ರಾಯರ ಮಠದ ಹುಡುಗಿಗೆ....

ರಾಯರ ಮಠದ ಹುಡುಗಿಗೆ....

ಅವತ್ತು ರಾಯರ ಮಠದಲ್ಲಿ ಅಷ್ಟೊಂದು ತನ್ಮಯತೆಯಿಂದ ಕಣ್ಣು ಮುಚ್ಚಿ ನಮಿಸುತ್ತಿದ್ದ ನಿನ್ನ ಆರಾಧನಾ ಭಾವ ಬೇಡವೆಂದರೂ ನನ್ನ ಕಂಗಳಿಂದ, ನನ್ನ ಮನದಂಗಳದಿಂದ ದೂರವಾಗುತ್ತಿಲ್ಲಾ. ಅಷ್ಟು ತಾದ್ಯಾತ್ಮದಿಂದ ಪಾದದ ಮುಂದೊಂದು ಪಾದ ಇಟ್ಟು ಅದೆಷ್ಟು ಪ್ರದಕ್ಷಿಣೆ ಹಾಕಿದ್ಯೋ ನಂಗಂತು ಆ ರಾಯರಾಣೆಗೂ ನೆನಪಿಲ್ಲಾ.ಆದ್ರೆ ನೆನಪಿರೋದು ನಿನ್ನ ನೀಲಿ ಜೀನ್ಸಿನ ಮೇಲೆ ತೊಟ್ಟ ತಿಳಿಗುಲಾಬಿ ಬಣ್ಣದ ಕುರ್ತಾ ಮತ್ತು ಹಣೆಯ ಮದ್ಯದ ಕಂಡು ಕಾಣದಂತಿರುವ ನಿನ್ನ ಪುಟ್ಟ ಬಿಂದಿ.ನಿಂಗ್ಯಾರೆ ಹೇಳಿದ್ದು ನಂಗೆ ತಿಳಿಗುಲಾಬಿ ಅಂದ್ರೆ ಇಷ್ಟ ಎಂದು?. ನಿನ್ನ ನೋಡಿದ ತಕ್ಷಣ " ತಥ್ ಇವತ್ತೆ ಈ ಮಾಸಲು ಟೀ ಶರ್ಟು ಹಾಕ್ಕೋಂಡು ಮಠಕ್ಕೆ ಬರಬೆಕಿತ್ತಾ ನಾನು " ಎಂದು ಸಾವಿರ ಸರ್ತಿ ಹಳಿದುಕೊಂಡಿದ್ದಿನಿ.

ಸತ್ಯವಾಗ್ಲೂ ಹೆಳ್ತಿನಿ, ನಂಗೆ ಬುದ್ಧಿ ಬಂದಾಗಿನಿಂದ ದೇವಸ್ಥಾನಕ್ಕೆ, ಮಠಕ್ಕೆ ಅಂತ ಹೋದವನೇ ಅಲ್ಲಾ!.ಆಕಸ್ಮಾತ್ ಹೊದ್ರು ದೇವರಿಗೆ ಕೈ ಮುಗಿದದ್ದು ನೆನಪಿಲ್ಲಾ. ನಮ್ಮ ಮನೋಜ್ ಹೇಳಿಯೇ ಹೇಳ್ತಿದ್ದ " ರೀ ಗುರುವಾರ ರಾಘವೇಂದ್ರನ ಮಠಕ್ಕೆ ಹೋಗಬೇಕ್ರಿ, ಏನ್ ಹೇಳ್ಲಿ ನಿಮ್ಗ, ಕಂಡಾಪಟಿ ಮಸ್ತ್ ಹುಡುಗ್ಯಾರು ಬಂದಿರ್ತಾರ" ಅಂತ ಅತ್ಯಂತ ಉಮ್ಮೆದಿಯಿಂದ ಹೇಳಿದ್ದ.I swear ಇವತ್ತಿನವರೆಗೂ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಹೋಗಿರಲಿಲ್ಲಾ. ಇವತ್ತೂ ಸಹ ಅವನು ಒತ್ತಾಯ ಮಾಡಿದ ಅಂತ ಬಂದೆನೆ ಹೊರ್ತು, ಬರಲೇಬೇಕು ಅಂತಲ್ಲಾ.ಆದ್ರೆ ಈಗಲೆ ಹೇಳಿಬಿಡ್ತಿನಿ ಇನ್ನೂ ಮುಂದಿನ ಪ್ರತಿ ಗುರುವಾರಗಳಲ್ಲಿ ಮಠಕ್ಕೆ ನನ್ನ ಕಡ್ಡಾಯ ಹಾಜರಾತಿ ಇರುತ್ತೆ, ಅದು ಕೇವಲ ನಿನಗಾಗಿ, ನಿನ್ನ ಬರುವಿಕೆಗಾಗಿ..

ನೀನು ನನ್ನ ಕಿರುಗಣ್ಣಿನಲ್ಲೆ ನೋಡಿದ್ಯಾ?, ಗೊತ್ತಿಲ್ಲಾ! ಆದ್ರೆ ನೋಡಿದೆ ಅಂತ ಸುಳ್ಳೆ ಅಂದ್ಕೊಂಡು ಖುಶಿ ಪಡೊದ್ರಲ್ಲೂ ಇಷ್ಟು ಸುಖವಿರುತ್ತಾ?. ಏನು ಮಜಾ ಅಂತೀನಿ ಒಂದು ಮೂಲೆಯಲ್ಲಿ ನಿರ್ಭಾವುಕನಾಗಿ ಕೂತಿದ್ದ ನಾನು ಪ್ಯಾಲಿಯಂತೆ ನಿನ್ನ ಹಿಂದೆ ಸುತ್ತಿದ್ದೆ ಸುತ್ತಿದ್ದು.ನಿಂಗೆ ಮುಜುಗುರವಾಯ್ತಾ ಚಿನ್ನು?. ನೀನಿಟ್ಟ ಹೆಜ್ಜೆಯ ಮೇಲೆ ನಾನು ಸಹ ಜಾಗರೂಕತೆಯಿಂದ ಪಾದವೂರಿ ಪ್ರದಕ್ಷಿಣೆ ಹಾಕದೆ ಹೋದರೆ ಈ ಜನ್ಮದಲ್ಲೇನೊ ಕಳೆದುಕೊಂಡುಬಿಡ್ತಿನಿ ಅಂತ ಅನಿಸತೊಡಗಿತ್ತು ಕಣೆ. ಆ ಶಾಸ್ತ್ರಿಗಳು ಕೊಟ್ಟ ಮಂತ್ರದ ಅಕ್ಷತೆಕಾಳನ್ನು ತಲೆ ಮೇಲೆ ಹಾಕ್ಕೊಬೇಕು ಅನ್ನೊದು ತಿಳಿಯದ ಶುದ್ದಾತಿಶುಧ್ದ ಬೆಪ್ಪು ಕಣೆ ನಾನು. ನಿನ್ನ ತಲೆಯಿಂದ ಜಾರಿಬಿದ್ದ ಅ ಅಕ್ಷತೆ ಕಾಳುಗಳನ್ನು ಎಷ್ಟು ಕಷ್ಟ ಪಟ್ಟು ಹೆಕ್ಕಿಕೊಂಡೆನೋ ಗೊತ್ತಿಲ್ಲಾ!

ನೀನಿದ್ದಷ್ಟು ಹೊತ್ತು ನಂಗೆನೋ ಒಂಥರಾ ಸಮಾಧಾನ, ಮನತೃಪ್ತಿ. ಈ ಹಿಂದೆ ಎಷ್ಟು ಭಾರಿ ಬಂದರೂ ಸಿಗದ ಮನಶಾಂತಿ ಆ ಕ್ಷಣಕ್ಕೆ ಆಗತೊಡಗಿತು ಚಿನ್ನು. ನೀ ಮಠದಿಂದ ಹೊರಬಂದು ಹೊರಗಿದ್ದ ತುಳಸಿಗೆ ಹಣೆಯೊತ್ತಿ ನಮಿಸಿದಾಗ ನಾನೂ ತುಳಸಿ ವಿವಾಹದ ದಿನದಂದೆ ಹುಟ್ಟಿದ್ದು ಅಂತ ಕೂಗಿ ಕೂಗಿ ಹೇಳಬೇಕಿನಿಸ್ತು.ಇನ್ನೊಮ್ಮೆ ತಿರುಗಿದವಳೆ ಕಣ್ಮುಚ್ಚಿ ನಮಿಸಿ, ನಿನ್ನ ಪಿಂಕ್ ಪಿಂಕು ಕೈನಿಯ ಕಡೆಗೆ ಬರಿಪಾದದಲ್ಲಿ ಹೆಜ್ಜೆಯನ್ನುಡುತ್ತಿದ್ದರೆ ನನಗಿಲ್ಲಿ ಯವುದೋ ಶಕ್ತಿ ನನ್ನಿಂದ ದೂರವಾದ ಭಾವ, ಎನೋ ಕಳೆದುಹೋಗುತ್ತಿರುವ ಅನುಭವ..

ರಾಯರ ಮಠದ ಹುಡುಗಿಯೇ ನಿನಗಾಗಿ,ಇನ್ನು ಮುಂದೆ ಬರುವ ಪ್ರತಿ ಗುರುವಾರ ಕಾಯುತ್ತೇನೆ, ಭಾರವಾದ ಎದೆಯಲ್ಲಿ,ಖಾಲಿ ಮನದಲ್ಲಿ. ನೀ ಮತ್ತೆ ಬಂದೆ ಬರುತ್ತಿಯಾ ಎಂಬ ತುಂಬು ನೀರಿಕ್ಷೆಯಲ್ಲಿ! ನೀ ಬರ್ತಿಯಾ ಅಲ್ವಾ?

Rating
No votes yet

Comments