ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ

ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದಲ್ಲಿ ಈ ಆಹ್ವಾನ ಪತ್ರಿಕೆ ನೋಡಿದೆ.
ಅವ್ರ ಅನುಮತಿ ಪಡೆದು ಇಲ್ಲಿ ಹಾಕಕತ್ತಿನಿ.
ಬರಹ ಓದ್ರಿ ಭಾಳ ಚೊಲೋ ಬರದಾರ, ನಿಜಕ್ಕೂ ನಾವೆಲ್ಲ ಯಾಕ ಜಾಗೃತರಾಗಬೇಕು ಅನ್ನೋದನ್ನ ಬಿಡಿಸಿ ಹೇಳ್ಯಾರ.

ಆಹ್ವಾನ ಪತ್ರಿಕಾ ನೋಡಾಕ ಈ ಕೊಂಡಿ ಕುಕ್ಕ್ರಿ
http://karnatakarakshanavedike.org/modes/view/86/vishva-kannadigara-jagruti-samavesha.html
-----------------------------------------------------------------------------------------------------------------------------------------------------
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ದಕ್ಷ ನಾಯಕತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನ್ನಡ ತಾಯಿಯ ಮಕ್ಕಳನ್ನು ಹಳದಿ ಕೆಂಪು ಬಾವುಟದ ಅಡಿಯಲ್ಲಿ ಸಂಘಟಿಸಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ನಾನಾ ಭಾಗಗಳಲ್ಲಿರುವ ಕನ್ನಡಪರ ಹೋರಾಟಗಾರರನ್ನು, ಚಿಂತಕರನ್ನು, ಜನಸಾಮಾನ್ಯರನ್ನು ಒಂದೆಡೆ ಸೇರಿಸಿ ನಾಡು ನುಡಿ ನಾಡಿಗರ ಏಳಿಗೆಯ ಕನಸುಗಳು, ನಡೆದು ಬಂದ ದಾರಿಗಳ ಪರಾಮರ್ಶೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಿಕ್ಕುಗಳ ಬಗ್ಗೆ ಸಮಾಲೋಚನೆ ನಡೆಸುವ ಮಹತ್ವದ ಕಾಯಕವನ್ನು ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಹೆಸರಿನಲ್ಲಿ ನಡೆಸುವ ಪರಿಪಾಠವನ್ನು ಆರಂಭಿಸಿದೆ ಮತ್ತು ೨೦೦೮ರ ಡಿಸೆಂಬರ್ ತಿಂಗಳಿನ ೨೦, ೨೧ನೇ ತಾರೀಕಿನಂದು ಜಗತ್ತಿನ ಮೂಲೆಮೂಲೆಗಳಲ್ಲಿನ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.

ಸಮಾವೇಶ

ಕರ್ನಾಟಕ ರಕ್ಷಣಾ ವೇದಿಕೆಯು ನಾಡಿಗರೆಲ್ಲರನ್ನು ಒಗ್ಗೂಡಿಸಿ ನಿಯಮಿತವಾಗಿ ಸಮಾವೇಶಗಳನ್ನು ನಡೆಸುತ್ತಾ ಬಂದಿದೆ. ಈ ಸಮಾವೇಶಗಳು ಕನ್ನಡಿಗರ ಪಾಲಿಗೆ ಅಕ್ಷರಶಃ ಹಬ್ಬಗಳಂತೆ. ಸಮಾವೇಶದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಕನ್ನಡದ ಕಲಿಗಳು ಬಂದು ಹೋರಾಟದ ಸಾಗರಕ್ಕೆ ಸೇರುವ ನದಿಗಳಾಗುತ್ತಾರೆ. ಸಾಕಷ್ಟು ಮನರಂಜನೆ, ಹೊಟ್ಟೆ ತುಂಬ ಊಟತಿಂಡಿ, ಹೊರ ಊರಿನಿಂದ ಬಂದವರಿಗೆ ನೀಡುವ ಅಕ್ಕರೆಯ ಆತಿಥ್ಯ, ಊರ ತುಂಬೆಲ್ಲ ಮಿರ ಮಿರ ಮಿಂಚುವ ಕನ್ನಡದ ಬಾವುಟಗಳು. ಕನ್ನಡಿಗರ ಕೊರಳಲ್ಲಿ ನಲಿಯುವ ಕನ್ನಡದ ಹಳದಿ ಕೆಂಪು ಶಾಲುಗಳು, ಊರ ಪ್ರಮುಖ ಬೀದಿಗಳಲ್ಲಿ ಸಾಗುವ ಭಾರೀ ಮೆರವಣಿಗೆ, ಅದರೊಳಗೆ ನಾಡ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾ ಪ್ರಾಕಾರಗಳನ್ನು ಪ್ರದರ್ಶಿಸುವ ಉತ್ಸಾಹಿಗಳ ದಂಡು, ಕಿವಿ ಮೊರೆಯುವ ಕನ್ನಡ ಪರ ಘೋಷಣೆಗಳು, ಸಮಾವೇಶದಲ್ಲಿ ನಡೆಯುವ ಅರ್ಥಪೂರ್ಣ ವಿಚಾರಗೋಷ್ಟಿಗಳು, ಹಿರಿಯರಿಂದ ಹಿತನುಡಿಗಳು, ನಾಡುನುಡಿಗಾಗಿ ದುಡಿದ ಗಣ್ಯರಿಗೆ ಸಲ್ಲಿಸುವ ಗೌರವಗಳು, ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ, ಹಿಂದಿನ ದಾರಿಯ ಅವಲೋಕನ, ಮುಂದಿನ ಸವಾಲುಗಳು ಮತ್ತು ಅವುಗಳನ್ನು ಎದುರಿಸಲು ಬೇಕಾದ ಶಕ್ತಿ, ಯೋಜನೆಗಳ ಕ್ರೋಢೀಕರಣ.. ಇವುಗಳೆಲ್ಲಾ ಅಂತಹ ಸಮಾವೇಶಗಳ ಪ್ರಮುಖ ಅಂಗಗಳಾಗಿವೆ. ಇದುವರೆವಿಗೆ ಕರ್ನಾಟಕ ರಕ್ಷಣಾ ವೇದಿಕೆಯು ನಾಡು ನುಡಿಗಾಗಿ ದುಡಿದಂತಹ ಮಹನೀಯರುಗಳಾದ ಶ್ರೀ ಕಯ್ಯಾರ ಕಿಙ್ಞಣ್ಣ ರೈ - ಕಾಸರಗೋಡು, ಶ್ರೀ ಸಿದ್ಧನಗೌಡ ಪಾಟೀಲ್ - ಬೆಳಗಾವಿ, ಶ್ರೀ ದೇ. ಜವರೇಗೌಡ - ಮೈಸೂರು, ಪಾಟೀಲ್ ಪುಟ್ಟಪ್ಪನವರು - ಧಾರವಾಡ... ಇವರುಗಳಿಗೆ ಸ್ವಾಭಿಮಾನ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನಮ್ಮ ಗುರಿ: ಸಮಗ್ರ ಕರ್ನಾಟಕದ ಅಭಿವೃದ್ಧಿ - ನಾಡ ನಾಳೆಗಳು

ಕನ್ನಡ ಜನರು ಜಗತ್ತಿನಲ್ಲಿ ಯಾವೊಂದು ಜನಾಂಗಕ್ಕೂ ಕಡಿಮೆಯಿಲ್ಲದಂತಹ ಸಾಧನೆಗಳನ್ನು ಎಲ್ಲ ರಂಗಗಳಲ್ಲಿ ಸಾಧಿಸಬೇಕು. ಹಾಗೆ ಸಾಧಿಸಲು ಉತ್ತೇಜನ ನೀಡುವಂತಹ ವಾತಾವರಣ ನಾಡಿನಲ್ಲಿ ಉಂಟಾಗಬೇಕು. ನಮ್ಮ ನಾಡು ಸಮೃದ್ಧಿಯ ಬೀಡಾಗಬೇಕು ಅನ್ನುವ ಗುರಿ ಮುಟ್ಟಲು ಅಗತ್ಯವಿರುವ ಹೆಜ್ಜೆಗಳನ್ನು ಇಂದೇ ಗುರುತಿಸಿ ಆ ದಿಕ್ಕಿನಲ್ಲಿ ನಾಡು - ನುಡಿ - ನಾಡಿಗರನ್ನು ಕೊಂಡೊಯ್ಯಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ. ಇಂದಿನ ನಮ್ಮ ನಾಡಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಆಳವಾದ, ಪೂರ್ವಾಗ್ರಹವಿಲ್ಲದ ಅರಿವನ್ನು ಹೊಂದಿದ್ದು, ಹಳ್ಳಿ, ನಗರ, ಪಟ್ಟಣಗಳ ನಾಡಿಮಿಡಿತ ಬಲ್ಲವರಿದ್ದೇವೆ. ನಮ್ಮ ಕಲಿಕೆ, ನಮ್ಮ ಇತಿಹಾಸ ಪ್ರಜ್ಞೆ, ನಮ್ಮ ಬಲಾಬಲ, ನಮ್ಮ ಉದ್ದಿಮೆಗಾರಿಕೆ, ಪರಿಣಿತಿ ಹೀಗೆ ಎಲ್ಲ ಕ್ಷೇತ್ರಗಳ ಅಧ್ಯಯನದಲ್ಲಿ ತೊಡಗಿದ್ದು ಆ ಮೂಲಕ ಇಂದು ನಾವು ನಿಂತಿರುವ ನೆಲೆಯನ್ನು ಮನದಟ್ಟು ಮಾಡಿಕೊಂಡು ನಾಳೆಗಳಿಗಾಗಿ ಚಿಂತನೆ, ಯೋಜನೆಗಳನ್ನು ನಡೆಸಲು ಮುಂದಾಗಿದ್ದೇವೆ.

ಈ ಬಾರಿಯ ಸಮಾವೇಶದಲ್ಲಿ ಕನ್ನಡ ನಾಡು : ನಮ್ಮ ನಾಳೆಗಳು ಎಂಬ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಗೋಷ್ಠಿಯಲ್ಲಿ ಜಗತ್ತಿನ ಎಲ್ಲೆಡೆಯಲ್ಲಿರುವ ಕನ್ನಡಿಗರೂ ಭಾಗವಹಿಸಲಿದ್ದಾರೆ. ನಾಡಪರವಾದ ಚಿಂತನೆ, ಅಕ್ಕರೆಗಳಿರುವ ಎಲ್ಲ ಚಿಂತಕರನ್ನು ಒಗ್ಗೂಡಿಸಿ ಕನ್ನಡ ನಾಡಿನ ನಾಳೆಗಳ ಬಗ್ಗೆ, ಗುರಿ ಮುಟ್ಟುವ ದಾರಿಯ ಬಗ್ಗೆ ಅಂದು ಅಲ್ಲಿ ಚಿಂತನೆ ನಡೆಯಲಿದೆ. ಅಲ್ಲಿ ಕನ್ನಡ ನಾಡು ಮುಂದಿನ ದಿನಗಳಲ್ಲಿ ಹೇಗಿರಬೇಕು? ನಮ್ಮ ನಾಡಿನ ಏಳಿಗೆ ಹೇಗೆ ಸಾಧ್ಯಾ? ಇದರಲ್ಲಿ ಹೊರನಾಡ ಕನ್ನಡಿಗರ, ಕರ್ನಾಟಕ ಸರ್ಕಾರದ, ಕನ್ನಡಿಗರ ಪಾತ್ರವೇನು? ನಾಡಿನ ಮುಂದಿರುವ ಸವಾಲುಗಳೇನು? ಅವುಗಳಿಗೆ ಪರಿಹಾರಗಳೇನು? ಎಂಬೆಲ್ಲ ವಿಷಯಗಳ ಬಗ್ಗೆ ಚಿಂತನೆ ನಡೆಯಲಿದೆ. ಸುಮಾರು ಇಪ್ಪತೈದು ದೇಶಗಳಿಂದಲೂ, ಹೊರರಾಜ್ಯಗಳಿಂದಲೂ ಕನ್ನಡಿಗರು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬನ್ನಿ ಕನ್ನಡಮ್ಮನ ಮಕ್ಕಳ ಈ ಐತಿಹಾಸಿಕ ಒಗ್ಗಟ್ಟಿನ ಸಮ್ಮೇಳನಕ್ಕೆ ನೀವೂ ಸಾಕ್ಷಿಯಾಗ ಬನ್ನಿ, ನಾಡು ನುಡಿಯ ರಕ್ಷಣೆಗೆ ಮುಂದಾಗ ಬನ್ನಿ. ಕನ್ನಡ ನಾಡನ್ನು ಚಿನ್ನದ ಬೀಡನ್ನು ಕಟ್ಟೋಣ ಬನ್ನಿ.

ಈ ವಿಚಾರ ಸಂಕಿರಣದಲ್ಲಿ ನಾಡಿನ ಅನೇಕ ಉದ್ಯಮಿಗಳು, ಹೊರನಾಡ ಕನ್ನಡಿಗರು, ಸರ್ಕಾರದ ಪ್ರತಿನಿಧಿಗಳು, ಉದ್ದಿಮೆದಾರರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ತಜ್ಞರುಗಳು ಭಾಗವಹಿಸಲಿದ್ದಾರೆ. ನಮ್ಮ ಕನ್ನಡ ನಾಡಿನಲ್ಲಿ ಉದ್ದಿಮೆಗಳ ಮಹತ್ವ, ಸವಾಲುಗಳು, ಉದ್ಯೋಗಾವಕಾಶಗಳು, ಯಾವ ಉದ್ದಿಮೆ ನೀತಿಯನ್ನು ಅನುಸರಿಸಬೇಕು ಎಂಬೆಲ್ಲಾ ವಿಷಯಗಳ ವಿಷಯ ಮಂಡನೆ ಮಾಡಲಗುತ್ತದೆ.

ಭಾಷಣಕಾರರು ಮತ್ತು ವಿಷಯ ವ್ಯಾಪ್ತಿ :

೧. ಉದ್ದಿಮೆದಾರರ ಪ್ರತಿನಿಧಿ
೨. ಅನಿವಾಸಿ ಕನ್ನಡಿಗ ಉದ್ದಿಮೆದಾರ
೩. ಸರ್ಕಾರದ ಪ್ರತಿನಿಧಿ - ಕೈಗಾರಿಕಾ ಮಂತ್ರಿಗಳು
೪. ಸರ್ಕಾರದ ಪ್ರತಿನಿಧಿ - ಕಾರ್ಮಿಕ ಮಂತ್ರಿಗಳು
೫. ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು

ಭಾಷಣ ಸಾರಾಂಶಗಳು :

೧. ಉದ್ದಿಮೆದಾರ ಪ್ರತಿನಿಧಿ : ಕನ್ನಡ ನಾಡಿನ ಮುಂದೆ ಜಾಗತೀಕರಣ ಇಟ್ಟಿರುವ ಸವಾಲುಗಳೇನು? ಇವುಗಳನ್ನು ಎದುರಿಸಲು ಜಾಗತಿಕ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆಯೊಂದೇ ಹೇಗೆ ಮಾರ್ಗ? ನಾವೀಗ ಎಲ್ಲಿದ್ದೇವೆ? ಹೇಗೆ ಮುಂದುವರಿಯಬೇಕು? ನಮ್ಮ ಸರ್ಕಾರದಿಂದ ಏನೇನು ನಿರೀಕ್ಷೆಗಳಿವೆ? ಈಗ ಇರುವ ತೊಂದರೆಗಳೇನು? ಯಾವ ಕ್ಷೇತ್ರಗಳಲ್ಲಿ ಮುಂದಿನ ಭವಿಷ್ಯಗಳು ಅಡಗಿವೆ? ನಮ್ಮ ಶಿಕ್ಷಣ ಸಂಸ್ಥೆಗಳ ಪಾತ್ರವೇನು? ನಮ್ಮ ಉದ್ದಿಮೆಗಳಲ್ಲಿ ಯಶಸ್ಸು ಸಾಧಿಸಲು ಬೇಕಾಗಿರುವ ಪರಿಣಿತಿಗಳು ಯಾವುವು? ಅವುಗಳನ್ನು ನಮ್ಮ ಜನರಲ್ಲಿ ತುಂಬುವಲ್ಲಿ ಸರ್ಕಾರದ, ಉದ್ದಿಮೆಗಳ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರವೇನು?

೨. ಅನಿವಾಸಿ ಕನ್ನಡಿಗರ ಪ್ರತಿನಿಧಿ : ಹೊರನಾಡುಗಳಲ್ಲಿ ಉದ್ದಿಮೆಗಾರಿಕೆಗೆ ಪ್ರೋತ್ಸಾಹ ಯಾವರೀತಿ ಇದೆ? ಕನ್ನಡ ನಾಡಿನಲ್ಲಿ ಬಂಡವಾಳ ಹೂಡಲು ಇರುವ ಅಡ್ಡಿ ಆತಂಕಗಳೇನು? ಸರ್ಕಾರದಿಂದ ಯಾವ ರೀತಿಯ ಸಹಕಾರವನ್ನು ನಿರೀಕ್ಷೆ ಮಾಡುತ್ತೀರಾ? ಎಂತಹ ಉದ್ದಿಮೆಗಳಿಗೆ ಸದ್ಯಕ್ಕೆ ಬೇಡಿಕೆಗಳಿವೆ? ಹೊರನಾಡಿನ ಮಾರುಕಟ್ಟೆ ಗೆಲ್ಲಲು ಯಾವ ತಂತ್ರಗಳನ್ನು ಬಳಸುವವರಿದ್ದೇವೆ? ಹೇಗೆ ಹೊರ ನಾಡಿನಲ್ಲಿ ನಮ್ಮ ನಾಡಿನ ಉತ್ಪನ್ನಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಲಾಬಿ ಮಾಡಬಹುದು? ಹೇಗೆ ಜಗತ್ತಿನ ಅತ್ಯುತ್ತಮ ಕಲಿಕಾ/ ತರಬೇತಿ ಕೇಂದ್ರಗಳನ್ನು ನಾಡಿಗೆ ತರುವುದು? ಪ್ರಪಂಚದ ಮೂಲೆಮೂಲೆಗಳ ಅತ್ಯುತ್ತಮ ಆಚರಣೆ/ ವಿಧಾನಗಳನ್ನು ನಾಡಿಗೆ ತರುವುದು?

೩. ಸರ್ಕಾರದ ಪ್ರತಿನಿಧಿಗಳು : ಕರ್ನಾಟಕ ರಾಜ್ಯ ಸರ್ಕಾರವು ಉದ್ದಿಮೆದಾರಿಕೆಯ ಬೆಳವಣಿಗೆಗಾಗಿ ಹೊಂದಿರುವ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆಗಳೇನು? ಹೇಗೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಾಗುವುದು? ಹೇಗೆ ನಾಡಿಗೆ ಅತಿ ಹೆಚ್ಚಿನ ಲಾಭ ತರುವಂತೆ ಯೋಜನೆಗಳನ್ನು ರೂಪಿಸಲಾಗುವುದು? ಉದ್ದಿಮೆಗಳಲ್ಲಿನ ಉದ್ಯೋಗಗಳಿಗೆ ಹೇಗೆ ನಾಡಿನ ವಿದ್ಯಾರ್ಥಿ ಸಮುದಾಯವನ್ನು ಸಿದ್ಧಗೊಳಿಸುವುದು? ಎಂತಹ ಕಲಿಕಾ ವ್ಯವಸ್ಥೆಯನ್ನು ರೂಪಿಸಲಾಗುವುದು? ಹೇಗೆ ಶಿಕ್ಷಣ ಸಂಸ್ಥೆಗಳೊಂದಿಗೆ ಉದ್ದಿಮೆಗಳ ಸಹಯೋಗವನ್ನು ಏರ್ಪಡಿಸುವುದು? ಮುಂದಿನ ೧೦ ವರ್ಷಗಳಲ್ಲಿ ಏನನ್ ಸಾಧಿಸಲಾಗುತ್ತದೆ? ಮುಂದಿನ ೨೫ ವರ್ಷಗಳಲ್ಲಿ? ಹೇಗೆ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲಾಗುತ್ತದೆ? ಉದ್ಯೋಗ ನೀತಿಯೇನು? ಉದ್ದಿಮೆದಾರರಿಗೆ ಯಾವ ರೀತಿಯ ನಿಬಂಧನೆಗಳನ್ನು ವಿಧಿಸಲಾಗುವುದು.

೪. ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು : ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಇಂದಿನ ಸವಾಲನ್ನು ಎದುರಿಸಲು ಸಿದ್ಧಮಾಡಬೇಕು? ಯಾವ ಯಾವ ಕಲಿಕಾ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಅನ್ನುವುದರ ಬಗ್ಗೆ ಅನಿಸಿಕೆಗಳು.

Rating
No votes yet

Comments