ಮಂಕು ನೀಲಿ ಚುಕ್ಕೆ!

ಮಂಕು ನೀಲಿ ಚುಕ್ಕೆ!

ನ್ಯೂಯೋರ್ಕಿನ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ ೧೩, ೧೯೯೪ ರಂದು ಖ್ಯಾತ ಖಗೋಳ ಶಾಸ್ತ್ರಜ್ಞರಾದ ಕಾರ್ಲ್ ಸಗನ್ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಮೇಲಿನ ಚಿತ್ರವನ್ನು ತೋರಿಸಿದರು..

ಇದು ೧೯೯೦ರಲ್ಲಿ ಭೂಮಿಯಿಂದ ನಭದತ್ತ ಚಿಮ್ಮಿದ ಅಂತರಿಕ್ಷ ನೌಕೆ ವಾಯೇಜರ್ ೧ ಸುಮಾರು ೪ ಬಿಲಿಯನ್ ಮೈಲುಗಳ ದೂರದಿಂದ ತೆಗೆದದ್ದಾಗಿದೆ. ಅದರ ಮುಖ್ಯ ಉದ್ದೇಶ ಪೂರ್ಣಗೊಂಡ ನಂತರ, ಸೂರ್ಯ ಮಂಡಲದಿಂದ ಹೊರಕ್ಕೆ ತನ್ನ ಯಾನವನ್ನು ಬೆಳಸಿದ್ದ ಅದು ಸೂರ್ಯನ ಸಮತಲದಿಂದ ಸುಮಾರು ೩೨ ಡಿಗ್ರಿ ಮೇಲಿನ ಪಥದಲ್ಲಿದ್ದಾಗ, ಹಿಂದೆ ತಿರುಗಿ ಅದಕ್ಕೆ ಕಂಡ ಎಲ್ಲಾ ಗ್ರಹಗಳ ಚಿತ್ರವನ್ನು ತೆಗೆಯುವಂತೆ ಆದೇಶಿಸಲಾಯಿತು. ಆ ಅನಂತ ದೂರದಿಂದ ವಾಯೇಜರಿನ ಕ್ಯಾಮೆರಾ ಕಣ್ಣಿಗೆ ಭೂಮಿಯು ಒಂದು ಅತಿ ಚಿಕ್ಕ ಬೆಳಕಿನ ಚುಕ್ಕೆಯಾಗಿ, ಈ ಚಿತ್ರದ ಒಂದು ಪಿಕ್ಸೆಲ್ಲಿಗಿಂತ್ ಚಿಕ್ಕದಾಗಿ ಕಾಣಿಸಿತು. ಈ ಚಿತ್ರವನ್ನು ನೋಡಿ ದ ನಿಜಕ್ಕೂ ವಿಚಲಿತಗೊಂಡಿದ್ದ ಡಾ|| ಸಗನ್ ಅವರ ಭಾಷಣದಲ್ಲಿ ಹೀಗೆಂದರು :

" ಆಗಸದ ಅನಂತದಿಂದ ಕೆಳಬಗ್ಗಿ ತೆಗೆದ ಈಚಿತ್ರವನ್ನು ಗಮನಿಸಿ, ಅದರಲ್ಲಿ ನಿಮಗೆ ಒಂದು ಎದ್ದು ಕಾಣುವ ಸಣ್ಣ ನೀಲಿ ಚುಕ್ಕೆ ಕಾಣಿಸಬಹುದು (ಗುರುತು ಹಾಕಿದಲ್ಲಿ)! ಅದೇ ನಾವು , ಅಲ್ಲಿದೆ ನಮ್ಮ ಮನೆ. ನಮಗೆ ಗೊತ್ತಿರುವ ಎಲ್ಲರೂ, ಪ್ರತಿಯೊಂದು ಮನುಷ್ಯ ಜೀವಿಯೂ, ಇಲ್ಲಿಯೇ ಬದುಕಿದ್ದು, ಇಲ್ಲಿಯೇ ಮಣ್ಣಾದದ್ದು! ನಮ್ಮೆಲ್ಲಾ ಸುಖ ಸಂತೋಷ ಹಾಗು ನೋವುಂಡ ಕ್ಷಣಗಳು, ದೃಢವಾಗಿ ನಂಬಲ್ಪಟ್ಟ ಸಾವಿರಾರು ಧರ್ಮಗಳು, ವಿಚಾರ ಪರಂಪರೆಗಳು, ಆರ್ಥಿಕ ಸಿದ್ಧಾಂತಗಳು, ಹೊಟ್ಟೆ ಪಾಡಿಗಾಗಿ ಬದುಕಿದ ಪ್ರತಿಯೊಂದು ಜೀವಿ, ಪ್ರತಿಯೊಬ್ಬ ನಾಯಕ ಹಾಗು ಹೇಡಿ, ಬದುಕಿದ್ದ ಎಲ್ಲಾ ನಾಗರೀಕತೆಗಳ ಪ್ರತಿಯೊಬ್ಬ ನಿರ್ಮಾರ್ತೃ ಹಾಗು ಧ್ವಂಸಕ, ಪ್ರತೀ ಚಕ್ರಾಧಿಪತಿ ಹಾಗು ಬಂಡುಕೋರ, ಪ್ರೇಮಿಸಿದ ಪ್ರತಿಯೊಂದು ಜೋಡಿಗಳು, ಎಲ್ಲ ಭರವಸೆಯ ಮಕ್ಕಳು, ತಂದೆ ತಾಯಂದಿರು, ಪ್ರತಿಯೊಬ್ಬ ಅನ್ವೇಷಕ ಹಾಗು ಶೋಧಕ, ನೀತಿಯನ್ನು ಭೋಧಿಸಿದ ಪ್ರತಿಯೊಬ್ಬ ಗುರು, ಎಲ್ಲಾ ಭ್ರಷ್ಟ ರಾಜಕಾರಣಿ, ಪ್ರತಿಯೊಬ್ಬ ಸೂಪರ್ ಸ್ಟಾರ್, ಎಲ್ಲ ಧೀಮಂತ ನಾಯಕರು, ಮನುಷ್ಯ ಜಾತಿಯ ಇತಿಹಾಸದಲ್ಲಿ ಬಂದು ಹೋದ ಪ್ರತಿ ಸನ್ಯಾಸಿ ಹಾಗು ಪಾಪಿ, ಎಲ್ಲರೂ ಬದುಕಿದ್ದು, ಸತ್ತಿದ್ದು ಎಲ್ಲವೂ ಸೂರ್ಯ ಪ್ರಕಾಶದಲ್ಲಿ ತೇಲುತ್ತಿರುವ ಈ ಒಂದೇ ಒಂದು ಧೂಳಿನ ಕಣದಲ್ಲಿ!

ಈ ಅನಂತ ಬ್ರಂಹಾಂಡದ ರಂಗಸ್ಥಳದಲ್ಲಿ ಭೂಮಿ ಒಂದು ಅತಿ ಸಣ್ಣ ಅಟ್ಟಣಿಗೆ. ಈ ಒಂದು ಯಕಶ್ಚಿತ್ ಸಣ್ಣ ಚುಕ್ಕೆಯ ಒಂದು ತುಣುಕಿಗೆ ಒಂದಿಷ್ಟು ಕ್ಷಣಗಳ ಅಧಿಪತಿಯಾಗಲು ರಕ್ತದ ಹೊಳೆಯನ್ನೇ ಹರಿಸಿದುದರ ಬಗ್ಗೆ ಯೋಚಿಸಿ! ಈ ಬಿಂದುವಿನ ಒಂದು ಬದಿಯಿಂದ ಇನ್ನೊಂದು ಬದಿಗೆ ವಲಸೆ ಬಂದು , ಅನಂತವಾದ ಕ್ರೂರತೆಯ ಬೀಜವನ್ನು ಬಿತ್ತಿ ಲಕ್ಷಾಂತರ ಜೀವಕ್ಕೆ ಎರವಾದುದನ್ನು ಯೋಚಿಸಿ. ಅವರ ನಡುವಿನ ಮನಸ್ತಾಪ ಎಷ್ಟು ಸಣ್ಣದಾಗಿತ್ತು ಹಾಗು ನಿತ್ಯನೂತನವಾಗಿತ್ತು, ಒಬ್ಬರನೊಬ್ಬರು ಕೊಲ್ಲಲು ಅವರೆಷ್ಟು ಹಾತೊರೆದಿದ್ದರು, ಅವರ ಹಗೆತನ ಅದೆಷ್ಟು ತೀವ್ರವಾಗಿತ್ತು! ಈ ನಮ್ಮ ಗ್ರಹ ವು ಕತ್ತಲಿನಿಂದ ಆವೃತವಾದ ಈ ಅನಂತ ವಿಶ್ವದ ಒಂದು ಸಣ್ಣ ಧೂಳಿನ ಕಣ ಅಷ್ಟೆ! ಎಷ್ಟೇ ಜೋರಾಗಿ ಕೂಗಿಕೊಂಡರೂ , ನಮ್ಮಿಂದ ನಮ್ಮನ್ನು ರಕ್ಷಿಸಲು ಈ ಅನಂತದ ಯಾವ ಮೂಲೆ ಯಿಂದಲೂ ನಮ್ಮ ಎಲ್ಲಾ ಸಂದಿಗ್ಧತೆಗೆ ಸಹಾಯ ಖಂಡಿತ ಬಾರದು. ನಮಗೆ ನಾವೆ ಹೊಣೆ, ನಾವೆ ದಾರಿ. ಎಲ್ಲರೂ ಹೇಳುತ್ತಾರೆ ಖಗೋಳಶಾಸ್ತ್ರ ನಮ್ಮನ್ನು ವಿನಮ್ರಗೊಳಿಸುತ್ತದೆ, ಅಹಂಕಾರ ಮುಕ್ತಗೊಳಿಸುತ್ತದೆ, ಇದರ ಜೊತೆಯಲ್ಲಿಯೆ ಅದು ನಮ್ಮ ಸ್ವಭಾವವನ್ನು ಉನ್ನತಗೊಳಿಸುತ್ತದೆ ಎಂದು ನಾನು ನಂಬಿದ್ದೇನೆ. ನನ್ನ ಬುದ್ದಿಯ ಪ್ರಕಾರ, ಮನುಷ್ಯನ ಅಹಂಕಾರದಿಂದಾಗುವ ಅವಿವೇಕಿತನವನ್ನು ವಿವರಿಸಲು ನಮ್ಮ ಸಣ್ಣ ಪ್ರಪಂಚದ ಈ ದೂರದ ಚಿತ್ರಕ್ಕಿಂತ ಉತ್ತಮ ಅಳತೆಗೋಲು ಇಲ್ಲ ಎಂದು ಭಾವಿಸುತ್ತೇನೆ. ಇದ್ದಷ್ಟು ದಿನ ನಾವು ಪರಸ್ಪರ ಒಬ್ಬರಿಗೊಬ್ಬರು ಸಹಾನುಭೂತಿ ಹಾಗು ಪ್ರೀತಿಯಿಂದ ವರ್ತಿಸಿ ನಮ್ಮ ಒಂದೇ ಒಂದು ಮನೆಯಾದ ಈ ಮಂಕು ನೀಲಿ ಬಣ್ಣದ ಚುಕ್ಕೆಯನ್ನು ರಕ್ಷಿಸಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ."

Rating
No votes yet

Comments