ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೨)

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೨)


ಯಾವುದೇ ಸನ್ನಿವೇಶವಿರಲಿ ಭಾವೋದ್ವೇಗಕ್ಕೆ ಒಳಗಾಗದ ಆಟಗಾರ ದ್ರಾವಿಡ್. ವಿಷಯ ಏನೇ ಇರಲಿ, ದ್ರಾವಿಡ್ ಎಂದೂ ಭಾವನಾತ್ಮಕವಾಗಿ ಯೋಚಿಸಲಾರರು. ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು ಭಾವನೆಗಳಿಗೆ ಅಲ್ಲ. ಪಾಕಿಸ್ತಾನದಲ್ಲಿ ದ್ವಿಶತಕ ಪೂರೈಸಲು ಸಚಿನ್ ತೆಂಡೂಲ್ಕರ್-ಗೆ ೬ ರನ್ನುಗಳ ಅವಶ್ಯಕತೆಯಿದ್ದಾಗ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದು ಈ ಮಾತಿಗೆ ಒಂದು ನಿದರ್ಶನ. ಆಸ್ಟ್ರೇಲಿಯಾದಲ್ಲಿ ’ಮಂಕಿಗೇಟ್’ ಹಗರಣದಲ್ಲಿ ಹರ್ಭಜನ್ ಸಿಂಗಿಗೆ ಸಪೋರ್ಟ್ ಮಾಡದೇ ಇದ್ದಿದ್ದು ಇನ್ನೊಂದು ನಿದರ್ಶನ. ಆ ವಿಷಯ ಬಂದಾಗ ಹರ್ಭಜನ್ ಈಗಲೂ ’ನನಗೆ ಸಚಿನ್ ಭಾಯಿ, ಅನಿಲ್ ಭಾಯಿ, ಸೌರವ್ ಭಾಯಿ, ಲಕ್ಷ್ಮಣ್ ಭಾಯಿ ತುಂಬಾ ಸಹಾಯ ಮಾಡಿದರು...’ ಎನ್ನುತ್ತಾನೆಯೇ ಹೊರತು ತಪ್ಪಿಯೂ ರಾಹುಲ್ ದ್ರಾವಿಡ್ ಹೆಸರೆತ್ತುವುದಿಲ್ಲ!

ಸೌರವ್ ಗಾಂಗೂಲಿ ನಾಯಕತ್ವದಲ್ಲಿ ಭಾರತ ಜಿಂಬಾಬ್ವೆ ಪ್ರವಾಸದಲ್ಲಿತ್ತು. ರಾಹುಲ್ ದ್ರಾವಿಡ್ ಉಪನಾಯಕರಾಗಿದ್ದರು. ಕೋಚ್ ಗ್ರೆಗೊರಿ ಚಾಪೆಲ್ ಮತ್ತು ಸೌರವ್ ಗಾಂಗೂಲಿ ನಡುವಿನ ವಿರಸ ತಾರಕಕ್ಕೇರಿದಾಗ ಸೌರವ್, ತಾನು ಈಗಲೇ ತಂಡವನ್ನು ತ್ಯಜಿಸಿ ಭಾರತಕ್ಕೆ ಹಿಂದಿರುಗುವೆನೆಂದಾಗ ವಿಷಯದ ಗಾಂಭೀರ್ಯತೆಯನ್ನು ಅರಿತ ದ್ರಾವಿಡ್, ಗಾಂಗೂಲಿಯನ್ನು ಹಾಗೆ ಮಾಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರವಾಸದ ನಡುವಿನಲ್ಲಿಯೇ ತಂಡವನ್ನು ಬಿಟ್ಟು ತೆರಳುವುದು ಭಾರತದ ನಾಯಕನಿಗೆ ಶೋಭೆ ತರುವ ವಿಷಯವಲ್ಲ ಎನ್ನುವುದು ದ್ರಾವಿಡ್ ನಿಲುವಾಗಿತ್ತು. ಭಾರತ ತಂಡದ ನಾಯಕನಾಗಿರುವವನು ಹೀಗೆ ಮಾಡಲೇಬಾರದು ಎನ್ನುವುದು ದ್ರಾವಿಡ್ ನಿಲುವಾಗಿತ್ತೇ ವಿನ: ಸೌರವ್ ಹಾಗೆ ಮಾಡಬಾರದು ಎನ್ನುವುದಲ್ಲ. ನೆನಪಿರಲಿ, ಎಲ್ಲಾದರೂ ಸೌರವ್ ಹಿಂತಿರುಗಿದ್ದಿದ್ದರೆ ಆ ಪ್ರವಾಸದಲ್ಲಿ ಮುಂದೆ ದ್ರಾವಿಡ್ ನಾಯಕನಾಗುತ್ತಿದ್ದರು ಆದರೆ ಜಗತ್ತಿನೆಲ್ಲೆಡೆ ’ಭಾರತ ತಂಡದ ನಾಯಕ ತಂಡವನ್ನು ಬಿಟ್ಟು ಹಿಂತಿರುಗಿದ’ ಎಂದೇ ಪ್ರಚಾರವಾಗುತ್ತಿತ್ತು. ಭಾರೀ ದೇಶಪ್ರೇಮಿಯಾಗಿರುವ ದ್ರಾವಿಡ್, ಅಂತಹ ಕೀಳು ಪ್ರಚಾರ ದೇಶದ ಕ್ರಿಕೆಟ್ ತಂಡದ ನಾಯಕನ ಹೆಸರಿಗೆ ಅಂಟಿಕೊಳ್ಳದಂತೆ ನೋಡಿಕೊಂಡರು.



ವಿವಾದಗಳಿಂದ ದ್ರಾವಿಡ್ ಯಾವತ್ತೂ ದೂರ. ಜಗತ್ತೇ ಆತನ ಬಗ್ಗೆ ಮಾತನಾಡುತ್ತಾ, ವಾದ ವಿವಾದ ಮಾಡುತ್ತಾ ಇದ್ದರೂ ದ್ರಾವಿಡ್ ಏನನ್ನೂ ಮಾತನಾಡುವುದಿಲ್ಲ. ಇಂಗ್ಲಂಡ್-ನಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ನಾಯಕತ್ವ ಬೇಡ ಎಂದು ದ್ರಾವಿಡ್ ನಿರ್ಧರಿಸಿದಾಗ ಭಾರತವೇ ಅಚ್ಚರಿಗೊಂಡಿತು. ಎಲ್ಲಾ ಕಡೆಯೂ ಅದೇ ಮಾತು. ಏನಾಗಿರಬಹುದು? ದ್ರಾವಿಡ್ ಇಂತಹ ನಿರ್ಧಾರ ಏಕೆ ತಗೊಂಡರು? ಊಹಾಪೋಹಗಳು. ಆದರೆ ಸ್ವತ: ದ್ರಾವಿಡ್ ಏನನ್ನೂ ಹೇಳಲಿಲ್ಲ. ಎಲ್ಲೆಡೆ ಇದೇ ಬಗ್ಗೆ ಚರ್ಚೆಯಾಗುತ್ತಿರಬೇಕಾದರೆ ದ್ರಾವಿಡ್ ಕೇರಳದಲ್ಲಿ ಸಂಸಾರ ಸಮೇತ ವಿಹರಿಸುತ್ತಿದ್ದರು!

ಪಾಕಿಸ್ತಾನದಲ್ಲಿ ಸಚಿನ್ ೧೯೪ರಲ್ಲಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿದಾಗಲೂ ಎಲ್ಲೆಡೆ ಇದೇ ಚರ್ಚೆ. ಸ್ವತ: ಸಚಿನ್, ’ನನಗೆ ಆಶ್ಚರ್ಯವಾಯಿತು. ಇನ್ನೊಂದು ಸ್ವಲ್ಪ ಹೊತ್ತು ತಡೆದು ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಾರೆಂದು ನಾನು ತಿಳಿದಿದ್ದೆ’ ಎಂದು ಪೆದ್ದು ಪೆದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ಅಸಹನೆಯಿಂದ ಮಾತನಾಡಿದರು. ಆದರೆ ದ್ರಾವಿಡ್ ಏನನ್ನೂ ಹೇಳಲಿಲ್ಲ. ತಂಡದ ಒಳಗೆ ನಡೆಯುವ ವಿಷಯಗಳು ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಎಂಬುವುದು ದ್ರಾವಿಡ್ ನಿಲುವು. ಅದರಂತೆಯೇ ಅವರು ನಡೆದುಕೊಂಡರು. ಸಚಿನ್ ಜೊತೆ ಖುದ್ದಾಗಿ ಮಾತನಾಡಿ, ಡಿಕ್ಲೇರ್ ಮಾಡಿದ್ದು ಏಕೆ ಎಂಬುದನ್ನು ಮನದಟ್ಟುವಂತೆ ವಿವರಿಸಿ ವಿಷಯವನ್ನು ಅಲ್ಲಿಗೇ ಕೊನೆಗೊಳಿಸಿದರು. ನಂತರ ದ್ರಾವಿಡ್ ಹೇಳಿದ್ದು ’ಈ ವಿಷಯದ ಬಗ್ಗೆ ಸಚಿನ್ ಜೊತೆ ಮಾತನಾಡಿದ್ದೇನೆ. ಈ ವಿಷಯ ಇಲ್ಲಿಗೇ ಮುಗಿಯಿತು". ಸುದ್ದಿ ಚಾನೆಲ್ಲುಗಳಿಗೆ ಬೇಕಾದ ಮನುಷ್ಯನೇ ಅಲ್ಲ ಈ ದ್ರಾವಿಡ್! ಏನಾದರೂ ಗಾಸಿಪ್ ಸಿಗುತ್ತಾ ಎಂದು ಕೆದಕಿದವರು, ನೇರ ಸರಳ ಉತ್ತರ ಕೇಳಿ ಮೈ ಕೈ ಪರಚಿಕೊಳ್ಳುತ್ತಾ ಹಿಂತಿರುಗಿದರು.

ಸಚಿನ್ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ಹೇಳಿಕೆಗೆ ಎಲ್ಲಾದರೂ ದ್ರಾವಿಡ್, "ಇಂತಿಷ್ಟು ಓವರುಗಳು ಮುಗಿದ ಬಳಿಕ ಡಿಕ್ಲೇರ್ ಮಾಡಲಿದ್ದೇವೆ ಎಂದು ೨ ಬಾರಿ ಸಚಿನ್-ಗೆ ಸಂದೇಶವನ್ನು ಕಳುಹಿಸಿದ್ದೆವು. ಆದರೂ ಅವರು ಆಟದ ವೇಗವನ್ನು ಹೆಚ್ಚಿಸದೆ ಇದ್ದ ಕಾರಣ ಅನಿವಾರ್ಯವಾಗಿ ಡಿಕ್ಲೇರ್ ಮಾಡಲಾಯಿತು" ಎಂದು ಇದ್ದ ವಿಷಯವನ್ನು ಇದ್ದ ಹಾಗೆ ಹೇಳಿ ತಪ್ಪನ್ನೆಲ್ಲಾ ಸಚಿನ್ ಮೇಲೇಯೇ ಹಾಕಿಬಿಡಬಹುದಿತ್ತು. ಹಾಗೆ ಮಾಡಿದರೆ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿತ್ತಲ್ಲವೆ? ಆದರೆ ದ್ರಾವಿಡ್ ಹಾಗೆ ಮಾಡದೇ, ಸಚಿನ್ ಜೊತೆ ಖುದ್ದಾಗಿ ಮಾತನಾಡಿ ವಿಷಯವನ್ನು ತಿಳಿಗೊಳಿಸಿದರು. ಗಾಸಿಪ್-ಗಾಗಿ ಕಾಯುವ ಸುದ್ದಿ ಮಾಧ್ಯಮಗಳು ಏನನ್ನೂ ಪ್ರಚಾರ ಮಾಡಿ ಯಾವ ರೀತಿಯಲ್ಲಿ ಬೇಕಾದರೂ ಸುದ್ದಿಯನ್ನು ತಿರುಚಿ ಬಿಡುತ್ತವೆ ಎಂದು ಅರಿವಿರುವ ದ್ರಾವಿಡ್ ಇಂತಹ ವಿಷಯಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ.

ಏಕದಿನ ತಂಡದಿಂದ ದ್ರಾವಿಡ್-ನನ್ನು ಕೈಬಿಟ್ಟಾಗ ಮತ್ತದೇ ರೀತಿಯಲ್ಲಿ ಎಲ್ಲೆಡೆ ಸುದ್ದಿ. ಆದರೆ ದ್ರಾವಿಡ್ ಎಂದಿನಂತೆ ಮೌನಕ್ಕೆ ಶರಣಾದರು. ತನ್ನ ಸ್ವಾಧೀನದಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತಿಸಿ ಯೋಚಿಸಿ ಫಲವಿಲ್ಲ ಎಂಬುವುದು ದ್ರಾವಿಡ್ ಚೆನ್ನಾಗಿ ಅರಿತಿದ್ದಾರೆ. ಕಳೆದ ವರ್ಷ ಭಾರತ ತಂಡ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಪ್ರವಾಸ ಕೈಗೊಂಡಾಗ ಏಕದಿನ ಪಂದ್ಯಗಳಿಗೆ ಮತ್ತೆ ದ್ರಾವಿಡ್ ಆಯ್ಕೆ ಮಾಡಲಾಯಿತು. ತಂಡದಲ್ಲಿದ್ದ ಯುವ ಆಟಗಾರರು ವಿದೇಶದಲ್ಲಿ ಸತತ ವೈಫಲ್ಯ ಕಾಣುತ್ತಿದ್ದರಿಂದ ಒಬ್ಬ ಅನುಭವಿ ಮತ್ತು ಟೆಕ್ನಿಕಲ್ಲಿ ಸಾಲಿಡ್ ಆಟಗಾರ ಬೇಕಾಗಿತ್ತು. ದ್ರಾವಿಡ್ ಬಿಟ್ಟು ಬೇರೆ ಯಾರು ತಾನೆ ಆಯ್ಕೆಯಾಗಲು ಸಾಧ್ಯ? ಸಮರ್ಥವಾಗಿ ಮತ್ತು ಚೆನ್ನಾಗಿಯೇ ದ್ರಾವಿಡ್ ಆಡಿದರು. ತಂಡ ಗೆದ್ದಿತು. ಭಾರತಕ್ಕೆ ಹಿಂದಿರುಗಿದ ಕೂಡಲೇ ಆಸ್ಟ್ರೇಲಿಯಾದ ವಿರುದ್ಧದ ಏಕದಿನ ಸರಣಿಗೆ ದ್ರಾವಿಡ್ ತಂಡದಲ್ಲಿಲ್ಲ! ಈಗ ಏನಿದ್ದರೂ ಭಾರತದ ಬ್ಯಾಟಿಂಗ್ ಪಿಚ್ಚುಗಳಲ್ಲಿ ನಡೆಯುವ ಪಂದ್ಯಗಳು. ನಮ್ಮ ಯುವ ಆಟಗಾರರು ಯಾವುದೇ ತೊಂದರೆ ಇಲ್ಲದೇ ಸಲೀಸಾಗಿ ಆಡಬಲ್ಲರು ಎಂದು ಆಯ್ಕೆಗಾರರು ದ್ರಾವಿಡ್-ನನ್ನು ಕೈಬಿಟ್ಟರು. ತಂಡ ಸರಣಿ ಸೋತಿತು! ವಿದೇಶದಲ್ಲಿ ಬೇಕಿದ್ದಾಗ ತನ್ನನ್ನು ಬಳಸಿ, ಈಗ ಕೈಬಿಟ್ಟಿದ್ದಕ್ಕೆ ದ್ರಾವಿಡ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಟಿಪಿಕಲ್ ದ್ರಾವಿಡ್.

ರಾಯಲ್ ಚಾಲೆಂಜರ್ಸ್ ತಂಡವನ್ನು ಮೊದಲ ಐಪಿಎಲ್ ಸೀಸನ್ನಿನಲ್ಲಿ ದ್ರಾವಿಡ್ ಮುಂದಾಳತ್ವ ವಹಿಸಿಕೊಂಡಿದ್ದರು. ತಂಡ ೭ನೇ ಸ್ಥಾನ ಪಡೆದು ನೀರಸ ಪ್ರದರ್ಶನ ನೀಡಿತು. ೨೦-೨೦ ಪಂದ್ಯಕ್ಕೆ ದ್ರಾವಿಡ್ ಆಟ ಹೊಂದುವುದಿಲ್ಲ ಎಂಬುವುದು ಒಪ್ಪಿಕೊಳ್ಳಬೇಕಾದ ಮಾತೇ. ಆದರೆ ಮೊದಲ ಸೀಸನ್ನಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಹೆಚ್ಚು ರನ್ನು ಗಳಿಸಿದ ಆಟಗಾರರಲ್ಲಿ ದ್ರಾವಿಡ್ ಕೂಡಾ ಒಬ್ಬರು. ಸಹ ಆಟಗಾರರ ವೈಫಲ್ಯದಿಂದ ತಂಡ ವೈಫಲ್ಯ ಕಂಡಿತು. ತನ್ನ ತಂಡದ ನೀರಸ ಪ್ರದರ್ಶನದಿಂದ ತೀವ್ರ ಮುಖಭಂಗಗೊಂಡ ವಿಜಯ್ ಮಲ್ಯ ಅನಗತ್ಯ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಕೆಲವು ಸ್ಯಾಂಪಲ್ಲುಗಳು - ’ತಂಡದ ನಾಯಕನಾಗಿ ದ್ರಾವಿಡ್ ಉತ್ತಮ ಪ್ರದರ್ಶನ ನೀಡಲಿಲ್ಲ’, ’ಟೆಸ್ಟ್ ಟೀಮನ್ನು ೨೦-೨೦ ಪಂದ್ಯಾವಳಿಗೆ ಆಯ್ಕೆ ಮಾಡಿದ್ದು ನಾನಲ್ಲ, ಬದಲಾಗಿ ನಾಯಕನಾಗಿದ್ದವನು’, ’ಮಿಸ್ಬಾ ಉಲ್-ಹಕ್ ನನ್ನು ಖರೀದಿಸಬೇಕೆಂದು ಪಟ್ಟು ಹಿಡಿದವನೇ ನಾನು, ಇಲ್ಲವಾದಲ್ಲಿ ಅವನೂ ಸಿಗುತ್ತಿರಲಿಲ್ಲ’, ’ಎರಡನೇ ಐಪಿಎಲ್ ಸೀಸನ್ನಿನಲ್ಲಿ ದ್ರಾವಿಡ್ ನಾಯಕನಾಗಿರುವುದಿಲ್ಲ’.

ತಂಡದ ಹೀನಾಯ ಪ್ರದರ್ಶನಕ್ಕೆ ದ್ರಾವಿಡ್ ಮಾತ್ರ ಹೊಣೆ ಎಂಬ ಮಾತುಗಳು ರಾಯಲ್ ಚಾಲೆಂಜರ್ಸ್ ಮ್ಯಾನೇಜ್-ಮೆಂಟ್ ನಿಂದ ಬರಲಾರಂಭಿಸಿದವು. ಆದರೆ ದ್ರಾವಿಡ್ ಏನೂ ಮಾತನಾಡಲಿಲ್ಲ. ಅವಮಾನವನ್ನು ಮೌನವಾಗಿಯೇ ಸಹಿಸಿಕೊಂಡರು. ಅದಲ್ಲದೇ ಆಗ ದ್ರಾವಿಡ್ ತನ್ನ ಕ್ರಿಕೆಟ್ ಜೀವನದ ಕೆಟ್ಟ ಫಾರ್ಮ್ ನಿಂದ ಆಗಷ್ಟೇ ಹೊರಬರಲಾರಂಭಿಸಿದ್ದರು. ತನ್ನ ಫಾರ್ಮನ್ನು ಮರಳಿ ಪಡೆಯುವತ್ತ ತನ್ನೆಲ್ಲಾ ಗಮನವನ್ನು ದ್ರಾವಿಡ್ ಕೇಂದ್ರೀಕರಿಸಿದ್ದರೆ ವಿನ: ಮಲ್ಯನ ಮಳ್ಳು ಮಾತುಗಳೆಡೆಯಲ್ಲ. ಮಲ್ಯ ಮತ್ತು ರಾಯಲ್ ಚಾಲೆಂಜರ್ಸ್ ಅಧಿಕಾರಿಗಳ ಯಾವ ಹೇಳಿಕೆಗೂ ದ್ರಾವಿಡ್ ಮರುತ್ತರ ನೀಡಲಿಲ್ಲ ಮತ್ತು ತಂಡದ ನಾಯಕತ್ವದ ಬಗ್ಗೆ ತನ್ನ ಅಭಿಪ್ರಾಯವನ್ನೂ ನೀಡಲಿಲ್ಲ. ಅವರು ಹೇಳಿದ್ದು ಮತ್ತದೇ ನೇರ ಸರಳ ಮಾತು - ’ರಾಯಲ್ ಚಾಲೆಂಜರ್ಸ್ ತಂಡದೊಂದಿಗೆ ನಾನು ೩ ವರ್ಷಗಳ ಗುತ್ತಿಗೆಗೆ ಸಹಿ ಮಾಡಿದ್ದೇನೆ. ಇನ್ನೆರಡು ವರ್ಷಗಳ ಕಾಲ ತಂಡಕ್ಕೆ ನನ್ನ ಸೇವೆಯನ್ನು ಸಲ್ಲಿಸುವತ್ತ ನಾನು ಬದ್ಧನಾಗಿದ್ದೇನೆ’. ನಂತರ ಎರಡನೇ ಐಪಿಎಲ್ ಸೀಸನ್ ದಕ್ಷಿಣ ಆಫ್ರಿಕಾದಲ್ಲಿ ನಡೆದಾಗ ಅಲ್ಲಿನ ಪಿಚ್-ಗಳಿಗೆ ಹೊಂದುವ ಆಟ ಪ್ರದರ್ಶಿಸಿ ಅದ್ಭುತ ಪ್ರದರ್ಶನವನ್ನು ದ್ರಾವಿಡ್ ನೀಡಿ ಎಲ್ಲರ ಅವಮಾನಭರಿತ ಮಾತುಗಳಿಗೆ ತಕ್ಕ ಉತ್ತರವನ್ನು ತನ್ನ ಆಟದ ಮೂಲಕ ನೀಡಿದರು.



ಚಾರಣದಲ್ಲಿ ಕಾಲಿಗೆ ಅಂಟಿಕೊಳ್ಳುವ ಇಂಬಳದಂತೆ ದ್ರಾವಿಡ್ ಕ್ರೀಸಿಗೆ ಅಂಟಿಕೊಳ್ಳುತ್ತಾರೆ. ದ್ರಾವಿಡ್ ಒಮ್ಮೆ ಕ್ರೀಸಿಗೆ ಅಂಟಿಕೊಂಡರೆ ನಂತರ ಅವರನ್ನು ಅಲ್ಲಿಂದ ಅಲುಗಾಡಿಸುವುದೇ ಕಷ್ಟ. ಅವರಾಡುವ ರಕ್ಷಣಾತ್ಮಕ ಆಟ ಉನ್ನತ ಮಟ್ಟದ್ದು. ಅವರು ಡಿಫೆಂಡ್ ಮಾಡುವ ರೀತಿಯನ್ನು ನೋಡುವುದೇ ಅಂದ. ಈ ಕಲೆ ಎಲ್ಲರಿಗೂ ಸಲ್ಲುವುದಿಲ್ಲ. ಕಠಿಣ ಪರಿಶ್ರಮ ಮತ್ತು ಅಭ್ಯಾಸದೊಂದಿಗೆ ದ್ರಾವಿಡ್ ತನ್ನ ’ಡಿಫೆನ್ಸ್’ನ್ನು ಸ್ಟ್ರಾಂಗ್ ಮಾಡಿಕೊಂಡಿದ್ದಾರೆ. ಉತ್ತಮ ರಕ್ಷಣಾತ್ಮಕ ಆಟ ಇರುವ ಆಟಗಾರರನ್ನು ಔಟ್ ಮಾಡಲು ಬೌಲರುಗಳು ತುಂಬಾ ಕಷ್ಟಪಡಬೇಕಾಗುತ್ತದೆ. ಎಂತಹ ಚೆಂಡಿಗೂ ಇಂತಹ ಆಟಗಾರರ ಬಳಿ ಉತ್ತರವಿರುತ್ತದೆ. ಹೆಚ್ಚಿನ ಆಟಗಾರರು ರಕ್ಷಣಾತ್ಮಕ ಆಟ ಆಡಿದರೆ ಚೆಂಡು ನಿಧಾನವಾಗಿ ತೆವಳುತ್ತಾ ೧೦-೧೫ ಗಜಗಳಷ್ಟಾದರೂ ಮುಂದೆ ಹೋಗುತ್ತದೆ. ಆದರೆ ದ್ರಾವಿಡ್ ಡಿಫೆಂಡ್ ಮಾಡಿದರೆ ಚೆಂಡು ಬ್ಯಾಟಿನ ಸಮೀಪದಲ್ಲೇ ನಿಲ್ಲುವ ’ಸಿಲ್ಲಿ ಪಾಯಿಂಟ್’ ಮತ್ತು ’ಫಾರ್ವರ್ಡ್ ಶಾರ್ಟ್ ಲೆಗ್’ ಕ್ಷೇತ್ರರಕ್ಷಕರ ಬಳಿಯೂ ಸಾಗುವುದಿಲ್ಲ. ಸಿಲ್ಲಿ ಪಾಯಿಂಟ್ ಮತ್ತು ಫಾರ್ವರ್ಡ್ ಶಾರ್ಟ್ ಲೆಗ್ ಫೀಲ್ಡರುಗಳು ಇಷ್ಟು ಸಮೀಪ ನಿಂತರೂ ಚೆಂಡು ನಮ್ಮ ಬಳಿ ಬರದಂತೆ ಈತ ಆಡುತ್ತಾನಲ್ಲ ಎಂದು ಹುಬ್ಬೇರಿಸಬೇಕು! ಅಂತಹ ರಕ್ಷಣಾತ್ಮಕ ಆಟವನ್ನು ದ್ರಾವಿಡ್ ಆಡುತ್ತಾರೆ. ಹೆಚ್ಚಿನ ಆಟಗಾರರು ಡಿಫೆಂಡ್ ಮಾಡಿದಾಗ ಚೆಂಡು ಬೌಲರ್ ಸಮೀಪಕ್ಕೆ ಅಥವಾ ಪಾಯಿಂಟ್ ಮತ್ತು ಕವರ್ಸ್ ತನಕ ಸಾಗುತ್ತದೆ ಆದರೆ ದ್ರಾವಿಡ್ ಡಿಫೆಂಡ್ ಮಾಡಿದಾಗ ಚೆಂಡು ಅಲ್ಲೇ ದ್ರಾವಿಡ್ ಕಾಲ ಬುಡದಲ್ಲೇ ಇರುತ್ತದಲ್ಲದೆ ಅವರ ನೆರಳನ್ನೂ ದಾಟುವುದಿಲ್ಲ ಎಂದರೆ ದ್ರಾವಿಡ್ ಡಿಫೆನ್ಸ್ ಯಾವ ತರಹ ಇದೆ ಎಂದು ಊಹಿಸಬಹುದು.



ಎದುರಾಳಿ ತಂಡಗಳು ದ್ರಾವಿಡ್-ನನ್ನು ಔಟ್ ಮಾಡುವ ತಂತ್ರದ ಬಗ್ಗೆ ಹೆಚ್ಚು ಕಾಲ ವ್ಯಯಿಸುತ್ತಾರೆ. ಸಚಿನ್ ಫ್ಲ್ಯಾಷಿನೆಸ್, ಲಕ್ಷ್ಮಣ್ ಟೈಮಿಂಗ್ ಮತ್ತು ಸೌರವ್ ಅಗ್ರೆಸ್ಸಿವ್-ನೆಸ್ ನಡುವೆ ಕೂಲ್ ದ್ರಾವಿಡ್ ಆಟ ಕಣ್ಣ ಮುಂದೆ ಬರುವುದಿಲ್ಲ. ಆದರೆ ಎಲ್ಲರಿಗಿಂತಲೂ ಪ್ರಮುಖ ಬಾರಿಯನ್ನು ದ್ರಾವಿಡ್ ಆಡಿರುತ್ತಾರೆ. ಭಾರತದ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೆ ’ಡೋಂಟ್ ಲೆಟ್ ದ್ರಾವಿಡ್ ಗೆಟ್ ರನ್ಸ್’ ಎಂದು ಇಂಝಮಾಮುಲ್ ಹಕ್, ನಾಸಿರ್ ಹುಸೇನ್, ರಿಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಕ್ಕಾರರಂತಹ ದಿಗ್ಗಜರು ಹೇಳಿರುವುದು ಗಮನಾರ್ಹ.


ದ್ರಾವಿಡ್ ಎಂದೂ ತಂಡದ ನಾಯಕನಿಗಾಗಿ ಆಡಿದವರಲ್ಲ. ಅವರು ತಂಡಕ್ಕಾಗಿ, ದೇಶಕ್ಕಾಗಿ ಆಡಿದವರು. ತನಗಿಷ್ಟವಿಲ್ಲದಿದ್ದರೂ ತಂಡಕ್ಕಾಗಿ ೭೪ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಕಾರ್ಯ ನಿರ್ವಹಿಸಿದರು. ನಾಯಕ ಯಾರೇ ಇರಲಿ, ತನ್ನ ದೇಶದ ತಂಡವನ್ನು ಗೆಲ್ಲಿಸಬೇಕು ಎಂಬುವುದಷ್ಟೇ ದ್ರಾವಿಡ್ ಗುರಿಯಾಗಿರುತ್ತಿತ್ತು. ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಾಯಕರಾಗಿದ್ದಾಗ, ರಾಹುಲ್ ದ್ರಾವಿಡ್ ಅವರಿಬ್ಬರಿಗೆ ತನ್ನ ಸಂಪೂರ್ಣ ಬೆಂಬಲವನ್ನು ಅದ್ಭುತವಾಗಿ ಆಟವನ್ನಾಡುತ್ತಾ ನೀಡಿದರು. ’ತಾನು ನಾಯಕನಾಗಿಲ್ಲ’ ಅಥವಾ ’ಗೆದ್ದರೆ ಶ್ರೇಯ ತನಗೆ ಸಲ್ಲುವುದಿಲ್ಲ’ ಎಂಬ ಕ್ಷುಲ್ಲಕ ಮನೋಭಾವದೊಂದಿಗೆ ಎಂದೂ ಆಡಲಿಲ್ಲ. ಆದರೆ ದ್ರಾವಿಡ್ ನಾಯಕರಾದಾಗ ಈ ಇಬ್ಬರು ಹಿರಿಯ ಆಟಗಾರರು ದ್ರಾವಿಡ್ ತಮಗೆ ನೀಡಿದ್ದ ಬೆಂಬಲವನ್ನು ಮರೆತಂತೆ ಆಡಿದರು. ಉತ್ತಮ ಬ್ಯಾಟಿಂಗ್ ಮಾಡಿ ದ್ರಾವಿಡ್-ಗೆ ನೆರವಾದ ನಿದರ್ಶನಗಳು ಬಹಳ ಕಡಿಮೆ. ನಾಯಕನಾದವನಿಗೆ ತಂಡದಲ್ಲಿರುವ ಉಳಿದ ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾ ಸಪೋರ್ಟ್ ಮಾಡಬೇಕು. ದ್ರಾವಿಡ್ ಮಾಡಿದರು. ಆದರೆ ಅವರು ನಾಯಕನಾದಾಗ ಉಳಿದ ಹಿರಿಯ ಆಟಗಾರರು ಮುಗ್ಗರಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಭಾರತದ ಸಫಲ ನಾಯಕನೆಂದು ಸೌರವ್ ಗಂಗೂಲಿ ಹೆಸರು ಗಳಿಸಿರಬಹುದು. ಆದರೆ ಆ ಸಫಲತೆಯ ಹಿಂದೆ ರಾಹುಲ್ ದ್ರಾವಿಡ್ ಕೊಡುಗೆ ತುಂಬಾ ಇದೆ. ’ದ್ರಾವಿಡ್-ಗೆ ರನ್ನು ಗಳಿಸಲು ಆಸ್ಪದ ಕೊಡಬಾರದು. ಕುಂಬ್ಳೆಗೆ ವಿಕೆಟ್ ಕೊಡಬಾರದು’ ಎಂಬ ಸರಳ ಪ್ಲ್ಯಾನ್-ನೊಂದಿಗೆ ಎದುರಾಳಿ ತಂಡಗಳು ಅಂಕಣಕ್ಕಿಳಿಯುತ್ತಿದ್ದವು. ಆದರೆ ಆ ಪ್ಲ್ಯಾನ್ ಯಶಸ್ವಿಯಾದದ್ದೇ ಅಪರೂಪಕ್ಕೆ ಎಲ್ಲಾದರೂ ಒಮ್ಮೆ.

ತಾನು ಯಾವ ಹೊಡೆತಗಳನ್ನು ಸರಿಯಾಗಿ ಆಡಬಲ್ಲೆನೋ ಆ ಹೊಡೆತಗಳನ್ನು ಮಾತ್ರ ದ್ರಾವಿಡ್ ಆಡುತ್ತಾರೆ. ಅವರೊಬ್ಬ ಪರ್ಫೆಕ್ಷನಿಸ್ಟ್. ಯಾವುದಾದರೂ ಹೊಡೆತವನ್ನು ಸರಿಯಾಗಿ ಅಭ್ಯಾಸ ಮಾಡಿಲ್ಲವೋ ಅದನ್ನು ಅವರು ಪ್ರಯತ್ನಿಸುವುದೂ ಇಲ್ಲ. ತಾನು ಯಾವುದರಲ್ಲಿ ಅತ್ಯುತ್ತಮನೋ ಅದನ್ನು ಮಾತ್ರ ದ್ರಾವಿಡ್ ಮಾಡುತ್ತಾರೆ. ಈ ಮಾತು ಅವರು ಕನ್ನಡ ಮಾತನಾಡುವುದಕ್ಕೂ ಅನ್ವಯಿಸುತ್ತದೆ. ದ್ರಾವಿಡ್ ಕನ್ನಡ ಬಲ್ಲವರು. ಆದರೆ ನಿರರ್ಗಳವಾಗಿ ಮಾತನಾಡಲಾರರು. ಆದ್ದರಿಂದ ಕನ್ನಡ ಮಾತನಾಡಲು ಅವರು ಪ್ರಯತ್ನಿಸುವುದಿಲ್ಲದಿರಬಹುದು. ದ್ರಾವಿಡ್, ನನಗೆ ಗೊತ್ತಿರುವ ಪ್ರಕಾರ ಹಿಂದಿ, ಇಂಗ್ಲೀಷ್ ಮತ್ತು ಮರಾಠಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಿದರೂ ದ್ರಾವಿಡ್ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂಬ ಅಸಮಾಧಾನ ಕೆಲವು ಕನ್ನಡಿಗರಿಗಿದೆ. ದ್ರಾವಿಡ್ ಒಬ್ಬ ಕನ್ನಡಿಗ ಅಂದವರು ಯಾರು? ದ್ರಾವಿಡ್ ಒಬ್ಬ ಮರಾಠಿಗ. ಆತನ ಹೆತ್ತವರು ನೆಲೆ ನಿಂತದ್ದು ಬೆಂಗಳೂರಿನಲ್ಲಿ. ಹಾಗಾಗಿ ದ್ರಾವಿಡ್ ಕರ್ನಾಟಕಕ್ಕೆ ಆಡುತ್ತಿರುವುದು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೊದಲು ರಾಜ್ಯ ತಂಡಕ್ಕೆ ನಿಷ್ಠನಾಗಿ ಫುಲ್ ಟೈಮ್ ಸೇವೆ ಸಲ್ಲಿಸಿದ್ದಾರೆ. ನಂತರವೂ ಅವಕಾಶ ಸಿಕ್ಕಾಗೆಲ್ಲಾ ರಾಜ್ಯ ತಂಡಕ್ಕೆ ಆಡಿದ್ದಾರೆ. ಈ ಪ್ರಸಕ್ತ ಋತುವಿನಲ್ಲಿ (೨೦೦೯-೧೦) ರಾಜ್ಯ ತಂಡದ ಯುವ ಆಟಗಾರರನ್ನು ಅವರು ಪ್ರೇರೇಪಿಸಿ ತಂಡವನ್ನು ಮುನ್ನಡೆಸಿದ ರೀತಿ ಪ್ರಶಂಸನೀಯ. ನಟ ಮುತ್ತುರಾಜ್ ತೀರಿಕೊಂಡಾಗ ಕಪ್ಪು ಪಟ್ಟಿ ಧರಿಸಿಕೊಂಡು ಆಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ’ಆತ ಕನ್ನಡ ಮಾತನಾಡುವುದಿಲ್ಲ’ ಎಂದು ಹುಳುಕು ಹುಡುಕುವುದು ಯಾಕೆ? ದ್ರಾವಿಡ್ ಒಬ್ಬ ಕ್ರಿಕೆಟಿಗ. ಕ್ರಿಕೆಟ್ ಆಡುವುದು ಆತನ ಕೆಲಸ ಮತ್ತು ಅದನ್ನು ಆತ ಶ್ರದ್ಧೆಯಿಂದ ಮಾಡುತ್ತಿದ್ದಾನಲ್ಲವೇ?


ದ್ರಾವಿಡ್ ಕನ್ನಡ ಮಾತುಗಳನ್ನು ಇಲ್ಲಿ ಕೇಳಬಹುದು.


ಮುಂದುವರಿಯುತ್ತದೆ...

Rating
No votes yet

Comments