ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೪

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೪

ಪಾರ್ವಣ ಶ್ರಾದ್ಧ
          ವೈದಿಕ ಕಾಲದ ಆರಂಭಿಕ ದಿನಗಳಲ್ಲಿ ಪ್ರತಿ ’ಆಹಿತಾಗ್ನಿ’ಯೂ ಸಹ ಅಮಾವಾಸ್ಯೆಯ ದಿನದಂದು ಪಿಂಡಪ್ರಧಾನವನ್ನು ಕಡ್ಡಾಯವಾಗಿ ಮಾಡಲೇಬೇಕಾದ ಶಾಸ್ತ್ರವಿಧಿತವಾದ ಕ್ರಿಯೆಯಾಗಿತ್ತು. ಈಗ ಪ್ರಚಲಿತದಲ್ಲಿರುವ ವಾರ್ಷಿಕ ಶ್ರಾದ್ಧವು ಅದರ ಅನುಕರಣೆಯಾಗಿದೆ. ಇದನ್ನು ಪಾರ್ವಣಶ್ರಾದ್ಧವೆಂದು ಕರೆಯುತ್ತಾರೆ. ಕೆಲವೊಮ್ಮೆ ವಾರ್ಷಿಕ ಶ್ರಾದ್ಧವನ್ನು ’ಮೃತಃ-ಅನ್ನಶ್ರಾದ್ಧ’ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.
ಪಾರ್ವಣ ಶ್ರಾದ್ಧಕರ್ಮವು ಅನೇಕ ಆಚರಣೆಗಳನ್ನು ಒಳಗೊಂಡಿದ್ದು ಅವನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು.
          ಮೊದಲಿಗೆ, ಶ್ರಾದ್ಧವನ್ನು ಆಚರಿಸುವವನು (ಕರ್ತಾ ಅಥವಾ ಶ್ರಾದ್ಧಕರ್ತಾ) ಹಿಂದಿನ ದಿನದಂದೇ ಯೋಗ್ಯ ಬ್ರಾಹ್ಮಣರನ್ನು ಶ್ರಾದ್ಧಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿ, ಸೂಕ್ತವಾದ ಉಪಚಾರಗಳನ್ನು ಮತ್ತು ಭೋಜನವನ್ನು ತಮ್ಮಿಂದ ಸ್ವೀಕರಿಸಬೇಕೆಂದು ವಿನಂತಿಸಿಕೊಳ್ಳಬೇಕು. ಯಾವ ಬ್ರಾಹ್ಮಣರು ಸ್ವಗೋತ್ರ ಹಾಗು ವಂಶಕ್ಕೆ ಸೇರಿದವರಾಗಿರದೆ, ಶಾಸ್ತ್ರಪಾರಂಗತರಾಗಿದ್ದು, ವಿವಾಹಿತರು, ಆರೋಗ್ಯವಂತರು ಮತ್ತು ನಿಷ್ಕಲ್ಮಶರೂ ಆಗಿರುತ್ತಾರೋ ಅಂತಹವರನ್ನು ಶ್ರಾದ್ಧಕ್ಕಾಗಿ ಆಹ್ವಾನಿಸಬೇಕು. ಈ ವಿಧವಾಗಿ ಆಹ್ವಾನಿಸುವ ಕ್ರಿಯೆಯನ್ನು ’ಕ್ಷಣ’ ಎಂದು ಕರೆಯಲಾಗುತ್ತದೆ.
          ವಿಶ್ವೇದೇವತೆ*ಗಳನ್ನು ಪ್ರತಿನಿಧಿಸಲು ಇಬ್ಬರು ಬ್ರಾಹ್ಮಣರನ್ನು ಮತ್ತು ಪಿತೃಗಳನ್ನು ಪ್ರತಿನಿಧಿಸಲು ಮೂರುಜನ ಬ್ರಾಹ್ಮಣರನ್ನು ಆಹ್ವಾನಿಸಬೇಕೆಂದು ಶಾಸ್ತ್ರಗಳು ಹೇಳುತ್ತವಾದರೂ ರೂಢಿಯಲ್ಲಿ ತಲಾ ಒಬ್ಬರಂತೆ  ಕೇವಲ ಇಬ್ಬರನ್ನೇ ಆಹ್ವಾನಿಸಲಾಗುತ್ತದೆ - ಒಬ್ಬರು ವಿಶ್ವೇದೇವತೆಗಳನ್ನು ಮತ್ತು ಇನ್ನೊಬ್ಬರು ಪಿತೃದೇವತೆಗಳನ್ನು ಪ್ರತಿನಿಧಿಸಲು. (*ಶ್ರಾದ್ಧವನ್ನು ಮುನ್ನೆಡೆಸುವ ಶಕ್ತಿಗಳನ್ನು ವಿಶ್ವೇದೇವತೆಗಳನ್ನುತ್ತಾರೆ.  ಧರ್ಮ ಮತ್ತು ವಿಶ್ವಾ ಇವರಿಗೆ ಜನಿಸಿದ ಸತ್ಯ, ವಸು, ಪುರೂರವ, ವಿಲೋಚನ, ಕ್ರತು, ರುದ್ರ, ಮೊದಲಾದ ಹದಿಮೂರು ಜನರನ್ನು ವಿಶ್ವೇದೇವತೆಗಳೆನ್ನುತ್ತಾರೆ). 
          ಯತಿಗಳು ಅಥವಾ ಸಂನ್ಯಾಸಿಗಳನ್ನು ಶ್ರಾದ್ಧಕಾರ್ಯಗಳಿಗೆ ಆಹ್ವಾನಿಸುವುದು ಅತ್ಯಂತ ಶ್ರೇಯಸ್ಕರವೆಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಯತಿಗಳು ಇಂತಹ ಕಾರ್ಯಗಳ ಆಹ್ವಾನವನ್ನು ಸ್ವೀಕರಿಸುವುದಿಲ್ಲ!
          ಒಂದೊಮ್ಮೆ ಶ್ರಾದ್ಧಕಾರ್ಯಕ್ಕೆ ಆಹ್ವಾನವನ್ನು ಕೊಟ್ಟ ಮೇಲೆ ಕರ್ತಾ ಮತ್ತು ಬೋಕ್ತಾ (ಆಹ್ವಾನಿತರು) ಇಬ್ಬರೂ ಸಹ ಬ್ರಹ್ಮಚರ್ಯವನ್ನು ಪಾಲಿಸಬೇಕು ಮತ್ತು ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಉದಾಹರಣೆಗೆ ಸುಳ್ಳು ಹೇಳದಿರುವುದು, ಕೋಪಿಸಿಕೊಳ್ಳದಿರುವುದು, ಮುಂತಾದವು.
          ಈ ಸಂದರ್ಭದಲ್ಲಿ ಹಣೆಯ ಮೇಲೆ ಧಾರಣೆ ಮಾಡಬೇಕಾದ ಧಾರ್ಮಿಕ ಚಿಹ್ನೆಗಳನ್ನು ಅವರವರ ಕುಲಾಚಾರ ಮತ್ತು ವಂಶಾಚಾರಕ್ಕೆ ತಕ್ಕಂತೆ ಅನುಸರಿಸಬೇಕು.
          ಈ ಕೆಳಗಿನ ವಸ್ತುಗಳನ್ನು ಶ್ರಾದ್ಧದ ಸಮಯದಲ್ಲಿ ಬೇಯಿಸಿದ ರೂಪದಲ್ಲಿ ಮತ್ತು ಬೇಯಿಸದೇ ಇರುವ ರೂಪದಲ್ಲಿ ಬಳಸಬೇಕು - ಹಾಲು, ಗಂಗಾಜಲ, ಜೇನುತುಪ್ಪ, ಎಳ್ಳು, ಗೋಧಿ, ಉದ್ದು, ಹೆಸರು ಮತ್ತು ಎಣ್ಣೆಯಲ್ಲಿ ಕರೆದ ಪದಾರ್ಥಗಳು.
          ಸ್ವಗೋತ್ರಕ್ಕೆ ಸೇರಿದ ಸ್ನೇಹಿತರು, ದೊಡ್ಡಪ್ಪಂದಿರ ಮತ್ತು ಚಿಕ್ಕಪ್ಪಂದಿರ ಮಕ್ಕಳನ್ನು ಮತ್ತು ತಮ್ಮ ಕುಲಕ್ಕೆ ಸೇರಿದ ವಿಶ್ವಾಸಪಾತ್ರರನ್ನೂ ಸಹ ಶ್ರಾದ್ಧ ಸಮಯದಲ್ಲಿ ಆಹಾರವನ್ನು ತಯಾರಿಸುವುದಕ್ಕೆ ಆಹ್ವಾನಿಸಬಹುದು.
ಆಹ್ವಾನಿತ ಬ್ರಾಹ್ಮಣರಿಗೆ ಉಣಬಡಿಸುವ ಕಾರ್ಯಕ್ಕೆ ಮೊದಲ ಆದ್ಯತೆಯನ್ನು ಶ್ರಾದ್ಧಕರ್ತನ ಸೊಸೆಗೆ ಕೊಡಬೇಕು.
          ಕರ್ತನು ಶ್ರಾದ್ಧಕರ್ಮಗಳನ್ನು ಆರಂಭಿಸುವುದಕ್ಕೆ ಮುಂಚೆ ಮಾಡುವ ಸಂಕಲ್ಪವು ಶ್ರಾದ್ಧಕ್ರಿಯೆಯಲ್ಲಿನ ಮೊದಲನೆಯ ಹಂತವಾಗಿದೆ.
          ಕಲಶ (ಪವಿತ್ರ ಜಲವುಳ್ಳ ಪಾತ್ರೆ) ಸ್ಥಾಪನೆ ಮತ್ತು ಕಲಶೋದಕವನ್ನು ಶ್ರಾದ್ಧ ಕರ್ಮಗಳನ್ನು ಆಚರಿಸುವ ಜಾಗದ ಸುತ್ತಲೂ ಪ್ರೋಕ್ಷಿಸುವುದು ಮುಂದಿನ ಹಂತ.
          ಆಹ್ವಾನಿತ ಬ್ರಾಹ್ಮಣರನ್ನು ಬರಮಾಡಿಕೊಳ್ಳಲು ಎರಡು ಮಂಡಲಗಳು ಅಥವಾ ಚಿತ್ರಗಳನ್ನು (ಒಂದು ಚೌಕಾಕಾರದ್ದಾಗಿದ್ದರೆ ಮತ್ತೊಂದು ವೃತ್ತಾಕಾರವಾದದ್ದು) ಮನೆಯೊಳಗಿನ ನೆಲದ ಮೇಲೆ ಸೂಕ್ತ ಸ್ಥಳಗಳಲ್ಲಿ ಬಿಡಿಸಬೇಕು. ಮೊದಲನೆಯದು (ಚೌಕಾಕಾರ) ವಿಶ್ವೇದೇವತೆಗಳನ್ನು ಪ್ರತಿನಿಧಿಸುವ ಬ್ರಾಹ್ಮಣನಿಗಾಗಿ ಮತ್ತು ಎರಡನೆಯದನ್ನು ಪಿತೃದೇವತೆಗಳನ್ನು ಪ್ರತಿನಿಧಿಸುವ ಬ್ರಾಹ್ಮಣನಿಗಾಗಿ ಮೀಸಲಿಡಬೇಕು. ಮೊದಲು, ಶ್ರಾದ್ಧಕರ್ತನು ಆ ಬ್ರಾಹ್ಮಣರ ಪಾದಗಳನ್ನು ಈ ಮಂಡಲಗಳ ಮೇಲೆ ತೊಳೆಯಬೇಕು.
          ಇದಾದ ನಂತರ ದುಷ್ಟ ಶಕ್ತಿಗಳನ್ನು (ರಾಕ್ಷಸರು, ಪಿಶಾಚ, ಮೊದಲಾದವುಗಳು) ಓಡಿಸಲು ಎಳ್ಳು ಕಾಳುಗಳನ್ನು ಸೂಕ್ತ ಮಂತ್ರಗಳೊಂದಿಗೆ ಶ್ರಾದ್ಧ ಮಾಡುವ ಸ್ಥಳದಲ್ಲೆಲ್ಲಾ ಪ್ರೋಕ್ಷಿಸುವುದು ಮುಂದಿನ ಹಂತವಾಗಿದೆ.
          ಇದಾದ ನಂತರ ಮೊದಲನೆಯ ಬ್ರಾಹ್ಮಣನ ಮೂಲಕ ವಿಶ್ವೇದೇವತೆಗಳ ಪೂಜೆಯನ್ನು ಮತ್ತು ಎರಡನೆಯ ಬ್ರಾಹ್ಮಣನ ಮೂಲಕ ಪಿತೃದೇವತೆಗಳನ್ನು ಪೂಜಿಸಲಾಗುತ್ತದೆ. ಈ ಕ್ರಿಯೆಗೆ ಎಳ್ಳು ಮತ್ತು ದರ್ಭೆ ಹುಲ್ಲನ್ನಿರಿಸಿರುವ ಅರ್ಘ್ಯಪಾತ್ರೆಗಳು ಬಹಳ ಪ್ರಮುಖವಾದವುಗಳಾಗಿವೆ.
          ಇದಾದ ನಂತರ ಪಾಣಿಹೋಮ ಅಂದರೆ ತಯಾರಿಸಿದ ಆಹಾರದ (ನೈವೇದ್ಯ/ಎಡೆ) ಸ್ವಲ್ಪ ಭಾಗವನ್ನು ಪಿತೃದೇವತೆಗಳನ್ನು ಪ್ರತಿನಿಧಿಸುವ ಬ್ರಾಹ್ಮಣನ ಬಲಗೈಯ್ಯಲ್ಲಿರುಸುವುದಾಗಿದೆ. 
          ಇದಾದ ನಂತರ ಬ್ರಾಹ್ಮಣ ಭೋಜನ ಅಥವಾ ಆಹ್ವಾನಿತರಿಗೆ ಅನ್ನಸಂತರ್ಪಣೆ ಮಾಡುವ ಕಾರ್ಯಕ್ರಮವಿರುತ್ತದೆ. ಅವರಿಗೆ ರುಚಿಕರವಾದ ಮತ್ತು ಸ್ವಾದಿಷ್ಟವಾದ ಭೋಜನವನ್ನು ಅವರು ತೃಪ್ತಿಯಾಗುವವರೆಗೆ ಉಣಬಡಿಸಬೇಕು. ಅವರು ಊಟ ಮಾಡುತ್ತಿರುವಾಗ ಉಳಿದ ಬ್ರಾಹ್ಮಣರನ್ನು ರಾಕ್ಷೋಜ್ಞಮಂತ್ರಗಳು, ಪವಮಾನ ಮಂತ್ರಗಳು ಅಥವಾ ಉಪನಿಷತ್ತಿನ ಮಂತ್ರಗಳನ್ನು ಪಠಿಸಲು ಭಿನ್ನವಿಸಿಕೊಳ್ಳಬೇಕು. ಇದನ್ನು ‘ಅಭಿಶ್ರವಣ’ವೆಂದು ಕರೆಯುತ್ತಾರೆ ಮತ್ತು ಇದು ಊಟ ಮಾಡುತ್ತಿರುವ ಬ್ರಾಹ್ಮಣರ ಮನಸ್ಸಿನಲ್ಲಿ ಆಧ್ಯಾತ್ಮಿಕ ಭಾವನೆಯನ್ನು ಉಂಟು ಮಾಡುತ್ತದೆ. ಪಿತೃಗಳು ತಮ್ಮ ಪ್ರೇತ ಶರೀರಗಳ ಮೂಲಕ ಈ ಬ್ರಾಹ್ಮಣರ ದೇಹಗಳಲ್ಲಿ ಸೇರಿರುತ್ತಾರೆನ್ನುವ ನಂಬಿಕೆಯಿರುವುದರಿಂದ ಅವರೇ ಆಹಾರವನ್ನು ಸ್ವೀಕರಿಸಿ ಮತ್ತು ಸಂತೃಪ್ತರಾಗುತ್ತಾರೆ.  
          ಇದಾದ ನಂತರ ಪಿಂಡಪ್ರಧಾನ ಕಾರ್ಯವಿರುತ್ತದೆ. ಪಿಂಡಗಳೆಂದರೆ ಅನ್ನದ ಉಂಡೆಗಳು. ಪಿಂಡಗಳನ್ನು ಬ್ರಾಹ್ಮಣ ಭೋಜನದ ನಂತರ ಪಾತ್ರೆಗಳಲ್ಲಿ ಉಳಿದ ಅನ್ನ ಹಾಗೂ ಇತರೇ ಆಹಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಹೀಗೆ ತಯಾರಿಸಲಾದ ಮೂರು ಪಿಂಡಗಳನ್ನು ದರ್ಭೆಯನ್ನಿರಿಸಿದ ನೆಲದ ಮೇಲೆ ಇಟ್ಟು ಮೂರು ತಲೆಮಾರಿನ ಪೂರ್ವಿಕರಿಗೆ ಅರ್ಪಿಸಲಾಗುತ್ತದೆ.
          ‘ಬೌಧಾಯನ’ ಪದ್ಧತಿಯಂತೆ ಪಿಂಡಗಳನ್ನು ತೆರೆದ (ಬಹಿರಂಗವಾದ) ಸ್ಥಳಗಳಲ್ಲಿ, ಎಲ್ಲಿ ಕಾಗೆಗಳು ಬಂದು ತಿನ್ನುವುದಕ್ಕೆ ಅನುಕೂಲವಾಗುತ್ತದೆಯೋ ಅಲ್ಲಿ ಇರಿಸಬೇಕು. ಪಿತೃಗಳು ಕಾಗೆಗಳ ಶರೀರಿಗಳಲ್ಲಿ ಸೂಕ್ಷ್ಮರೂಪದಲ್ಲಿ ಸೇರಿಕೊಂಡು ಆ ಪಿಂಡ ಸೇವನೆಯಿಂದ ತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ.
          ಬ್ರಾಹ್ಮಣರು ತದನಂತರ ಕರ್ತಾ ಹಾಗು ಅವನ ಕುಟುಂಬವನ್ನು ಹರಿಸಿ ಅಲ್ಲಿಂದ ಹೊರಡುತ್ತಾರೆ. ಗೌರವ ಸೂಚ್ಯರ್ಥವಾಗಿ ಕರ್ತನು ಸ್ವಲ್ಪ ದೂರದವರೆಗೆ ಅವರನ್ನು ಹಿಂಬಾಲಿಸಿ ಬೀಳ್ಕೊಟ್ಟು ಬರಬೇಕು.
          ಇದಾದ ನಂತರ, ತಾವು ಎಸಗಿದ ಶ್ರಾದ್ಧ ಕಾರ್ಯದಲ್ಲಿ ಉಂಟಾಗಿರುವ ದೋಷಗಳನ್ನು ಕ್ಷಮಿಸೆಂದು ಬೇಡಿಕೊಳ್ಳುತ್ತಾ ಶ್ರಾದ್ಧದ ಫಲವನ್ನು ಸಂಪೂರ್ಣವಾಗಿ ವಾಸುದೇವ ಅಥವಾ ಕೃಷ್ಣನಿಗೆ ಸಮರ್ಪಿಸ ಬೇಕು. 
(ಆಂಗ್ಲ ಮೂಲ: ಸ್ವಾಮಿ ಹರ್ಷಾನಂದರು ರಚಿಸಿರುವ Shraddha (Religious Rites in Honour of Fore Fathers) ಪುಟ ೨೧ರಿಂದ ೨೭ರ ಅನುವಾದಿತ ಭಾಗ)
 
ಹಿಂದಿನ ಲೇಖನಕ್ಕೆ ಕೊಂಡಿ https://sampada.net/blog/%E0%B2%B6%E0%B3%8D%E0%B2%B0%E0%B2%BE%E0%B2%A6%E...
 

Rating
No votes yet

Comments