ಲಿನಕ್ಸಿನಲ್ಲಿ ಕನ್ನಡದ ಕೆಲಸ

ಲಿನಕ್ಸಿನಲ್ಲಿ ಕನ್ನಡದ ಕೆಲಸ

ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು. ಅದಕ್ಕಾಗಿ ಬರೆದ ಲೇಖನ ಇದು. ಸಂಪದದ ಓದುಗರಲ್ಲೂ ಇದರ ಬಗ್ಗೆ ಕುತೂಹಲ ಹಾಗೂ ಆಸಕ್ತಿಯಿಟ್ಟುಕೊಂಡಿರುವ ಹಲವರು ಇದ್ದಾರೆಂದು ತಿಳಿದು ಇಲ್ಲಿ ಹಾಕುತ್ತಿದ್ದೇನೆ.

(ಬರೆದಾದ ಮೇಲೆ ಮತ್ತೊಮ್ಮೆ ಲೇಖನ ಓದಿದಾಗ ನಾನಂದುಕೊಂಡಷ್ಟು ಚೆನ್ನಾಗಿ ಬಂದಿಲ್ಲ ಎನಿಸಿತು. ಆದರೆ ಅವಸರದಲ್ಲಿ ಬರೆದ ಲೇಖನದ ಮಟ್ಟಿಗೆ ತೆಗೆದುಹಾಕುವಂತಿಲ್ಲ ಎಂದುಕೊಳ್ಳುತ್ತೇನೆ. ಅದೇನೆ ಇರಲಿ ಇದರಲ್ಲಿರುವ ಒಂದಷ್ಟು ಮಾಹಿತಿ ಹಲವರಿಗೆ ಉಪಯುಕ್ತವಾಗುವುದೆಂದು ಭಾವಿಸುತ್ತೇನೆ.)

****** [ಓದುಗರೆ, ಗುರು ಕುಲಕರ್ಣಿಯವರು ಸಾಕಷ್ಟು ಮುಂಚಿತವಾಗಿಯೇ ಸ್ಪಂದನಕ್ಕಾಗಿ 'ಲಿನಕ್ಸಿನಲ್ಲಿ ಕನ್ನಡದ ಕೆಲಸ' ಎಂಬಂತೆ ಲೇಖನ ಬರೆದುಕೊಡಲು ಸಾಧ್ಯವೆ ಎಂದು ಕೇಳಿದ್ದರಾದರೂ, ನನ್ನ ಬಿಡುವಿನ ಸಮಯವನ್ನೂ ನುಂಗಿಹಾಕಿಬಿಡುವಷ್ಟು ಪ್ರಾಜೆಕ್ಟುಗಳಲ್ಲಿ ತೊಡಗಿಕೊಂಡಿರುವುದರಿಂದ ಇದಕ್ಕಾಗಿ ಸಾಕಷ್ಟು ಸಮಯ ಹೊಂದಿಸಲಾಗದೆ ಕೊನೆ ಘಳಿಗೆಯಲ್ಲಿ ಅವಸರದಲ್ಲಿ ಬರೆದ ಲೇಖನವಿದು. ಲೇಖನ ಲಿನಕ್ಸಿನಲ್ಲಿ ಇದುವರೆಗೂ ನಡೆದಿರುವ ಕನ್ನಡಕ್ಕೆ ಸಂಬಂಧಪಟ್ಟ ಕೆಲಸದ ಬಗ್ಗೆ. ಆಸಕ್ತರು ಈ ಕೆಲಸಗಳಲ್ಲಿ ಹೇಗೆ ತೊಡಗಿಕೊಳ್ಳಬಹುದು ಎಂಬುದರ ಬಗ್ಗೆಯೂ ಲೇಖನ ಹೇಳಲು ಪ್ರಯತ್ನಿಸುತ್ತದೆ. ಲಿನಕ್ಸಿಗೆ ಹೊಂದಿಕೊಂಡಂತಿರುವ ಕೆಲವು ಸಿದ್ಧಾಂತಗಳಿಗೆ ಪೂರಕವಾದ ವಿಕಿಪೀಡಿಯ ಬಗ್ಗೆ ಕೂಡ ಒಂದಷ್ಟು ಪರಿಚಯ ಲೇಖನದಲ್ಲಿದೆ. ಲೇಖನ ಸ್ವಲ್ಪ ತಾಂತ್ರಿಕವೆನಿಸಬಹುದು. ತಂತ್ರಜ್ಞಾನ ಕುಶಲತೆಯಿರುವ ಹಲವಾರು ಕನ್ನಡಿಗರಿಗೆ ತಮ್ಮ ಮಾತೃಭಾಷೆಗಾಗಿ ಒಂದಷ್ಟು ಕೆಲಸ ಮಾಡಲು ಈ ಲೇಖನ ಸ್ವಲ್ಪವಾದರೂ ಹುರಿದುಂಬಿಸಿದರೆ ಇದರ ಉದ್ದೇಶ ನೆರವೇರಿದಂತೆ]

ಎರಡು ಮೂರು ವರ್ಷಗಳ ಹಿಂದೆ ಹಲವರಿಗೆ ಕಂಪ್ಯೂಟರಿನಲ್ಲಿ ಕನ್ನಡ ಎಂದರೆ ನುಡಿ, 'ಬರಹ'ದಲ್ಲೊಂದು ಪತ್ರ ಟೈಪ್ ಮಾಡುವುದು, ಅಥವ ಫೋಟೋಶಾಪಿನಲ್ಲಿ ಬರಹ ಫಾಂಟುಗಳನ್ನೋ ನುಡಿ ಫಾಂಟುಗಳನ್ನೋ ಬಳಸಿ ತಮಗೆ ಬೇಕಾದ ಗ್ರಾಫಿಕ್ ಮಾಡಿಕೊಳ್ಳುವುದು ಮತ್ತು ಹಲವು ಚಿಕ್ಕ ಪುಟ್ಟ ಕೆಲಸಕ್ಕೆ ಬೇಕಾದಷ್ಟು ಬಳಕೆ - ಇಷ್ಟಾದರೆ ಕಂಪ್ಯೂಟರಿನಲ್ಲಿ ಕನ್ನಡ ಬಳಸಿದ್ದು ಆಗಿಹೋಯ್ತು ಎಂಬಂತಿತ್ತು. ಕಂಪ್ಯೂಟರಿನಲ್ಲಿ ಕನ್ನಡ ಎಂದರೆ ಕನ್ನಡದಲ್ಲಿ ಡಿ‌ಟಿಪಿ (Desktop publishing) ಎಂದಷ್ಟೇ ಆಗಿತ್ತು. ಅಂತರ್ಜಾಲದಲ್ಲಿದ್ದ ಕೆಲವೇ ಕನ್ನಡ ವೆಬ್ಸೈಟುಗಳು ಕೂಡ ತಮ್ಮದಾದ ಒಂದೆರಡು ಫಾಂಟುಗಳನ್ನು ಮಾಡಿಸಿಕೊಂಡು ಅದನ್ನು ಬಳಸಿಯೇ ಸುದ್ದಿ ಬಿತ್ತರಿಸುತ್ತಿದ್ದವು. ಕಂಪ್ಯೂಟರಿನಲ್ಲಿ ಇಂಗ್ಲೀಷ್ ಬಳಸಿ ಮಾಡಬಲ್ಲಂತ ಕೆಲಸ ಕನ್ನಡವನ್ನೂ ಬಳಸಿ ಮಾಡಬಹುದು ಎಂಬ ವಿಚಾರ ಹಲವರ ಆಲೋಚನೆಗೂ ಬಂದಿರದೇ ಇರಲಿಕ್ಕೆ ಸಾಕು! ಕ್ರಮೇಣ ಯೂನಿಕೋಡ್ ತಂತ್ರಜ್ಞಾನ ಸಾಮಾನ್ಯ ಬಳಕೆದಾರರ ದಿನನಿತ್ಯದ ಬಳಕೆಗೂ ಪಾದಾರ್ಪಣೆ ಮಾಡಿತು. ಪ್ರಾದೇಶಿಕ ಭಾಷೆಗಳಲ್ಲೂ ಕಂಪ್ಯೂಟರನ್ನು ಬಳಸಬಹುದಾದ ವಾತಾವರಣ ನಿರ್ಮಾಣವಾಯಿತು. ಪ್ರಮುಖವಾಗಿ ಸ್ವಯಂ ಸೇವಕರಿಂದಲೇ ನಡೆಸಿಕೊಂಡು ಬರಲಾಗುವ ಗ್ನು/ಲಿನಕ್ಸ್ ಮುಕ್ತ ಸಮುದಾಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನಳವಡಿಸುವ ಈ ಸೌಲಭ್ಯ ಸಹೃದಯದ ಸ್ವೀಕೃತಿ ಪಡೆಯಿತಲ್ಲದೆ, ಹಲವಾರು ಬೆಳವಣಿಗೆಗಳಾದವು. ಹೀಗೆ ನಡೆದ ಬೆಳವಣಿಗೆಗಳಲ್ಲಿ ಲಿನಕ್ಸಿನಲ್ಲಿ ಕನ್ನಡ ಮೂಡಿಸುವ, ಬಳಸುವ ಹಾಗೂ ಅಳವಡಿಸುವ ಕಾರ್ಯವೂ ಒಂದು. ಆದರೆ ಭಾರತದಲ್ಲಿ ಕಾಲಾನುಕಾಲದ ಪಿಡುಗಾದ ಭ್ರಷ್ಟಾಚಾರ, ಹಾಗೂ ರಾಜಕಾರಣಿಗಳ ದುರಾಸೆ ಮುಕ್ತ ತಂತ್ರಾಂಶ ಹರಡುವಲ್ಲೂ ಮುಳ್ಳಾಗಿ ಪರಿಣಮಿಸಿದ್ದರಿಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲೇ ಮುಕ್ತ ಸಿದ್ಧಾಂತಗಳು ಬೇರೂರಲಿಲ್ಲ. ತಮ್ಮ ತಂತ್ರಾಂಶಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವ ಸಾಮರ್ಥ್ಯ ನೀಡಲೇಬೇಕಾದ ಪರಿಸ್ಥಿತಿ ಎದುರಿಸಿದಾಗ ಕನ್ನಡವರನ್ನೇ ಕೆಲಸಕ್ಕಿಟ್ಟುಕೊಂಡು ತಮ್ಮ ತಂತ್ರಾಂಶಗಳಲ್ಲಿ ಕನ್ನಡವನ್ನಳವಡಿಸಿ ಕನ್ನಡದವರಿಗೇ ಬೃಹತ್ ಮೊತ್ತಕ್ಕೆ ಮಾರುವುದಲ್ಲದೆ, ಮಾರಿದ ತಂತ್ರಾಂಶವನ್ನು ಬದಲಿಸುವ ಸ್ವಾತಂತ್ರ್ಯವನ್ನೂ ಕಿತ್ತುಕೊಂಡ ಬಹು ರಾಷ್ಟ್ರೀಯ ಕಂಪೆನಿಗಳು ನಮಗೇ ತಿಳಿಯದಂತೆ ಕಟ್ಟುಪಾಡೊಂದನ್ನು ನಿರ್ಮಾಣಮಾಡಿವೆ. ಈ ಕಟ್ಟುಪಾಡನ್ನು ಭೇದಿಸಿ ಮುಕ್ತರಾಗುವತ್ತ ಹೊರನಡೆಯುವ ಹಾದಿ ಕಷ್ಟದ್ದು, ಆದರೆ ಸಾಕಷ್ಟು ಫಲವುಳ್ಳದ್ದು.

ಪಕ್ಕದ ಕೇರಳದಲ್ಲಿ

ಇಡಿಯ ದೇಶಕ್ಕೆ ಮಾದರಿಯೆಂಬಂತೆ ಬಹುರಾಷ್ಟ್ರೀಯ ಕಂಪೆನಿಗಳು ಚೆಲ್ಲುವ ಬಿಡಿಗಾಸಿಗೆ ಹಪಹಪಿಸದೆ ಮುಕ್ತ ತಂತ್ರಾಂಶ ಹಾಗೂ ಸಿದ್ಧಾಂತವನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡ ಖ್ಯಾತಿ ಕೇರಳದವರದ್ದು. ಕಾಶ್ಮೀರದಲ್ಲಿದ್ದ ಸರಸ್ವತಿ ಕೇರಳಕ್ಕೆ ಬಂದಳೆಂದು ಮಲ್ಯಾಳಿಗಳು ಹೇಳಿಕೊಳ್ಳುತ್ತಾರೆ. ಅದು ನಿಜವೋ ಸುಳ್ಳೋ, ಸರಸ್ವತಿಯೇ ಅಲ್ಲಿದ್ದಾಳೆ ಎಂಬಂತೆ ಹೇಳಿಕೊಳ್ಳುವಷ್ಟರ ಮಟ್ಟಿಗಿರುವ ಅವರ ಕೆಲಸ (ಅವರು ಮಾಡಿರುವ ಕೆಲಸ) ನಿಜಕ್ಕೂ ಗಣನೀಯ. ಕೇರಳದಲ್ಲಾದದ್ದು ಕರ್ನಾಟಕದಲ್ಲೂ ಆಗುವುದು ಎಂಬ ನಂಬಿಕೆ ನನಗಿಲ್ಲ, ಆದರೆ ಲಿನಕ್ಸಿನಲ್ಲಿ ಕನ್ನಡವನ್ನಳವಡಿಸುವ ಕಾರ್ಯ ಸಂಪೂರ್ಣವಾದರೆ ಸರಕಾರ ಮನಸ್ಸು ಮಾಡದಿದ್ದರೆ ಬೇಡ, ಸ್ವಯಂ ಸೇವಕರು, ಉತ್ಸಾಹವುಳ್ಳವರು ಶಾಲೆ ಕಾಲೇಜುಗಳಲ್ಲಿ ಮುಕ್ತ ತಂತ್ರಾಂಶದ ಉಪಯೋಗಗಳ ಬಗ್ಗೆ ಸ್ವತಃ ತೋರಿಸಿಕೊಡಬಹುದು. ಇದರಿಂದ ಸಾಕಷ್ಟು ಕಡೆ ಪ್ರಚಾರ ಹಾಗೂ ಅಳವಡಿಕೆಗೆ ನಾಂದಿಯಾಗುವುದು.

ಹೇಗೆ ನಡೆದಿದೆ, ಕನ್ನಡದ ಕೆಲಸ?

ನಿಧಾನ ಆಮೆ ವೇಗದಲ್ಲಿ ನಡೆದಿದೆ. ಆದರೆ ಆಮೆ - ಮೊಲ ರೇಸಿನಲ್ಲಿ ಆಮೆ ಗೆದ್ದಿತ್ತು ಎಂಬ ವಿಚಾರ ಮರೆಯದಿರೋಣ. ಇಲ್ಲಿ ನಮ್ಮ ಆಮೆಯನ್ನು ಮುನ್ನಡೆಸುತ್ತಿರುವವರು ಸ್ವಯಂ ಸೇವಕರ ತಂಡ, ಅದೂ ತಮ್ಮ ಬಿಡುವಿನ ಸಮಯದಲ್ಲಿ. ಹಲವರಿಗೆ ವಾರಕ್ಕೊಮ್ಮೆ ನೋಡುವ ಅವಕಾಶ ಸಿಕ್ಕರೂ ಹೆಚ್ಚು. ಬೇರೆ ಭಾರತೀಯ ಭಾಷೆಗಳಲ್ಲಾದಷ್ಟು ವೇಗದಲ್ಲಿ ಕನ್ನಡದಲ್ಲಿ ಲಿನಕ್ಸ್ ಕೆಲಸ ಸಾಗದೇ ಇರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಸರಕಾರ ಮುಕ್ತ ತಂತ್ರಾಂಶದೆಡೆಗೆ ಕಣ್ಣೂ ಹಾಕದಿರುವುದು. ಎರಡನೆಯದಾಗಿ ಕನ್ನಡಿಗರಲ್ಲೇ ಇಲ್ಲವಾದ ಉತ್ಸಾಹ. ಲಿನಕ್ಸಿನಲ್ಲಿ ತೆಲುಗು ತರಲು ಹೈದರಾಬಾದಿನ ಟಿ ಸಿ ಎಸ್ ಕಂಪೆನಿಯಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲ ತೆಲುಗು ಪ್ರಿಯರು IIITಯವರೊಡಗೂಡಿ ಸಾಕಷ್ಟು ಕೆಲಸ ಮಾಡಿಸಿದ್ದಾರೆ. ಕನ್ನಡಿಗರ ಕಂಪೆನಿಗಳು ಹಲವಿದ್ದರೂ ಕನ್ನಡದ ಬಗ್ಗೆ ಅವರೆಲ್ಲರಿಗೆ ಆಸಕ್ತಿಯಿಲ್ಲದೆ ಹೋಗಿದೆ. ತಮಿಳಿನಲ್ಲಿ ಅಣ್ಣಾ ವಿಶ್ವವಿದ್ಯಾಲಯದವರು ಮಾಡಿರುವ ಕೆಲಸ ಭಾರತದ ಉಳಿದೆಲ್ಲರಿಗೂ ಮಾದರಿ! ಬಂಗಾಳಕ್ಕಂತೂ ಒಂದು ರಾಜ್ಯದ ಹಾಗೂ ಒಂದು ಸಂಪೂರ್ಣ ದೇಶದ ಜನರ ಉತ್ಸಾಹ! ಇವೆಲ್ಲದರ ಮಧ್ಯೆ ಟಿ ಡಿ ಐ ಎಲ್ (ಭಾರತ ಸರಕಾರದವರು) ಕರ್ನಾಟಕದಲ್ಲಿ ಐ ಐ ಎಸ್ ಸಿಯವರಿಗೆ ಪ್ರಾದೇಶಿಕ ಭಾಷೆಗಳ ಕೆಲಸಗಳಿಗೆ ಒಂದು ಕೋಟಿ ಮಂಜೂರು ಮಾಡಿ ನೀಡಿತ್ತು. ಒಂದು ವೆಬ್ಸೈಟು, ಪೂರ್ಣವಲ್ಲದ ಕೆಲವು ಫಾಂಟುಗಳು ಹಾಗೂ ಕೆಲವು ಚಿಕ್ಕ ಪುಟ್ಟ ಪ್ರಾಜೆಕ್ಟುಗಳನ್ನು ಮಾಡುವಷ್ಟರಲ್ಲಿ ಅವರ ಒಂದು ಕೋಟಿ ಖರ್ಚಾಗಿ ಹೋಗಿದ್ದು ದುರಾದೃಷ್ಟದ ವಿಷಯ. ಸುಮಾರು ಅದೇ ಸಮಯಕ್ಕೆ (ಅಂದರೆ ೨೦೦೪ಷ್ಟೊತ್ತಿಗೆ) ಪ್ರಮೋದ್, ಅರುಣ್ ಶರ್ಮಾ ಮುಂತಾದವರು ಕೂಡಿಕೊಂಡು ನಡೆಸಿಕೊಂಡು ಬರುತ್ತಿದ್ದ ಸ್ವಯಂ ಸೇವಕರ ಗುಂಪು ಸಾಕಷ್ಟು ಕೆಲಸ ಮಾಡಿತ್ತು. ಆ ಸಮಯದಲ್ಲೇ ಅರುಣ್ ಶರ್ಮರ ಮೇಯ್ಲಿಂಗ್ ಲಿಸ್ಟಿನಲ್ಲಿ ನಡೆಯುತ್ತಿದ್ದ ಚರ್ಚೆ, ಹಾಗೂ ಪ್ರಮೋದನಿಂದ ನನಗೂ ಈ ಪ್ರಾಜೆಕ್ಟಿನ ಪರಿಚಯವಾದದ್ದು. ಆಗ ತಾನೆ ನನಗೂ ಕಾಲೇಜು ಮುಗಿದಿತ್ತು. ಕನ್ನಡದಲ್ಲಿ ವಿಕಿಪೀಡಿಯ ಪ್ರಾಜೆಕ್ಟು ಪ್ರಾರಂಭಿಸಿ ವಹಿಸಿಕೊಂಡಿದ್ದ ನನಗೆ ಲಿನಕ್ಸಿನಲ್ಲೇ ಕನ್ನಡ ಬಳಸಬೇಕಾಗಿ ಬಂದು ಪ್ರಮೋದನೊಡಗೂಡಿ ಒಂದಷ್ಟು ಕೆಲಸ ಪ್ರಾರಂಭಿಸಿದೆ. ಆಗಿನಿಂದ ಹಿಡಿದು ಈವರೆಗೂ ನಿಧಾನವಾದರೂ ತೊಂದರೆಯಿಲ್ಲ, ಸ್ವಯಂ ಸೇವಕರ ಬಲದಲ್ಲೇ ಮುನ್ನಡೆಸೋಣ ಎಂದುಕೊಂಡು ಕನ್ನಡ l10n (localization) ಯೋಜನೆ ([:http://kannada.sf.net]) ನಡೆಸಿಕೊಂಡು ಬಂದಿದ್ದೇವೆ. ಜೀವನಕ್ಕೆ ಹಾದಿ ಹುಡಿಕಿಕೊಂಡು ಪ್ರಮೋದ್ ಪುಣೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ, ದೂರದ ಅಮೇರಿಕೆಯಲ್ಲಿ ಅರುಣ್ ಶರ್ಮ ಗೂಗಲ್ ಸೇರಿ ಮತ್ತಷ್ಟು ಬ್ಯುಸಿಯಾದಮೇಲೆ ಯೋಜನೆಯನ್ನು ನಾನು ನನ್ನ ಸ್ನೇಹಿತರೊಂದಿಗೆ ನಡೆಸಿಕೊಂಡು ಬರುತ್ತಿರುವ ಸಂಪದದೊಂದಿಗೇ ಸೇರಿಸಿ ನೋಡಿಕೊಳ್ಳುತ್ತ ಬಂದಿದ್ದೇನೆ. ಎಲ್ಲರೂ ಕೂಡಿ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ. ತನ್ನದೇ ಕಂಪೆನಿ ಇಟ್ಟುಕೊಂಡಿರುವ ಸಿದ್ಧಾರೂಡ, ದೂರದ ಮುಂಬೈನಲ್ಲಿರುವ ಶ್ರೀಕಾಂತ ಮಿಶ್ರಿಕೋಟಿ, ಇನ್ನೂ ದೂರದ ಬ್ರಿಟನ್ನಿನಲ್ಲಿರುವ ಕನ್ನಡಿಗರೂ ಅಲ್ಲದ ನಿಕೊಲಾಸ್ ಶ್ಯಾಂಕ್ಸ್ ಮತ್ತು ಇನ್ನೂ ಹಲವರು ತಮಗಾದಷ್ಟು ಭಾಗವಹಿಸಿದ್ದಾರೆ. ಮುಂದೆ ಈ ಯೋಜನೆ ಆಸಕ್ತಿಯುಳ್ಳವರು ವಹಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಾರೆಂಬ ಭರವಸೆ ನನಗಿದೆ. ಇನ್ನು ತಾಂತ್ರಿಕವಾಗಿ ಕನ್ನಡದ ಕೆಲಸ ಎಷ್ಟು ನಡೆದಿದೆ ಎಂಬುದರ ಬಗ್ಗೆ ಒಂದಷ್ಟು ನೋಡೋಣ (ಮುನ್ನೆಚ್ಚರಿಕೆ: ಈ‌ ಚರ್ಚೆ ತುಂಬಾ ತಾಂತ್ರಿಕವೆನಿಸಬಹುದು)

ಲೊಕ್ಯಾಲೆ

ಕನ್ನಡ ಲೊಕ್ಯಾಲೆ (ಇಡಿಯ ತಂತ್ರಾಂಶಕ್ಕೆ ಭಾಷೆಯ ಪದರ ಎಂದು ಹೇಳಬಹುದು) ೨೦೦೪ರಲ್ಲಿ ಪ್ರಮೋದ್ ಮತ್ತು Indlinux ಯೋಜನೆಯ ರೂವಾರಿ ಕರುಣಾಕರ್ ಒಟ್ಟುಕೂಡಿ ಹಿಂದಿ ಭಾಷೆಯದ್ದನ್ನು ಕನ್ನಡಕ್ಕೆ ನಕಲು ಮಾಡುವ ಮೂಲಕ ಪ್ರಾರಂಭಿಸಿದ್ದರು. ಆಗ ಸೇರಿಸಿದ ಲೊಕ್ಯಾಲೆ ಈಗಲೂ ಹೆಚ್ಚು ಕಡಿಮೆ ಹಾಗೆಯೇ‌ ಇದೆ. ಆದರೆ ಮುಖ್ಯವಾಗಿ ಮೈಕ್ರೊಸಾಫ್ಟ್ ಕನ್ನಡಕ್ಕೆ ಇತ್ತೀಚೆಗೆ ಹೊರತಂದ LIP (Language Interface pack) ಲಿನಕ್ಸಿನಲ್ಲಿ ಎರಡು ವರ್ಷಗಳ ಹಿಂದೆಯೇ ಇತ್ತು! ಮೈಕ್ರೊಸಾಫ್ಟಿನ LIP ಬಳಸಿದವರಿಗೆ ಅದರಲ್ಲಿರುವ "ಓಡಿಸು, ಮುಚ್ಚು" ಎಂದೆಲ್ಲ ಇರುವ ಅನುವಾದಗಳ ಪರಿಚಯ ಈಗಾಗಲೇ ಆಗಿರಬಹುದು. ಅವನ್ನು ಬದಲಾಯಿಸಬೇಕೆಂದು ನಿಮಗನ್ನಿಸಿದರೆ ಬದಲಾಯಿಸಲೂ ಸಾಧ್ಯವಾಗದು. ಆದರೆ ಲಿನಕ್ಸಿನಲ್ಲಿ ನೀವು ಆ ಕೆಲಸ ಮಾಡಬಹುದು! ಮೈಕ್ರೊಸಾಫ್ಟಿನ LIPಯಲ್ಲಾದಂತಹ ಅವಸರದ ವ್ಯಥೆಯನ್ನು ತಪ್ಪಿಸಲೆಂದೇ ಲಿನಕ್ಸಿನ ಲೊಕ್ಯಾಲೆ ಮಾಡುವಾಗ ಕನ್ನಡದ ಅನುವಾದಕ್ಕಿಂತ ತಂತ್ರಜ್ಞಾನವನ್ನು ಹೆಚ್ಚು ಅರಿತ ಸ್ವಯಂ ಸೇವಕರು ಸಂಪೂರ್ಣ ಅನುವಾದ ಮಾಡದೆ ಹಾಗೆಯೇ ಬಿಟ್ಟರು. ಅನುವಾದದ ಅಭ್ಯಾಸವಿರುವವರು ಕಾರ್ಯ ಕೈಗೆತ್ತಿಕೊಂಡು ಅನುವಾದ ಮುಗಿಸಬಹುದು. [೧]

ಫಾಂಟುಗಳು

ಭಾಷೆಯೊಂದನ್ನು ಕಂಪ್ಯೂಟರಿನಲ್ಲಿ ಬಳಸುವುದಕ್ಕೆ ಮುಖ್ಯ ಹಾಗೂ ಅತ್ಯವಶ್ಯಕ - ಫಾಂಟು (font). ಇಲ್ಲಿ ನಾವುಗಳು ಯೂನಿಕೋಡ್ ಫಾಂಟುಗಳ ಬಗ್ಗೆ [೨] ಮಾತನಾಡುತ್ತಿದ್ದೇವೆ ಎಂಬುದನ್ನು ಮರೆಯದಿರೋಣ. ಮುಂಚೆ ಇದ್ದ ಫಾಂಟುಗಳು ತಮ್ಮದೇ ಆದ ASCII ಮೌಲ್ಯಗಳನ್ನು ಬಳಸಿಕೊಂಡು ಕನ್ನಡ ಅಕ್ಷರಗಳನ್ನು ಪರದೆಯ ಮೇಲೆ ಮೂಡಿಸುತ್ತಿದ್ದವು. ಆದ್ದರಿಂದ ಆಯಾ ಎನ್ಕೋಡಿಂಗ್ ಬಳಸುವ ಫಾಂಟಿಗೆ ತನ್ನದೇ ಆದ input engine ಬೇಕಾಗುತ್ತಿತ್ತು (ಬರಹ ಮತ್ತು ನುಡಿ ಉದಾಹರಣೆ ತೆಗೆದುಕೊಳ್ಳಿ), ಆದರೆ ಯೂನಿಕೋಡಿನಲ್ಲಿ ಹಾಗಲ್ಲ. ಪ್ರತಿಯೊಂದು ಕನ್ನಡ ಅಕ್ಷರಕ್ಕೂ ಒಂದು ನಿರ್ದಿಷ್ಟ ಮೌಲ್ಯವನ್ನು ನೀಡಲಾಗಿದೆ. ಈ ಯೂನಿಕೋಡ್ ನಿರ್ದಿಷ್ಟಮಾನವನ್ನು ಜಗತ್ತಿನ ಎಲ್ಲ ತಂತ್ರಾಂಶ ನಿರ್ಮಾತೃ ಕಂಪೆನಿಗಳೂ ಅಳವಡಿಸುತ್ತಿವೆ. ಈ ನಿರ್ದಿಷ್ಟಮಾನದಲ್ಲಿ ಮುಂಚಿನಂತೆ ಬರೆ ಕನ್ನಡ ಪರದೆಯ ಮೇಲೆ ಬರಿಸುವುದಷ್ಟೇ ಅಲ್ಲದೆ ಅದನ್ನು (ಇಂಗ್ಲೀಷನ್ನು ಅರ್ಥ ಮಾಡಿಕೊಂಡಂತೆ) ಅರ್ಥ ಕೂಡ ಮಾಡಿಕೊಳ್ಳುತ್ತದೆಯಾದ್ದರಿಂದ ಹಳೆಯ ಫಾಂಟುಗಳು ಇಲ್ಲಿ ಕೆಲಸಕ್ಕೆ ಬಾರವು. ಯೂನಿಕೋಡ್ ಫಾಂಟ್[೪] ಒಂದಕ್ಕೆ ತಂತ್ರಾಂಶಗಳಲ್ಲಿ ಅಳವಡಿಸಲಾಗಿರುವ ಯೂನಿಕೋಡ್ ಇಂಜಿನ್ನಿನೊಂದಿಗೆ ಕಾರ್ಯನಿರ್ವಹಿಸುತ್ತ, ಪ್ರತಿಯೊಂದು ಅಕ್ಷರವನ್ನು ಜೋಡಿಸುವಲ್ಲಿ ಸಹಾಯ ಮಾಡುವ ಸಾಮರ್ಥ್ಯವಿರಬೇಕು. ಇದಕ್ಕೆ ಫಾಂಟೊಂದರಲ್ಲಿ substitution, placement ಎಂಬ ನಿಯಮಗಳನ್ನು ಸೇರಿಸಿರುತ್ತಾರೆ. ಇದಕ್ಕೆಲ್ಲ ಒಂದು ನಿರ್ದಿಷ್ಟಮಾನ ಕೂಡ ಇದೆ. ಕನ್ನಡದಲ್ಲಿರುವ ಯೂನಿಕೋಡ್ ಫಾಂಟುಗಳ ವಿಷಯಕ್ಕೆ ಬಂದರೆ, ನಮ್ಮ ಸುತ್ತ ನಡೆಯುತ್ತಿರುವ ಸಾಕಷ್ಟು ಚರ್ಚೆ ಮನಸ್ಸಿಗೆ ಬರುತ್ತದೆ. ಆದರೆ ground reality ಏನೆಂದರೆ, ಲಿನಕ್ಸಿನಲ್ಲಿ ಕನ್ನಡಕ್ಕೆ ಸರಿಯಾದ ಯೂನಿಕೋಡ್ ಫಾಂಟೇ ಇಲ್ಲ! ತಮಾಷೆಯೆಂದರೆ ಮೈಕ್ರೊಸಾಫ್ಟಿನ ವಿಂಡೋಸ್‌ನಲ್ಲೂ ಕನ್ನಡಕ್ಕಿರುವುದು ಒಂದೇ 'ಹೆಚ್ಚು ಕಡಿಮೆ ಸರಿಯಾಗಿರುವ' ಫಾಂಟು - ಅದರ ಹೆಸರು ತುಂಗ. ಅದರಲ್ಲೂ ಒಂದಷ್ಟು ಅಕ್ಷರ ವಿನ್ಯಾಸಗಳ, ಅಕ್ಷರ ಜೋಡಣೆಯ (substitution, placement) ತೊಂದರೆಗಳಿವೆ [೩]. Arial Unicode MS ಎಂಬ ಫಾಂಟು ಕನ್ನಡ ಬಳಕೆಗೆ ಬರುತ್ತದಾದರೂ ಸಾಕಷ್ಟು ತೊಂದರೆಗಳಿರುವುದಲ್ಲದೆ ಎಲ್ಲ ಬಳಕೆದಾರರಿಗೆ ಲಭ್ಯವಿಲ್ಲ, ಕೂಡ! ಪವನಜರವರು ಐ ಐ ಎಸ್ ಸಿಯವರಿಗೆಂದು ಮಾಡಿದರೆನ್ನಲಾದ ಫಾಂಟು[೪] ಅರ್ಧಕ್ಕೇ ನಿಂತು ಬಳಸಲೂ ಬರದೆ ನಿರುಪಯೋಗಿಯಾಗಿದ್ದರೆ, ಅತ್ತ ಐ ಐ ಎಸ್ ಸಿಯವರು ದುಡ್ಡು ಕೊಟ್ಟು ಮಾಡಿಸಿದರೆನ್ನಲಾದ ಕೇದಗೆ, ಮಲ್ಲಿಗೆ ಫಾಂಟುಗಳೂ ಅಪೂರ್ಣವಾಗಿ ಬಳಸಲಸಾಧ್ಯವಾಗಿವೆ. ಕೇದಗೆ, ಮಲ್ಲಿಗೆ - ಇವೆರಡೂ ಮುಕ್ತ ಲೈಸೆನ್ಸಿನಡಿ ಲಭ್ಯವಿದೆಯೆಂದು IISc (Indian Institue of Science)ನವರಿಂದ ಹೇಳಲ್ಪಟ್ಟಿತ್ತಾದರೂ ಲೈಸೆನ್ಸಿನ ಧ್ವಂಧ್ವದಿಂದಾಗಿ ಸರಿ ಪಡಿಸಲೂ ಯಾರೂ ಪ್ರಯತ್ನಿಸಲಿಲ್ಲ. ಈಗಿನಂತೆ ಇವೆರಡು ಫಾಂಟುಗಳ ಲೈಸೆನ್ಸಿನ ಕುರಿತ ಧ್ವಂಧ್ವ ಸಾಕಷ್ಟು ನಿವಾರಣೆಯಾಗಿದೆಯಾದೆ. ಜನಕನ್ನಡ ಎಂಬ ಇನ್ನೊಂದು ಫಾಂಟು (ಸಿಡ್ಯಾಕ್ ನವರು ತಯಾರಿಸಿದ್ದು) ಇದೆಯಾದರೂ, ಅದೂ ಕೂಡ ಹೆಚ್ಚು ಬಳಸಲು ಯೋಗ್ಯವಾಗಿಲ್ಲ.

Input methods (ಕೀಲಿ ಮಣೆಗಳ ಅನುಕರಣೆ (emulate) ಮಾಡುವ ತಂತ್ರಾಂಶ)

ಹಲವರು ನಮ್ಮಲ್ಲಿ ಇದನ್ನು ತಪ್ಪಾಗಿ "ಕೀಬೋರ್ಡ್ ಡ್ರೈವರ್ಸ್" ಎನ್ನುವುದುಂಟು. ಆದರೆ ಇವು ಕೀ ಬೋರ್ಡ್ ಡ್ರೈವರ್ಸ್ ಅಲ್ಲ, ಬದಲಿಗೆ Input methodಗಳು. ಕೀಲಿ ಮಣೆಗಳ ವಿವಿಧ ರೂಪಗಳನ್ನು US English ಕೀಬೋರ್ಡಿನ ಮೂಲಕವೇ ಅನುಕರಣೆ ಮಾಡುವ ತಂತ್ರಾಂಶಗಳು. ಲಿನಕ್ಸಿನಲ್ಲಿ ಈಗ ಸಾಕಷ್ಟು IMEಗಳಿವೆ. ಮೂಲ IME, ಅಂದರೆ ಲಿನಕ್ಸಿನೊಂದಿಗೆ ಸಾಧಾರಣವಾಗಿ ಎಲ್ಲ ವಿತರಕರೂ ಅಳವಡಿಸಿ ಶಿಪ್ ಮಾಡುವ 'XKB'ನಲ್ಲಿ[೫] ಕನ್ನಡಕ್ಕೆ Inscript ಶೈಲಿಯ IME ಇದೆ. Inscript ಭಾರತದ ಎಲ್ಲ ಭಾಷೆಗಳಿಗಾಗಿ ಎಂದು ತಯಾರಿಸಲ್ಪಟ್ಟ ವೈಜ್ಞಾನಿಕ ಕೀಲಿ ಮಣೆ. ಇದರಲ್ಲಿ ಕಡಿಮೆ ಬಟನ್ನುಗಳನ್ನೊತ್ತಿ ವೇಗದಲ್ಲಿ ಟೈಪ್ ಮಾಡುವ ಸೌಲಭ್ಯ ಉಂಟು. ಸಾಮಾನ್ಯವಾಗಿ ನಮ್ಮ ಪತ್ರಕರ್ತ ಮಿತ್ರರೆಲ್ಲರೂ ಇದನ್ನು ಕಲಿತಿರುವುದನ್ನು ನೋಡಿದ್ದೇನೆ. ಇದೇ XKB ಉಪಕರಣಕ್ಕೆ ಪ್ರಮೋದ್ ೨೦೦೪ರಲ್ಲಿ ಬರೆದಿಟ್ಟ ನುಡಿ ಕೀಲಿಮಣೆಯ ಸ್ಕ್ರಿಪ್ಟು ಕೂಡ ಲಭ್ಯವುಂಟು (ಇತ್ತೀಚೆಗೆ ಪ್ರಮೋದ ಬರೆದ ಇದೇ ಉಪಕರಣವನ್ನು ಬಳಸಿಕೊಂಡು ಲಿನಕ್ಸಿನಲ್ಲಿ ನುಡಿ ತಂತ್ರಾಂಶದ ಪ್ರತಿರೂಪ ಹೊರತರುತ್ತಿದ್ದೇವೆ ಎಂದು ಕಗಪಾದ ನರಸಿಂಹ ಮೂರ್ತಿಯವರು ಹೇಳಿದ್ದರೆಂಬುದನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಲು ಇಚ್ಛಿಸುತ್ತೇನೆ). ಇನ್ನು ನುಡಿ ಶೈಲಿಯ ಕೀಲಿಮಣೆ, ಬರಹ ಶೈಲಿಯ ಕೀಲಿಮಣೆಗಳೂ[೬] ಲಿನಕ್ಸಿನಲ್ಲಿ ಲಭ್ಯ! ಆದರೆ ಇವುಗಳನ್ನು ಹಾಕಿಕೊಳ್ಳಲು ನೀವು ಬಳಸುತ್ತಿರುವ ಲಿನಕ್ಸ್ ವಿತರಣೆಗೆ ತಕ್ಕಂತೆ ಒಂದಷ್ಟು ಪ್ರಯಾಸಪಡಲೇಬೇಕು. ಇತ್ತೀಚೆಗೆ ಅತ್ಯಂತ ಜನಪ್ರಿಯವಾಗಿರುವ ಉಬುಂಟು ಎಂಬ ವಿತರಣೆಯಲ್ಲಿ ಈ ಕಾರ್ಯ ಬಹು ಸುಲಭ. ಈ ತರಹದ IMEಗಳನ್ನು ಹೇಗೆ ಹಾಕಿಕೊಳ್ಳುವುದು ಎಂಬ ವಿವರ ಈ ಲೇಖನದ ವ್ಯಾಪ್ತಿಯ ಹೊರಗಿರುವುದರಿಂದ ಇಲ್ಲಿ ವಿವರಿಸುವುದಿಲ್ಲ. ಆಸಕ್ತಿಯಿದ್ದವರು ಲೇಖನದ ಕೊನೆಯಲ್ಲಿ ನೀಡಿರುವ ಅಂತರ್ಜಾಲ ಸಂಪರ್ಕಗಳನ್ನು ನೋಡಿ.

Collation ಮತ್ತು Sorting

ಕನ್ನಡ ಪದಗಳನ್ನು ಸೇರಿಸುವ ಮತ್ತು ಸಾರ್ಟ್ ಮಾಡುವ ಸಾಮರ್ಥ್ಯ ಕಂಪ್ಯೂಟರಿಗೆ ಸಾಕಷ್ಟು ಕಡೆ ಬೇಕೇ ಬೇಕು. ಪದಕೋಶಗಳಲ್ಲಿ, ಸ್ಪೆಲ್ ಚೆಕ್ ಮಾಡುವಲ್ಲಿ ಇದರ ಉಪಯೋಗ ಮಹತ್ವದ್ದು. ನುಡಿ ಮತ್ತು ಬರಹಗಳಂತಹ ತಂತ್ರಾಂಶಗಳಲ್ಲಿ ತಮ್ಮದೇ ಆದ ಎನ್ಕೋಡಿಂಗ್ ಬಳಸುವುದರಿಂದ ಅವರದ್ದೇ ಆದ ಸಾರ್ಟಿಂಗ್ ವ್ಯವಸ್ಥೆ ಮಾಡಿಕೊಂಡಿರುವುದನ್ನು ನೀವು ಗಮನಿಸಿರುತ್ತೀರಿ. ಹಾಗೆಯೇ ಯೂನಿಕೋಡ್ ಸಾರ್ಟಿಂಗ್ ಕೂಡ. ಈ ಕೆಲಸ ಅಲ್ಲೊಂದು ಚೂರು ಇಲ್ಲೊಂದು ಚೂರು ಅವರಿವರು ಮಾಡಿರುವುದರಿಂದ ಸಂಪೂರ್ಣವಾಗಿ ಟೆಸ್ಟ್ ಮಾಡಲ್ಪಡದಿದ್ದರೂ ಸಾಕಷ್ಟು ಮಟ್ಟಿಗೆ (ಸಾಧಾರಣ ಬಳಕೆದಾರನಿಗೆ ತೊಂದರೆಯೆಂಬತಿಲ್ಲದ ಮಟ್ಟಿಗೆ) ಕೆಲಸ ಮಾಡುತ್ತಿದೆ.

ಭಾಷಾ ಹೊದಿಕೆ - ತಂತ್ರಾಂಶಗಳು ಕನ್ನಡದಲ್ಲಿ

ಲಿನಕ್ಸಿನಲ್ಲಿರುವ ಹಲವು ಪ್ರೋಗ್ರಾಮುಗಳು ಈಗಾಗಲೇ ಕನ್ನಡದಲ್ಲಿ ಲಭ್ಯವಿದೆ. ಕನ್ನಡದಲ್ಲಿ ಲಭ್ಯವಿದೆ ಎಂದರೆ ಏನು? ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಇದರರ್ಥ ತಂತ್ರಾಂಶದ ಮೆನು, ಸಹಾಯ ಪುಟಗಳು, ಆಪ್ಶನ್ನುಗಳು ಕನ್ನಡದಲ್ಲೇ ಇದ್ದು ಕನ್ನಡ ಮಾತ್ರ ಗೊತ್ತಿರುವವರಿಗೆ ಅಥವ ಇಂಗ್ಲೀಷಿಗಿಂತ ಕನ್ನಡ ಬಳಸುವುದನ್ನೆ ಹೆಚ್ಚು ಇಷ್ಟಪಡುವಂತವರಿಗೆ ಸಹಾಯವಾಗುವ ಭಾಷಾ ಪದರ. ೨೦೦೪ರಲ್ಲೇ XFCE ಎಂಬ ವಿಂಡೋ ಮ್ಯಾನೇಜರ್ ಸಂಪೂರ್ಣ ಕನ್ನಡದಲ್ಲಿ ಲಭ್ಯವಿತ್ತು. ಇತ್ತೀಚೆಗೆ ಮತ್ತೊಮ್ಮೆ ಅದರಲ್ಲಿದ್ದ ಅನುವಾದಗಳನ್ನು ಸರಿಪಡಿಸಲಾಗಿದೆ. KDE ಕೂಡ ೬೦% ಕ್ಕೂ ಹೆಚ್ಚು ಕನ್ನಡಕ್ಕೆ ಅನುವಾದ ಮಾಡಲ್ಪಟ್ಟಿದೆ. ಲಿನಕ್ಸಿನಲ್ಲಿ ಸಾವಿರಾರು ತಂತ್ರಾಂಶಗಳು ಲಭ್ಯವಿರುವುದರಿಂದ ಎಲ್ಲವನ್ನೂ ಕನ್ನಡಕ್ಕೆ ತರುವಲ್ಲಿ ಸುಮಾರು ಕೆಲಸವೇ ಜರುಗಬೇಕು. ಸದ್ಯಕ್ಕೆ [:http://translate.sampada.net/] ಎಂಬ ವೆಬ್ಸೈಟಿನಲ್ಲಿ ಸ್ವಯಂ ಸೇವಕರು ಕೆಲವರು ತಮ್ಮ ಬಿಡುವಿನ ಸಮಯದಲ್ಲಿ ತಮಗಾದಷ್ಟು ಅನುವಾದ ಮಾಡಿಕೊಂಡು ಬಂದಿದ್ದಾರೆ. ಮತ್ತಷ್ಟು ಕೈಗಳು ಸೇರಿದರೆ ಅನುವಾದದ ಕೆಲಸ ಇನ್ನೂ ವೇಗವಾಗಿ ಮುಂದುವರೆಯುವುದು. ಮೈಕ್ರೊಸಾಫ್ಟಿನ ಆಫೀಸ್ ತಂತ್ರಾಂಶಕ್ಕೆ ಲಿನಕ್ಸಿನಲ್ಲಿ ಬದಲು ಎಂಬಂತಿರುವ ಓಪನ್ ಆಫೀಸ್‌ ತಂತ್ರಾಂಶದ ಹಳೆಯ ಆವೃತ್ತಿ ಸಂಪೂರ್ಣ ಕನ್ನಡದಲ್ಲಿ ಲಭ್ಯವಿತ್ತು. ಆದರೆ ತಂತ್ರಾಂಶಗಳ ಹೊಸ ಆವೃತ್ತಿ ಬಂದಂತೆಲ್ಲ ಅನುವಾದ ಸರಿಪಡಿಸುವ, ಕೆಲವು ಬಾರಿ ಸಂಪೂರ್ಣ ಹೊಸತಾಗಿ ಮಾಡಬೇಕಾದ ಸನ್ನಿವೇಶಗಳು ಬರುತ್ತದಾದ್ದರಿಂದ ಸಂಪೂರ್ಣ ಅನುವಾದ ಅಥವ ಭಾಷಾಂತರ ಹಲವು ಕೈಗಳು ಸೇರದೆ ದೂರದ ಕನಸು.

ಪ್ರಚಲಿತ ಯೋಜನೆಗಳು

[:http://kannada.sf.net] ಸಮುದಾಯದಲ್ಲಿ ಈಗ ಭಾಷಾಂತರದ ಕೆಲಸ ನಡೆಯುತ್ತಿದೆ. ಮೇಲೆ ತಿಳಿಸಿದಂತೆ [:http://translate.sampada.net/] ಗೆ ತೆರಳಿ ಉತ್ಸಾಹವಿರುವವರು ಅನುವಾದ/ಭಾಷಾಂತರದಲ್ಲಿ ಕೈಜೋಡಿಸಬಹುದು. ತಂತ್ರಜ್ಞಾನದ ಬಗ್ಗೆ ತಿಳಿದವರು ಇದೇ ಸಮುದಾಯದಲ್ಲಿ ಅಥವ ಇದರೊಂದಿಗಿರುವ ಅಂಚೆ ಪೆಟ್ಟಿಗೆಯಲ್ಲಿ ಒಂದು ಮಾತು ಸೇರಿಸಿದರೆ ಸದ್ಯದಲ್ಲಿ ನಡೆಯುತ್ತಿರುವ ಯೋಜನೆಗಳ ಕೆಲಸದ ತುಣುಕುಗಳನ್ನು ಅಂಥವರೊಂದಿಗೆ ಹಂಚಿಕೊಳ್ಳುವ ಪ್ರಬಂಧ ಮಾಡಬಹುದು. ಹೆಚ್ಚಿನ ಮಾಹಿತಿ ಇಲ್ಲಿ ಬರೆಯುವುದಕ್ಕಿಂತ ಉತ್ಸಾಹವುಳ್ಳವರು ಕೆಳಗೆ ನೀಡಿದ ಸಂಪರ್ಕಗಳಲ್ಲಿರುವ ಮಾಹಿತಿ ಓದಿಕೊಂಡರೆ ಸೂಕ್ತವಾದ್ದರಿಂದ ಇಲ್ಲಿ ಹೆಚ್ಚಿನ ಮಾಹಿತಿ ಬರೆಯಲು ಹೋಗುವುದಿಲ್ಲ.

ಯಾರು ಭಾಗವಹಿಸಬಹುದು?

ಲಿನಕ್ಸಿನಲ್ಲಿ ಕನ್ನಡದ ಕೆಲಸ ಸಂಪೂರ್ಣಗೊಳಿಸಲು ತಂತ್ರಜ್ಞಾನದ ಜ್ಞಾನವಿರಲೇಬೇಕೆಂದೇನಿಲ್ಲ. ಕನ್ನಡ ತಿಳಿದವರು ಅನುವಾದ ಅಥವಾ ಭಾಷಾಂತರದಲ್ಲಿ ಪಾಲ್ಗೊಳ್ಳಬಹುದು. ತಂತ್ರಜ್ಞಾನದ ಬಗ್ಗೆ ತಿಳಿದವರು, ಲಿನಕ್ಸ್ ಬಳಸಿ ಅಭ್ಯಾಸವಿರುವವರು ಟೆಸ್ಟಿಂಗ್ ಕೆಲಸಗಳನ್ನು ವಹಿಸಿಕೊಳ್ಳಬಹುದು. ತಂತ್ರಾಂಶ ಬರೆದು ಅಭ್ಯಾಸವಿರುವವರಿಗಂತೂ ಲಿನಕ್ಸ್ ಬಳಸಿ ಗೊತ್ತಿರಲೇಬೇಕೆಂದು ಕೂಡ ಇಲ್ಲ - ಅಂಥವರಿಗೆ ಲಿನಕ್ಸ್ ಬಳಸುವುದು ಕಷ್ಟವಾಗುವುದಿಲ್ಲ, ಹೀಗೆ ತಂತ್ರಾಂಶ ಬರೆದು ಅನುಭವವಿರುವವರು ನೇರ ಲಿನಕ್ಸಿನಲ್ಲಿ ಸಂಪೂರ್ಣವಾಗಿ ಕನ್ನಡ ತರುವುದರ ಮಧ್ಯೆ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸುವತ್ತ ಕೈಜೋಡಿಸಿ ಭಾಗವಹಿಸಬಹುದು.

ಎಲ್ಲಿಂದ ಪ್ರಾರಂಭಿಸಬೇಕು?

ಹಲವರಿಗೆ ಉತ್ಸಾಹವಿರುತ್ತಾದರೂ "ಎಲ್ಲಿಂದ ಪ್ರಾರಂಭ ಮಾಡುವುದು?" ಎಂಬ ಪ್ರಶ್ನೆಯೇ ಅವರುಗಳನ್ನು ಹಲವು ದಿನಗಳ ಮಟ್ಟಿಗೆ ತಮ್ಮ ಉತ್ಸಾಹದಿಂದ ದೂರವಿಟ್ಟಿರುತ್ತದೆ. ಹಾಗಾಗಿ ಇದಕ್ಕೂ ಉತ್ತರ ಇಲ್ಲಿದೆ: "ಮೊದಲಿಗೆ ಲಿನಕ್ಸ್ ನಿಮ್ಮ ಕಂಪ್ಯೂಟರಿನಲ್ಲಿ ಹಾಕಿಕೊಳ್ಳಿ!" ಲಿನಕ್ಸ್ ಹಾಕಿಕೊಳ್ಳಲು ತಾಂತ್ರಿಕ ಪರಿಣಿತಿ ಏನೂ ಬೇಡ, ಆದರೆ (ಟಿ ವಿ, ಫ್ರಿಡ್ಜು ತಂದ ಮೇಲೆ ಅದರ ಕೈಪಿಡಿಗಳನ್ನು ಓದುತ್ತೀರಲ್ಲವೆ? ಹಾಗೆ) ಒಂದಷ್ಟು ಓದಿಕೊಳ್ಳುವ ಹವ್ಯಾಸ ಹಾಗೂ ವ್ಯವಧಾನವಿರಬೇಕು. ನಿಮಗೇನಾದರೂ ಲಿನಕ್ಸ್ ಹಾಕಿಕೊಳ್ಳುವುದು ಕಷ್ಟವಾದರೆ ಭಾಷಾಂತರ/ಅನುವಾದ ಮಾಡುವುದನ್ನು ಪ್ರಾರಂಭಿಸಬಹುದು. ಲಿನಕ್ಸ್ ಹಾಕಿಕೊಂಡ ನಂತರ ನಿಮ್ಮ ಕಂಪ್ಯೂಟರಿನಲ್ಲಿ ನಿಮಗೆ ಮೊದಲು ಬೇಕೆನಿಸುವುದು "ಕನ್ನಡ ಬರೆಯುವ, ಓದುವ ಸವಲತ್ತು"! ಹೀಗಾಗಿ ಬಳಸುತ್ತಲೇ ಕಲಿಯುತ್ತ ಒಂದೆರಡು ಹೆಜ್ಜೆ ಮುಂದಿಟ್ಟು ಕೆಲವು ಕಾರ್ಯಗಳನ್ನು ವಹಿಸಿಕೊಳ್ಳುವತ್ತ ಮುಂದುವರೆದಿರುತ್ತೀರಿ. ಉಚಿತ ಲಿನಕ್ಸ್ ಸಿ ಡಿ ಗಳು ಬೇಕಾದರೆ ನನ್ನ ಹತ್ತಿರ ಕೇಳಿ ಪಡೆದುಕೊಳ್ಳಿ. ಅಥವ [:http://shipit.ubuntu.com] ಎಂಬ ಪುಟದಲ್ಲಿ ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿರುವ ಉಬುಂಟು ಲಿನಕ್ಸ್ ಸಿ ಡಿ ಗಳನ್ನು ನೇರ ನಿಮ್ಮ ಮನೆಗೇ ತಲುಪಿಸುವ ಸಾಹಸ ನಡೆಯುತ್ತಿದೆ. ಅದೂ ಪುಕ್ಕಟೆ! ಅದರ ಸಂಪೂರ್ಣ ಪ್ರಯೋಜನ ನೀವು ಪಡೆದುಕೊಳ್ಳಬಹುದು. ಒಟ್ಟಿಗೆ ೩೦ - ೪೦ ಸಿಡಿಗಳನ್ನು ತರೆಸಿ ನಿಮ್ಮ ಸ್ನೇಹಿತರಿಗೂ ಹಂಚಬಹುದು.

ಉಲ್ಲೇಖಗಳು

[೧] [:http://kannada.sampada.net/] ಮತ್ತು [:http://translate.sampada.net] ನೋಡಿ. [೨] ಯೂನಿಕೋಡ್ ಫಾಂಟುಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ನೋಡಿ: [:http://en.wikipedia.org/wiki/Unicode_font] [೩] ಇತ್ತೀಚೆಗೆ ಹೊರತರಲಾಗಿರುವ ತುಂಗಾ ಫಾಂಟಿನಲ್ಲಿ ಕೆಲವು ಅಕ್ಷರ ಜೋಡಣೆಯ ತೊಂದರೆಗಳನ್ನು ಸರಿಪಡಿಸಿದ್ದಾರೆ. [೪] ಸಂಪಿಗೆ ಫಾಂಟು - ಮೊದಲು [:http://brahmi.sf.net/] ನಲ್ಲಿ ಡೌನ್ಲೋಡಿಗೆ ಲಭ್ಯವಿತ್ತು. ಈಗ ದೊರೆಯುತ್ತಿಲ್ಲ. [೫] XKB ಬಗ್ಗೆ ಹೆಚ್ಚಿನ ಮಾಹಿತಿಗೆ [:http://en.wikipedia.org/wiki/XKB] ನೋಡಿ. [೬] SCIM-m17n ಎಂಬ ತಂತ್ರಾಂಶದ ಜೋಡಣೆಯಿಂದ ಲಭ್ಯವಾಗುತ್ತದೆ. ಹಲವು ಪ್ರಮುಖ ವಿತರಣೆಗಳ ರೆಪಾಸಿಟರಿಗಳಲ್ಲಿ ಇದು ಲಭ್ಯ. (ಲೇಖಕರಾದ ಹರಿ ಪ್ರಸಾದ್ ನಾಡಿಗ್ ಕನ್ನಡ l10n ಪ್ರಾಜೆಕ್ಟಿನ ನಿರ್ವಾಹಕರಲ್ಲೊಬ್ಬರು. hpnadig AT gmail.com ಈ ಮೇಯ್ಲ್ ವಿಳಾಸಕ್ಕೆ ಬರೆದು ಇವರನ್ನು ಸಂಪರ್ಕಿಸಬಹುದು)

Rating
No votes yet