ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
ದ್ರಾವಿಡ್ ಒಂದು ನಶಿಸುತ್ತಿರುವ ಸಂತತಿಗೆ ಸೇರಿರುವ ಕಲಾತ್ಮಕ ಬ್ಯಾಟ್ಸ್-ಮನ್. ಇನ್ನು ಹೆಚ್ಚು ಕಾಲ ದ್ರಾವಿಡ್ ಆಡಲಾರರು. ಆದ್ದರಿಂದ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟವನ್ನು ಆದಷ್ಟು ನೋಡಿಬಿಡುವುದು ಲೇಸು. ಎಂತಹ ವಿಪರ್ಯಾಸ ನೋಡಿ. ತನ್ನ ಕ್ರಿಕೆಟ್ ಜೀವನದ ಕೊನೆಯ ಘಟ್ಟದಲ್ಲಿರುವ ದ್ರಾವಿಡ್ ನಂತಹ ಆಟಗಾರನ ಆಟವನ್ನು ಆದಷ್ಟು ನೋಡಲು ನಮಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಭಾರತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ (ಈ ಮಾತು ಸಚಿನ್ ಮತ್ತು ಲಕ್ಷ್ಮಣ್ ರಿಗೂ ಅನ್ವಯಿಸುತ್ತದೆ). ಕ್ಲಾಸಿಕ್ ಡಿಫೆನ್ಸ್, ಕಾಪಿಬುಕ್ ಶಾಟ್ಸ್ ಮತ್ತು ಎಕ್ಸಲೆಂಟ್ ಟೆಕ್ನಿಕ್ ಎಂದು ದ್ರಾವಿಡ್ ಆಟವನ್ನು ಚುಟುಕಾಗಿ ಬಣ್ಣಿಸಬಹುದು. ಹಳೆಯ ತಲೆಮಾರಿನ ಸಂಪ್ರದಾಯಿಕ ಆಟ ಮತ್ತು ಹೊಸ ತಲೆಮಾರಿನ ಇನ್ನೋವೇಷನ್ ಎರಡನ್ನೂ ದ್ರಾವಿಡ್ ಆಟದಲ್ಲಿ ಕಾಣಬಹುದು. ಹೊಸ ತಲೆಮಾರಿನ ಆಟಗಾರರಿಗೆ ಡಿಫೆನ್ಸ್ ಎಂದರೆ ಏನೆಂದೇ ಗೊತ್ತಿಲ್ಲ. ಏಕೆಂದರೆ ಕಾಲಕ್ಕೆ ತಕ್ಕಂತೆ ಆಟ ಬದಲಾಗಿದೆ. ಟೆಸ್ಟ್ ಪಂದ್ಯಗಳು ನೇಪಥ್ಯಕ್ಕೆ ಸರಿಯುತ್ತಿವೆ (ಹಾಗಾಗಬಾರದು, ಆಗದಿರಲಿ ಎಂಬುವುದು ನನ್ನ ಆಶಯ). ಇನ್ನೊಮ್ಮೆ ದ್ರಾವಿಡ್-ನಂತಹ ’ಗೋಡೆ’ ಖ್ಯಾತಿಯ ಆಟಗಾರ ಹುಟ್ಟಿಬರುವುದು ಅಸಾಧ್ಯ.
೩೭ರ ಹರೆಯದಲ್ಲೂ ಯುವಕರಿಗೆ ಸವಾಲೆನಿಸುವ ಫಿಟ್ನೆಸ್ ದ್ರಾವಿಡ್ ಹೊಂದಿದ್ದಾರೆ. ೧೪ ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು (ರಣಜಿ ಪಂದ್ಯಗಳನ್ನೂ ಸೇರಿಸಿದರೆ ೨೦ ವರ್ಷ) ಆಡಿ ಇನ್ನೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರುವ ಆಟಗಾರ ದ್ರಾವಿಡ್. ಸ್ಲಿಪ್ ನಲ್ಲಿ ಈಗಲೂ ದ್ರಾವಿಡ್ ಭಾರತದ ಟಾಪ್ ಫೀಲ್ಡರ್. ಕ್ಯಾಚುಗಳ ದ್ವಿಶತಕಕ್ಕೆ ಇನ್ನು ೭ ಕ್ಯಾಚುಗಳ ಅವಶ್ಯಕತೆಯಿದೆ (ಮೇಲಿನ ಚಿತ್ರ ದ್ರಾವಿಡ್ ವಿಶ್ವದಾಖಲೆ ಕ್ಯಾಚ್ ನಂಬರ್ ೧೮೨ ನ್ನು ಹಿಡಿದ ಬಳಿಕ ಸಂಭ್ರಮಿಸುತ್ತಿರುವುದು). ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಪಂದ್ಯಗಳು ಇವೆರಡರಲ್ಲೂ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಕಲೆಹಾಕಿರುವ ಆಟಗಾರನಿಗೆ ಸಲ್ಲಬೇಕಾದ ಗೌರವ ಇನ್ನೂ ಸಿಗುತ್ತಿಲ್ಲ ಎಂಬುವುದೇ ದು:ಖದ ಸಂಗತಿ.
ದ್ರಾವಿಡ್ ಆಟದಲ್ಲಿದ್ದ ಒಂದೇ ಕೊರತೆ ಎಂದರೆ ತುಂಬಾ ಸಂಪ್ರದಾಯಿಕ ಆಟ. ಕಳೆದ ನಾಲ್ಕೈದು ವರ್ಷಗಳಲ್ಲಿ ಸ್ವಲ್ಪ ಇನ್ನೋವೇಷನ್ ಮತ್ತು ಹೊಸತನವನ್ನು ತನ್ನ ಆಟದಲ್ಲಿ ದ್ರಾವಿಡ್ ಅಳವಡಿಸಿಕೊಂಡರೂ ತುಂಬಾ ಸಂಪ್ರದಾಯಿಕ ಆಟ ಏಕದಿನ ಪಂದ್ಯಗಳಲ್ಲಿ ಅವರಿಗೆ ಸ್ವಲ್ಪ ತೊಂದರೆ ನೀಡಿತು ಎನ್ನಬಹುದು. ೧೯೯೭ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳು ಬಹಳ ಬದಲಾವಣೆಗಳನ್ನು ಕಂಡವು. ಮೊದಲು ೫೦ ಓವರುಗಳಲ್ಲಿ ೨೦೦-೨೩೦ ರನ್ನುಗಳನ್ನು ಗಳಿಸುವುದು ಗುರಿಯಾಗಿರುತ್ತಿತ್ತು. ಆದರೆ ೧೯೯೭ ವಿಶ್ವಕಪ್ ಬಳಿಕ ಇದು ೨೩೦-೨೬೦ಕ್ಕೇರಿತು. ೨೦೦೩ರ ವಿಶ್ವಕಪ್ ಬಳಿಕವಂತೂ ೩೦೦ರ ಆಸುಪಾಸಿಗೆ. ಈಗಂತೂ ೩೫೦ ದಾಟಲೇಬೇಕು. ಹೀಗಿರುವಾಗ ತುಂಬಾ ಕಲಾತ್ಮಕ ಮತ್ತು ಸಂಪ್ರದಾಯಿಕ ಛಾಪಿನ ಆಟಗಾರರಾದ ದ್ರಾವಿಡ್-ಗೆ ಹೊಸ ಶತಮಾನದಲ್ಲಿ ಏಕದಿನ ಪಂದ್ಯಗಳಿಗೆ ಹೊಂದಿಕೊಳ್ಳಲು ಕಷ್ಟಗಳು ಎದುರಾದವು ಎನ್ನಬಹುದು.
ಒಂದು ಪ್ರಕಾರದ ಚೆಂಡಿಗೆ ಇಂತಹದೇ ಶಾಟ್ ಆಡಬೇಕು ಎನ್ನುವುದು ದ್ರಾವಿಡ್ ನಿಲುವು. ಇದೇ ಅವರಿಗೆ ಏಕದಿನ ಪಂದ್ಯಗಳಲ್ಲಿ ತೊಂದರೆಗಳನ್ನು ನೀಡತೊಡಗಿತು. ಅಷ್ಟಕ್ಕೂ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಹಳ ಕಳಪೆ ಆಟಗಾರನಂತೂ ಅಲ್ಲವೇ ಅಲ್ಲ. ಕೀಪಿಂಗ್ ಮಾಡುತ್ತಾ, ಬ್ಯಾಟಿಂಗ್ ಕೂಡಾ ಚೆನ್ನಾಗಿಯೇ ಮಾಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎನ್ನಬಹುದು. ಆದರೆ ಇಂತಹ ಚೆಂಡನ್ನು ಇಂತಹದೇ ರೀತಿಯಲ್ಲಿ ಆಡಬೇಕು ಎಂಬ ಜಿಗುಟುತನದಿಂದ ದ್ರಾವಿಡ್ ಹೊರಬರಲು ಬಹಳ ಸಮಯ ತೆಗೆದುಕೊಂಡರು. ಸಣ್ಣ ವಯಸ್ಸಿನಿಂದ ಅದೇ ರೀತಿಯಲ್ಲಿ ಆಡಿ, ಆಡುವ ಶೈಲಿಯನ್ನು ಹಾಗೇ ಬೆಳೆಸಿಕೊಂಡಿರುವಾಗ ಅದರಿಂದ ಹೊರಗೆ ಬರುವುದು ಸ್ವಲ್ಪ ಕಷ್ಟಾನೇ! ಆದರೂ ದ್ರಾವಿಡ್ ತಮ್ಮ ಆಟವನ್ನು ಏಕದಿನ ಪಂದ್ಯಗಳಿಗೆ ಹೊಂದುವಂತೆ ಬದಲಾಯಿಸಿಕೊಂಡರು. ಕಳೆದ ವರ್ಷ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಅವರು ನೀಡಿರುವ ನಿರ್ವಹಣೆ ಈ ಮಾತಿಗೆ ಸಾಕ್ಷಿ.
ದ್ರಾವಿಡ್ ಆಡುವ ಶೈಲಿಯನ್ನು ಗಮನಿಸಿ. ಆಡುವ ಎಲ್ಲಾ ಹೊಡೆತಗಳು ಅವು ಅಕ್ರಮಣಕಾರಿಯಾಗಿರಲಿ ಅಥವಾ ರಕ್ಷಣಾತ್ಮಕವಾಗಿರಲಿ ಅವರಾಡುವ ರೀತಿಗಿಂತ ಚೆನ್ನಾಗಿ ಆಡಲು ಸಾಧ್ಯವಿಲ್ಲದಂತೆ ಆಡುತ್ತಾರೆ. ಯಾವುದೇ ಹೊಡೆತ ನೋಡಲು ಅಸಹ್ಯ ಹುಟ್ಟಿಸುವುದಿಲ್ಲ. ಅವರಾಡುವ ಕವರ್ ಡ್ರೈವ್ ನನ್ನ ಫೇವರಿಟ್. ಚೆಂಡು ಪುಟಿದೇಳುವ ಜಾಗದ ಪಕ್ಕದಲ್ಲೇ ತನ್ನ ಎಡಗಾಲನ್ನು ಇರಿಸಿ ಬಲಗಾಲನ್ನು ಕ್ರೀಸಿನೊಳಗೇ ಇಟ್ಟು ಚೆಂಡನ್ನು ಕವರ್ಸ್ ಕಡೆ ಬಾರಿಸುವ ಶೈಲಿ ಅತ್ಯಂತ ಮನಮೋಹಕ.
ದ್ರಾವಿಡ್ ಕವರ್ ಡ್ರೈವ್ ಚೆನ್ನಾಗಿ ಮಾಡುತ್ತಾರೆ ಎಂಬುದರ ಅರಿವಿದ್ದ ರಿಕಿ ಪಾಂಟಿಂಗ್ ಅದೊಂದು ಟೆಸ್ಟ್ ಪಂದ್ಯದಲ್ಲಿ ಶಾರ್ಟ್ ಕವರ್ಸ್ ನಲ್ಲಿ ಇಬ್ಬರು ಕ್ಷೇತ್ರರಕ್ಷಕರನ್ನು ನಿಲ್ಲಿಸಿದ್ದರು. ದ್ರಾವಿಡ್-ಗೆ ಶೇನ್ ವಾರ್ನ್ ಮತ್ತು ಪಾಂಟಿಂಗ್ ಬಲೆಯನ್ನು ಬೀಸಿದ್ದರು. ಚೆಂಡನ್ನು ಗಾಳಿಯಲ್ಲಿ ತೇಲಿ ಬಿಟ್ಟರೆ ದ್ರಾವಿಡ್ ಮತ್ತದೇ ಕ್ಲಾಸಿಕ್ ಕವರ್ ಡ್ರೈವ್ ಆಡುತ್ತಾರೆ. ಹಾಗೆ ಡ್ರೈವ್ ಮಾಡುವಾಗ ಚೆಂಡು ಆರಂಭದಲ್ಲಿ ಸ್ವಲ್ಪ ದೂರ ಗಾಳಿಯಲ್ಲಿ ಹಾರುವ ಕಾರಣ ಅಲ್ಲೇ ಕ್ಯಾಚ್ ಮಾಡಲು ಕವರ್ಸ್ ಬದಲು ಶಾರ್ಟ್ ಕವರ್ಸ್-ನಲ್ಲಿ ಫೀಲ್ಡರುಗಳು. ಅದು ಕೂಡಾ ಇಬ್ಬರು. ಈ ಇಬ್ಬರೂ ಕ್ಷೇತ್ರರಕ್ಷಕರು ಪರಸ್ಪರ ಎಷ್ಟು ಸಮೀಪ ನಿಂತಿದ್ದರೆಂದರೆ ಸ್ವಲ್ಪ ಬಗ್ಗಿದರೆ ಇಬ್ಬರೂ ಕೈಕುಲುಕಬಹುದಾಗಿತ್ತು!
ವಾರ್ನ್ ಎಸೆದ ಮೊದಲೆರಡು ಚೆಂಡುಗಳಿಗೆ ಕವರ್ಸ್ ಮೂಲಕ ಬಾರಿಸುವ ಅವಕಾಶವಿದ್ದರೂ ದ್ರಾವಿಡ್ ಬಾರಿಸಲಿಲ್ಲ. ಆದರೆ ೩ನೇ ಚೆಂಡು? ದ್ರಾವಿಡ್-ಗೆ ಬೇಕಾದ ಕೋನದಲ್ಲೇ ಚೆಂಡು ತೇಲಿ ಬಂತು. ಕ್ಷಣಾರ್ಧದಲ್ಲಿ ಎಡಗಾಲು ಮುಂದಿಟ್ಟು ಕವರ್ ಡ್ರೈವ್ ಆಡಿದರು. ಚೆಂಡು ಬ್ಯಾಟಿನಿಂದ ಹೊಡೆತ ತಿಂದ ಬಳಿಕ ಗಾಳಿಯಲ್ಲಿ ಹಾರಲೇ ಇಲ್ಲ. ನೆಲದಲ್ಲೇ ಚಲಿಸಲು ಆರಂಭಿಸಿ ಸಮೀಪದಲ್ಲೇ ನಿಂತಿದ್ದ ಶಾರ್ಟ್ ಕವರ್ಸ್ ಫೀಲ್ಡರುಗಳನ್ನು ವಂಚಿಸಿ ಅವರಿಬ್ಬರ ನಡುವಿನಿಂದಲೇ ದಾಟಿ ಬೌಂಡರಿಯಾಚೆ ತೆರಳಿತು. ಸ್ವಲ್ಪ ಬಾಗಿದರೆ ಪರಸ್ಪರ ಕೈಕುಲುಕುವಷ್ಟು ಸಮೀಪ ನಿಂತುಕೊಂಡಿದ್ದ ಆ ಇಬ್ಬರು ಕ್ಷೇತ್ರರಕ್ಷಕರ ನಡುವಿನಿಂದ ಚೆಂಡನ್ನು ದಾಟಿಸಿದರೆಂದರೆ ಅದೆಂತಹ ’ಪ್ಲೇಸ್-ಮೆಂಟ್’ ಆಗಿರಬಹುದೆಂದು ಊಹಿಸಬಹುದು. ದಂಗಾದ ಶೇನ್ ವಾರ್ನ್ ಸೊಂಟದ ಮೇಲೆ ಕೈಯಿಟ್ಟುಕೊಂಡರೆ, ಪಾಂಟಿಂಗ್ ಗಲ್ಲದ ಮೇಲೆ ಕೈಯಿಟ್ಟುಕೊಂಡರು. ಮೊದಲೆರಡು ಚೆಂಡುಗಳಿಗೆ ಕವರ್ಸ್ ಮೂಲಕ ಬಾರಿಸುವ ಅವಕಾಶವಿದ್ದರೂ ಚೆಂಡು ಸ್ವಲ್ಪ ಗಾಳಿಯಲ್ಲಿ ಹಾರುವ ಚಾನ್ಸ್ ಇದ್ದಿದ್ದರಿಂದ ದ್ರಾವಿಡ್ ಅವನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ ೩ನೇ ಚೆಂಡಿನ ಲೆಂತಿನಲ್ಲಿ ವಾರ್ನ್ ಸ್ವಲ್ಪ ಪ್ರಮಾದವೆಸಗಿದ್ದನ್ನು ಕ್ಷಣಾರ್ಧದಲ್ಲಿ ತಿಳಿದುಕೊಂಡ ದ್ರಾವಿಡ್, ಅದ್ಭುತವಾಗಿ ಅದನ್ನು ಕವರ್ ಡ್ರೈವ್ ಮಾಡಿದರು. ಇದು ಕೇವಲ ಒಂದು ಉದಾಹರಣೆ. ದ್ರಾವಿಡ್-ನ ಈ ಆಟವನ್ನು ಶಿಳ್ಳೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾ ನಾನೊಬ್ಬನೇ ಆನಂದಿಸಿದಾಗ ಮನೆಯವರಿಗೆ ಅಚ್ಚರಿ, ಅಂಥದ್ದೇನಾಯಿತಪ್ಪಾ ಎಂದು!
ದ್ರಾವಿಡ್ ಆಡುವ ಶಾಟ್ಸ್-ಗಳನ್ನು ಗಮನಿಸಿ. ಎಲ್ಲದರಲ್ಲೂ ಕ್ಲಾಸ್ ಅಡಗಿದೆ. ಎಲೆಗನ್ಸ್ ತುಂಬಿ ತುಳುಕುತ್ತಿದೆ. ಎಡಗಾಲು ಅಷ್ಟೇ ಮುಂದಕ್ಕೆ ಅಥವಾ ಹಿಂದಕ್ಕೆ ಹೋಗಬೇಕು, ಬ್ಯಾಟ್ ಇಷ್ಟೇ ಕೋನದಲ್ಲಿ ಬಂದು ಚೆಂಡನ್ನು ಸಂಧಿಸಬೇಕು, ಬಲಗಾಲು ಇಂತಹ ಜಾಗದಲ್ಲೇ ಇರಬೇಕು, ಮಣಿಗಂಟು ಇಷ್ಟೇ ತಿರುಗಬೇಕು, ಇತ್ಯಾದಿ.. ಇತ್ಯಾದಿ. ಆದರೆ ಇಷ್ಟೇ ಅಂತರದಲ್ಲಿ ಹೆಜ್ಜೆಗಳನ್ನು ಇಟ್ಟು ಓಡಬೇಕು ಎಂದು ಅದ್ಯಾರು ದ್ರಾವಿಡ್-ಗೆ ಹೇಳಿಕೊಟ್ಟರೋ ಏನೋ? ಅವರು ಓಡುವಾಗ ಇಡುವ ಹೆಜ್ಜೆಗಳು ತುಂಬಾ ಸಣ್ಣವು. ರನ್ನುಗಳಿಗಾಗಿ ಓಡುವುದಿರಲಿ ಅಥವಾ ಕ್ಷೇತ್ರರಕ್ಷಣೆ ಮಾಡುವಾಗ ಓಡುವುದಿರಲಿ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟೇ ಓಡುತ್ತಾರೆ. ಓಡುವ ವೇಗ ಬದಲಾಗಬಹುದು ಆದರೆ ಹೆಜ್ಜೆಗಳ ನಡುವಿನ ಅಂತರ ಮಾತ್ರ ಎಂದೆಂದಿಗೂ ಅದೇ! ಜಿಗುಟುತನದ ಪರಮಾವಧಿ. ಕೆಳಗಿನ ಚಿತ್ರ ದ್ರಾವಿಡ್ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ (೧೯೯೬) ಆಡಿದ ಸ್ಕ್ವೇರ್ ಡ್ರೈವ್.
ವಿಕೆಟ್ಟಿನೆಡೆ ಅವರು ನಡೆದು ಬರುವ ಶೈಲಿ, ಗಾರ್ಡ್ ತೆಗೆದುಕೊಳ್ಳುವ ರೀತಿ, ಸ್ಟಾನ್ಸ್ ತೆಗೆದುಕೊಳ್ಳುವ ಅಂದ, ಚೆಂಡನ್ನು ಆಡಿದ ಬಳಿಕ ಅಥವಾ ಆಡದೆ ಹಿಂದೆ ಕೀಪರ್ ಕಡೆಗೆ ಬಿಟ್ಟಾಗ ಅವರ ಫಾಲೋಥ್ರೂ ಹಾಗೂ ಫುಟ್-ವರ್ಕ್ ಎಲ್ಲವೂ ಪರಿಪೂರ್ಣ. ಶಾರ್ಟ್ (ಬೌನ್ಸರ್) ಚೆಂಡುಗಳನ್ನು ಅವರಾಡುವ ರೀತಿಯೇ ಅದ್ಭುತ. ಶಾರ್ಟ್ ಚೆಂಡುಗಳನ್ನು ಪುಲ್ ಮಾಡಿದಾಗ ಚೆಂಡು ನೆಲದಲ್ಲೇ ಚಲಿಸುವುದು ಮಾತ್ರ ಅದ್ಭುತಗಳಲ್ಲೇ ಅದ್ಭುತ! ಶಾರ್ಟ್ ಚೆಂಡುಗಳಿಗೆ ಭಾರತ ಕಂಡ ಶ್ರೇಷ್ಠ ಆಟಗಾರ ರಾಹುಲ್ ದ್ರಾವಿಡ್. ಟೆಕ್ನಿಕ್ ಕಣ್ರೀ ಟೆಕ್ನಿಕ್ಕು. ಅದಕ್ಕೆ ತಾನೆ, ಆಯ್ಕೆಗಾರರು ಮತ್ತೆ ದ್ರಾವಿಡ್-ನನ್ನು ಏಕದಿನ ತಂಡಕ್ಕೆ ಆಯ್ಕೆಮಾಡಿದ್ದು. ಶಾರ್ಟ್-ಪಿಚ್ ಚೆಂಡುಗಳಿಗೆ ಆಡಲು ತಂಡದ ಯುವ ಆಟಗಾರರು ಹೆಣಗಾಡುತ್ತಿದ್ದಾಗ ತಂಡ ಪಂದ್ಯಗಳನ್ನು ಸೋಲಲು ಆರಂಭಿಸಿತು. ಆಗ ಮತ್ತೆ ಆಯ್ಕೆಯಾದದ್ದು ಟೆಕ್ನಿಕಲ್ಲಿ ಪರ್-ಫೆಕ್ಟ್ ಆಗಿರುವ ರಾಹುಲ್ ದ್ರಾವಿಡ್.
ನಾನು ’ದ್ರಾವಿಡ್ ಟೆಕ್ನಿಕ್’ ಬಗ್ಗೆ ಇಷ್ಟೆಲ್ಲಾ ಹೇಳುವುದು ಯಾಕೆಂದರೆ, ನಮಗೆ ಅದರ ಪ್ರಾಮುಖ್ಯತೆ ಗೊತ್ತಿಲ್ಲ. ಈ ಟೆಕ್ನಿಕ್ ಇಲ್ಲದಿದ್ದರೆ ಒಂದುವರೆ ದಶಕಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದು ಅಸಾಧ್ಯ. ’ಟೆಕ್ನಿಕ್’ನಲ್ಲಿ ತಪ್ಪುಗಳಿದ್ದರೆ ಬೌಲರುಗಳು ಸುಲಭದಲ್ಲೇ ಅದನ್ನು ಕಂಡುಹುಡುಕಿಬಿಡುತ್ತಾರೆ. ದ್ರಾವಿಡ್-ನಂತೆಯೇ ಅದ್ಭುತ ಆಟಗಾರರಾಗಿರುವ ಸಚಿನ್ ಎಲ್.ಬಿ.ಡಬ್ಲ್ಯು ಆಗುವ ಪರಿ ನೋಡಿ, ಲಕ್ಷ್ಮಣ್ ಬೌಲ್ಡ್ ಆಗುವ ಪರಿ ಮತ್ತು ಸ್ಲಿಪ್ಸ್-ನಲ್ಲಿ ಕ್ಯಾಚ್ ಕೊಡುವ ರೀತಿ ನೋಡಿ, ಗಂಗೂಲಿ ಶಾರ್ಟ್ ಚೆಂಡುಗಳಿಗೆ ಔಟ್ ಆಗುವ ಪರಿ ನೋಡಿ. ಆದರೆ ದ್ರಾವಿಡ್-ನನ್ನು ಔಟ್ ಮಾಡಲು ಇಂತಹದೇ ಚೆಂಡು ಹಾಕಬೇಕು ಎಂಬ ನಿಯಮವೇ ಇಲ್ಲ. ಅವರೆಲ್ಲಾದರೂ ಔಟ್ ಆದರೆ ಅದು ಅದ್ಭುತವಾದ ಚೆಂಡು ಆಗಿರಬೇಕು.
ಜಗತ್ತಿನೆಲ್ಲೆಡೆ ದ್ರಾವಿಡ್ ಅದೆಷ್ಟೋ ಶ್ರೇಷ್ಠ ಬಾರಿಗಳನ್ನು ಆಡಿದ್ದಾರೆ. ಎಲ್ಲವನ್ನೂ ಬಣ್ಣಿಸುತ್ತಾ ಕೂತರೆ ಪೇಜುಗಟ್ಟಲೆ ಬರೆಯಬೇಕಾಗಬಹುದು. ಇವುಗಳಲ್ಲಿ ಪ್ರಮುಖವಾದುದು ೨೦೦೧ ರ ಆಸ್ಟ್ರೇಲಿಯಾ ವಿರುದ್ಧ ಕೊಲ್ಕತ್ತಾದಲ್ಲಿ ಲಕ್ಷ್ಮಣ್ ಜೊತೆಗಿನ ೩೭೬ ಓಟಗಳ ಜೊತೆಯಾಟ. ಒಂದೇ ಒಂದು ತಪ್ಪೆಸಗದೆ, ಟೆಕ್ನಿಕ್ ಎಂದರೇನು ಎಂದು ಪ್ರದರ್ಶನಕ್ಕಿಟ್ಟ ಸೂಪರ್ ಬ್ಯಾಟಿಂಗ್ ಪ್ರದರ್ಶನ. ನಂತರ ೨೦೦೪ರಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್-ನಲ್ಲಿ ಮೊದಲ ಬಾರಿಯಲ್ಲಿ ದ್ವಿಶತಕದ ಆಟ. ಮತ್ತು ದ್ವಿತೀಯ ಬಾರಿಯಲ್ಲಿ ತಂಡವನ್ನು ಗೆಲುವಿನ ಹಾದಿಗೆ ಕರೆದೊಯ್ದ ಅರ್ಧ ಶತಕದ ಬಾರಿ. ತನ್ನ ’ಟೀಮ್ ಕ್ಯಾಪ್’ಗೆ ಮುತ್ತಿಕ್ಕುತ್ತಾ ತಂಡವನ್ನು ಹುರಿದುಂಬಿಸುತ್ತಿದ್ದ ಪ್ರೇಕ್ಷಕರೆಡೆ ಅದೇ ಟೀಮ್ ಕ್ಯಾಪನ್ನು ತೋರಿಸುತ್ತಾ ವಿಜಯದ ಓಟವನ್ನು ಓಡಿದ್ದು ಎಂದೂ ಮರೆಯಲಾಗದ ದೃಶ್ಯ. ನಿಜವಾದ ದೇಶಪ್ರೇಮದ ಪ್ರದರ್ಶನ. ತಂಡ ಗೆದ್ದಾಗ ಧರ್ಮಕ್ಕೆ ಸಂಬಂಧಿಸಿದ ಸಂಕೇತಗಳನ್ನು ಮಾಡುವ ಮತಾಂಧರಿಗೆ ಇದೊಂದು ಉತ್ತಮ ಪಾಠ. ೨೦೦೯ರಲ್ಲಿ ಅಹ್ಮದಾಬಾದಿನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ನಾಲ್ಕು ಹುದ್ದರಿಗಳು ೩೨ಕ್ಕೇ ಉರುಳಿ ಬಿದ್ದಾಗ ಶತಕದ ಬಾರಿ ಆಡಿದ್ದು ದ್ರಾವಿಡ್ ತಂಡವನ್ನು ಸಂಕಷ್ಟದಿಂದ ಪಾರುಮಾಡಿದ್ದಕ್ಕೆ ಇನ್ನೊಂದು ನಿದರ್ಶನ. ಪಾಕಿಸ್ತಾನದಲ್ಲಿ ಸರಣಿ ಗೆಲ್ಲಲು ಸಹಾಯಕವಾದ ೨೮೩ ರನ್ನುಗಳ ಅಮೋಘ ಬಾರಿಯನ್ನು ಮರೆಯಲು ಸಾಧ್ಯವೇ? ಟೆಸ್ಟ್ ಜೀವನದಲ್ಲಿ ಇದುವರೆಗೆ ಗಳಿಸಿರುವ ೨೯ ಶತಕಗಳಲ್ಲಿ ೬ ದ್ವಿಶತಕಗಳು.
ದ್ರಾವಿಡ್ ಒಬ್ಬ ಶ್ರೇಷ್ಠ ಕ್ರಿಕೆಟಿಗ. ಜಗತ್ತಿನ ಶ್ರೇಷ್ಠ ಬೌಲರುಗಳನ್ನು ಎದುರಿಸಿ ಅಪ್ರತಿಮ ಆಟಿವನ್ನು ಅದೆಷ್ಟೋ ಬಾರಿ ಆಡಿ ಭಾರತದ ಆಧಾರ ಸ್ತಂಭವಾಗಿ ನಿಂತಿದ್ದಾರೆ. ಗ್ಲೆನ್ ಮೆಕ್-ಗ್ರಾತ್ ಬಿಟ್ಟರೆ ಉಳಿದೆಲ್ಲಾ ಬೌಲರುಗಳನ್ನು ಸಮರ್ಥನಾಗಿ ನಿಭಾಯಿಸಿದ್ದಾರೆ. ’ಪಿಜಿನ್ ಬೌಲಿಂಗ್ ಮಾಡುವಾಗ ಮಾತ್ರ ನನ್ನ ಆಫ್ ಸ್ಟಂಪ್ ಎಲ್ಲಿದೆ ಎಂದು ತಿಳಿದುಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು’ ಎಂದು ಖುದ್ದಾಗಿ ದ್ರಾವಿಡ್ ಒಪ್ಪಿಕೊಂಡಿದ್ದಾರೆ. ’ವಾಲ್’ ಎಂಬ ಹೆಸರಿಟ್ಟ ಪುಣ್ಯಾತ್ಮರು ಯಾರೋ ಏನೋ. ಆದರೆ ಸರಿಯಾದ ಹೆಸರನ್ನೇ ಇಟ್ಟಿದ್ದಾರೆ. ದ್ರಾವಿಡ್ ಎಂಬ ಗೋಡೆಯಲ್ಲಿ ಛೇದವಾದರೆ ಭಾರತ ತಂಡದ ಹೆಬ್ಬಾಗಿಲಿನೊಳಗೆ ವೈರಿಗಳು ಒಂದು ಕಾಲಿಟ್ಟಂತೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದ್ರಾವಿಡ್-ಗಿರುವ ’ಗೋಡೆ’ ಹೆಸರಿಗೆ ತಕ್ಕಂತೆ ಗೋಡೆಯೊಂದನ್ನು ರಚಿಸಲಾಗಿದೆ. ಆ ಲೇಟ್ ಕಟ್, ಆ ಕವರ್ ಡ್ರೈವ್, ಆ ಆನ್ ಡ್ರೈವ್, ಆ ಬ್ಯಾಕ್ ಫೂಟ್ ಡಿಫೆನ್ಸ್, ಆ ಫ್ಲಿಕ್ ಇವೆಲ್ಲವನ್ನೂ ಕಲ್ಲಿನಲ್ಲಿ ಕೆತ್ತಿದರೆ ಪ್ರಾಚೀನ ದೇವಾಲಯಗಳ ಶಿಲಾಬಾಲಿಕೆಯರೂ ನಾಚಿಕೊಳ್ಳಬೇಕು. ಭಾರತದಲ್ಲಿ ಕ್ರಿಕೆಟ್ ಆಟಕ್ಕೊಂದು ದೇವಾಲಯವಿದ್ದರೆ, ಗರ್ಭಗುಡಿಯಲ್ಲಿ ಸಚಿನ್ ಮೂರ್ತಿಯಿದ್ದರೆ, ದೇವಾಲಯದ ಹೊರಗೋಡೆಯಲ್ಲಿ ದ್ರಾವಿಡ್ ಆಟದ ಭಂಗಿ ಇರುವ ಕೆತ್ತನೆಗಳೇ ತುಂಬಿರಬೇಕು. ಅಂತಹ ಅದ್ಭುತ ಶೈಲಿ ಹೊಂದಿದ್ದಾರೆ ರಾಹುಲ್ ದ್ರಾವಿಡ್.
ಮುಂದುವರಿಯುತ್ತದೆ...
Comments
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
In reply to ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩) by shaamala
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)
ಉ: ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೩)