(Technical article ಭಾಗ - ೧) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ

(Technical article ಭಾಗ - ೧) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ

 

ಈ ಲೇಖನವನ್ನು ೩ ಭಾಗಗಳಲ್ಲಿ ಬರೆಯಲಾಗಿದೆ:

೧. ಮಾಹಿತಿ ಶೇಖರಣ ಉಪಕರಣಗಳು (Information Storage devices) ಮತ್ತು ಸರ್ವರ್ ಗಳು (Servers).

೨. ಮಾಹಿತಿ ಕೇಂದ್ರಗಳು (Datacenters) ಮತ್ತು ಇಂಟರ್ನೆಟ್ (Internet).

೩. ಆನ್-ಲೈನ್ (Online) ಎಂದರೆ ಏನು? ಮತ್ತು ಒಂದು ಉದಾಹರಣೆ: ಸಾರಿಗೆ ಸಂಸ್ಥೆಯ ಬಸ್ ಚೀಟಿಯನ್ನು ಇಂಟರ್ನೆಟ್ ಮೂಲಕ ಕಾದಿರಿಸುವುದು ಹೇಗೆ?

 

ನಾನು ೮ನೇ ತರಗತಿಯಲ್ಲಿದ್ದಾಗ ತಂದೆಯವರೊಡನೆ ಆಗಾಗ್ಗೆ ಅವರ ಬ್ಯಾಂಕಿಗೆ ಹೋಗುತ್ತಿದ್ದೆ. ದೈತ್ಯಾಕಾರದ ಲೆಕ್ಕಪುಸ್ತಕಗಳನ್ನು ಬ್ಯಾಂಕಿನ ಖಜಾನೆಗಳಿಂದ ಹೊತ್ತು ತಂದು ಅವುಗಳಲ್ಲಿ ಬರೆದಿಟ್ಟ ಪ್ರತಿದಿನದ ಆಯ-ವ್ಯಯಗಳನ್ನು ಬಾಯಿ-ಕೈಗಳ ಸಹಾಯದಿಂದ ಕೂಡುವ-ಕಳೆಯುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಬಹುತೇಕ ಹಾಗಿಲ್ಲ. ಮಾಹಿತಿ ತಂತ್ರಜ್ಞಾನವು ಬ್ಯಾಂಕಿಗೆ ಕಾಲಿಟ್ಟೊಡನೆ ಮಾಹಿತಿಯು ಕಂಪ್ಯೂಟರ್ ಗಳಲ್ಲಿ ವಾಸಿಸಲಾರಂಭಿಸಿದೆ. ನಮ್ಮ ತಂದೆಯವರು ಮಾಡುತ್ತಿದ್ದ ಲೆಕ್ಕಗಳನ್ನು ಈಗ ಕಂಪ್ಯೂಟರ್ ಮಾಡಲಾರಂಭಿಸಿದೆ. ಹೀಗೆ ಮಾಹಿತಿ ತಂತ್ರಜ್ಞಾನವು ಸಾರಿಗೆ ಸಂಸ್ಥೆ, ನೀರು/ವಿದ್ಯುತ್ ಸರಬರಾಜು ಸಂಸ್ಥೆ, ಹಣಕಾಸು ಸಂಸ್ಥೆ, ವಿದ್ಯಾನಿಲಯ ಮುಂತಾದ ದೈನಂದಿನ ವ್ಯವಹಾರಿಕ ಕ್ಷೇತ್ರಗಳನ್ನು ಆವರಿಸಿದೆ. ಈ ಮಾಹಿತಿ ತಂತ್ರಜ್ನಾನವು ಒಂದು ತಂತ್ರಜ್ಞಾನವೂ ಹೌದು, ಒಂದು ಕ್ರಾಂತಿಯೂ ಹೌದು....

 


ಭಾಗ - ೧

************

ನಮಗೆ ಬೇಕಾದ ಮಾಹಿತಿ ಎಲ್ಲಿರುತ್ತದೆ?
ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ನಾವು ಮಾಹಿತಿಯನ್ನು ದಾಖಲಿಡುವ ಹಾಗು ದಾಖಲಿಸುವ ರೀತಿ, ಸಂಗ್ರಹಿಸುವ ರೀತಿ, ಮತ್ತೊಬ್ಬರಿಗೆ ಕಳುಹಿಸುವ ರೀತಿ, ಮತ್ತೊಬ್ಬರಿಂದ ಪಡೆಯುವ ರೀತಿ - ಇವುಗಳಲ್ಲಿ ಅಚ್ಚರಿ ಮೂಡಿಸುವಷ್ಟು ಬದಲಾವಣೆಯಾಗಿದೆ. ಈಗ ಪುಸ್ತಕಗಳ ಬಳಕೆ ಕಡಿಮೆಯಾಗಿದೆ. ಬ್ಯಾಂಕಿನಲ್ಲಿರುವ ನಮ್ಮ ಹಣದ ಮಾಹಿತಿಯಾಗಿರಬಹುದು, ರೈಲಿನ ಟಿಕೆಟ್ ಬಗ್ಗೆ ಮಾಹಿತಿಯಾಗಿರಬಹುದು, ಕಾಲೇಜಿನ ವಿದ್ಯಾರ್ಥಿಗಳಿಗೆ ಪಠ್ಯದ ಮಾಹಿತಿಯಾಗಿರಬಹುದು, ನಮ್ಮ ನೀರು ವಿದ್ಯುತ್ ಬಳಕೆಯ ಮಾಹಿತಿಯಾಗಿರಬಹುದು, ನಮ್ಮ ಸಾಲದ ಮರುಪಾವತಿಯ ಮಾಹಿತಿಯಾಗಿರಬಹುದು. ಕೋಟ್ಯಾಂತರ ಜನರ ಇಂಥಹ ನಾನಾ ಬಗೆಯ ಮಾಹಿತಿಗಳನ್ನು ಸಂಗ್ರಹಿಸಿ ಇಡಲು ಉಪಯೋಗಿಸುವ ಕಂಪ್ಯೂಟರ್ ಗಳನ್ನು ಶೇಖರಣ ಉಪಕರಣಗಳು (Storage devices) ಎಂದು ಕರೆಯುತ್ತಾರೆ.

ಪ್ರತಿಯೊಂದು ಸಂಸ್ಥೆ - ಬ್ಯಾಂಕ್, ವಿದ್ಯುತ್/ನೀರು ಸರಬರಾಜು ಸಂಸ್ಥೆ, ಸಾರಿಗೆ  ಸಂಸ್ಥೆ, ಹಣಕಾಸು ಸಂಸ್ಥೆ, ವಿದ್ಯಾನಿಲಯ - ತನ್ನದೇ ಆದ ಶೇಖರಣ ಉಪಕರಣಗಳನ್ನು ಹೊಂದಿರುತ್ತದೆ ಹಾಗು ತಮ್ಮ ಗ್ರಾಹಕರಿಗೆ ಬೇಕಾದ ಮಾಹಿತಿಯನ್ನು ಇವುಗಳಲ್ಲಿ ಶೇಖರಿಸಿಡಲಾಗುತ್ತದೆ. ಇಎಂಸಿ2 (EMC2), ಸಿಸ್ಕೋ (Cisco), ಟೋಶಿಬಾ (Toshiba) ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

ಸರ್ವರ್ ಎಂದರೇನು?
ಶೇಖರಿಸಲ್ಪಟ್ಟಿರುವ ಅಗಾಧ ಪ್ರಮಾಣದ ಮಾಹಿತಿಯನ್ನು ಕ್ಷ್ಣಣದಲ್ಲಿ ಹುಡುಕಿ ಸಂಸ್ಥೆಯ ವ್ಯವಹಾರಕ್ಕೆ ಸೂಕ್ತವಾದ ರೀತಿಯಲ್ಲಿ ಪರಿಶ್ಕರಿಸಲು ಸರ್ವರ್ ಎಂಬ ಬಲಶಾಲಿಯಾದ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.  ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಸರ್ವರ್ ಗಳನ್ನು ಹೊಂದಿರುತ್ತದೆ. ಈ ಸರ್ವರ್ ಗಳೇ ಶಾನಭಾಗರು, ಶೇಖರಣ ಉಪಕರಣಗಳೇ ಪುಸ್ತಕಗಳು !  ಎಚ್-ಪಿ (HP), ಐಬಿಎಂ (IBM), ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

ದಯವಿಟ್ಟು ಮುಂದಿನ ಸಂಚಿಕೆಗಾಗೆ ನಿರೀಕ್ಷಿಸಿ ....
Rating
No votes yet

Comments