ಬಸ್ಸಿನಲ್ಲಿ ಕಂಡ ಮುಖ

ಬಸ್ಸಿನಲ್ಲಿ ಕಂಡ ಮುಖ

Comments

ಬರಹ

ಬೆಳಿಗ್ಗೆ ಬಸ್ಸಿನಲ್ಲಿ ನಡೆದದ್ದು.   ಪದ್ಮನಾಭನಗರದಲ್ಲಿ ಬಸ್ಸು ಹತ್ತಿದೆ.     ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಸೀಟು ಸಿಗದೆ ನಿಂತಿದ್ದರು. ಒಂದೆರಡು ಸೀಟಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಕುಳಿತಿದ್ದರು.  ಆ ವೃದ್ಧರು ತಮಗೆ ಸೀಟು ಬೇಕೆಂದು ಯಾರನ್ನೂ ಕೇಳಲಿಲ್ಲ. ಆದರೆ ಹಿಂದೆ ಮುಂದೆ ಕುಳಿತಿದ್ದ ಕೆಲವರು ಮಧ್ಯವಯಸ್ಕರು ಎರಡು ಸೀಟಿನಲ್ಲಿ ಕುಳಿತಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, `ಕಾಲ ಕೆಟ್ಟುಹೋಯಿತು. ಇಂದಿನ ಹುಡುಗರಿಗೆ ವಯಸ್ಸಾದವರನ್ನು ಕಂಡರೆ ತಾತ್ಸಾರ ಕಣ್ರೀ. ನಮ್ಮ ಕಾಲ ಹಾಗಿರಲಿಲ್ಲ. ಹಿರಿಯರೆಂದರೆ ಅದೇನು ಭಯ, ಅದೇನು ಗೌರವ. ಈಗಿನವಕ್ಕೆ ತಾವಾಯಿತು ತಮ್ಮ ಮೊಬೈಲಾಯಿತು, ಟಿವಿ ಚಾನೆಲ್ ಆಯಿತು ಅಷ್ಟೇ. ಯಾವ ಸಂಸ್ಕೃತಿಯೂ ಇಲ್ಲ. ಯಾವ ಹುಡುಗರನ್ನೂ ಮಾತನಾಡಿಸುವ ಹಾಗೇ ಇಲ್ಲ. ಶಿಕ್ಷಿಸುವ ಮಾತು ಬಿಡಿ. ಹಾಗೇನಾದರೂ ಬೈದರೆ ಅವರ ಅಪ್ಪ ಅಮ್ಮ ಜಗಳಕ್ಕೆ ಬರುತ್ತಾರೆ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ಯಾರ ಮಕ್ಕಳನ್ನು ಯಾರು ಬೇಕಾದರೂ ತಿದ್ದಬಹುದಾಗಿತ್ತು. ಹೊಡೆಯಲೂ ಅವಕಾಶವಿತ್ತು. ಅವರ ತಂದೆ ತಾಯಿಗಳಿಗೆ ಏನೂ ಬೇಸರವಿರುತ್ತಿರಲಿಲ್ಲ. ..' ಹೀಗೆ ಪುಂಖಾನುಪುಂಖವಾಗಿ ಮಾತು ಸಾಗಿತ್ತು. ಅದಕ್ಕೆ ಪೂರಕವಾಗಿ ಮತ್ತಿಬ್ಬರ ಮಾತು. ಇಷ್ಟಾದರೂ ನಿಂತಿದ್ದ ಆ ವೃದ್ಧರಿಗೆ ಯಾರೂ ಸೀಟು ಕೊಡಲಿಲ್ಲವೆನ್ನಿ. ಬರೀ ಮಾತು ಮಾತು. ಆ ಹುಡುಗರೂ ಏಳಲಿಲ್ಲ. ಕಾರಣ ಅವರ ಬೆನ್ನ ಮೇಲೆ ಮಣಗಟ್ಟಲೆ ತೂಕದ ಬ್ಯಾಗು. ಅದನ್ನ ಹೊತ್ತು ನಿಲ್ಲುವುದು ಅವರಿಗೆ ಇಷ್ಟವಿರಲಿಲ್ಲ. ಅಷ್ಟು ಹೊತ್ತು ತಮ್ಮ ಹಿಂದಿನ ಗತವೈಭವವನ್ನು ಸಾರುತ್ತಿದ್ದ ಮಹಾಶಯರಿಗೆ  ಇಂದಿನ ವಿದ್ಯಾರ್ಥಿಗಳ ಬೆನ್ನ ಮೇಲಿನ ಹೊರೆ ಕಾಣಲಿಲ್ಲವೇನೋ ಅಥವಾ ಕಂಡರೂ ಕಾಣದಂತಿದ್ದರೇನೋ. ತಮ್ಮ ಕಾಲದ ಶಿಕ್ಷಣದಲ್ಲಿ ಅಷ್ಟು ಪುಸ್ತಕಗಳ   ಭಾರವನ್ನು ಅವರು   ಖಂಡಿತ  ಹೊತ್ತಿರಲಿಲ್ಲ. ಹಾಗಾಗಿ ಅದರ ಬಗ್ಗೆ ಅವರೇನೂ ಕಾಮೆಂಟ್ ಮಾಡಲಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಇರುವಷ್ಟು ಹೋಂ ವರ್ಕ್, ಪ್ರಾಜೆಕ್ಟ್ ಗಳು, ಟೆಸ್ಟುಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ಸಾಮಾನ್ಯ ಜ್ಞಾನ, ಕ್ರೀಡೆ ಕುರಿತ ಸ್ಪರ್ಧೆಗಳು, ಹಾಗೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಳೆ ವಯಸ್ಸಿನ, ಮನಸ್ಸಿನ ಮಕ್ಕಳು ಎದುರಿಸಬೇಕಾದ ಒತ್ತಡಗಳ ಅರಿವು ಅವರಿಗಿಲ್ಲ ಎನಿಸುತ್ತದೆ. ಇರಲಿ, ಮುಂದೆ ನೋಡೋಣ.

 

ಅಲ್ಲಿಂದ ಪ್ರಾರಂಭವಾದ ಮಾತು, ಮುಂದೆ ಯಡ್ಯೂರಪ್ಪನವರ ಆಡಳಿತ, ನಿತ್ಯಾನಂದ ಬಿಡುಗಡೆಯಾಗಿ ಪಂಚಾಗ್ನಿ ಹೋಮದಲ್ಲಿ ಭಾಗಿಯಾಗಿದ್ದು, ಕಾವಿ, ಖಾದಿಗಳ ಬಗ್ಗೆ  ಪ್ರತಿಕ್ರಿಯೆ, ನಾಡಿನ  ಎಲ್ಲ ಮಠಗಳ ಸ್ವಾಮಿಗಳ ಬಗ್ಗೆ  ಕಟು ಟೀಕೆ.  ಬೆಂಗಳೂರಿನ ರಸ್ತೆಗಳ  ಅವ್ಯವಸ್ಥೆಯ ಬಗ್ಗೆ ಟೀಕೆ, ದೇವೇಗೌಡ, ಕುಮಾರಸ್ವಾಮಿ, ದೇಶಪಾಂಡೆ, ಸಿದ್ಧರಾಮಯ್ಯ, ಸೋನಿಯಾ, ಭೋಪಾಲ್ ದುರಂತ, ಎಲ್ಲವೂ ಬಂದು ಹೋಯಿತು. ಕೊನೆಗೆ  ಮತ್ತೆ ಇಂದಿನ ಯುವಪೀಳಿಗೆಯ ಬಗ್ಗೆ ಟೀಕೆ, ಅವರ ವೇಷಭೂಷಣ, ಕ್ರಿಕೆಟ್ ಹುಚ್ಚು, ಮೊಬೈಲ್ ಹುಚ್ಚು, ದುರಭ್ಯಾಸಗಳ ಬಗ್ಗೆ ಮಾತು.. ಎಲ್ಲವೂ ಗಟ್ಟಿ ಸ್ವರದಲ್ಲಿ ಚರ್ಚೆಯಾಗಿದ್ದೇ ಆಗಿದ್ದು. ಕೊನೆಯಲ್ಲಿ ಆ ಚರ್ಚೆಯಲ್ಲಿ ಭಾಗಿಯಾಗಿದ್ದವನೊಬ್ಬ ತನ್ನ ಪ್ಯಾಂಟಿನ ಜೋಬಿಗೆ ಕೈ ಹಾಕಿ ತೆಗೆದ, ಎಲ್ಲರ ಗಮನ  ಅತ್ತ ಕಡೆಗೆ. ನೋಡಿದರೆ ಗುಟ್ಕಾ ಪ್ಯಾಕೆಟ್, ಪ್ಯಾಕೆಟ್ ಹರಿದ, ಅಂಗೈಯಲ್ಲಿ ಹಾಕಿಕೊಂಡು ಉಜ್ಜಿದ, ಬಾಯೊಳಗೆ ಇಟ್ಟುಕೊಂಡ ಸ್ವಲ್ಪ ಹೊತ್ತಿನ ನಂತರ ಕಿಟಿಕಿಯಿಂದಾಚೆ ತಲೆ ತೂರಿಸಿ ಉಗುಳಲು ಆರಂಭಿಸಿದ.  ಮುಖದಲ್ಲಿ ದೇಶಾವರಿ ನಗೆ ಬೇರೆ. ಅಷ್ಟು ಹೊತ್ತು, ಸಂಸ್ಕೃತಿ, ಶಿಸ್ತು, ಹಿರಿಯರಿಗೆ ಗೌರವ, ದೇಶಪ್ರೇಮ, ಕಾವಿ, ಖಾದಿಗಳ ಬಗ್ಗೆ ತೀವ್ರ ಟೀಕೆ, ನಾಗರಿಕ ಪ್ರಜ್ಞೆ ಎಲ್ಲವೂ ಮಾತಿನಲ್ಲಿ ಬಂದು ಹೋಯಿತು. ಆದರೆ ಕೃತಿಯಲ್ಲಿ? ಜೊತೆಗೆ ಸುರಾಪಾನದ ಚಟವೂ ಇದ್ದಂತೆ ಭಾಸವಾಗುತ್ತಿತ್ತು ಆತನ ಕಣ್ಣು, ಮುಖವನ್ನು ಗಮನಿಸಿದರೆ. ಶಿವಾಜಿನಗರ ನಿಲ್ದಾಣ ಸಮೀಪಿಸಿತು, ನಾನು ಸೀಟಿನಿಂದ ಎದ್ದೆ. ನನ್ನ ಮನಸ್ಸಿನಲ್ಲಿ ಇಂಥಾ ಜನರ ವೃಥಾ ಗಂಟಲ ಮೇಲಿನ ಶುಷ್ಕ ಮಾತುಗಳೇ ಪ್ರತಿಧ್ವನಿಸುತ್ತಿತ್ತು. ಈ ಮಾತುಗಳಿಂದ ಏನಾದರೂ ಉಪಯೋಗವಿದೆಯೇ?  

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet