ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
    ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ, ಉತ್ತರ ಹಾಗೂ ವಿವರಣೆಯನ್ನು ನೀಡಿದುದಕ್ಕೆ ಧನ್ಯವಾದಗಳು.
    ದಯವಿಟ್ಟು ತಾಳ್ಮೆಯಿಂದ ಹಾಗೂ ಪೂರ್ವಗ್ರಹ ಪೀಡಿತರಾಗದೇ ನನ್ನ ಹಿಂದಿನ ಹಾಗೂ ಈಗಿನ ಬರಹವನ್ನು ಓದಿ.

  • ನಾನು ಜ್ಯೋತಿಷವನ್ನು ತಿರಸ್ಕರಿಸುವವನಲ್ಲ; ಪುರಸ್ಕರಿಸುವವನೂ ಅಲ್ಲ. ಸತ್ಯವನ್ನು ತಿಳಿಯಬೇಕೆಂಬ ಆಸೆ ಮಾತ್ರ ನನಗಿದೆ.
  • ವಿಜ್ಞಾನ ಎನ್ನುವುದು ನನ್ನ ಅಳತೆಗೆ ಸಿಗುವ ಜ್ಞಾನ. ನನ್ನ ಹಾಗೆ ವೈಜ್ಞಾನಿಕ ಅಧ್ಯಯನ ಮಾಡಿರುವವರಿಗೆ ಲಭ್ಯವಾಗುವ ಜ್ಞಾನ. ಜ್ಯೋತಿಷದ ಮೊದಲ ಭಾಗ ಎಲ್ಲರಿಗೂ ಅರ್ಥವಾಗುವಂತಹದ್ದೆ. ಜನ್ಮ ಕುಂಡಲಿ ರಚಿಸಲು ಸೂಚಿಸಿರುವ ಮಾರ್ಗವನ್ನು ಯಾರೇ ಆಗಲಿ, ನಿಖರವಾಗಿ ಅನುಸರಿಸಿದರೆ, ಎಲ್ಲರಿಗೂ ಏಕರೂಪದ ಫಲಿತಾಂಶ ಬರುತ್ತದೆ. ಇದರಲ್ಲಿ ನನಗಂತೂ ಯಾವುದೇ ಅನುಮಾನವಿಲ್ಲ.
  • ಜ್ಯೋತಿಷದ ಎರಡನೆಯ ಭಾಗವಾದ ಫಲ ಜ್ಯೋತಿಷದ ಬಗ್ಗೆ ನನ್ನ ಅನುಮಾನಗಳಿವೆ. ನನ್ನ ಅನುಮಾನಗಳು ನಿಮಗೆ ಬಾಲಿಶವಾದದ್ದು ಎಂದು ಅನಿಸಿದರೆ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಏಕೆಂದರೆ ಜ್ಯೋತಿಷವನ್ನು ನಾನು ಶಾಸ್ತ್ರೀಯವಾಗಿ ಕಲಿತಿಲ್ಲ. ಸತ್ಯವನ್ನು ತಿಳಿಯಬೇಕೆಂಬ ಆಸೆ ನನಗಿರುವುದರಿಂದ ನನ್ನ ಅರಿವಿನ ಹಿನ್ನೆಲೆಯಲ್ಲಿ ನನಗೆ ತೋಚಿದ ಪ್ರಾಮಾಣಿಕ ಪ್ರಶ್ನೆಗಳನ್ನು ಕೇಳುವ ಹಕ್ಕು ನನಗಿದೆ. ಜ್ಯೋತಿಷವನ್ನು ಅಮೂಲಾಗ್ರವಾಗಿ ತಿಳಿದಿರಬಹುದಾದ ತಮಗೆ ನನ್ನ ಪ್ರಶ್ನೆಗಳು ಬಾಲಿಶವೆನಿಸಿರುವುದರಲ್ಲಿ ಆಶ್ಚರ್ಯವಿಲ್ಲ.
  • ನನ್ನ ಬಾಲಿಶ ಪ್ರಶ್ನೆಗಳು ನಾನು ವೈದ್ಯಕೀಯವನ್ನು ಸೇರುವುದಕ್ಕೆ ಮೊದಲು, ನನ್ನ ಪಿಯುಸಿ ದಿನಗಳ ಪ್ರಶ್ನೆಗಳು. ಅಂದಿನ ದಿನಗಳಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಗುರು ನನಗೆ ದೊರೆಯಲಿಲ್ಲ. ಫಲ ಜ್ಯೋತಿಷಕ್ಕೆ ಯಾವುದೇ ತರ್ಕಬದ್ಧ ವಿವರಣೆ ನನಗೆ ದೊರೆಯಲಿಲ್ಲ. ಈ ಒಂದು ಅಂಶವನ್ನು ತಮ್ಮ ಗಮನಕ್ಕೆ ಮತ್ತೆ ತರಬಯಸುತ್ತೇನೆ.
  • ಬೆನಕ ಅವರು ನೀಡಿದ ಶ್ಲೋಕ ನಂತರದ ದಿನಗಳಲ್ಲಿ ನನ್ನ ಗಮನಕ್ಕೆ ಬಂದಿತ್ತು. ಆದರೆ ಈ ಶ್ಲೋಕದ ಬಗ್ಗೆ ನನ್ನದೇ ಆದ ಗೊಂದಲಗಳಿವೆ. ಒಂದು ಮಗುವಿನ ಕುಂಡಲಿಯನ್ನು ನಿರ್ಮಿಸಲು ಆ ಮಗುವಿನ ಜನ್ಮಸಮಯವು ಬಹಳ ಮುಖ್ಯ. ಶ್ಲೋಕವನ್ನು ಗಮನಿಸಿ. ನಾಲ್ಕು ಯುಗಗಳಿಗೆ ನಾಲ್ಕು ಭಿನ್ನ ರೀತಿಯ ಜನನ ಸಮಯ ನಿರ್ಣಯ ಲಕ್ಷಣಗಳನ್ನು ಹೇಳುತ್ತದೆ. ಈ ಭಿನ್ನತೆ ಏಕೆ ಎಂದು ಪ್ರಶ್ನೆ ಕೇಳಿದರೆ ಅದಕ್ಕೆ ನಿಖರ ಉತ್ತರ ದೊರೆಯುವುದಿಲ್ಲ. (ಹೆಚ್ಚೆಂದರೆ ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ, ತ್ರೇತಾಯುಗದಲ್ಲಿ ಮೂರುಕಾಲುಗಳಲ್ಲಿ ಹಾಗೂ ದ್ವಾಪರಯುಗದಲ್ಲಿ ಎರಡು ಕಾಲುಗಳಲ್ಲಿ ನಿಂತಿತ್ತು. ಕಲಿಯುಗದಲ್ಲಿ ಪಾಪಿಗಳೇ ಹೆಚ್ಚಿರುವುದರಿಂದ ಧರ್ಮವು ಒಂದೇ ಕಾಲಿನಲ್ಲಿ ನಿಂತಿದೆ. ಹಾಗಾಗಿ ಮೊದಲ ಮೂರು ಯುಗಗಳಿಗೆ ಅನ್ವಯವಾಗುವ ನೀತಿ-ನಿಯಮಗಳು ಕಲಿಯುಗಕ್ಕೆ ಅನ್ವಯವಾಗಬೇಕಿಲ್ಲ ಎಂಬ ಉತ್ತರವನ್ನು ನೀಡಬಹುದು. ಅಥವ ದೈವಮೂಲ, ಋಷಿಮೂಲ, ನದಿಮೂಲವನ್ನು ಹುಡುಕಬಾರದು. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕು. ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಹೇಳಬಹುದು. ಆದರೆ ನನ್ನ ಮನಸ್ಸು ಇಂತಹ ಉತ್ತರವನ್ನು ಸ್ವೀಕರಿಸಲು ಸಿದ್ಧವಿಲ್ಲ.)
  • ಕೃತಯುಗದಲ್ಲಿ ಗರ್ಭಾದಾನ ಸಮಯ ಅಂದರೆ ಅಂಡಾಣು ಹಾಗೂ ವೀರ್ಯಾಣುಗಳ ಸಮಯ. ಅದನ್ನು ಹೊಸ ಜೀವದ ಉತ್ಪತ್ತಿ ಎಂದು ಪರಿಗಣಿಸುತ್ತಿದ್ದರು. ಇದು ವಾಸ್ತವದಲ್ಲಿ ಸತ್ಯ. ಅಂಡಾಣು ಸ್ವಯಂ ಪ್ರತ್ಯೇಕವಾಗಿ ಜೀವಿಸಲಾರದು. ವೀರ್ಯಾಣುವಿಗೆ ಪ್ರತ್ಯೇಕ ಅಸ್ತಿತ್ವವಿರುವುದಿಲ್ಲ. ಎರಡೂ ಸಂಯೋಗವಾದರೆ ಮಾತ್ರ ಹೊಸ ಜೀವದ ಉಗಮವಾಗುತ್ತದೆ. ಇದು ಹೊಸ ಜೀವಿಯ ಹುಟ್ಟಿನ ನಿಜವಾದ ಸಮಯ. ಕೃತಯುಗದಲ್ಲಿ ಇದನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರು ಎಂದು ಶ್ಲೋಕ ಹೇಳುತ್ತದೆ. ಇದನ್ನೂ ಸಹಾ ನನ್ನ ಬಾಲಿಶ ಪ್ರಶ್ನೆಗಳಲ್ಲಿ ಪ್ರಸ್ತಾಪಿಸಿದ್ದೇನೆ. (ತಮ್ಮ ಅವಗಾಹನೆಗಾಗಿ ನನ್ನ ಬಾಲಿಶ ಪ್ರಶ್ನೆಯನ್ನು ಉದ್ಧರಿಸುತ್ತಿದ್ದೇನೆ: ವಾಸ್ತವದಲ್ಲಿ ಒಬ್ಬ ವ್ಯಕ್ತಿಯ ಭವಿಷ್ಯವನ್ನು ಹೇಳಬೇಕಾದರೆ, ಅವನ ಜೀವ ರೂಪುಗೊಂಡ ಸಮಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಅದುವೇ ವೈಜ್ಞಾನಿಕ ಎಂದು ಅಂಬೋಣ. ಅಂದರೆ, ಅಂಡಾಣು ಮತ್ತು ವೀರ್ಯಾಣು ಮಿಲನವಾಗುವ ಸಂದರ್ಭ. ಜಾತಕನ ಹೆತ್ತವರು ಕೂಡಿದ ಸಮಯ. ಇದನ್ನೇ ಗರ್ಭಾದಾನ ಎಂದು ಶ್ಲೋಕ ಹೇಳುತ್ತದೆ)
  • ಎರಡನೆಯದು ತ್ರೇತಾಯುಗದ ಪ್ರಶ್ನೆ. ಬೆನಕ ಅವರು ತ್ರೇತಾಯಾಂ ಪುಂಸವನಂ ಎಂಬ ಶಬ್ಧಗಳಲ್ಲಿ, ಪುಂಸವನಂ ಎಂಬ ಶಬ್ಧಕ್ಕೆ ಪುಂಸವನ ಅಥವ ಜಲಸ್ರಾವ ಎಂಬ ಅರ್ಥವನ್ನು ನೀಡಿದ್ದಾರೆ. ಈ ಪುಂಸವನ ಎನ್ನುವುದು ಹಿಂದು ಧರ್ಮದಲ್ಲಿ ಹುಟ್ಟಿದ ಒಂದು ಮಗುವಿಗೆ ಸಲ್ಲುವ ಷೋಡಶ ಕರ್ಮಗಳಲ್ಲಿ ಒಂದು. ಮಗುವು ಹುಟ್ಟುವುದಕ್ಕೆ ಮೊದಲು ಮೂರು ಕರ್ಮಗಳನ್ನು ನಡೆಸುವರು. ಗರ್ಭಾದಾನ, ಪುಂಸವನ ಮತ್ತು ಸೀಮಂತೋನಯನ. ನನ್ನ ಅರಿವಿನ ಹಿನ್ನೆಲೆಯಲ್ಲಿ ಈ ಪುಂಸವನ ಎನ್ನುವುದೇ ತರ್ಕಹೀನ. ಹೆಸರೇ ಸೂಚಿಸುವ ಹಾಗೆ, ಇದು ಗಂಡು ಮಗು ಹುಟ್ಟಲಿ ಎಂದು ಎಂದು ನಡೆಸುವ ಒಂದು ಕರ್ಮ. ನಾನು ಓದಿರುವ ವಿಜ್ಞಾನವು ಮಗುವಿನ ಲಿಂಗನಿರ್ಣಯವು ಅಂಡಾಣು-ವೀರ್ಯಾಣುಗಳ ಮಿಲನದಲ್ಲಿ ನಿರ್ಧರಿತವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ತಾಯಿಯು ಗರ್ಭವನ್ನು ಧರಿಸಿ ೩-೪ ನೆಯ ತಿಂಗಳಾಗಿರುವಾಗ, ಪುಂಸವನ ಎಂಬ ಕರ್ಮವನ್ನು ನಡೆಸುವರು. ಇದನ್ನು ನಿರ್ದಿಷ್ಟ ತಿಥಿ ಹಾಗೂ ನಕ್ಷತ್ರವಿರುವಾಗ ಮಾತ್ರ ಮಾಡುವರು. ಜ್ಯೋತಿಷಿಗಳು ಸೂಚಿಸುವ ಸಮಯದಲ್ಲಿ ಪುರೋಹಿತರು ಈ ಕರ್ಮವನ್ನು ನಡೆಸಿ, ಗಂಡು ಮಗುವು ಹುಟ್ಟಲಿ ಎನ್ನುವರು. ಆದರೆ ನಾನು ಕಂಡ ಹಾಗೆ ಪುಂಸವನ ಮಾಡಿಸಿಕೊಂಡ ತಾಯಿಯು ಹೆಣ್ಣು ಮಗುವನ್ನು ಹೆತ್ತಿದ್ದಾಳೆ. ಆಗ ನಾನು ನಿಮ್ಮ ಪುಂಸವನ ಮಾಡಿಸಿಕೊಂಡವರಿಗೆ ಏಕೆ ಗಂಡು ಮಗುವಾಗಿ, ನಿಮ್ಮ ಕರ್ಮ ನಿಜವಾಗಲಿಲ್ಲ ಎಂದು ಜ್ಯೋತಿಷಿಗಳನ್ನು ಕೇಳಿದೆ. ಆಗವರು ಇದೊಂದು ಕರ್ಮವಯ್ಯ ಅಷ್ಟೆ. ಅವರವರ ಪೂರ್ವಜನ್ಮ ಕರ್ಮದ ಫಲವಾಗಿ ಮಕ್ಕಳು ಹುಟ್ಟುತ್ತಾರೆ. ಇದಕ್ಕೆ ಹೆಚ್ಚಿನ ಅರ್ಥ ನೀಡಬೇಡ ಎಂದರು. ಪ್ರತಿಯೊಬ್ಬ ತಂದೆ ತಾಯಿಗೂ ಗಂಡು ಮಗು ಹುಟ್ಟಲಿ ಎಂದು ಆಸೆಯಿರುತ್ತದೆ. ಆ ಹಿನ್ನೆಲೆಯಲ್ಲಿ ಇಂತಹ ಕರ್ಮ ಹುಟ್ಟಿರಬೇಕು ಎಂದು ನನ್ನ ಅನಿಸಿಕೆ. (ನನ್ನ ಅನಿಸಿಕೆ ಬಾಲಿಶವೆಂದು ತಮಗೆ ಅನಿಸಿದಲ್ಲಿ ಸರಿಯಾದ ವಿವರಣೆಯನ್ನು ನೀಡಿ. ನನ್ನನ್ನು ತಿದ್ದಿಕೊಳ್ಳುವೆ. ಕಲಿಯುವುದಕ್ಕೆ ವಯಸ್ಸಿನ ಅಂತರ ಬರಬಾರದು. ಮಂಡನಮಿಶ್ರರಂತಹ ಮಹಾ ವಿದ್ವಾಂಸರು ಶಂಕರಾಚಾರ್ಯರೆಂಬ ಹುಡುಗನ ಮುಂದೆ ಸೋಲುತ್ತಾರೆ. ಅವರನ್ನು ಗುರುವೆಂದು ಸ್ವೀಕರಿಸುತ್ತಾರೆ. ಹಾಗಾಗಿ ಸಮಾಜದಲ್ಲಿ ನನಗಿರುವ ಸ್ಥಾನ-ಮಾನವನ್ನು ತಾವು ಪರಿಗಣಿಸದೇ ಸತ್ಯವನ್ನು ತಿಳಿಸುವವರಂತಾಗಿ) ಮತ್ತೊಂದು ವಿಶೇಷ ಎಂದರೆ ಈ ಪುಂಸವನ ಕರ್ಮವನ್ನು ತಾಯಿಯ ಚೊಚ್ಚಲ ಮಗುವಿಗೆ ಮಾಡುವುದು ಹೆಚ್ಚು. ನಂತರದ ಮಕ್ಕಳಿಗೆ ಮಾಡುವುದಿಲ್ಲ. ಇದಕ್ಕೆ ಕಾರಣವನ್ನು ತಿಳಿದವರು ಹೇಳಬೇಕು. ಈ ಪುಂಸವನವು ಹೇಗೆ ಮಗುವಿನ ಜನ್ಮಕಾಲವನ್ನು ನಿರ್ಣಯಿಸುತ್ತದೆ ಎನ್ನುವುದು ನನ್ನ ಬಾಲಿಶ ಮತಿಗೆ ಇನ್ನೂ ಅರ್ಥವಾಗಿಲ್ಲ. ಏಕೆಂದರೆ ಪುಂಸವನವನ್ನು ನಡೆಸುವ ಕಾಲಕ್ಕೆ ಜೀವಾಂಕುರವಾಗಿ ೩-೪ ತಿಂಗಳು ಗತಿಸಿರುತ್ತದೆ. ಮಗುವಿನ ಪ್ರಸವವೂ ಆಗಿರುವುದಿಲ್ಲ. ಹಾಗಿರುವಾಗ ಪುಂಸವನದ ಕಾಲವನ್ನು ಹೇಗೆ ಜನ್ಮಕಾಲ ಎಂದು ಪರಿಗಣಿಸುವುದು? ಬೆನಕ ಅವರು ಜಲಸ್ರಾವ ಎಂಬ ಮತ್ತೊಂದು ಪದಪ್ರಯೋಗ ಮಾಡಿದ್ದಾರೆ. ತಾಯಿಯ ಗರ್ಭದಲ್ಲಿ ಮಗುವು ಒಂದು ಗರ್ಭಜಲ ಚೀಲದಲ್ಲಿರುತ್ತದೆ. ಮಗುವು ಪ್ರಸವವಾಗುವುದಕ್ಕೆ ಮೊದಲು ಚೀಲ ಹರಿಯಬೇಕು. ಚೀಲದೊಳಗೆ ಇರುವ ಜಲ ಹೊರಹರಿಯಬೇಕು. ಆನಂತರವೇ ಮಗುವಿನ ಪ್ರಸವ ನಡೆಯುತ್ತದೆ. ಸಹಜ ಪ್ರಸವದಲ್ಲಿ ಚೀಲ ಹರಿಯುವುದು ಹಾಗೂ ಗರ್ಭಜಲ ಹೊರಬರುವುದು ಸಹಜ ಕ್ರಿಯೆಗಳು. ಅವು ತಮಗೆ ತಾವೇ ನಡೆಯುತ್ತವೆ. ಆದರೆ ಆಸ್ಪತ್ರೆಗಳಲ್ಲಿ ಈ ಕ್ರಿಯೆಗಳನ್ನು ಸಹಜವಾಗಿ ನಡೆಯಲು ಬಿಡುವುದಿಲ್ಲ. ತಾಯಿಯ ಸ್ಥಿತಿಯನ್ನು ನೋಡಿಕೊಂಡು ವೈದ್ಯರೇ/ದಾದಿಯೇ ಬೆರಳಿನಿಂದ ಈ ಚೀಲವನ್ನು ಹರಿದು, ಗರ್ಭಜಲವನ್ನು ಹೊರಹರಿಯಲು ಬಿಡುತ್ತಾರೆ. ಬೆನಕ ಅವರ ವಿವರಣೆಯ ಅನ್ವಯ, ಈ ಸಮಯವನ್ನೇ ಮಗುವಿನ ಜನ್ಮ ಸಮಯ ಎಂದು ತ್ರೇತಾಯುಗದಲ್ಲಿ ಪರಿಗಣಿಸುತ್ತಿದ್ದರು ಎಂದಾಗುತ್ತದೆ. ನನ್ನ ಬಾಲಿಶ ಮತಿಗೆ ಇದು ತರ್ಕ ಹೀನ ಎಂದು ಅನಿಸುತ್ತದೆ. ಪುಂಸವನ ಹಾಗೂ ಗರ್ಭಜಲಸ್ರಾವಗಳ ನಡುವೆ  ಸುಮಾರು ೫-೬ ತಿಂಗಳುಗಳ ಕಾಲ ವ್ಯತ್ಯಾಸವಿರುತ್ತದೆ. ಇವೆರಡು ಒಂದೇ ಆಗಿರಲು ಸಾಧ್ಯವಿಲ್ಲ. ಪುಂಸವನದ ಕಾಲ ಗರ್ಭಜಲಸ್ರಾವ ಕಾಲಕ್ಕೆ ಸಮನಾದ ಕಾಲ ಎನ್ನುವುದಕ್ಕೆ ಯಾವುದೇ ಆಧಾರವನ್ನು ಬೆನಕ ಅವರು ನೀಡಿಲ್ಲ. ಆದರೆ ಇವೆರಡು ಒಂದೇ ಆಗಿರಲು ಸಾಧ್ಯವಿಲ್ಲ ಎನ್ನುವುದು ನನ್ನಂತಹ ಬಾಲಿಶ ಮತಿಗಳಿಗೆ ಅರ್ಥವಾಗುವಾಗ, ತಮ್ಮಂತಹ ತಿಳಿದವರಿಗೆ ಸುಲುಭವಾಗಿ ಅರ್ಥವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಜ್ಯೋತಿಷ ವಿಜ್ಞಾನವಾಗಿದ್ದರೆ ಅದು ಖಚಿತವಾಗಿರಬೇಕಲ್ಲವೆ! ತ್ರೇತಾಯುಗದಲ್ಲಿ ಜ್ಯೋತಿಷಿಗಳು ಏಕೆ ಎರಡೆರಡು ರೀತಿಯ ಜನ್ಮ ಸಮಯಗಳನ್ನು ಪರಿಗಣಿಸುತ್ತಿದ್ದರು? ಈ ಎರಡೂ ಜನನಕಾಲವನ್ನು ಲೆಕ್ಕಕ್ಕೆ ತೆಗೆದುಕೊಂಡು, ಎರಡು ಜಾತಕಗಳನ್ನು ರಚಿಸಿ, ಅವುಗಳ ಫಲಜ್ಯೋತಿಷವನ್ನು ಬರೆಯಿಸಿದರೆ, ಅವು ಏಕರೂಪವಾಗಿರುತ್ತದೆಯೆ?
  • ದ್ವಾಪರಯುಗದಲ್ಲಿ ಮಗುವಿನ ಶೀರ್ಷೋದಯ ವನ್ನು ಜನನ ಕಾಲ ಎಂದು ಪರಿಗಣಿಸಬೇಕು ಎನ್ನುತ್ತದೆ ಶ್ಲೋಕ. ಆಸ್ಪತ್ರೆಗಳಲ್ಲಿ ನಾವು ಶಿಶು ಪ್ರಸವವನ್ನು ಮಾಡುವಾಗ ಗರ್ಭಜಲ ಒಡೆಯುತ್ತಿರುವಂತೆಯೇ ಮಗುವಿನ ತಲೆಯನ್ನು ನೋಡಬಹುದು. ಏಕೆಂದರೆ ಗರ್ಭಜಲ ಸೋರಿದ ಮೇಲೆ ಮಗುವನ್ನು ಹೆಚ್ಚು ಕಾಲ ಗರ್ಭಾಶಯದಲ್ಲಿ ಬಿಡುವಂತಿಲ್ಲ. ಆದಷ್ಟು ಬೇಗ ಪ್ರಸವವನ್ನು ಮಾಡಿಸಬೇಕಾಗುತ್ತದೆ. ಇದು ಹೇಗೆ ಮಗುವಿನ ಜನನ ಕಾಲವಾಗಬಲ್ಲುದು ಎನ್ನುವುದು ನನ್ನ ತರ್ಕಕ್ಕೆ ನಿಲುಕುತ್ತಿಲ್ಲ. ಡಾಕ್ಟ್ರೆ.. ನಿಮ್ಮದು ಬಾಲಿಶ ಬುದ್ಧಿ. ಕಲಿಯುಗದಲ್ಲಿ ಇದ್ದುಕೊಂಡು ದ್ವಾಪರಯುಗದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಲ್ಲ, ಇದು ಸರಿಯೇ? ಇಷ್ಟೂ ನಿಮಗೆ ಗೊತ್ತಾಗುವುದಿಲ್ಲವೆ? ಎಂದು ನೀವು ಪ್ರಶ್ನೆ ಕೇಳಬಹುದು. ಕ್ಷಮಿಸಿ ಮಂಜು. ಇದು ಜೀವಾಂಕುರ ಸಮಯವಲ್ಲ. ಮಗುವು ತಾಯಿಯ ಒಡಲಿನಿಂದ ಪೂರ್ಣ ಹೊರಬಂದ ಪ್ರಸವ ಸಮಯವೂ ಅಲ್ಲ. ಇದು ಹೇಗೆ ಜನ್ಮಸಮಯವಾಗಬಲ್ಲುದು? ಶ್ಲೋಕದಲ್ಲಿ ಋಷಿಗಳು ಬರೆದದ್ದು ಸತ್ಯ. ಅದನ್ನು ಪ್ರಶ್ನೆ ಮಾಡದೇ ನೀವು ಒಪ್ಪಿಕೊಳ್ಳಬೇಕು ಎನ್ನುವಿರಾದರೆ, ನಾನು ಆ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಏಕೆಂದರೆ ನನ್ನ ಅನಿಸಿಕೆಯ ಅನ್ವಯ ವೇದಗಳಿಂದ ಹಿಡಿದು ಈ ಭೂಮಿಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಬರಹವೂ ಮಾನವ ನಿರ್ಮಿತವಾದವು. ದೇವವಾಣಿಯಲ್ಲ. ಮೇಲಿನ ಶ್ಲೋಕವನ್ನು ಮನುಷ್ಯರೇ ಬರೆದಿರುವರು. ದೇವರಲ್ಲ. ಇದು ನನ್ನ ಸ್ಪಷ್ಟ ನಿಲುವು.  ಹಾಗಾಗಿ ಜ್ಯೋತಿಷಿಗಳು ತ್ರೇತಾ ಮತ್ತು ದ್ವಾಪರಯುಗಗಳಲ್ಲಿ ಶಿಶುವಿನ ಜನನ ಕಾಲವನ್ನು ತರ್ಕಹೀನವಾಗಿ ನಿರ್ಧರಿಸುತ್ತಿದ್ದರು ಎಂದು ಹೇಳಬೇಕಗುತ್ತದೆ. ದ್ವಾಪರ ಯುಗದ ಈ ಜನನ ಕಾಲ ನಿರ್ಣಯವನ್ನು ಬಾಲಿಶಪ್ರಶ್ನೆ ರೂಪದಲ್ಲಿ ನಾನು ಕೇಳಿರುವುದನ್ನು ಮತ್ತೊಮ್ಮೆ ಓದಿ (ತಮ್ಮ ಅವಗಾಹನೆಗಾಗಿ ನನ್ನ ಪ್ರಶ್ನೆಯನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ತಾಯಿಯ ಯೋನಿಯಲ್ಲಿ ಮಗುವಿನ ತಲೆ ಕಾಣಿಸಿಕೊಂಡ ಸಮಯವನ್ನು ಜನನ ಸಮಯ ತೆಗೆದುಕೊಳ್ಳಬೇಕೆ?)
  • ಕಲೌ ಭೂಪತನಂ ಸ್ಮ್ರೃತಮ್ - ಕಲಿಯುಗದಲ್ಲಿ ಮಗುವು ಭೂಮಿಯನ್ನು ಸ್ಪರ್ಶಿಸಿದ ಸಮಯವನ್ನೇ ಜನನ ಕಾಲ ಎಂದು ನಿರ್ಧರಿಸಬೇಕೆಂದು ಶ್ಲೋಕ ಹೇಳುತ್ತದೆ. ಭೂಪತನಂ ಎಂಬ ಶಬ್ಧದಲ್ಲಿ ಭೂ ಮುಖ್ಯವಲ್ಲ; ಪತನಂ ಎಂಬುದೇ ಮುಖ್ಯ ಎಂದು (ಉತ್ತರಪದಾರ್ಥ ಪ್ರಧಾನೋ ತತ್ಪುರುಷಃ). ವ್ಯಾಕರಣ ಸೂತ್ರ ಸಮೇತ ಬೆನಕ ಅವರು ವಿವರಣೆಯನ್ನು ನೀಡಿದ್ದಾರೆ. ಪತನಂ ಎಂಬ ಶಬ್ಧಕ್ಕೆ ಬೀಳು ಎಂಬ ಅರ್ಥವಿದೆ. ಅಷ್ಟೆ. ಈ ಅರ್ಥದ ಅನ್ವಯ ಮಗುವು ಬೀಳುವ ಸಮಯವೇ ಮಗುವು ಹುಟ್ಟಿದ ಸಮಯ. ಮಗುವು ತಾಯಿಯ ಜನನಾಂಗದಿಂದ ಕೆಳಕ್ಕೆ ಬಿದ್ದರೆ ಅದು ನೆಲವನ್ನು ಮುಟ್ಟಲೇಬೇಕು. ಆದರೆ ಬೆನಕ ಅವರು, ಪತನಂ ಎಂಬ ಶಬ್ಧಕ್ಕೆ ಮಗುವು ತಾಯಿಯ ಒಡಲಿನಿಂದ ಪ್ರತ್ಯೇಕಗೊಂಡ ಸಮಯಯಾವ ತಾಯಿಯು ಉತ್ತಮ ಆಹಾರ, ವ್ಯಾಯಾಮ ಹಾಗೂ ಸ್ವಸ್ಥ ಮನಸ್ಸನ್ನು ಇಟ್ಟುಕೊಂಡಿರುತ್ತಾಳೋ, ಆಕೆಗೆ ಹೆರಿಗೆ ಸರಾಗವಾಗಿ ನಡೆಯುತ್ತದೆ.ಎಂದು ವ್ಯಾಖ್ಯಾನಿಸುತ್ತಾರೆ. ನನ್ನ ಸೀಮಿತ ಜ್ಞಾನಾನ್ವಯ ಶಾಸ್ತ್ರಭಾಷಾ ಶಬ್ದವನ್ನು ಹೀಗೆ ಹಿಂಜುವುದು ಸರಿಯಲ್ಲ (ಸಾಹಿತ್ಯಿಕ ಶಬ್ಧಗಳ ಅರ್ಥವನ್ನು ಹಿಂಜಬಹುದು). ಶ್ಲೋಕದಲ್ಲಿರುವ ಭೂಪತನಂ ಎಂಬ ಪ್ರಯೋಗ ಸರಿಯಾಗಿಯೇ ಇದೆ. ಪ್ರಾಚೀನ ಕಾಲದಲ್ಲಿ ಮಾನವ ಸ್ತ್ರೀ ನಿಂತುಕೊಂಡೇ ಮಗುವಿಗೆ ಜನ್ಮವೀಯುತ್ತಿದ್ದಳು. ಈ ಪದ್ಧತಿಯು ಇಂದೂ ಸಹ ಕೆಲವು ಬುಡಕಟ್ಟುಗಳಲ್ಲಿ ಆಚರಣೆಯಲ್ಲಿದೆ ಎಂದು ನಾನು ಕೇಳಿದ್ದೇನೆ. (ಆಧುನಿಕ ಯುಗದಲ್ಲಿ ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ Free Standing Birth ಎಂದು ಗೂಗಲಿಸಿ. ತಮಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ) ತಾಯಿಯು ನಿಂತುಕೊಂಡಾಗ ಭೂಮಿಯ ಗುರುತ್ವಾಕರ್ಷಣೆಯು ಪ್ರಸವವನ್ನು ಸರಾಗವಾಗಿಸುತ್ತದೆ. ಜೀವಜಗತ್ತಿನಲ್ಲಿ ಚತುಷ್ಪಾದಿ ಪ್ರಾಣಿಗಳು ನಿಂತುಕೊಂಡೇ ಪ್ರಸವಿಸುತ್ತವೆ. ಅವುಗಳಿಗೆ ಯಾರೂ ಹೆರಿಗೆ ಮಾಡಿಸಲು ಬರುವುದಿಲ್ಲ. ಗುರುತ್ವಾಕರ್ಷಣೆ ಹಾಗೂ ಗರ್ಭಾಶಯದ ಒತ್ತಡಗಳು ಸುಖಪ್ರಸವಕ್ಕೆ ಕಾರಣವಾಗುತ್ತವೆ. ಮನುಷ್ಯನ ನಾಗರೀಕನಾಗುತ್ತಿರುವಂತೆಯೇ ಮಲಗಿ ಪ್ರಸವ ಮಾಡಿಸುವ ಹವ್ಯಾಸ ಹೆಚ್ಚಿದೆ (ಇದಕ್ಕೆ ಕಾರಣವನ್ನು ಬರೆಯುತ್ತಾ ಹೋದರೆ ಅದು ವಿಷಯಾಂತರವಾಗುತ್ತದೆ). ತಾಯಿಯಾದವಳು ಮಲಗಿಕೊಂಡು ಹೆರುವುದು ನಿಜಕ್ಕೂ ಅವೈಜ್ಞಾನಿಕ. ಈ ಬಗ್ಗೆ ವೈದ್ಯಕೀಯ ಶಿಕ್ಷಣದಲ್ಲಿಯೂ  ಚರ್ಚೆ ನಡೆಯುತ್ತದೆ. (ಆದರೆ ನಾನು ತಾಯಿಯೋರ್ವಳಿಗೆ ನಿಂತುಕೊಂಡು ಮಗುವನ್ನು ಹೆರಿ ಎಂದು ಹೇಳಿದರೆ, ಆಕೆ ಹಾಗೂ ಆಕೆಯ ಮನೆಯವರು ನನ್ನನ್ನು ಅಮಾನವೀಯ ವೈದ್ಯರು ಎಂದು ಕರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಾಕ್ಟ್ರೆ...ಹೆರಿಗೆ ನೋವು ಹೇಗಿರುತ್ತೆ ಅಂತ ನಿಮಗೆ ಗೊತ್ತಾ? ಹೆಣ್ಣು ಎಷ್ಟು ನೋವನ್ನು ತಿನ್ನುತ್ತಾಳೆ ಎಂದರೆ, ಸರಾಗವಾಗಿ ಹೆರಿಗೆಯಾದರೆ ಮತ್ತೊಮ್ಮೆ ತಾಯಿಯ ಹೊಟ್ಟೆಯಿಂದ ಹುಟ್ಟಿಬಂದ ಹಾಗೆ ಅನ್ನೋದು ನಿಮಗೆ ತಿಳಿದಿಲ್ಲವೇ ಎಂದೆಲ್ಲ ನನ್ನನ್ನು ಪ್ರಶ್ನಿಸಬಹುದು. ಯಾವುದಾದರೊಂದು ಆತಂಕವು ತಾಯಿಯನ್ನು ಕಾಡುತ್ತಿದ್ದರೆ, ಆಕೆಯ ಹೆರಿಗೆ ಕಷ್ಟಕರವಾಗುತ್ತದೆ. ಇದು ನನ್ನ ಅನಿಸಿಕೆ ಮಾತ್ರವಲ್ಲ. ನೀವು ಯಾವುದೇ ಪ್ರಸೂತಿ ತಂತ್ರಜ್ಞರನ್ನು ಕೇಳಿ ಪರಾಮರ್ಶಿಸಬಹುದು) ಒಂದು ವೇಳೆ ಆಕೆ ನಿಂತುಕೊಂಡು ಹೆರಿಗೆ ಮಾಡಿಸಿಕೊಂಡರೆ, ಮಗುವು ನೆಲವನ್ನು ಮುಟ್ಟಲೇಬೇಕು. ಹಾಗಾಗಿ ಭೂಪತನಂ ಎಂಬುದು ಸರಿಯಾದ ಪ್ರಯೋಗ. ಈ ಶ್ಲೋಕವನ್ನು ಬರೆದ ಕಾಲಕ್ಕೆ ಹೆರಿಗೆಯಲ್ಲಿ ಸಿಸೇರಿಯನ್, ಫಾರ್ಸೆಪ್ಸ್ ಡೆಲಿವರಿ, ವ್ಯಾಕ್ಯೂಮ್ ಡೆಲಿವರಿ, ಎಪಿಸಿಯಾಟಮಿ ಡೆಲಿವರಿ ಇತ್ಯಾದಿಗಳು ಇರಲಿಲ್ಲ. ಡೆಲಿವರಿ ಟೇಬಲ್ ಇರಲಿಲ್ಲ. ಹಾಗಾಗಿ ಅಂದಿನ ಕಾಲದಲ್ಲಿ ಭೂಪತನಂ ಶಬ್ಧವನ್ನು ಹಿಂಜಲಿಲ್ಲ. ಇವೆಲ್ಲ ಇಂದಿನ ವಿಜ್ಞಾನದ ಫಲಗಳು. ಹಾಗಾಗಿ ಬೆನಕ ಅವರು ಮಗುವು ತಾಯಿಯ ದೇಹದಿಂದ ಪ್ರತ್ಯೇಕಗೊಳ್ಳುವ ಸಮಯವೇ ಮಗುವಿನ ಜನನ ಸಮಯ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಅವರೇ ಮಾಡಿಕೊಂಡಿರುವ ಅನುಕೂಲಾರ್ಥ. ಈ ಅರ್ಥ ಮೂಲ ಶ್ಲೋಕದಲ್ಲಿ ಇಲ್ಲ. ವೈದ್ಯಕೀಯದಲ್ಲೂ ಸಹಾ, ಮಗುವೇ ಯಾವ ವಿಧಾನದಲ್ಲಿಯಾದರೂ ಹುಟ್ಟಲಿ,  ಮಗುವಿನ ಜನನ ಸಮಯವನ್ನು ದಾಖಲಿಸಲು, ಮಗುವು ತಾಯಿಯ ದೇಹದಿಂದ ಪೂರ್ಣವಾಗಿ ಪತ್ಯೇಕಗೊಂಡ ಕಾಲವನ್ನೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ.
  • ತ್ರೇತಾ, ದ್ವಾಪರಯುಗಗಳಲ್ಲಿ ಮಗುವಿನ ಜನನ ಸಮಯವನ್ನು ನಿರ್ಧರಿಸುವ ವಿಧಾನ ನನಗೆ ತರ್ಕಬದ್ಧವಾಗಿದೆ ಹಾಗೂ ಪ್ರಾಯೋಗಿಕವಾಗಿದೆ ಎಂದು ನನ್ನ ಬಾಲಿಶ ಮತಿಗೆ ಅನಿಸುವುದಿಲ್ಲ. ಕಲಿಯುಗದ ಜನನ ಸಮಯವನ್ನು ಬೆನಕ ಅವರು ಹೇಳುವ ಹಾಗೆ ಹಿಂಜಿದರೆ, ಅದನ್ನು ಮಗುವಿನ ಜನನ ಸಮಯ ಎಂದು ಪರಿಗಣಿಸಿ ಜಾತಕವನ್ನು ಬರೆಯಬಹುದು.
  • ಈ ಶ್ಲೋಕದಲ್ಲಿ ಹೇಳಿರುವ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳು ಇದ್ದವೇ ಎಂಬ ಪ್ರಶ್ನೆಯ ಬಗ್ಗೆ ಇಲ್ಲಿ ನಾನು ಚರ್ಚಿಸಲು ಹೋಗುವುದಿಲ್ಲ. ವಿಷಯಾಂತರವಾದೀತು ಎಂಬುದೇ ಅದಕ್ಕೆ ಕಾರಣ.
  • ಮಂಜು ಅವರೆ! ಬೆನಕ ಅವರ ಉತ್ತರವನ್ನು ಮತ್ತೊಮ್ಮೆ ಓದಿನೋಡಿ. (ಸಿಝೇರಿಯನ್ ಸಮಯ ಬದಲಿಸಿ, ಒಳ್ಳೆಯ ಗ್ರಹಗತಿಯಿರುವಂತೆ ಮಾಡಲು ಸಾಧ್ಯ ಎಂಬುದು - ಜನನಕ್ಕೆ ಮುಹೂರ್ತವಿಟ್ಟಂತೆ - ಇದು ಸಾಧ್ಯವಿದೆ! ಆದರೆ, ಆ ಮುಹೂರ್ತವೂ ಬಹುಮಟ್ಟಿಗೆ ದೈವನಿಶ್ಚಿತವೇ ಎಂಬುದು ಸತ್ಯ; ಅರ್ಥಾತ್ ಒಂದು ಮಗು ಸಿಝೇರಿಯನ್ ಶಸ್ತ್ರಚಿಕಿತ್ಸೆಯಿಂದ ಹುಟ್ಟುವುದೋ ಇಲ್ಲವೋ ಎಂಬುದೂ ಪೂರ್ವನಿರ್ಧರಿತವಾಗಿದೆ ಎಂಬುದು ಬಹು ವಿದ್ವಾಂಸರ ಅಭಿಪ್ರಾಯ. ಹಾಗಾಗಿ, ಜ್ಯೋತಿಷಿ ಹೇಳಿದರೂ, ವೈದ್ಯರು ನಿರ್ಧರಿಸಿದರೂ, ಛೇದಸವನದಿಂದ(ಅಥವಾ ಅಸಹಜವಾಗಿ) ಹುಟ್ಟುವ ಮಕ್ಕಳ ಬಗ್ಗೆ ಜ್ಯೋತಿಷದಲ್ಲಿ "ಅಯೋನಿಜನ್ಮ" ಎಂದು ವಿವರಿಸಲಾಗಿದೆ; ಅವರ ಜಾತಕ ಹೇಗಿರುವುದೆಂಬ ನಿದರ್ಶನಗಳೂ ನಮ್ಮ ಪೂರ್ವಜರ ಮೇರುಕೃತಿಗಳಲ್ಲಿ ಲಭ್ಯವಿದೆ!) ಇಲ್ಲಿ ಬೆನಕ ಅವರು ಒಂದು ಮಗುವು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದರೆ ಅದು ದೈವನಿಶ್ಚಿತ ಎನ್ನುತ್ತಾರೆ. ಜನನಕ್ಕೆ ಮುಹೂರ್ತವಿಡಬಹುದು ಎನ್ನುತ್ತಾರೆ. (ಈ ವಾದವನ್ನು ನೀವು ಒಪ್ಪುವುದಾದರೆ ವೈದ್ಯರು ಹಣದಾಸೆಗಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯನ್ನು, ಅಗತ್ಯವಿಲ್ಲದಿದ್ದರೂ ಮಾಡುವುದು ಸಹಾ ದೈವನಿಯಾಮಕವೇ ಆಗುತ್ತದೆ. ಅಲ್ಲವೆ! ದೇವರೇ ಮಗುವಿನ ಜನನ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಆಗಬೇಕೆಂದು ನಿರ್ಣಯಿಸಿರುವಾಗ ಸುಮ್ಮನೇ ನನ್ನಂತಹ ವೈದ್ಯರನ್ನು ದುರಾಸೆಯ ವೈದ್ಯರು ಎಂದು ಏಕೆ ದೂರುತ್ತಿದ್ದೀರಿ! ದೇವರನ್ನು ದೂರಿ) ಅವರ ಈ ವಿವರಣೆಗೆ ನಾನು ಯಾವುದೇ ಪ್ರತಿವಾದವನ್ನು ಹೂಡುವುದಿಲ್ಲ ಎಂದು ಬರೆದಿರುವೆ. ಏಕೆಂದರೆ, ದೇವರು-ವಿಧಿ-ಪೂರ್ವಜನ್ಮ-ಕರ್ಮ-ಪುನರ್ಜನ್ಮ-ದೈವಲೀಲೆ ಇತ್ಯಾದಿಗಳ ನಂಬಿಕೆಯನ್ನು ಆಧರಿಸಿರುವಂತಹದ್ದು. ಇವನ್ನು ನಂಬುವವರು ನಂಬಲಿ. ಅದರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಅವರನ್ನು ಪುರಸ್ಕರಿಸುವುದಕ್ಕೂ ಹೋಗುವುದಿಲ್ಲ. ಖಂಡಿಸುವುದಕ್ಕೂ ಹೋಗುವುದಿಲ್ಲ. ನಾನು ಕಾರ್ಯ-ಕಾರಣಗಳಲ್ಲಿ ನಂಬಿಕೆಯನ್ನಿಟ್ಟವನು. ಕಾರ್ಯ ಕಾರಣಗಳಿಗೆ ಅತೀತವಾಗಿರುವಂತಹವನ್ನು ಅಧ್ಯಯನ ಮಾಡುವ ಕುತೂಹಲವಿದೆ. ಆದರೆ ಅವಹೇಳನ ಮಾಡುವ, ಇಲ್ಲವೇ ಎಲ್ಲವೂ ಸಾರಾಸಗಟಾಗಿ ಕಂದಾಚಾರ ಎಂದು ದೂರುವ ಉದ್ಧಟತನಕ್ಕೆ ಹೋಗುವುದಿಲ್ಲ. ನಾನು ದೈವಶಾಸ್ತ್ರಜ್ಞನಲ್ಲ.  ಹಾಗಾಗಿ ಎಲ್ಲವೂ ಪೂರ್ವನಿರ್ಣಯಿತ-ದೈವನಿಶ್ಚಿತ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಎಲ್ಲವೂ ಪೂರ್ಣನಿರ್ಣಯಿತ ಎಂದು ಭಾವಿಸುವ/ನಂಬುವ ಮನಸ್ಸು ಏನನ್ನು ಪ್ರಶ್ನಿಸದೆ ಎಲ್ಲವನ್ನು ನಂಬಬೇಕಾಗುತ್ತದೆ. ಹಾಗೆ ನಾನು ನಂಬಲು ನಾನು ಸಿದ್ಧನಿಲ್ಲ. ನನಗೆ ಗೊತ್ತಿಲ್ಲದಿರುವ/ನಿಲುಕದಿರುವ ವಿಷಯಗಳನ್ನು ಏಕಾಏಕಿ ಒಪ್ಪಲು ನಾನು ಸಿದ್ಧನಿಲ್ಲ. ನನಗೆ ತಿಳಿಯುವ ಹಾಗೆ ವಿವರಿಸುವ ಸಾಮರ್ಥ್ಯವಿರುವವರು ನನಗೆ ದೊರೆಯುವವರಿಗು ನಾನು ಸುಮ್ಮನಿರಲು ಬಯಸುತ್ತೇನೆ.
  • ನೀವೂ ಹಾಗೂ ಸುರೇಶ್ ನಾಡಿಗ್ ಹೇಳಿದಂತಹ ಅನೇಕ ಪ್ರಕರಣಗಳನ್ನು ನಾನೂ ಕೇಳಿದ್ದೇನೆ. ಆದರೆ ಅಂತಹ ಪ್ರಕರಣಗಳು ನನ್ನ ಅನುಭವಕ್ಕೆ ಬಂದಿಲ್ಲವಾದ ಕಾರಣ ಆ ಬಗ್ಗೆ ನಾನು ಯಾವುದೇ ಟೀಕೆಯನ್ನು ಮಾಡುವುದಿಲ್ಲ.
  • ಈ ಲೇಖನದ ಮುಗಿಸುವ ಮೊದಲು ನನ್ನ ಒಂದು ವಿನಂತಿ. ಜ್ಯೋತಿಷವು ಒಂದು ಶಾಸ್ತ್ರವೇ ಅಥವ ಅಲ್ಲವೇ ಎಂಬುದನ್ನು ಒರೆಗೆ ಹಚ್ಚಲು ನಾನು ಸಿದ್ಧ. ನಾನು ಹುಟ್ಟಿದ ದಿನ, ಸಮಯ, ಸ್ಥಳ ಇತ್ಯಾದಿಗಳನ್ನು ನೀಡುತ್ತೇನೆ. ನನ್ನ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ನೂರಕ್ಕೆ ನೂರರಷ್ಟು ನಿಖರವಾಗಿ ಹೇಳಿದ ಜ್ಯೋತಿಷಿಗೆ ನಾನು ಒಂದು ಲಕ್ಷ ರೂಪಾಯಿಗಳ ನಗದನ್ನು ಬಹುಮಾನವಾಗಿ ನೀಡುತ್ತೇನೆ.
  • ಸಂಪದ ಸದಸ್ಯರ ಒಂದು ನ್ಯಾಯಮಂಡಳಿಯನ್ನು ರಚಿಸೋಣ. ಅವರ ವಶಕ್ಕೆ ನಾನು ಮುಂಚಿತವಾಗಿ ಒಂದು ಲಕ್ಷ ರೂಪಾಯಿಗಳ ನಗದನ್ನು ನೀಡುತ್ತೇನೆ. ನೀವು ಕರೆದು ತರುವ ಜ್ಯೋತಿಷಿಗಳು ಅಥವ ನೀವೇ ನನ್ನ ಭೂತ ಹಾಗೂ ವರ್ತಮಾನವನ್ನು ಹೇಳಲಿ/ಹೇಳಿ. ಹಾಗೆಯೇ ನಿಗದಿತ ದಿನದಿಂದ ಮುಂದಿನ ಐದು ವರ್ಷಗಳವರೆಗೆ ನನ್ನ ಭವಿಷ್ಯವನ್ನು ೧೦೦ಕ್ಕೆ ನೂರರಷ್ಟು ನಿಖರವಾಗಿ ಹೇಳಲಿ/ಹೇಳಿ. ಹಾಗೆ ಹೇಳಿದರೆ, ಸಂಪದ ನ್ಯಾಯಮಂಡಳಿಯು ಆ ಒಂದು ಲಕ್ಷ ರೂಪಾಯಿಗಳನ್ನು ಬಡ್ಡಿ ಸಮೇತ ಜ್ಯೋತಿಷಿಗಳಿಗೆ ನೀಡಬಹುದು ಎಂದು ಲಿಖಿತ ರೂಪದಲ್ಲಿ ಬರೆದುಕೊಡುತ್ತೇನೆ. ಅಂತಹ ಜ್ಯೋತಿಷಿಗಳನ್ನು ಪರಿಚಯ ಮಾಡಿ ನನ್ನ ಭವಿಷ್ಯವನ್ನು ನಿಖರವಾಗಿ ತಿಳಿಯಲು ಸಹಾಯ ಮಾಡುವ ನಿಮ್ಮನ್ನೂ ಸೂಕ್ತವಾಗಿ ಸನ್ಮಾನಿಸುತ್ತೇನೆ. ಜ್ಯೋತಿಷ ಸತ್ಯವೆ ಅಥವ ಕಲ್ಪನೆಯೆ ಎಂದಬುದನ್ನು ಪರೀಕ್ಷಿಸುವ ಈ ಅಧ್ಯಯನದ ಸೂಕ್ಷ್ಮ ನಿಯಮಗಳನ್ನು ಸಂಪದ ನ್ಯಾಯಮಂಡಲಿ ನಿರ್ಧರಿಸಲಿ.
  • ಈ ಅಧ್ಯಯನಕ್ಕೆ ಒಂದು ಕಾಲಮಿತಿಯನ್ನು ಹಾಕಿಕೊಳ್ಳುವುದು ಸೂಕ್ತ. ಅದನ್ನು ಸಂಪದ ನ್ಯಾಯ ಮಂಡಳಿ ಇಲ್ಲವೇ ತಾವೇ ಸೂಚಿಸಬಹುದು.


ನಮಸ್ಕಾರ.
ನನ್ನಭೂತ-ವರ್ತಮಾನ-ಭವಿಷ್ಯವನ್ನು ನಿಮ್ಮಿಂದ ತಿಳಿಯಲು ನಾನು ಕಾಯುತ್ತಿದ್ದೇನೆ.
-- ನಾ.ಸೋಮೇಶ್ವರ



Rating
Average: 3 (1 vote)

Comments