0೬. ಮನೆಗಿರ ಹಿಡಿದ ಜಿಮ್

0೬. ಮನೆಗಿರ ಹಿಡಿದ ಜಿಮ್

ನಮಗೆ ಎಚ್ಚರವಾದ ಮೇಲೆ ಆ ಉಗಿದೋಣಿಯ ಪುಟ್ಟದೋಣಿಯ ಮೇಲೆ ಎಸೆದಿದ್ದ ಚೀಲದಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿದೆವು. ಅದರಲ್ಲಿಒಂದಿಷ್ಟು ಬಟ್ಟೆ, ಬೂಟ್ಸು, ಕಂಬಳಿಗಳು, ಪುಸ್ತಕಗಳು, ಮೂರು ಡಬ್ಬಿ ಸಿಗಾರ್‌ಗಳು, ಒಂದು ಕಣ್ಣ ಪಟ್ಟಿ, ಹಾಗೂ ಇತರೆ ಒಂದಷ್ಟು ಸಾಮಾನುಗಳಿದ್ದವು. ಆ ದಿನ ಮಧ್ಯಾಹ್ನ ಪೂರ್ತಿ ಆ ತೋಪಿನಲ್ಲೇ ಕಳೆದು ಹೋಯಿತು. ನಾನು ಹಾಯಿದೋಣಿಯ ಮಾಲೀಕನಿಗೆ ಕತೆ ಕಟ್ಟಿ ಹೇಳಿದ್ದನ್ನು ಜಿಮ್‍ಗೆ ವರ್ಣಿಸಿದೆ. ಉಗಿದೋಣಿಯ ಮೇಲೆ ಖೂನಿಗಾರರ ಮಾತುಕತೆಯನ್ನೂ ತಿಳಿಸಿದೆ. ಅವನೂ, ತಾನು ಹಿಂದಿರುಗಿ ಬಂದಾಗ ತೆಪ್ಪ ಕಾಣೆಯಾಗಿರುವುದನ್ನು ತಿಳಿದು ಗಾಬರಿಗೊಂಡುದನ್ನು ಹೇಳಿದ. ಅವನು ಬದುಕಲು ಮುರುಕಲು ದೊಣಿಯಿಂದ ಯಾರಾದರೂ ರಕ್ಷಿಸಬೇಕಿತ್ತು. ಹಾಗೆ ಯಾರಾದರೂ ರಕ್ಷಿಸಿದವರು, ಜಿಮ್ ಓಡಿ ಬಂದಿರುವ ಗುಲಾಮನೆಂದು ಗುರುತಿಸಿ, ಅವನನ್ನು ಮತ್ತೆ ಗುಲಾಮಗಿರಿಗೇ ಅಟ್ಟುವುದು ಖಚಿತವಾಗಿತ್ತು. ಅದೂ ಉಗ್ರಶಿಕ್ಷೆಯ ನಂತರ. ಹೀಗಾಗಿ ಜಿಮ್ ತನ್ನ ಪ್ರಾಣವನ್ನೋ ಸ್ವಾತಂತ್ರ್ಯವನ್ನೋ ಕಳೆದುಕೊಳ್ಳುವುದು ಖಚಿತವಾಗಿತ್ತು.

ಆ ಚೀಲದಲ್ಲಿ ಸಿಕ್ಕ ಪುಸ್ತಕಗಳನ್ನೂ, ರಾಜ-ರಾಣಿಯರ ಕತೆಗಳನ್ನೂ, ಪಾಳೆಯಗಾರರ ಸಾಹಸಗಳನ್ನೂ, ಜಿಮ್‍ಗೆ ಓದಿ ಹೇಳಿದೆ. ಜಿಮ್ ಕುತೂಹಲದಿಂದ "ಒಬ್ಬ ರಾಜನಿಗೆ ಎಷ್ಟು ಸಂಬಳ ಬರಬಹುದು?" ಎಂದ.
"ಸಂಬಳ .... ಸಂಬಳ ಬೇಕೆಂದರೆ ತಿಂಗಳಿಗೆ ಸಾವಿರ ಡಾಲರ್‌ವರೆಗೂ ತಗೋಬಹುದು. ಇನ್ನೂ ಜಾಸ್ತೀನೇ ತಗೋಬಹುದೋ ಏನೋ? ಯಾಕೆಂದರೆ ಎಲ್ಲಾ ಅವರಿಗೇ ಸೇರಿದ್ದಲ್ವಾ?"
"ಅಬ್ಬಾ, ಸಾವಿರ ಡಾಲರ್ ಸಂಬಳ..... ಎಷ್ಟು ಮಜವಾಗಿರುತ್ತೆ ಅಲ್ಲವಾ...? ಹೌದು.. ಅಂದ ಹಾಗೆ ರಾಜ ಏನೇನು ಕೆಲಸ ಮಾಡಬೇಕು..?"
"ಏನೂ ಇಲ್ಲ. ಸುಮ್ಮನೆ ಕೂತ್ಕೊಂಡು ಕಾಲ ಕಳೆಯೋದಷ್ಟೇ.'
"ಹೇ.... ಏನು ತಮಾಶೆ ಮಾಡ್ತಾ ಇದೀರಾ...?"
"ಇಲ್ಲ ಕಣೋ, ಅವರು ನಿಜವಾಗ್ಲೂ ಸುಮ್ಮನೇನೆ ಇರ್‍ತಾರೆ. ಏನೋ ಯುದ್ದ ಗಿದ್ದ ಅದಾಗ ಭಾಷಣ ಮಾಡ್ತಾರೆ. ಅಷ್ಟೆ. ಉಳಿದ ಸಮಯದಲ್ಲಿ ಸುಮ್ನೆ ಇರೋದಷ್ಟೇ ಅವರ ಕೆಲಸ. ಅವರ ಮಾತನ್ನು ಯಾರಾದ್ರೂ ಕೇಳ್ಲಿಲ್ಲ ಅಂದರೆ ಅವರ ತಲೆ ತೆಗಿಸ್ಬಿಡ್ತಾರೆ. ಅದ್ರೂ ತುಂಬಾ ದೊಡ್ಡ ಕೆಲಸ ಅಂದರೆ ಅವರಿಗೆ, ಅವರ ಅಂತ್ಃಪುರದಲ್ಲಿ ಕಾಲ ಕಳೆಯೋದು."
"ಎಲ್ಲಿ ಎಲ್ಲೆಲ್ಲಿ...?"
"ಅಂತಃಪುರದಲ್ಲಿ"
'ಹಂಗಂದ್ರೆ.?"
"ಅಂದ್ರೆ ಅಲ್ಲಿ ರಾಜನ ಹೆಂಡ್ತೀರೆಲ್ಲಾ ವಾಸ ಮಾಡ್ತಾರೆ. ಅಯ್ಯೋ ಸಾಲೋಮನ್ ರಾಜನ ಕತೆ ಕೇಳಿಲ್ವಾ ನೀನು. ಅವನಿಗೆ ಲಕ್ಷ ಜನ ಹೆಂಡಿರಂತೆ. ಅವನ ಅಂತಃಪುರ ತುಂಬಾ ದೊಡ್ಡದಂತೆ."

"ಓ .. ಹೌದು. ಹೌದು ಕೇಳಿದ್ದೆ. ಮರ್‍ತೋಗಿತ್ತು. ಅಂತ್ಃಪುರ ಅಂದ್ರೆ.... ಅಂದ್ರೆ... ಅದೊಂಥರಾ ಅನಾಥಾಶ್ರಮ ಇದ್ದಂಗೆ ಅನ್ನಿ. ಅಷ್ಟೊಂದು ಜನ ಹೆಂಡ್ತೀರು.. ಒಬ್ಬರಿಗೊಬ್ಬರು ಕಚ್ಚಾಡ್ಕೊಂಡು ಎಷ್ಟೊಂದು ಗಲಾಟೆ ಇರಬಹುದು ಅಲ್ಲಿ. ಇನ್ನು ಅಷ್ಟು ಜನ ಹೆಂಡಿರ ಮಕ್ಕಳು, ಚಿಳ್ಳೆ, ಪಿಳ್ಳೆ, ಪಿಸುಕು, ಕೂಸು, ಅವುಗಳ ಗಲಾಟೇನೂ ಸೇರಿದ್ರೆ.. ಅಲ್ಲಿ ಯಾರಾದ್ರೂ ಮನುಷ್ಯರು ಇರೋಕಾಗುತ್ತಾ. ಅಂತಹ ಜಾಗದಲ್ಲಿ ಇದ್ದನಲ್ಲಾ ಸಾಲೋಮನ್, ಏನೋ ಎಲ್ಲ್ ಅವನ್ನ ತುಂಬಾ ಬುದ್ದಿವಂತ ಅಂತ ಹೇಳ್ತಾರೆ. ಅವನು ನಿಜವಾಗ್ಲೂ ಬುದ್ದಿವಂತ ಆದರೆ ಒಂದು ಬಾಯ್ಲರ್ ಫ಼್ಯಾಕ್ಟರಿ ಮಾಡ್ಬೇಕು. ಕಾಸು ಸಂಪಾದಿಸಬೇಕು. ಕೊನೆಗಾಲದಲ್ಲಿ ಉಳಿಸಿದ ದುಡ್ಡಿಂದ ಆರಾಮಾಗಿ ಕಾಲ ಕಳೀಬೇಕು."
"ಅವನು ನಿಜವಾಗ್ಲೂ ತುಂಬಾ ಬುದ್ಧಿವಂತ ಆಗಿದ್ದ ಜಿಮ್. ಮುದುಕಿ ಡಗ್ಲಾಸ್ ಆಂಟಿ ಕೂಡಾ ಹೇಳ್ತಾ ಇದ್ಲಲ್ಲ."
"ಅಯ್ಯೋ, ಅವನ ಕತೆ ನಿಮಗ್ಗೊತ್ತಿಲ್ಲ. ಅವನು ಸ್ವಲ್ಪ ಮರುಳೋ, ಹುಚ್ಚನೋ ಇರಬೇಕೇ ವಿನಃ, ಬುದ್ದಿವಂತ ಅಂತೂ ಅಲ್ಲ. ನೋಡಿ, ಈಗ ನೀವು, ಹಾ.. ನೀವು.. ಸಾಲೋಮನ್ ರಾಜ ಅಂತಾ ಇಟ್ಕೊಳ್ಳೀ. ಈ ಮರ ಒಂದು ಹೆಂಗಸು. ನಾನು ಇನ್ನೊಂದು ಹೆಂಗಸು ಅಂತಾ ಇಟ್ಕೊಳ್ಳಿ. ನೋಡಿ.. ಈ ಡಾಲರ್ ನೋಟಿದೆಯಲ್ಲಾ.. ಇದು.. ಒಂದು ಮಗು. ನಾನೂ ಆ ಹೆಂಗಸೂ ಮಗು ನಂದು-ನಂದೂಂತ ಜಗಳ ಆಡ್ತಾಇರ್‍ತೀವಿ. ನ್ಯಾಯ ಕೇಳಿ ನಿಮ್ಹತ್ರ ಬರ್ತೀವಿ. ನೀವೇನು ಮಾಡ್ತೀರಾ...? ಯಾರೇ ಆಗ್ಲಿ... ಬುದ್ದಿ ಇರೋರು ಮಾಡೋ ಹಾಗೇ ಅಕ್ಕ್ ಪಕ್ಕದ ಮನೆಯವರನ್ನ ಕೇಳ್ತೀರಾ.. ಹೌದೋ ಅಲ್ವೋ..? ಆ ರಾಜ ತುಂಬಾ ಬುದ್ದಿವಂತ ಅಂತೆ. ಅವನು ಹಾಗೆ ಮಾಡ್ಲೇ ಇಲ್ಲ. ಮಗೂನೆ ಕತ್ತರಿಸಿ ಇಬ್ಬರು ಹಂಚಿಕೊಳ್ಳಿ ಅಂದನಂತಲ್ಲ. ಈ ನೋಟನ್ನೇ ಕತ್ತರಿಸಿಬಿಟ್ಟರೆ, ಅದರಿಂದೇನೂ ಪ್ರಯೋಜನ ಇಲ್ಲ. ಇನ್ನು ಮಗೂನ ಕತ್ತರಿಸಿ ಅರ್ಧ ತಗೋ ಅಂದ್ರೆ ನನಗಂತೂ ಕೋಟಿ-ಕೋಟಿ ಅರ್ಧ ಮಕ್ಕಳನ್ನ ಕೊಟ್ರೂ, ನಾನಂತೂ ಒಂದು ನಯಾಪೈಸೆ ಕೊಡೋದಿಲ್ಲ"
"ಜಿಮ್..... ಜಿಮ್.... ನೀನು ತಪ್ಪು ತಿಳ್ಕೊತಾ ಇದೀಯ.. ನಿಜವಾದ ವಿಷಯ ಎನು ಅಂತ ನೀನು ಯೋಚನೆ ಮಾಡಲೇ ಇಲ್ಲವಲ್ಲೋ."
"ಯಾರು ನಾನಾ..? ನಾನಂತೂ ಎಲ್ಲಾ ಥರಾ ಯೋಚನೆ ಮಾಡ್ಬಿಟ್ಟೆ. ಅಲ್ಲಾ ಅಂಗೈ ಹುಣ್ಣಿಗೆ ಕನ್ನಡಿ ತಗೋಬೇಕಾ..? ವಿವೇಕ ಒಂಚೂರಾದ್ರೂ ಇದ್ರೆ ಮಗೂನ ಕತ್ತರಿಸೋಕೆ ಹೇಳ್ತಾರ. ಅಲ್ಲಿ ಜಗಳ ಅರ್ಧ ಮಗೂಗೆ ಅಂತ ಆಗ್ತಾ ಇತ್ತಾ..? ಮಗು ಪೂರ್ತಿ ಬೇಕು ಅಂತ ತಾನೇ ಜಗಳ್ ಆಗ್ತಿದ್ದದ್ದು, ಮತ್ತೆ ಇಬ್ಬರಿಗೂ ಅರ್ಧರ್ಧ ಮಗು ಕೊಟ್ಟು ಜಗಳ ಮುಗಿದೋಯ್ತು ಅಂತ ತಿಳ್ಕೊಂಡ್ರೆ ಅವನಂತಾ ಮೂರ್ಖ ಇನ್ನ್ಯಾರು? ಅವನ ವಿಷಯ ಎಲ್ಲಾ ಚೆನ್ನಾಗಿ ನನಗ್ಗೊತ್ತು. ನೀನು ನನಗೇ ಹೇಳಕ್ಕೆ ಬರ್‍ಬೇಡ"
"ಅಲ್ಲಾ ಜಿಮ್. ಒಳಗಡೆ ವಿಷಯ ಏನೂಂದ್ರೆ...... "
"ಅಯ್ಯೋ ಇನ್ನೊ ವಿಷಯ ಅಂತ ಹೇಳ್ತೀರಲ್ಲಾ.. ಅಸಲು ನಿಮಗೇ ಇನ್ನೊ ವಿಷಯ ಗೊತ್ತಾಗಿಲ್ಲ. ನೋಡಿ ಈಗ ಯಾರಾದ್ರೂ ಒಂದೋ ಎರಡೊ ಮಕ್ಕಳಿದ್ರೆ, ಅವನು ಅವರನ್ನ ಸಾಯಿಸ್ತಾನಾ...? ಇಲ್ಲ. ಅವನ ಪ್ರಾಣಕ್ಕಿಂತ ಹೆಚ್ಚಾಗಿ ನೋಡ್ಕೋತಾನೆ. ಅದೇ ಒಬ್ಬನಿಗೆ ಲಕ್ಷ ಮಕ್ಕಳಿದ್ದರೆ..? ಅವನು ಬೆಕ್ಕು ಕತ್ತರಿಸೋ ಹಾಗೆ, ಮಕ್ಕಳನ್ನು ಕತ್ತರಿಸಿ ಹಾಕುತ್ತಾನೆ. ಒಂದು ಮಗು ಹೋದ್ರೆ ಅವನಪ್ಪನ ಗಂಟೇನು ಹೋಗಬೇಕು? ಇನ್ನೂ ತೊಂಬತ್ತೊ..... ತುಂಬಾ ತುಂಬಾ.. ಮಕ್ಕಳಿರ್‍ತಾವಲ್ಲ ಅವನ ಹತ್ರ."

ನಾನು ಮಾತು ನಿಲ್ಲಿಸಿದೆ. ಜಿಮ್ ಎಂತಹ ಮನುಷ್ಯನೆಂದರೆ, ಅವನ ತಲೆಗೇನಾದರೂ ಹೊಕ್ಕಿತೋ, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಅಷ್ಟು ಖಂಡಿತರಾಯ. ಥೇಟ್ ನಮ್ಮ ಹೇಸರಗತ್ತೆಯ ಹಾಗೆ.....!

ರಾತ್ರಿಗಳಲ್ಲಿ ಮೊದಲು ಜಿಮ್ ಕಾವಲಿಗಿದ್ದು, ಎರಡನೆಯ ಸುತ್ತು ನನ್ನ ಕಾವಲಾಗಿರುತ್ತಿತ್ತು. ಆದರೆ ಎಷ್ಟೊ ಬಾರಿ ಜಿಮ್ ಅವನ ಕಾವಲು ಮುಗಿದು ನನ್ನ ಸರದಿ ಬಂದರೂ ನನ್ನನ್ನು ಏಳಿಸುತ್ತಲೇ ಇರಲಿಲ್ಲ. ಹೀಗೇ ಒಮ್ಮೆ ನನ್ನ ಸರದಿಯ ಕಾವಲನ್ನೂ ಅವನೇ ಕಾಯುತ್ತಿದ್ದಾಗ, ನನಗೆ ಎಚ್ಚರವಾಯಿತು. ಬೆಳಗಿನ ಮೊದಲ ಜಾವದ ಕತ್ತಲು ತೆರೆತೆರೆಯಾಗಿ ಬೆಳಕಾಗಿ ಬದಲಾಗುತ್ತಿತ್ತು. ಜಿಮ್ ತೆಪ್ಪದ ಮೇಲೆ ಮೊಣಕಾಲುಗಳೆಡೆಯಲ್ಲಿ, ತನ್ನ ತಲೆ ಸಿಕ್ಕಿಸಿಕೊಂಡು ಕೂತಿದ್ದ. ಅವನ ಮೌನ ನರಳುವಿಕೆ, ನಿಟ್ಟುಸಿರು ನನಗೆ ಕೇಳಿಸುತ್ತಿತ್ತು. ಅವನು ತನ್ನ ಹೆಂಡತಿ ಮತ್ತು ಮಕ್ಕಳ ಬಗ್ಗೆ ಯೋಚಿಸುತ್ತಿರಬೇಕೆಂದು ನನಗನ್ನಿಸಿತು. ಅವನು ಮನೆಯಿಂದ ಇಷ್ಟು ಕಾಲ ಎಂದೂ ದೂರವಾಗಿರಲಿಲ್ಲ. ಮನೆಗಿರ ಹಿಡಿದಿದ್ದರೂ, ಹಿಡಿದಿರಬೇಕೆಂದು ಯೋಚಿಸಿದೆ. ಆ ದಿನ ರಾತ್ರಿಯೂ ಆಗಾಗ ಹೀಗೇ ನರಳುತ್ತಿದ್ದ ಜಿಮ್. ನಾನು ಚೆನ್ನಾಗಿ ನಿದ್ರಿಸುತ್ತಿದ್ದೇನೆಂದು ತಿಳಿದ ಮೇಲೆ "ಎಲಿಜ಼ಬೆತ್, ಅಯ್ಯೋ ನಿಮ್ಮನ್ನ ತಿರುಗಿ ಯಾವಾಗ ನೋಡ್ತೀನೋ.. ಇಲ್ಲ ಹಾಗೇ ಹೋಗ್ಬಿಡ್ತೀನೋ..?" ಎಂದೇನೋ ಗೊಣಗಿಕೊಳ್ಳುತ್ತಿದ್ದ.

ಆ ಬಲಶಾಲಿ ಕಪ್ಪು ಶರೀರದಲ್ಲಿ ಅದೆಷ್ಟು ಸೂಕ್ಷ್ಮ ಹೃದಯವಿತ್ತು.

ನನಗಿನ್ನು ತಡೆಯಲಾಗಲಿಲ್ಲ. ಮಲಗಿದ್ದಲ್ಲಿಂದ ಎದ್ದು ಬಂದು, ಅವನ ಪಕ್ಕ ಕುಳಿತು, ಅವನ ಹೆಂಡತಿ ಮಕ್ಕಳ ಬಗ್ಗೆ ವಿಚಾರಿಸಿದೆ. ಅವನು ದುಖಾಃಶ್ರು ತುಂಬಿದ ಕಣ್ಣುಗಳಿಂದ "ಏನಾದ್ರೂ ಧಡ್ ಅಂತ ಸದ್ದಾದರೆ ನನ್ನ ಮಗಳು ಙ್ಞಾಪಕಕ್ಕೆ ಬರ್ತಾಳೆ. ಆ ಪುಟ್ಟ ಹುಡುಗಿ ಜೊತೆ ರಾಕ್ಷಸನ ಹಾಗೆ ನಡ್ಕೊಂಬಿಟ್ಟೆ. ಅಯ್ಯೋ ನನ್ನ ಪಾಪಕ್ಕೆ ದೇವರು ನನ್ನ ಕ್ಷಮಿಸೋದೆ ಇಲ್ಲವೇನೋ?" ಅಂದ

"ಏನಾಗಿತ್ತು..?"

""ಅವತ್ತೊಂದು ದಿನ, ಅವಳಿಗೆ ಬಂದ ಜ್ವರದಿಂದ ಆಗ ತಾನೇ ಹುಶಾರಾಗ್ತಾ ಇದ್ಲು. ಅವಳಿಗಾಗ ನಾಲ್ಕು ವರ್ಷ ಇರಬಹುದು. ಬಾಗಿಲು ಹಾರು ಹೊಡೆದಿತ್ತು. ಅಲ್ಲೇ ಪಕ್ಕದಲ್ಲಿ ನಿಂತಿದ್ದಳಲ್ಲಾಂತ ಬಾಗಿಲು ಮುಚ್ಚಲು ಹೇಳಿದೆ. ಅವಳು ಅವಳ ಪಾಡಿಗೆ ನಗುತ್ತಾ ನಿಂತಿದ್ದಳು. ನನಗೆ ಇನ್ನೂ ಕೋಪ ಬಂತು. 'ಬಾಗಿಲು ಮುಚ್ಚೆ ಕತ್ತೇ' ಎಂದೆ. ಆಗಲೂ ನನ್ನ ಮಾತಿಗೆ ಲಕ್ಷ್ಯ ಕೊಡದೆ ಉದಾಸೀನವಾಗಿಯೇ ನಿಂತಿದ್ದಳು. ನನಗೆ ಹಿಡಿಸಲಾರದಷ್ಟು ಸಿಟ್ಟು ಬಂತು. ನಾಲ್ಕು ಬಾರಿಸಿಬಿಟ್ಟೆ. ನೋಡ್ತೀನಿ ಅವಳ ಕಣ್ಣಲ್ಲಿ ನೀರು. ನನ್ನನ್ನೇ ನೋಡುತ್ತಿದ್ದಳು. 'ಈಗ್ಲಾದ್ರೂ ಬಾಗಿಲು ಹಾಕು' ಎಂದೆ. ನನ್ನ ಕೋಪ ಏನೂ ಕಮ್ಮಿಯಾಗಿರಲಿಲ್ಲ. ಅವಳು ಆಗಲೂ ಬಾಗಿಲು ಹಾಕಲಿಲ್ಲ. ಆದರೆ ಗಾಳಿಗೆ ಬಾಗಿಲು ಧಡ್ ಅಂತ ಮುಚ್ಚಿಕೋತು. ಆಗಲೂ ಅವಳು ಮಿಸುಕಲಿಲ್ಲ. ನನಗೇನೋ ಅನುಮಾನವಾಯಿತು. ನಾನೇ ಮತ್ತೆ ಬಾಗಿಲನ್ನು ತೆರೆದು ಜೋರಾಗಿ ಮುಚ್ಚಿದೆ. ಉಹೂ.. ಎನೂ ಪ್ರತಿಕ್ರಿಯೆಯಿಲ್ಲ. ಮೆಲ್ಲನೆ ಅವಳ ಹಿಂದಿನಿಂದ 'ವ್ಯಾ' ಎಂದು ಹೆದರಿಸಿದೆ. ಏನೂ ಇಲ್ಲ. ಅಯ್ಯೋ ದೇವರೆ ನನ್ನ್ ಮಗಳು ಕಿವುಡಾಗಿದ್ದಳು. ಆ ಕಿವಿಡಿ ಹುಡುಗಿಯ ಮೇಲೆ ನಿಜಸಂಗತಿ ಅರಿಯದೆ ಕೈ ಮಾಡಿದೆನಲ್ಲಾ... ನಾನೆಂತಾ ರಾಕ್ಷಸ... ಅಯ್ಯೋ.. ದೇವರೇ ನನ್ನ ಯಾವತ್ತೂ ಕ್ಷಮಿಸಬೇಡಪ್ಪಾ"

ನಾನು ಈ ಕತೆ ಕೇಳಿ ಮೂಕನಾಗಿದ್ದೆ. ನನ್ನ ಕಣ್ಣಿಂದಲೂ ಬಿಂದುಗಳಿಳಿದವು.

ನಾವು ತೆಪ್ಪವನ್ನವಿಸಿಟ್ಟು ದಿನ ಕಳೆದೆವು. ಸಂಜೆ ಮತ್ತೆ ತೆಪ್ಪವನ್ನೆಳೆದು ನಮ್ಮ ಪಯಣ ಶುರುವಾಯಿತು. ಆ ಉಗಿದೋಣಿಯ ಸಾಹಸದ ನಂತರಕೆಲವು ದಿನಗಳವರೆಗೂ ಇದೇ ನಮ್ಮ್ ದಿನಚರಿಯಾಗಿತ್ತು. ಇಲ್ಲಿನಾಯ್ಸ್ ರಾಜ್ಯದ ಆಚೆಗೆ ಇರುವ ಕೈರೋನತ್ತ ನಾವು ಹೊರೆಟಿದ್ದೆವು. ಅಲ್ಲಿ ನಮ್ಮ ಈ ನದಿಯ ಜೊತೆಗೆ, ಓಡಿಯೊ ಎಂಬ ಇನ್ನೊಂದು ನದಿ ಸೇರುತ್ತದೆ. ಅಲ್ಲಿಂದ ಮುಂದೆ ಈ ಪ್ರವಾಹ ಮತ್ತಷ್ಟು ಬಲಿಷ್ಠವೂ, ನದೀ ಪಾತ್ರ ಇನ್ನಷ್ಟು ಅಗಲವೂ ಆಗುತ್ತದೆ. ಅಲ್ಲಿಂದ ಮುಂದೆ ನಮ್ಮ ಪಯಣ ಮತ್ತಷ್ಟು ವೇಗವಾಗಿ ಸಾಗಬಹುದಿತ್ತು. ಜಿಮ್ ವಾಸ್ತವವಾಗಿ ಅಲ್ಲಿಗೋ ಅಥವಾ ಅಲ್ಲಿಂದ ಮುಂದೆಯೋ ಹೋಗಬೇಕಿತ್ತು. ಏಕೆಂದರೆ ಅಲ್ಲಿ ಜಿಮ್ ಸ್ವತಂತ್ರ ವ್ಯಕ್ತಿಯಾಗುತ್ತಿದ್ದ. ಸೇವಕನಲ್ಲ.........