ಜತೆಯಲಿ.. ಜತೆಜತೆಯಲಿ
"ಕಾಫಿ ಕುಡಿಯೋಣ ಅನ್ನಿಸುತ್ತೆ" ಅಲ್ವಾ ನಾನೆಂದೆ.
"ಸರಿ ನಾನು ಮಾಡಿತರ್ಲಾ"?
ಏಯ್ ಬೇಡ ಬೇಡ ನಾನೇ ತರ್ತೇನೆ, ಡಾಕ್ಟ್ರ್ ನಿನಗೆ ಒಂದು ತಿಂಗಳು ರೆಷ್ಟ್ ಕೊಟ್ಟಿದ್ದಾರಲ್ಲಾ ?
ಅಡುಗೆ ಮನೆಗೆ ಬಂದೆ.
ಯಾಕೋ ಜೋಲಿ ಹೊಡೆಯುತ್ತಿದ್ದೇನಾ ಅನ್ನಿಸಿತು.
ಇಲ್ಲ..
ಹದಿನೆಂಟು ಅಂತಸ್ತಿನ ಫ್ಲಾಟ್ ಅದು. ಡಿ ಆರ್ ಡಿ ಓ ದ ಸುಮಾರು ೧೨೦ ಸಂಸಾರಗಳ ಮನೆಗಳ ಗುಂಪು.
ನಾವು ಕೊನೆಯ ಅಂತಸ್ತಿನಲ್ಲಿದ್ದೇವೆ. ನಮ್ಮ ಅಡುಗೆ ಮನೆ ಲಿಫ್ಟ್ ನ ಪಕ್ಕದಲ್ಲೇ ಇದೆ.
ಅಡುಗೆ ಮನೆಯ ತೆರೆದ ಅಲಮಾರಿಯ ಮೇಲಿನ ಅಂತಸ್ತಿನಲ್ಲಿಟ್ಟ ನೀರಿನ ಬೋಗುಣಿಯಿಂದ ತುಳುಕಿ ಹೊರ ಚೆಲ್ಲಿತು.
ಯಾಕೆ ಇಡೀ ಅಲಮಾರಿಯೇ ಅಲುಗಾಡಿತಾ? ನೀರೇಕೆ ಹೊರ ಚೆಲ್ಲಿತು?
ಅದರ ಪಕ್ಕದಲ್ಲಿಯೇ ಗೋಡೆಯ ಮೊಳೆಗೆ ಸಿಕ್ಕಿಸಿದ ದೋಸೆ ಕಾವಲಿ (ತವಾ) ಜೋಕಾಲಿಯಾಡುತ್ತಿತ್ತು.
ಕಿಟಿಕಿಯಿಂದ ಹೊರಗಿಣಿಕಿತು ದೃಷ್ಟಿ..ಯಾಕೋ ಅಯೋಮಯ ಅನ್ನಿಸಿತು.
ಒಮ್ಮೆಮೈ ಜುಮ್ ಅನ್ನಿಸಿತು, ಇಡಿ ಅಷ್ಟು ದೊಡ್ಡ ಕಟ್ಟಡವೇ ಅಲುಗಾಡಿತೇನು? ಓಹ್ ಇದು ಭೂಕಂಪದ ಲಕ್ಷಣ!!!
ಮರುಕ್ಷಣ ಸೀದಾ ನಮ್ಮ ಮಲಗುವ ಕೋಣೆಗೆ ನಡೆದೆ ಅನ್ನುವುದಕ್ಕಿಂತ ಓಡಿದೆ ಅನ್ನುವುದೇ ಸರಿ.
ಎಲ್ಲಿ ಕಾಫಿ" ಎಂತ ಕೇಳಲು ಹೊರಟವಳು..
"ಅನೂ ಮಂಚ ಅಲುಗಾಡಿಸಬೇಡ ಕಣೋ " ಎಂದಳು ದೊಡ್ಡಮಗನಲ್ಲಿ.
"ಅವನು ಬೆಡ್ ಅಲುಗಾಡಿಸ ಬಲ್ಲನಾ? ಅದೂ ನೀನು ರಾಗೂ ಅದರಲ್ಲೇ ಕುಳಿತು ಕೊಂಡಿರುವಾಗ..?" ನಾನೆಂದೆ ನನ್ನ ಸ್ವರದಲ್ಲಿ ನನಗೇ ನಂಬಿಕೆಯಿಲ್ಲ
"ಮತ್ತೆ .....? "
ಅಷ್ಟರಲ್ಲೇ ಮತ್ತೆ ಅಲುಗಾಡಿತು ಮಂಚ, ಈ ಸಾರಿ ಇನ್ನೂ ಜೋರಾಗಿ..
ಆಗಲೇ ಹೊರಗಡೆಯಲ್ಲಿ ಚೀರಾಟ ಕೇಳಿಸಿತು ಕೆಳಗಿನ ಮನೆಗಳ ಇದಿರಿನ ಜಾಗದಲ್ಲಿ ಎಲ್ಲರೂ ಜಮಾಯಿಸ ತೊಡಗಿದ್ದರು.
ಅಲ್ಲ ಇದು... ಭೂಕಂಪ. ಭೂಕಂಪ ಬಂದಾಗ ನಾವು ಎಲ್ಲಿರಬೇಕು? ಬೇಗ ನಮ್ಮ ಮನೆಯನ್ನು ಬಿಟ್ಟು ಹೊರನಡೆಯ ಬೇಕು. ಹೌದು ಮನೆಯಲ್ಲಿರುವವರೆಲ್ಲಾ ಕೆಳಗಡೆ ಹೋಗುತ್ತಿದ್ದಾರೆ
ನಾವು? ಅವಳಿಗೆ ನಡೆಯಲಾಗುವುದಿಲ್ಲ ಇಡೀ ಕಾಲು ಬ್ಯಾಂಡೇಜು ಕಟ್ಟಿದೆ, ಅವಳನ್ನು ಹೊತ್ತು ನಾನು ನಡೆಯಬಲ್ಲನೇ?
ಇಳಿಯದಿದ್ದರೆ .. ನಾವು ಇಲ್ಲಿಯೇ.. ಸಮಾಪ್ತಿಯಾದರೆ,...
ಮಕ್ಕಳು... ಅವರಿಗೆ ಯಾರು ದಿಕ್ಕು..?
ಆಗಲೆ... ಇನ್ನೊಮ್ಮೆ.... ಇನ್ನೂ ಜೋರಾಗಿ.... ಅಲುಗಾಡಿತು ಮಂಚ.
ಅವಳಿಗೂ ಅದು ಕಾಣಿಸಿತು, ಮಕ್ಕಳು ಮರಿಗಳು ಎಲ್ಲರೂ ಹೊರನಡೆಯುತ್ತಿದ್ದಾರೆ ದಬದಬನೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ವೇಗವಾಗಿ..
ಬದುಕುವ ಧಾವಂತ ಇಷ್ಟಾ.... ಕ್ಷಣದಲ್ಲೇ ಏನೂ ಆಗಬಹುದು, ಕೂಡಲೇ ನಿರ್ಧರಿಸಬೇಕು.. ಈ ಕ್ಷಣ.. ಆದರೆ ಏನೂ ನಿರ್ಧಾರಕ್ಕೆ ಬರಲಾಗುತ್ತಿಲ್ಲ ... ಏನು ಮಾಡಬೇಕು? ಯಾವುದು ಸರಿಯಾದ ಕ್ರಮ?
ಅವಳಿಗೂ ಪರಿಸ್ಥಿತಿಯ ಅರಿವಾಯಿತು, ತನ್ನ ಕಾಲನ್ನೊಮ್ಮೆ ನೋಡಿಕೊಂಡವಳು ತನ್ನಲ್ಲಿಯೇ ನಿರ್ಧಾರಕ್ಕೆ ಬಂದಳು.
"ರೀ ನನ್ನ ವಿಷಯ ಬಿಡಿ... ಮಕ್ಕಳಿಬ್ಬರನ್ನೂ ಕರೆದುಕೊಂಡು ನೀವು ಹೊರಡಿ" ಇದು ಅವಳಲ್ಲಿಯ ತಾಯಿಮತ್ತು ಪತ್ನಿಯ ತಾಕಲಾಟ.
ಇದು ನನ್ನ ಜೀವನದಲ್ಲಿನ ಅತ್ಯಂತ ದಯನೀಯ ಕ್ಷಣವಾಗಿತ್ತು. ಒಂದು ಕ್ಷಣ ಮಕ್ಕಳನ್ನು ಕರೆದುಕೊಂಡು ಹೊರಡಲೇ? ಅಥವಾ ಇಲ್ಲಿಯೇ ಇರಬೇಕೇ?
ಅವರಿಬ್ಬರ ಜೀವನ.....? ಅವರು ನಮಗಾಗಿ ತಮ್ಮ ಪ್ರಾಣ ತ್ಯಾಗ ಮಾಡಬೇಕೇ?
ಮುಂದುವರಿಯುವುದು
Comments
ಉ: ಜತೆಯಲಿ.. ಜತೆಜತೆಯಲಿ
ಉ: ಜತೆಯಲಿ.. ಜತೆಜತೆಯಲಿ
ಉ: ಜತೆಯಲಿ.. ಜತೆಜತೆಯಲಿ
ಉ: ಜತೆಯಲಿ.. ಜತೆಜತೆಯಲಿ