ಹಳೆಯ ತುಷಾರ ( ತಿಂಗಳ ಪತ್ರಿಕೆ ) ಒಂದನ್ನು ಓದುತ್ತಿದ್ದೆ. ಅದರಲ್ಲಿ ಮಹಾಭಾರತ ಕುರಿತಾದ ಲಕ್ಷ್ಮೀಶ ತೋಳ್ಪಾಡಿಯವರ ಒಂದು ಲೇಖನ ಕಂಡಿತು. ಅದು ಮುಂದಿನ ಸಂಚಿಕೆಯಲ್ಲಿ ಮುಂದುವರಿದದ್ದು , ಸದ್ಯ ಆ ಸಂಚಿಕೆಯು ನನ್ನಲ್ಲಿತ್ತು.
ಮಹಾಭಾರತದಲ್ಲಿ ಕೃಷ್ಣ ಮತ್ತು ಧರ್ಮರಾಜನ ಕುರಿತಾಗಿ ಈ ಲೇಖನ ಇತ್ತು. ಕೃಷ್ಣನು ಸಾಕ್ಷಾತ್ ಕಾಲನೇ ಆಗಿದ್ದು ಲೋಕದ ನಾಶಕ್ಕೆ ಕಾರಣ ಎಂದು ಸ್ವತಃ ಹೇಳಿಕೊಂಡಿದ್ದಾನೆ. ಅವನ ಪಾಲಿಗೆ ಮಹಾಭಾರತದಲ್ಲಿ ಬರುವ 14 ಅಕ್ಷೋಹಿಣಿ ಸೈನ್ಯದಷ್ಟು ಜನರ ಸಾವು ಸಹಜ. ಅವನ ಪಾಲಿಗೆ ಎಲ್ಲರೂ ಈ ಸರ್ವನಾಶದ ನೆಪ ಮಾತ್ರರು, ಕೇವಲ ನಿಮಿತ್ತರು. ಇದೆಲ್ಲ ಆಗಬೇಕಾದದ್ದೇ ಎಂಬ ನಿರ್ಲಿಪ್ತತೆ ಅವನಲ್ಲಿ ಇದೆ.
ಆದರೆ ಧರ್ಮರಾಯನು ಧರ್ಮಸ್ವರೂಪಿಯಾಗಿದ್ದಾನೆ. ಅವನು ರಾಜಸೂಯಯಾಗ ಮಾಡಿದಾಗಲೇ ವ್ಯಾಸ ಮಹರ್ಷಿಯವರು ನೀನು ಕುಲ ನಾಶಕ್ಕೆ ಕಾರಣನಾಗುತ್ತೀಯ ಎಂದು ಹೇಳಿದ್ದರು. ಅವನು ಮೊದಲೇ ಸೂಕ್ಷ್ಮ ಮನಸ್ಸಿನವನು.
(ಎಚ್ ಎಸ್ ವೆಂಕಟೇಶಮೂರ್ತಿ ಅವರು ಯಾವುದೋ ಒಂದು ಲೇಖನದಲ್ಲಿ ಹೇಳಿದ ಹಾಗೆ ಬಾಲ್ಯದ ವಿದ್ಯಾಭ್ಯಾಸ ಕಾಲದಲ್ಲಿ ಆಚಾರ್ಯರು ಅರ್ಜುನನಿಗೆ ಒಂದು ಹಕ್ಕಿಯು ಕೂತ ಮರವನ್ನು ತೋರಿಸಿ ನಿನಗೆ ಏನು ಕಾಣಿಸುತ್ತದೆ ಎಂದು ಕೇಳಿದ್ದರು. ಅರ್ಜುನನು ಶ್ರೇಷ್ಠ ಧನುರ್ಧಾರಿ ಅಲ್ಲವೇ ? ಅವನು ಹಕ್ಕಿಯ ಕಣ್ಣು ಕಾಣಿಸುತ್ತದೆ ಎಂದು ಹೇಳಿದೆ. ಅವನು ತನ್ನ ಗುರಿಯನ್ನು ಅರಿತವನು, ಅದನ್ನು ಸಾಧಿಸಬಲ್ಲವನು. ಆದರೆ ಧರ್ಮರಾಯನಿಗೆ ಕೇವಲ ಹಕ್ಕಿಯ ಕಣ್ಣು ಕಾಣಿಸುವುದಿಲ್ಲ, ಹಕ್ಕಿ, ಹಕ್ಕಿಯ ಗೂಡು, ಹಕ್ಕಿಯ ಸಂಸಾರ, ಹಕ್ಕಿಯ ಮರಿಗಳು ಹೀಗೆ ಎಲ್ಲವನ್ನೂ ಅವನು ನೋಡುತ್ತಾನೆ. ಒಂದು ಸಮಗ್ರ ದೃಷ್ಟಿಕೋನ ಇದೆ ಅವನಲ್ಲಿ, ಒಂದು ಹಕ್ಕಿಯನ್ನು ಬಾಣಕ್ಕೆ ಗುರಿ ಮಾಡುವುದರಿಂದ ಆಗಬಹುದಾದ ಅನಾಹುತಗಳನ್ನು ಭೂತದಯಾ ದೃಷ್ಟಿಯಿಂದ ಅವನು ನೋಡುತ್ತಾನೆ.)
ಇರಲಿ, ಲಕ್ಷ್ಮೀಶ ತೋಳ್ಪಾಡಿಯವರ ಈ ಲೇಖನದಲ್ಲಿ ಧರ್ಮರಾಜನಲ್ಲಿ ತನ್ನ ಕುಲನಾಶಕ್ಕೆ ತಾನೇ ಕಾರಣನಾಗುತ್ತಾಗುವುದರ ಬಗೆಗೆ ಆತಂಕ ಇದೆ, ಅಳುಕು ಇದೆ. ದ್ಯೂತ ಪ್ರಸಂಗದಲ್ಲಿ , ದ್ರೌಪದಿ ವಸ್ತ್ರಾಪಹರಣದಂತಹ ಕಠಿಣ ಪ್ರಸಂಗಗಳಲ್ಲಿ ಇತರರ ಆಕ್ಷೇಪಕ್ಕೆ ಕಾರಣವಾದರೂ ಕೂಡ ಅಪಾರ ಸಂಯಮವನ್ನು ತೋರಿಸುತ್ತಾನೆ.
ಮಹಾಭಾರತ ಯುದ್ಧ ಈಗ ಮುಗಿದಿದೆ, 14 ಅಕ್ಷೋಹಿಣಿ ಸೈನ್ಯ ಸಂಪೂರ್ಣವಾಗಿ ನಾಶವಾಗಿದೆ, ಮಹಾಭಾರತ ಯುದ್ಧದ ಕೊನೆಯಲ್ಲಿ ಉಳಿದವರು ಕೇವಲ ಹನ್ನೊಂದು ಜನ ಅಂತೆ. ಐವರು ಪಾಂಡವರು, ಕೃಷ್ಣ, ಅಶ್ವತ್ಥಾಮ, ಭೀಷ್ಮ , ಧೃತರಾಷ್ಟ್ರ ಮತ್ತು ಇನ್ನು ಯಾರೋ ಇಬ್ಬರು ಜನ, ನನಗೆ ನೆನಪಿನಲ್ಲಿಲ್ಲ.
ದುರ್ಯೋಧನನು ತನ್ನ ಮರಣದ ಸಮಯದಲ್ಲಿ ನನಗಾಗಿ ಯಾರು ದುಃಖಿಸಕೂಡದು , ನನಗೆ ವೀರಸ್ವರ್ಗ ದೊರೆಯುತ್ತಿದೆ ಎನ್ನುತ್ತಾನಂತೆ.
ಮತ್ತೆ ಧರ್ಮರಾಯ ?
ಸತ್ತ ತನ್ನ ಕಡೆಯವರಿಗೂ ಕೌರವರ ಕಡೆಯವರೆಗೂ ಮಹಾಭಾರತದ ಸ್ತ್ರೀ ಪರ್ವದಲ್ಲಿ ತರ್ಪಣವನ್ನು ಕೊಡುತ್ತಾನೆ. ಸತ್ತವರ ಬಂಧು-ಬಾಂಧವರು ತನ್ನತ್ತ ಆಕ್ಷೇಪದ ದೃಷ್ಟಿಯಿಂದ ನೋಡಿದಂತೆ ಅವನಿಗೆ ಅನಿಸುತ್ತದೆ. ಇಷ್ಟೆಲ್ಲಾ ಜನರ ಸಾವಿಗೆ ಕಾರಣನಾಗಿ ರಾಜನಾದ ಧರ್ಮರಾಯ ಈತನೇ ಎಂದು ತಮ್ಮ ತಮ್ಮಲ್ಲಿ ಅಂದುಕೊಂಡಂತೆ ಅವನಿಗೆ ಅನಿಸುತ್ತದೆ. ಅವನು ಗಾಂಧಾರಿಯನ್ನು ಭೇಟಿಯಾಗಿ ನಮಸ್ಕರಿಸುತ್ತ 'ನಿನ್ನ ಮಕ್ಕಳ ಮರಣಕ್ಕೆ ಕಾರಣನಾದ ಈ ನನ್ನನ್ನು ಕ್ಷಮಿಸು' ಎಂದು ಕೇಳಿಕೊಳ್ಳದೆ 'ನನ್ನನ್ನು ಶಪಿಸು' ಎಂದು ಬೇಡಿಕೊಳ್ಳುತ್ತಾನಂತೆ.
ಈ ಎಲ್ಲ ಸಂಗತಿ ನನಗೆ ಗೊತ್ತಿದ್ದಿಲ್ಲ. ನಿಮಗೆ ಗೊತ್ತಿರಬಹುದು. ಯಾರಿಗಾದರೂ ಗೊತ್ತಿಲ್ಲದಿದ್ದರೆ ಅವರಿಗೆ ತಿಳಿಸೋಣ ಅಂತ ಈ ನಾಲ್ಕು ಸಾಲು ಬರೆದಿದ್ದೇನೆ . ಯಾರಿಗಾದರೂ ಸಂತೋಷವಾದರೆ ನನಗೆ ಸಂತೋಷ.