೧೩೨. ಲಲಿತಾ ಸಹಸ್ರನಾಮ - ಮಹಾಷೋಡಶೀ ಮಂತ್ರದ ವಿವರಣೆ

೧೩೨. ಲಲಿತಾ ಸಹಸ್ರನಾಮ - ಮಹಾಷೋಡಶೀ ಮಂತ್ರದ ವಿವರಣೆ

ಚಿತ್ರ

                                                                                                                  ಮಹಾಷೋಡಶೀ ಮಂತ್ರದ ವಿವರಣೆ

ಮಹಾಷೋಡಶೀ ಮಂತ್ರವನ್ನು ಹೀಗೆ ರಚಿಸಲಾಗುತ್ತದೆ.

            ಮೊದಲನೇ ಸಾಲು - ಓಂ-ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ (ॐ - श्रीं- ह्रीं - क्लीं - ऐं - सौः)

            ಮೊದಲು ಶ್ರೀ ಬೀಜವನ್ನಿರಿಸಿ, ಆಮೇಲೆ ಮಾಯಾ ಬೀಜವನ್ನಿರಿಸಿ, ಆಮೇಲೆ ಕಾಮ ಬೀಜ, ಆಮೇಲೆ ವಾಗ್ಭವ ಬೀಜ ಮತ್ತು ಅಂತಿಮವಾಗಿ ಪರಾ ಬೀಜವನ್ನಿರಿಸಬೇಕು. ಈ ವಿಧವಾಗಿ ಮಂತ್ರದ ಮೊದಲನೇ ಸಾಲಿನ ರಚನೆಯಾಗುತ್ತದೆ.

            ಸಾಮಾನ್ಯವಾಗಿರುವ ಒಂದು ಅನುಮಾನವೆಂದರೆ ‘ಓಂ’ ಅನ್ನು ಪ್ರಾರಂಭದಲ್ಲಿ ಇರಿಸಬೇಕೋ ಬೇಡವೋ ಎಂಬುದು. ಯಾವುದೇ ಮಂತ್ರವು ॐ ‘ಓಂ’ನಿಂದ ಪ್ರಾರಂಭವಾಗಬೇಕು. ಕುಲಾರ್ಣವ ತಂತ್ರವು (೧೫.೫೭) ಯಾವುದೇ ಮಂತ್ರವನ್ನು ಓಂಕಾರವಿಲ್ಲದೇ ಆರಂಭಿಸಿದರೆ ಅದು ಜನ್ಮ ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತದೆ. ಅದಲ್ಲದೆ, ಛಾಂದೋಗ್ಯ ಉಪನಿಷತ್ತು ಹೀಗೆ ಆರಂಭಗೊಳ್ಳುತ್ತದೆ, "ಓಂ ಇತಿ ಏತತ್ ಅಕ್ಷರಂ ಉದ್ಗೀಥಂ ಉಪಾಸೀತ ॐ इति एतत् अक्षरम् उद्गीथम् उपासीत" ಅಂದರೆ ’ಓಂ ಎನ್ನುವುದು ಪರಬ್ರಹ್ಮಕ್ಕೆ ಬಹಳ ಹತ್ತಿರವಾದದ್ದು ಮತ್ತು ಈ ಅಕ್ಷರವನ್ನು ನಿನ್ನ ಪೂಜೆಯ (ಉಪಾಸನೆಯ) ಭಾಗವಾಗಿ ಉಚ್ಛರಿಸಬೇಕು’ ಎಂದು ಹೇಳುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ವೇದಗಳೂ ಸಹ ’ಓಂ’ನಿಂದ ಆರಂಭಗೊಳ್ಳುತ್ತವೆ. ಛಾಂದೋಗ್ಯ ಉಪನಿಷತ್ತಿನ ವ್ಯಾಖ್ಯೆಯಂತೆ ಓಂಕಾರವು ಬ್ರಹ್ಮಕ್ಕೆ ಅತ್ಯಂತ ಸಮೀಪವಾದುದ್ದಾಗಿದೆ. ಮಾಂಡೂಕ್ಯ ಉಪನಿಷತ್ತೂ ಸಹ ’ಓಂ’ಕಾರವು ಕಾರ್ಯ ಮತ್ತು ಕಾರಣವಾಗಿದೆ ಎಂದು ಹೇಳುತ್ತದೆ. ಆದ್ದರಿಂದ, ‘ಓಂ’ ಎನ್ನುವುದನ್ನು ಮಹಾಷೋಡಶೀ ಮಂತ್ರಕ್ಕೆ ಪೂರ್ವದಲ್ಲಿ ಜೋಡಿಸಬೇಕು; ಅದಿಲ್ಲದಿದ್ದರೆ ಮಂತ್ರವು ನಿಷ್ಪ್ರಯೋಜಕವಾಗುತ್ತದೆ. ಇನ್ನೂ ಹೆಚ್ಚಿನ ವಿವರಗಳನ್ನು ’ಸೌಃ’ ಬೀಜಾಕ್ಷರದ ವಿವರಣೆಯಲ್ಲಿ ನೋಡೋಣ.

          ಓಂನ ನಂತರ ಇರುವುದು ‘श्रीं’ ಶ್ರೀಂ ಬೀಜಾಕ್ಷರ, ಇದನ್ನು ಶ್ರೀ ಬೀಜ ಅಥವಾ ಲಕ್ಷ್ಮೀ ಬೀಜವೆಂದೂ ಹೇಳಲಾಗುತ್ತದೆ. ಇದು ಮಹಾಷೋಡಶೀ ಮಂತ್ರದ ಅತ್ಯಂತ ಪ್ರಮುಖವಾದ ಬೀಜಾಕ್ಷರವಾಗಿದೆ; ಏಕೆಂದರೆ ಇದನ್ನು ಸೇರಿಸುವುದರ ಮೂಲಕ ಹದಿನೈದು ಅಕ್ಷರಗಳುಳ್ಳ ಪಂಚದಶೀ ಮಂತ್ರವು ಷೋಡಶೀ ಮಂತ್ರವಾಗುತ್ತದೆ. ಶ್ರೀಂ ಬೀಜವು ಶುಭವನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಧನಾತ್ಮಕ ಚಿಂತನೆ ಮತ್ತು ಧನಾತ್ಮಕವಾದ ಬೆಳವಣಿಗೆಗಳು ಸಾಧಕನ ಮನಸ್ಸಿನಲ್ಲಿ ಉಂಟಾಗುವಂತೆ ಪ್ರೇರೇಪಿಸುತ್ತದೆ. ಈ ಬೀಜವು ನಂಬಿಕೆ (ವಿಶ್ವಾಸ), ಭಕ್ತಿ, ಪ್ರೇಮ ಮತ್ತು ಅಂತಿಮವಾಗಿ ದೇವಿಯಲ್ಲಿ ಶರಣಾಗತಿಗೆ ಮೂಲಕಾರಣವಾಗಿದೆ. ಮೊಟ್ಟಮೊದಲನೆಯದಾಗಿ ಒಬ್ಬರು ದೈವದಲ್ಲಿ ನಂಬಿಕೆಯನ್ನಿರಿಸಬೇಕು. ಈ ನಂಬಿಕೆಯೇ ಮುಂದೆ ಭಕ್ತಿಯಾಗಿ ಪರಿವರ್ತಿತವಾಗುತ್ತದೆ. ಯಾವಾಗ ಭಕ್ತಿಯು ದೃಢವಾಗಿರುತ್ತದೆಯೋ, ಆಗ ಅದು ದೇವಿಯ ಮೇಲಿನ ಪ್ರೇಮವಾಗಿ ಮಾರ್ಪಡುತ್ತದೆ. ಈ ಪ್ರೇಮವೊಂದೇ ಸಾಧಕನನ್ನು ದೇವಿಯಲ್ಲಿ ಶರಣಾಗತಿ ಹೊಂದುವಂತೆ ಮಾಡುತ್ತದೆ. ಶ್ರೀ ಬೀಜವು ದೇವಿಯಲ್ಲಿ ಶರಣಾಗತಿಯನ್ನು ಹೊಂದಲು ಕಾರಣವಾಗಿರುವುದರಿಂದ, ಅದು ಸಾಧಕನನ್ನು ಮುಕ್ತಿಯೆಡೆಗೆ ಕರೆದೊಯ್ಯುತ್ತದೆ. ಶ್ರೀಂ ಬೀಜಾಕ್ಷರವು ಮೂರು ಅಕ್ಷರಗಳನ್ನು ಒಳಗೊಂಡಿದೆ; ಶ+ರ+ಈ+ನಾದ+ಬಿಂದು (श + र + ई+ नाद+ बिन्दु). ಇಲ್ಲಿ ಶ ಅಕ್ಷರವು ಮಹಾಲಕ್ಷ್ಮೀ ದೇವಿಯನ್ನು (ಐಶ್ವರ್ಯದ ಅಧಿದೇವತೆ)  ಪ್ರತಿನಿಧಿಸಿದರೆ; ರ ಬೀಜವನ್ನು ಅಗ್ನಿ ಬೀಜವೆಂದೂ ಕರೆಯಲಾಗುತ್ತದೆ ಮತ್ತು ಇದು ನಮಗೆ ಅತಿಮಾನುಷ ಶಕ್ತಿಗಳನ್ನು ದಯಪಾಲಿಸುವ ಸಾಮರ್ಥ್ಯವನ್ನು ಹೊಂದಿದೆ. ನಾದ ಎನ್ನುವುದು ಪ್ರಪಂಚವಾಗಿ ಆವಿರ್ಭವಿಸಲಿರುವ ಪ್ರಜ್ಞೆಯಾಗಿದೆ. ನಾದ ಎಂದರೆ ಸೂಕ್ಷ್ಮ ಶಬ್ದ ಎನ್ನುವ ಅರ್ಥವನ್ನೂ ಹೊಂದಿದೆ. ಇದನ್ನು ‘ಮ್’ ಶಬ್ದದ ಮೂಲಕ ವಿವರಿಸಬಹುದಷ್ಟೇ, ಅದರ ಹೊರತು ಇದನ್ನು ವಿವರಿಸಲು ಬೇರೆ ಮಾರ್ಗವಿಲ್ಲ. ಇದು ಮೂಗಿನ ಮೂಲಕ ಗುನುಗುವ ಶಬ್ದದಂತಿರುತ್ತದೆ. ಎರಡೂ ತುಟಿಗಳನ್ನು ಮುಚ್ಚಿಕೊಂಡು ಉಂಟು ಮಾಡುವ ಶಬ್ದವೇ ನಾದ. ನಾದವಿಲ್ಲದೇ ಬಿಂದುವು ಪರಿಣಾಮಕಾರಿಯಾಗಿರುವುದಿಲ್ಲ ಏಕೆಂದರೆ ಬಿಂದುವನ್ನು ಪ್ರತ್ಯೇಕವಾಗಿ ಉಚ್ಛರಿಸಲಾಗದು. ನಾದಬಿಂದುವು ಶಿವ ಮತ್ತು ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ; ಇಲ್ಲಿ ನಾದವೆಂದರೆ ಶಕ್ತಿ ಮತ್ತು ಬಿಂದು ಎಂದರೆ ಶಿವನಾಗಿದೆ. ಈ ಬೀಜಾಕ್ಷರದ ಮೇಲಿರುವ ಬಿಂದುವು ಯಾತನೆ ಮತ್ತು ಋಣಾತ್ಮಕ ಶಕ್ತಿಗಳನ್ನು ಸಾಧಕನ ಮನಸ್ಸಿನಿಂದ ಹೊಡೆದೋಡಿಸುತ್ತದೆ. ಈ ಅಂಶವನ್ನಾಧರಿಸಿ ಷೋಡಶೀ ಮಂತ್ರವು ಮುಕ್ತಿ ಅಥವಾ ಮೋಕ್ಷವನ್ನು ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. "ಷೋಡಶೀ ಮಂತ್ರಂ ಕೇವಲಂ ಮೋಕ್ಷ ಸಾಧನಂ" ಎಂದೂ ಹೇಳಲಾಗುತ್ತದೆ, ಅಂದರೆ ಷೋಡಶೀ ಮಂತ್ರವು ಕೇವಲ ಮುಕ್ತಿಯೊಂದನ್ನೇ ಕರುಣಿಸುತ್ತದೆ; ಇದು ಎಲ್ಲರ ಅಂತಿಮ ಗುರಿಯಾಗಿದೆ. ಮುಕ್ತಿ ಎನ್ನುವುದು ದುರ್ಲಭವಾಗಿರುವುದರಿಂದ, ಷೋಡಶೀ ಮಂತ್ರವನ್ನು ಅತ್ಯಂತ ನಿಗೂಢವಾದದ್ದು ಎಂದು ಹೇಳಲಾಗುತ್ತದೆ.

           ಶ್ರೀಂ ಬೀಜಾಕ್ಷರದ ನಂತರ ಇರುವುದು ह्रीं ಹ್ರೀಂ ಬೀಜಾಕ್ಷರ; ಇದನ್ನು ಮಾಯಾ ಬೀಜವೆಂದು ಕರೆಯುತ್ತಾರೆ. ಇದೂ ಸಹ ಮೂರು ಅಕ್ಷರಗಳನ್ನು ಒಳಗೊಂಡಿದೆ; ಹ+ರ+ಈ+ನಾದ+ಬಿಂದು (ह+र+ई+नाद+बिंदु). ಹ ಅಕ್ಷರವು ಎರಡು ಮಹತ್ತರ ತತ್ವಗಳಾದ ಪ್ರಾಣ ಮತ್ತು ಆಕಾಶಗಳನ್ನು ಅಧಿಗಮಿಸುವ ಶಿವನ ದೈವೀ ಪ್ರಕಾಶವನ್ನು ಪ್ರತಿನಿಧಿಸುತ್ತದೆ. ಹ್ರೀಂ ಬೀಜದ ಎರಡನೇ ಭಾಗವು ‘ರ’ ಆಗಿದ್ದು ಇದನ್ನು ಅಗ್ನಿ ಬೀಜವೆಂದು ಕರೆಯಲಾಗುತ್ತದೆ. ’ಹ’ ಅಕ್ಷರದ ಗುಣಗಳಿಗೆ ಈಗ ರ ಅಕ್ಷರದ ಗುಣಗಳು ಸೇರುತ್ತವೆ. ರ ಅಕ್ಷರದ ಗುಣಗಳು ಅಗ್ನಿಯ ಗುಣಗಳು, ಅವೆಂದರೆ ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಅವಶ್ಯವಾಗಿರುವ ಅಗ್ನಿ (ಜಠರಾಗ್ನಿ, ಮೊದಲಾದವು), ಧರ್ಮ (ಅಗ್ನಿಯು ತನ್ನ ಧರ್ಮ ಗುಣಕ್ಕೆ ಹೆಸರಾಗಿದೆ) ಮತ್ತು ಸ್ವತಃ ಅಗ್ನಿಯೇ (ಬೆಂಕಿ).  ಯಾವಾಗ ಸೂರ್ಯನು ಅಸ್ತಮಿಸುತ್ತಾನೆಯೋ ಆಗ ಅವನು ತನ್ನ ಜ್ವಾಲೆಯನ್ನು ಅಗ್ನಿಗೆ ವರ್ಗಾಯಿಸುತ್ತಾನೆ ಮತ್ತು ಮರುದಿವಸ ಸೂರ್ಯೋದಯವಾದ ಮೇಲೆ ಅದನ್ನು ಹಿಂತಿರುಗಿ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅಗ್ನಿಯು ಸೂರ್ಯನಂತೆ ಸ್ಥಿತಿಕಾರಕನಾಗಿದೆ. ಶಿವನೂ ಸಹ ಪ್ರಕಾಶ ಅಂದರೆ ಮೂಲ ಸ್ವರೂಪದ ದೈವೀ ಬೆಳಕಾಗಿದ್ದಾನೆ. ಹ್ರೀಂ ಬೀಜಾಕ್ಷರದ ಮೂರನೆಯ ಭಾಗವು ‘ಈ’  ಆಗಿದೆ; ಇದು ಸಾಧಕನ ಶಕ್ತಿಯನ್ನು ಕೇಂದ್ರೀಕರಣಗೊಳಿಸಿ ಅವನು ಧರ್ಮಮಾರ್ಗವನ್ನು ಅನುಸರಿಸುವಂತೆ ಮಾಡುತ್ತದೆ. ನಾದವು ಜಗನ್ಮಾತೆಯನ್ನು (ಯಾರು ಶಿವನ ಬೆಳಕನ್ನು ವಿಶ್ವದಲ್ಲಿ ಪ್ರತಿಫಲಿಸಿತ್ತಾಳೋ ಅವಳು; ಈ ರೂಪವನ್ನು ವಿಮರ್ಶ ಎಂದು ಕರೆಯಲಾಗುತ್ತದ. ಅದು ಪ್ರತಿಫಲನ, ಬುದ್ಧಿ ಮೊದಲಾದುವುಗಳನ್ನು ಸೂಚಿಸುತ್ತದೆ) ಪ್ರತಿನಿಧಿಸಿದರೆ ಬಿಂದುವು ಯಾತನೆಗಳನ್ನು ಚದುರಿಸುತ್ತದೆ ಅಂದರೆ ವಾಸ್ತವವಾಗಿ ಅದು ದುಃಖಕ್ಕೆ ಕಾರಣವಾದ ಆಂತರ್ಯದಲ್ಲಿರುವ ಅಜ್ಞಾನವನ್ನು ಹೊಡೆದೋಡಿಸುತ್ತದೆ.

          ಹ್ರೀಂ ಅನ್ನು ಭುವನೇಶ್ವರೀ ಬೀಜವೆಂದೂ ಕರೆಯಲಾಗುತ್ತದೆ. ಭುವನ ಎಂದರೆ ಭೂಮಿ ಮತ್ತು ಈಶ್ವರೀ ಎಂದರೆ ಅದನ್ನು ಪಾಲಿಸುವವಳು. ದೇವಿಯು ಭೂಮಿಯನ್ನು ಪರಿಪಾಲಿಸುವುದರಿಂದ ಆಕೆಯನ್ನು ಭುವನೇಶ್ವರೀ ಎಂದು ಕರೆಯಲಾಗುತ್ತದೆ. ह ಹ ಎಂದರೆ ಶಿವ ಮತ್ತು र ರ ಎಂದರೆ ಪ್ರಕೃತಿ (ಪ್ರಕೃತಿ ಎಂದರೆ ಮೂಲ ವಸ್ತುವಾಗಿದೆ. ಲಲಿತಾ ಸಹಸ್ರನಾಮದ ೩೯೭ನೇ ನಾಮ ಮೂಲಪ್ರಕೃತಿಯನ್ನು ಇಲ್ಲಿ ವಿವರಿಸಲಾಗಿದೆ). ई ಈ ಎಂದರೆ ಮಹಾಮಾಯಾ ಅಥವಾ ಭ್ರಮೆಗೊಳಪಡಿಸುವ ದೈವೀ ಮಾಯೆ. ನಾದ ಎಂದರೆ ಶ್ರೀ ಮಾತಾ ಅಥವಾ ಜಗನ್ಮಾತೆ. ಬಿಂದುವು ದುಃಖಗಳನ್ನು ಚದುರಿಸುತ್ತದೆ ಎಂದು ಈ ಮೊದಲೇ ಹೇಳಲಾಗಿದೆ. ಆದ್ದರಿಂದ ಹ್ರೀಂ ಅನ್ನು ಹೀಗೆ ವಿವರಿಸಬಹುದು: ಶಿವ (ಹ) ಮತ್ತು ಶಕ್ತಿ (ರ) ಒಂದುಗೂಡಿ ಸೃಷ್ಟಿಯನ್ನು (ನಾದ) ಉಂಟುಮಾಡುತ್ತಾರೆ ಮತ್ತದರ ಮೂಲಕ ಒಬ್ಬ ವ್ಯಕ್ತಿಯು ಮಾಯೆಯ ಪ್ರಭಾವಕ್ಕೆ ಒಳಗಾಗುವಂತೆ ಮಾಡುತ್ತಾರೆ. ಈ ಮಾಯೆಯನ್ನು ಪರಿಹರಿಸಲು ಇಬ್ಬರೂ ಶಕ್ತರು; ಒಂದು ವೇಳೆ ಸಾಧಕನು ಅವರಿಬ್ಬರನ್ನೂ ಧ್ಯಾನಿಸಿದಲ್ಲಿ ಮಾಯೆಯೆಂಬ ಅಜ್ಞಾನದ ನಾಶವಾಗುವಿಕೆಯು ಬಿಂದುವಿನ ಮೂಲಕ ಉಂಟಾಗುತ್ತದೆ.

         ‘ಹ್ರೀಂ’ ಆದನಂತರ क्लीं ‘ಕ್ಲೀಂ’ ಬೀಜಾಕ್ಷರವು ಬರುತ್ತದೆ, ಇದನ್ನು ಕಾಮ ಬೀಜವೆಂದೂ ಸಹ ಹೇಳಲಾಗುತ್ತದೆ. ಕ್ಲೀಂ ಬೀಜವು ದೈವೀ ಶಕ್ತಿಯನ್ನು ಸಾಧಕನ ಸನಿಹಕ್ಕೆ ಸೆಳೆಯುತ್ತದೆ, ಅದು ಅಯಸ್ಕಾಂತದಂತೆ ದೈವೀ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ಈ ಬೀಜವನ್ನು ಆಕರ್ಷಣ ಶಕ್ತಿ ಎಂದು ಕರೆಯಲಾಗುತ್ತದೆ. ಕಾಮ ಎಂದರೆ ಇಲ್ಲಿ ಸಾಮಾನ್ಯ ಅರ್ಥದಲ್ಲಿ ಬಳಸುವ ಗಂಡು ಹೆಣ್ಣುಗಳ ನಡುವೆ ಇರುವ ಲೈಂಗಿಕ ತೃಷೆಯಲ್ಲ, ಆದರೆ ಅದು ಪರಮಾನಂದವನ್ನು  ಅಥವಾ ಮೋಕ್ಷವನ್ನು (ನಾಲ್ಕು ಪುರಷಾರ್ಥಗಳಲ್ಲಿ ಒಂದು. ನಾಲ್ಕು ಪುರಷಾರ್ಥಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವಾಗಿವೆ) ಹೊಂದಬೇಕೆಂಬ ವಾಂಛೆ ಅಥವಾ ಕಾಮನೆ. ಇದು ದೇವಿಯನ್ನು ಪಡೆಯಬೇಕೆಂಬ ಬಯಕೆಯನ್ನು ಪೂರ್ಣಗೊಳಿಸುತ್ತದೆ. ದೇವಿಯನ್ನು ಪಡೆಯುವುದು ಮತ್ತು ಪರಮಾನಂದವನ್ನು ಹೊಂದುವುದು ಜೊತೆಜೊತೆಯಾಗಿ ಸಾಗುತ್ತವೆ. ಅದು ಭಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಲೀಂ ಬೀಜವು ಮೂರು ಭಾಗಗಳನ್ನು ಹೊಂದಿದೆ - ಕ+ಲ+ಅಂ क+ल+अं. ’ಕ’ ಅಕ್ಷರವು ದೇವಿಯ ಕೃಪೆಯನ್ನು ಪಡೆಯಬೇಕೆಂಬ ಇಚ್ಛೆಯನ್ನು ಸೂಚಿಸಿದರೆ, ಲ ಅಕ್ಷರವು ಒಬ್ಬನ ಜೀವನದಲ್ಲಿನ ಸಂತೃಪ್ತಿಯನ್ನು ಸೂಚಿಸುತ್ತದೆ; ಮತ್ತು ಇದು ನಮ್ಮ ಬಯಕೆ ಹಾಗು ಮೋಹಗಳನ್ನು ಕಡಿಮೆಯಾಗಿಸುತ್ತದೆ ಮತ್ತು ಅಂ ಎನ್ನುವುದು ಸುಖ-ಸಂತೋಷಗಳನ್ನು ಕೊಡುತ್ತದೆ. ಕೆಲವೊಂದು ವ್ಯಾಖ್ಯಾನಗಳ ಪ್ರಕಾರ ಕ ಅಕ್ಷರವು ಭಗವಾನ್ ಕೃಷ್ಣನನ್ನು ಸೂಚಿಸುತ್ತದೆ. ‘ಕ’ ಬೀಜಾಕ್ಷರದ ಮೂಲಕ ಶಿವನು ತನ್ನ ಪ್ರೇಮವನ್ನು ದೇವಿಯ ಮೇಲೆ ತೋರಿಸುತ್ತಾನೆ.

          ಮೇಲಿನ ಮೂರು ಬೀಜಾಕ್ಷರಗಳಲ್ಲಿ ಕಾಮಕಲಾ ಬೀಜವಾದ ಈಂ (ईं) ರಹಸ್ಯವಾಗಿ ಹುದುಗಿದೆ. ಕಾಮಕಲಾ ಬೀಜವನ್ನು ಶ್ರೀ ಚಕ್ರದ ಬಿಂದುವಿನ (ಕೇಂದ್ರದಲ್ಲಿರುವ ಚುಕ್ಕೆಯ) ಸುತ್ತಲೂ ಇರುವ ಅತ್ಯಂತ ಒಳ ಚಕ್ರದ ಮೂಲಕ ವಿವರಿಸಬಹುದು. ಈ ಬಿಂದುವು ಎಲ್ಲಾ ವಿಧದಲ್ಲಿಯೂ ಏಕರೂಪವಾಗಿರುವ ಮಹಾಕಾಮೇಶ್ವರ-ಮಹಾಕಾಮೇಶ್ವರೀ ಇವರನ್ನು ಪ್ರತಿನಿಧಿಸುತ್ತದೆ. ಅವರೀರ್ವರೂ ಬಿಂದುವೆಂದು ಕರೆಯಲ್ಪಡುವ ಈ ಚುಕ್ಕೆಯ ಮೇಲೆ ಆಸೀನರಾಗಿರುತ್ತಾರೆ. ಇವರೀರ್ವರ ಸಮಾಗಮದಿಂದಾಗಿ ಬಿಂದುವಿನಿಂದ ಸೃಷ್ಟಿಯು ಉಂಟಾಗುತ್ತದೆ ಮತ್ತು ಅದು ಅತ್ಯಂತ ಒಳ ಚಕ್ರದ (ತ್ರಿಕೋಣದ) ಉಗಮಕ್ಕೆ ಕಾರಣವಾಗುತ್ತದೆ. ಈ ತ್ರಿಕೋಣದ ಮೂರು ಭುಜಗಳು ಪ್ರಕಾಶ (ಶಿವನ ಬೆಳಕು), ವಿಮರ್ಶ (ಶಿವನ ಬೆಳಕನ್ನು ಪಸರಿಸುವುದು, ಇದನ್ನು ಶಕ್ತಿಯು ಮಾಡುತ್ತಾಳೆ) ಮತ್ತು ಮೂರನೇ ಭುಜವು ’ನಾನು’ ಮತ್ತು ’ಇದು’ (ಅಹಂ ಮತ್ತು ಇದಂ) ಇವುಗಳನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ಕಾಮಕಲಾ ಬೀಜದಿಂದ, ಈ ಬೀಜಗಳು ಸೃಷ್ಟಿಯನ್ನು ಕೈಗೊಳ್ಳಬಲ್ಲ ಸಾಮರ್ಥ್ಯವನ್ನು ಪಡೆಯುತ್ತವೆ.

         ಕ್ಲೀಂ ಅಕ್ಷರದ ನಂತರ ऐं ಐಂ ಅಕ್ಷರವು ಬರುತ್ತದೆ, ಇದನ್ನು ವಾಗ್ಭವ ಬೀಜ ಎಂದು ಕರೆಯುತ್ತಾರೆ. ಇದು ಜ್ಞಾನದ ಅಧಿದೇವತೆಯಾದ ಸರಸ್ವತೀ ದೇವಿಯ ಬೀಜಾಕ್ಷರವಾಗಿದೆ. ಅದು ಎರಡು ಭಾಗಗಳನ್ನು ಒಳಗೊಂಡಿದೆ - ಐ+ಮ್. ಮ್ ಎನ್ನುವುದು ದುಃಖಗಳನ್ನು ಹೊಡದೋಡಿಸುವ ಸಾಧನವಾಗಿ ಕೆಲಸ ಮಾಡುತ್ತದೆ. ಈ ಬೀಜವು ಒಬ್ಬನ ಗುರುವನ್ನು ಪ್ರತಿನಿಧಿಸುತ್ತದೆ, ಏಕೆಂದರೆ ಗುರುವು ಅಜ್ಞಾನವನ್ನು ಹೊಡೆದೋಡಿಸುವವನಾಗಿದ್ದಾನೆ ಆದ್ದರಿಂದ ಈ ಬೀಜದಿಂದ ಒಬ್ಬನು ಅತ್ಯುನ್ನುವವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದುತ್ತಾನೆ. ಐಂ ಬೀಜಾಕ್ಷರವು ಸಾಧಕನಲ್ಲಿ ಉತ್ತೇಜನ, ಸಂಕಲ್ಪ ಶಕ್ತಿ ಮತ್ತು ನಿಷ್ಠೆಗಳನ್ನು ಹುಟ್ಟುಹಾಕುತ್ತದೆ. ಈ ಬೀಜವು ಆಧ್ಯಾತ್ಮಿಕ ಜಾಣತನಕ್ಕೆ (ಬುದ್ಧಿಗೆ) ಕಾರಣವಾಗಿದೆ. ಬುದ್ಧಿಯು ಪ್ರಮುಖವಾಗಿ ಪರಮೋನ್ನತ ಆಧ್ಯಾತ್ಮಿಕ ಜ್ಞಾನವನ್ನು ಸೂಚಿಸುತ್ತದೆ. ಅದು ನೇರವಾಗಿ ಸಾಧಕನ ಚೈತನ್ಯ ಅಥವಾ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸಿ, ಸಂಭಂದಿತ ದೈವದೆಡೆಗೆ ಕರೆದೊಯ್ಯುತ್ತದೆ.

         ಐಂ ಅಕ್ಷರದ ನಂತರ ಬರುವದೇ सौः ಸೌಃ; ಇದನ್ನು ಪರಾ ಬೀಜವೆಂದು ಕರೆಯಲಾಗುತ್ತದೆ. ಇದನ್ನು ಹೃದಯ ಬೀಜ ಅಥವಾ ಅಮೃತಬೀಜವೆಂದು ಕರೆಯುತ್ತಾರೆ. ಶಿವನು ಇದನ್ನು ಶಕ್ತಿಗೆ ವಿವರಿಸಿದ್ದನ್ನು, ಪರಾ-ತ್ರಿಶಿಕಾ-ವಿವರಣ (ಶ್ಲೋಕ ೯ ಮತ್ತು ೧೦) ಎನ್ನುವ ತ್ರೈತ ಸಿದ್ಧಾಂತದ ಗ್ರಂಥವು ಹೇಳುತ್ತದೆ. ಶಿವನು ಶಕ್ತಿಗೆ ಹೀಗೆ ಹೇಳುತ್ತಾನೆ, "ಓಹ್ಞ್, ಮನೋಹರಳೇ! ಇದು ಮೂರನೇ ಬ್ರಹ್ಮವು (ಸತ್ ಅಥವಾ ಸ स ಅಕ್ಷರವು) ಹದಿನಾಲ್ಕನೇ ಸ್ವರದೊಂದಿಗೆ (ಹದಿನಾರು ಸ್ವರಗಳಲ್ಲಿ ಔ ಹದಿನಾಲ್ಕನೆಯದು);  ಸಂಯುಕ್ತಗೊಂಡು ಅದು ಸ್ವರಗಳ ಒಡೆಯನೊಂದಿಗೆ (ವಿಸರ್ಗ - ಃ ಒಂದರ ಮೇಲೆ ಒಂದಿರುವ ಚುಕ್ಕೆಗಳು; ಇದು ಹದಿನಾರನೇ ಸ್ವರವಾದ अः ಅಃದಲ್ಲಿ ಉಪಯೋಗಿಸಲ್ಪಡುತ್ತದೆ) ಚೆನ್ನಾಗಿ ಜೋಡಿಸಲ್ಪಟ್ಟಿದೆ. ಆದ್ದರಿಂದ ಸೌಃ ಎನ್ನುವುದು ಸ+ಔ+ಃ = ಸೌಃ ಆಗಿದೆ. ”ಪರಾ-ತ್ರಿಶಿಕಾ-ವಿವರಣ’ದಲ್ಲಿ (ಶ್ಲೋಕ ೨೬) ಪುನಃ ಹೀಗೆ ಹೇಳಲಾಗಿದೆ, "ಯಾರು ಈ ಮಂತ್ರವನ್ನು ಅದರ ಸಾರದೊಂದಿಗೆ ತಿಳಿಯುತ್ತಾನೆಯೋ ಅವನು ಮುಕ್ತಿಕಾರಕವಾದ ದೀಕ್ಷೆಯನ್ನು ಪಡೆಯಲು ಯೋಗ್ಯನಾಗುತ್ತಾನೆ; ಅವನು ಯಾವುದೇ ವಿಧವಾದ ಹೋಮ-ಹವನಗಳನ್ನು ಮಾಡಬೇಕಾಗಿಲ್ಲ". ಈ ಮಂತ್ರದ ಉಪದೇಶವನ್ನು ನಿರ್ವಾಣ ದೀಕ್ಷಾ ಅಥವಾ ಅಂತಿಮ ಮುಕ್ತಿಯ ದೀಕ್ಷೆ ಎಂದು ಕರೆಯಲಾಗುತ್ತದೆ ಮತ್ತು ನಿರ್ವಾಣವೆಂದರೆ ಸಂಪೂರ್ಣ ಬಿಡುಗಡೆ. ಈ ಕೃತಿಯು ಮುಂದುವರೆಯುತ್ತಾ ಯಾರು ಈ ಬೀಜಾಕ್ಷರದ ಸರಿಯಾದ ಅರ್ಥವನ್ನು ಭೇದಿಸುತ್ತಾರೆಯೋ ಅವರನ್ನು ಸ್ವಯಂ ಶಿವನೆಂದೇ ಕರೆಯಲಾಗುತ್ತದೆ, ಎಂದು ಹೇಳುತ್ತದೆ. ಈ ಬೀಜವು ಈಶ್ವರನ ಬ್ರಹ್ಮಾಂಡ ಸ್ಪಂದನವಾಗಿದೆ.

         ಇಲ್ಲಿ ಉಲ್ಲೇಖಿಸಲಾಗಿರುವ ಮೂರನೇ ಬ್ರಹ್ಮವಾದ ’ಸತ್’ ಅನ್ನು ಭಗವಗದ್ಗೀತೆಯಲ್ಲಿ (೧೭.೨೩-೨೬) ವಿವರಿಸಲಾಗಿದೆ, "ಓಂ, ತತ್ ಮತ್ತು ಸತ್ ಇವುಗಳು ಮುಮ್ಮಡಿಯಾಗಿರುವ (ಮೂರು ತೆರನಾಗಿರುವ) ಬ್ರಹ್ಮದ ಪ್ರತೀಕಗಳಾಗಿದ್ದು ಅದರಿಂದಲೇ ವೇದಗಳು, ಪಂಡಿತರು ಮತ್ತು ಯಜ್ಞ-ಯಾಗಾದಿ ಪದ್ಧತಿಗಳ ಉಗಮವಾಗಿದೆ. ಆದ್ದರಿಂದ ಶಾಸ್ತ್ರ ಸಮ್ಮತವಾದ ಯಜ್ಞ ಕ್ರಿಯೆಗಳು, ದಾನಗಳು, ಜಪತಪಾದಿಗಳನ್ನು ಕೈಗೊಳ್ಳುವಾಗ ಮತ್ತು ವೇದ ಪಠಣಗಳನ್ನು ಪ್ರಾರಂಭಿಸುವುದಕ್ಕೆ ಮುಂಚೆ ಓಂ ಅನ್ನು ಉಚ್ಛರಿಸಲಾಗುತ್ತದೆ. ತತ್ ಎನ್ನುವುದನ್ನು ಯಜ್ಞ-ಯಾಗ, ಜಪತಪಾದಿ ದಾನಗಳ ಫಲದಿಂದ ಯಾರು ಮೋಕ್ಷವನ್ನು ಪಡೆಯಲು ಬಯಸುತ್ತಾರೆಯೋ ಅವರು ಉಚ್ಛರಿಸುತ್ತಾರೆ. ಸತ್ ಎನ್ನುವುದನ್ನು ಯಾರು ಮೇಲಿನ ಕಾರ್ಯಗಳನ್ನು ಕೇವಲ ಬ್ರಹ್ಮದ ಮೇಲಿನ ನಂಬಿಕೆ ಮತ್ತು ಅವನ ಪರವಾಗಿ ಇವುಗಳನ್ನು ಕೈಗೊಳ್ಳುತ್ತಾರೆಯೋ ಅವರು ಉಚ್ಛರಿಸುತ್ತಾರೆ.

         ಆದ್ದರಿಂದ ಸೌಃ ಬೀಜಾಕ್ಷದರಲ್ಲಿರುವ ಸ ಅಥವಾ ಸತ್ ಸ್ವಯಂ ಶಿವನಾಗಿದ್ದು ಅದು ಅವನ ಸೃಷ್ಟಿ ಕ್ರಿಯೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಶುದ್ಧ ಚೈತನ್ಯವಾಗಿದೆ. ಇದರ ನಂತರ ಶಿವನ ಮೂರು ಶಕ್ತಿಗಳಾದ ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳು ಬರುತ್ತವೆ. ಸೃಷ್ಟಿಯ ಸಮಯದಲ್ಲಿ ಶಿವನ ಚಿತ್ ಶಕ್ತಿಯು ಆನಂದ ಶಕ್ತಿಯಾಗಿ (ಪರಮಾನಂದವಾಗಿ) ವಿಕಸನಗೊಂಡ ನಂತರ ಮಾಯಾಂಡವನ್ನು ಪ್ರವೇಶಿಸುವ ಮೊದಲು ಮೇಲೆ ಉಲ್ಲೇಖಿಸಿರುವ ಮೂರು ಶಕ್ತಿಗಳಾಗಿ ಮಾರ್ಪಡುತ್ತದೆ. ಆನಂದ ಶಕ್ತಿಯನ್ನು ಸಾಮಾನ್ಯವಾಗಿ ಶಕ್ತಿ ಅಂದರೆ ಶಿವನ ಸಂಗಾತಿ ಅಥವಾ ಅವನ ಸ್ವಾತಂತ್ರ್ಯ ಶಕ್ತಿ ಎಂದು ಕರೆಯಲಾಗುತ್ತದೆ; ಇದು ಅವನ ಅದ್ವಿತೀಯವಾದ ಸ್ವೇಚ್ಛಾ ಅಥವಾ ಸ್ವತಂತ್ರ ಶಕ್ತಿಯಾಗಿದೆ. ಮೇಲೆ ತಿಳಿಸಿದ ತ್ರಿವಿಧ ಶಕ್ತಿಗಳನ್ನು ವಿಷಯ (ಅಹಂ ಅಥವಾ ನಾನು); ವಸ್ತು (ಇದಂ ಅಥವಾ ಇದು) ಮತ್ತು ‘ವಿಷಯ-ವಸ್ತು’ ಅಥವಾ ‘ಅಹಮಿದಂ’ ಎಂದು ವಿವರಿಸಬಹುದು. ಶಿವನ ಈ ಶಕ್ತಿಗಳನ್ನು ಅನುಕ್ರಮವಾಗಿ ಸದಾಶಿವ, ಈಶ್ವರ ಮತ್ತು ಶುದ್ಧ ವಿದ್ಯಾ ಎಂದೂ ಕರೆಯಲಾಗುತ್ತದೆ. ಈಗ ಸ ಮತ್ತು ಔಗಳ ನಡುವೆ ಸಮ್ಮಿಲನವು ಉಂಟಾಗಿ ಸೌ ಉಂಟಾಗುತ್ತದೆ. ಈ ಸಮ್ಮಿಲನದ ಫಲವಾಗಿ ಸೃಷ್ಟಿಯು ಉಂಟಾಗುತ್ತದೆ ಮತ್ತು ಸೃಷ್ಟಿಯನ್ನು ವಿಸರ್ಗದ (ಃ) ಮೂಲಕ ಪ್ರತಿನಿಧಸಲಾಗುತ್ತದೆ. ಇದು ಸೃಷ್ಟಿಗೆ ಅವಶ್ಯವಿರುವ ದೈವೀ ಸ್ಪಂದನ ಅಥವಾ ಮಿಡಿತ ಅಥವಾ ಕಂಪನವಾಗಿದ್ದು ಇದು ಔನಲ್ಲಿರುವ ತ್ರಿವಿಧವಾದ ಶಕ್ತಿಗಳನ್ನು ಅನಾವರಣಗೊಳಿಸುತ್ತದೆ. ಸೌಗೆ ವಿಸರ್ಗವನ್ನು ಸೇರಿಸುವುದರ ಮೂಲಕ ಅದು ಸೌಃ ಆಗಿ ಮಾರ್ಪಟ್ಟು ಪರಾಬೀಜವೆನಿಸಿಕೊಳ್ಳುತ್ತದೆ. ಈ ಪರಾಬೀಜವು ಕೇವಲ ಪಠಣೆ ಅಥವಾ ಜಪಿಸುವುದಕ್ಕಾಗಲ್ಲದೇ ಅದು ಶಿವನನ್ನು ಧ್ಯಾನಿಸುವುದಕ್ಕಾಗಿ ಇರಿಸಲ್ಪಟ್ಟಿದೆ; ಏಕೆಂದರೆ ಶಿವನು ಮಾತ್ರ ಮಾಯೆಯಿಂದ ಉಂಟಾದ ಎಲ್ಲಾ ವಿಧವಾದ ವೈವಿಧ್ಯತೆಗಳನ್ನು (ನಾಮರೂಪ ಭೇದಗಳನ್ನು) ಹೋಗಲಾಡಿಸಿ ಮುಕ್ತಿಯನ್ನು ಕರುಣಿಸಬಲ್ಲ. ಯಾರು ಸಂಪೂರ್ಣವಾಗಿ सौः ಸೌಃ ಬೀಜಾಕ್ಷರದ ಮಹಿಮೆಯನ್ನು ಅರಿಯುತ್ತಾರೆಯೋ ಅವರು ಆ ಕ್ಷಣವೇ ಮುಕ್ತಿಯನ್ನು ಪಡೆಯುತ್ತಾರೆ.

         ಹೀಗೆ ಈ ಐದು ಬೀಜಾಕ್ಷರಗಳು ಮಹಾಷೋಡಶೀ ಮಂತ್ರದ ಮೊದಲನೇ ಸಾಲನ್ನು ರೂಪಿಸುತ್ತವೆ.

         ಮಹಾಷೋಡಶೀ ಮಂತ್ರದ ಸಾಲು ಹೀಗೆ ರಚಿಸಲ್ಪಟ್ಟಿದೆ; ಮೊದಲನೇ ಸಾಲಿನ ಐದು ಬೀಜಾಕ್ಷರಗಳ ನಂತರ; ಎರಡನೇ ಸಾಲಿನಲ್ಲಿ ಪ್ರಣವ, ಮಾಯಾ ಬೀಜ ಮತ್ತು ಶ್ರೀ ಬೀಜಗಳನ್ನಿರಿಸಿದ ನಂತರ ಅದು ಹೀಗೆ ಕಾಣುತ್ತದೆ

        ॐ – ह्रीं – श्रीं ಓಂ – ಹ್ರೀಂ – ಶ್ರೀಂ.

        ಷೋಡಶೀ ಮಂತ್ರದ ಮೊದಲನೇ ಸಾಲಿನ ಆರಂಭದಲ್ಲಿರಿಸಲಾಗಿರುವ ॐ ಓಂ ಅಕ್ಷರವು ಪರಮಾತ್ಮ ಅಥವಾ ಪರಬ್ರಹ್ಮವನ್ನು ಸೂಚಿಸುತ್ತದೆ. ಎರಡನೇ ಸಾಲಿನಲ್ಲಿರಿಸಿರುವ ॐ ಓಂ ಅಕ್ಷರವು ವ್ಯಕ್ತಿಗತ ಆತ್ಮವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ॐ ಅನ್ನು ಗುರುವು ದೀಕ್ಷಾ ಕಾಲದಲ್ಲಿ ಕೊಡಮಾಡುವ ಅಥವಾ ಅದಕ್ಕೂ ಮುಂಚೆ ಕೊಡುವ ಆತ್ಮಬೀಜದೊಂದಿಗೆ ಸ್ಥಳಾಂತರಿಸಬೇಕು. ಪ್ರತಿಯೊಬ್ಬರಿಗೂ ಒಂದೊಂದು ಆತ್ಮಬೀಜವಿರುತ್ತದೆ ಅದನ್ನು ಹಲವಾರು ಅಂಶಗಳನ್ನು ಪರಿಗಣಿಸಿ ನಿಷ್ಟತ್ತಿಗೊಳಿಸಲಾಗುತ್ತದೆ. ಆತ್ಮಬೀಜದ ಕುರಿತಾಗಿ ಇಲ್ಲಿ ಚರ್ಚಿಸಲಾಗುತ್ತಿದೆ. ಒಂದು ವೇಳೆ ಗುರುವು ಸಾಧಕನಿಗೆ ಯಾವುದೇ ಆತ್ಮ ಬೀಜವನ್ನು ಕೊಡದೇ ಇದ್ದ ಪಕ್ಷದಲ್ಲಿ ಅವನು ॐ ಬೀಜಾಕ್ಷರವನ್ನೇ ಆತ್ಮಬೀಜವೆಂದು ಪರಿಗಣಿಸಿ ಸಾಧನೆಯನ್ನು ಮುಂದುವರೆಸಬಹುದು. ಈ ಸಾಲಿನಲ್ಲಿ ಉಪಯೋಗಿಸಿರುವ ಮೂರು ಬೀಜಾಕ್ಷರಗಳು ಮೂರು ಹಂತಗಳನ್ನು ಪ್ರತಿನಿಧಿಸುತ್ತವೆ. ॐ ಬೀಜವು ವ್ಯಕ್ತಿಗತ ಆತ್ಮದ ಅಪರಾ ಹಂತವನ್ನು ಸೂಚಿಸುತ್ತದೆ. ह्रीं ಹ್ರೀಂ ಬೀಜವು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುವ ಪರಾಪರ ಬೀಜವಾಗಿದೆ ಅಥವಾ ಕಾರ್ಯ-ಕಾರಣ ಬೀಜವಾಗಿದೆ. ಕಡೆಯದಾದ श्रीं ಶ್ರೀಂ ಬೀಜವು ಪರಾ ಅಥವಾ ಪರಮಶಕ್ತಿ ಅಥವಾ ಅತ್ಯುನ್ನತನಾದ ಪರಮಶಿವನ ಹಂತವನ್ನು ಸೂಚಿಸುತ್ತದೆ; ಇಲ್ಲಿ ಶಕ್ತಿಯು ಶಿವನೊಂದಿಗೆ ಐಕ್ಯವಾಗಿದ್ದು ಅವರಿಬ್ಬರ ಪ್ರತ್ಯೇಕ ಅಸ್ತಿತ್ವವನ್ನು ಅದರಲ್ಲಿ ಗುರುತಿಸಲಾಗದು. ಮುಕ್ತಿಯನ್ನು ಹೊಂದಲು ಒಬ್ಬನು ಪರಮಶಿವನಲ್ಲಿ ಸಾಯುಜ್ಯ ಹೊಂದಬೇಕು (ಐಕ್ಯವಾಗಬೇಕು). ಇದನ್ನೇ ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ, ವ್ಯಕ್ತಿಗತ ಆತ್ಮವು (ॐ), ಹ್ರೀಂ ಅಕ್ಷರವು ಪ್ರತಿನಿಧಿಸುವ ಮತ್ತು ಶಿವ ಹಾಗು ಶಕ್ತಿಯರ ಶಕ್ತಿಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವ ಮಾಯೆಯನ್ನು ಅಧಿಗಮಿಸಬೇಕು. ಸಾಧಕನು ನಿರಂತರವಾದ ಅಭ್ಯಾಸದಿಂದ ह्रीं ಹ್ರೀಂ ಬೀಜವು ಪ್ರತಿನಿಧಿಸುವ ಮಾಯೆಯನ್ನು ಅಧಿಗಮಿಸಿ ಅವನು ಮೂರನೇ ಬೀಜವಾದ श्रीं ಶ್ರೀಂ ಪ್ರತಿನಿಧಿಸುವ ಪರಮಾತ್ಮದಲ್ಲಿ ಒಂದಾಗಬೇಕು. ಮಹಾಷೋಡಶೀ ಮಂತ್ರದ ಎರಡನೇ ಸಾಲಿನಲ್ಲಿ ಮಾತ್ರವೇ ಮುಕ್ತಿಯ ಕುರಿತು ಸ್ಪಷ್ಟವಾಗಿ ಘೋಷಿಸಲಾಗಿದೆ.   

         ಮೂರು, ನಾಲ್ಕು ಮತ್ತು ಐದನೆಯ ಸಾಲುಗಳು ಹದಿನೈದು ಬೀಜಾಕ್ಷರಗಳುಳ್ಳ ಪಂಚದಶೀ ಮಂತ್ರವಾಗಿದ್ದು, ಅದನ್ನೇ ಕೆಳಗೆ ವಿವರಿಸಲಾಗಿದೆ. ಕಡೆಯದಾದ ಆರನೇ ಸಾಲಿನಲ್ಲಿ ಮೊದಲನೇ ಸಾಲಿನ ಬೀಜಾಕ್ಷರಗಳನ್ನು ವಿಲೋಮ ಕ್ರಮವಾಗಿ ಇರಿಸಲಾಗಿದೆ. ಇದನ್ನೇ ಸಂಪುಟೀಕರಣವೆನ್ನುತ್ತಾರೆ. ಇದರ ಉದ್ದೇಶವೇನೆಂದರೆ ಎರಡನೇ ಸಾಲಿನಲ್ಲಿರುವ ಮೂರು ಬೀಜಾಕ್ಷರಗಳು ಮತ್ತು ಮೂರು, ನಾಲ್ಕು ಹಾಗು ಐದನೇ ಸಾಲಿನಲ್ಲಿರುವ ಪಂಚದಶೀ ಮಂತ್ರವು ಕವಚೀಕರಣಗೊಳಿಸಲ್ಪಟ್ಟಿರುವುದರಿಂದ ಪಂಚದಶೀ ಮಂತ್ರದ ಹಾಗು ಎರಡನೇ ಸಾಲಿನ ಬೀಜಾಕ್ಷರಗಳ ಶಕ್ತಿಯು ಸಾಧಕನಿಂದ ಸೋರಿಹೋಗದೇ ಅದು ಅವನೊಳಗೇ ಭದ್ರವಾಗಿರಸಲ್ಪಡುತ್ತದೆ.

ಅಂತಿಮವಾಗಿ ಮಹಾಷೋಡಶೀ ಮಂತ್ರವು ಹೀಗೆ ರಚಿಸಲ್ಪಡುತ್ತದೆ.

೧) ಓಂ-ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ  ॐ श्रीं ह्रीं क्लीं ऐं सौः (೫ ಬೀಜಗಳು, ॐ ಓಂಅನ್ನು ಹೊರತುಪಡಿಸಿ)

೨) ಓಂ-ಹ್ರೀಂ-ಶ್ರೀಂ ॐ ह्रीं श्रीं (೩ ಬೀಜಗಳು)

೩) ಕ-ಏ-ಈ-ಲ-ಹ್ರೀಂ क ए ई ल ह्रीं (೫ ಬೀಜಗಳು)

೪) ಹ-ಸ-ಕ-ಹ-ಲ-ಹ್ರೀಂ ह स क ह ल ह्रीं (೬ ಬೀಜಗಳು)

೫) ಸ-ಕ-ಲ-ಹ್ರೀಂ स क ल ह्रीं (೪ ಬೀಜಗಳು)

೬) ಸೌಃ-ಐಂ-ಕ್ಲೀಂ-ಹ್ರೀಂ-ಶ್ರೀಂ सौः ऐं क्लीं ह्रीं श्रीं (೫ ಬೀಜಗಳು)

           ಹೀಗೆ ಮಹಾಷೋಡಶೀ ಮಂತ್ರವು ಮೊದಲನೇ ಪ್ರಣವವನ್ನು (ಓಂ) ಹೊರತುಪಡಿಸಿ ೨೮ ಬೀಜಾಕ್ಷರಗಳನ್ನು ಹೊಂದಿದೆ.

                                                                          ******

ಹೆಚ್ಚಿನ ವಿವರಗಳಿಗೆ ಕೆಳಗಿನ ಲೇಖನಗಳನ್ನು ನೋಡಿ

ಲಲಿತಾ ಸಹಸ್ರನಾಮ ೫೮೭(ಇದನ್ನು ಮುಂದೆ ಸೇರಿಸಲಾಗುತ್ತದೆ)

 

ಹಾಷೋಡಶೀ ಮಂತ್ರ http://sampada.net/blog/%E0%B3%A7%E0%B3%AE-%E0%B2%B2%E0%B2%B2%E0%B2%BF%E...

 

ಹಾಷೋಡಶೀ ಮಂತ್ರ ಜಪ http://www.manblunder.com/2012/08/maha-shodashi-mantra-japa.html

                                                                                                         *******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ MAHA SHODASHI MANTRA EXPLAINED http://www.manblunder.com/2013/02/maha-shodashi-mantra-explained.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

         ಜಗನ್ಮಾತೆಯ ಚಿತ್ರಕೃಪೆ: Google

 

Rating
No votes yet

Comments

Submitted by makara Sun, 10/13/2013 - 22:59

ಆತ್ಮೀಯ ಸಂಪದಿಗರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಲಲಿತಾಂಬಿಕೆಯ ಪೂಜೆಗೆ ದಸರಾ ಸಮಯದ ನವಮಿಯು ಅತ್ಯಂತ ಶ್ರೇಷ್ಠವಾದುದೆಂದು ಪರಿಗಣಿತವಾಗಿದೆ; ಆದ್ದರಿಂದ ಇಂದು ಮಹಾಷೋಡಶೀ ಮಂತ್ರ ದೀಕ್ಷೆಯನ್ನು ಪಡೆಯಲು ಅತ್ಯಂತ ಪ್ರಶಸ್ತ ಸಮಯವಾಗಿದೆ. ಈ ಹಿನ್ನಲೆಯಲ್ಲಿ ಒಮ್ಮೆ ಮಹಾಷೋಡಶೀ ಮಂತ್ರದ ಕುರಿತು ಒಮ್ಮೆ ಪುನರಾವಲೋಕನ ಮಾಡೋಣವೆಂದು ಇದಕ್ಕೆ ಸಂಭಂದಿಸಿದ ಒಂದು ಬರಹವನ್ನು ಇಲ್ಲಿ ಸೇರಿಸಿದ್ದೇನೆ. ಜಗನ್ಮಾತೆಯು ಸಕಲರಿಗೂ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

"ರಾಜ್ಯಂ ದೇಯಂ ಶಿರೋ ದೇಯಂ ನ ದೇಯಂ ಶ್ರೀಷೋಡಶಾಕ್ಷರಿ" ರಾಜ್ಯವನ್ನೇ ಕೊಡಿ, ತಲೆಯನ್ನೇ ಕೊಡಿ, ಆದರೆ ಶ್ರೀ ಷೋಡಶಾಕ್ಷರಿ ಕೊಡಬಾರದು ಎಂದಿದ್ದರೂ ನಮ್ಮ "ಶ್ರೀಧರ್‌ಜಿ" ನಮ್ಮೆಲ್ಲರ ಒಳಿತಿಗಾಗಿ, ಒಳ್ಳೆಯ ದಿನದಂದೇ ಮಂತ್ರದ ಉಪದೇಶ ಮಾಡಿರುವರು. ಜಪ ಮಾಡುವ ಕ್ರಮ ಅವರು ಕೊಟ್ಟ ಕೊಂಡಿಯಲ್ಲಿದೆ.

ನಿಮ್ಮ ಮಾತು ನಿಜ ಗಣೇಶ್‌ಜಿ. ಮೇಲಿನ ಶ್ಲೋಕವನ್ನು ಅಪಾತ್ರರಿಗೆ ಮಂತ್ರೋಪದೇಶ ಮಾಡುವ ಸಂದರ್ಭದಲ್ಲಿ ಹೇಳಿರಬಹುದೆನಿಸುತ್ತದೆ. ಈ ಲೇಖನ ಮಾಲಿಕೆಯನ್ನು ನಿಯಮಿತವಾಗಿ ಓದುತ್ತಿರುವವರು ಖಂಡಿತವಾಗಿ ಅರ್ಹರೇ ಆಗಿರುತ್ತಾರೆ ಆದ್ದರಿಂದ ಅವರೊಂದಿಗೆ ಇದನ್ನು ಹಂಚಿಕೊಂಡದ್ದು ಸೂಕ್ತವಾಗಿಯೇ ಇದೆ ಎಂದುಕೊಳ್ಳುತ್ತೇನೆ.
ವಾಸ್ತವವಾಗಿ ಈ ಮಂತ್ರವನ್ನು ಸಾರ್ವಜನಿಕವಾಗಿ ಹಂಚಿಕೊಂಡ ಘನತೆಯು ಈ ಬರಹದ ಮೂಲ ಲೇಖಕರಾದ ಶ್ರೀಯುತ ವಿ. ರವಿಯವರಿಗೇ ಸಲ್ಲಬೇಕು. ನಾನು ಕೇವಲ ಅನುವಾದಕನಷ್ಟೇ. ನಿಮ್ಮ ಉತ್ತೇಜನಾಪೂರ್ವಕ ಮಾತುಗಳಿಗೆ ಧನ್ಯವಾದಗಳು ಗಣೇಶರೆ.
ಕೊನೆ ಹನಿ: ಇಂದು ನಮಗೆ ರಾಜ್ಯವೂ ಇಲ್ಲ ಮತ್ತು ತಲೆ ಇರುವುದೂ ಅನುಮಾನವೇ ಹಾಗಾಗಿ ಇದನ್ನು ಪ್ರಕಟಿಸುವ ಧೈರ್ಯ ಮಾಡಿದೆ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Wed, 10/16/2013 - 21:19

ಶ್ರೀಧರರೆ, ಮಹಾಷೋಡಶೀ ಮಂತ್ರದ "೧೩೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಸಾರವನ್ನು ಕಾವ್ಯ ರೂಪದಲಿ ಹಿಡಿದಿಡಲು ಯತ್ನಿಸಿದ ಫಲಿತ ಈ ಕೆಳಗಿದೆ - ತಮ್ಮ ಪರಿಷ್ಕರಣೆಗೆ :-)
.
ಮಹಾಷೋಡಶೀ ಮಂತ್ರದ ವಿವರಣೆ
______________________________________
.
.
ಮಹಾಷೋಡಶಿ ಮೊದಲ ಸಾಲು ಓಂ-ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ
ಶ್ರೀ-ಮಾಯಾ-ಕಾಮ-ವಾಗ್ಬವ-ಪರಾ ಬೀಜಾನುಕ್ರಮ ಸಾಲಾಗಿಹ
ಮಹಾಷೋಡಶಿ ಮಂತ್ರಕೆ ಪೂರ್ವದೆ 'ಓಂ' ಜೋಡಿಸಿರೆ ಸಮರ್ಪಕ
ಓಂಕಾರವಿರದ ಮಂತ್ರದೆ ಜನ್ಮದೋಷ, ತಾನಾಗಿ ನಿಷ್ಪ್ರಯೋಜಕ ||
.
'ಶ್ರೀಂ' ಪ್ರಮುಖ ಬೀಜಾಕ್ಷರ, ಪಂಚದಶೀ ಜತೆ ಸೇರೆ ಷೋಡಶಿ ಮಂತ್ರ
ಶುಭಪ್ರದಾಯಕವಿ ಶ್ರೀ ಬೀಜ, ದೈವನಂಬಿಕೆ ಭಕ್ತಿಯಾಗಿ ಪ್ರೇಮಸಾರ
ಪ್ರೇಮದ ಶರಣಾಗತಿ ಕೊಂಡೊಯ್ಯುತ ಸಾಧಕ ಅಂತಿಮ ಮುಕ್ತಿಗ್ಹತ್ತಿರ
ಲಕ್ಷ್ಮೀ ಬೀಜವೆ ಕಾರಣ ಹೊಂದೆ ಶರಣಾಗತಿ, ದೇವಿ ಕರುಣೆಯಪಾರ ||
.
'ಶ್ರೀಂ' ಬೀಜಾಕ್ಷರ ಮೂರಕ್ಷರ ಶ-ರ-ಈ-ನಾದ-ಬಿಂದು ಸಂಕಲನ
ಮಹಾಲಕ್ಷ್ಮಿ ಪ್ರತೀಕ 'ಶ', ಅತಿಮಾನುಷಶಕ್ತಿ 'ರ' ಅಗ್ನಿಬೀಜಸ್ಥಾನ
ಪ್ರಪಂಚದವಿರ್ಭಾವ ಪ್ರಜ್ಞೆ ನಾದ, ಬಿಂದುವನಾಗಿಸಿ ಐಕ್ಯ ಶಕ್ತಿಶಿವ
ಋಣಾತ್ಮಕ ಯಾತನೆ ಮೆಟ್ಟಿ, ಮೋಕ್ಷದೆಡೆಗಟ್ಟೊ ಷೋಡಶೀ ಭಾವ ||
.
ಮಾಯಾಬೀಜಾಕ್ಷರ 'ಹ್ರೀಂ' ಮೂರಕ್ಷರ ಹ-ರ-ಹಿ-ನಾದ-ಬಿಂದು ಸಾರ
ಪ್ರಾಣ-ಆಕಾಶತತ್ವವಧಿಗಮಿಸಿದ ಶಿವದೈವೀ ಪ್ರಕಾಶವಾಗಿ 'ಹ' ಅಕ್ಷರ
ತನು ಸುಸ್ಥಿತಿ ಜಠರಾಗ್ನಿ, ಧರ್ಮ ಗುಣ, ಸ್ವತಃ ಅಗ್ನಿಯ ಸಂಕೇತವೆ 'ರ'
ಸಾಧಕ ಋಜುಮಾರ್ಗಶಕ್ತಿ 'ಈ', ಅಜ್ಞಾನವನಟ್ಟಿ ನಾದಬಿಂದು ಸುಸೂತ್ರ ||
.
ಭುವನಪಾಲಕಿ ಭುವನೇಶ್ವರಿ ಬೀಜ 'ಹ್ರೀಂ', 'ಹ' ಶಿವ 'ರ' ಪ್ರಕೃತಿ
ಭ್ರಮೆ ಕವಿಸುವ ದೈವೀ ಮಹಾಮಾಯಾ 'ಈ', ನಾದವಾಗೀ ಶಕ್ತಿ
ದುಃಖೋತ್ಪಾಟಕ ಬಿಂದು ಜತೆ ಸೇರೆ, ಶಿವ ಶಕ್ತಿ ಶೃತಿ ಸೃಷ್ಟಿನಾದ
ಮಾಯೆ ಕವಿಸಿ ನಿವಾರಿಸುವಾಟ, ಭಕ್ತರಜ್ಞಾನ ನಾಶ ಬಿಂದು ಕದ ||
.
ದೈವೀಶಕ್ತಿಯ ಸಾಧಕನತ್ತ ಸೆಳೆಯೊ ಕಾಂತ, 'ಕ್ಲಿಂ' ಕಾಮ ಬೀಜಾಕ್ಷರ
ಪರಮಾನಂದ ಪರಮಾರ್ಥ ಮೋಕ್ಷ ಕಾಮನೆ, ಆಕರ್ಷಣ ಶಕ್ತಿ ಪ್ರಖರ
ದೇವಿಕೃಪೆ ಇಚ್ಛೆ 'ಕ', ಜೀವನ ಸಂತೃಪ್ತಿ 'ಲ' ಮೋಹವಾಗಿಸುತೆ ಮಿತ
ಸಂಪದವೆ 'ಅಂ' ಮೂರನೆ ಬೀಜಾಕ್ಷರ, 'ಕ' ಕೃಷ್ಣ-ಶಿವ ಪ್ರೇಮ ಸಹಿತ ||
.
ಕಾಮಕಲಾ ಮೂರು ಬೀಜಾಕ್ಷರಗಳಲ್ಹುದುಗಿದ ರಹಸ್ಯ ಬೀಜ 'ಈಂ'
ಏಕರೂಪೀ ಕಾಮೇಶ್ವರ ಕಾಮೇಶ್ವರಿಯಾಗಿ, ಶ್ರೀಚಕ್ರದ ಕೆಂದ್ರಾಸೀನಂ
ಸಮಾಗಮದಲಿ ಬಿಂದು ಸೃಷ್ಟಿಸೆ ಒಳಚಕ್ರದಾ ತ್ರಿಕೋಣ ಸಾಮರ್ಥ್ಯ
'ಪ್ರಕಾಶ' 'ವಿಮರ್ಶ' 'ಅಹಂ-ಇದಂ' ಪ್ರತಿನಿಧಿಸೆ ಪ್ರತಿ ಭುಜಗಳರ್ಥ ||
.
ಜ್ಞಾನದಧಿದೇವತೆ ಸರಸ್ವತೀಯ ಬೀಜಾಕ್ಷರ 'ಐಂ' ವಾಗ್ಬವ ಬೀಜ
ಐ-ಮ್ ಬೀಜಾಕ್ಷರ ಭಾಗದೆ 'ಮ್' ದುಃಖವನಟ್ಟುವ ಸಾಧನ ನಿಜ
ಅಜ್ಞಾನ ತೊಡೆವ ಗುರು ಪ್ರತಿನಿಧಿಸಿ, ಅತ್ಯುನ್ನತ ಅಧ್ಯಾತ್ಮಿಕ ಜ್ಞಾನ
ಉತ್ತೇಜನ ಸಂಕಲ್ಪಶಕ್ತಿ ನಿಷ್ಠೆಗೆ, ದೈವದೆಡೆಗೆ ಆಧ್ಯಾತ್ಮಿಕ ಜಾಣತನ ||
.
ಶಿವನು ಶಕ್ತಿಗೆ ವರ್ಣಿಸಿದ  'ಸೌಃ', ಪರಾ-ಹೃದಯ-ಅಮೃತದ ಬೀಜ
ಮೂರನೆ ಬ್ರಹ್ಮ 'ಸ' ಚತುರ್ದಶ 'ಔ' ಸ್ವರ, ವಿಸರ್ಗ 'ಃ' ಸಂಯೋಜ
ಬೇಡ ಹೋಮ, ಹವನ 'ಸೌಃ' ಮಂತ್ರ ಸಾರವರಿತವ ದೀಕ್ಷಾಯೋಗ್ಯ
'ನಿರ್ವಾಣ','ಅಂತಿಮಮುಕ್ತಿ' ಜಗಸ್ಪಂದನ, ಸ್ವಯಂ ಶಿವನೆನಿಸಿ ಭಾಗ್ಯ ||
.
ಮುಮ್ಮಡಿ ಬ್ರಹ್ಮದೊಂದು ಪ್ರತೀಕ 'ಸತ್', ಓಂ-ತತ್-ಸತ್ ಮೂಲಾಧಾರ
ವೇದ ಪಾಂಡಿತ್ಯ ಯಜ್ಞಯಾಗಾದಿ ಪದ್ದತಿಗುಗಮ, 'ಓಂಕಾರ' ಆರಂಭಸ್ವರ
ಮೋಕ್ಷ ನಿರೀಕ್ಷಕರುಚ್ಛರಿಸುತ 'ತತ್', ಜಪ ತಪಾದಿ ಧ್ಯಾನ ನಿರತ ವಿಸ್ತರ
'ಸತ್' ಬ್ರಹ್ಮದಪರ ನಂಬಿಕೆಗುಚ್ಛರಿಸುವರು, ಈ ಮೂರನೆ ಬ್ರಹ್ಮ 'ಸ' ಸ್ವರ ||
.
ಸೃಷ್ಟಿಕ್ರಿಯೆ ಪ್ರತಿನಿಧಿಸೊ ಶುದ್ಧ ಚೈತನ್ಯವೆ 'ಸ/ಸ್ವತ್' ಸ್ವಯಂ ಶಿವ
ಚಿತ್ ಆನಂದಶಕ್ತಿಗೆ ವಿಕಸನ,ಇಚ್ಛಾ-ಜ್ಞಾನ-ಕ್ರಿಯಾಶಕ್ತಿ ತದನಂತರ
ತ್ರಿಶಕ್ತಿ ಮಾಯಾಂಡಕೆ ಸೇರಿ, ಸದಾಶಿವ-ಈಶ್ವರ-ಶುದ್ಧವಿದ್ಯಾ ಪ್ರಸ್ತುತಿ
ಸ-ಔ ಸಮ್ಮಿಲನ ಸೃಷ್ಟಿ, ವಿಸರ್ಗ ಜೋಡಿ ಪರಾಬೀಜ, ಧ್ಯಾನಿಸಿ ಮುಕ್ತಿ ||
.
ಓಂ-ಹ್ರಿಂ-ಶ್ರೀಂ ಷೋಡಶೀ ಮಂತ್ರದ ಎರಡನೆ ಸಾಲು, ಪ್ರಣವ-ಮಾಯ-ಶ್ರೀ ಬೀಜ
ಮೊದಲ ಸಾಲ ಪ್ರಣವ ಪರಮಾತ್ಮ ಸೂಚಿ, ಎರಡನೆ ಸಾಲು ವ್ಯಕ್ತಿಗತಾತ್ಮ ತೇಜ
ಗುರುವಿತ್ತ ಆತ್ಮಬೀಜ ಪ್ರಣವಕೆ ಬದಲಿಸಲೆ, 'ಓಂ' ವ್ಯಕ್ತಿಗತಾತ್ಮದ ಅಪರಾ ಹಂತ
'ಹ್ರೀಂ' ಕಾರ್ಯಕಾರಣ ಬೀಜ, ಮಾಯೆಗಧಿಗಮಿಸೆ ಸಾಯುಜ್ಯ 'ಶ್ರೀಂ' ಪರಾ ಹಂತ ||
.
'ಹ್ರೀಂ' ಅಕ್ಷರ ಪ್ರತಿನಿಧಿಸುವ ಶಿವ ಶಕ್ತಿಯರ ಪ್ರತ್ಯೇಕಾಸ್ತಿತ್ವ ಮಾಯಾಶಕ್ತಿ
ಸಾಧಕ ವ್ಯಕ್ತಿಗತಾತ್ಮ ನಿರಂತರ, ಕಠಿಣಾಭ್ಯಾಸದೆ ಅಧಿಗಮಿಸೋ ಪ್ರವೃತ್ತಿ
ಮೂರನೆ ಬೀಜ 'ಶ್ರೀಂ' ಪ್ರತಿನಿಧಿಸೊ ಪರಬ್ರಹ್ಮದೆ ಒಂದಾಗಿ ಐಕ್ಯತೆಯತ್ತಾ
ಮಹಾಷೋಡಶಿಯ ಎರಡನೆ ಸಾಲಷ್ಟೆ ಮುಕ್ತಿಯ ಮಾರ್ಗ ಸ್ಪಷ್ಟ ತೋರುತ ||
.
ಪಂಚದಶೀ ಹದಿನೈದು ಬೀಜಾಕ್ಷರ, ಷೋಡಶಿಯ ಮೂರು-ನಾಲ್ಕು-ಐದನೆ ಸಾಲು
ಮೊದಲಸಾಲ ವಿಲೋಮಕ್ರಮ ಆರನೆ ಸಾಲು, ಸಂಪುಟೀಕರಣ ಶಕ್ತಿ ಸೋರದೆಲ್ಲು
'ಓಂ' ಜತೆ ದ್ವಾದಶಾಷ್ಟ ಬೀಜಾಕ್ಷರ , ಓಂ-ಶ್ರೀಂ-ಹ್ರೀಂ-ಕ್ಲೀಂ-ಐಂ-ಸೌಃ, ಓಂ-ಹ್ರೀಂ-ಶ್ರೀಂ
ಕ-ಏ-ಈ-ಲ-ಹ್ರಿಂ, ಹ-ಸ-ಕ-ಹ-ಲ-ಹ್ರೀಂ, ಸ-ಕ-ಲ-ಹ್ರಿಂ, ಸೌಃ-ಐಂ-ಕ್ಲೀಂ-ಹ್ರೀಂ-ಶ್ರೀಂ ||

.
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು
 

Submitted by ಗಣೇಶ Wed, 10/16/2013 - 22:13

In reply to by nageshamysore

ನಾಗೇಶರೆ,
ಶ್ರೀಧರ್‌ಜಿಯದ್ದು ಥಿಯರಿ ಪಾಠವಾದರೆ, ನಿಮ್ಮದು ಪರೀಕ್ಷೆ ಟೈಮ್‌ಗೆ ಬೇಗನೆ ಓದಿ ಮುಗಿಸಬಹುದಾದ ನೋಟ್ಸ್.:) ಸ್ಕೂಲ್‌‌ನ ಸೈನ್ಸ್, ಸಮಾಜ, ಗಣಿತ ಇತ್ಯಾದಿ ಪಾಠವನ್ನು ನಿಮ್ಮಿಂದ ಕವನವಾಗಿಸಿ, ಕಲಿಸಿದರೆ ಮಕ್ಕಳು ನೂರಕ್ಕೆ ನೂರು ಮಾರ್ಕ್ ತೆಗೆಯುವರು.

Submitted by nageshamysore Thu, 10/17/2013 - 17:17

In reply to by ಗಣೇಶ

ಗಣೇಶ್ ಜಿ, ಅಂತು ನನಗೆ ಎಮರ್ಜೆನ್ಸಿ ಬಿದ್ರೆ ಬದುಕೋಕೆ ಇನ್ನೊಂದು ಕೆಲಸದ ಐಡಿಯಾನೂ ಕೊಟ್ಟುಬಿಟ್ಟಿರಿ ! ಅದೇನೆ ಇರಲಿ ಶ್ರೀಧರರದು ಪಿ.ಎಚ್.ಡಿ ಲೆವಲ್ಲು, ನನ್ನದೊ ಬರಿ ಪ್ರೈಮರೀ ಸ್ಕೂಲ್ ಲೆವಲ್ಲು.
ಕನ್ನಡ ಕವನ ಓದೊ ಮಕ್ಕಳಿದ್ರೆ ಯಾವ ಸಬ್ಜೆಕ್ಟಾದ್ರೂ ಸರಿ ಒಂದು ಕೈ ನೋಡೋದೇನೆ !

ನಾಗೇಶರೆ,
ನನ್ನದು ಇತ್ತ ಪಿ.ಎಚ್.ಡಿಯೂ ಅಲ್ಲದ ಅತ್ತ ಎಂ.ಎಸ್ಸಿಯೂ ಅಲ್ಲದ ಎಂ.ಎಚ್.ಡಿ. ಅಂದರೆ ಮೆಂಟಲ್ ಹಾಸ್ಪಿಟಲ್ ಧಾರವಾಡ :))
ಇದು ಎಂ.ಎಸ್ಸಿ ಮುಗಿಸಿ ಪಿ.ಎಚ್‌.ಡಿಯನ್ನು ಪೂರೈಸಲಾಗದೇ ಅರ್ಧದಲ್ಲಿಯೇ ನಿಲ್ಲಿಸುತ್ತಿದ್ದವರ ಬಗೆಗೆ ಧಾರವಾಡದಲ್ಲಿ ನಾನು ಓದುತ್ತಿದ್ದಾಗ ಪ್ರಚಲಿತವಿದ್ದ ಜೋಕು.
ಇದೇನೆ ಇರಲಿ, @ಗಣೇಶರಂತೂ ನಿಮ್ಮ ಕೆಲಸವನ್ನು ಸೂಕ್ತವಾಗಿಯೇ ಗುರುತಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಜಕ್ಕೂ ನಾನು ಅನೇಕ ಬಾರಿ ಹೇಳಿದಂತೆ ಬಹಳ ಕ್ಲಿಷ್ಟವಾದ ಸಂಗತಿಗಳನ್ನು ಅದ್ಭುತವಾಗಿ ಕವನಗಳಲ್ಲಿ ಸೆರೆ ಹಿಡಿಯೋ ಕೆಲಸ ನಿಮಗೆ ಸಿದ್ಧಿಸಿದೆ. ಉದಾಹರಣೆ: ಈ ಕಂತಿನ ಕಾವ್ಯವನ್ನೇ ತೆಗೆದುಕೊಳ್ಳಿ ಅದನ್ನು ಬಹಳ ಅದ್ಭುತವಾಗಿ ಸೆರೆ ಹಿಡಿದಿದ್ದೀರ. (ಕೆಲವು ಬೆರಳಚ್ಚಿನ ದೋಷಗಳಿವೆ ಅವನ್ನು ಮುಂದೆ ಪರಿಷ್ಕರಿಸುತ್ತೇನೆ).
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ