ಕಾಫಿ ಬಾರ್ ಹುಡುಗಿ

ಕಾಫಿ ಬಾರ್ ಹುಡುಗಿ


ಈಹೊತ್ತಿನ ಕವನ

ಕಾಫಿ ಬಾರ್ ಹುಡುಗಿ

ಅಂದದ ಗಾಜಿನ ತೋಟ
ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ
ಅಂಗನೆ ಅವಳು ಚಂದವಳ್ಳಿಯ ಸುಮ
ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ-

ಟ್ಟಿದ ಪೂರ್ಣ ಚಂದಿರನ ತುರುಬು
ಅಲ್ಲೊಂದಿಷ್ಟು ಇ-
ಲ್ಲ್ಲಿ ಒಂದಿಷ್ಟು ಇಷ್ಟೇ ಇಷ್ಟು ಬೆಳೆದ ಕೂದಲೂ
ಈಗ ಮಟಾಮಾಯ!
ಇಲ್ಲಿ ಎಲ್ಲವೂ ಸ್ವಚ್ಚವಾಗಿರಬೇಕು
ಸ್ವೇಚ್ಚೆಯೇನಿಸಬೇಕು
ಸ್ವಚ್ಚಂದವಾಗಿರಕೂಡದು
ಬರುವಾಗ ಕಂಡದ್ದು ಕಾಣಿಸದು
ಕಾಣಿಸಿದ್ದು ಎಂದೂ ಇರದು: ವೈಶಿಷ್ಟ್ಯ!

“hello sir, what would you like to have sir?”
ಈ ಕನ್ನಡತಿಗೆ ಇಲ್ಲ ಅನುಮತಿ
ಹಾಗೆಯೇ ಕೇಳಬೇಕು ಅಂತೆಯೇ ಮಾತಾಡಬೇಕು
ಇರುವಂತೆಯೇ ನಗಬೇಕು
ಬಂದ ಮಂದಿಗೆ ನೂರು ಮಣೆ
ಆಯಾಸವೆನಿಸಿ ಕೂರುವಂತಿಲ್ಲ ಸುಮ್ಮನೆ, ಅವಳು
ಹೊಳೆವ ಟೈಲ್ಸ್ ನಲಿ ಮಸುಕು ಬಿಂಬವ ಕಂಡು
ತೀಡಿ ಕೊಳ್ಳುವಳು ಚೆಲುವು
ಎ. ಸಿ. ಯ ತಂಗಾಳಿಗೆ ಮೈಯೋಡ್ಡಿದವಳ ನಿಲುವು
ನಿಂತ ಚಿತ್ರಕೆ ಕಾಲು ಮೂಡಿದ ಸ್ತಬ್ಧಚಿತ್ರ!

ಬದುಕು ನೂಕಿದೆ, ಬಾಳು ಸಾಗಿದೆ ಹೇಗೋ
ಕಲಿಯಲು ಒಂದು, ಈಗ ಪಡೆದುದು ಹೀಗೆ ಶಾಲೆಯ ಫ್ರಾಕು ಇಲ್ಲಿಗೂ ಬೇಕು
ಸುತ್ತಣ ಜಗದ ನೀರೊಳಗೆ ನಾನು ಎಣ್ಣೆ
ಎಂದಾದರೊಂದು ದಿನ ಬಂದಾನೆ ಚಂದಿರನೆ
ಅಂದಾನು ನನ್ನ ಮನದನ್ನೆ
ತ್ಚು…ಹುಚ್ಚು ಕಲ್ಪನೆ!

ಬಂದವರೆಲ್ಲ ಹೋಗುವವರೇ
ಹೋಗಲೇ ಬಂದವರೇ?

ಬಂದು ತಣಿವರು, ಮನದಣಿಯೆ ಮಾತಾಡುವರು
ಕಣ್ಣಲೆ ನೂರೊಂದು ಆಡಿ ಹಿತವಾಗಿ ಕೈಮಿಲಾಯಿಸಿ
‘ಏನೋ’ ಪಿಸುಗುಡುವರು ತಮ್ಮೊಳಗೆ
ಮತ್ತಿನಲಿ ಆಡಿದ ಭಾವಗಳೂ ತಣ್ಣಗಾಗುವವು
ಉಸಿರಾಟಕಿನ್ನು ಜಾಗವೆಲ್ಲಿ?
ಮನಸೋತ ಅವರ ಕೈಗಳು ಹಿಡಿದ ಕಾಫಿ ಮಗ್ ನಿಂದ ಹೊರಡುವ
ಹಬೆಯಲ್ಲಿ ಗುರುತಿಸುವಳು ಅವಳು
‘ಓ, ಇಲ್ಲೊಂದು ಕನಸು!
ಓ, ಅಲ್ಲೊಂದು ಭಾವ!
ಹಾ, ಆವಿಯಾಯಿತಲ್ಲ ಆಸೆ!!’

Rating
No votes yet

Comments