ಹೀಗೊಂದು ತಲೆಗೆ ಹುಳುಬಿಡುವ ವಿಚಾರ

ಹೀಗೊಂದು ತಲೆಗೆ ಹುಳುಬಿಡುವ ವಿಚಾರ

ಇಡೀ ರಾತ್ರಿ ಮನದಲ್ಲಿ ಕಾಡಿದ ವಿಚಾರವನ್ನು ಬೆಳಗಾಗೆದ್ದು ನಿಮ್ಮೊಡನೆ ಹಂಚಿಕೊಂಡರೆ ನನ್ನ ತಲೆಯಲ್ಲಿರುವ ಹುಳುವನ್ನು ನಿಮ್ಮ ತಲೆಗೂ    ಬಿಟ್ಟಂತಾಯ್ತು.ನನಗೆ ಇಂದು ರಾತ್ರಿ ನಿದ್ರೆ ಬರಲು ಅವಕಾಶವಾಯ್ತು. ಈ ಫೇಸ್ ಬುಕ್ ಒಡೆಯರಿಗೆ ಈ ವಿಚಾರದಲ್ಲಿ ತ್ಯಾಂಕ್ಸ್ ಹೇಳಲೇ ಬೇಕು. ಕ್ಷಣಮಾತ್ರದಲ್ಲಿ ನನ್ನ ತಲೆಯಲ್ಲಿರುವ ವಿಚಾರ ಪ್ರಪಂಚದ ಯಾವ ಮೂಲೆಗೆ ಬೇಕಾದರೂ ತಲುಪಬಹುದಲ್ಲಾ!ಗಾಂಧಿ,ವಿನೋಬಾಭಾವೆ,ಜಯಪ್ರಕಾಶನಾರಾಯಣ್ ..ಅವರುಗಳ ಕಾಲದಲ್ಲಿ ಈ ಫೇಸ್ ಬುಕ್ ಇದ್ದಿದ್ದರೆ ಅವರ ಚಳುವಳಿಗಳು ಅದೆಷ್ಟು ಬೇಗ ಪ್ರಪಂಚದಾದ್ಯಂತ ಹರಡಿ ಬಿಡುತ್ತಿತ್ತೋ! ಈಗ ನೋಡಿ ಮೋದಿಯವರಿಗೆ ಈ ಅವಕಾಶ.
ಅರೆ, ನಾನು ಹೇಳಬೇಕಾದ್ದನ್ನು ಹೇಳೋದ್ಬಿಟ್ಟು ಏನೇನೋ ತಲೆಹರಟೆ ಮಾಡ್ತಿದ್ದೀನಲ್ಲಾ! ಈಗ ಶುರುಮಾಡುವೆ.

ಈಗ ನಲವತ್ತು ವರ್ಷದ ಹಿಂದಿನ ಮಾತು. ನಮ್ಮ ಮನೆಯಲ್ಲಿ [ನಮ್ಮ ಹಳ್ಳಿಯ ಮನೆಯಲ್ಲಿ. ಅದು ಈಗಲೂ ಹಾಗೆಯೇ ಇದೆ] ನಮ್ಮ ಅಪ್ಪ-ಅಮ್ಮ ಮತ್ತು ನಾವು ಆರುಜನ ಮಕ್ಕಳು. ನಮ್ಮ ಸೋದರತ್ತೆ ಗೌರತ್ತೆ , [ಅವರ ಹತ್ತನೆಯ ವಯಸ್ಸಿಗೆ ವಿಧವೆ ಪಟ್ಟ  ಸಿಕ್ಕಿತ್ತು] ನಮ್ಮ ದೊಡ್ಡಮ್ಮ [ನಮ್ಮ ದೊಡ್ದಪ್ಪ ಸತ್ತು ಬಹಳ ದಿನ ಆಗಿತ್ತಂತೆ. ಅವರಿಗೆ ಮಕ್ಕಳೂ ಆಗಿರಲಿಲ್ಲವಂತೆ] ನಮ್ಮ ಅಜ್ಜಿ [ನಮ್ಮ ತಂದೆಯವರ ತಾಯಿ] ನಮ್ಮ ಮತ್ತೊಬ್ಬ ಅಜ್ಜಿ [ನಮ್ಮ ತಾಯಿಯವರ ತಾಯಿ. ಅವರಿಗೆ ಗಂಡು ಮಕ್ಕಳಿರಲಿಲ್ಲ] ಒಟ್ಟು ಜನರ ಲೆಕ್ಖ ಸಿಕ್ತಾ? ಜೊತೆಗೆ ಮನೆಯಲ್ಲಿ ಹತ್ತು ಗೋವುಗಳು.[ಅದೇ ಮನೆ ಈಗಲೂ ಇದೆ. ಅಲ್ಲಿ ನನ್ನ ತಮ್ಮ ಮತ್ತು ನಾದಿನಿ ಇಬ್ಬರಿಗೆ ಮನೆ ಸಾಕಾಗದೆ ಹಿತ್ತಲಲ್ಲೊಂದು ಮನೆ ಇದೆ. ಎರಡು ಮನೆಯಿಂದ ಇಬ್ಬರು ಜನ ಇದ್ದಾರೆ, ಒಂದು ದನ ಇದೆ]

ಈಗ ಇನ್ನೂ ಹಿಂದಕ್ಕೆ ಹೋಗೋಣ. ಐದಾರು ದಶಕಗಳ ಮಾತು. ಆಗ ನಮ್ಮ ತಂದೆಯವರ ಅಕ್ಕ ಪುಟ್ಟ   ನಂಜಮ್ಮ ಚಿಕ್ಕಮಗಳೂರಿನಲ್ಲಿದ್ದರಂತೆ. ಪಾಪ! ಅವರ ಪತಿ ದೈವಾದೀನರಾದರು.ನಮ್ಮಪ್ಪ ಹಿಂದೆ ಮುಂದೆ ನೋಡಲಿಲ್ಲ.  ಎತ್ತಿನ ಗಾಡಿ ಕಟ್ಟಿಕೊಂಡು ಹೋದರು.ಅಕ್ಕ ಮತ್ತು ಮೂರುಜನ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದು ಬಿಟ್ಟರು.ಇದೆಲ್ಲಾ ಯಾಕೆ ಬರೀತಿದೀನಿ ಅಂದ್ರಾ?

ಕಾರಣ ಇದೆ. ಈ ಮಾತು ನಿಮಗ್ಯಾರಿಗೂ ಇಷ್ಟ ಆಗೋದಿಲ್ಲ. ಹಿಂದಿನ ಮಾತು [ಭಾಗ-೧] ಮಾತ್ರ ಕಥೆ ಕೇಳಲು    ಚೆನ್ನ. ಈಭಾಗ -೨ ಇದೆಯಲ್ಲಾ  ಇದು ನಾವು ನೀವು ಎಲ್ಲಾ ಮಾಡಿಕೊಂಡಿರೋ ಕೆಟ್ಟ ವ್ಯವಸ್ಥೆ. ಅದಕ್ಕೆ ಇಂದಿನ ಯುವಕರು ಹೇಳ್ತಾರೆ " ಒಂದು ಚಿಕ್ಕ ಚೊಕ್ಕ ಸಂಸಾರ" ಈ ಚಿಕ್ಕಚೊಕ್ಕ ಸಂಸಾರಕ್ಕೆ ಮೂರು ರೂಮ್ ಗಳಾದರೂ ಇದ್ದೇ ಇರುತ್ತೆ.ಇರಲಿ. ಅಂದು ನಮ್ಮ ಮನೆ ಮೂರು ಅಂಕಣ. ಅಂದರೆ 7x25 ಅಡಿಯ ಮೂರು ಭಾಗ. ಒಂದರ ಪಕ್ಕ ಒಂದು. ಮೊದಲನೆಯದು ಗೋವುಗಳಿಗೆ.ಮಧ್ಯದ್ದು ನಮಗೆ ಮಲಗಲು.ಇನ್ನೊಂದರಲ್ಲಿ ಎರಡು ಭಾಗ.ಒಂದು ಅಡಿಗೆ ಮಾಡಲು.ಅಲ್ಲೇ ದೇವರ ಮನೆ.ಮತ್ತೊಂದು ಹಸು ಕರು ಕಟ್ಟಲು.ಅಲ್ಲೇ ಸ್ನಾನಕ್ಕೆ ಬಚ್ಚಲು. ಇದರಲ್ಲಿ 15-20 ಜನರ ಅಷ್ಟೇ ಗೋವುಗಳ ವಾಸ. ಬೆಡ್ ರೂಮೇ ಇಲ್ಲ ನೋಡಿ. ಮದುವೆಯ ಹೊಸದರಲ್ಲಿ ಮಲಗಲು ಮನೆಯ ಹೊರಗೆ ಜಗಲಿಯ ಮೇಲೊಂದು ಪುಟ್ಟ ರೂಮು! 

ಓಹ್ ಮತ್ತೆ ಹಳೆ ಹೊಸ ಕಥೆಗಳು ಗೊಂದಲ ಮಾಡಿ ಬಿಟ್ಟವು. ಇರಲಿ. ಸಹಿಸಿಕೊಳ್ಳಿ.ಭಾಗ -೨ ನ್ನೇ ಈಗ ಮುಂದುವರೆಸುವೆ.

ಇಲ್ಲೊಂದು ಮನೆ. ಅಲ್ಲಿ ಅಪ್ಪ-ಅಮ್ಮ ವಾಸ. ಅವರಿಗೆ ಐದು ಜನ ಗಂಡು ಮಕ್ಕಳು. ಯಾರಿಗೂ ಹೊರ ಊರುಗಳಿಗೆ ಹೋಗುವ ಅವಕಾಶ ಸಿಕ್ಕಿಲ್ಲ. ಆದರೆ ಮನೆಯಿಂದ  ಹೊರಗೆ ಹೋಗಿದ್ದಾರೆ. ಐದು ಮನೆಗಳಲ್ಲಿಯೇ ಅವರ ಪ್ರತ್ಯೇಕ ವಾಸ. ಇಬ್ಬರಿಗೆ ಒಂದೊಂದು ಮಕ್ಕಳಿವೆ. ಮೂವರು ಪತಿ-ಪತ್ನಿ ಯರು ಮಾತ್ರ. ಐದೂ ಜನರ ಮನೆ , ಮನೆಯಲ್ಲಾ ಅವೆಲ್ಲವೂ ಬಂಗಲೆ ಗಳೇ. ಮನೆಯ ಯಜಮಾನರಿಗೂ ವಯಸ್ಸಾದ ಅಪ್ಪ-ಅಮ್ಮ ಇದ್ದಾರೆ. ಅವರನ್ನೂ ಪ್ರತ್ಯೇಕ ಮನೆಯಲ್ಲೇ ಇಟ್ಟಿದ್ದಾರೆ. ಆಗರ್ಭ ಶ್ರೀಮಂತರು. ಅವರನ್ನು ನೋಡಿಕೊಳ್ಳಲು    ಒಬ್ಬಳು ಆಯಾ ಇದ್ದಾಳೆ!!

ಯಾಂತ್ರಿಕವಾಗಿ ಅಂಕಿಅಂಶ ಸಹಿತ ಬರೆದುಬಿಟ್ಟೆ. ಆದರೆ ಹಿಂದಿನ-ಇಂದಿನ ಜನರ ಮಾನಸಿಕತೆ, ಜೀವನ ಕ್ರಮ, ಪ್ರೀತಿ, ವಿಶ್ವಾಸಗಳು, ವಾಂಛಲ್ಯ, ಕಷ್ಟ -ಸುಖ ಯಾವ ವಿಚಾರವನ್ನೂ ಪ್ರಸ್ತಾಪಿಸಲೇ ಇಲ್ಲ. ಯಾಕೆ ಬರೆಯಬೇಕು? ಎಲ್ಲರೂ ಅನುಭವಿಸುತ್ತಿರುವುದೇ ಅಲ್ಲವೇ?

 ಹಿಂದೆ ನಡೆದ ಚಳುವಳಿ ಬಗ್ಗೆ ಬರೆದೆ. ಆದರೆ ಇಂದು ಮತ್ತೊಂದು ಚಳುವಳಿ ನಡೆಯದಿದ್ದರೆ ನಮ್ಮ ಕುಟುಂಬ ಪದ್ದತಿ ಎಕ್ಕುಟ್ಟಿ ಹೋಗುತ್ತೆ. ಎರಡು ರೀತಿಯ ಚಳುವಳಿ ನಡೀಬೇಕು. RSS ನವರು ಕುಟುಂಬ ಪ್ರಭೋಧನ್ ಅಂತಾ ಸಂಸ್ಥೆ ಹುಟ್ಟುಹಾಕಿ "ಅವಿಭಕ್ತ ಕುಟುಂಬದ" ಲಾಭದ ಬಗ್ಗೆ ಪ್ರಚಾರ ಆರಂಭಿಸಿದ್ದಾರೆ. ಎರಡನೆಯದು ಸರ್ಕಾರದಲ್ಲಿಯೇ ಕಾನೂನು ಬರಬೇಕು.ಏನದು?

ಕುಟುಂಬವನ್ನು ಗುರುತಿಸಲು ಒಂದು ಸೂತ್ರ ಇರಬೇಕು. ಮಕ್ಕಳಿಗೆ 20-25 ವರ್ಷವಾಗುವುದರೊಳಗೆ ಬೇರೆ ಮನೆ ಮಾಡುವ ಅನಿಷ್ಟ ಪದ್ದತಿ ಇದೆಯಲ್ಲಾ ಅವರಿಗೆ ಕಡಿವಾಣ ಹಾಕಬೇಕು. ಗ್ಯಾಸ್ ಮತ್ತು ವಿದ್ಯುತ್ ಒದಗಿಸುವ ಮೊದಲು ಕುಟುಂಬ ಎಂದರೆ ಹೀಗಿರಬೇಕೆಂಬ ಸೂತ್ರ ಜಾರಿಯಾಗಬೇಕು. ಹಾಗೆ ಮಾಡಿದ್ದೇ ಆದರೆ ಈಗ ದೇಶದಲ್ಲಿ ಖರ್ಚಾಗುತ್ತಿರುವ ಗ್ಯಾಸ್ ಮತ್ತು ವಿದ್ಯುತ್ ಬೇಡಿಕೆ ಅರ್ಧಕ್ಕೆ ಸಾಕಾಗಬಹುದು. ಯೋಚಿಸಿ ನೋಡಿ. ಇದೇನು ಹುಚ್ಚು ಚಿಂತನೆ ಅನ್ನಿಸುತ್ತೋ? ಬಾಲಿಶ ಅನ್ನಿಸುತ್ತೋ? ಓಬೀರಾಯನ ಕಾಲದಲ್ಲಿ ನಾನಿದ್ದೀನಿ ಅನ್ನಿಸುತ್ತೋ? ಹೇಳಿಬಿಡಿ.

ನನ್ನ ಈ ಮಾತು 95% ಜನರಿಗೆ ಇಷ್ಟವಾಗೋದಿಲ್ಲ.ಸಹಿಸಲು ಕಷ್ಟವಾಗುತ್ತೆ ಅಂತಾ ನನಗೆ ಗೊತ್ತು. ಇದೊಂದು ತರ ತಿಕ್ಕಲು ಚಿಂತನೆ ಅಂತಲೂ ಅನ್ನಿಸಬಹುದು. ಆದರೆ ದೇಶವನ್ನು ಕಣ್ಮುಂದೆ ಇಟ್ಟುಕೊಂಡು ಯೋಚಿಸಿ ನೋಡಿ. ನಾವೆಂತಾ ಭೋಗಿಗಳೆಂಬುದು ಹೇಳಿಕೊಳ್ಳದಿದ್ದರೂ ನಮ್ಮ ಆತ್ಮಕ್ಕೆ ಅರಿವಾದೀತು!

ಕೊನೆಯ ಮಾತು:

ನಿಜವಾಗಿ ಅವಿಭಕ್ತ ಕುಟುಂಬದಲ್ಲಿರುವ ಲೈಫ್ ಸೆಕ್ಯೂರಿಟಿ ಒಡೆದ ಕುಟುಂಬದಿರಲು ಸಾಧ್ಯವೇ ಇಲ್ಲ.

 ನಮ್ಮ ಮನೆಯ ಅಂದಿನ ಫೋಟೋ ಇಲ್ಲ. ಅಷ್ಟೇ ಅಲ್ಲ. ನನ್ನ ಮದುವೆಯಲ್ಲಿ ಫೋಟೋ ತೆಗೆದಿಲ್ಲ ಎಂದರೆ ನಂಬುವಿರಾ? ಬಡತನ ಹಾಗಿತ್ತು ಇರಲಿ.
ಆದರೆ ಯಾರೋ ಪುಣ್ಯಾತ್ಮರ  ಅವಿಭಕ್ತ ಕುಟುಂಬ ಫೋಟೋ ಸಿಕ್ಕಿದೆ. ಇದು 1928 ನೇ ಇಸವಿಯದು. ಕಲ್ಕತ್ತಾ ಸಮೀಪ ಬೆಹಲಾ ಎಂಬ ಊರಿನ ರಾಯ್ ಕುಟುಂಬದ್ದು. ಮನೆಯ ಗಂಡಸರು ಮತ್ತು ಮಕ್ಕಳು ಇದ್ದಾರೆ. ಹೆಂಗಸರು ಹಿಂದೆ ಇದ್ದಿರಬಹುದೆಂದು ಲೇಖಕರು ಹೇಳುತ್ತಾರೆ.

Rating
No votes yet

Comments

Submitted by anand33 Thu, 04/03/2014 - 10:49

In reply to by kavinagaraj

ಅವಿಭಕ್ತ ಕುಟುಂಬ ಪದ್ಧತಿ ಇಂದಿನ ಪೀಳಿಗೆಗೆ ಹಿಡಿಸಲಾರದು. ಇಂದು ಅವಿಭಕ್ತ ಕುಟುಂಬ ಇದ್ದರೆ ಆ ಮನೆಯ ಗಂಡಿಗೆ ಮದುವೆಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುವುದಿಲ್ಲ. ಅದೂ ಅಲ್ಲದೆ ಮದುವೆಯಾಗುವ ಗಂಡಿಗೆ ತಂದೆ ತಾಯಿ ಇದ್ದಾರೆಯೇ, ಇದ್ದರೆ ಅವರು ಮದುವೆಯಾಗುವ ಗಂಡಿನ ಜೊತೆ ಇದ್ದಾರೆಯೇ ಎಂದು ಕೇಳಿ ಜೊತೆಗೆ ವಾಸಿಸುತ್ತಿದ್ದರೆ ಮದುವೆಯಾಗಲು ಇಂದಿನ ಯುವತಿಯರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಕಾರಣ ವಯಸ್ಸಾದ ತಂದೆ ತಾಯಿ ಇದ್ದರೆ ಅವರು ಕಿರಿ ಕಿರಿ ಮಾಡುತ್ತಾರೆ, ಅವರು ದೈಹಿಕವಾಗಿ ದುರ್ಬಲವಾದರೆ ಆಗ ಅವರ ಚಾಕರಿ ಮಾಡಬೇಕಾಗುತ್ತದೆ ಎಂದು ಅವಿಭಕ್ತ ಕುಟುಂಬವನ್ನು ಇಂದು ಯುವತಿಯರು ಇಷ್ಟಪಡುವುದಿಲ್ಲ. ಅದೂ ಅಲ್ಲದೆ ಇಂದು ಯಾರೂ ಕೃಷಿಯಲ್ಲಿ, ಸಾಕಷ್ಟು ಜಮೀನು ಇದ್ದರೂ, ಯುವಕರು ಉಳಿಯುವುದಿಲ್ಲ, ಬೇರೆ ಉದ್ಯೋಗ ಅರಸಿ ಬೇರೆ ಬೇರೆ ಊರುಗಳಿಗೆ ಹೋಗುತ್ತಾರೆ. ಹೀಗಾಗಿ ಅವಿಭಕ್ತ ಕುಟುಂಬ ಇಂದು ಸಾಧ್ಯವಿಲ್ಲ. ಕಾನೂನುಗಳ ಮೂಲಕ ಅವಿಭಕ್ತ ಕುಟುಂಬವನ್ನು ಪ್ರೋತ್ಸಾಹಿಸುವುದು ಸಾಧ್ಯವಾಗಲಾರದು ಮಾತ್ರವಲ್ಲ ಸೂಕ್ತವೂ ಆಗಲಾರದು. ಇಂದು ಜನರಲ್ಲಿ ಸಂಕುಚಿತ ಮನೋಭಾವನೆ ಹೆಚ್ಚು ಹೆಚ್ಚು ಬೆಳೆದಿದೆ. ಹೊಂದಿಕೊಂಡು ಬಾಳುವ ಗುಣ ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ಇದರಿಂದಾಗಿ ಇರುವ ಅವಿಭಕ್ತ ಕುಟುಂಬಗಳೂ ಒಡೆದು ಚೂರುಚೂರು ಆಗುತ್ತಿವೆ. ಇದನ್ನು ತಡೆಯುವುದು ಸಾಧ್ಯವಿಲ್ಲ.