ಕೋಪವೆಂಬುದು ಅನರ್ಥ ಸಾಧನ

ಕೋಪವೆಂಬುದು ಅನರ್ಥ ಸಾಧನ

       ಕೋಪವೆಂಬುದು ಅನರ್ಥ ಸಾಧನ


 


       ಒಬ್ಬ ಹುಡುಗನಿದ್ದನು. ಅವನಿಗೆ ಅಸಾಧ್ಯ ಕೋಪ. ಪ್ರತಿ ದಿನ ಅವನು ತನ್ನ ಹೆತ್ತವರೊಡನೆ ಹಾಗೂ ಗೆಳೆಯರೊಡನೆ ಜಗಳವಾಡುತ್ತಿದ್ದನು.


            ಒಂದು ದಿನ ಅವನ ತಂದೆ ಆ ಹುಡುಗನನ್ನು ಕರೆದರು. ಅವನಿಗೆ ಒಂದಷ್ಟು ಮೊಳೆಗಳನ್ನು ಹಾಗೂ ಒಂದು ಸುತ್ತಿಗೆಯನ್ನು ನೀಡಿದರು.


            ‘ನೋಡು ಮಗು. ನಿನಗೆ ಕೋಪ ಬಂದಾಗ, ಇದರುವ ಒಂದು ಮೊಳೆಯನ್ನು ತೆಗೆದುಕೋ. ನಮ್ಮ ಮನೆಯ ಪೌಳಿಗೋಡೆಗೆ ಅದನ್ನು ಹೊಡಿ‘ ಎಂದರು.


            ಆಗ ಆ ಹುಡುಗ ‘ಅಪ್ಪಾ...ನಮ್ಮ ಮನೆಯ ಪೌಳಿಯನ್ನು ಹೊಸದಾಗಿ ಕಟ್ಟಿಸಿದ್ದೇವೆ. ಸುಣ್ಣ ಬಣ್ಣ ಎಲ್ಲವೂ ಹೊಸದು. ಮೊಳೆ ಹೊಡೆದರೆ ಹಾಳಾಗುತ್ತದೆಯಲ್ಲವೆ?‘ ಎಂದು ಕೇಳಿದನು. ಆಗ ಅವನ ತಂದೆಯು ‘ ಆ ಬಗ್ಗೆ ನೀನು ಚಿಂತಿಸಬೇಡ. ಸಧ್ಯಕ್ಕೆ ನಾನು ಹೇಳಿದ ಹಾಗೆ ನೀನು ಮಾಡು‘ ಎಂದನು.


            ಆ ಹುಡುಗ ಮೊದಲನೆಯ ದಿನ ಗೋಡೆಗೆ ೩೭ ಮೊಳೆಗಳನ್ನು ಹೊಡೆದನು.


            ಹುಡುಗನಿಗೆ ಪ್ರತಿ ಸಲ ಮೊಳೆ ಹೊಡೆಯುವಾಗ, ಇಷ್ಟು ಚೆನ್ನಾಗಿರುವ ಗೋಡೆ ಹಾಳಾಗುತ್ತಿದೆಯಲ್ಲ ಅನ್ನಿಸುತ್ತಿತು.


            ಎರಡನೆಯ ದಿನ ೩೭ ಕ್ಕಿಂತ ಸ್ವಲ್ಪ ಕಡಿಮೆ ಮೊಳೆಗಳನ್ನು ಹೊಡೆದನು. ಮೂರನೆಯ ದಿನ ಆ ಸಂಖ್ಯೆ ಇನ್ನೂ ಸ್ವಲ್ಪ ಕಡಿಮೆಯಾಯಿತು.


            ೩-೪ ವಾರಗಳು ಕಳೆದವು.


            ಹುಡುಗನು ಗೋಡೆಗೆ ಮೊಳೆ ಹೊಡೆಯುವ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದಿತು.


            ಒಂದು ದಿನ...


            ಅವನು ಒಂದೇ ಒಂದು ಮೊಳೆಯನ್ನೂ ಹೊಡೆಯಲಿಲ್ಲ.


            ಆ ಸಂಜೆ, ಅವನು ತನ್ನ ಬಳಿ ಬಂದನು. ‘ಅಪ್ಪಾ..ಇಡೀ ದಿನ ನಾನು ಒಂದು ಸಲವೂ ಕೋಪ ಮಾಡಿಕೊಳ್ಳಲಿಲ್ಲ. ಒಂದೂ ಮೊಳೆಯನ್ನು ಹೊಡೆಯಲಿಲ್ಲ‘ ಎಂದನು. ಅದನ್ನು ಕೇಳಿದ ತಂದೆ ‘ಬಹಳ ಸಂತೋಷ ಮಗು. ಈಗ ನಿನ್ನ ಸುತ್ತಿಗೆಯನ್ನು ತೆಗೆದುಕೊಂಡು ನನ್ನ ಜೊತೆಯಲ್ಲಿ ಬಾ‘ ಎಂದು ಪೌಳಿಯ ಬಳಿಗೆ ಬಂದನು. ಹುಡುಗನು ಹಿಂಬಾಲಿಸಿದನು.


            ‘ಈವತ್ತು ನೀನು ಕೋಪ ಮಾಡಿಕೊಂಡಿಲ್ಲ. ಅಲ್ಲವೇ...ಹಾಗಿದ್ದ ಮೇಲೆ ನೀನೇ ಹೊಡೆದಿರುವ ಈ ಮೊಳೆಗಳಲ್ಲಿ ಒಂದು ಮೊಳೆಯನ್ನು ಹೊರತೆಗೆ‘ ಎಂದನು. ಹುಡುಗನಿಗೆ ಆಶ್ಚರ್ಯವಾಯಿತು. ತಂದೆಯ ಮುಖವನ್ನು ನೋಡಿದನು. ಆಗ ತಂದೆಯೂ ಸ್ವಲ್ಪವೂ ವಿಚಲಿತನಾಗದೆ ‘ನಾನು ಸರಿಯಾಗಿಯೇ ಹೇಳುತ್ತಿದ್ದೇನೆ. ನಿನ್ನ ಸುತ್ತಿಗೆಯ ಹಿಂಭಾಗದಿಂದ ಮೊಳೆಯನ್ನು ಸುಲುಭವಾಗಿ ಹೊರ ತೆಗೆಯಬಹುದು. ನೀನು ಕೋಪ ಮಾಡಿಕೊಳ್ಳದ ದಿನ ಒಂದೊಂದು ಮೊಳೆಯನ್ನು ತೆಗೆಯಬೇಕು‘ ಎಂದು ಹೇಳಿ ಅಲ್ಲಿಂದ ಹೊರಟುಹೋದನು.


            ಹುಡುಗನು ಸುತ್ತಿಗೆಯ ಹಿಂಭಾಗವನ್ನು ಉಪಯೋಗಿಸಿಕೊಂಡು, ಮೊಳೆಯನ್ನು ಮೀಟಿ ತೆಗೆದನು. ಮೊಳೆಯೊಡನೆ ಗೋಡೆಯ ಸ್ವಲ್ಪ ಗಾರೆ ಹಾಗೂ ಹಚ್ಚಿದ್ದ ಬಣ್ಣ ಉದುರಿತು. ಗೋಡೆಯ ಮೇಲೆ ಒಂದು ದೊಡ್ಡ ಕಲೆಯಾಯಿತು. ನೋಡುವುದಕ್ಕೆ ಅಸಹ್ಯವಾಗಿ ಕಾಣಲಾರಂಭಿಸಿತು.


            ಹುಡುಗ ತಾನು ಹೊಡೆದ ಎಲ್ಲ ಮೊಳೆಗಳನ್ನು ಹೊರತೆಗೆಯಲು ಅನೇಕ ತಿಂಗಳುಗಳೇ ಹಿಡಿದವು!


            ಕೊನೆಯ ಮೊಳೆಯನ್ನು ಮೀಟಿ ತೆಗೆಯುವಾಗ, ಅವನ ಜೊತೆಯಲ್ಲಿ ಅವನ ತಂದೆಯೂ ಇದ್ದರು.


            ‘ಮಗೂ ಹೇಗಿದೆ ನಮ್ಮ ಪೌಳಿ?‘


            ‘ಇಲ್ಲಪ್ಪ..ನೋಡಲು ಚೆನ್ನಾಗಿಲ್ಲ. ನಮ್ಮ ಮನೆಯ ಪೌಳಿ ಸುಂದರವಾಗಿತ್ತು. ಈಗ ಎಲ್ಲೆಡೆ ಕಲೆಗಳು.. ಏನೇನೂ ಚೆನ್ನಾಗಿಲ್ಲ...‘ ಎಂದನು.


            ‘ನಮ್ಮ ಮನಸ್ಸೂ ಹೀಗೆಯೇ ಮಗು. ಅದು ಸದಾ ಶುಭ್ರವಾಗಿರುತ್ತದೆ. ಆದರೆ ನಾವು ಒಂದೊಂದು ಸಲ ಕೋಪ ಮಾಡಿಕೊಂಡು, ಕೆಟ್ಟ ಮಾತನ್ನು ಆಡಿದಾಗ, ಅದು  ಹೃದಯದಲ್ಲಿ ಮೊಳೆಯನ್ನು ಹೊಡೆದ ಹಾಗೆ ಗಾಯವಾಗುತ್ತದೆ. ಗೋಡೆಗಾಗಿರುವ ಈ ಹಳ್ಳವನ್ನು ಗಾರೆ ಸಿಮೆಂಟಿನಿಂದ ಮುಚ್ಚಬಹುದು. ಆದರೆ ಹೃದಯಕ್ಕಾದ ಗಾಯವನ್ನು ಮುಚ್ಚುವುದು ಕಷ್ಟ. ಅದನ್ನೆಂದಿಗೂ ಗುಣಪಡಿಸಲಾಗುವುದಿಲ್ಲ‘ ಎಂದನು. ‘ಗೆಳೆಯರು ಎಂದರೆ ಮುತ್ತಿನ ಹಾಗೆ. ಅವರು ನಮ್ಮನ್ನು ನಗಿಸುತ್ತಾರೆ. ನಮ್ಮ ನೋವನ್ನು ಮನವಿಟ್ಟು ಕೇಳುತ್ತಾರೆ. ಸಾಂತ್ವನ ಹೇಳುತ್ತಾರೆ. ಕಷ್ಟ ಕಾಲದಲ್ಲಿ ನಮ್ಮ ನೆರವಿಗೆ ಧಾವಿಸುತ್ತಾರೆ. ಅವರು ನಮ್ಮ ಕಣ್ಣೀರನ್ನು ಒರೆಸುತ್ತಾರೆ.....‘ ಅಂತಹ ಗೆಳೆಯರ ಮನಸ್ಸಿಗೆ ನೋವಾಗುವ ಹಾಗೆ ಎಂದಿಗೂ ಕೆಟ್ಟ ಮಾತನ್ನು ಆಡಬಾರದು. ಅವರೊಡನೆ ಎಂದಿಗೂ ಜಗಳವಾಡಬಾರದು‘ ಎಂದರು.


            ತಂದೆಯ ಹೇಳಿಕೊಟ್ಟ ಈ ಪಾಠ ಮಗನ ಮನಸ್ಸಿನಲ್ಲಿ ಶಾಶ್ವತವಾಗಿ ದಾಖಲಾಯಿತು.


 


 


 

Rating
Average: 5 (1 vote)

Comments