ಉಚ್ಚೈಃಶ್ರವಸ್ಸಿಗಾಗಿ ಕಾಯುತ್ತಿದ್ದೇನೆ!

ಉಚ್ಚೈಃಶ್ರವಸ್ಸಿಗಾಗಿ ಕಾಯುತ್ತಿದ್ದೇನೆ!

ಅದು ಶರದೃತುವಿನ ತಿಂಗಳ ಬೆಳಕಿನ ರಾತ್ರಿ


ಕ್ಷೀರಸಮುದ್ರವೇ ಭೂಮಿಯ ಮೇಲೆ ಹರಿಯುತ್ತಿದೆ


ಹಾಲೇ ಹಯವಾದಂತೆ ಬೆಳ್ಳನೆಯ ಕುದುರೆಯು


ನಾಗಾಲೋಟದಿಂದ ನನ್ನ ಕಡೆಗೆ ಸಾಗಿ ಬರುತ್ತಿದೆ


 


ಬೆಕ್ಕಸ ಬೆರಗಾಗಿ ನೋಡಲು ಹಯವು ಬಂದಿತು


ನನಗೆ ಮೂರು ಸುತ್ತು ಹಾಕಿ ಕೆನೆದು ಬಾಗಿತು


ಮೂರು ಲೋಕದಲ್ಲಿರಲಾರದ ಬೆಳ್ಳನೆ ಕುದುರೆ


ಯಾವ ಜನ್ಮದ ಪುಣ್ಯವೋ ಈಗ ಫಲ ನೀಡಿತು


 


ಅಶ್ವಮೇಧ ಯಜ್ಞ ನಡೆಸಿದೆ ಜಗವು ಕರುಬಿತು


ಚಿನ್ನದ ಪಟ್ಟಿಯನ್ನು ಹಣೆಗೆ ಕಟ್ಟಿದೆ, ಬರೆಸಿದೆ


ಸಾಹಸಿಗರಿದ್ದರೆ ಕಟ್ಟಬಹುದು ಉಚ್ಚೈಃಶ್ರವಸ್ಸು


ಹೊರಟೆ, ದಿಗ್ವಿಜಯ! ಕೀರ್ತಿಯನು ಗಳಿಸಿದೆ


 


ಮೂರು ಲೋಕ ತಿರುಗಿ ಬಂದಿತು ಬೆಳ್ಗುದುರೆ


ಯಜ್ಞ ಪೂರೈಸಲು ಕಾಯುತ್ತಾ ನಿಂತುಕೊಂಡೆ


ಅಂಬಿನಂತೆ ಬಂದ ಕುದುರೆ ನನ್ನ ದಾಟಿಬಿಟ್ಟಿತು


ಓಡುತ್ತಾ ಮಾಯವಾಗಿಬಿಟ್ಟಿತು ಬೆನ್ನ ಹಿಂದೆ!


 


ನನ್ನ ಅಶ್ವಮೇಧ ಯಜ್ಞ ಅರ್ಧಕ್ಕೆ ನಿಂತುಬಿಟ್ಟಿದೆ


ಕುದುರೆ ಮಾಯವಾದದ್ದು ಬರಿ ಕನಸಿರಬಹುದು


ಮತ್ತೊಮ್ಮೆ ಜೈತ್ರಯಾತ್ರೆಗೆ ಹೊರಟಿರಬಹುದು


ಕಾದಿದ್ದೇನೆ ಯಜ್ಞಕುದುರೆಗಾಗಿ ಕಾಯುತ್ತಿದ್ದೇನೆ


-----


ಡಾ|ನಾ.ಸೋಮೇಶ್ವರ


www.yakshaprashne.org


 

Rating
No votes yet

Comments