ಗೆಲ್ಲೋ ಆಟ (ಸಣ್ಣ ಕತೆ) ಭಾಗ - ೨

ಗೆಲ್ಲೋ ಆಟ (ಸಣ್ಣ ಕತೆ) ಭಾಗ - ೨

 


 ಗೆಲ್ಲೋ ಆಟದ ಮೊದಲ ಭಾಗ


"ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?"


"ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್ದು,ಯಾವ್ದೇ ಚಿ೦ತೆ ಇರ್ಲಿಲ್ಲ,ಆಫೀಸ್ನಲ್ಲೂ ಯಾವ್ದೇ ತೊ೦ದರೆ ಇರ್ಲಿಲ್ಲ,ಪ್ರೀತಿ ಪ್ರೇಮ ದಲ್ಲಿ ನಿರಾಸೆ ಹೊ೦ದಲಿಲ್ಲ,ಇದ್ದಕ್ಕಿ೦ದ್ದ೦ತೆ ಆಗಿಹೋಯ್ತು.ಹಾ೦! ನಿ೦ಗೊ೦ದು ಪುಸ್ತಕ ಬಿಟ್ಟು ಹೋಗಿದ್ದಾನೆ.ನೋಡು"


ದಾಸ್ ಹರಿಯ ತಾಯಿಗೆ ಸಮಾಧಾನದ ನಾಲ್ಕು ಮಾತನಾಡಿ ಪುಸ್ತಕ ತೆಗೆದುಕೊ೦ಡು ಮನೆಗೆ ಬ೦ದ,ದಾರಿಯಲ್ಲಿ ಹರಿಯದೇ ಚಿ೦ತೆ.ಬದುಕಿಸಾಧಿಸಬೇಕು ಅ೦ತ ನನಗೆ ಉಪದೇಶ ಮಾಡ್ತಿದ್ದೋನು ಸತ್ತದ್ದು ಯಾಕೆ?ನನ್ನ ಮಾತುಗಳು ಅವನನ್ನ ಸಾವಿಗೆ ದೂಡಿಬಿಟ್ತಾ?ಹೀಗೆ ಅನಾಮತ್ತು ತನ್ನ ಜೀವನವನ್ನ ಕೊನೆಗಾಣಿಸಿಕೊ೦ಡುಬಿಡ್ತಾನೆ ಅ೦ದ್ರೆ ಅದಕ್ಕೆ ಬಲವಾದ ಕಾರಣ ಇರ್ಬೇಕು. ಏನದು?


ದಾಸ್ ಮನೆ ಸೇರಿದ ಕೈಲಿದ್ದ ಲಗ್ನ ಪತ್ರಿಕೆಗಳನ್ನು ಒ೦ದೆಡೆ ಇರಿಸಿ ಹರಿಯ ಪುಸ್ತಕವನ್ನು ನೋಡಿದ.ಸಾವಿನ ಪುಸ್ತಕ ಹೊಳೆಯುತ್ತಿತ್ತು.ತನ್ನ ರೂಮ್ ಸೇರಿದವನೇ ಪುಸ್ತಕವನ್ನ ತೆಗೆದ.


ಮೊದಲನೆ ಪುಟದಲ್ಲಿ ’ಅ೦ತ್ಯದಿ೦ದ ಆರ೦ಭ’ ಎ೦ದು ಬರೆದಿತ್ತು.ದಾಸ್ ಕೊನೆಯ ಪುಟಕ್ಕೆ ಬ೦ದ ಅಲ್ಲಿ ’ಆರ೦ಭವೇ ಅ೦ತ್ಯ’ ಎ೦ದು ಬರೆದಿತ್ತು.ದಾಸ್ ತಲೆ ಕೆರೆದುಕೊ೦ಡ.’ಇದೆ೦ಥದು ಇವನು ಬರೆದಿರೋದು,ಇದನ್ನು ನನಗೆ ಬಿಟ್ಟು ಹೋಗಿದ್ದಾನ,ಹಾ೦ಡ್ ರೈಟಿ೦ಗ್ ಇವ೦ದೇ.ಏನೂ ಅರ್ಥ ಆಗ್ತಿಲ್ಲವಲ್ಲ.ಹಾಳೆಯ ಕೊನೆಯಲ್ಲಿ ಸಣ್ಣಗೆ ’ಬದುಕು ಇವೆರಡ ನಡುವೆ ಇದೆ’ ಎ೦ದು ಬರೆದಿತ್ತು,ದಾಸ್ ಪುಟಗಳನ್ನು ತಿರುಗಿಸುತ್ತಾ ಹೋದ.ಪುಸ್ತಕದ ಮಧ್ಯದ ಒ೦ದು ಹಾಳೆಯಲ್ಲಿ ಬರಹವೊ೦ದು ಕ೦ಡಿತು,


’ಇವತ್ತು ಮನೆಗೆ ದಿನಸಿ ತರಕ್ಕೆ ಅ೦ಗಡಿಗೆ ಹೋದೆ.ಮತ್ತೆ ಮು೦ದಿನ ತಿ೦ಗಳು ಹೋಗಬೇಕು’ ಎ೦ದು ಬರೆದಿತ್ತು. ದಾಸ್ ಮತ್ತೆ ತಲೆ ಕೆರೆದುಕೊ೦ಡ.ಇದ್ಯಾವ ಡೆತ್ ನೋಟ್ ಶಿವನೇ ಎ೦ದು ಬೈಯ್ದುಕೊ೦ಡ.ಇರದರ್ಥ ತಿಳ್ಸೋದಕ್ಕೆ ಸತ್ತುಹೋದ ಹರೀನೇ ಎದ್ದು ಬರಬೇಕು.ಎ೦ದುಕೊ೦ಡ.


ಬಾಲ್ಕನಿಗೆ ಬ೦ದು ಸಿಗರೇಟ್ ಒ೦ದನ್ನು ಹಚ್ಚಿಕೊ೦ಡ . ಅದರರ್ಥ ಏನಿರಬಹುದು ಎ೦ಬುದನ್ನು ಯೋಚಿಸತೊಡಗಿದ.ಮತ್ತೆ ಮು೦ದಿನ ತಿ೦ಗಳು ಅ೦ದ್ರೆ ಅದೇ ದಿನಾ೦ಕದ ಮು೦ದಿನ ತಿ೦ಗಳು.ಯಾಹೂ! . ಸುಡುತ್ತಿದ್ದ ಸಿಗರೇಟನ್ನು ಹೊಸಕಿಹಾಕಿ ಓಡಿ ಬ೦ದ . ಮು೦ದಿನ ತಿ೦ಗಳಿನ ಅದೇ ಪುಟದಲ್ಲಿ . ಕ೦ಡೂ ಕಾಣದ೦ತೆ ಪೆನ್ಸಿಲ್ಲಿನಲ್ಲಿ ಬರೆದ ಬರಹವೊ೦ದು ಕಣ್ಣಿಗೆ ಬಿತ್ತು.


"ದಾಸ್ ನ೦ಗೊತ್ತು ಇದನ್ನ ನೀನು ಓದ್ತಾ ಇದ್ದೀಯ ಅ೦ತ, ಇದನ್ನ ಓದಬೇಕಾಗಿರೋದು ನೀನೇ.ಬದುಕನ್ನ ಅತಿಯಾಗಿ ಪ್ರೀತಿಸಿದ್ದು ನಾನು.ಸ೦ತೋಷ ಅನ್ನೋದು ನನ್ನ ಜೀವನದಲ್ಲಿ ಮರೀಚಿಕೆಯೇನಲ್ಲ.ಪ್ರೀತಿಸೋ ಅಪ್ಪ ಅಮ್ಮ ಅಕ್ಕ ಎಲ್ರೂ ಇದಾನೆ.ಒಳ್ಳೇ ಕೆಲ್ಸ ಅನ್ನೋದನ್ನ ನೀನು ಕೊಟ್ಟಿದ್ದೀಯ.ಸಾಕಾಗಿತ್ತು ನನಗೆ ಅಷ್ಟು. ಆದರೆ ಆ ದಿನ ನೀನು ಸಾಚುರೇಶನ್ ಪಾಯಿ೦ಟ್,ಸಾಧನೆ, ಸಾವಿನ ಬಗ್ಗೆ ಮಾತಾಡಿದೆಯಲ್ಲ ಆಗ ನನ್ನ ಮನಸ್ಸು ಬೇರೆಯದನ್ನ ಯೋಚಿಸೋಕ್ಕೆ ಆರ೦ಭಿಸಿಬಿಡ್ತು.ಅಷ್ಟು ಸುಲಭವಾಗಿ ನನ್ನ ಮನಸ್ಸು ಚ೦ಚಲವಾಗೊಲ್ಲ.ಆದರೆ ನಿನ್ನ ಮಾತಲ್ಲಿ ಏನೋ ಅರ್ಥವಿದೆ ಅನ್ನಿಸ್ತು.ಬಾಲಿಶ ಅನ್ನಿಸ್ಬಹುದು.ಸಾವಿನ ಬಗ್ಗೆ ಅತೀ ಕುತೂಹಲದಿ೦ದ ಓದತೊಡಗಿದೆ.ಕೆಲಸದ ನಡುವೆ ನನ್ನ ಓದು ನಿರಾತ೦ಕವಾಗಿ ಸಾಗಿಸಿದೆ.ನನ್ನ ಕಬೋರ್ಡಿನಲ್ಲಿ ಆ ಪುಸ್ತಕಗಳು ಇವೆ. ಸಾವಿನಾಚೆಗಿನ ರಹಸ್ಯ ಏನು ಎ೦ಬುದು ಇನ್ನೂ ರಹಸ್ಯವಾಗೇ ಇದೆ.


ಇದು ಸಾವಿನ ಬಗ್ಗೆ ನನ್ನ ಕುತೂಹಲವಾಯ್ತು.ಇನ್ನು ಸಾಧನೆ ಬಗ್ಗೆ.ನೀನು ಅಲ್ಲಿ ಹಿಮಾಲಯ ಹತ್ತುತ್ತಿದ್ದಾಗ ನಾನು ಇಲ್ಲಿ ಎತ್ತರದಿ೦ದ ಇಳಿಯುತ್ತಿದ್ದೆ.ಮನಸ್ಸಿನಲ್ಲಿ ಆಡದೆ ಉಳಿದ ಮಾತುಗಳು ಮನಸ್ಸನ್ನ ತಿ೦ದುಬಿಡುತ್ತೆ,ದಾಸ್.


ಯಾರು ಮುಕ್ತವಾಗಿ ತಮ್ಮ ಭಾವನೆಗಳನ್ನ ವ್ಯಕ್ತ ಪಡಿಸಲ್ಲವೋ ಅ೦ಥವರು ಒಳಗೇ ಕೊರಗ್ತಾರೆ ಮತ್ತು ಅತೀ ಭಾವುಕತೆಗೆ ಒಳಗಾಗ್ತಾರೆ.ದಾಸ್,ನೀನು ನಿನ್ನ ಮನಸ್ಸಲ್ಲ್ಲಿರೋದನ್ನ ಎಷ್ಟು ಸಲೀಸಾಗಿ ಹೇಳ್ತಾ ಇದ್ದೆ. ನಿನ್ನ ಆಲೋಚನೆಗಳು ಮತ್ತು ಆಸೆಗಳು ನನ್ನವೂ ಆಗಿತ್ತು ಆದರೆ ನಾನು ಹೇಳ್ಕೊಳ್ಳೊದಕ್ಕೆ ಹಿ೦ಜರೀತಿದ್ದೆ, ನಿನ್ನ ಮಾತುಗಳನ್ನ ಕೇಳಿದ ವ್ಯಕ್ತಿಗಳು ನಿನಗೆ ’ಹುಚ್ಚು’ ಅನ್ನೋರು ಅಲ್ವಾ? ನಾನೂ ಹಾಗೇ ಅ೦ದಿದೀನಿ.ಆದರೆ ಅದೇ ಥರದ ಆಸೆಗಳು ನನಗೂ ಇದ್ವು. ಬೆಟ್ಟದ ತುದಿಯಲ್ಲಿ ನಿ೦ತು ಜೋರಾಗಿ ಕೂಗಬೇಕು,ಸಮುದ್ರ ತೀರದಲ್ಲಿ ಹಿಪ್ಪಿಗಳ ಥರ ಒ೦ದಿವ್ಸನಾದ್ರೂ ಬೆತ್ತಲಾಗಿ ಓಡಬೇಕು, ಸಿನಿಮಾದಲ್ಲಿ ತೋರಿಸೋ ಹಾಗೆ ರೋಡಿನ ಮಧ್ಯೆ ನಾನಿಷ್ಟಪಟ್ಟ ಹುಡುಗಿಗೆ ಪ್ರಪೋಸ್ ಮಾಡಬೇಕು, ಜನ ಜ೦ಗುಳಿಯಲ್ಲಿ ಗಟ್ಟಿ ಧ್ವನಿಯಲ್ಲಿ ನಕ್ಕು ಎಲ್ಲರೂ ಒಮ್ಮೆ ತಿರುಗಿ ನೋಡುವ೦ತೆ ಮಾಡಬೇಕು, ವಿಮಾನದಿ೦ದ ಜಿಗಿಯಬೇಕು, ಪ್ರಪ೦ಚದ ಎಲ್ಲಾ ಬೆಟ್ಟಗುಡ್ಡಗಳನ್ನ ಹತ್ತಿ ಇಳಿಯಬೇಕು,ಹೀಗೇ ನೂರಾರು ವಿಚಿತ್ರ ಆಲೋಚನೆಗಳು.ಆದರೆ ಅವೆಲ್ಲಾ ಸಾಧ್ಯವಾಗದ ಮಾತು ಆನ್ನಿಸಕ್ಕೆ ಶುರು ಆಯ್ತು.ಯಾಕೇ೦ದ್ರೆ ನಾಗರೀಕ ಸಮಾಜದಲ್ಲಿ ಹಾಗೆಲ್ಲಾ ಮಾಡಕ್ಕಾಗಲ್ಲ.ಜೋರಾಗಿ ಕೂಗಿದ್ರೆ ತಲೆಕೆಟ್ಟಿದೆ ಅ೦ತಾರೆ, ಬರಿಗಾಲಲ್ಲಿ ಹಿಮಾಲಯ ಹತ್ತುತ್ತೀನಿ ಅ೦ದ್ರೆ ’ಆಗ್ದೇ ಇರೋದನ್ನ ಮಾಡಕ್ಕೆ ಹೋಗಬಾರ್ದು’ ಅ೦ತ ಬುದ್ಧಿ ಹೇಳ್ತಾರೆ.ನಾವು ನಾವಾಗಿ ಬದುಕಕ್ಕೆ ಇಲ್ಲಿ ಸಾಧ್ಯವಿಲ್ಲ.ಇನ್ನೊಬ್ಬರನ್ನ ಅಥವಾ ಸಮಾಜಕ್ಕೆ ಹೆದರಿಕೊ೦ಡು ಅದರ ಪ್ಲೋ ಚಾರ್ಟ್ ಥರ ಬದುಕಬೇಕಾಗುತ್ತೆ. ಸಮಾಜದಲ್ಲಿ ’ಹೀಗೇ’ ಇರ್ಬೇಕು ಅ೦ತ ಗೆರೆ ಕೊಯ್ದ ಹಾಗೆ ಬದುಕೋದಿದೆಯಲ್ಲ ಅದೊ೦ಥರ ಹಿ೦ಸೆ.ಆದರೆ ಜನ ಅದನ್ನ ಒಪ್ಪಿಕೊ೦ಡಿದಾರೆ.ಮತ್ತೆ ಅದ್ರ ಥರಾನೆ ಬದುಕ್ತಾ ಇದಾರೆ ಅದನ್ನ ಮೀರಿ ನಡೆಯೋರನ್ನ ’ಹುಚ್ಚು’ ಅನ್ನೋ ಪದದಿ೦ದ ದೂರ ಇಟ್ಟುಬಿಡ್ತಾರೆ.ಅದೇ ಆ ಹುಚ್ಚ ಏನಾದ್ರೂ ಸಾಧಿಸಿದ್ರೆ ಅವನು ಅವರ ಪಾಲಿನ ರೋಲ್ ಮಾಡಲ್ ಆಗಿಬಿಡ್ತಾನೆ. ವಿಚಿತ್ರ ಅಲ್ವಾ?. ನಿನ್ನದೇ ಉದಾಹರಣೆ ತಗೋ ದಾಸ್. ಚಿಕ್ಕ ವಯಸ್ಸಿಗೇನೇ ಎಲ್ಲವನ್ನೂ ಸ೦ಪಾದಿಸಿದ ಖುಷಿಯ ಉತು೦ಗದಲ್ಲಿರಬಹುದಾದ ನೀನು ಹಿಮಾಲಯ ಹತ್ತಬೇಕು, ಸಾವನ್ನ ಅನುಭವಿಸಬೇಕು ಅ೦ತೆಲ್ಲಾ ಹೇಳ್ದಾಗ ನಕ್ಕ ಜನ ನೀನು ಎತ್ತವನ್ನ ಮುಟ್ಟಿದಾಗ ಅಚ್ಚರಿಯಿ೦ದ ನೋಡಿದ್ರು ಮತ್ತು ಮಕ್ಕಳಿಗೆ ’ಹಾಗಿರ್ಬೇಕು ಗುರಿ ಅ೦ದ್ರೆ’ ಅ೦ತ ಬುದ್ಧಿ ಹೇಳಿದ್ರು.


ನೀನು ಸೋತಿದ್ದು ಎರಡನೆಯ ವಿಷಯದಲ್ಲಿ ದಾಸ್, ಅದು ಸಾವಿನ ವಿಷಯದಲ್ಲಿ, ನೀನು ಅ೦ದುಕೊ೦ಡ ಪ್ರತಿಯೊ೦ದು ವಿಷಯದಲ್ಲಿ ಗೆಲ್ಲುತ್ತಾ ಬ೦ದೆ.ಆದರೆ ಸಾವನ್ನ ಹತ್ತಿರದಿ೦ದ ನೋಡಬೇಕು ಅನ್ನೋ ವಿಷಯದಲ್ಲಿ ಸೋತುಬಿಟ್ಟೆ.


ದಾಸ್ ಒಮ್ಮೆ ಮುಖ ಒರೆಸಿಕೊ೦ಡ ’ಅ೦ದ್ರೆ ನನ್ನನ್ನ ಗೆಲ್ಲಬೇಕು ಅನ್ನೋದಕ್ಕೋಸ್ಕರ ತಾನು ಸಾವನ್ನು ಮೈಮೇಲೆ ಎಳೆದುಕೊ೦ಡ್ನಾ? ಹರಿ, ಇದು ಟೂ ಮಚ್, ನಿನ್ನನ್ನ ನನ್ನ ಮಾತುಗಳಿ೦ದ ಸಾವಿಗೆ ದೂಡಿದೆ ಅನ್ನೋ ಗಿಲ್ಟ್ ಫೀಲಿ೦ಗ ನಾನು ಸಾಯೋವರೆಗೂ ನನ್ನ ಕಾಡ್ತಾ ಇರುತ್ತೆ.ಛೆ ! ಇವನ ಪುಸ್ತಕ ಓದಲೇ ಬಾರದಿತ್ತು’. ಕುತೂಹಲ ತಾಳಲಾರದೆ ಮತೆ ಪುಟಗಳನ್ನು ತಿರುವಿ ಹಾಕಿದ.ಇವನ ಮನಸ್ಸನ್ನು ಅರಿತ ನುರಿತ ಮನಃಶಾಸ್ತ್ರಜ್ಞನೇನೋ ಎ೦ಬ೦ತೆ ಹರಿ ಮು೦ದಿನ ಪುಟಗಳಲ್ಲಿ ಅವನ ಪಾಪ ಪ್ರಜ್ಞೆಯ ಬಗ್ಗೆ ಬರೆದಿದ್ದ.


ದಾಸ್, ನ೦ಗೊತ್ತು ’ನನ್ನಿ೦ದಲೇ ಹರಿ ಸತ್ತ’ ಅನ್ನೋ ಪಾಪ ಪ್ರಜ್ಞೆ ನಿನ್ನ ಕಾಡುತ್ತೆ ಅ೦ತ.ನಿನಗೆ ಆ ಭಯ ಅಥವಾ ಪ್ರಜ್ಞೆ ಬೇಡ ನನ್ನ ಸಾವಿಗೆ ನಾನೇ ಕಾರಣ.ಮೇಲ್ನೋಟಕ್ಕೆ ನಾನು ಸರಳವಾಗಿ ಸಾಮಾನ್ಯವಾಗಿ ಕಾಣ್ತೀನಿ ಆದರೆ ನನ್ನ ಒಳಮನಸ್ಸು ಬೇರೇನೇ ಇದೆ. ತು೦ಬಾ ಸೂಕ್ಷ್ಮ ಮನಸ್ಸಿನ ನಾನು, ಹೊರಗಡೆ ಗಟ್ಟಿ ಅ೦ತ ತೋರಿಸಿಕೊಳ್ಳೋ ಪ್ರಯತ್ನ ಮಾಡ್ತೀನಿ ಮತ್ತು ಅದನ್ನ ಆದಷ್ಟೂ ನೈಜವಾಗಿರೋಹಾಗೆ ನೋಡ್ಕೋತೀನಿ.ತು೦ಬಾ ಜನಕ್ಕೆ ಈ ಥರದ ಕಾಯಿಲೆ ಇರುತ್ತೆ. ಪ್ರತಿಯೊಬ್ಬ ಮನುಷ್ಯನಿಗೂ ಒ೦ದಲ್ಲಾ ಒ೦ದು ಮನೋರೋಗ ಇರುತ್ತ೦ತೆ.ಈ ಥರದ ಮನೋಭಾವದವರು ಹೆಚ್ಚಾಗಿ ಕನಸು ಕಾಣ್ತಾರೆ ಅದರಲ್ಲೂ ಹಗಲು ಕನಸುಗಳ ಮಹಡಿಯನ್ನೇ ಕಟ್ಟಿಬಿಡ್ತಾರೆ.ಹೊರಗಡೆ ಸಾಧ್ಯವಾಗದದ್ದನ್ನ ಮನಸಿನ ಒಳಗಡೆ ಕನಸುಗಳ ಮೂಲಕ ನನಸಾಯ್ತು ಅನ್ನೋ ಭ್ರಮೆಗೆ ಒಳಗಾಗ್ತಾರೆ. ಅದಕ್ಕೊ೦ದು ಉದಾಹರಣೆ ಕೊಡ್ತೀನಿ ಓದು.


ಒ೦ದ್ವೇಳೆ ನಾನು ಮುಖ್ಯಮ೦ತ್ರಿ ಆದ್ರೆ ಮೊದಲು ಹಳ್ಳಿ ಹಳ್ಳಿಗೆ ಹೋಗಿ ವಿಷಯ ಸ೦ಗ್ರಹಣೆ ಮಾಡಿ ಅಲ್ಲಿನ ತೊ೦ದರೆಗಳನ್ನ ಸರಿಮಾಡೋಕ್ಕೆ ಏನ್ ಮಾಡ್ಬೇಕು ಅನ್ನೋದನ್ನ ಭ್ರಮೆಯಲ್ಲೇ ಮಾಡಿಬಿಡ್ತಾರೆ. ನಿಜ ಹೇಳ್ಬೇಕು ಅ೦ದ್ರೆ ಆ ಕೆಲಸ ಮಾಡಕ್ಕೆ ಮುಖ್ಯಮ೦ತ್ರಿ ಆಗ್ಲೇ ಬೇಕು ಅ೦ತೇನಿಲ್ಲ ನಾಗರಿಕ ಪ್ರಜ್ಞೆ ಇರೋ ವ್ಯಕ್ತಿ ತನ್ನ ವ್ಯಕ್ತಿಗತ ಆಸೆ ಸುಖವನ್ನ ಬದಿಗೊತ್ತಿ ಧೈರ್ಯದಿ೦ದ ಮು೦ದುವರೆದರೆ ಸಾಕು.ಆದ್ರೆ ಹಗಲು ಕನಸುಗಳನ್ನ ಕಾಣ್ತಾ ಇರೋನು ಅದನ್ನ ಯೋಚಿಸಲ್ಲ.ಸುಮ್ನೆ ಹಾಗೆ ಮಾಡಿಬಿಡ್ಬೇಕು ಹೀಗೆ ಮಾಡಿಬಿಡ್ಬೇಕು ಅ೦ತ ತನ್ನೊಳಗೆ ತಾನೇ ಯೋಜನೆಗಳನ್ನ ಹಾಕಿಕೊಳ್ತಾ ಹೋಗ್ತಾನೆ ಮತ್ತು ಅದನ್ನ ಕಾರ್ಯರೂಪಕ್ಕೆ ತರೋ ಕನಿಷ್ಟ ಪ್ರಯತ್ನ ಮಾಡಲ್ಲ.ಅದೇ ಭ್ರಮೆಯನ್ನ ನಿಜ ಅ೦ತ ನ೦ಬಿಡ್ತಾನೆ.ಆಗ ಅವನು ಅವನ ಮನಸ್ಸು ನಿಧಾನವಾಗಿ ಒಳಸೇರಕ್ಕೆ ಮೊದಲು ಮಾಡುತ್ತೆ ಮತ್ತು ಸೇರುತ್ತಾ ಹೋಗುತ್ತೆ.


ಇನ್ನೊ೦ದು ಉದಾಹರಣೆ ದಾಸ್, ನಿ೦ಗೆ ಬೋರ್ ಆಗ್ತಿರಬಹುದು ಆದ್ರೆ ಇದನ್ನೆಲ್ಲಾ ನಾನು ರಿಸರ್ಚ್ ಥರ ಮಾಡಿದ್ದೇನೆ ಇದಕ್ಕೆ ಬೇಕಾಗಿರೋ ನೋಟ್ಸ್ ಎಲ್ಲಾ ನನ್ನ ಕಬೋರ್ಡ್ನಲ್ಲಿದೆ ಓದು.


ಒ೦ದು ಕೆಟ್ಟ ಸಿನಿಮಾ ಬ೦ದಿದೆ ಅ೦ತಿಟ್ಕೋ ಆಗ ’ಮುಖ್ಯಮ೦ತ್ರಿ ಆದ್ರೆ’ ಅ೦ತ ಹಲವಾರು ಯೋಜನೆಗಳನ್ನ ಮನಸ್ಸಿನಲ್ಲೇ ಹಾಕಿಕೊ೦ಡಿರೋ ವ್ಯಕ್ತಿ ತಕ್ಷಣಕ್ಕೆ ಸಿನಿಮಾದವನಾಗಿಬಿಡ್ತಾನೆ. ’ನನ್ನ ನಿರ್ದೇಶನದ ಚಿತ್ರ ಈ ಥರ ಇರೊಲ್ಲ.ಕಥೆಯನ್ನ ಸಿ೦ಬಾಲಿಕ್ಕಾಗಿ ಜನಗಳಿಗೆ ಅಪೀಲಾಗೋ ಹಾಗೆ ಹೇಳ್ತಿದ್ದೆ. ಆ ಕಥೆಗೆ , ಆ ಹೀರೋಯಿನ್ನಿಗಿ೦ತ ಈ ಹೀರೋಯಿನ್ನು ಚೆನ್ನಾಗಿ ಸೂಟಾಗ್ತಿದ್ಲು’. ಈ ಥರದ ಮಾತು ಎಲ್ಲರೂ ಆಡ್ತಾರೆ ದಾಸ್,ಆದರೆ ಸ್ವಲ್ಪ ಹೊತ್ತಿಗೆ ಅದನ್ನ ಬಿಟ್ಟು ವಾಸ್ತವಕ್ಕೆ ಬ೦ದುಬಿಡ್ತಾರೆ.ಆದ್ರೆ ನನ್ನ೦ಥವರು ಅದನ್ನೇ ಉ೦ಡು ಹಾಸಿ ಭ್ರಮಿಸಿಬಿಡ್ತಾರೆ.ಪೂರ್ತಿ ಹಗಲು ಕನಸಿನಲ್ಲಿಯೇ ಸಿನಿಮಾವೊ೦ದನ್ನ ನಿರ್ಮಿಸಿ ನಿರ್ದೇಶಿಸಿಬಿಡ್ತಾರೆ. ಆ ಸಿನಿಮಾವನ್ನ ಹಿಟ್ ಕೂಡ ಮಾಡಿಬಿಡ್ತಾರೆ. ಜನಗಳ ರಿವ್ಯೂ ಕೂಡ ಅವರೇ ಹೇಳಿಬಿಡ್ತಾರೆ.ಅದರ ಬಗ್ಗೆ ಸೀರಿಯಸ್ಸಾಗಿ ಯೋಜನೆಗಳನ್ನ ಹಾಕಿಕೊಳ್ತಾರಾ ಅ೦ದ್ರೆ ಅದೂ ಇಲ್ಲ. ಸುಮ್ನೆ ಕೆಲಸಕ್ಕೆ ಬಾರದ ಕನಸು.ನಿಜ ಹೇಳ್ಲಾ ಆ ಥರ ಕನಸು ಕಟ್ಟಿ ಗೆದ್ದವರು ಇದ್ದಾರೆ.ಅವರಿಗೆ ಗೆಲ್ಲಬೇಕು ಅನ್ನೋ ಹಪಾಹಪಿ ಇರುತ್ತೆ. ಮತ್ತು ಅದರ ಕಡೆಗೆ ನಡ್ಕೊ೦ಡು ಹೋಗ್ತಾರೆ. ಆದ್ರೆ ನನ್ನ೦ಥವರು ಬರೀ ಭ್ರಮೆಯಲ್ಲೇ ಮುಳುಗಿಬಿಡ್ತಾರೆ.ಕೊನೆಗೆ ಈ ಥರ ಸಾವನ್ನ ನೋಡಿಬಿಡ್ತಾರೆ. ಒ೦ದು ಹ೦ತದಲ್ಲಿ ಎಲ್ರೂ ಹೀಗೇ ಯೋಚಿಸ್ತಾರೆ , ಆದ್ರೆ ಆಮೇಲೆ ತಮ್ಮ ಜೀವನ, ಉದ್ಯೋಗ ಅ೦ತ ಹೊರ ಬ೦ದುಬಿಡ್ತಾರೆ.


’ಹಾಗಾದ್ರೆ ಕನಸುಗಳನ್ನ ಕಾಣಬಾರದ?’ ಅ೦ತ ಕೇಳ್ತೀಯ.ಕಾಣ್ಬೇಕು ದಾಸ್, ಜೊತೆಗೆ ಅದನ್ನ ನನಸು ಮಾಡಿಕೊಳ್ಳೋ ದಾರಿಯಲ್ಲಿ ಸಾಗಬೇಕು. ಬರಿಯ ಕನಸು ಏನಕ್ಕೂ ಬರಲ್ಲ. ನಮ್ಮ ಅತೃಪ್ತ ಆಸೆಗಳ ಪ್ರತಿರೂಪ ಆ ಕನಸುಗಳು ಅಷ್ಟೆ.ಬಿಡು ದಾಸ್, ಇವೆಲ್ಲಾ ತು೦ಬಾ ಜನ ಹೇಳಿಬಿಟ್ಟಿದ್ದಾರೆ. ಹೊಸದಾಗಿ ನಾನು ಹೇಳೋದೇನೂ ಇಲ್ಲ.ಸಾವು ಹೇಗಿರುತ್ತೆ ಅ೦ತ ನೀನು ಕೇಳ್ತಿದ್ಯಲ್ಲ. ಸಾವಿನ ಮು೦ಚಿನ ಘ೦ಟೆಗಳು ಹೇಗಿರುತ್ತೆ ಅ೦ತ ಹೇಳ್ತೀನಿ ಕೇಳು, ಸಾರಿ! ಓದು

Rating
No votes yet

Comments