ಸರಳ ಜೀವನ

ಸರಳ ಜೀವನ

ಕೆಲದಿನಗಳ ಹಿಂದೆ ನಮ್ಮನೆಗೊಬ್ಬರು ಹಿರಿಯರು ಬಂದಿದ್ದರು ೮೦ ವರ್ಷ ದಾಟಿದ ತುಂಬು ಜೀವ. ಹುಟ್ಟಿ ಬೆಳೆದು ಸರ್ವೀಸು ಮಾಡಿ ರಿಟೈರಾದಮೇಲೆ ಕಾಲ ಕಳೆಯುತ್ತಿರುವುದೂ ಒಂದು ಚಿಕ್ಕ ಊರಿನಲ್ಲಿ. ಮನೆಯ ಹತ್ತಿರದ ಒಂದು ಸರ್ಕಾರಿಸಂಸ್ಥೆಯಲ್ಲಿ ಕೆಲಸಮಾಡಿಬಂದವರು. ಯಾರೋ ತಾತ ಮುತ್ತಾತನಕಾಲಕ್ಕೆ ಬ್ರಿಟಿಷರಿಂದ ಕೊಡಲ್ಪಟ್ಟ ಒಂದು ಮನೆಯಲ್ಲಿ ವಾಸವಿದ್ದರಂತೆ. ಬಹಳ ಸರಳವಾಗಿ ಬದುಕಿದರಂತೆ. ಓದಿದ್ದು ಸುಮಾರು ಹತ್ತೋ ಅಥವಾ ಸ್ವಲ್ಪ ಮುಂದಿನ ತರಗತಿಯವರೆಗೋ. ಆದರೆ ಬಹಳಷ್ಟು ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅರಳು ಹುರಿದಂತೆ ಪ್ರಪಂಚದಲ್ಲಿರುವ ವಿಷಯಗಳನ್ನೆಲ್ಲಾ ಹರಟುತ್ತಿದ್ದರು.

ವಯಸ್ಸಾಗಿ ಕಾಲುಗಳು ಅಷ್ಟು ಸಹಕರಿಸುತ್ತಿಲ್ಲದಿದ್ದರೂ ಜೀವನದಲ್ಲಿ ಬತ್ತದ ಉತ್ಸಾಹ. ಏನೋ ತನಗೆ ತಿಳಿದ ಕೆಲವು ಮಹತ್ತಾದ ವಿಷಯ್ಗಗಳು, ವೇದಾಂತ ಥಿಯರಿಗಳನ್ನೆಲ್ಲಾ ಮೊಮ್ಮಕ್ಕಳಲ್ಲಿ ಹೇಳಿ ಬರೆಸಿ ಚಿಕ್ಕ ಪುಸ್ತಕಗಳನ್ನು ಮಾಡಿಸುವ ಆಸೆ. ತನ್ನ ಜೀವನದ ಉಳಿತಾಯದಲ್ಲಿ ಇಷ್ಟಿಷ್ಟು ಮಕ್ಕಳಿಗೆ, ಒಂದಿಷ್ಟು ಒಂದು ಟ್ರಸ್ಟ ಮಾಡಿ ಸಮಾಜ ಸೇವೆಗೆ ಮೀಸಲಿಡೋಣ ಎಂದುಕೊಂಡಿದ್ದಾರಂತೆ.

ರಾಜಕೀಯವಾಗಿಯೂ ಬಹಳ ತಿಳಿದುಕೊಂಡಿದ್ದಾರೆ ಎನಿಸಿತು. ದಿನವೂ ಮನೆಯಲ್ಲಿ ಬೆಳಿಗ್ಗೆ ಹೊತ್ತು ರುದ್ರ ಮಂತ್ರ ಪಠಣಮಾಡುತ್ತಿದ್ದರು. ರಾತ್ರಿ ಮಲಗೋಕೆ ಮುಂಚೆ ಮಂಚದಮೇಲೆ ಕುಳಿತು ಒಬ್ಬರೇ ಸುಮಾರು ಅರ್ಧಘಂಟೆಗಳ ಕಾಲ ದಾಸರ ಪದಗಳು, ತ್ಯಾಗರಾಜರ ಕೀರ್ತನೆಗಳನ್ನು ಹೇಳಿಕೊಳ್ಳುತ್ತಿದ್ದರು. ಸ್ವಲ್ಪ ತಿಂದ ಅನ್ನ ಅರಗುತ್ತೆ ಹಾಗೂ ದೇವರ ಧ್ಯಾನ ಆದಹಾಗಾಗುತ್ತೆ ಎಂದು ಹೇಳುತ್ತಿದ್ದರು. ನಾನು ಮನೆಯಲ್ಲಿ ತಂದಿಟ್ಟುಕೊಂಡಿದ್ದ ಕೆಲವು ಪುಸ್ತಕಗಳನ್ನು ಕೆಲವೇ ದಿನಗಳಲ್ಲಿ ಓದಿ ಮುಗಿಸಿದರು(ನಾನೇ ಇನ್ನೂ ಓದಿಲ್ಲ). ಮಧ್ಯೆ ಮಧ್ಯೆ ನನಗೆ ಕೆಲವು ಪ್ರಸಿದ್ಧವ್ಯಕ್ತಿಗಳ ಆಂಗ್ಲ ಉಕ್ತಿಗಳನ್ನೂ ಹೇಳುತ್ತಿದ್ದರು. ಯಾವಾಗಲೂ ನಗುಮುಖ ಇರುತ್ತಿತ್ತು. ಅದೇ ಅವರ ಆರೋಗ್ಯದ ಗುಟ್ಟು ಇರಬೇಕು.

ಅವರು ಮನೆಯಲ್ಲಿ ಇದ್ದಷ್ಟು ದಿಅನ ಮನೆಯಲ್ಲಿ ಹಿರಿಯರೊಬ್ಬರಿದ್ದ ನಲಿವು ನಮಗಿತ್ತು.

Rating
No votes yet