ವಲಸೆ
ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ - ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.
ಎರಡನೇದು - ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು "ನೀನು ಈ ದೇಶದಲ್ಲೇ ಹುಟ್ಟಿದ್ದ?" ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. "ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ" ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.
ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
"ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ 'ಬರಬೇಡಿ ಹೋಗಿ' ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ."
ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?
Comments
ಉ: ವಲಸೆ
ಉ: ವಲಸೆ
ಉ: ವಲಸೆ
In reply to ಉ: ವಲಸೆ by anivaasi
ಉ: ವಲಸೆ