ವ್ಯವಸ್ಥೆ - ಲಕ್ಷ್ಮೀಕಾಂತ ಇಟ್ನಾಳ

ವ್ಯವಸ್ಥೆ - ಲಕ್ಷ್ಮೀಕಾಂತ ಇಟ್ನಾಳ

ವ್ಯವಸ್ಥೆ  

   
'ಅಪ್ಪನ ನೆರಳು ಸ್ವಲ್ಪ ಮೈಮೇಲೆ ಕೆಡವಿಕೋ,  .... ಹಾದಿಗೆ ಬಂದರೂ ಬಂದೀಯಾ'
ತಂಗಿಯನ್ನು 'ಸಣಮಂತ'  ಮಾಡುತ್ತ ಅವ್ವ ಬಡಕೋತಿದ್ದಳು,
.... ನಮ್ಮ ಉಡಾಳತನಕ್ಕೆ,,
ಅವ್ವ ನೀಡುತ್ತಿದ್ದ ದಿವ್ಯೌಷಧೀಯ ಸಲಹೆ ಅದು!

ಅಪ್ಪ ಕೈ ಹಿಡಿದು ನಡೆಸುತ್ತಿದ್ದರೆ, ಅವನ ನೆರಳಲ್ಲೇ ಒಂದಾಗುತ್ತಿದ್ದೆ,
ಅಂವ ಬಯಲಾಟದ ರಾಗಗಳನ್ನು ತನಗಷ್ಟೆ ಕೇಳುವಂತೆ ಗುಣಿಗುಣಿಸುತ್ತಿದ್ದರೂ,
ನಾನೂ ಕಿವಿಯಾಗುತ್ತಿದ್ದೆ, , ....ಅಂವ ದನಿಯಾಗುತ್ತಿದ್ದ,
ನಾನೂ ದನಿಯಾದರೆ ಮಾತ್ರ ...ಕಿವಿದೆರೆದು ಕೇಳುತ್ತಿದ್ದ,.... ತಿದ್ದುತ್ತಿದ್ದ,
'ಅದನ್ ಇನ್ನೊಮ್ಮೆ ಹಾಡಲಾ'  ಎಂಬ ಹಠಕ್ಕೆ ಮತ್ತೆ ಇಂಪುಗರೆಯುತ್ತಿದ್ದ,
ಎಂತಹ ಬಿರುಸು ಕೈಗಳಲ್ಲೂ ...ಮೃದು ಮನಸ್ಸು ಅವನದು, ...
....ದುಡಿಯುತ್ತಿದ್ದ ... ಕಾಯಕ ಯೋಗಿ.....ಈಗ ನೆನಪಷ್ಟೆ.,
 ಅವನ ನೆರಳಲ್ಲಿ ನಡೆದಿದ್ದ ಹೆಜ್ಜೆಗಳಿಗೆ .... ಸಿಕ್ಕಿದ್ದೆಲ್ಲ ಬಂಗಾರವೇ!

ದಿನಗಳುರುಳಿ,  
ಬದಲಾದ ವ್ಯವಸ್ಥೆಯಲ್ಲೀಗ
ಮಗನೊಡನೆ ಹೊರಟರೆ,
ಭಯ ಪಡುತ್ತೇನೆ!
 
ಅದೇ....ಹಾಗಾಗದಂತೆ..... ಎಚ್ಚರ ವಹಿಸುತ್ತೇನೆ,
ದಕ್ಷಿಣೋತ್ತರವೇ ನಿಂತು ಮಾತಾಡಿಸುತ್ತೇನೆ!

Rating
No votes yet

Comments

Submitted by H A Patil Tue, 05/26/2015 - 19:56

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ವ್ಯವಸ್ಥೆ ಕವನ ಓದಿದೆ ಅಂದಿನ ವ್ಯವಸ್ಥೆಯಿಂದ ಇಂದಿನ ವ್ಯವಸ್ಥೆಯ ವರೆಗೆ ಬಿಚ್ಚಿಕೊಳ್ಳುವ ಕವನ ಆಗಿನ ಅಪ್ಪ ಅವ್ವ ಅಣ್ಣ ತಂಗಿಯರ ಬಾಂಧವ್ಯದ ಕುರಿತು ವಿವರಸುತ್ತ ನಿರಕ್ಷರಿಗಳಾದರೂ ಅವರ ಜೀವನ ಮೌಲ್ಯಗಳು ಸರಳತೆ ಅವರ ಬದುಕೆ ಒಂದು ರೀತಿಯ ಅದರ್ಶವನ್ನು ಬಿಂಬಿಸುವಂತಹುದು, ’ ದಿನಗಳುರುಳಿ ––––––ದಕ್ಷಿಣೋತ್ತರವೇ ನಿಂತು ಮಾತಾಡಿಸುತ್ತೇನೆ ವರ್ತಮಾನದ ತಂದೆಯ ಸ್ತಿತಿಯನ್ನು ಬಿಂಬಿಸುವ ಬಹಳ ಅರ್ಥಪೂರ್ಣ ಸಾಲುಗಳು, ಮನ ಕಲುಕುವ ಜೊತೆಗೆ ಚಿಂತನೆಗೆ ಹಚ್ಚುವ ಕವನ ಧನ್ಯವಾದಗಳು.

Submitted by lpitnal Thu, 05/28/2015 - 23:34

In reply to by H A Patil

ಹಿರಿಯರಾದ ಹೆಚ್ ಎ ಪಾಟೀಲ್ ಸರ್, ತಮ್ಮ ಮೆಚ್ಚುಗೆಯ ನುಡಿಗಳಿಗೆ ಶರಣಾದ ಮನ. ವಂದನೆಗಳು ಸರ್ ಮತ್ತೊಮ್ಮೆ....

Submitted by nageshamysore Wed, 05/27/2015 - 04:12

ಹೌದು ಇಟ್ನಾಳರೆ, ಈಗ ಅಪ್ಪಂದಿರೆ ಮಕ್ಕಳ ಕೈ ಹಿಡಿದು ಅವರನ್ನು ನೋಡಿ ಕಲಿಯಬೇಕೆನ್ನುವ ಕಾಲ. ಆದರೆ ಕೆಲವು ಮೂಲಭೂತ ಮೌಲ್ಯಗಳ ನೈತಿಕ ಬುನಾದಿ ಹಾಕಲು ಆಪ್ಪಂದಿರ ಹೆಣಗಾಟ ಮುಂದುವರೆದೆ ಇರುತ್ತದೆ - ಅದನ್ನು ಒಪ್ಪಿಕೊಳ್ಳದೆ ನಿರಾಕರಿಸುವ ಮನೋಭಾವ ಕಂಡರೂ ಸಹ. ಕೊನೆಗೆ ಅನುಭವ ಪಾಠಶಾಲೆ ಕಲಿಸುವ ಪಾಠಗಳಾದರು ಅದರ ಬೆಲೆಯನ್ನು ಎತ್ತಿ ತೋರಿಸಬಹುದೇನೊ?

Submitted by lpitnal Thu, 05/28/2015 - 23:37

In reply to by nageshamysore

ನಿತ್ಯ ನೂತನ,ವಿನೂತನ ಬರಹ, ಕವನ,ಲೇಖನಗಳನ್ನು ನೀಡುತ್ತ ಸಂಪದಗ ಮಿತ್ರರಿಗೆ ಬೆರಗು ಮೂಡಿಸುವ ತಮ್ಮ ಬರಹಗಳ ಕ್ರಿಯಾಶಕ್ತಿಗೆ ನಮನ ಸರ್. ತಮ್ಮ ಕವನಕ್ಕೆ ಮೆಚ್ಚುಗೆಯ ದನಿಗೆ ವಂದನೆಗಳು ಸರ್.

Submitted by lpitnal Thu, 05/28/2015 - 23:38

In reply to by kavinagaraj

ಕವಿ ಹೃದಯಿ, ಕವಿನಾಗರಾಜ್ ಸರ್, ತಮ್ಮ ಚಿಂತನಾಶೀಲ ಬರಹಗಳು ವಾಹ್. ತುಂಬ ಚನ್ನಾಗಿರುತ್ತವೆ. ಕವನದ ಮೆಚ್ಚುಗೆಯ ಮಾತಿಗೆ ಧನ್ಯ ಸರ್.