ಸಾಮಾನ್ಯನ ಓದು - ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2020 - ಅಗಣಿತ ರಾಮಾಯಣಗಳು

ಸಾಮಾನ್ಯನ ಓದು - ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2020 - ಅಗಣಿತ ರಾಮಾಯಣಗಳು

ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ ಚರ್ಚಿಸಲಾಗಿದೆ. ಕನ್ನಡದಲ್ಲಿನ ರಾಮ ಕಥೆಗಳು, ತೆಲುಗಿನಲ್ಲಿ ರಾಮ ಕಥೆಗಳು, ವಿದೇಶಗಳಲ್ಲಿನ ರಾಮಕಥೆಗಳ ಕುರಿತಾಗಿ ಲೇಖನಗಳಿವೆ. ಅಷ್ಟೇ ಅಲ್ಲದೆ ಟೀವಿಯ ರಾಮಾಯಣಗಳು, ಜನಪದ ಕಥನಗಳು,ಯಕ್ಷಗಾನದಲ್ಲಿನ ರಾಮಾಯಣಗಳು, ಭಾರತೀಯ ಮತ್ತು ಕನ್ನಡ ಚಲನಚಿತ್ರಗಳಲ್ಲಿನ ರಾಮಾಯಣಗಳ ಚಿತ್ರಣ, ಪ್ರಖ್ಯಾತ ಸಮಾಜವಾದಿ ನಾಯಕ ಲೋಹಿಯಾರ ಕಣ್ಣಲ್ಲಿ ರಾಮಾಯಣ ಮುಂತಾದ ಬರಹಗಳಿವೆ. ರಾಮ, ಕೃಷ್ಣ ಮತ್ತು ಬುದ್ಧರು ಮನುಷ್ಯರಾಗಿದ್ದೂ ಮರ್ತ್ಯದ ಚೌಕಟ್ಟನ್ನು ಮೀರಿದ ಕಾರಣಕ್ಕಾಗಿ ನಮಗೆ ಮುಖ್ಯರು. ಅವರನ್ನು ಕಥೆ ರೂಪದಲ್ಲಿ ಮಾತ್ರವಲ್ಲದೆ ನಮ್ಮ ಬದುಕಿನ ಭಾಗವಾಗಿ ನೋಡುತ್ತೇವೆ. ರಾಮ ಮತ್ತು ಅವನಂತೆಯೇ ಧರ್ಮವೇ ಮೂರ್ತಿವೆತ್ತ ಗಾಂಧಿ ಕುರಿತಾಗಿ ಬಂದಿರುವ ಚಲನಚಿತ್ರಗಳಾದ ಹೇಮಾವತಿ ಮತ್ತು ಹೇ ರಾಮ್ ಕುರಿತು ವಿಸ್ತಾರವಾದ ಚರ್ಚೆ ಇಲ್ಲಿದೆ. ಇಂದಿನ ದಿನಗಳಲ್ಲಾದರೆ ಈ ಚಿತ್ರಗಳು ತೆರೆಯನ್ನು ಕಾಣುತ್ತಿರಲಿಲ್ಲವಂತೆ. ಈ ಚಲನಚಿತ್ರಗಳನ್ನು ( ಯೂಟ್ಯೂಬ್ನಲ್ಲಿ ಸಿಗಬಹುದು) ನೋಡುವ ಕುತೂಹಲವು ನನ್ನಲ್ಲಿ ಹುಟ್ಟಿತು. ಏ. ಕೆ. ರಾಮಾನುಜನ್ ಅವರ ಮುನ್ನೂರು ರಾಮಾಯಣಗಳು ಪುಸ್ತಕದ ಬಗೆಗೊಂದು ಲೇಖನ ಇದೆ. ಈ ಹೊತ್ತು ನಮ್ಮ ದೇಶದಲ್ಲಿ ಜನರ ಮನಸ್ಸಿನಲ್ಲಿ ರಾಮನ ರೂಪವು ಬಿಲ್ಲುಬಾಣ ಹಿಡಿದು ದೇಶದ ಅಸ್ಮಿತೆಯಾಗಿರುವುದರ ಬಗ್ಗೆಯೂ ಆತಂಕ ಒಂದು ಲೇಖನದಲ್ಲಿದೆ. ರಾಮಾಯಣ ಹೊರತಾಗಿ ಈ ಸಂಚಿಕೆಯಲ್ಲಿ ಏನೇನಿದೆ? ಈಗ ಹೆಚ್ಚು ಬಳಕೆಗೆ ಬಂದಿರುವ ಓಟಿಟಿ ವೇದಿಕೆಯ ಕುರಿತೂ ಒಂದು ಲೇಖನವಿದೆ. ಕಟ್ಟೆ ಹೆಸರಿನ ಒಂದು ಕನ್ನಡದ್ದೇ ಆದ ಓಟಿಟಿ ವೇದಿಕೆ ಬಗೆಗೆ ಮಾಹಿತಿ ಇಲ್ಲಿ ದೊರಕಿತು. ಪ್ರತಿವರ್ಷದಂತೆ ಕಥಾಸ್ಪರ್ಧೆಯ ಫಲಿತಾಂಶ, ಮತ್ತು ಪ್ರಶಸ್ತಿವಿಜೇತ ಮೂರು ಕಥೆಗಳು ಇಲ್ಲಿವೆ. ಈ ಮೂರು ಕಥೆಗಳಲ್ಲಿ ಎರಡು ಕಥೆಗಳು ನನಗೆ ಇಷ್ಟವಾದವು. ಒಂದು ಕಥೆಯಂತೂ ಕೊರೋನಾ ಮತ್ತು ಧಾರ್ಮಿಕ ಮೈಮನಸ್ಸುಗಳ ಹಿನ್ನೆಲೆಯದ್ದು. ಇನ್ನೊಂದು ಕಥೆಯು ಲಿವಿಂಗ್ ಟುಗೆದರ್ ಕುರಿತಾಗಿದೆ. ಅಲ್ಲಿ ಸಿಕ್ಕ ಒಂದು ಪದ - ಯುಗನದ್ಧ ಆ ಕುರಿತು ಅಂತರ್ ಜಾಲವನ್ನು ಜಾಲಾಡಿಸುವಂತೆ ನನ್ನನ್ನುಮಾಡಿತು. ಇದು ನಿಜಕ್ಕೂ ತುಂಬಾ ಒಳ್ಳೆಯ ಸಂಚಿಕೆ ಆದ್ದರಿಂದ ನೀವು ಒಂದು ಪ್ರತಿಯನ್ನು ಖರೀದಿಸಿ ಇಟ್ಟುಕೊಳ್ಳಿ. ನಿಜಕ್ಕೂ ಇದು ಸಂಗ್ರಾಹ್ಯ ಸಂಚಿಕೆ.

Rating
Average: 4 (7 votes)