ನಾವೆಂಥಾ ಜನ!

ನಾವೆಂಥಾ ಜನ!

ಅಲ್ಲಾ ಗುರು,
ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ?

ಇತಿಹಾಸ, ಸಮಾಜಶಾಸ್ತ್ರಗಳನ್ನು ವೈಜ್ಞಾನಿಕ ವಿಷಯಗಳು ಎಂಬುದು ಸ್ವಲ್ಪವಾದರೂ ಸರಿಯಾದರೆ ಈ ಎರಡು ಲೇಖಕರಲ್ಲಿ ಇತಿಹಾಸ ಮತ್ತು ಅಂದಿನ ಸಮಾಜದ ಬಗ್ಗೆ ಬರೆಯಲು ಪಾಂಡಿತ್ಯವಿದೆಯೇ? ’ಸತ್ಯ’ದ ಸಂಶೋಧನೆಯ ದೃಷ್ಟಿಯಿಂದ ಯಾವ ಕೃತಿಗೆ credibility ಹೆಚ್ಚು? ಹೋಗಲಿ, ಇವರು ಬರೆದದ್ದೇ ಸರಿ ಇನ್ನೊಬ್ಬರು ಬರೆದಿದ್ದು ತಪ್ಪು ಎಂದು ಹೇಳಿ ವಾದ ಮಾಡಬಲ್ಲ ಪಾಂಡಿತ್ಯ ಎಷ್ಟು ಜನ ಓದುಗರಿಗೆ/ವಿಮರ್ಶೆಕಾರರಿಗಿದೆ? ಇಂತಹ ಜನ ಮಾಡುವ ವಾದ (ಮತ್ತು ದೊಂಬಿ) ದೊಡ್ಡದೇ ಅಥವ ವಾದದ ಸತ್ವ ದೊಡ್ಡದೇ? ಹೋಗಲಿ, ವಿಮರ್ಶೆ ಮಾಡಲೇ ಬೇಕೆಂದರೆ ತಮ್ಮ ಪಾಂಡಿತ್ಯದ ಪರಿಧಿಯಲ್ಲಿ ಬರುವ ವಿಷಯಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವ ಮರ್ಯಾದೆ ಇದ್ದದ್ದು ನನ್ನನಿಕೆಯಲ್ಲಿ ಒಬ್ಬರೇ ವಿಮರ್ಶಕನಿಗೆ. ಅವರನ್ನು ಇವರೆಲ್ಲ ಸೇರಿ ಎಳಸುತನದಿಂದ ಬಾಯಿಗೆ ಬಂದಂತೆ ಬಯ್ದಾಯಿತು .

ಇವೆಲ್ಲ ಹಾಳಾಗಿ ಹೋಗಲಿ, ಪುಸ್ತಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಪುಸ್ತಕದಲ್ಲೇ ಹೇಳಿದ್ದರೂ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ. ಈಗ, ಸಂಶೋಧನೆಯ ಕೃತಿಯೊಂದನ್ನು ಮುಟ್ಟುಗೋಲು ಹಾಕಿದ್ದು ವಿಪರ್ಯಾಸ. ಹಾಗೆ ನೋಡಿದರೆ ಕಾದಂಬರಿಗಳು, ಮತ್ತು ಸಂಶೋಧನಾ ಕೃತಿಗಳು ಎಷ್ಟರ ಮಟ್ಟಿಗೆ ಓದಲ್ಪಡುತ್ತವೆ, ಎಷ್ಟರ ಮಟ್ಟಿಗೆ ಜನ ಆ ವಿಚಾರಗಳನ್ನು ಅರಗಿಸಿಕೊಳ್ಳುತ್ತಾರೆ, ಎಷ್ಟು ಜನ ಇದಕ್ಕೆ ಶಾಂತಿಗೆ ಭಂಗ ಬರುವಂತೆ ವರ್ತಿಸುತ್ತಾರೆ, ಈಗ ಗಲಭೆಗೆ ನಿಂತಿರುವವರೆಲ್ಲ ಕೃತಿಗಳನ್ನು ಓದಿಯೇ ನಿಂತಿರುವರೇ, ಇದರಲ್ಲಿ ಯಾರ ಯಾರ ರಾಜಕೀಯ ಕೈವಾಡ ಎಷ್ಟೆಷ್ಟಿದೆ, ನಾಕು ಜನ ಘೋಷಣೆ ಕೂಗಿದರೆ ಸಮಾಜದ ಶಾಂತಿಗೆ ಧಕ್ಕೆಯುಂಟಾಗುತ್ತದೆಯೇ ಎಂಬುದರ ದಿವ್ಯ ಜ್ಞಾನ ನಮಗಿದೆಯೇ?

ಭೂಮಿ ದುಂಡಗಿದೆ, ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಹೇಳಿದಾಗಲೂ ಹೀಗೇ ಆಗಿತ್ತು ಎಂಬುದನ್ನು ನಾವು ಮರೆಯದಿರುವುದು ವಾಸಿ. (ಅಂದ ಮಾತ್ರಕ್ಕೆ ಬಂಜಗೆರೆಯವರು ಹೇಳಿದ್ದು ಖಡಾಖಂಡಿತ ಸತ್ಯ ಅಂತೇನೂ ಅಲ್ಲ) ಕನ್ನಡದಲ್ಲಿ ಸಂಶೋಧನೆ ನಡೆಸಿ ಅದನ್ನು ಕನ್ನಡದ ಸಂಶೋಧನಾತ್ಮಕ ಲೇಖನಗಳನ್ನಾಗಿ ಪ್ರಕಟಿಸುವ ವಾಡಿಕೆಯೇ ಕಡಿಮೆ. ಕನ್ನಡದಲ್ಲೇ ಸಂಶೋಧನೆ ನಡೆಸುವುದಕ್ಕೆ ಇದು ಒಂದು ದೊಡ್ಡ ಕೊರತೆ ಎನ್ನುವುದನ್ನು ಕನ್ನಡ ಕನ್ನಡ ಎಂದು ಹೊಡೆದುಕೊಳ್ಳುವ, ಇಂಗ್ಲೀಷ್ ಮಾಧ್ಯಮದಲ್ಲಿಯೇ ಜೀವನಪೂರ್ತಿ ಓದಿರುವ ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು (ಹಾಗು ಕನ್ನಡದಲ್ಲಿ ಸಂಶೋಧನೆಯನ್ನು ಮಾಡಲು ಹೊರಟಾಗಾದ ನನ್ನ ವೈಯುಕ್ತಿಕ ಅನುಭವ ಕೂಡ) .

ಸಮಾಜದ ಶಾಂತಿಯೇ ನಮ್ಮ ಗುರಿ, ಮನುಷ್ಯ ಸ್ವಭಾವದ, ಸಮಾಜದ ಸಂಶೋಧನೆಯಲ್ಲ, ಮಾನಸಿಕ ಪ್ರಗತಿಯಲ್ಲ ಎನ್ನುವುದು ನಿಜವಾದರೆ ಭೈರಪ್ಪನವರ ಕೃತಿಯಿಂದ ಹಿಡಿದು ಜಾತಿಪದ್ಧತಿಯನ್ನು ಕೆಡುವಿದ್ದೂ, ರೈತಕ್ರಾಂತಿ, ಭೂಸುಧಾರಣಾ ಕಾಯ್ದೆ, ಪಂಚಾಯತ್ ಕಾಯ್ದೆ, RSS VHP ವಿಚಾರಧಾರೆ, ರಾಮಮಂದಿರದ ನಿರ್ಮಾಣ ಇವೆಲ್ಲವೂ ಬ್ಯಾನ್ ಆಗಬೇಕಾದಂತಹ ವಿಚಾರಗಳೇ.

Rating
No votes yet

Comments