ಚಾಣಕ್ಯ ನೀತಿ
ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣ ಎಂಬ ಪುಸ್ತಕದಿಂದ ನನಗೆ ಹಿಡಿಸಿದ ನಾಲ್ಕು ಸುಭಾಷಿತಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.
ಈ ಚಾಣಕ್ಯ ಪಂಡಿತ ಅರ್ಥಶಾಸ್ತ್ರವನ್ನು ಬರೆದ ಕೌಟಿಲ್ಯನೇ (ಚಂದ್ರಗುಪ್ತನ ಗುರು, ಮಾರ್ಗದರ್ಶಿ), ಅಥವಾ ಬೇರೊಬ್ಬನೇ ಎಂಬುದು ನನಗೆ ತಿಳಿದಿಲ್ಲ.
ಮೂಲವನ್ನೂ ಇಲ್ಲೇ ಬರೆದಿದ್ದೇನೆ.
ಶೈಲೇ ಶೈಲೇ ಚ ಮಾಣಿಕ್ಯಂ ಮೌಕ್ತಿಕಂ* ನ ಗಜೇ ಗಜೇ
ಸಾಧವೋ ನಹಿ ಸರ್ವತ್ರ ಚಂದನಂ ನ ವನೇ ವನೇ
ಗಿರಿಬೆಟ್ಟಗಳಲೆಲ್ಲ ದೊರೆವುದೆ ಮಾಣಿಕ್ಯ?
ಎಲ್ಲ ಚಿಪ್ಪಿನಲು ಸಿಗುವುದೆ ಮುತ್ತುಗಳು ?
ಕಾಡುಕಾಡಲ್ಲೆಲ್ಲ ಇವೆಯೆ ಗಂಧದ ಮರವು?
ಒಳ್ಳೆಯ ಜನರೆಲ್ಲೆಲ್ಲೂ ಹೇಗೆ ದೊರೆತಾರು?
ಅತಿರೂಪೇಣ ವ ಸೀತಾ ಅತಿ ಗರ್ವೇಣ ರಾವಣಃ
ಅತಿ ದಾನಾತ್ ಬಲಿರ್ಬದ್ಧೋ ಅತಿ ಸರ್ವತ್ರ ವರ್ಜಯೇತ್
ರೂಪ ಹೆಚ್ಚಾಗಿ ಕೆಟ್ಟಳು ಸೀತೆ
ರಾವಣ ಕೆಟ್ಟ ಬಲುಗರುವದಲಿ
ಅತಿ ದಾನದಿ ಬಿದ್ದನು ಬಲಿಯು
ಅತಿಯನದಕ್ಕೇ ಬಿಟ್ಟುಬಿಡು !
ಏಕೇನ ಶುಷ್ಕ ವೃಕ್ಷೇಣ ದಹ್ಯಮಾನೇನ ವಹ್ನಿನಾ
ದಹ್ಯತೇ ತದ್ವನಂ ಸರ್ವಂ ಕುಪುತ್ರೇಣ ಕುಲಂ ಯಥಾ
ಹತ್ತಿದರೊಂದು ಒಣಮರ
ಸುಟ್ಟುಹೋಗದೇ ಪೂರ್ತಿ ವನ?
ಕೆಟ್ಟ ಮಗನು ಒಬ್ಬನಿರಲು
ಸುಡನೇ ಅವನು ಮನೆತನ?
ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ
ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ
ಹೂವಲಿ ಪರಿಮಳ ಎಳ್ಳಿನಲಿ ಎಣ್ಣೆಯು
ಸೌದೆಯಲಿ ಬೆಂಕಿ ಹಾಲಿನಲಿ ಬೆಣ್ಣೆಯು
ಕಬ್ಬಿನಲಿ ಬೆಲ್ಲವು ಕಾಣದಡಗಿರುವಂತೆ
ಅಡಗಿದೆ ದೇಹದೊಳ್ ಆತ್ಮವದು
(ಆನೆಯಲ್ಲ್ಲಿ ಮುತ್ತು ದೊರೆಯುವುದು ಕವಿಸಮಯವೆಂದು ನಾನು ಅದನ್ನು ಕಪ್ಪೆಚಿಪ್ಪಾಗಿ ಬದಲಾಯಿಸಿದ್ದೆ;
ಆದರೆ, ವಿಕಿಪಿಡಿಯ ಮಾಹಿತಿ ಪ್ರಕಾರ ಆನೆಯಲ್ಲೂ ಮುತ್ತು ಸಿಗುವುದು ಉಂಟಂತೆ! ಹೇಗೆ ಎಂದು ನಾನರಿಯೆ
http://en.wikipedia.org/wiki/Nine_Pearls )
- ಹಂಸಾನಂದಿ
Comments
ಉ: ಚಾಣಕ್ಯ ನೀತಿ
In reply to ಉ: ಚಾಣಕ್ಯ ನೀತಿ by ವೈಭವ
ಉ: ಚಾಣಕ್ಯ ನೀತಿ