ಹೊಸ ವರ್ಷದ ಹೊಸ್ತಿಲಲ್ಲಿ ನಾನು ಮತ್ತು ನೀವು

ಹೊಸ ವರ್ಷದ ಹೊಸ್ತಿಲಲ್ಲಿ ನಾನು ಮತ್ತು ನೀವು

ಮನುಷ್ಯನ ತಲೆಯನ್ನ ದೆವ್ವಗಳೋ , ದೇವತೆಗಳೋ ಸವಾರಿ ಮಾಡ್ತಾ ಇರ್ತಾರಂತೆ .
ಇದನ್ನ ತಿಳಕೊಂಡು ತಲೆಯಿಂದ ಎಲ್ಲವನ್ನ ಕೆಡವಿಕೊಂಡೋನು , ಆದದ್ದರ ಬಗ್ಗೆ , ಆಗಬೇಕಾದ್ದರ ಬಗ್ಗೆ ಸರಿಯಾಗಿ ತಿಳಕೊಂಡು , ವರ್ತಮಾನದಲ್ಲಿ ಬದುಕೋದು ಜಾಣತನ . ಪ್ರೆಸೆಂಟ್ ಇಸ್ ಎ ಪ್ರೆಸೆಂಟ್ ಅಂತ ಒಂದು ಮಾತು ಇಂಗ್ಲೀಷಲ್ಲಿದೆ . ಈ ಕ್ಷಣ ಅನ್ನೋದು ಒಂದು ಉಡುಗೊರೆ ಅಂತ . ನಿನ್ನ ನೀನು ಅರಿತುಕೋ ಅಂತ ಇನ್ನೊಬ್ಬರಿಗೆ ಉಪದೇಶ ಹೇಳೋದು ಸುಲಭ . ನಮ್ಮನ್ನ ನಾವು ಅರಿತುಕೊಳ್ಳೋದು ಕಷ್ಟ .

ಇರಲಿ. ನನ್ನ ತಲೆಯಿಂದ ಅಂತೂ ಒಂದೊಂದಾಗಿ ಕೊಡವಿಕೊಂಡು ವರ್ತಮಾನದಲ್ಲಿ ಬದುಕೋ ಪ್ರಯತ್ನ ಅಂತೂ ಮಾಡ್ತಾ ಇದೀನಿ. ನನ್ನ ಬಗ್ಗೆ ನಾನು ಹೇಳ್ತಿದೀನಿ ಅಂತ ತಿಳ್ಕೋಬೇಡಿ . ನನ್ನ ಅಲ್ಪ ಅನುಭವ , ವಿಚಾರ ಯಾರಿಗಾದ್ರೂ ಉಪಯೋಗ ಆಗಬಹುದು . ನಾನು ಮಾಡಿದ ತಪ್ಪು ನೀವು ಮಾಡದಿರಿ ಅಂತ ಹೇಳ್ತಾ ಇದೀನಿ.

ನಲವತ್ತನಾಲ್ಕು ವರ್ಷ ಕಳೆದು ಹೋದ ಮೇಲೆ ಈಗ ಸ್ವಲ್ಪ ಎಚ್ಚತ್ತಿದ್ದೇನೆ . ಅಕ್ಷರ ಕಲಿತಂದಿನಿಂದ ಏನೋ ಓದ್ಕೊಂಡಿರತಿದ್ದೆ . ೨೫ ವರ್ಷದಿಂದ ಸಿನಿಮಾ ಹಾಡು , ಭಾವಗೀತೆ ಕೇಳ್ಕೊಂಡಿದ್ದೆ . ಸುಮಾರು ಎರಡೂವರೆ ವರ್ಷದಿಂದ ಅಂತರ್ಜಾಲದಲ್ಲಿ ಅಲೀತಿದ್ದೆ . ಸುತ್ತಲಿನದು ಗಮನಿಸದೇ ನನ್ನದೇ ಲೋಕದಲ್ಲಿರ್ತಿದ್ದೆ .

ಹೇಗೋ ಕಂಪ್ಯೂಟರ್ ವೃತ್ತಿಗೆ ಹದಿನೈದು ವರ್ಷದ ಹಿಂದೆ ಬಂದು ಬೇಕಿದ್ದು ಬೇಡದ್ದು ಗಮನಿಸದೆ ಕಲಿತೆ . ಇದೆಲ್ಲದರಿಂದ ಒಳ್ಳೇದೂ ಆಗಿದೆ . ಸ್ವಲ್ಪ ಮಟ್ಟಿಗೆ ಕೆಟ್ಟದ್ದೂ ಆಗಿದೆ ಅನ್ನಿ .
ಇರಲಿ . ಈಗ ...
ಭಾವಗೀತೆ , ಸಿನಿಮಾ ಹಾಡು ಕೇಳೋದು ಬಿಟ್ಟೆ.
ಪುಸ್ತಕ ಓದೋದು ಬಿಟ್ಟೆ .
ದಿನದ ಪತ್ರಿಕೆ . ಚಿತ್ರ , ತಲೆಬರಹ ನೋಡಿ ಎತ್ತಿಡ್ತೀನಿ.
ಟೀವೀ ಕೂಡ ಒಂದರ್ಧ ಗಂಟೆ ಚಾನೆಲ್ ಬದಲಾಯಿಸ್ತೀನಿ. ಇಂಟರ್ನೆಟ್ಟಲ್ಲಿ ಅರ್ಧ ಗಂಟೆ ಮಾತ್ರ ಇರ್‍ಬೇಕು ಅಂದ್ಕೊಂಡಿದೀನಿ .
ಇಪ್ಪತ್ತೆರಡು ವರ್ಷದ ನೌಕರಿ ನಂತರ ಆಫೀಸು ಅಂದ್ರೆ ಏನು ? ಕೆಲಸ ಅಂದ್ರೆ ಏನು ? ಅಂತ ಅರ್ಥ ಮಾಡ್ಕೊಳ್ತಿದೀನಿ .
ನನ್ನ ಕುರಿತು ಇತರರ ಅಪೇಕ್ಷೆ ಏನು ಅಂತ ತಿಳಕೊಂಡು ಅವನ್ನ ಪೂರೈಸ್ತಿದೀನಿ . ನನಗೇ ಅಂತ ಖಾಲೀ ಹೊತ್ತು , ಸ್ಪೇಸ್ ಅಂತಾರಲ್ಲ ಅದನ್ನ ಮಾಡ್ಕೊಳ್ತಿದೀನಿ . ಆಮೇಲೆ ಅದನ್ನ ಚೆನ್ನಾಗಿ ತುಂಬಿಕೊಳ್ಳೋಣ ಅಂತ :)
ನನ್ನನ್ನೇ ನಾನು ಗಮನಿಸ್ತಾ ಸಾಧ್ಯ ಆದಷ್ಟು ತಿದ್ಕೊಳ್ತಿದೀನಿ .
ಸುತ್ತ ನಡೆಯೋದನ್ನ ಅರ್ಥ ಮಾಡ್ಕೊಳ್ಳಕ್ಕೆ ಪ್ರಯತ್ನಿಸ್ತಿದೀನಿ.
ಯಾವ್ದೋ ಚಕ್ರದಲ್ಲಿ ಸಿಲುಕಿ ಚಲಿಸ್ತಿರೋನು ಈಗ ನಿಂತ್ಕೊಳ್ತಿದೀನಿ . ಅಂಗುಲಿಮಾಲ(*)ನ ಹಾಗೆ !

( ಅಂಗುಲಿಮಾಲ - ಒಬ್ಬ ದಾರಿ ದರೋಡೆಕೋರ , ಜನ ಇವನನ್ನ ಕಂಡು ಕೂಡಲೇ ಓಡಿಯಾದ್ರೂ ಹೋಗ್ತಿದ್ರು , ಅಥವಾ ಕಾಲಿಗಾದ್ರೂ ಬೀಳ್ತಿದ್ರು , ತಮ್ಮ ಹತ್ರ ಇರೋದನ್ನ ತಗೊಂಡು ತಮ್ಮನ್ನ ಜೀವಸಹಿತ ಬಿಡು ಅಂತ . ಒಂದ್ಸಲ ಅಲ್ಲಿ ಗೌತಮ ಬುದ್ಧ ಹಾದು ಹೋಗ್ತ ಇತಾನೆ . ಇವನನ್ನು ಅವನು ನೋಡಿದರೂ ಅದೇ ನಡಿಗೆಯ ಗತಿಯಲ್ಲಿ ಮುಂದೆ ಸಾಗ್ತಾನೆ. ಅಂಗುಲಿಮಾಲನಿಗೆ ಇದು ಹೊಸದು . ಅವನು ’ ಯಾರಲ್ಲಿ ಹೋಗ್ತಿರೋದು ? ನಿಂತ್ಕೋ ’ ಅಂತ ಅರಚುತ್ತಾನೆ . ಆಗ ಬುದ್ದ ಹೇಳೋಡು - ನಿಂತ್ಕೋಬೇಕಾದ್ದು ನಾನಲ್ಲ ; ನೀನು. ಪಾಪದ ವಿಷಚಕ್ರದಲ್ಲಿ ಸಿಕ್ಕಿ ಚಲಿಸ್ತಾ ಇದ್ದೀಯ. " ಅಂತ ಹೇಳಿ ಅವನ ಉದ್ಧಾರಕ್ಕೆ ಕಾರಣ ಆಗ್ತಾನೆ.)
ಒಟ್ಟಿನಲ್ಲಿ ಹೇಳ್ಬೇಕಂದ್ರೆ
೧. ಪ್ರತೀ ಮನುಷ್ಯ ಪ್ರತೀದಿನ ಸ್ವಲ್ಪ ಹೊತ್ತು ಏಕಾಂತ ಇಟ್ಕೊಂಡು ವಿಚಾರ ಮಾಡ್ಬೇಕು. ತಾನು ಮಾಡಿದ್ದರ ಬಗ್ಗೆ , ಮಾಡಬೇಕಾದ್ದರ ಬಗ್ಗೆ , ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆ ಕುರಿತು ವಿಚಾರ ಮತ್ತು ಪುನರ್ವಿಮರ್ಶೆ ಮಾಡ್ಕೊಳ್ತಾ ಇರ್‍ಬೇಕು.
೨. ತನ್ನ ಮಿನಿಮಮ್ ಅಗತ್ಯ ಗಳನ್ನೂ ಇತರರ ಮಿನಿಮಮ್ ಅಪೇಕ್ಷೆಗಳನ್ನೂ ಮೊದಲು ಪೂರೈಸಬೇಕು.
೩. ಎಷ್ಟೇ ಕೆಲ್ಸದ ಒತ್ತಡ ಇದ್ರೂ ಪ್ರತೀದಿನ ಒಂದಾದರೂ ಸ್ವಂತದ ಕೆಲಸ ಆದ್ಯತೆಯ ಮೇಲೆ ಮಾಡಬೇಕು . ಒಂದು ವರ್ಷದಲ್ಲಿ ೩೬೫ ಸುಧಾರಣೆಗಳು ಆಗಿಬಿಡತ್ವೆ ! ಈ ವಿಚಾರ ನನ್ನ ಗೆಳೆಯ ಕೊಟ್ಟಿದ್ದು . ಹೊರ ಒತ್ತಡದಿಂದ ನೀವು ಮಾಡಲೇಬೇಕಾದ ಕೆಲಸ ಅಂತೂ ನಿಲ್ಲೋದಿಲ್ಲ . ನೀವು ಮಾಡ್ಲೇ ಬೇಕಾಗ್ತದೆ . (ಇಲ್ಲದಿದ್ರೆ ಇನ್ನೊಬ್ರು ಮಾಡ್ತಾರೆ) . ನಿಮ್ಮ ಸ್ವಂತದ ಕೆಲಸ ನೀವು ತಾನೇ ಮಾಡ್ಬೇಕು? ಅದಕ್ಕೆ ಆದ್ಯತೆ ಕೊಡಿ.
೪. ನೀವು ಮಾಡಿದ ತಪ್ಪುಗಳನ್ನ ಅರಿತುಕೊಳ್ಳಿ , ಮತ್ತೆ ಅವೇ ತಪ್ಪನ್ನ ಮಾಡಬೇಡಿ.

ಹೊಸವರ್ಷ , ವರ್ಷಾವಧಿ ಹಬ್ಬಗಳು , ಹುಟ್ಟುಹಬ್ಬ , ಮದುವೆ ವಾರ್ಷಿಕೋತ್ಸವ ಇಂಥ ಗಳಿಗೆಗಳು ನಮ್ಮ ಬದುಕಿನ ಕುರಿತು ಅರೆಗಳಿಗೆ ನಿಂತು ಒಟ್ಟಾರೆ ಗತಿ , ಕಳೆದ ವರ್ಷದ ಘಟನೆಗಳು , ಮುಂದಿನ ವರ್ಷದ ಕುರಿತು ಕಾರ್ಯತಂತ್ರ ರೂಪಿಸಿಕೊಳ್ಳೋದು ಇಂಥದೆಲ್ಲದ್ದಕ್ಕೆ ಅನುವಾಗುತ್ತವೆ .

ಹೊಸ ವರ್ಷ ಎಲ್ಲರಿಗೂ ಸಂತಸವನ್ನೂ , ಸಮೃದ್ಧಿ ಯನ್ನೂ ,ನೆಮ್ಮದಿಯನ್ನೂ ತರಲಿ .

Rating
No votes yet

Comments