ಸಚ್ ಏ ಹೈ...
"ನನಗೆ ಕೆಲವೊಮ್ಮೆ ಮೂಡ್ ಔಟ್ ಆಗುದುಂಟ್ರೀ, ಕೆಲಸ, ಊಟ-ತಿಂಡಿ ಏನೂ ಸೇರಲ್ಲ, ನಿದ್ರೇನು ಸರಿ ಬೀಳೊಲ್ಲ,.. ಇಷ್ಟೇ ಅಲ್ಲ ಯಾಹೂ ಮೆಸ್ಸೆಂಜರ್ನಲ್ಲಿ ದಿನಾ ಒಂದೆರಡು ಗಂಟೆ ಮನೆಯವರೊಡನೆ ಮಾತನಾಡುವವನಿಗೆ ಕೆಲವೊಮ್ಮೆ ಒಂದು ನಿಮಿಷ ಫೋನ್ ಮಾಡುವುದೂ ಬೇಡವೆಂದಾಗ್ತದೆ, ಯಾಕ್ರೀ ಹೀಗೆ? ನಾನು ಗಲ್ಫಲ್ಲಿ ಹೊಸ್ತಾಗಿ ಬಂದವನೇನೂ ಅಲ್ವಲ್ಲಾ... ಮತ್ಯಾಕೆ ಹೀಗೆ??" -ದೂರದ ಸಂಬಂಧಿಕನೊಬ್ಬ ಸಿಗರೇಟಿನ ದೊಡ್ಡದೊಂದು ಪಫ್ ಒಳಗೆಳೆದು ವೀಕೆಂಡ್ ರಾತ್ರಿ ರೂಮಿನ ಟೆರೇಸ್ ಮೇಲೆ ನನ್ನಲ್ಲಿ ಕೇಳಿದ್ದ. ಅವನು ಮಾತನಾಡುತ್ತಿದ್ದಂತೆ ಒಳಗಿದ್ದ ಹೊಗೆ ಸಿಗ್ನಲ್ಲಿನಲ್ಲಿ ಆಫ್ ಮಾಡದೇ ನಿಂತ ಬೈಕಿನ ಸೈಲೆಂಸರ್ನಿಂದ ಬರುವಂತೆ ಮೆಲ್ಲ ಮೆಲ್ಲಗೆ ಹೊರ ಬರುತ್ತಿತ್ತು. "ನಿಮಗೆ ಡಿಪ್ರೆಶ್ಶನ್ ಪ್ರಾಬ್ಲಮ್ ಇದೇರೀ" -ಎಲ್ಲಾದರೂ ಹೇಳಿಬಿಟ್ಟರೆ ಅವನ ನಿದ್ರೆ ಎಲ್ಲಾ ಹೋಗಿ ಪ್ರಾಬ್ಲಮ್ ಇನ್ನೂ ಹೆಚ್ಚಾಗಬಹುದೆಂಬ ಭಯದಿಂದ "ಏನಿಲ್ಲಾರೀ... ನಂಗೂ ಕೆಲವೊಮ್ಮೆ ಹೀಗಾಗತ್ತೆ... ತಿಂಗಳುಕಟ್ಲೆ ಮನೆ ಬಿಟ್ಟು ದೂರ ಇರೋ ನಮ್ಗೆ ಅದೆಲ್ಲಾ ಮಾಮೂಲ್ರೀ... ಡೊಂಟ್ ವರೀ" ಎಂದು ಅವರನ್ನು ಸಮಜಾಯಿಷಿದ್ದೆ.
ನಿಜ ಹೇಳುವುದಾದರೆ ನನಗೂ ಕೆಲವೊಮ್ಮೆ ಈ ಮನಸ್ಥಿತಿ ಬರುವುದುಂಟು. ಅದು "ಡಿಪ್ರೆಶ್ಶನ್" ಅಂತಲೇ ಹೇಳುವಷ್ಟು ಗಂಭೀರವೇನೂ ಅಲ್ಲ. ಆದರೂ "ಆಗಿರಬಹುದಾದ" ಈ ಡಿಪ್ರೆಶ್ಶನ್ನಿಂದ ಹೊರಬರಲು ಅನೇಕ ಮಾರ್ಗಗಳನ್ನು ಉಪಯೋಗಿಸುತ್ತೇನೆ. ಊರಿನ ಗೆಳೆಯರಿಗೆ ಫೋನಾಯಿಸುವುದು, "ಜಿಮ್" ಹೋಗಿ ದೇಹವನ್ನೊಂದಷ್ಟು ಪೀಡಿಸಿಕೊಳ್ಳುವುದು, ಆಧ್ಯಾತ್ಮದಲ್ಲಿ ಹೆಚ್ಚು ಮಗ್ನನಾಗುವುದು, ಗಝಲ್ ಗಳ ಮೊರೆ ಹೋಗುವುದು. ಏನೂ ಇಫೆಕ್ಟ್ ಆಗದಿದ್ದಾಗ ಒಂದೆರಡು ಸಿಗ್ರೇಟೇ ಗತಿ... ಇವು ನನ್ನ ಮೇರೆಗಳು.
ಇನ್ನು ಕೆಲವರು ತೀರಾ ಕೆಟ್ಟ ಮಾರ್ಗಗಳನ್ನು ಬಳಸುತ್ತಾರೆ. ಅದನ್ನಿಲ್ಲಿ ಹೆಸರಿಸುವ ಅಗತ್ಯವಿಲ್ಲ ಬಿಡಿ. "ಅರೆ! ಮೂಡ್ ಔಟ್ ಆಗದೇ ತುಂಬಾ ದಿನ ಆಯ್ತಲ್ಲಾ" ಎಂದು ಮೊನ್ನೆ ಯೋಚಿಸುತ್ತಿರುವಾಗಲೇ ಪರಿಚಯದ ಹುಡುಗಿಯೊಬ್ಬಳು "ಹೇ ಶಫಿ.. ವಾಟ್ಸಪ್ ಮ್ಯಾನ್? ನೋ ನಿವ್ಸ್..." ಎಂದು ಆನ್ಲೈನ್ ಮೆಸೇಜ್ ಕಳಿಸಿಬಿಟ್ಟಳು. ಅದಕ್ಕುತ್ತರವಾಗಿ ಏನು ಬರೆಯುವುದೆಂದೇ ತೋಚದೆ "ಹೇಳುವಂತದ್ದೇನೂ ಇಲ್ಲ... ಅದೇ ಕೆಲಸ, ಅದೇ ಆಫೀಸು, ಅದೇ ಆಫೀಸಿಸ ಒರಟು ಜನರು, ಅದೇ ರೂಮು, ಅದೇ ಹೋಟೆಲು, ಅದೇ ಮೆಸ್, ಏಕಾಂಗಿ ಬದುಕು..." -ಸ್ವಲ್ಪ ಒರಟೊರಟಾಗಿಯೇ ಬರೆದುಬಿಟ್ಟೆ. ಆದರೂ ಅವಳು ಮಾತು ಮುಂದುವರಿಸಿ ಊರಿನಲ್ಲಾಗುತ್ತಿರುವ ಎಲ್ಲಾ ಆಗುಹೋಗುಗಳನ್ನು ಒಂದು "ಹುಡುಗಿ" ಕಂಡಂತೆ ವಿವರಿಸುತ್ತಾ ಹೋದಳು " ಯು ನೋ.. ಅವರು ಮದುವೆಯಾಗ್ಬಿಟ್ರು ಕಣೋ.. ಕೊನೆಗೂ... ಅಪ್ಪ ಅಮ್ಮ ಬೇಡವೆಂದರೂ ಕೇಳಲಿಲ್ಲ... ಮೊನ್ನೆ ಮಳೆ ಬಂದಿತ್ತು... ನನಗೆ ಈಗ ಶೀತ ಆದಂತಿದೆ... etc etc... ಹೃತಿಕ್ ರೋಷನ್ "ಕೈಟ್ಸ್" ನೋಡ್ಲಿಕ್ಕೆ ಪ್ಲಾನ್ ಮಾಡ್ತಾ ಇದ್ದೀವಿ... ಯು ಆರ್ ವೆಲ್ಕಮ್ ಟೂ..." -ಮದುವೆಯಾದರೆ, ಮಳೆಯಾದರೆ ನನಗೇನಪ್ಪಾ? ಮತ್ತೆ ಅವಳೀ ಔಪಚಾರಿಕ ಆಮಂತ್ರಣಕ್ಕೆ ಓಗೊಟ್ಟು ಹೋಗೋಣವೆಂದು ಒಮ್ಮೆ ಯೋಚಿಸಿದೆ. ಅದರೆ ನೂರಿನ್ನೂರು ರುಪಾಯಿ ಕೊಟ್ಟು ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ನೋಡಲು ಸಾವಿರಾರು ಖರ್ಚು ಮಾಡಿ ಊರಿಗೆ ಹೋಗುವುದು ಅಚಾತುರ್ಯದ ಕೆಲಸದಂತೆ ಕಂಡು... "ಓಹ್ ಥ್ಯಾಂಕ್ ಯೂ" ಎಂದಷ್ಟೇ ಬರೆದು ಎಂಟರ್ ಒತ್ತಿದೆ. ಒಂದು ಕಣ್ಣು ಮಿಟುಕಿಸುವ ಸ್ಮೈಲಿಯೊಂದನ್ನು ನನಗೆ ಕೊಟ್ಟು ಅವಳು ವಿದಾಯ ಹೇಳಿದಳು. ಇಷ್ಟಾದ ನಂತರ ನನ್ನ "ಮೂಡ್" ನನ್ನೊಂದಿಗೆ ಆಟವಾಡತೊಡಗಿತು. ಮನಸ್ಸಿನ ತುಮುಲಗಳೆಲ್ಲ ಒಮ್ಮೆಲೆ ಎದ್ದು ನನ್ನನ್ನು ಕಾಡತೊಡಗಿದವು. ಯಾರಾದರೂ "ವಾಟ್ಸಪ್" ಹೇಳಿದರೆ ಉತ್ತರಿಸಲಾಗದಷ್ಟು ನೀರಸವಾಗಿಬಿಟ್ಟಿತೇ ಬದುಕು? ಮುಂಚಿದ್ದ ಉಲ್ಲಾಸ, ಸಂತೋಷಗಳೆಲ್ಲ ಎಲ್ಲಿ ಮಾಯವಾಗಿವೆ? ಈ ನೀರವತೆಗೆ ಏನು ಮದ್ದು ಮಾಡುವುದು? ದಿನವಿಡೀ ಇದೇ ರಾಗ...
ಆಫೀಸ್ ಮುಗಿಸಿ ರೂಮಿಗೆ ಹೋದವನೇ ಮನೆಗೆ ಕರೆ ಮಾಡಲು ಕಂಪ್ಯೂಟರ್ ಆನ್ ಮಾಡಿದೆ. ಆದರೂ ಯಾಕೋ ಮನಸ್ಸೇ ಬರಲಿಲ್ಲ. ಆರ್ಕುಟ್ನಲ್ಲಿ ಅಪ್ಲೋಡ್ ಆಗಿದ್ದ, ಊಟಿ, ಗೋವಾ, ಇನ್ನೆಲ್ಲೆಲ್ಲೋ ಸುತ್ತಲು ಹೋಗಿದ್ದ, ಹಬ್ಬ-ಮದುವೆಗಳಿಗೆ ಊರಿಗೆ ಹೋಗಿದ್ದ ಗೆಳೆಯರ ನಗುಮುಖದ ಫೋಟೋಗಳು ನನ್ನನ್ನೇ ನೋಡಿ ಗೇಲಿ ಮಾಡಿದಂತಿದ್ದವು. "ಫೇಸ್ಬುಕ್" ನೋಡಿದರೆ ಅದೇ ಹಳೆಯ ಫಾರ್ಮ್ವಿಲ್ಲೆ ಸೇರಿ "ರೈತ"ನಾಗಲು, ಮಾಫಿಯಾ ವಾರ್ ಸೇರಿ "ಗೂಂಡಾ" ಆಗಲು ಗೆಳೆಯರ ಕೋರಿಕೆಗಳು. ಈ ಜನರು ಯಾವ ಕಾಲ್ಪನಿಕ ಲೋಕದಲ್ಲಿ ಜೀವಿಸುತ್ತಿದ್ದಾರೆ ಗೊತ್ತಿಲ್ಲ. "ಇದ್ಯಾವುದೂ ಬೇಡ. ಒಂದೆರಡು ಗೆಳೆಯರಿಗೆ ಕಾಲ್ ಮಾಡಿ ಸ್ವಲ್ಪ ಹರಟೆ ಹೊಡೆದರೆ ಸರಿಯಾಗಬಹುದೇನೋ" ಎಂದುಕೊಂಡು ನನ್ನ ಮೊದಲ ಲೈಫ್ ಲೈನ್ ಉಪಯೋಗಿಸಲು ಮುಂದಾದೆ. ಮುಂಚೆ ನನ್ನೊಂದಿಗೇ ಇದ್ದ ಗೆಳೆಯನೊಬ್ಬನಿಗೆ ಮೊದಲು ಕಾಲ್ ಮಾಡಿದೆ. ಆದರೆ ಅವನೂ ನನ್ನ "ಮೂಡ್" ಜೊತೆ ಸೇರಿ ನನ್ನನ್ನು ಇನ್ನಷ್ಟು ಖಿನ್ನನಾಗಿಸಿದ. "ಹೊಸ ಕೆಲಸ, ಹೊಸ ಜನರು, ಹೊಸ ಊರು, ಏರಿದ ಸಂಬಳ, ಪೊಸಿಶನ್, ಘನತೆ ಗೌರವ.. .ನೀನೇನು ಮಾಡುತ್ತಿದ್ದೀಯ ಅಲ್ಲಿ... ಈ ಕಡೆ ಬಾ..." ಹೀಗೆಲ್ಲಾ ಹೇಳಿ ನನ್ನ ಡಿಪ್ರೆಶ್ಶನ್ನೆಂಬ ತಿಳಿಸಾರಿಗೆ ಒಗ್ಗರಣೆ ಹಾಕಿ ಹೊಗೆಯೆಬ್ಬಿಸಿದ. ಒಮ್ಮೆ ಮನಸ್ಸು ಭಾರವಾದಂತೆ ಭಾಸವಾಗತೊಡಗಿದರೆ ಮಾಡಿದ ಯಾವ ಕೆಲಸವೂ ಸರಿಹಿಡಿಸುವುದಿಲ್ಲ. ಆಡಿದ ಎಲ್ಲಾ ಮಾತುಗಳು ನನಗೇ ಚುಚ್ಚಿದಂತೆ. ಇವೆಲ್ಲಾ ಸೇರಿ ನನ್ನ ಅರಿಷಡ್ವೈರಿಗಳೊಂದಿಗೆ ಒಪ್ಪಂದ ಮಾಡಿ ವ್ಯಕ್ತಿತ್ವವನ್ನೇ ಆವರಿಸಿಬಿಡುವ ಷಡ್ಯಂತ್ರ ರೂಪಿಸಿಕೊಂಡಂತೆ ಅನುಭವವಾಗುತ್ತದೆ.
"ಅಮ್ಮ ಫೋನಿಗೆ ಕಾಯ್ತಿರಬೇಕು... ಅವಳಿಗೊಮ್ಮೆ ಮಾತನಾಡಿಸಿ ಬಿಡುವ" -ಯೋಚಿಸುತ್ತಾ ಕಾಲ್ ಮಾಡಲು ಹೊರಟೆ. ಒಳಗೆ ರೂಮಿನಲ್ಲಿ ಬಾಗಿಲು ಮುಚ್ಚಿಕೊಂಡು ಈಗಷ್ಟೇ ಊರಿಂದ ವಾಪಾಸಾದ ರೂಮ್ಮೇಟ್ ಮೊಬೈಲ್ ಹಿಡಿದು ಹೆಂಡತಿಯೊಂದಿಗೆ ಮಾತಿನಲ್ಲಿ ನಿರತನಾಗಿದ್ದ. ಮರಾಠಿ ಭಾಷೆಯಲ್ಲಿ ಹೆಂಡತಿಯೇನಾದರೂ ಹಣ, ಒಡವೆ ಎಂದಾಕ್ಷಣ ಏರುದನಿಯಲ್ಲಿ, ಲವ್-ಯೂ, ಲೈಕ್ ಯು ಹೇಳಿದೊಡನೆ ಪಿಸುಮಾತಿನಲ್ಲಿ ಸಾಗುತ್ತಿತ್ತವನ ಸಲ್ಲಾಪ. ಜೊತೆಗೆ ಎದುರು ಫ್ಲಾಟ್ನಲ್ಲಿರುವ ಪಾಕಿಸ್ತಾನೀ ಕುಟುಂಬದ ಆ ಸಣ್ಣ ಮಗುವಿನ ನಿಲ್ಲದ ಪ್ರಲಾಪ. ರೂಮಿಂದ ಹೊರ ನಡೆದು ಪಬ್ಲಿಕ್ ಬೂತ್ನತ್ತ ಹೆಜ್ಜೆ ಹಾಕಿದೆ. ಕಾರ್ಡ್ ಉಪಯೋಗಿಸಿ ಕಾಲ್ ಮಾಡಿದರೆ ಈ ಬೂತ್ಗಳಲ್ಲಿ ಅತಿಹೆಚ್ಚು ಟಾಕ್ಟೈಮ್ ಸಿಗುತ್ತದೆ. ಆದರೆ ಅಲ್ಲಿ ಆಗಲೇ ಒಣಕಲು ದೇಹದ ಪುರುಷನೊಬ್ಬ ನಿಂತು ಫೋನಾಯಿಸುತ್ತಿದ್ದ. ತಾನುಟ್ಟ ಲುಂಗಿಯನ್ನು ಗಾಳಿಗೆ ಹಾರದಂತೆ ಮುದ್ದೆ ಮಾಡಿ ಕಾಲುಗಳ ಮಧ್ಯೆ ಒತ್ತಿಟ್ಟು ಬದಿಯ ಗೋಡೆಗೊರಗಿ ಆಂಧ್ರ ಭಾಷೆಯಲ್ಲೇನೋ ನಗುನಗುತ್ತಲೇ ಮಾತನಾಡುತ್ತಿದ್ದ. ಅವನ ನಗು, ಮಾತಿನ ಭಾವದಲ್ಲೊಂದು ಪ್ರಾಮಾಣಿಕತೆಯಿತ್ತು. ಬೇರೆ ಬೂತ್ ಹುಡುಕದೇ ಅಲ್ಲೇ ನಿಂತು ಅವನನ್ನು ನೋಡುತ್ತಾ ಕಣ್ಣಿನಿಂದಲೇ ಪ್ರಶ್ನಿಸಿದೆ... ಯಾರು ನೀನು? ಸಾಲದ ಹೊರೆ ಹೊರಲಾಗದೇ, ಆದರೂ ಆತ್ಮಹತ್ಯೆಗೆ ಶರಣಾಗದೇ ತನ್ನ ಬರಡು ಭೂಮಿಯನ್ನು ಮಾರಿ ಇಲ್ಲಿ ಬಂದಿರುವ ರೈತ? ಚಕ್ರಬಡ್ಡಿಯೆಂಬ ನೀತಿಯಿಂದ ಬಡವರ ರಕ್ತ ಹೀರುವ ಬ್ಯಾಂಕುಗಳ ಚಕ್ರವ್ಯೂಹಕ್ಕೆ ಸಿಲುಕಿ, ಮರುಪಾವತಿಸಲಾಗದೇ ಇಲ್ಲಿ ಬಂದು ದುಡಿಯುತ್ತಿರುವ ಜೀತದಾಳು? ತಂಗಿಯ ಮದುವೆಯ ಆಸೆಯಿಟ್ಟು ಈ ಮರುಭೂಮಿಯ ಸುಡುಬಿಸಿಲಿನಲ್ಲಿ ದುಡಿಯುತ್ತಿರುವ ಅಣ್ಣ? ಮಗನ ಭವಿಷ್ಯಕ್ಕೆ, ಅವನ ವಿದ್ಯಾಭ್ಯಾಸಕ್ಕೆಂದು ದುಡಿದು ಹಣ ಜಮಾಯಿಸುತ್ತಿರುವ ಅಪ್ಪ? ಯಾರಪ್ಪಾ ನೀನು? "ಇವನ ಸಂಬಳಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಸಂಭಾವನೆ ಪಡೆಯುವವ ನಾನು. ಆದರೂ ನಾನೇಕೆ ಸಂತುಷ್ಟನಾಗಿಲ್ಲ? ನನಗೇಕೆ ಹೀಗೆ ಡಿಪ್ರೆಶ್ಶನ್, ತಿಕ್ಕಲು, ಮೂಡ್ ಔಟೆಂಬ ಸ್ವಕಲ್ಪಿತ ಕಾಯಿಲೆಗಳು? ಇವನಂತೆ ಸಾವಿರಾರು ಕಾರ್ಮಿಕರು ಅತಿ ಕಡಿಮೆ ಸಂಬಳಕ್ಕೆ ಇಲ್ಲಿ ಬಂದು ದುಡಿಯುತ್ತಿದ್ದಾರೆ. ಅವರ ಜೀವನವೂ ಸಾಗುತ್ತಿದೆ" -ಯೋಚಿಸುತ್ತಿದ್ದಂತೆ ದಿನದಲ್ಲಿ ನಡೆದುದನ್ನೆಲ್ಲಾ ಮೆಲುಕು ಹಾಕತೊಡಗಿದೆ. ಗೆಳೆಯನೊಬ್ಬ ಪ್ರೀತಿಸಿ, ಅವಳಿಗೆ ಕೈಕೊಡದೆ, ಕೊಟ್ಟ ವಚನ ಪಾಲಿಸಿ ಮನೆಯವರನ್ನು ಓಲೈಸಿ, ಸಮಾಜವನ್ನು ಎದುರಿಸಿ ಮದುವೆಯಾದದ್ದು ನಿಜವಾಗಿಯೂ ಸಂತೋಷದ ಸಂಗತಿಯಾಗಿತ್ತಲ್ಲ. ಸಮಯದಲ್ಲಿ ಮಳೆಯಾದರೆ ಊರಲ್ಲಿ ಬೆಸಾಯ ಚೆನ್ನಾಗಿ ನಡೆಯುತ್ತದೆ, ಜನರು ಸುಖವಾಗಿರಬಹುದೆಂದು ಖುಷಿಪಡಬಹುದಿತ್ತಲ್ಲ. ಸುತ್ತಾಟಕ್ಕೆ ಹೊರಡುವಾಗಲೆಲ್ಲಾ ಗೆಳೆಯರೆಲ್ಲಾ ನನ್ನನ್ನು ನೆನಪಿಸಿಕೊಳ್ಳುತ್ತಾರೆ, ಮಿಸ್ ಮಾಡುತ್ತಾರೆನ್ನುವುದೆಷ್ಟು ಆನಂದದ ವಿಷಯ. ನನ್ನದೇ ಡಿಗ್ರಿಯಿರುವ, ನನ್ನೊಂದಿಗೆ ಕೆಲಸದಲ್ಲಿದ್ದ, ನನ್ನಷ್ಟೇ ಅನುಭವವಿರುವ ಸಹೋದ್ಯೋಗಿಯೊಬ್ಬ ಉತ್ತಮ ಕೆಲಸ ಗಿಟ್ಟಿಸಿಕೊಂಡನೆಂದರೆ ನನಗೂ ಸ್ವಲ್ಪ ಪರಿಶ್ರಮ ಪಟ್ಟಲ್ಲಿ ಅಂತಹಾ ಕೆಲಸ ಸಿಗಬಹುದಲ್ಲ...". ಎದುರು ನಿಂತು ಮಾತನಾಡುತ್ತಿದ್ದವ ನನ್ನ ಕಡೆ ನೋಡಿ ಮುಗುಳ್ನಕ್ಕು "ನನಗಿನ್ನೂ ತುಂಬಾ ಮಾತನಾಡ್ಲಿಕ್ಕಿದೆ ಬೇರೆ ಬೂತ್ ಹುಡುಕಿ" ಎಂದು ಸನ್ನೆಯಲ್ಲೇ ಹೇಳಿದ. ನಾನೂ "ಪರವಾಗಿಲ್ಲ" ಎಂದು ಸನ್ನೆ ಮಾಡಿ ಅವನೆದುರೇ ನಿಂತು ಕಾದೆ. ಹೌದು ಈ ಡಿಪ್ರೆಶ್ಶನ್, ಮೂಡ್ ಎಲ್ಲಾ ನಾವು ಸುತ್ತಮುತ್ತಲೂ ನೋಡುವ ರೀತಿ, ವಿಷಯಗಳನ್ನು ಸ್ವೀಕರಿಸುವ ಬಗೆಯ ಮೇಲೆ ಆಧರಿತವಾಗಿದೆ. ಒಂದು ವಿಷಯ ಅಥವಾ ಸುದ್ದಿಯಿಂದ ನಮಗೆ ಸಂತೋಷವಾಗಬಹುದು, ದುಃಖವಾಗಬಹುದು. ಸುಖ ದುಃಖಗಳು ಬದುಕಿನ ಅನಿವಾರ್ಯತೆಗಳು. ಆದರೆ ದುಃಖಿಯಾಗಿರುವುದು ನಮಗೆ ಅನಿವಾರ್ಯವಲ್ಲ. "ಕೇವಲ ಆಧ್ಯಾತ್ಮಿಕ ಮತ್ತು ಒಳಿತಿನ ವಿಷಯಗಳಲ್ಲಿ ನಮಗಿಂತ ಉನ್ನತ ಸ್ಥಾನದಲ್ಲಿರುವವರತ್ತ ನೋಡಬೇಕು, ಲೌಕಿಕ ವಿಷಯಗಳಲ್ಲಿ ನಮಗಿಂತ ಕೆಳಗಿದ್ದವರತ್ತ ನೋಡಬೇಕು ಆಗಲೇ ಸುಖವಾಗಿರಲು ಸಾಧ್ಯ" -ಬಾಲ್ಯದಲ್ಲಿ ಮದರಸಾದಲ್ಲಿ ಕಲಿತಿದ್ದ ಪಾಠವೊಂದು ನೆನಪಾಗಿ ಮನಸಲ್ಲೆಲ್ಲೋ ಆಶಾಭಾವದ ಹೂವೊಂದು ಅರಳಿದಂತೆ ಅನುಭೂತಿಯಾಯಿತು. ಸಿಗ್ರೇಟಿನ ಲೈಫ್ ಲೈನ್ ಉಪಯೋಗಿಸುವ ಪ್ರಮೇಯ ಬರುವ ಮುನ್ನವೇ ಡಿಪ್ರೆಶ್ಶನ್ ತೊಲಗಿಸಿದ ಆ ಮಹಾನುಭಾವನಿಗೆ ಮನಸ್ಸಿನಲ್ಲೇ ಧನ್ಯವಾದವಿತ್ತೆ. ಅಷ್ಟರಲ್ಲಿ ಅವನೂ ಮಾತು ಮುಗಿಸಿ ನನ್ನೆಡೆ ಮುಗುಳ್ನಕ್ಕು ಹೊರಟುಹೋದ. ನಾನೂ ತಾಯಿಗೆ ಕರೆದು ಕ್ಷೇಮ ವಿಚಾರಿಸಿ ಹೊಸ ಆಹ್ಲಾದದೊಂದಿಗೆ ರೂಮಿಗೆ ವಾಪಾಸಾದೆ. ಸಂಬಂಧಿಕ, ಟೆರೇಸಿನಲ್ಲಿ ಕೇಳಿದ್ದ ಪ್ರೆಶ್ನೆಗೆ ಉತ್ತರ ಸಿಕ್ಕಿದ್ದರಿಂದ ಮೊಬೈಲಿನ ಫೋನ್ ಬುಕ್ಕಿನಲ್ಲಿ "ಡಿಪ್ರೆಶ್ಶನ್" ಸಂಬಂಧಿಕನ ಹೆಸರು ಹುಡುಕುತ್ತಾ ನನ್ನ ನೆಚ್ಚಿನ ಜಗ್ಜೀತ್ ಸಿಂಗ್ ಗಝಲ್ ಪ್ಲೇ ಮಾಡಿದೆ...
ಸಚ್ ಏ ಹೈ ಬೇಕಾರ್ ಹಮೇ ಗಮ್ ಹೋತಾ ಹೈ... ಜೋ ಚಾಹಾ ಥಾ ದುನಿಯಾ ಮೆ ಕಮ್ ಹೋತಾ ಹೈ...
http://manassinakannadi.blogspot.com/
Comments
ಉ: ಸಚ್ ಏ ಹೈ...
ಉ: ಸಚ್ ಏ ಹೈ...
ಉ: ಸಚ್ ಏ ಹೈ...
ಉ: ಸಚ್ ಏ ಹೈ...
ಉ: ಸಚ್ ಏ ಹೈ...
In reply to ಉ: ಸಚ್ ಏ ಹೈ... by shaamala
ಉ: ಸಚ್ ಏ ಹೈ...