ಸುಂದರಿಯರು ಸಾಲಾಗಿ ಕ್ಯೂ,,,,,,,,,,

ಸುಂದರಿಯರು ಸಾಲಾಗಿ ಕ್ಯೂ,,,,,,,,,,

ಲೇ, ದಿನಾ ಇಷ್ಟೊಂದು ಅನ್ನ ಮಾಡಿ ವೇಷ್ಟ್ ಮಾಡುದ್ರೆ ನಿಮ್ಮಪ್ಪನ ಮನೆಯಿಂದ ಅಕ್ಕಿ ಮೂಟೆ ಹೊತ್ಕೊಂಡು ಬರ್ತೀಯೇನೇ? ನಾನು ಕಣೆ ದುಡಿದು ತಂದು ಹಾಕೋನು.

ಹೌದೇನ್ರೀ ನಂಗೊತ್ತೇ ಇರ್ಲಿಲ್ಲ,ನಾನು ಯಾರೋ ತಂದು ಹಾಕ್ತಾರೆ ಅಂದ್ಕೊಂಡಿದ್ದೆ.
ಸರಿಹೋಯ್ತು ನಿನ್ನ ಅಪಹಾಸ್ಯಕ್ಕೂ ಒಂದು ಮಿತಿ ಇರಲಿ.
ಇನ್ನೇನ್ರೀ ಮತ್ತೆ ನಾನೇ ದುಡಿದು ತಂದು ಹಾಕೋದು ಅಂತ ಎದೆ ತಟ್ಕೊಂಡು ಹೇಳ್ತೀರಲ್ಲ. ನಾಚಿಕೆ ಯಾಗಲ್ವಾ? ಇನ್ಯಾರು ತರಬೇಕು. ಒಂದು ಗಾದೆಮಾತಿದೆ ನಿಮ್ಮಂಥವರನ್ನೇ ನೋಡಿ ಹೇಳಿರೋದು ಅನ್ಸತ್ತೆ. "ಬರಗಾಲದಲ್ಲಿ ನನ್ಹೆಂಡ್ರು ಮಕ್ಕಳ್ನ ನಾನೇ ಸಾಕಿದೆ" ಅಂತ.

ನೀವ್ಯಾಕ್ರೀ ಅಡಿಗೆ ಮನೆಗೆ ಬರ್ತೀರಾ, ಏನಿದ್ರೂ ನಿಮಗೆ ಹಾಲು, ರೂಮಲ್ಲಷ್ಟೇ
ಕೆಲಸ. ಹೆಂಗಸರಹಾಗೆ ಅಡಿಗೇ ಮನೇಲೇನ್ರೀ ನಿಮ್ಮ ಕೆಲಸ . ಇದು ನನ್ನ ರಾಜ್ಯ, ಅನ್ನನ್ನಾದ್ರೂ ಚೆಲ್ತೀನಿ ಬೇಳೇ ನಾದ್ರೂ ಚೆಲ್ತೀನಿ ಮತ್ತೆ ಈ ಕಡೆ ತಲೆ ಹಾಕ್ಬೇಡ್ರೀ.

ಅಯ್ಯಯ್ಯೋ ಏನೇ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತೀಯಾ? ನಾನು ಏನೂ ಮಾತಾಡಬಾರ್ದಾ? ಅಯ್ಯೋ ಅದಕ್ಕೇನ್ರೀ ಧಾರಾಳವಾಗಿ ಮಾತಾಡ್ರೀ ಮಾರಾಯರೇ, ಏನಾದ್ರೂ ಉಪಯೋಗಕ್ಕೆ ಬರುವಂಥದ್ದು ಮಾತಾಡಿ. ಅದು ಬಿಟ್ಟು ಕೆಲ್ಸಕ್ಕೆ ಬಾರದ್ದಕ್ಕೆಲ್ಲಾ ಜಗಳ ತೆಗೀಬೇಡಿ.
ನೀನೆಲ್ಲಿ ಗಂಟು ಬಿದ್ಯೋ? ನನ್ನಂಥ ಸುರದ್ರೂಪಿಗೆ ಸಾಲಾಗಿ ಸುಂದರಿಯರು ಕ್ಯೂ ನಿಂತಿದ್ರು ನನ್ನ ಮದ್ವೆಯಾಗಕ್ಕೆ ನಾ ಮುಂದು ತಾ ಮುಂದು ಅಂತ ಪೈಪೋಟಿ ನಡೆಸ್ತಿದ್ರು. ನೀನೇ ವಕ್ಕರಿಸಬೇಕಾ ನನಗೆ :-(

ನಿಮ್ಮನ್ನ್ಯಾರ್ರೀ ನನ್ನ ಮದ್ವೆಯಾಗು ಅಂದೋರು, ನನಗಿಂತ ಮುಂಚೆ ಬಂದಿದ್ಲಲ್ಲಾ ತುರಿಯೋಮಣೆ, ಅವಳನ್ನೇ ಮದ್ವೆಯಾಗ್ಬೇಕಾಗಿತ್ತು. ಏನೇ ಅವ್ಳನ್ನೇನೇ ತುರಿಯೋಮಣೆ ಅಂತೀಯಾ? ಏನೋ ಒಂದು ಸ್ವಲ್ಪ ಉಬ್ಬಲ್ಲಿತ್ತಪ್ಪ, ಇನ್ನೆಲ್ಲಾ ಚೆನ್ನಾಗೇ ಇದ್ಲಲ್ಲಾ. ಹೌದೌದು ಅದಕ್ಕೇ ಈಗ್ಲೂ ಯಾರೂ ಒಪ್ಪದೇ ಕನ್ಯಾಮಣಿಯಾಗೇ ಉಳಿದಿದ್ದಾಳೆ. ನೀವಾದ್ರೂ ಆಗಿದ್ರೆ ಅವಳ ಕನ್ಯಾಸೆರೆ ಬಿಡಿಸಬೋದಿತ್ತು. ಸಾಕು ಸುಮ್ನಿರೇ 25 ವರ್ಷವಾದ್ರೂ ಮದ್ವೆ ಇಲ್ದೇ ಬಿದ್ದಿದ್ದೆ, ಕೊಬ್ಬಾಡ್ತಾಳೆ. ಏನಂದ್ರಿ ಏನಂದ್ರೀ ಮತ್ತೆ ಹೇಳಿ ಓಹೋ ಮದ್ವೆ ಮಾಡ್ಕೊಂಡು ಬಿದ್ದಿರ್ಬೇಕಾಗಿತ್ತಾ? ಮತ್ತೆ ನೀವು ಬಂದು ಮದ್ವೆ ಮಾಡ್ಕೋತಿದ್ರಾ, ನನಗೆ ಗೊತ್ತಿರಲಿಲ್ಲ

ಸಾಕು ಮಾರಾಯ್ತೀ ನಿನಗೆ ಯಾರು ಬಾಯಿ ಕೊಡಕ್ಕಾಗತ್ತೆ, ನಿನ್ನದೇನು ಬಾಯಾ ಬೊಂಬಾಯಾ? ಏನ್ರೀ ನೀವೇನು ಸಾಚಾನ? ನಿಮ್ಮ ನಾಲಗೆ ಮರದ್ದಾಗಿದ್ರೆ ಇಷ್ಟೊತ್ತಿಗೆ ಪುಡಿಉಡಿಯಾಗೋಗ್ತಿತ್ತು. ನೀವೇನು ಕಮ್ಮೀನಾ? ತಪ್ಪಾಯ್ತೇ ಮಹಾರಾಯ್ತಿ ಇನ್ನು ನಿನ್ನ ತಂಟೆಗೆ ಬರಲ್ಲ. ಸರಿ 1,000 ಬಾರಿ ಇಂಪೋಜಿಷನ್ ಬರೀರಿ.
ಪೆನ್ನು ಪುಸ್ತಕ ಹಿಡ್ಕೊಂಡು ಕೂತಿದ್ದಾರೆ. ಸಾರ್ಥಕವಾಯಿತು ಟೀಚರ್ ಆಗಿದ್ದಕ್ಕೆ.
ಹಾಸ್ಯ.
ಸೀತ ಆರ್. ಮೊರಬ್

Rating
No votes yet

Comments