ನನ್ನೂರು ಮತ್ತು ನಾಸ್ಟಾಲ್ಜಿಯಾ

ನನ್ನೂರು ಮತ್ತು ನಾಸ್ಟಾಲ್ಜಿಯಾ

ನಾಸ್ಟಾಲ್ಜಿಯಾ ಎಂಬ ಪದವನ್ನು ನಾನು ಮೊದಲು ನೋಡಿದ್ದು ಡುಂಡಿರಾಜರ ಒಂದು ಲೇಖನದಲ್ಲಿ. ಒಂದು ಕಾಲದಲ್ಲಿ ಹಿಡಿದಿದ್ದ ಡುಂಡಿರಾಜರ ಕವಿತೆಗಳ ಹುಚ್ಚು ಗೊತ್ತಿಲ್ಲದೇ ಬಿಟ್ಟಿದ್ದು ನನ್ನಲ್ಲಿ ಆಗುತ್ತಿದ್ದ ಬದಲಾವಣೆಗಳ ಅರಿವಿಲ್ಲದೆ ಇರಬೇಕು. ಕ್ರಮೇಣ ಕಾಲೇಜಿನ ಲೈಬ್ರರಿಯ ಒಳಗೆ ಕೂಡ ನುಗ್ಗದೆ ಇರುತ್ತಿದ್ದರಿಂದ ಡುಂಡಿರಾಜರ ಕವನಗಳು ಮಾತ್ರ ಬೆನ್ನು ಬಿಟ್ಟದ್ದಲ್ಲ, ಕಾಲೇಜಿನಲ್ಲಿದ್ದ ‘ಡೀಸೆಂಟ್ ಹುಡುಗ’ ಎಂಬ ಒಳ್ಳೆಯ ಹೆಸರು ಕೂಡ ಹಾಳಾಗಿತ್ತು.  ನಾನು ಕೆಟ್ಟೆ ಎಂದು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದ ಶಿಕ್ಷಕ ವರ್ಗ ಬೇಸರಿಸಿದರೆ ಇದಕ್ಕೆಲ್ಲಾ ಅಜ್ಞಾತನಾಗಿದ್ದ ನಾನು ಕ್ಯಾಂಪಸ್ ಸೆಲೆಕ್ಷನ್ ಆಗಿ ಕಾಲೇಜು ಬಿಟ್ಟ ನಂತರ ನನ್ನ ಹಿಂದೆ ನಡೆದ ಸಂಗತಿಗಳೆಲ್ಲಾ ಯಾರ್ಯಾರಿಂದಲೋ ತಿಳಿದುಬಂದದ್ದು. ಆದರೆ ನಾನು ಎಲ್ಲರ ದೃಷ್ಟಿಯಲ್ಲಿ ಕೆಡುವವರೆಗೆ ಆಂಗ್ಲ ಶಬ್ದ ಕೋಶದ ಬಗೆಗಿನ ನನಗಿದ್ದ ಗೀಳಿನಿಂದ ಗೊತ್ತಿಲ್ಲದ ಪ್ರತಿ ಪದವೂ ಪರ್ಸಿನಲ್ಲಿದ್ದ ಕಾಗದದ ಹಾಳೆಯಲ್ಲಿ ನೋಟ್ ಆಗುತ್ತಿತ್ತು. ಮನೆಗೆ ಹೋಗಿ ಶಬ್ದಕೋಶದಲ್ಲಿ ಹುಡುಕುವವರೆಗೆ ನೆಮ್ಮದಿ ಇಲ್ಲ. ಈಗ ಮೊಬೈಲಿನಲ್ಲಿ install ಮಾಡಿದ ಶಬ್ದ ಕೋಶವನ್ನು ಒಮ್ಮೆಯೂ ಬಳಸದಿರುವುದು ಎಷ್ಟೋ ವಸ್ತುಗಳು ದೂರ ಇದ್ದರೇನೆ ಚೆನ್ನ ಎಂಬುದರ ಅರಿವು ಮೂಡಿಸುತ್ತದೆ. ಹೀಗೆ ಡುಂಡಿರಾಜರ ಕವಿತೆಗಳು ಮತ್ತು ಗೊತ್ತಿಲ್ಲದ ಅಂಗ್ಲ ಪದಗಳ ಅರ್ಥ ಹುಡುಕುವುದರಿಂದ ನನ್ನಲ್ಲಿ ಹೆಚ್ಚಿದ್ದು ಎರಡು. ಒಂದು Sense of humor ಎನ್ನುವ ಹಾಸ್ಯ ಪ್ರಜ್ಞೆ, ಇನ್ನೊಂದು vocabulary ಎನ್ನುವ ಶಬ್ದ ಭಂಡಾರ.  

 

ಅಂದ ಹಾಗೆ ನನ್ನೂರು ಬೆಳ್ಮಣ್ಣು, ಕಾರ್ಕಳ ತಾಲುಕಿನಲ್ಲಿ ಸ್ಥಿತವಾದ ಹಳ್ಳಿ, ಆದರೆ ದೊಡ್ಡ ಮಿಕ. ಗ್ರಾಮ ಪಂಚಾಯತ್ ಇರುವುದರಿಂದ ಗ್ರಾಮ ಅನ್ನಬಹುದು. ಇದು ಮಂಗಳೂರು, ಉಡುಪಿ ಮತ್ತು ಕಾರ್ಕಳವನ್ನು ಸೇರಿಸುವ ಒಂದು median ಇದ್ದ ಹಾಗೆ. ಭೌತಿಕವಾಗಿ ಊರು ಬಿಟ್ಟು ಕೇವಲ ೩ ವರ್ಷಗಳಾಗಿದ್ದರೂ ಮಾನಸಿಕವಾಗಿ ದೂರವಾಗಿ ೬ ವರ್ಷಗಳು ಕಳೆದಿವೆ. ಏಕೆಂದರೆ ನಿಟ್ಟೆಯಲ್ಲಿ ಕಲಿಯಲು ಆರಂಭಿಸಿದ್ದರಿಂದ ಊರಿನ ವಿಷಯಗಳು ಗೊತ್ತಿದ್ದರೂ ಭಾವನಾತ್ಮಕವಾಗಿ ಊರಿನ ಸಂಬಂಧ ಕಡಿಮೆಯಾಯಿತು. ನಮ್ಮ ಸುತ್ತಣ ನಡೆಯುವ ವಿಷಯಗಳಿಗೆ ನಾವು ಪ್ರತಿಕ್ರಿಸುವುದು ನಿಲ್ಲಿಸಿದರೆ ಅದರೊಂದಿಗೆ ನಮ್ಮ ಭಾವನಾತ್ಮಕ ಸಂಬಂಧ ಕಡಿಮೆಯಾಗಿದೆ ಎಂದರ್ಥ.

 

ಮುಖ್ಯವಾಗಿ ಹೆಚ್ಚು ಹಿಂದುಗಳೇ ಇರುವ ನಮ್ಮೂರಿನಲ್ಲಿ ಕ್ರೈಸ್ತರೂ ಕೂಡ ತುಂಬಾ ಇದ್ದಾರೆ. ಆದರೆ ನಾನು ಊರು ಬಿಡುವವರೆಗೆ ಒಬ್ಬನೇ ಒಬ್ಬ ಮುಸಲ್ಮಾನ ಇರದಿದ್ದುದು ನನ್ನ ಆಶ್ಚರ್ಯಗಳಲ್ಲಿ ಒಂದು. ಬದ್ರುದ್ದೀನ್ ಎಂಬವ ಮೊದಲ ಬಾರಿಗೆ ಕಂಪ್ಯೂಟರ್ ಸರ್ವೀಸ್ ಮತ್ತು ಮೊಬೈಲ್ ರಿಪೇರಿ ಅಂಗಡಿ ತೆರೆದಾಗ ನಮಗೆಲ್ಲ ಆಶ್ಚರ್ಯ. ಅದೇ ವೇಳೆಗೆ ಅಕ್ಕನ ಮೊಬೈಲನ್ನು ಅವಳ ೨ ವರ್ಷದ ಮಗಳು ಸರ್ಫಿನಲ್ಲಿ ನೆನೆಸಿ ಹಾಕಿ ರಿಪೇರಿ ಮಾಡಿ ತರಿಸುವ ಜವಾಬ್ದಾರಿ ಹೊತ್ತುಕೊಂಡು ಆ ಅಂಗಡಿಗೆ ತೆಗೆದುಕೊಂಡು ಹೋಗಿದ್ದರಿಂದ ಅವನ ಪರಿಚಯ. ಮುಂದೆ ಒಬ್ಬ ಉತ್ತಮ ಗೆಳೆಯ ಕೂಡ ಆಗಿ ಹೋಗಿದ್ದ. ಆದರೆ ಕ್ರಮೇಣ ಆತನಿಗೆ ನಷ್ಟವಾಗುತ್ತಿದುದರಿಂದ ತನ್ನ ಸೆಂಟರನ್ನು ಮುಚ್ಚಿ ಮಂಗಳೂರಿಗೆ ಹೋದ ಎಂದು ಸುದ್ದಿ. ಉಳ್ಳಾಲ್ತಿ ಗೆ ದನ ತಿನ್ನುವವರು ಊರಿನಲ್ಲಿ ಇರುವುದು ಇಷ್ಟವಲ್ಲ ಅದಕ್ಕಾಗಿ ಆತನಿಗೆ ನಷ್ಟವಾಗಿದ್ದು ಮತ್ತೆ ಊರು ಬಿಟ್ಟು ಹೋದದ್ದು ಎಂದು ಆಸ್ತಿಕರ ಅಂಬೋಣ.

 

ಆಸ್ತಿಕ ಎಂದು ಬರೆದದ್ದರಿಂದ ಈ ಪ್ಯಾರಾ. ನಮ್ಮೂರಿನಲ್ಲಿ ಹೆಚ್ಚಿನ ಎಲ್ಲ ಊರುಗಳಂತೆ ನಾಸ್ತಿಕರ ಸಂಖ್ಯೆ ಕಡಿಮೆ. ದೇವರ ಮೇಲೆ ಭಕ್ತಿ ಎಷ್ಟು ಜನರಿಗೆ ಇದೆ ಅಂತ ಗೊತ್ತಿಲ್ಲ ಆದರೆ ದೇವಸ್ತಾನಕ್ಕಂತೂ ಹೋಗಿಯೇ ಹೋಗುತ್ತಾರೆ. ನಾನು ಈಗ ಕೂಡ ಮನೆಗೆ ಹೋದರೆ ದೇವಸ್ತಾನಕ್ಕೆ ಹೋಗುವ ಅಮ್ಮನ ಪ್ಲಾನ್ ತಯಾರಾಗಿರುತ್ತದೆ. ಇದೆ ದೇವಸ್ಥಾನ ಆಗಬೇಕಿಲ್ಲ. ಆದರೆ ಅಮ್ಮನಿಗೆ ಹತ್ತಲು ಸಮಸ್ಯೆ ಆದ್ದರಿಂದ ಹೆಚ್ಚಾಗಿ ಪಿಲಾರುಖಾನ ಅಥವಾ ಶಾಸ್ತಾವು ದೇವಸ್ಥಾನ ಮಾತ್ರ ಭೇಟಿ ನೀಡುತ್ತಾಳೆ. ದುರ್ಗಾ ಪರಮೇಶ್ವರಿ ದೇವಸ್ತಾನಕ್ಕೆ ಹೋಗುವುದು ಕಡಿಮೆ. ಆದರೆ ನಮ್ಮೂರಿನ ಅತ್ಯಂತ ಪ್ರಸಿದ್ಧಿ ಸ್ಥಳ ಈ ದೇವಸ್ಥಾನ. ಇದಕ್ಕೆ ಕಾರಣ ಮಧ್ವರಾಯ ಭಟ್, ನಡೆಯುವ ವಿಶೇಷ ಆಚರಣೆಗಳು, ಸಿಕ್ಕ ಆಳುಪ ವಂಶದ ಶಾಸನ ಇದಕ್ಕೂ ಮೇಲಾಗಿ ದೇವಿಯ ಕೈವಾಡ, ಪವಾಡವೆನ್ನಿ!!!

 

ಹೀಗೆ ಊರಿನ ನೆನಪುಗಳು ಒಂದಲ್ಲ ಎರಡಲ್ಲ. ಆದರೆ ಈಗೀಗ ಊರಿಗೆ ನಾನು ಹೊರಗಿನವನೆ ಆಗಿದ್ದೇನೆ ಎಂದು ಅನಿಸುವುದು ಮನೆಗೆ ಹೋದಾಗಲೆಲ್ಲಾ. ‘ಹೇಗಿದ್ದಿ’ ಎಂದು ಕೇಳುವ ಮೊದಲು ‘ಯಾವಾಗ ಹೋಗ್ತಿ?’ ಎನ್ನುವ ಪ್ರಶ್ನೆಯೇ ಬಂದು ಬಿಡುತ್ತದೆ. ‘ಮತ್ತೆ ಯಾಕೆ ಒಂದು ವಾರ ಕೂಡ ಇರಲಿಕ್ಕೆ ಅಗುದಿಲ್ವ?’ ಎಂಬ ಬೋನಸ್ ಪ್ರಶ್ನೆ. ಒಂದರೊಂದಿಗೆ ಒಂದು ಉಚಿತ ಎಂಬಂತೆ.  ಇದರಿಂದಾಗಿ ಒಂದು ವಿಷಯ ಅರ್ಥವಾಯಿತು, ಎಲ್ಲರೂ ಬಂದು ನಿನ್ನ ಬಳಿ ಮಾತಾಡಿದರೆ ಒಂದೇ ನೀನು ತುಂಬಾ ದೊಡ್ಡ ಸುದ್ದಿ ಮಾಡಿದ್ದಿ ಇಲ್ಲ ಅಂದರೆ ತುಂಬಾ ದಿನದ ನಂತರ ಊರಿಗೆ ಬರುತ್ತಾ ಇದ್ದಿ ಎಂದು.  

 

ಆದರೆ ಈಗ ತಲೆ ತಿನ್ನುತ್ತಿದ್ದ ಶೆಣೈ ಮಾಸ್ತರು, ರಿಕ್ಷಾದ ರಾಜ, ಆತ್ಮೀಯ ಗೆಳೆಯ ಕಾರ್ತಿಕ್, ಜಂತ್ರ ಗುಡ್ಡೆ, ಆನಂದ್ ಫ್ಯಾಕ್ಟರಿ, ಉದಯ ಬೇಕರಿ, ವಿಘ್ನೇಶ್ ಕ್ರೀಂ ಪಾರ್ಲರ್, ಶಾಸ್ಥಾವು ದೇವಸ್ಥಾನ, ಶಾಂತ ಮಾಮಿ, ಕಲ್ಪಂಡೆ ಎಂಬ ಹಣ ಉತ್ಪಾದಿಸುವ ಕಲ್ಲು ಎಲ್ಲಾ ನೆನಪಾದಾಗಲೆಲ್ಲಾ ಹಳೆಯ ಸಹಜ ಬದುಕಿನ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಎಷ್ಟು ಸರಳವೆನಿಸಿದರೂ ಜೀವನದ ಹೋರಾಟ ನಾವು ಇಲ್ಲಿ ಬರೆಯುವುದಕ್ಕೂ ಮಿಗಿಲಾದದ್ದು ಎಂದೆನಿಸುತ್ತದೆ. ಇಲ್ಲಿನ ಜನರಲ್ಲಿ ಹಣ ಹೆಚ್ಚು ಕಡಿಮೆ ಇರಲಿ ಆದರೆ ಮೇಲು ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ಕಾಣುತ್ತದೆ. ಆದರೆ ಈಗೀಗ ಸ್ವಲ್ಪ ಹಣದ ದುರಾಸೆ ಕೂಡ ಕಂಡು ಬರುವುದು ಮಣ್ಣಿನ ಆಸೆಯಿಂದ ಜನ ಹಣದ ಆಸೆಗೆ ತಿರುಗುತ್ತಿದ್ದಾರೆ ಎಂಬುದಕ್ಕೆ ನಿದರ್ಶನ. ಸಿರಿವಂತ ಕ್ರೈಸ್ತರ ಬೇಕಾಬಿಟ್ಟಿ ಹಣದ ತೊಡಗಿಸುವಿಕೆ ಕೂಡ ಇದಕ್ಕೆ ಕಾರಣ.  

 

ತೀರಾ ಹಳ್ಳಿಯಲ್ಲಿ ಬದುಕಲು ನಡೆಯುವ ಸಂಘರ್ಷ ಕಂಡು ಬಂದರೆ ನಗರಗಳಲ್ಲಿ ಕಂಡು ಬರುವುದು ವಿಲಾಸಕ್ಕಾಗಿ ನಡೆಯುವ ಸಂಘರ್ಷ. ಆದರೆ ಹಳ್ಳಿಯೂ ಅಲ್ಲದ ನಗರವೂ ಅಲ್ಲದ ಬೆಳ್ಮಣ್ಣು, ಇವೆರಡರ ಸಂಗಮ. ಅದಕ್ಕಾಗಿ ಇಲ್ಲಿ smart ಎಂದು ಹೇಳಬಹುದಾದ ಬುಸಿನೆಸ್ಸುಗಳು ಶುರುವಾಗುತ್ತವೆ. ಎಷ್ಟೇ ಸಣ್ಣ ಬೀಡಾ ಅಂಗಡಿ ಇರಲಿ ವ್ಯವಹಾರ ನಡೆಯುತ್ತಿರುತ್ತದೆ. ನನ್ನೂರು ಯಾವುದೇ ಕಾವ್ಯಾತ್ಮಕ ಅಥವಾ ಕಾದಂಬರಿಯ ಕ್ಲಾಸಿಕಲ್ ನೋಟ ನೀಡಲಾರದು ಆದರೆ ಕರಾವಳಿಯ ನಂಬಿಕೆಗಳು, ಜೀವನ ಶೈಲಿಯ ಚಿತ್ರಣವನ್ನು ಮಾತ್ರ ನೀಡುತ್ತದೆ, ಅದರಿಂದ ಸಂಸ್ಕೃತಿ ಎಂದು ಎಲ್ಲರೂ ಕರೆಯುವ ‘ಬದಲಾಗದ ಜೀವನ ಶೈಲಿ’ ಇನ್ನೂ ಹೆಚ್ಚಿನ ಕಡೆ ಕಂಡು ಬರುತ್ತದೆ. ಕೆಲವು ಕಡೆ ಸ್ವಲ್ಪ ಬದಲಾಗಿದೆ ಅಷ್ಟೇ.

 

ನನ್ನೂರಿನ ಈ ಸರಣಿ ಕಥೆಗಳ ಪ್ರಮುಖ ಉದ್ದೇಶ ಕಳೆದಂತಿರುವ ನನ್ನ ಯೌವನದ ಬಾಲ್ಯವನ್ನು ಹಿಡಿದಿಡುವುದೇ ಆಗಿದೆ. ನಾನು ಬದಲಾದಂತೆ ನನ್ನೂರು ಕೂಡ ಬದಲಾಗಿದ್ದು ‘ಬದಲಾವಣೆ ಪ್ರಕೃತಿಯ ನಿಯಮ’ ಎಂಬ ನಿಯಮದಡಿಯಲ್ಲಿ. ಗಣಿತದ ಎಲ್ಲಾ ನಿಯಮಗಳಿಗೆ ವಿವರಣೆ ಇದ್ದರೂ ಈ ನಿಯಮ ಗಣಿತದ್ದು ಅಲ್ಲವಾದ್ದರಿಂದ ಹೆಚ್ಚಿನವರು ಇದನ್ನು ಒಪ್ಪುವುದಿಲ್ಲ. ನಾನು ಒಪ್ಪುತ್ತೇನೋ ಇಲ್ಲವೋ ಆದರೆ ನನ್ನ ಜನರನ್ನು ನೋಡುವ ದೃಷ್ಟಿ ಮಾತ್ರ ಬದಲಾಗಿದ್ದು ಸತ್ಯ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ.

 

 



Rating
No votes yet

Comments