ರಾಹು ಕೇತು ಕಾಟ - ಭಾಗ ೧

ರಾಹು ಕೇತು ಕಾಟ - ಭಾಗ ೧

ನಮ್ಮಲ್ಲಿ ಅನೇಕರಿಗೆ, ಈ ಗ್ರಹಣಗಳು ಬಂತು ಅಂದ್ರೆ, ಬಹಳ ಭಯ. ಗ್ರಹಣದ ಸಮಯದಲ್ಲಿ ಏನೂ ತಿನ್ನಬಾರದು ಅನ್ನೋವರು ಒಂದಷ್ಟಾದರೆ, ಮಾಡಿಟ್ಟ ಅಡಿಗೆನೆಲ್ಲ ಎಸೆಯೋರು ಒಂದಷ್ಟು. ಇನ್ನು, ಮನೆಯಲ್ಲಾರಾದರು ಬಸುರಿ ಹೆಂಗಸಿದ್ದರಂತೂ ಸರಿಯೇ ಸರಿ. ಕಿಟಕಿ ಬಾಗಿಲು ಎಲ್ಲ ಹಾಕಿ, ಒಂಚೂರೂ ಬೆಳಕು ಮನೇ ಒಳಗೇ ಬರದೇ ಇರೋ ಹಾಗೆ ಕೂತ್ಕೊಳೋ ಸ್ಥಿತಿ. ಈಗ್ಲೇನಾರೂ ಬದ್ಲಾಗಿದ್ರೆ ನಾಕಾಣೆ. ನನ್ನ ನೆನಪುಗಳೇ ಔಟ್ ಡೇಟೆಡ್ ಅಂದ್ಕೊಂಡು ಸುಮ್ನಾಗಬೇಕಷ್ಟೆ.ಅದನಾದ್ರೂ ಇರಲಿ, ಸುಮ್ನೆ ವಿಷಯಕ್ಕೆ ಬರೋದಕ್ಕೆ ಮೊದಲೆ ನೆನಪಾದದ್ದನ್ನ ಹೇಳಿದೆ ಅಷ್ಟೆ.

೧೯೮೦, ಫೆಬ್ರವರಿ ಹದಿನಾರನೇ ತಾರೀಖು ಒಂದು ಸೂರ್ಯಗ್ರಹಣ ಆಗಿತ್ತು. ಸೂರ್ಯ ಗ್ರಹಣ ಅನ್ನೋದೇನೂ ಅಂತಹ ಅಪರೂಪದ ವಿಷಯ ಅಲ್ಲ ಆ ಸಲ. ಆದ್ರೆ, ಆ ಗ್ರಹಣ ಕರ್ನಾಟಕಕ್ಕೆ ವಿಶೇಷವಾಗಿತ್ತು. ಅಂದ್ರೆ, ಅದೊಂದು ಪೂರ್ಣಗ್ರಹಣ - ಮತ್ತೆ ಪೂರ್ಣತೆಯ ಹಾದಿ ಕರ್ನಾಟಕದಲ್ಲಿ ಹಾದುಹೋಗಿತ್ತು. ಕಾರವಾರದಿಂದ ರಾಯಚೂರಿನವರೆಗೆ ಮಧ್ಯಾಹ್ನ ಮೂರು ಗಂಟೇ ಹೊತ್ಗೆ ಸೂರ್ಯ ಪೂರ್ತಿ ಕಾಣೆಯಾಗಿದ್ದ ಒಂದು ಎರಡುಮೂರು ನಿಮಿಷ. ನನ್ನ ದುರದೃಷ್ಟ ಅಂದ್ರೆ, ನಾನು ಈ ದಾರಿಲಿ ಬರೋ ಯಾವ ಊರಲ್ಲೂ ಇರಲಿಲ್ಲ. ಆದ್ರೆ ನಮ್ಮೂರಲ್ಲೂ ಸುಮಾರು ೯೩% ಗ್ರಹಣ ಆಗಿತ್ತು. ಅದಕ್ಕೇ ಸಂತೋಷ ಪಡ್ಬೇಕಾಯ್ತು ನಾನು. ಆದ್ರೆ, ಅಲ್ಲಿಂದ ಇಪ್ಪತ್ತೆಂಟು ವರ್ಷ ಆದ್ರೂ, ೯೩% ಆಗಿರೋ ಇನ್ನೊಂದು ಗ್ರಹಣ ನನಗೆ ಸಿಕ್ಕಿಲ್ಲ ಅಂದ್ರೆ, ನಿಮಗ್ಗೊತ್ತಾಗತ್ತೆ ಈ ಗ್ರಹಣಗಳನ್ನ ಅಷ್ಟು ನಿಸೂರಾಗಿ ನೋಡ್ದೇ ಬಿಟ್ಬಿಡಬಾರದು ಅಂತ.

ನಮ್ಮೂರಲ್ಲಿ ನಮ್ಮ ಪಕ್ಕದ ಮನೆಯಲ್ಲೇ ಒಬ್ಬರು ಜ್ಯೋತಿಷಿ ಇದ್ರು. ಯುಗಾದಿ ದಿನವೇ ಪಂಚಾಂಗ ಶ್ರವಣ ಮಾಡೋ ಪರಿಪಾಠ ಅವರ್ದು. ಸರಿ, ಪಕ್ಕದಲ್ಲೇ ಇದ್ದರಲ್ಲ, ನಾವೂ ಎಲ್ಲ ಹೋಗೋದು ನಮ್ಮ ಪರಿಪಾಠ. ನೆರೆ-ಹೊರೆಯವರ ಜೊತೆ ಸ್ವಲ್ಪ ಒಳ್ಳೇ ಸಂಬಂಧ :೦) ಇಟ್ಕೊಳೋದು ಹಲವು ದೃಷ್ಟಿಯಲ್ಲಿ ಅಗತ್ಯ ಅಲ್ವೇ ;) ? ಸರಿ ಹೋಗಿದ್ವಿ. ಮಾಮೂಲಿನ ಹಾಗೆ ನಡೀತಿತ್ತು - ರಾಶಿಫಲ, ಮಳೆ, ಬೆಳೆ ಎಲ್ಲ. ಕೊನೇಗೆ ವರ್ಷದಲ್ಲಿ ಆಗೋ ಗ್ರಹಣಗಳ ಬಗ್ಗೆ ಹೇಳಹೊರಟರು

"ಮಾಘ ಅಮಾವಾಸ್ಯೆ ಫೆಬ್ರವರಿ ೧೬ - ಆವತ್ತ್ತು ಕೇತುಗ್ರಸ್ತ ಸೂರ್ಯಗ್ರಹಣ ....." ಅಂತ ಹೇಳೋವಾಗ ನಾನು ಬಾಯಿ ಹಾಕ್ದೆ.

"ಕೇತುಗ್ರಸ್ತ ಅಂದ್ರೇನು?"

ಚಿಕ್ಕಹುಡುಗ ಒಬ್ಬ ಮಾತಿನ ನಡುವೆ ತಲೆ ಹಾಗಿದ್ದು, ಅವರಿಗೆ ಹಿಡಿಸ್ಲಿಲ್ಲ ಅನ್ನೋದು ಅವರ ಮುಖದಲ್ಲೇ ಕಾಣಿಸ್ತು - "ನಿಂಗೆ ಅವೆಲ್ಲ ಗೊತ್ತಾಗಲ್ಲ, ಬಾಯ್ಮುಚ್ಕೊಂಡು ಸುಮ್ಮನಿರು" ಅನ್ನೋದನ್ನ, ಬಹುಶಃ ಬೇರೆ ಪದಗಳಲ್ಲಿ ಹೇಳಿ ನನ್ನ ಬಾಯಿ ಮುಚ್ಚಿಸಿದರು.

ಸರಿ. ಆಗ ಸುಮ್ಮನಾದೆ. ಆದ್ರೆ, ಅದೇನು ಅಂತ ತಿಳ್ಕೋಳೋತನಕ ಸುಮ್ನಾಗ್ಲಿಲ್ಲ ನಾನು. ಆಗೇನು ಕಂಪ್ಯೂಟರ್, ಇಂಟರ್ನೆಟ್, ವಿಕಿಪಿಡಿಯಾ ಇದ್ದ ಕಾಲವೇ? ಎಲ್ಲೋ ಹೋಗಿ, ಏನೋ ಓದಿ ಒಂದಷ್ಟು ವಿಷ್ಯ ತಿಳ್ಕೊಂಡೆ.

ಆಮೇಲೆ ಅವರು ಹಾಗೆ ಹೇಳಿದ್ದು ಎಷ್ಟು ಒಳ್ಳೇದಾಯ್ತು ಅನ್ನಿಸ್ತು. ಯಾಕೆ ಗೊತ್ತಾ? ನಾವಾಗೇ ಸಮುದ್ರದ ಆಳಕ್ಕೆ ಹೋದ್ರೆ, ಎಷ್ಟು ಬೇಕೋ ಅಷ್ಟು ಮುತ್ತು ಹವಳ ಹೊತ್ತು ತರಬಹುದು. ಕೈಗೆತ್ತಿ ಕೊಡೋವ್ರು ಎಷ್ಟು ತಾನೇ ಕೊಟ್ಟಾರು?

ಇರಲಿ, ಸಧ್ಯಕ್ಕೆ ಅಸಂಬದ್ಧ ಪೀಠಿಕೆ ಮುಗಿಸ್ತೀನಿ. ರಾಹು ಕೇತು ಕಾಟದ ಮೇಲೆ ಇನ್ನಷ್ಟು ಮುಂದಿನ ಭಾಗದಲ್ಲಿ!

-ಹಂಸಾನಂದಿ

 

Rating
No votes yet