೯೪. ಲಲಿತಾ ಸಹಸ್ರನಾಮ ೩೪೬ರಿಂದ ೩೫೧ನೇ ನಾಮಗಳ ವಿವರಣೆ

೯೪. ಲಲಿತಾ ಸಹಸ್ರನಾಮ ೩೪೬ರಿಂದ ೩೫೧ನೇ ನಾಮಗಳ ವಿವರಣೆ

ಚಿತ್ರ

ಚಿತ್ರಕೃಪೆ: ಲಲಿತಾಂಬಿಕೆಯ ದರ್ಬಾರಿನ ಚಿತ್ರ; ನಾಗೇಶ್ ಮೈಸೂರು ಅವರು ಕಳುಹಿಸಿದ ಮಿಂಚಂಚೆ. ಚಿತ್ರದ ಮೂಲ ಕೊಂಡಿ : http://srilalithatri...

ಲಲಿತಾ ಸಹಸ್ರನಾಮ ೩೪೬ -೩೫೧

Vijayā विजया (346)

೩೪೬. ವಿಜಯಾ

         ದೇವಿಯು ಯಾವಾಗಲೂ ವಿಜಯಶಾಲಿಯಾಗಿರುತ್ತಾಳೆ. ಆಕೆಯು ರಾಕ್ಷಸರೆಂದು ಕರೆಯಲ್ಪಡುವ ದುಷ್ಟ ಕಾರ್ಯಗಳನ್ನು ಮಾಡುವವರೊಂದಿಗಿನ ಯುದ್ಧಗಳಲ್ಲಿ ಯಾವಾಗಲೂ ಜಯವನ್ನು ಗಳಿಸುತ್ತಾಳೆ. ಆಕೆಯು ಶಿವನ ಪ್ರೇಮವನ್ನು ಗೆದ್ದಿರುವುದರಿಂದ ಆಕೆಯನ್ನು ವಿಜಯಿಯೆಂದು ಹೇಳಬಹುದು. ದಸರಾ ಹಬ್ಬದ ೧೦ನೇ ದಿವಸದ (ಈ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾರೆ ಅದರರ್ಥ ವಿಜಯವನ್ನು ಪಡೆದ ದಸರಾ ಹಬ್ಬದ ಹತ್ತನೇ ದಿವಸ) ಸಾಯಂಕಾಲದ ಗೋಧೂಳೀ ಸಮಯವು ಅತ್ಯಂತ ಪ್ರಶಸ್ತವಾದುದೆಂದು ಪರಿಗಣಿಸಲಾಗಿದ್ದು ಅಂದು ಕೈಗೊಂಡ ಯಾವುದೇ ಕಾರ್ಯವಾಗಲಿ ಜಯವನ್ನುಂಟು ಮಾಡುತ್ತದೆ. ಶ್ರೀ ಚಕ್ರದಲ್ಲಿ ಪೂಜಿಸಲ್ಪಡುವ ತಿಥಿ ನಿತ್ಯ ದೇವಿಯೊಬ್ಬಳ ಹೆಸರೂ ಸಹ ವಿಜಯಾ ಆಗಿದೆ.

Vimalā विमला (347)

೩೪೭. ವಿಮಲಾ

            ದೇವಿಯು ಕಲ್ಮಶ (ಮಲ) ರಹಿತಳಾಗಿದ್ದಾಳೆ. ಮಲಗಳೆಂದರೆ ಇಲ್ಲಿ ಅಜ್ಞಾನದಿಂದ ಉಂಟಾಗುವ ಕಲ್ಮಶಗಳು. ಯಾವಾಗ ದೇವಿಯು ಜ್ಞಾನದ ಸ್ವರೂಪವಾಗಿದ್ದಾಳೆಯೋ ಆಗ ಅಜ್ಞಾನದಿಂದ ಉಂಟಾಗುವ ಕಲ್ಮಶಗಳ ಪ್ರಶ್ನೆಯೇ ಇರದು. ಇದೇ ಅರ್ಥವನ್ನು ೧೩೫ನೇ ನಾಮವು ಒಳಗೊಂಡಿದೆ. ಕೆಲವೊಮ್ಮೆ ’ವಿ’ ಅನ್ನು ಪೂರ್ವವಾಗಿ ಶಬ್ದವೊಂದಕ್ಕೆ ಜೋಡಿಸಿದಾಗ ಅದು ಅದಕ್ಕೆ ವಿರದ್ಧವಾದ ಅರ್ಥವನ್ನು ಹೊಮ್ಮಿಸುತ್ತದೆ. ಉದಾಹರಣೆಗೆ ಮಲ ಎಂದರೆ ಕಲ್ಮಶ ಮತ್ತು ವಿಮಲ ಎಂದರೆ ಕಲ್ಮಶ ರಹಿತವಾಗಿರುವುದು.

           ೧೩೫ನೇ ನಾಮವಾದ ‘ನಿರ್ಮಲಾ’ದ ವಿಶ್ಲೇಷಣೆಯನ್ನು ಇಲ್ಲಿ ಪುನರುಚ್ಛರಿಸಲಾಗಿದೆ. ಮಲ ಎಂದರೆ ಅಶುದ್ಧ ಪದಾರ್ಥದಿಂದ ಉಂಟಾಗುವ ಕೊಳೆ. ದೇವಿಯು ಅಂತಹ ಕೊಳೆಯಿಲ್ಲದವಳಾಗಿದ್ದಾಳೆ. ೧೩೪ನೇ ನಾಮದಲ್ಲಿ ನಮ್ಮ ಮನಸ್ಸಿನಿಂದ ಉದ್ಭವವಾಗುವ ಕಲ್ಮಶಗಳ ಕುರಿತಾಗಿ ಚರ್ಚಿಸಲಾಗಿತ್ತು ಮತ್ತು ನಾಮ ೧೩೫ರಲ್ಲಿ ವಸ್ತುಗಳಿಂದ ಉಂಟಾಗುವ ಕಲ್ಮಶಗಳ ಕುರಿತಾಗಿ ಚರ್ಚಿಸಲಾಗಿದೆ. ಮನಸ್ಸು ಮತ್ತು ಭೌತಿಕ ವಸ್ತುಗಳೆರಡೂ ಶಕ್ತಿಯಾಗಿವೆ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಮಲ ಎನ್ನುವುದು ಒಂದು ರೀತಿಯಾದ ಅಪರಿಪೂರ್ಣತೆಯಾಗಿದ್ದು ಅದು ಆತ್ಮದ ಅಜ್ಞಾನಕ್ಕೆ ಕಾರಣವಾಗಿ ಅದರಿಂದ ಪರಮಾತ್ಮದ ಸ್ವತಂತ್ರ ಅಭಿವ್ಯಕ್ತಿಗೆ ತಡೆಯುಂಟಾಗುತ್ತದೆ. ಈ ವಿಧವಾದ ಮಲವು ಅಹಂಕಾರದಿಂದ ಉಂಟಾಗುತ್ತದೆ ಮತ್ತದನ್ನು ‘ಆಣವ ಮಲ’ ಎಂದು ಕರೆಯಲಾಗುತ್ತದೆ.

         ಒಬ್ಬನು ವಸ್ತುಗಳೊಂದಿಗಿನ ಮೋಹವನ್ನು ತೊರೆದು ಅದರೊಂದಿಗೆ ಅಹಂಕಾರವನ್ನು ಇಲ್ಲವಾಗಿಸಿಕೊಂಡರೆ ಜ್ಞಾನವು ಹೊಂದಲ್ಪಡುತ್ತದೆ. ಮಲದ ಇರುವಿಕೆಯು ಅವಿದ್ಯೆಯನ್ನು (ಅಜ್ಞಾನವನ್ನು) ಉಂಟು ಮಾಡಿ ಅದು ಗೊಂದಲ, ಕೊಳೆ ಮತ್ತು ಅಂಧಕಾರಕ್ಕೆಡೆ ಮಾಡಿಕೊಡುತ್ತದೆ. ಈ ವಿಧವಾದ ಅಂಧಕಾರ ಮೊದಲಾದ ಕಲ್ಮಶಗಳನ್ನು ದೇವಿಯನ್ನು ಧ್ಯಾನಿಸುವುದರ ಮೂಲಕ ಹೋಗಲಾಡಿಸಿಕೊಂಡು ಜ್ಞಾನವನ್ನು ಸಂಪಾದಿಸಬಹುದೆಂದು ಈ ನಾಮವು ತಿಳಿಸಿಕೊಡುತ್ತದೆ

Vandyā वन्द्या (348)

೩೪೮. ವಂದ್ಯಾ

         ದೇವಿಯು ಪ್ರೀತಿಯುಕ್ಕಿಸುವವಳು. ನಮಗೆ ಕೆಲವರು ಪರಿಚಯವಿಲ್ಲದಿದ್ದರೂ ಸಹ ಅವರನ್ನು ನೋಡಿದಾಕ್ಷಣ ನಮಗೆ ಪ್ರೀತಿಯುಕ್ಕಿಬರುತ್ತದೆ. ಏಕೆಂದರೆ ಅವರು ದಿವ್ಯ ಶಕ್ತಿಯನ್ನು ಬ್ರಹ್ಮಾಂಡದಿಂದ ಪಡೆಯುತ್ತಾರೆ ಮತ್ತು ಅವರ ದೇಹದಾದ್ಯಂತ ಅದು ತರಂಗಗಳಾಗಿ ಪ್ರತಿಫಲಿಸುತ್ತದೆ ಅಥವಾ ಸಂಚಯಿಸುತ್ತದೆ. ಈ ರೀತಿಯ ತರಂಗಗಳು ಸಾಮಾನ್ಯವಾಗಿ ಕಿರೀಟ ಚಕ್ರದಲ್ಲಿರುವ (ಸಹಸ್ರಾರದಲ್ಲಿರುವ) ಒಂದು ಸಣ್ಣ ರಂಧ್ರದಿಂದ ಒಳಸೇರುತ್ತವೆ ಮತ್ತು ನಮ್ಮ ಬೆನ್ನಿನ ಹುರಿಯೊಂದಿಗೆ ಇರುವ ಮಿದುಳಿನ ಬಳ್ಳಿಯ (Medulla oblongata) ಮೂಲಕವೂ ಒಳಸೇರುತ್ತವೆ. ಮೂರನೆಯ ಕಣ್ಣು, ಪೀನಿಯಲ್ ಗ್ರಂಥಿ ಮತ್ತು ಹಿಂದಲೆಯ ಚಕ್ರ ಇವೆಲ್ಲವೂ ಒಂದೇ ನೇರ ಗೆರೆಯಲ್ಲಿ ಬರುತ್ತವೆ. ಯಾವಾಗ ಆಜ್ಞಾ ಚಕ್ರದ ಮೂಲಕ ಅಂತದೃಷ್ಟಿ ಹರಿಸಿ ತನ್ನ ಒಳಗನ್ನು ನೋಡಿಕೊಳ್ಳಲು ಸಾಧ್ಯವಾಗುವುದೋ ಆಗ ಉತ್ಪನ್ನವಾಗುವ ಶಕ್ತಿಯು ಪೀನಿಯಲ್ ಗ್ರಂಥಿಯ ಮೂಲಕ ಹರಿದು ಅದು ಹಿಂದಲೆಯ ಚಕ್ರದ ಮೂಲಕ ಬಿಡುಗಡೆಯಾಗುತ್ತದೆ ಮತ್ತು ಈ ಪ್ರಕ್ರಿಯೆಯ ಮೂಲಕ ಜೀವದ್ರವ್ಯದ ದೇಹವನ್ನು (bio-plasma body) ಶುಚಿಯಾಗಿಸುತ್ತದೆ. ಈ ಕ್ರಿಯೆಯು ಆಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆಯನ್ನು ಉಂಟುಮಾಡುವುದಲ್ಲದೇ ಕೆಲವೊಂದು ವೇಳೆ ಅತಿಮಾನುಷ ಶಕ್ತಿಗಳನ್ನು (ಸಿದ್ಧಿಗಳನ್ನು) ಕೊಡಮಾಡುತ್ತದೆ.

         ದೇವಿಯು ಸಮಸ್ತ ಬ್ರಹ್ಮಾಂಡದ ಶಕ್ತಿಯ ಸ್ವರೂಪವಾಗಿದ್ದಾಳೆ. ಆಕೆಯು ಪರಮಶಿವನಿಂದ ಶಕ್ತಿಯನ್ನು ಪಡೆದು ಅದನ್ನು ಈ ಜಗತ್ತಿಗೆ ವರ್ಗಾಯಿಸುತ್ತಾಳೆ; ಈ ಜಗತ್ತು ಅಸ್ತಿತ್ವದಲ್ಲಿರಲು (ಸುಸ್ಥಿತಿಯಲ್ಲಿರಲು).

Vandāru-jana-vatsalā वन्दारु-जन-वत्सला (349)

೩೪೯. ವಂದಾರು-ಜನ-ವತ್ಸಲಾ

        ಈ ನಾಮವನ್ನು ಹಿಂದಿನ ನಾಮದ ಮುಂದುವರಿಕೆಯೆಂದು ಹೇಳಬಹುದು. ದೇವಿಯು ತನ್ನ ಭಕ್ತರನ್ನು ತಾಯಿಯೋರ್ವಳು ತನ್ನ ಮಕ್ಕಳನ್ನು ಪ್ರೀತಿಸುವಂತೆಯೇ ಪ್ರೀತಿಸುತ್ತಾಳೆ. ಪ್ರೇಮದ ತರಂಗಗಳು ಒಬ್ಬನ ಶರೀರದಿಂದ ಹೂವೊಂದರ ಸುವಾಸನೆಯಂತೆ ಹೊರಹೊಮ್ಮುತ್ತವೆ. ದೇವಿಯ ಕಾಳಜಿ ಮತ್ತು ಪ್ರೇಮಪೂರ್ವಕ ಸ್ವಭಾವದಿಂದಾಗಿಯೂ ಸಹ ಆಕೆಯು ವಿಮಲಾ (ನಾಮ ೩೪೭) ಎಂದು ಕರೆಯಲ್ಪಡುತ್ತಾಳೆ. ಇದನ್ನು ನಾವು ದೈನಂದಿನ ಜೀವನದಲ್ಲಿ ಸಹ ನೋಡಬಹುದು. ಒಬ್ಬನು ತನ್ನ ನಾಯಿಗೆ ಆಹಾರವನ್ನು ನೀಡುತ್ತಿರುವಾಗ ಅವನು ಆ ನಾಯಿಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಆ ಪ್ರೀತಿಯು ಅವನ ಶರೀರದಲ್ಲಿ ಪ್ರತಿಫಲನಗೊಳ್ಳುತ್ತದೆ ನಾಯಿಯು ಆ ತರಂಗಗಳನ್ನು ಗ್ರಹಿಸಿ ಅವನ ಪ್ರೀತಿಯನ್ನು ಅನುಭವಿಸುತ್ತದೆ ಮತ್ತು ಅದರ ದ್ಯೋತಕವಾಗಿ ತನ್ನ ಬಾಲವನ್ನು ಅಲ್ಲಾಡಿಸುವುದರ ಮೂಲಕ ಅವನ ಪ್ರೀತಿಗೆ ಪ್ರತಿಸ್ಪಂದಿಸುತ್ತದೆ.

Vāgvādinī वाग्वादिनी (350)

೩೫೦.ವಾಗ್ವಾದಿನೀ

         ದೇವಿಯು ಮಾತನ್ನು ಪ್ರಚೋದಿಸುತ್ತಾಳೆ ಅಥವಾ ಆಕೆಯು ವಾಣಿಯೇ (ಮಾತೇ) ಆಗಿದ್ದಾಳೆ. ಸರಸ್ವತೀ ದೇವಿಯು ಮಾತಿನ ಅಧಿದೇವತೆಯೆಂದು ಪರಿಗಣಿಸಲ್ಪಟ್ಟದ್ದಾಳೆ. ಈ ನಾಮದ ಅರ್ಥವು ಸರಸ್ವತೀ ದೇವಿಯು ಜಗನ್ಮಾತೆಯಿಂದ ವಾಣಿಯ ಮೇಲೆ ಅಧಿಕಾರವನ್ನು ಪಡೆದುಕೊಂಡಿದ್ದಾಳೆಂದು ಅರ್ಥೈಸಬಹುದು (ಸರ್ಕಾರವನ್ನು ನಡೆಸುವಾಗ ಒಬ್ಬೊಬ್ಬರು ಒಂದೊಂದು ಖಾತೆಯನ್ನು ಹಂಚಿಕೊಂಡಂತೆ). ದೇವಿಯು ವಾಣಿಯ ಮೂಲವಾಗಿರುವುದರಿಂದ ಆಕೆಯು ವಾಗ್ವಾದಿನೀ ಆಗಿದ್ದಾಳೆ.

Vāmakeśī वामकेशी (351)

೩೫೧. ವಾಮಕೇಶೀ

          ವಾಮಕೇಶ್ವರನ ಹೆಂಡತಿಯು ವಾಮಕೇಶೀ. ಶೈವಸಿದ್ಧಾಂತದ ಪ್ರಕಾರ ಇಪ್ಪತ್ತೆಂಟು ತಂತ್ರಗಳನ್ನು ಶಿವನು ಜಗತ್ತಿಗೆ ಪರಿಚಯಿಸಿದನು ಮತ್ತು ಅವುಗಳಲ್ಲಿ ‘ವಾಮಕೇಶ ತಂತ್ರ’ವೂ ಒಂದು. ಈ ತಂತ್ರವು ಕೇವಲ ದೇವಿಯ ಆರಾಧನೆಯ ಕುರಿತಾಗಿ ಚರ್ಚಿಸುತ್ತದೆ ಆದ್ದರಿಂದ ಆಕೆಯನ್ನು ವಾಮಕೇಶೀ ಎಂದು ಕರೆಯಲಾಗಿದೆ. ವಾಮಕ ಎಂದರೆ ಒಬ್ಬ ಮಾನವ. ಶಿವನು ಮಾನವರಲ್ಲೆಲ್ಲಾ ಅತ್ಯಂತ ಪ್ರಮುಖನೆಂದು (ಈಶ್ವರ ಎಂದು) ಪರಿಗಣಿಸಲ್ಪಟ್ಟಿದ್ದಾನಾದ್ದರಿಂದ ಅವನು ವಾಮಕೇಶ್ವರ (ವಾಮಕ+ಈಶ್ವರ) ಎಂದು ಕರೆಯಲ್ಪಟ್ಟಿದ್ದಾನೆ ಮತ್ತವನ ಅರ್ಧಾಂಗಿಯು ವಾಮಕೇಶೀ; ಭೈರವ ಮತ್ತು ಭೈರವೀ ಎಂದಂತೆ.

          ಲಲಿತಾ ಸಹಸ್ರನಾಮದಲ್ಲಿ ಎರಡು ನಾಮಗಳು ವಾಮಕೇಶದಿಂದ ಪ್ರಾರಂಭವಾಗುತ್ತವೆ. ಈ ಎರಡು ನಾಮಗಳಲ್ಲಿ ಮೊದಲನೆಯದು ವಾಮಕೇಶೀ ಮತ್ತೊಂದು ೯೪೫ನೇ ನಾಮವಾದ ವಾಮಕೇಶ್ವರೀ. ವಾಮ ಎನ್ನುವುದಕ್ಕೆ ಅನೇಕಾನೇಕ ಅರ್ಥಗಳಿವೆ ಅವುಗಳಲ್ಲಿ ಕೆಲವು ಹೀಗಿವೆ - ಸುಂದರ, ರಮಣೀಯ, ಶಿವ, ದುರ್ಗಾ, ಲಕ್ಷ್ಮೀ, ಸರಸ್ವತೀ, ಒಬ್ಬ ಸುಂದರ ಸ್ತ್ರೀ, ಹೆಂಡತಿ, ಎಡ ಪಾರ್ಶ್ವ, ಮೊದಲಾದವು. ಕೇಶ ಎಂದರೆ ಕೂದಲು, ಆಗ ಈ ನಾಮದ ಅರ್ಥವು ದೇವಿಗೆ ಸುಂದರವಾದ ಕೂದಲುಗಳಿವೆ ಎಂದಾಗುತ್ತದೆ. ಆದರೆ ಈ ಅರ್ಥವು ಹಿಂದಿನ ಹಾಗೂ ಮುಂದಿನ ನಾಮಗಳಿಗೆ ಹೊಂದುವುದಿಲ್ಲ. ನಾಮ ೩೫೦ ಸರಸ್ವತೀ ದೇವಿಯನ್ನು ಉಲ್ಲೇಖಿಸಿದರೆ, ೩೫೨ನೇ ನಾಮವು ದುರ್ಗಾ ದೇವಿಯನ್ನು ಕುರಿತು ಹೇಳಬಹುದೆನಿಸುತ್ತದೆ. ಈ ವಿಶ್ಲೇಷಣೆಗಳು ಸರಿಯೆಂದುಕೊಂಡರೆ, ಈ ನಾಮವು ಲಕ್ಷ್ಮೀ ದೇವಿಯನ್ನು ಕುರಿತದ್ದಾಗಿದೆ ಎಂದು ವ್ಯಾಖ್ಯಾನಿಸುವುದು ಅತ್ಯಂತ ಸಮಂಜಸವೆನಿಸುತ್ತದೆ.

          ೯೪೫ನೇ ನಾಮವಾದ ವಾಮಕೇಶ್ವರೀ ಎನ್ನುವುದು ವಾಮಕೇಶ್ವರ ತಂತ್ರವನ್ನು ಉಲ್ಲೇಖಿಸುತ್ತದೆ. ಈ ಸಹಸ್ರನಾಮದ ೨೩೬ನೇ ನಾಮದಲ್ಲಿ ಚರ್ಚಿಸಲ್ಪಟ್ಟ (ಮತ್ತು ಸೌಂದರ್ಯ ಲಹರಿಯ ೩೧ನೇ ನಾಮದಲ್ಲಿ ಚರ್ಚಿಸಲಾಗಿರುವ) ೬೪ ತಂತ್ರಗಳನ್ನು ಹೊರತು ಪಡಿಸಿದರೆ ಇದು ೬೫ನೇ ತಂತ್ರವಾಗಿದೆ. ಶ್ರೀ ವಿದ್ಯಾ ಆರಾಧನೆಯಲ್ಲಿ ವಾಮಕೇಶ್ವರ ತಂತ್ರವು ಅತ್ಯಂತ ಮಹತ್ವವುಳ್ಳದ್ದೆಂದು ಪರಿಗಣಿತವಾಗಿದೆ. ಈ ತಂತ್ರವು ಶಕ್ತಿಯ ಅಂತರಂಗದ ಪೂಜೆಯ ಕುರಿತಾಗಿ ಚರ್ಚಿಸುತ್ತದೆ. ವಾಮಕೇಶ್ವರಿಯನ್ನು ಈ ಜಗತ್ತಿನ ಮೂಲವೆಂದು ಕರೆಯಲಾಗಿದೆ.

         ವಾಮಕೇಶ್ವರ ತಂತ್ರದಲ್ಲಿ ಶಕ್ತಿಯು ಶಿವನನ್ನು ಉದ್ದೇಶಿಸಿ ಕೇಳುತ್ತಾಳೆ, “ದೇವಾಧಿದೇವ ನೀನು ನನಗೆ ಎಲ್ಲಾ ಅರವತ್ತನಾಲ್ಕು ತಂತ್ರಗಳ ರಹಸ್ಯಗಳನ್ನೂ ತೋರಿಸಿಕೊಟ್ಟಿದ್ದೀಯ, ಆದರೆ ನೀನು ನನಗೆ ಹದಿನಾರು ವಿದ್ಯೆಗಳ ಕುರಿತಾಗಿ ಹೇಳಲಿಲ್ಲ!". ಆಗ ಶಿವನು ಆಕೆಗೆ ಅವುಗಳು ಇದುವರೆಗೆ ರಹಸ್ಯವಾಗಿದ್ದವು ಮತ್ತವುಗಳ ರಹಸ್ಯವನ್ನು ಈಗ ನಿನಗೆ ಪ್ರಚುರಪಡಿಸುತ್ತೇನೆ ಎಂದು ಹೇಳುತ್ತಾನೆ. ತದನಂತರ ಶಿವನು ಈ ತಂತ್ರದ ಕುರಿತಾಗಿ ದೇವಿಗೆ ಉಪದೇಶಿಸಲು ತೊಡಗುತ್ತಾನೆ. ಈ ತಂತ್ರದಲ್ಲಿ ಪ್ರತಿಯೊಂದು ವಿಷಯವನ್ನೂ ಬಹಳ ಸೂಕ್ಷ್ಮ ಸ್ತರದಲ್ಲಿ ಬಹಿರಂಗಗೊಳಿಸಲಾಗಿದೆ.  

         ಉದಾಹರಣೆಗೆ ವಿದ್ಯಾ ರೂಪದಲ್ಲಿ ಒಬ್ಬರನ್ನು ರಕ್ಷಿಸುತ್ತದೆಂದು ಕರೆಯಲಾಗಿರುವ ಹ್ರೀಂ ಬೀಜಾಕ್ಷರವು, ಶಿವ, ಅಗ್ನಿ, ಮಾಯಾ ಮತ್ತು ಬಿಂದು ಇವುಗಳನ್ನೊಳಗೊಂಡಿದೆ. ಈ ದೇವ-ದೇವಿಯರ ಬೀಜಾಕ್ಷರಗಳ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದಿದ್ದರೆ ರಹಸ್ಯವಾಗಿ ಹುದುಗಿರುವ ಬೀಜಾಕ್ಷರಗಳನ್ನು ತಿಳಿದುಕೊಳ್ಳುವುದು ಕಷ್ಟದ ಕೆಲಸ. ಶಿವ ಬೀಜವು ’ಹ’ ಆಗಿದ್ದರೆ,  ಅಗ್ನಿ ಬೀಜವು ’ರ’ ಆಗಿದೆ, ಮಾಯಾ ಬೀಜವು ’ಈಂ’ ಬೀಜಾಕ್ಷರದ ಮೂಲವಾದ ’ಈ’ ಆಗಿದೆ ಮತ್ತು ಬಿಂದುವೆನ್ನುವುದು ಚುಕ್ಕೆ ಆಗಿದೆ. ಇವೆಲ್ಲ ಬೀಜಾಕ್ಷರಗಳನ್ನು ಒಗ್ಗೂಡಿಸಿದರೆ ’ಹ್ರೀಂ’ ಹೊಮ್ಮುತ್ತದೆ. ಶಿವನು ಈ ತಂತ್ರದಲ್ಲಿ ಹಲವಾರು ಅಪರೂಪವಾದರೂ ಶಕ್ತಿಯುತವಾದ ಬೀಜಗಳನ್ನು ಬಹಿರಂಗ ಪಡಿಸುತ್ತಾನೆ.

         ‘ವಾಮ’ರು ಎಂದರೆ ಯಾರು ದೇವಿಯನ್ನು ತಮ್ಮ ಎಡಗೈಯ್ಯಿಂದ ಪೂಜಿಸುತ್ತಾರೋ ಅವರು. ೯೪೬ನೇ ನಾಮದಲ್ಲಿ ಚರ್ಚಿಸಲಾಗಿರುವ ಐದು ಪ್ರಮುಖ ಯಜ್ಞಗಳನ್ನು ಇವರು ಪರಿಪಾಲಿಸುವುದಿಲ್ಲ. ದೇವಿಯು ಈ ವಾಮ ಹಸ್ತದ ಪೂಜೆಯವರಿಗೆ ಅಧಿದೇವತೆಯಾಗಿದ್ದಾಳೆ. ದೇವಿಯನ್ನು ವಾಮೇಶ್ವರೀ ಎಂದು ಕರೆಯಲಾಗುತ್ತದೆ, ಇದು ದೇವಿಯು ಶಿವನಿಂದ (ನಿರ್ಗುಣ ಬ್ರಹ್ಮದಿಂದ) ಈ ಪ್ರಪಂಚವು ಆವಿರ್ಭವಿಸುವಂತೆ ಮಾಡಿ ಅದರಲ್ಲಿ ವ್ಯತ್ಯಾಸವೆನ್ನುವ ಪರಿಣಾಮಗಳನ್ನುಂಟು ಮಾಡುವ ಅವಳ ದಿವ್ಯ ಶಕ್ತಿಯನ್ನು ಕುರಿತು ಹೇಳುತ್ತದೆ. ವಾಮದೇವ ಎನ್ನುವುದು ಶಿವನ ಹಿಂಬದಿಯ ಮುಖವಾಗಿದೆ.    

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 346-351 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 08/16/2013 - 20:56

ಈ ಚಿತ್ರದ ಮತ್ತೊಂದು ಪುಟ್ಟ ವಿವರ : ಕೆಳಗಿಂದ ಮೂರನೆ ಸಾಲಿನಲ್ಲಿ ಚಾಮರ ಹಿಡಿದಿರುವ ದೇವತೆಯೆ ಮಹಾಲಕ್ಷ್ಮಿ (ಈ ಮಹಾಲಕ್ಷ್ಮಿ ವ್ರತ ದಿನದ ವಿಶೇಷ ದೇವತೆ). ಮತ್ತು ಈ ಲಲಿತಾ ಆಸ್ಥಾನದ ಚಿತ್ರ ಲಲಿತಾ ಸಹಸ್ರ ನಾಮದ 64ನೆ ನಾಮಾವಳಿ ಪ್ರಕಾರವಿದೆ (ಆ ನಾಮದ ವಿವರದಲಿರುವ ದೇವರುಗಳೆಲ್ಲ ಇಲ್ಲಿ ಇದ್ದಾರೆ.

೬೪. ದೇವರ್ಷಿ-ಗಣ-ಸಂಘಾತ-ಸ್ತೂಯಾಮನಾತ್ಮ-ವೈಭವಾ 
ಅಜ್ಞಾನ ಭಂಡಾಸುರನೆ ಅಹಮಿಕೆ ಪಾಪನಾಶಿನಿ ಲಲಿತಾ ಸ್ತುತೆ
ಮಹರ್ಷಿ ನಾರದ ಬೇಡಿಕೆಗೆ ದೇವ ಋಷಿ ಕಂಟಕ ದಾನವ ಹತೆ
ದೇವ ದೇವಿ ಋಷಿ ಮುನಿ ದೇವತಾ ಸಮೂಹ ಪೂಜಿತೆ ವಂದಿತೆ
ದೇವಿ ಪರಮೋನ್ನತೆ ನಿರ್ಗುಣ ಬ್ರಹ್ಮ ನಿಸ್ಸಂದೇಹದಿ ಸಾಧಿಸುತೆ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಾಗೇಶರೆ,
ದೇವಿಯ ಆಸ್ಥಾನದಲ್ಲಿರುವ ಸಕಲ ದೇವಾನುದೇವತೆಗಳನ್ನು ಹಿಡಿದಿಟ್ಟಿರುವ ನಿಮ್ಮ ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಸಾಲಿನ ಕಡೆ ಗಮನ ಕೊಡಿ.
ದೇವ ದೇವಿ ಋಷಿ ಮುನಿ ದೇವತಾ ಸಮೂಹ ಪೂಜಿತೆ ವಂದಿತೆ
ಪೂಜಿತೆ ಮತ್ತು ವಂದಿತೆ ಒಂದೇ ಅರ್ಥವನ್ನು ಹೊಮ್ಮಿಸುತ್ತವೆ. ಆದ್ದರಿಂದ ಒಂದೇ ಶಬ್ದವನ್ನು ಉಳಿಸುವುದು ಒಳಿತು. ದೇವ-ದೇವಿ ವಂದಿತೆ, ಋಷಿಮುನಿಗಣ ಸೇವಿತೆ, ಸಕಲ ದೇವತಾ ಪೂಜಿತೆ ಈ ವಿಧದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು.
ಧನ್ಯವಾದಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಅಂದಹಾಗೆ 64ನೆ ನಾಮವಿರುವ ಈ ಕಂತು ಇನ್ನು ಪರಿಷ್ಕರಿಸದ ಕಂತು -  ಪ್ರಕಟಿಸಿದ ಮೇಲೆ ಗಮನಿಸಿದೆ. ಹಳೆಯ ಪರಿಷ್ಕರಿಸದ ಕಂತಿನ ಜತೆ ಈ ಕಂತಿನ ಸರದಿ ಬಂದಾಗ ಮಿಕ್ಕ ನಾಮಾವಳಿಗಳನ್ನೂ ಪರಿಷ್ಕರಿಸಬೇಕು. ಸದ್ಯಕ್ಕೆ ಇದೊಂದನ್ನೆ ತಿದ್ದುಪಡಿ ಮಾಡಿರುತ್ತೇನೆ. 'ಪೂಜಿತೆ ವಂದಿತೆ' ಬದಲು 'ಸರ್ವ ವಂದಿತೆ' ಎನ್ನುವುದು ಸೂಕ್ತವಾದೀತೆ?

೬೪. ದೇವರ್ಷಿ-ಗಣ-ಸಂಘಾತ-ಸ್ತೂಯಾಮನಾತ್ಮ-ವೈಭವಾ
ಅಜ್ಞಾನ ಭಂಡಾಸುರನೆ ಅಹಮಿಕೆ ಪಾಪನಾಶಿನಿ ಲಲಿತಾ ಸ್ತುತೆ
ಮಹರ್ಷಿ ನಾರದ ಬೇಡಿಕೆಗೆ ದೇವ ಋಷಿ ಕಂಟಕ ದಾನವ ಹತೆ
ದೇವ ದೇವಿ, ಋಷಿ ಮುನಿ, ದೇವತಾ ಸಮೂಹ ಸರ್ವ ವಂದಿತೆ
ದೇವಿ ಪರಮೋನ್ನತೆ ನಿರ್ಗುಣ ಬ್ರಹ್ಮ ನಿಸ್ಸಂದೇಹದಿ ಸಾಧಿಸುತೆ!

ಧನ್ಯವಾದಗಳೊಂದಿಗೆ ,
ನಾಗೇಶ ಮೈಸೂರು
 

ನಾಗೇಶರೆ,
ದೇವ ದೇವಿ, ಋಷಿ ಮುನಿ, ದೇವತಾ ಸಮೂಹ ಸರ್ವ ವಂದಿತೆ ....ಈ ಸಾಲನ್ನು ಕೆಳಗಿನಂತೆ ಸರಳವಾಗಿ ಮಾರ್ಪಡಿಸಬಹುದೆನಿಸುತ್ತದೆ.
ಸಕಲ ದೇವ ದೇವಿ, ಋಷಿ ಮುನಿ, ದೇವತಾ ಸಮೂಹ ವಂದಿತೆ
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸಲಹೆ ಸಾಲಿಗೂ ಸೂಕ್ತವಾಗಿ ಹೊಂದುತ್ತದೆ. ಹಾಗೆಯೆ ಬದಲಿಸಿದ್ದೇನೆ.

೬೪. ದೇವರ್ಷಿ-ಗಣ-ಸಂಘಾತ-ಸ್ತೂಯಾಮನಾತ್ಮ-ವೈಭವಾ
ಅಜ್ಞಾನ ಭಂಡಾಸುರನೆ ಅಹಮಿಕೆ ಪಾಪನಾಶಿನಿ ಲಲಿತಾ ಸ್ತುತೆ
ಮಹರ್ಷಿ ನಾರದ ಬೇಡಿಕೆಗೆ ದೇವ ಋಷಿ ಕಂಟಕ ದಾನವ ಹತೆ
ಸಕಲ ದೇವ ದೇವಿ, ಋಷಿ ಮುನಿ, ದೇವತಾ ಸಮೂಹ ವಂದಿತೆ
ದೇವಿ ಪರಮೋನ್ನತೆ ನಿರ್ಗುಣ ಬ್ರಹ್ಮ ನಿಸ್ಸಂದೇಹದಿ ಸಾಧಿಸುತೆ!
 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

Submitted by nageshamysore Sat, 08/17/2013 - 07:03

ಶ್ರೀಧರರೆ, ೯೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕವನ ಸಾರ ಪರಿಷ್ಕರಣೆಗೆ ಸಿದ್ದ.

ಲಲಿತಾ ಸಹಸ್ರನಾಮ ೩೪೬ -೩೫೧
______________________________________

೩೪೬. ವಿಜಯಾ 
ದೇವಿ ವಿಜಯಶಾಲಿ ಸರ್ವದಾ, ರಕ್ಕಸಿ ದೃಷ್ಕೃತ್ಯದ ಜತೆ ಯುದ್ದ
ಪ್ರೇಮನುರಾಗ ಬಂಧದಿ ಶಿವನ ಮನಗೆದ್ದ ವಿಜಯಿನಿ ಅನುಬಂಧ
ವಿಜಯದಶಮಿ ದಸರೆ ಗೋಧುಳಿ ಪ್ರಶಸ್ತ ಸಂಜೆ ಜಯ ಶತಃಸಿದ್ದ
ಶ್ರೀ ಚಕ್ರಪೂಜಿತೆ ನಿತ್ಯದೇವಿ ವಿಜಯಾ ರೂಪಿಣಿ ಲಲಿತಾ ಸಮೃದ್ಧ!

೩೪೭. ವಿಮಲಾ 
ಅಪರಿಪೂರ್ಣ ಮಲದ ಅಜ್ಞಾನಿ ಆತ್ಮ, ಪರಮಾತ್ಮದ ಅಭಿವ್ಯಕ್ತಿಗೆ ತಡೆ
ಅಹಂಕಾರದೀ ಅಣವ ಮಲ ಅವಿದ್ಯಾ, ಕೊಳೆಗೊಂದಲಾಂಧಕಾರಕ್ಕೆಡೆ
ಕಲ್ಮಶರಹಿತೆ ದೇವಿ ಜ್ಞಾನಸ್ವರೂಪಿಣಿ, ಧ್ಯಾನಕೆ ಮಲವೆಲ್ಲ ತೊಲಗಿಸುತೆ
ಕಲ್ಮಶವೆಲ್ಲ ನಿರ್ಲಕ್ಷ್ಯ ಜ್ಞಾನಸಂಪಾದನೆ ಸುಭೀಕ್ಷ ನೀಡೆ ವಿಮಲಾ ಲಲಿತೆ!

೩೪೮. ವಂದ್ಯಾ 
ಸಮಸ್ತ ಬ್ರಹ್ಮಾಂಡ ಶಕ್ತಿ ಸ್ವರೂಪಿಣಿ ದೇವಿ, ಜಗ ಸುಸ್ಥಿತಿಗೀವ ಪರಮ ಶಿವ ಶಕ್ತಿ
ಪ್ರತಿಫಲಿತ ದಿವ್ಯಶಕ್ತಿ ತರಂಗ ಸಂಚಯದೆ, ಪ್ರೀತಿಯುಕ್ಕಿಸುವ ವಂದ್ಯಾ ಸ್ಪೂರ್ತಿ
ತರಂಗ ಪ್ರವಾಹಪಥ ಮೆದುಳುಬಳ್ಳಿ ಸಹಸ್ರಾರ-ಕಿರುಕುಹರದಿಂ ಒಳಸೇರುತ
ಆಜ್ಞಾಚಕ್ರದಂತರ್ದೃಷ್ಟಿ ಒಳಗುತ್ಪನ್ನಶಕ್ತಿ ಹಿಂದಲೆಚಕ್ರಸ್ರಾವ ಸಾಧನೆಸಿದ್ದಿಯತ್ತ!

೩೪೯. ವಂದಾರು-ಜನ-ವತ್ಸಲಾ 
ಪ್ರೇಮ ಭಾವನೆ ಸಹಜ ಕಾಳಜಿ ಪ್ರೀತಿ ತರಂಗವಾಗುವ ನಿಜ
ಹೊರರಹೊಮ್ಮಿಸುತ ಶರೀರ ಪ್ರತಿಫಲಿಸಿ ಆಂತರ್ಯ ಖನಿಜ
ದೇವಿ ಕಾಳಜಿ ಪ್ರೀತಿ ಪುಷ್ಪಸುವಾಸನಾಂತರಂಗವಾಗಿ ಸಕಲ
ನಿರಂತರ ವಿಮಲ ಪ್ರೇಮದಾಯಿನಿ ವಂದಾರು ಜನ ವತ್ಸಲಾ!

೩೫೦. ವಾಗ್ವಾದಿನೀ 
ವಾಣಿಯ ಮೂಲವಾಗಿ ದೇವಿ ತಾನಾಗುತ ವಾಗ್ವಾದಿನೀ
ಸರಸ್ವತೀ ದೇವಿಗಿತ್ತಳು ಮಾತಿನಧಿದೇವತೆಯಾ ವಾಣಿ
ಪ್ರಚೋದಿಸುವಳು ಮಾತೆ ತಾನೆ ಮನದಿ ಮಾತಾಗುತೆ
ಮಾತಿಂದಲೆ ಮನ ಗೆಲ್ಲುವ ತಂತ್ರದಿ ಲಲಿತೆ ಜಗನ್ಮಾತೆ!

೩೫೧. ವಾಮಕೇಶೀ 
ಶೈವ ಸಿದ್ದಾಂತ ದ್ವಾದಶಾಷ್ಟ ತಂತ್ರಗಳಲೊಂದು ವಾಮಕೇಶ
ವಾಮಕೇಶ್ವರನರ್ಧಾಂಗಿ ವಾಮಕೇಶೀ ಆರಾಧನೆಗಿಹ ಪರುಷ
ಅರ್ಧನಾರಿ ವಾಮದಿ ಹರಡಿದ ರಮಣೀಯ ಸುಲಲಿತ ಕೇಶ
ಸುಂದರ ಲಕ್ಷ್ಮೀ ರೂಪದಿ ಭೈರವ ಭೈರವಿಯಂತೆ ಜತೆಗೆ ಈಶ!

ವಾಮಕವೆನೆ-ಮಾನವ ಈಶ್ವರ-ಒಡೆಯ ಉಧ್ಭವ ವಾಮಕೇಶ್ವರ
ಶ್ರೀ ವಿದ್ಯಾ ಆರಾಧನೆ ಶಕ್ತಿಯಂತರಂಗಪೂಜಾ ಮಹತ್ತರ ವಿವರ
ಜಗನ್ಮೂಲ ವಾಮಕೇಶ್ವರಿ ಶಿವನಿಂ ಶಕ್ತಿಗುಪದೇಶ ಷೋಡಶವಿದ್ಯೆ
ಸೂಕ್ಷ್ಮಸ್ತರ ರಹಸ್ಯ ಅರುಹಿ ವಾಮಕೇಶ್ವರ ತಂತ್ರ ಸಿದ್ದಿಯ ಶ್ರದ್ದೆ!

ವಿದ್ಯಾರೂಪಿ ರಕ್ಷಕ 'ಹ್ರೀಂ' ಬೀಜಾಕ್ಷರ, ಶಿವ ಅಗ್ನಿ ಮಾಯಾ ಬಿಂದು ಸಂಕರ
ಶಿವ ಬೀಜ 'ಹ', ಅಗ್ನಿ 'ರ', ಮಾಯಾ 'ಈ' ಬಿಂದು ಸೇರೆ 'ಹ್ರೀಂ' ಬೀಜಾಕ್ಷರ
ಅಂತೆಯೆ ಅನಾವರಣ ಶಕ್ತಿಯುತ ಬೀಜಾಕ್ಷರಸಂಕುಲ ಪಡೆದೆ ವಾಮೇಶ್ವರೀ
ವಾಮಹಸ್ತಪೂಜಕರಿಗಧಿದೇವತೆ ವಾಮದೇವ ಹಿಮ್ಮುಖಬ್ರಹ್ಮವನರಿವಪರಿ!

 
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ಶ್ರೀಧರರೆ,  ನೀವು ಹುಡುಕುವ ಮೊದಲೆ ಒಂದೆರಡು ಕಣ್ಗಾಣಿಸಿದ ಕಿರು ತಿದ್ದುಪಡಿ ಮಾಡಿದ್ದೇನೆ ಈ ಕೆಳಗಿನೆರಡು ನಾಮಕ್ಕೆ (ಒಂದು 'ರಕ್ಕಸಿ' ಪದ ಮತ್ತೊಂದು 'ರ' ಅಕ್ಷರ ಎರಡು ಬಾರಿ ಟೈಪಿಸಿಬಿಟ್ಟಿತ್ತು)

೩೪೬. ವಿಜಯಾ 
ದೇವಿ ವಿಜಯಶಾಲಿ ಸರ್ವದಾ, ರಾಕ್ಷಸ ದೃಷ್ಕೃತ್ಯದ ಜತೆ ಯುದ್ದ
ಪ್ರೇಮನುರಾಗ ಬಂಧದಿ ಶಿವನ ಮನ ಗೆದ್ದ ವಿಜಯಿನಿ ಅನುಬಂಧ
ವಿಜಯದಶಮಿ ದಸರೆ ಗೋಧುಳಿ ಪ್ರಶಸ್ತ ಸಂಜೆ ಜಯ ಶತಃ ಸಿದ್ದ
ಶ್ರೀ ಚಕ್ರಪೂಜಿತೆ ನಿತ್ಯದೇವಿ ವಿಜಯಾ ರೂಪಿಣಿ ಲಲಿತಾ ಸಮೃದ್ಧ!

೩೪೯. ವಂದಾರು-ಜನ-ವತ್ಸಲಾ 
ಪ್ರೇಮ ಭಾವನೆ ಸಹಜ ಕಾಳಜಿ ಪ್ರೀತಿ ತರಂಗವಾಗುವ ನಿಜ
ಹೊರ ಹೊಮ್ಮಿಸುತಾ ಶರೀರ ಪ್ರತಿಫಲಿಸಿ ಆಂತರ್ಯ ಖನಿಜ
ದೇವಿ ಕಾಳಜಿ ಪ್ರೀತಿ ಪುಷ್ಪಸುವಾಸನಾಂತರಂಗವಾಗಿ ಸಕಲ
ನಿರಂತರ ವಿಮಲ ಪ್ರೇಮದಾಯಿನಿ ವಂದಾರು ಜನ ವತ್ಸಲಾ!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 

ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು ಓದುಗರು ಕಾಣುತ್ತಾರೆ ಎಂದುಕೊಂಡೆ. ಆದರೆ ಕವಿಯೇ ಅದನ್ನು ಕಂಡಿರುವುದು ಸಂತೋಷದ ವಿಷಯವಲ್ಲವೇ ನಾಗೇಶರೆ. ೩೪೬. ವಿಜಯಾದಲ್ಲಿ ಒಂದು ಶಬ್ದ ಹೆಚ್ಚು ಸೂಕ್ತವೆನಿಸಿತು. ಅದಕ್ಕಾಗಿ ಅದೊಂದನ್ನು ಬದಲಿಸಿದರೆ ಸರಿಹೋಗುತ್ತದೆ. ೩೪೯. ಹೊರರಹೊಮ್ಮಿಸುತಾ=ಹೊರ ಹೊಮ್ಮಿಸುತಾ ಎಂದು ಅದನ್ನು ನೀವಾಗಲೇ ಸರಿಪಡಿಸಿದ್ದೀರ.

೩೪೬. ವಿಜಯಾ
ದೇವಿ ವಿಜಯಶಾಲಿ ಸರ್ವದಾ, ರಾಕ್ಷಸ ದೃಷ್ಕೃತ್ಯದ ಜತೆ ಯುದ್ದ
ರಾಕ್ಷಸ=ರಕ್ಕಸ ಮಾಡಿದರೆ ರಾಕ್ಷಸ ಎಂದು ಸ್ವತಂತ್ರವಾಗಿ ಅಥವಾ ರಕ್ಕಸ ದೃಷ್ಕೃತ್ಯದ ಸಂಯುಕ್ತ ಪದ ಎರಡಕ್ಕೂ ಅನ್ವಯಿಸುತ್ತದೆ. ರಕ್ಕಸ ಎಂದಾಗ ಅದು ರಾಕ್ಷಸಿಯರನ್ನೂ ಒಳಗೊಳ್ಳುತ್ತದೆಯಲ್ಲವೇ :)
ಪ್ರೇಮನುರಾಗ ಬಂಧದಿ ಶಿವನ ಮನ ಗೆದ್ದ ವಿಜಯಿನಿ ಅನುಬಂಧ
ವಿಜಯದಶಮಿ ದಸರೆ ಗೋಧುಳಿ ಪ್ರಶಸ್ತ ಸಂಜೆ ಜಯ ಶತಃ ಸಿದ್ದ
=ವಿಜಯದಶಮಿ ದಸರೆ ಗೋದೂಳಿ ಸಂಜೆ ಪ್ರಶಸ್ತ, ಜಯ ಶತಃ ಸಿದ್ದ
ಶ್ರೀ ಚಕ್ರಪೂಜಿತೆ ನಿತ್ಯದೇವಿ ವಿಜಯಾ ರೂಪಿಣಿ ಲಲಿತಾ ಸಮೃದ್ಧ!
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ನಾಗೇಶರೆ, ಎಲ್ಲಾ ಕವನಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ :) ; ವಿಮಲಾ ಒಂದೇ ಅದಕ್ಕೆ ಅಪವಾದ :(

೩೪೭. ವಿಮಲಾ
ಅಪರಿಪೂರ್ಣ ಮಲದ ಅಜ್ಞಾನಿ ಆತ್ಮ, ಪರಮಾತ್ಮದ ಅಭಿವ್ಯಕ್ತಿಗೆ ತಡೆ
ಅಪರಿಪೂರ್ಣ ಮಲದ ಅಜ್ಞಾನಿ ಆತ್ಮ = ಇದನ್ನು ಒಟ್ಟಾಗಿ ಓದಿದಾಗ ವ್ಯತಿರಿಕ್ತವಾದ ಅರ್ಥವನ್ನು ಕೊಡುತ್ತದೆ. ಅಪರಿಪೂರ್ಣವಾದ ಜ್ಞಾನವೇ ಮಲ ಅಥವಾ ಅಜ್ಞಾನವೇ ಮಲವಾಗಿದೆ (ಕೊಳೆಯಾಗಿದೆ). ಈ ಕೊಳೆ ತೊಲಗಿಸಿದಾಗ ಮನಸ್ಸು ನಿರ್ಮಲವಾಗಿ ಆತ್ಮಸಾಕ್ಷಾತ್ಕಾರವಾಗುತ್ತದೆ. ಈ ಹಿನ್ನಲೆಯಲ್ಲಿ ಕೆಳಗಿನ ಸಾಲುಗಳನ್ನೂ ಅಲ್ಪ ಬದಲಾವಣೆ ಮಾಡಬೇಕಾಗಬಹುದು.
ಅಹಂಕಾರದೀ ಅಣವ ಮಲ ಅವಿದ್ಯಾ, ಕೊಳೆಗೊಂದಲಾಂಧಕಾರಕ್ಕೆಡೆ
ಇಲ್ಲಿ ಕೊಳೆ ಶಬ್ದ ಬೇಕಾಗಿಲ್ಲವೆನಿಸುತ್ತದೆ?
ಕಲ್ಮಶರಹಿತೆ ದೇವಿ ಜ್ಞಾನಸ್ವರೂಪಿಣಿ, ಧ್ಯಾನಕೆ ಮಲವೆಲ್ಲ ತೊಲಗಿಸುತೆ
ಕಲ್ಮಶವೆಲ್ಲ ನಿರ್ಲಕ್ಷ್ಯ ಜ್ಞಾನಸಂಪಾದನೆ ಸುಭೀಕ್ಷ ನೀಡೆ ವಿಮಲಾ ಲಲಿತೆ!
ಕಲ್ಮಶವೆಲ್ಲ ನಿರ್ಲಕ್ಷ್ಯ =ಕಲ್ಮಶವೆಲ್ಲ ನಿರ್ಮೂಲ?, ಸುಭೀಕ್ಷ =ಸುಭಿಕ್ಷ ಎಂದರೆ ಸಮೃದ್ಧಿ (ದುರ್ಭಿಕ್ಷ ಎಂದರೆ ಬರಗಾಲ); ಈ ಪದ ಇಲ್ಲಿ ಅಷ್ಟು ಉಚಿತವೆನಿಸಲಾರದು. ಒಟ್ಟಾರೆಯಾಗಿ ಈ ಕವನವನ್ನು ಪುನಃ ಹೊಸದಾಗಿ ಹೊಸೆಯ ಬೇಕಾಗುತ್ತದೇನೋ ನಾಗೇಶರೆ!

೩೫೧. ವಾಮಕೇಶೀ -ನಾಗೇಶರೆ, ಇಷ್ಟು ಕ್ಲಿಷ್ಟವಾದದ್ದನ್ನು ಅದ್ಭುತವಾಗಿ ನಿಮ್ಮ ಪದಗಳಲ್ಲಿ ಸೆರೆಹಿಡಿದಿದ್ದೀರಿ ಆದರೆ ೩೪೭. ವಿಮಲಾ ಎನ್ನುವ ಸರಳ ವಿವರಣೆಯಿದ್ದದ್ದನ್ನು ಪದಗಳಲ್ಲಿ ಸೂಕ್ತವಾಗಿ ಬಂಧಿಸುವಲ್ಲಿ ಅದೇಕೋ ವಿಫಲರಾಗಿದ್ದೀರ ಎನ್ನುವುದೇ ಸೋಜಿಗದ ಸಂಗತಿಯಾಗಿದೆ. ಈ ಕವನವಂತೂ ಅತ್ಯುತ್ತಮವಾಗಿ ೩೫೧. ವಾಮಕೇಶೀ ನಾಮದ ಸಾರವನ್ನು ರಸವತ್ತರವಾಗಿ ಹಿಡಿದಿಟ್ಟಿದೆ, ಅಭಿನಂದನೆಗಳು ನಿಮಗೆ.
:
:
೩) ನೇಪಂಕ್ತಿಯ ಕಡೆಯ ಸಾಲು
ವಾಮಹಸ್ತಪೂಜಕರಿಗಧಿದೇವತೆ ವಾಮದೇವ ಹಿಮ್ಮುಖಬ್ರಹ್ಮವನರಿವಪರಿ!
ವಾಮದೇವ ಹಿಮ್ಮುಖಬ್ರಹ್ಮವನರಿವಪರಿ - ವಾಮದೇವ ಎಂದರೆ ಶಿವನ ಹಿಂದೆಲೆ ಆದರೆ ಅದು ಹಿಮ್ಮುಖಬ್ರಹ್ಮವೆನ್ನುವುದು ಸೂಕ್ತವಾಗದು. ಹಾಗಾಗಿ ಈ ಪದಗುಚ್ಛವು ಉದ್ದೇಶಿತ ಅರ್ಥವನ್ನು ಕೊಡುವುದಿಲ್ಲ. ಪರಬ್ರಹ್ಮವು ನಾಮರೂಪಗಳಿಗೆ ಅತೀತವಾಗಿರುತ್ತದೆ, ವಾಮದೇವಿಯು ಜಗತ್ತಿನಲ್ಲಿ ನಾಮರೂಪಗಳ ಭೇದವನ್ನುಂಟು ಮಾಡುವ ಶಕ್ತಿಯುಳ್ಳವಳು. ಈ ಹಿನ್ನಲೆಯಲ್ಲಿ ನೀವು ಹೇಳಿರುವುದು ಸರಿಯಾಗಿದ್ದರೂ ಸಹ ಉದ್ದೇಶಿತ ಅರ್ಥವನ್ನು ಕೊಡುವುದಿಲ್ಲ. ವಾಮದೇವಿಯನ್ನು ಪೂಜಿಸುವುದರಿಂದ ಆಕೆಯು ನಾಮರೂಪಭೇದಗಳನ್ನು ತೊಲಗಿಸಿ ಬ್ರಹ್ಮಸಾಕ್ಷಾತ್ಕಾರವನ್ನು ಉಂಟು ಮಾಡುತ್ತಾಳೆ. ಇಲ್ಲಿ ನೀವು ಸೂಚಿಸಿರುವ ಅರ್ಥಕ್ಕೂ ಇದಕ್ಕೂ ಸೂಕ್ಷ್ಮವಾದ ವ್ಯತ್ಯಾಸವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬದಲಾವಣೆ ಮಾಡಿದರೆ ಕವನವು ನಾಮದ ವ್ಯಾಖ್ಯಾನಕ್ಕೆ ಪೂರಕವಾಗಿರುತ್ತದೆ.
ಬೇಸರಿಸದೇ ಸೂಕ್ತ ತಿದ್ದುಪಡಿಗಳನ್ನು ಮಾಡುತ್ತಿರುವ ನಿಮ್ಮ ತಾಳ್ಮೆಯ ಗುಣಕ್ಕೆ ನನ್ನ ನಮನಗಳು :)
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ಪರಿಷ್ಕರಿಸಿದ ರೂಪ:

೩೪೬. ವಿಜಯಾ 
ದೇವಿ ವಿಜಯಶಾಲಿ ಸರ್ವದಾ, ರಕ್ಕಸ ದೃಷ್ಕೃತ್ಯದ ಜತೆ ಯುದ್ದ
ಪ್ರೇಮನುರಾಗ ಬಂಧದಿ ಶಿವನ ಮನಗೆದ್ದ ವಿಜಯಿನಿ ಅನುಬಂಧ
ವಿಜಯದಶಮಿ ದಸರೆ ಗೋಧೂಳಿ ಸಂಜೆ ಪ್ರಶಸ್ತ, ಜಯ ಶತಃಸಿದ್ದ
ಶ್ರೀ ಚಕ್ರಪೂಜಿತೆ ನಿತ್ಯದೇವಿ ವಿಜಯಾ ರೂಪಿಣಿ ಲಲಿತಾ ಸಮೃದ್ಧ!

೩೪೭. ವಿಮಲಾ 
ಜ್ಞಾನಾರ್ಜನೆಗೆ ತೊರೆಯಬೇಕು ಮೋಹ, ಜತೆಗೆ ಅಹಂಕಾರದ ದೋಷ
ಗೊಂದಲಾಂಧಕಾರಕೆಡೆ ಮಾಡುವ, ಅಜ್ಞಾನದ ಮೂಲವಾಗಿಹ ಕಲ್ಮಶ
ಅಜ್ಞಾನಕೆಡೆಯೆಲ್ಲಿ ಲಲಿತಾ ಬ್ರಹ್ಮದಿ, ದೇವಿ ಜ್ಞಾನಸ್ವರೂಪಿಣಿ ಅಮಲ
ಧ್ಯಾನದಿ ಜ್ಞಾನ ಸಂಪಾದಿಸುವವರ, ಕಲ್ಮಶ ನಿವಾರಿಸುವಳು ವಿಮಲ!

ಬಹುಶಃ ಮನಸಿನ ಅಣವ ಮಲವಿನ್ನು ಅಮಲವಾಗುವತ್ತ ನಡೆದಿಲ್ಲವೆಂದು, ಕಾಡಿಸಿರಬೇಕು ವಿಮಲ :-) ಮೂಡು ತುಂಬಾ ಮುಖ್ಯವೆಂದು ಕಾಣುತ್ತದೆ!

೩೫೧. ವಾಮಕೇಶೀ  (3)
ವಿದ್ಯಾರೂಪಿ ರಕ್ಷಕ 'ಹ್ರೀಂ' ಬೀಜಾಕ್ಷರ, ಶಿವ ಅಗ್ನಿ ಮಾಯಾ ಬಿಂದು ಸಂಕರ
ಶಿವ ಬೀಜ 'ಹ', ಅಗ್ನಿ 'ರ', ಮಾಯಾ 'ಈ' ಬಿಂದು ಸೇರೆ 'ಹ್ರೀಂ' ಬೀಜಾಕ್ಷರ
ಅಂತೆಯೆ ಅನಾವರಣ ಶಕ್ತಿಯುತ ಬೀಜಾಕ್ಷರಸಂಕುಲ ಪಡೆದೆ ವಾಮೇಶ್ವರೀ
ವಾಮಹಸ್ತರಿಗಧಿದೇವತೆ ನಾಮರೂಪಭೇದ ತೊಲಗಿಸಿ ಬ್ರಹ್ಮವರಿಸುವಪರಿ! 

ನೀವಷ್ಟು ಸಹನೆಯಿಂದ ಓದಿ ತಿದ್ದುವಾಗ, ನನ್ನ ತಿದ್ದುವಿಕೆ ದೊಡ್ಡದೇನಲ್ಲ ಬಿಡಿ. ಅಲ್ಲದೆ ಸಂವಹನದಲ್ಲಿ (ಕಮ್ಯೂನಿಕೇಶನ್) ಹಂತಗಳು ಹೆಚ್ಚಿದಷ್ಟು, ತಪ್ಪರ್ಥ, ವಸ್ತು ನಷ್ಟ ಅಥವಾ ರೂಪಾಂತರವಾಗುವುದು ಸಹಜ. ಆದರೆ ನಿಮ್ಮೊಬ್ಬರ ವಿಶ್ಲೇಷಣೆ ಸತ್ಯಕ್ಕೆ ಅತ್ಯಂತ ಹತ್ತಿರವಿರುತ್ತದೆ - ನೀವೆ ಅನುವಾದಿಸುತ್ತಿರುವುದರಿಂದ ಮತ್ತು ನೀವೆ ಈ ಸಂವಹನದ ಮೊದಲ ಕೊಂಡಿ ಆಗಿರುವುದರಿಂದ. ಅದಕ್ಕೆ ನಿಮ್ಮ ಸಲಹೆಯಂತೆ ತಿದ್ದುವುದು ಅತಿ ಮುಖ್ಯ. ಜತೆಗೆ ಹಾಳು ಕವಿ (ಪಿ) ಚೇಷ್ಟೆಗಳು ಕೆಲವೊಮ್ಮೆ ಕಲ್ಪನೆ ಲಂಗು ಲಗಾಮಿಲ್ಲದೆ ಹರಿಸುವುದರಿಂದ ನಿಮ್ಮ ಹುಷಾರಿ ಪೋಲಿಸುಗಾರಿಕೆ ಇರದಿದ್ದರೆ, ತಪ್ಪರ್ಥಗಳು ನುಸುಳುವ ಸಾಧ್ಯತೆಯೆ ಹೆಚ್ಚು!

ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
 
 

ನಾಗೇಶರೆ,
ಕಪಿ ಎಂದರೆ ಸೂರ್ಯನೆನ್ನುವ ಎನ್ನುವ ಅರ್ಥವೂ ಇದೆ. ಅದು ಹೇಗೆಂದರೆ "ಕಪ್ಯಾಸಂ ಪಿಬತೀತಿ ಕಪಿಃ" ಅಂದರೆ ನೀರನ್ನು ಹೀರುವವನು ಕಪಿ. ಹಾಗಾಗಿ ನೀವು ಕಪಿ(ವಿ) ಅಥವಾ ಕವಿ ಮತ್ತು ರವಿ ಎರಡೂ ಆಗಿದ್ದೀರ :) ಹೊಸ ಪ್ರಯೋಗಗಳನ್ನು ನೀವು ಮಾಡಿದಾಗಲೇ ಅದರಲ್ಲಿರುವ ದೋಷಗಳನ್ನು ಹುಡುಕುವ ಪ್ರಯತ್ನದಲ್ಲಿ ನನಗೇ ಅನೇಕ ವಿಷಯಗಳು ಹೊಳೆಯುವಂತಾಗುತ್ತದೆ ಮತ್ತು ಹೇಳಿರುವ ವಿಷಯಗಳ ಬಗೆಗೆ ಸ್ಪಷ್ಟತೆಯುಂಟಾಗುತ್ತದೆ. ನಿಮ್ಮ ಪ್ರಯೋಗಗಳು ಮುಂದುವರೆಯಲಿ; ಇಲ್ಲದಿದ್ದರೆ ಏಕತಾನತೆಯಿಂದ ಬೋರಾಗುತ್ತದೆ. ಇರಲಿ, ಈಗ ವಿಷಯಕ್ಕೆ ಬರೋಣ; ಈಗ ನಿಮ್ಮ ಮನಸ್ಸು ನಿರ್ಮಲವಾಗಿ ವಿಮಲವಾಗಿರುವುದರಿಂದ ಎಲ್ಲಾ ಕವನಗಳು ಬಹಳ ಸೂಕ್ತವಾಗಿ ಮತ್ತು ಅರ್ಥವತ್ತಾಗಿ ಮೂಡಿ ಬಂದಿವೆ. ಈ ಸುಧಾರಿತ ರೂಪಗಳನ್ನೇ ಅಂತಿಮಗೊಳಿಸಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಅಮಲವಾದ ವಿಮಲೆಯ ಸಮೇತ ಅಂತಿಮ ಅವೃತ್ತಿ ಹಾಕಿದ್ದೇನೆ :-)
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು