕಿ - ಆಕೆಯ ಹೆಸರು ಮಂಜುಳಾ ಅಶೋಕ್ ಅಂತ - ಯಂತೂ ಮೂಲ ಗಾಯಕಿಯರಿಗಿಂತ ಚೆನ್ನಾಗಿ ಹಾಡಿದ್ದಾರೆ. ಆಕೆಯ ಸುಮಾರು 50 ಹಾಡುಗಳನ್ನು ನಮ್ಮ ರಾಯ ಪೂರ್ಣಗೊಳಿಸಿದ್ದಾನೆ !

 ಅಂತೆಯೇ ಅವನು ಸುಮಾರು 300 ಹಾಡುಗಳನ್ನು ಆಕೆಯ ಮತ್ತು ಇತರ ಗಾಯಕಿಯರ ಜತೆ ಹಾಡಿಕೊಂಡಿದ್ದಾನಂತೆ. ಆ ಇತರ ಗಾಯಕಿಯರ ಹೆಸರುಗಳನ್ನೂ ಅವನು ಹೇಳಿದ. 2023ರ ಇಡೀ ವರುಷ ಇದರಲ್ಲೇ ಕಳೆದನಂತೆ. ಆದರೆ ಆ ಬಗ್ಗೆ ಸಂತೋಷ ಸಂತೃಪ್ತಿ ಇದೆಯಂತೆ. ಮನೆಯಿಂದ ಹೊರಬಿದ್ದು ವಾಕಿಂಗ್ ಹೋಗುವಾಗಲೆಲ್ಲ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಈ ಹಾಡುಗಳನ್ನು ಕೇಳುತ್ತ ಸ್ವರ್ಗಸುಖ ಅನುಭವಿಸುತ್ತಾನಂತೆ. 

ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು. 

 

ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆಸಿ ಇಟ್ಟಿದ್ದಳು - ಮುಂದೆ ಗಿಡಗಳನ್ನು ಅವುಗಳಲ್ಲಿ ಹಚ್ಚುವ ಸಲುವಾಗಿ. ಅವನ್ನು ಕೂತು ಪೇಂಟ್ ಕೆರೆದು ಕೊಟ್ಟನಂತೆ. 

 

 ಎಂ ಎಸ್ ಶ್ರೀರಾಮ ಅವರ 'ಭಾಸ್ಕರ್ ರಾಯರ ಕಥೆಗಳು - ನಡೆಯಲಾರದ ದೂರ, ಹಿಡಿಯಲಾರದ ಬಸ್' ಎಂಬ ಪುಸ್ತಕದ ಓದನ್ನುಮುಂದುವರಿಸಿ ಅದನ್ನು ಮುಗಿಸಿದನು. ಅಷ್ಟೇನೂ ಸಾಹಸಿಯಲ್ಲದ 80ರ ವೃದ್ಧನು - ಇವನ ಹೆಸರೇ ಭಾಸ್ಕರರಾಯ - ಏಕಾಏಕಿ ಇನ್ನೊಬ್ಬ ಹೆಂಗಸಿನೊಂದಿಗೆ ಕೆಲ ಕಾಲ ನಾಪತ್ತೆ ಆದ ಕತೆಯು ಧಾರಾವಾಹಿ ಆಗಿರುವುದು ಮುನ್ನುಡಿಯಿಂದ ತಿಳಿದು ಯೂಟ್ಯೂಬ್ನಲ್ಲಿಹುಡುಕಿದಾಗ ನಿತ್ಯೋತ್ಸವ ಧಾರಾವಾಹಿಯ ಮೊದಲ ಭಾಗ ಸಿಕ್ಕಿತು. ಅಯ್ಯೋ ಎಷ್ಟೊಂದು ನಿಧಾನ ! ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾಡಿದ್ದಂತೆ . 64 ಎಪಿಸೋಡ್ ಗಳಂತೆ. ಜನಪ್ರಿಯ ಆಗಿತ್ತಂತೆ . ಯಾವ ಕಥೆಯನ್ನು ಇದು ಆಧರಿಸಿದೆಯೋ ಅದು ಇರುವುದು ಐವತ್ತೇ ಪುಟಗಳು . ಟಿವಿ ಧಾರಾವಾಹಿಯಲ್ಲಿ ಅನಂತನಾಗ್ ಮತ್ತು ವಿನಯಾ ಪ್ರಸಾದ್ ಪ್ರಮುಖ ಪಾತ್ರಗಳು .

 

ಆ ಪುಸ್ತಕದಲ್ಲಿ ಅದೇ ಭಾಸ್ಕರರಾಯನ ಇನ್ನೊಂದು ಕಥೆ ಚೆನ್ನಾಗಿತ್ತು. ಹೈದರಾಬಾದಿನಲ್ಲಿ ವಾಕಿಂಗ್ ಹೋದ ಇದೇ ಭಾಸ್ಕರರಾಯನು ಒಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗುವುದರಿಂದ ಆರಂಭವಾಗುವ ಕತೆಯು ಈ ಮೊದಲು ಹೇಳಿದ ಕತೆಯ ಹಾಗೆ ವಾಸ್ತವಿಕವೂ ತುಂಬ ರೋಚಕವೂ ಆಗಿತ್ತು. ನಿಜ ಜೀವನದ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಪಾತ್ರಗಳಾಗಿ ಮಾಡಿಕೊಂಡು ತುಂಬ ರೋಚಕವಾದ ಕತೆಗಳನ್ನು ಯಾವುದೋ ಪುಸ್ತಕದಲ್ಲಿ ಈ ಹಿಂದೆ ಓದಿದ ನೆನಪು ಅವನಿಗೆ ಆಯಿತು. ಇದೇ ಲೇಖಕರು ಬರೆದ ಪುಸ್ತಕ ಅದು ಆಗಿರಬಹುದು 

 

ಆಮೇಲೆ ಮಾರ್ಚಿನ ತುಷಾರ ವನ್ನು ಓದಿ ಮುಗಿಸಿದ. ಅದರಲ್ಲೂ ಅದೇ ಎಂಎಸ್ ಶ್ರೀರಾಮ್ ಅವರ ಒಂದು ಹೊಸ ಕಥೆಯಿತ್ತು ಪರವಾಗಿಲ್ಲ ಅನ್ನಿ ಒಂದು ಚೂರು ಮಯೂರ ನೋಡಿದ. ಆಮೇಲೆ ಟಿವಿ ರಿಮೋಟ್ ಅನ್ನು ಕೈಗೆ ತೆಗೆದುಕೊಂಡ. 

 

ಯಾವುದೋ ಚಾನೆಲ್ ನಲ್ಲಿ 6 ಗಂಟೆಗೆ ಬಿಗ್ ಬಾಸ್ ಕನ್ನಡದ ಕರ್ಟನ್ ರೇಸರ್ ಇತ್ತು. ಈ ತನಕ ಬಿಗ್ಬಾಸ್ ನೋಡಿರದ ಅವನು ಬಿಗ್ ಬಾಸ್ ಅಂದ್ರೆ ಏನು ನೋಡುವ ಅಂದುಕೊಂಡ.. ಅದೇ ಸಮಯಕ್ಕೆ ಇನ್ನೊಂದುಕಡೆ ಅವನೇ ಶ್ರೀಮನ್ನಾರಾಯಣ ಆರಂಭ ಆಗುವುದಿತ್ತು. ಹಿಂದೆ ನೋಡಿದ್ದನು. ಒಮ್ಮೆ ನೋಡಿದ್ದನ್ನು ಇನ್ನೊಮ್ಮ ನೋಡಲು ಅದು ಎಷ್ಟೇ ಚೆನ್ನಾಗಿರಲಿ, ಮನಸ್ಸು ಬರುವುದಿಲ್ಲ. ಇನ್ನೊಂದು ಚಾನೆಲ್ಲಲ್ಲಿ ಜೇಮ್ಸ್ ಬಾಂಡ್ ಸಿನಿಮಾ - ಸ್ಕೈ ಫಾಲ್ ಶುರುವಾಯಿತು.. ಅದನ್ನೇ ನೋಡುತ್ತ ನಡುನಡುವೆ ಬಿಗ್ ಬಾಸ್ ನೋಡಲಾರಂಭಿಸಿದ. 

 

ಕಾರಣವಿಲ್ಲದೆ ಬೇಜಾರಾಗಿ, ತಯಾರಾಗಿ ಮನೆಯಿಂದ ಹೊರಬಂದು ಹತ್ತಿರದ ಒಂದು ಸಣ್ಣ ಗಿರಿಯನ್ನು ಏರಿ ಇಳಿದು ಬಂದನು. ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದ ಯಕ್ಷಗಾನದ ಹಾಡುಗಳನ್ನು ಆ ಸಮಯದಲ್ಲೇ ಕೇಳಿದನು. ಇಷ್ಟೊಂದು ಜನ ಲೋಕದಲ್ಲಿ ಇದ್ದಾರಲ್ಲ , ಎಲ್ಲವೂ ಬೇಜಾರಾದಾಗ ಏನು ಮಾಡುತ್ತಾರೆ ಎ೦ದು ವಿಚಾರ ಮಾಡುತ್ತ ಮನೆಗೆ ಮರಳಿದನು. ಸದ್ಯ ತಾನಾದರೂ ಎಷ್ಟೊಂದು ಒಳ್ಳೆಯ ಹಾಡು, ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ, ಟೀವಿಯಲ್ಲಿ ಚಾನೆಲ್ ಗಳಿವೆ, ಯೂಟ್ಯೂಬ್ ಇವೆ. ಎಷ್ಟೆಲ್ಲ ರೇಡಿಯೋ ಸ್ಟೇಷನ್ ಇವೆ. ಸುಲಭವಾಗಿ ಬೇಜಾರು ಕಳೆದುಕೊಳ್ಳಬಹುದು ಎ೦ದು ಸಮಾಧಾನಪಟ್ಟುಕೊಂಡನು. 

 

ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು ಗೊತ್ತಾದೀತು? ಅವನು ಇವತ್ತು ಏನು ಮಾಡುತ್ತಿದ್ದಾನೆ ಎನ್ನುವುದಷ್ಟನ್ನೇ ನೋಡೋಣ ಆಯಿತೆ? ಅವನು ಕೇ. ಫ. ಅವರ ಹಾಸ್ಯ ಲೇಖನಗಳಲ್ಲಿನ ಪಾಂಡು ತರಹದ ಮನುಷ್ಯ ಎ೦ದು ನನಗೆ ಅನಿಸುತ್ತದೆ. ( ಆ ಪಾಂಡು ಎಂಥವನು ಅಂತ ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ನಿಮಗೆ ಇನ್ನೊಂದು ದಿನ ತಿಳಿಸುತ್ತೇನೆ) ಅವನು ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ಕುತೂಹಲದ ವಿಷಯ. ದಿನಕ್ಕೆ ಒಮ್ಮೆ ನನಗೆ ಸಿಕ್ಕೇ ಸಿಗುತ್ತಾನೆ. ಆಗ ಅವನಿಂದ ಅವನ ದಿನದ ಕುರಿತು ಮಾಹಿತಿ ಪಡೆಯುತ್ತೇನೆ.

ಯಾವುದೇ ವ್ಯಕ್ತಿಯು ಕಲಿಯುತ್ತ ಇರಬೇಕಂತೆ , ಕಲಿಸುತ್ತಾ ಇರಬೇಕಂತೆ, ಇಲ್ಲವೆ ದುಡಿದು ಹಣ ಗಳಿಸುತ್ತ ಇರಬೇಕಂತೆ. ಅವನೀಗ ಕಲಿಯುವ ಅಗತ್ಯವಿಲ್ಲ, ಹಣಗಳಿಸುವ ಅಗತ್ಯವಿಲ್ಲ, ಹೀಗಾಗಿ ಅವನು ಕಲಿಸಲು ಪ್ರಯತ್ನ ಮಾಡಿದನು. ಬೇರೊಂದು ಊರಿನ ಕಾಲೇಜಿನಲ್ಲಿ ಇತಿಹಾಸ ಕಲಿಯುತ್ತಿರುವ ಕುರುಡು ಹುಡುಗರು ಅವನನ್ನು ಸಂಪರ್ಕಿಸಿದ್ದರು. ಅವರಿಗೆ ಇತಿಹಾಸ ಪಾಠದ ಅಗತ್ಯಇತ್ತು. ಮೊಬೈಲ್ ಮೂಲಕ ಅವರಿಗೆ ಪಾಠ ಹೇಳಬಹುದಿತ್ತು. ಇವನು ಅವರಿಗಾಗಿ ಇತಿಹಾಸ ಪುಸ್ತಕವೊಂದನ್ನು ಕೊಂಡು ತಂದನು . ಆದರೆ ಇಡೀ ಪುಸ್ತಕವನ್ನು ಓದಿ ಹೇಳುವುದು ಕಾರ್ಯಸಾಧುವಲ್ಲ ಎಂದೆನಿಸಿತು. ಇಂಟರ್ನೆಟ್ ನಿಂದ ಹಿಂದಿನ 5 ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಇಳಿಸಿಕೊಂಡು ಪ್ರಶ್ನೆಗಳನ್ನು ಅಧ್ಯಯನ ಮಾಡಿ ಸಂಭಾವ್ಯ ಪ್ರಶ್ನೆಗಳನ್ನು ಗುರುತಿಸಿದ. ಅವರಿಗಾಗಿ ಮೂರುದಿನ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಓದಿ ರೆಕಾರ್ಡ್ ಮಾಡಿ ಮೊಬೈಲ್ ಮೂಲಕ ಅವರಿಗೆ ಕಳಿಸಿದ. ಅವರು ಅವನ್ನು ಮೇಲಿಂದ ಮೇಲೆ ಕೇಳಿ ಇನ್ನೇನು ಬರಲಿರುವ ಪರೀಕ್ಷೆಗೆ ಸಿದ್ಧರಾಗಬಹುದಿತ್ತು. ಯಾಕೋ ಅವರಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಹಾಗಾಗಿ ಈ ಕೆಲಸವನ್ನು ಅವನು ಕೈಬಿಟ್ಟನು! ಅವರಿಂದ ಏನಾದರೂ ಫೋನ್ ಬಂದಾಗ ನೋಡೋಣ ಎಂದು ಅಂದುಕೊಂಡನು.

 

ಇವತ್ತು ಮಧ್ಯಾಹ್ನ ಅವನು ಕೂತ್ಕೊಂಡು ತನ್ನ ದೊಡ್ಡ HD ಟಿವಿಯಲ್ಲಿ ತಾನು ನೋಡಬಹುದಾದ ಟೀವಿ ಸ್ಟೇಶನ್ಗಳನ್ನು ಹೊಂದಿಸಿಕೊಂಡು ಅಂದರೆ ಅವುಗಳನ್ನು ಆಯ್ದುಕೊಂಡು ಒಂದು ಕ್ರಮದಲ್ಲಿ ಜೋಡಿಸಿ ಇಟ್ಟುಕೊಂಡನು. 

 

ಆಮೇಲೆಅವನು ಅರ್ಧ ಓದಿಟ್ಟಿದ್ದ ಎಂ ಎಸ್ ಶ್ರೀರಾಮ್ ಅವರ 'ಭಾಸ್ಕರ್ ರಾಯರ ಕಥೆಗಳು - ನಡೆಯಲಾರದ ದೂರ, ಹಿಡಿಯಲಾರದ ಬಸ್' ಎಂಬ ಪುಸ್ತಕದ ಓದನ್ನು ಮುಂದುವರಿಸಿದ. ಇವತ್ತು ಓದಿದ ಭಾಗವನ್ನು ಹಿಂದೆಂದೋ ಓದಿದ ಹಾಗೆ ಅನಿಸಿತು. ಭಾಸ್ಕರ್ ರಾಯನು 80 ವರ್ಷದ ವೃದ್ಧ. ಅಷ್ಟೇನೂ ಸಾಹಸದ ಜೀವನವನ್ನು ನಡೆಸಿದವನಲ್ಲ. ಇದ್ದಕ್ಕಿದ್ದ ಹಾಗೆ ಒಬ್ಬ ಹೆಂಗಸಿನ ಜೊತೆ ಮಕ್ಕಳಿಗೆ ಹೆಚ್ಚಿನ ವಿವರ ಹೇಳದೆ ಬೇರೊಂದು ಊರಿಗೆ ಹೊರಟು ಬಿಡುತ್ತಾನೆ: ಇತ್ತ ಟಿವಿಯವರಿಗೆ ಮಸಾಲೆ ಸುದ್ದಿ ಆಗುತ್ತದೆ!

 

ಸಂಜೆ ಟಿವಿ ಚಾನೆಲ್ಗಳನ್ನು ಬದಲಿಸುತ್ತಿದ್ದಾಗ ಅವನಿಗೆ ಒಂದು ಹಿಂದಿ ಚಲನಚಿತ್ರ ಚಾನೆಲ್ನಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಅಮೇರಿಕ ಪಡೆಗಳು ಕೊಂದ ಕಥೆಯ ಹಿಂದಿ ಡಬ್ ಆವೃತ್ತಿ ಸಿಕ್ಕಿತು. ಪ್ರೊಜೆಕ್ಟ್ ಜೆರೋನಿಮೋ ಎಂದೆನೋ ಅದರ ಹೆಸರು ಇತ್ತು. ಶುರುವಾಗಿ ಅರ್ಧ ಗಂಟೆ ಆಗಿತ್ತುಆದರೆ ಅಲ್ಲಿಂದ ಅದನ್ನು ನೋಡಿ ಮುಗಿಸಿದ. 9:00 ಗಂಟೆಗೆ 2 ಚಾನೆಲ್ಗಳಲ್ಲಿ ಜೇಮ್ಸ ಬಾಂಡ್ ಸಿನಿಮಾಗಳು ಬರಲಿದ್ದವು ಈ ತನಕ ಒಂದು ಬಾಂಡ್ ಸಿನಿಮಾ ಅನ್ನು ಕೂಡ ಪೂರ್ತಿ ನೋಡಿರಲಿಲ್ಲ. ಇವತ್ತು ಒಂದನ್ನಾದರೂ ನೋಡುವುದೇ ಸೈ ಎಂದು ದಿ ಮ್ಯಾನ್ ವಿಥ್ ದಿ ಗೋಲ್ಡನ್ ಗನ್ ನೋಡಿಯೇ ಮಲಗಿದನಂತೆ .