ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೫

Submitted by makara on Thu, 08/25/2016 - 12:18

ಗಯಾಶ್ರಾದ್ಧ
      ಶತಶತಮಾನಗಳಿಂದ ಗಯೆಯಲ್ಲಿ ಶ್ರಾದ್ಧ ಮಾಡುವುದನ್ನು ಅತ್ಯಂತ ಪುಣ್ಯಪ್ರದವೆಂದೂ ಮತ್ತು ಹಿರಿಯ ಮಗನು (ಅಥವಾ ಯಾವುದಾದರೂ ಒಬ್ಬ ಮಗನು) ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯವೆಂದು ಶಾಸ್ತ್ರಗಳು ಸಾರುತ್ತವೆ. ಇದು ಅಪರಿಮಿತ ಫಲಗಳನ್ನು ದಯಪಾಲಿಸುವುದೆಂದೂ ಹೇಳಲಾಗಿದೆ. 
          ಗಯಾಶ್ರಾದ್ಧವನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆಯದನ್ನು ಕರ್ತನು ಫಲ್ಗು ನದಿಯಲ್ಲಿ ಸ್ನಾನ ಮಾಡಿ ನದಿಯಲ್ಲಿ ತರ್ಪಣವನ್ನು ಬಿಟ್ಟು, ಪಿಂಡಪ್ರದಾನ ಮಾಡಬೇಕು. ಆಮೇಲೆ ಗುಡಿಯಲ್ಲಿನ ವಿಷ್ಣುದೇವರ ಪಾದಗಳ ಬಳಿಯಲ್ಲಿ ಪಿಂಡಗಳನ್ನು ಅರ್ಪಿಸಬೇಕು. ಇದಾದ ನಂತರ ಪ್ರಸಿದ್ಧವಾದ ’ಅಕ್ಷಯವಟ’ದ (ಅಶ್ವತ್ಥ ವೃಕ್ಷ) ಬುಡದಲ್ಲಿ ಪಿಂಡಪ್ರದಾನ ಮಾಡಬೇಕು. ಇದು ಗಯಾಶ್ರಾದ್ಧದ ಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. 
ಗಯಾಶ್ರಾದ್ಧವನ್ನು ಯಾರು ಬೇಕಾದರೂ ತಮಷ್ಟಕ್ಕೆ ತಾವೇ ಮಾಡಿಕೊಳ್ಳಬಹುದು.
         ಒಂದು ವೇಳೆ ಒಬ್ಬನು ಗಯೆಯಲ್ಲಿ ತನ್ನ ಪಿತೃಗಳಿಗೆ ಶ್ರಾದ್ಧಕಾರ್ಯವನ್ನು ಮಾಡಿದ್ದೇ ಆದಲ್ಲಿ ತನ್ನ ಜೀವಿತಾವಧಿಯಲ್ಲಿ ಪುನಃ ಪಿತೃ ಶ್ರಾದ್ಧವನ್ನು ಮಾಡಬೇಕಾಗಿಲ್ಲವೆಂದು ಹೇಳಲಾಗಿದೆ. ಕೇವಲ ಗಯಾಶ್ರಾದ್ಧವನ್ನು ಮಾಡಿದವರನ್ನು ಪ್ರಶಂಸಿಸುವುದಕ್ಕೋಸ್ಕರ ಆ ಮಾತುಗಳನ್ನು ಹೇಳಲಾಗಿದೆಯಷ್ಟೆ ಎಂದು ಕೆಲವರ ಅನಿಸಿಕೆ. ಆದ್ದರಿಂದ, ಶ್ರಾದ್ಧಕಾರ್ಯವನ್ನು ಮಾಡುವುದನ್ನು ತಪ್ಪದೇ ಮುಂದುವರೆಸಿಕೊಂಡು ಹೋಗಬೇಕೆಂದು ಅವರು ಹೇಳುತ್ತಾರೆ.
 
ನಿರ್ಣಾಯಕ ಭಾಗ
         ಹಿಂದೂ ಸಮಾಜದಲ್ಲಿ ಶ್ರಾದ್ಧಕರ್ಮಗಳನ್ನು ಆಚರಿಸುವುದು ಒಂದಲ್ಲ ಒಂದು ರೀತಿಯಲ್ಲಿ ಇನ್ನೂ ಆಚರಣೆಯಲ್ಲಿದೆ. ಆಧುನಿಕ ಕಾಲದ ಹಿಂದೂಗಳೇನಕರು ಶ್ರಾದ್ಧಕಾರ್ಯಗಳನ್ನು ಆಚರಿಸಬೇಕಾದ ಅವಶ್ಯಕತೆ ಹಾಗು ಅವುಗಳಿಂದುಂಟಾಗುವ ಒಳಿತುಗಳ ಕುರಿತು ಅನುಮಾನಗಳನ್ನು ವ್ಯಕ್ತಪಡಿಸಿದರೂ ಸಹ ಈ ಕಾರ್ಯಗಳ ಹಿಂದಿರುವ ಉದ್ದೇಶವನ್ನು ಖಂಡಿತವಾಗಿ ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೃತಿ ಹೊಂದಿದ ನಮ್ಮ ಪೂರ್ವಿಕರ ಬಗೆಗೆ ಅದರಲ್ಲೂ ಇತ್ತೀಚಿನ ತಲೆಮಾರಿನವರ ಬಗೆಗೆ ನಮಗಿರುವ ಪ್ರೀತ್ಯಾದರಗಳನ್ನು  ಹಾಗು ಅವರ ಕುರಿತಾದ ಗೌರವ ಭಾವನೆಯನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಗೊಳಿಸುವುದು ಶ್ರಾದ್ಧಾಚರಣೆಗಳ ವೈಶಿಷ್ಠ್ಯವಾಗಿದೆ. 
          ವ್ಯಕ್ತಿಯು ಮೃತಿ ಹೊಂದಿದ ನಂತರ ಕೈಗೊಳ್ಳಲಾಗುವ ಧಾರ್ಮಿಕ ವಿಧಿಗಳು ಮತ್ತು ವ್ಯಕ್ತಿಯು ಮೃತಿ ಹೊಂದಿದ ಮೊದಲನೇ ವರ್ಷದಲ್ಲಿ ಪ್ರತಿ ತಿಂಗಳು ಆಚರಿಸುವ ಶ್ರಾದ್ಧ ಕರ್ಮಗಳು ಮತ್ತು ವಾರ್ಷಿಕ ಕರ್ಮಗಳನ್ನು ಮೊದಲ ಮೂರೂ ವರ್ಣದವರು ಆಚರಿಸುತ್ತಿದ್ದಾರೆ. ಈ ಕರ್ಮಗಳು ಸ್ವಲ್ಪ ಹೆಚ್ಚೂ ಕಡಿಮೆ ’ಪಾರ್ವಣ ಶ್ರಾದ್ಧ’ಗಳಲ್ಲಿ ವಿವಿರಿಸಿರುವ ಧಾರ್ಮಿಕ ವಿಧಿಗಳೇ ಆಗಿವೆ. 
            ಆಧುನಿಕ ವಿದ್ಯಾಭ್ಯಾಸದಿಂದ ಪ್ರಭಾವಿತವಾದ ಚಿಂತನೆಗಳುಳ್ಳವರು ಶ್ರಾದ್ಧಕರ್ಮಗಳನ್ನು ಆಚರಿಸ ಬೇಕೇ ಬೇಡವೇ ಎನ್ನುವ ವಿಷಯದಲ್ಲಿ ಜಿಜ್ಞಾಸೆಗೆ ಒಳಗಾಗಿದ್ದಾರೆ. ಅಂತಹವರಿಗಾಗಿ ಡಾ. ಪಿ.ವಿ. ಕಾಣೆ*ಯವರು ಈ ಮಧ್ಯಮ ಮಾರ್ಗವನ್ನು ಸೂಚಿಸಿದ್ದಾರೆ:
ನಮ್ಮ ಪ್ರೀತಿಪಾತ್ರರಾಗಿದ್ದ ಹತ್ತಿರದ ಮೃತ ಸಂಬಂಧಿಗಳಿಗಾಗಿ ವರ್ಷದಲ್ಲಿ ಒಂದು ದಿನವನ್ನು ಮೀಸಲಿಡುವುದರೊಂದಿಗೆ, ಮೃತರ ಸ್ಮರಣಾರ್ಥ ನಮ್ಮ ಬಂಧು-ಬಳಗ ಹಾಗು ಸ್ನೇಹಿತರನ್ನು ಮತ್ತು ವಿದ್ವಜ್ಜನರನ್ನು ಭೋಜನಕ್ಕೆ ಆಹ್ವಾನಿಸಿ ಕೆಲವೊಂದು ಕಾಣಿಕೆಗಳನ್ನು ವಿದ್ಯಾವಂತರಿಗೆ ಅದರಲ್ಲೂ ಸಚ್ಚಾರಿತ್ರ್ಯವುಳ್ಳವರೂ ಮತ್ತು ಸರಳ ಜೀವನ ನಡೆಸುತ್ತಾ ಉನ್ನತವಾದ ಚಿಂತನೆಗಳನ್ನು ಹೊಂದಿರುವವರಿಗೆ ಕೊಡುವುದು ಒಂದು ಒಳ್ಳೆಯ ಪದ್ಧತಿಯಾಗುತ್ತದೆ. ಇದು ನಮ್ಮ ಸಂಪ್ರದಾಯಗಳನ್ನು ಅನುಸರಿಸಿದಂತೆಯೂ ಆಗುತ್ತದೆ ಮತ್ತು ಈಗ ಅನೇಕರು ಭಾವಿಸಿರುವಂತೆ ಅರ್ಥ ಕಳೆದುಕೊಂಡಿರುವ ಆಚರಣೆಗಳಿಗೆ ಹೊಸ ಚೈತನ್ಯವನ್ನು ತುಂಬಿದಂತೆ ಆಗುತ್ತದೆ. (*P.V. KANE, History of DharmaShastra, Vol. IV, Pune, Bhandarkar Oriental Research Institure, 1953 PP550)
         ಮೇಲಿನ ಚಿಂತನೆಗೆ ಈ ಕೆಳಗಿನ ಕೆಲವೊಂದು ಧಾರ್ಮಿಕ ಆಚರಣೆಗಳನ್ನೂ ಸಹ ಸೇರಿಸಬಹುದು - ಉಪವಾಸ (ಭಾಗಶಃ ಅಥವಾ ಸಂಪೂರ್ಣ), ಮನೆದೇವರ ಪೂಜೆ, ಧ್ಯಾನ, ಜಪ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸೆಂದು ದೇವರಲ್ಲಿ ಪ್ರಾಮಾಣಿಕವಾಗಿ ಪ್ರಾರ್ಥಿಸುವುದು. 
           ಆದ್ದರಿಂದ ಶ್ರಾದ್ಧದ ಆಚರಣೆಯು ಪುರಾತನವಾದದ್ದಾದರೂ ಸಹ ಇಂದಿಗೂ ಅವಶ್ಯಕತೆಯಿದ್ದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ಮುಂದುವರೆಸಿಕೊಂಡು ಹೋಗುವ ಅರ್ಹತೆಯನ್ನುಳ್ಳದ್ದಾಗಿದೆ.  
 
(ಆಂಗ್ಲ ಮೂಲ: ಸ್ವಾಮಿ ಹರ್ಷಾನಂದರು ರಚಿಸಿರುವ Shraddha (Religious Rites in Honour of Fore Fathers) ಪುಟ ೨೮ರಿಂದ ೩೧ರ ಅನುವಾದಿತ ಭಾಗ)
 
ಹಿಂದಿನ ಲೇಖನಕ್ಕೆ ಕೊಂಡಿ https://sampada.net/blog/%E0%B2%B6%E0%B3%8D%E0%B2%B0%E0%B2%BE%E0%B2%A6%E...
 

Rating
No votes yet

Comments

ಆತ್ಮೀಯ ಸಂಪದಗರಿಗೆ,
ಹಿಂದೂ ಧರ್ಮದ ವಿವಿಧ ಧಾರ್ಮಿಕ ಆಚರಣೆಗಳನ್ನು ಸರಳ ಶಬ್ದಗಳಲ್ಲಿ ತಿಳಿಯಬಯಸುವವರಿಗೆ ಈ ಸರಣಿ ಉಪಯುಕ್ತವೆನಿಸಿದ್ದರೆ ಮೂಲ ಲೇಖಕರಾದ ಶ್ರೀಯುತ ಸ್ವಾಮಿ ಹರ್ಷಾನಂದರ ಶ್ರಮ ಸಾರ್ಥಕವಾದಂತೆ. ಹೂವಿನೊಂದಿಗೆ ನಾರು ಸ್ವರ್ಗಕ್ಕೇರಿದಂತೆ ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದರ ಮೂಲಕ ನನ್ನ ಅಳಿಲು ಸೇವೆಯೂ ಕೃತಕೃತ್ಯತೆಯನ್ನು ಪಡೆದಂತೆ. ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು. -^-
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.