ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೩

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೩

ಶ್ರಾದ್ಧವನ್ನು ಮಾಡಲು ಸೂಕ್ತ ಸಮಯ ಮತ್ತು ಸ್ಥಳ
          ಸಾಮಾನ್ಯವಾಗಿ ಶ್ರಾದ್ಧವನ್ನು ಚಾಂದ್ರಮಾನ ಪದ್ಧತಿಯಂತೆ ಮೃತನು ಮರಣಿಸಿದ ತಿಥಿಯಂದು ಮಾಡಲಾಗುತ್ತದೆ. ಉದಾಹರಣೆಗೆ, ಮೃತನು ಮಾಘಶುಕ್ಲ ಅಷ್ಟಮಿಯಂದು (ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವ ಮಾಘಮಾಸದ ಶುದ್ಧ ಅಷ್ಟಮಿ ಅಥವಾ ಎಂಟನೆಯ ದಿನದಂದು) ಮೃತಪಟ್ಟಿದ್ದರೆ ಪ್ರತಿ ವರ್ಷ ಅದೇ ತಿಥಿಯಂದು ಅವನ ಶ್ರಾದ್ಧವನ್ನು ಕೈಗೊಳ್ಳಬೇಕು.
          ಆಹಿತಾಗ್ನಿಗಳು (ವಿಧಿಬದ್ಧವಾಗಿ ಪವಿತ್ರವಾದ ವೈದಿಕ ಅಗ್ನಿಗಳನ್ನು ನಿರ್ವಹಿಸುವವರು) ಕೇವಲ ಅಮವಾಸ್ಯೆಯ ದಿನದಂದು ಮಾತ್ರವೇ ಶ್ರಾದ್ಧವನ್ನು ಮಾಡಬೇಕೆಂದು ಹೇಳಲಾಗಿದೆ.
          ಆಸಕ್ತಿಕರ ವಿಷಯವೇನೆಂದರೆ ಮೊದಲ ಮೂರು ವರ್ಣಗಳಿಗೆ ಸೇರಿದ ಪ್ರತಿ ಗೃಹಸ್ಥನೂ ಸಹ ಪ್ರತಿದಿನವೂ ಪಂಚಮಹಾಯಜ್ಞಗಳನ್ನು ಕಡ್ಡಾಯವಾಗಿ ಮಾಡಲೇಬೇಕಾಗಿತ್ತು ಮತ್ತು ಅವುಗಳಲ್ಲೊಂದಾದ ಪಿತೃಯಜ್ಞ ಅಥವಾ ಪೂರ್ವಿಕರಿಗೆ ಆಹಾರ ಅಥವಾ ತರ್ಪಣ ಅಥವಾ ಹಾಲು ಅಥವಾ ಹಣ್ಣುಗಳ ಅರ್ಪಣೆ ಮಾಡುವುದು ಅದರ ಅವಿಭಾಜ್ಯ ಅಂಗವಾಗಿತ್ತು.
          ಶ್ರಾದ್ಧಗಳನ್ನು ಕೆಲವೊಂದು ಮಂಗಳಕರ ಅಥವಾ ಶುಭದಿನಗಳಂದೂ ಸಹ ಮಾಡಬಹುದು. ಉದಾಹರಣೆಗೆ - ಅಮವಾಸ್ಯೆ, ಮಾರ್ಗಶಿರ (ನವೆಂಬರ್- ಡಿಸೆಂಬರ್), ಪೌಷ (ಡಿಸೆಂಬರ್ - ಜನವರಿ) ಮತ್ತು ಫಾಲ್ಗುಣ (ಜನವರಿ -ಫೆಬ್ರವರಿ) ಮಾಸಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಗಳಲ್ಲಿ, ಅಥವಾ ಯಾವುದೇ ಮಾಸದ ಕೃಷ್ಣ ಪಕ್ಷದಲ್ಲಿ; ಎರಡು ಆಯನಗಳಲ್ಲಿ (ದಕ್ಷಿಣ ಮತ್ತು ಉತ್ತರ ಅವು ಕ್ರಮವಾಗಿ ಜೂನ್ ಮತ್ತು ಜನವರಿ ತಿಂಗಳಿನಲ್ಲಿ ಬರುತ್ತವೆ); ಸಂಕ್ರಾಂತಿಗಳಂದು (ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ದಿನಗಳಂದು); ಮತ್ತು ಸಂತೋಷದ ಸಮಾರಂಭಗಳಲ್ಲಿ ಉದಾಹರಣೆಗೆ ಪುತ್ರನ ಜನನ ಕಾಲದಲ್ಲಿ ಮತ್ತು ಇತರೇ ಸಮಯಗಳಲ್ಲಿ ಅಂದರೆ ಗ್ರಹಣ ಕಾಲಗಳಲ್ಲಿ ಮತ್ತು ಶಾಸ್ತ್ರವಿಧಿತ ಇತರೇ ಶುಭದಿನಗಳಲ್ಲಿ.
          ಚಾಂದ್ರಮಾನದ ಪ್ರಕಾರ ಕೆಲವೊಂದು ವಿಶೇಷವಾದ ಶುಭದಿನಗಳು - ಯುಗಾದಿ ಅಥವಾ ಮನ್ವಂತರಗಳಂದು ಶ್ರಾದ್ಧಕಾರ್ಯಗಳನ್ನು ಮಾಡುವುದು ಶ್ರೇಯಸ್ಕರವೆಂದು ಹೇಳಲಾಗಿದೆ.
          ಮಾಸಿಕ ಶ್ರಾದ್ಧಗಳನ್ನು ಸಾಮಾನ್ಯವಾಗಿ ವ್ಯಕ್ತಿಯು ಮೃತಪಟ್ಟ ಮೊದಲನೇ ವರ್ಷದಲ್ಲಿ ಮಾತ್ರವೇ ಮಾಡಲಾಗುತ್ತದೆ.
          ಇನ್ನು ಸೂಕ್ತ ಸ್ಥಳದ ಕುರಿತು ಹೇಳಬೇಕೆಂದರೆ, ಶ್ರಾದ್ಧವನ್ನು ಸ್ವಚ್ಛವಾಗಿರುವ ಸ್ಥಳಗಳಲ್ಲಿ ಅದರಲ್ಲೂ ದಕ್ಷಿಣದ ಕಡೆಗೆ ಇಳಿಜಾರು ಹೊಂದಿರುವ ಪ್ರದೇಶಗಳಲ್ಲಿ ಮಾಡುವುದು ಹೆಚ್ಚು  ಸೂಕ್ತವೆಂದು ಪರಿಗಣಿಸಲಾಗಿದೆ. ಇನ್ನು ನಿರ್ಜನ ಪ್ರದೇಶಗಳಲ್ಲಿ ಮತ್ತು ಎಲ್ಲ ಕಡೆಯಿಂದಲೂ ಮರೆಯಾಗಿರುವ ಜಾಗಗಳು ಅತ್ಯಂತ ಪ್ರಶಸ್ತವೆಂದು ಹೇಳಲಾಗಿದೆ. ಆದರೆ, ಒಬ್ಬರ ಸ್ವಂತ ಮನೆಗಳಲ್ಲಿ ಶ್ರಾದ್ಧಗಳನ್ನು ಮಾಡುವುದು ಸಾಮಾನ್ಯವಾಗಿದೆ ಮತ್ತು ಇದು ಹೆಚ್ಚು ಅನುಕೂಲಕರವೂ ಹೌದು.
          ಶ್ರಾದ್ಧಗಳನ್ನು ಪವಿತ್ರ ಕ್ಷೇತ್ರಗಳಲ್ಲಿ ಮತ್ತು ಪುಣ್ಯ ಸ್ಥಳಗಳ್ಲಿ ಕೈಗೊಳ್ಳುವುದನ್ನು ಅತ್ಯಂತ ಫಲದಾಯಕವೆಂದು ಶಾಸ್ತ್ರಗಳು ಸಾರುತ್ತವೆ. ಈ ಕೆಳಗಿನ ಸ್ಥಳಗಳನ್ನು ಬಹುವಾಗಿ ಉಲ್ಲೇಖಿಸಲಾಗಿದೆಯಲ್ಲದೇ ಆ ಸ್ಥಳಗಳಲ್ಲಿ ಶ್ರಾದ್ಧಕರ್ಮಗಳನ್ನು ಮಾಡುವುದು ಅತ್ಯಂತ ಪುಣ್ಯಪ್ರದವೆಂದೂ ಸಹ ಒಕ್ಕಣಿಸಲಾಗಿದೆ. ಗಯಾ ಕ್ಷೇತ್ರ (ಬಿಹಾರ ರಾಜ್ಯ), ಪ್ರಭಾಸ ಕ್ಷೇತ್ರ (ಗುಜರಾತ್), ಪುಷ್ಕರ (ರಾಜಸ್ಥಾನ), ಪ್ರಯಾಗ (ಉತ್ತರ ಪ್ರದೇಶ), ವಾರಣಾಸಿ (ಬನಾರಸ್ ಅಥವಾ ಕಾಶಿ) ಮತ್ತು ಕುರುಕ್ಷೇತ್ರ (ಹರಿಯಾಣ). ಅಮರಕಂಟಕ (ಮಧ್ಯಪ್ರದೇಶ); ಗಂಗೆ, ಯಮುನೆ ಮತ್ತು ನರ್ಮದಾ ನದಿಯ ತಟಗಳು.
          ಮ್ಲೇಚ್ಛ ದೇಶಗಳಲ್ಲಿ ಅಂದರೆ ಎಲ್ಲಿ ಜನಗಳು ವರ್ಣಾಶ್ರಮ ಧರ್ಮಗಳನ್ನು ಪಾಲಿಸುವುದಿಲ್ಲವೋ ಅಲ್ಲಿ ಶ್ರಾದ್ಧ ಕರ್ಮಗಳನ್ನು ಕೈಗೊಳ್ಳಬಾರದು.
ಶ್ರಾದ್ಧಗಳ ವರ್ಗೀಕರಣ
          ಶ್ರಾದ್ಧಗಳನ್ನು ಹಲವು ವಿಧವಾಗಿ ವರ್ಗೀಕರಿಸಿಲಾಗಿದೆ -
·       ನಿತ್ಯ, ನೈಮಿತ್ತಿಕ, ಕಾಮ್ಯ
·       ಏಕೋದ್ಧಿಷ್ಟ ಮತ್ತು ಪಾರ್ವಣ
·       ಅಹರಹಶ್ರಾದ್ಧ, ಪಾರ್ವಣಶ್ರಾದ್ಧ, ವೃದ್ಧಿಶ್ರಾದ್ಧ, ಏಕೋದ್ಧಿಷ್ಟ ಶ್ರಾದ್ಧ ಮತ್ತು ಸಪಿಂಡೀಕರಣ
          ನಿತ್ಯ ಶ್ರಾದ್ಧಗಳನ್ನು ನಿಗದಿತ ಸಂದರ್ಭಗಳಲ್ಲಿ ತಪ್ಪದೇ ಮಾಡಬೇಕು. ಉದಾಹರಣೆಗೆ ಪ್ರತಿದಿನ, ಅಮಾವಸ್ಯೆಯ ದಿನ ಅಥವಾ ಅಷ್ಟಮಿಗಳಂದು ಕೈಗೊಳ್ಳುವ ಶ್ರಾದ್ಧಗಳು.
          ನೈಮಿತ್ತಿಕ ಶ್ರಾದ್ಧಗಳನ್ನು ವಿಶೇಷ ಕಾರಣ ಅಥವಾ ನಿಮಿತ್ತಕ್ಕಾಗಿ ಮಾಡಬೇಕು, ಉದಾಹರಣೆಗೆ ಪುತ್ರನ ಜನನ.
          ಕಾಮ್ಯಶ್ರಾದ್ಧಗಳನ್ನು ಕೆಲವೊಂದು ಆಸೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕೈಗೊಳ್ಳಬೇಕು.
          ಕೆಲವೊಂದು ಶಾಸ್ತ್ರಕಾರರು ಈಗಿರುವ ಶ್ರಾದ್ಧಗಳೊಂದಿಗೆ ಮತ್ತೊಂದಷ್ಟನ್ನು ಸೇರಿಸಿ ಅವುಗಳ ಸಂಖ್ಯೆಗಳನ್ನು ಹನ್ನೆರಡಕ್ಕೆ ಏರಿಸಿರುತ್ತಾರೆ. ಉದಾಹರಣೆಗೆ, ಗೋಷ್ಠಿಶ್ರಾದ್ಧ, ಶುದ್ಧಿಶ್ರಾದ್ಧ, ಯಾತ್ರಾಶ್ರಾದ್ಧ, ಪುಷ್ಠಿಶ್ರಾದ್ಧ, ಮೊದಲಾದವು.
          ಎಲ್ಲಾ ಶ್ರಾದ್ಧಗಳಲ್ಲಿ ಏಕೋದ್ಧಿಷ್ಟ, ಪಾರ್ವಣ, ಸಪಿಂಡೀಕರಣ (ಸಪಿಂಡನ) ಮತ್ತು ವೃದ್ಧಿಶ್ರಾದ್ಧಗಳನ್ನು ಪ್ರಧಾನವಾದವುಗಳೆಂದು ಪರಿಗಣಿಸಲಾಗುತ್ತದೆ.
          ಏಕೋದ್ದಿಷ್ಠ ಶ್ರಾದ್ಧವು ಕೇವಲ ಒಬ್ಬರಿಗಾಗಿಯೇ ಅಂದರೆ ಸತ್ಯ ವ್ಯಕ್ತಿಯನ್ನು ಮಾತ್ರವೇ ಉದ್ದೇಶಿಸಿ ಮಾಡುವ ಕಾರ್ಯವಾಗಿದೆ. ಇದರಲ್ಲಿ ಕೇವಲ ಒಂದೇ ಒಂದು ಪಿಂಡವನ್ನು ಅರ್ಪಿಸಲಾಗುತ್ತದೆ.
          ಪಾರ್ವಣ ಕ್ರಿಯೆಯಲ್ಲಿ, ಮೂರು ಪಿಂಡಗಳನ್ನು ಕ್ರಮವಾಗಿ ಪಿತ(ತಂದೆಗೆ), ಪಿತಾಮಹ (ತಂದೆಯ-ತಂದೆ ಅಥವಾ ತಾತ) ಮತ್ತು ಪ್ರಪಿತಾಮಹ (ತಂದೆಯ-ತಂದೆಯ-ತಂದೆ ಅಥವಾ ಮುತ್ತಾತ) ಇವರುಗಳಿಗೆ ಅರ್ಪಿಸಲಾಗುತ್ತದೆ.
          ಸಪಿಂಡನ ಕಾರ್ಯವನ್ನು ವ್ಯಕ್ತಿಯು ಮರಣಿಸಿದ ನಂತರ ಬರುವ ಹನ್ನೆರಡನೇ ದಿನದಂದು ಮಾಡಲಾಗುತ್ತದೆ. ಈ ಕ್ರಿಯೆಯು ಮೃತ ವ್ಯಕ್ತಿಯ ಆತ್ಮವು ಅವನ ಪೂರ್ವಜರೊಂದಿಗೆ ಸೇರುವುದನ್ನು ಸಾಂಕೇತಿಕವಾಗಿ ತಿಳಿಸುತ್ತದೆ.
       ‘ವೃದ್ಧಿಶ್ರಾದ್ಧ’ವನ್ನು ‘ನಾಂದಿಮುಖಶ್ರಾದ್ಧ’ವೆಂದೂ ಕರೆಯಲಾಗುತ್ತದೆ. ಇದನ್ನು ಎಲ್ಲಾ ಶುಭಕಾರ್ಯಗಳ ಸಂದರ್ಭದಲ್ಲಿ ಉದಾಹರಣೆಗೆ ಮಗ ಅಥವಾ ಮಗಳ ಮದುವೆ, ಹೊಸ ಮನೆಯ ಪ್ರವೇಶದ ಸಮಯ, ಮೊದಲಾದ ಸಮಯಗಳಲ್ಲಿ ಕೈಗೊಳ್ಳಲಾಗುತ್ತದೆ. ಈ ಶ್ರಾದ್ಧಗಳಲ್ಲಿ ‘ನಾಂದಿಮುಖಪಿತೃ’ಗಳೆಂದು ಕರೆಯಲ್ಪಡುವ ಮೂರು ತಲೆಮಾರಿನ ಮೇಲಿನ ಪಿತೃಗಳನ್ನು  ಸೂಕ್ತವಾದ ಶ್ರಾದ್ಧಕಾರ್ಯಗಳಿಂದ ತೃಪ್ತಿಪಡಿಸಲಾಗುತ್ತದೆ.  
(ಆಂಗ್ಲ ಮೂಲ: ಸ್ವಾಮಿ ಹರ್ಷಾನಂದರು ರಚಿಸಿರುವ Shraddha (Religious Rites in Honour of Fore Fathers) ಪುಟ ೧೬-೨೧ ರ ಅನುವಾದಿತ ಭಾಗ)
 
ಹಿಂದಿನ ಲೇಖನಕ್ಕೆ ಕೊಂಡಿ - https://sampada.net/blog/%E0%B2%B6%E0%B3%8D%E0%B2%B0%E0%B2%BE%E0%B2%A6%E...
 

Rating
No votes yet

Comments