ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿಸಿರಬೇಕು. ಆಗ ಪುರಾಣಗಳು ಕೇವಲ ಕಥೆಗಳಂತೆ ಕಾಣುತ್ತಿತ್ತು. ನಾನು ಬೆಳೆದಂತೆ ಮಹಾಭಾರತ, ರಾಮಾಯಾಣದ ಕಥೆಗಳೆಲ್ಲವೂ ಒಂದಾನೊಂದು ಕಾಲದಲ್ಲಿ ನಡದ ನಿಜ ಘಟನೆಗಳೆಂದು ತಿಳಿಯಿತು. ಮತ್ತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ನಮ್ಮ ಸಮಾಜವಿಜ್ಞಾನ ಪುಸ್ತಕದಲ್ಲಿ ತಿಳಿಸುವಂತೆ ವೇದದ ಕಾಲದಲ್ಲಿ ಮಹಿಳೆಯರಿಗೆ ಅತ್ತ್ಯುತ್ತಮ ಸ್ಥಾನ ದೊರಕ್ಕಿತ್ತು ಎಂದು ತಿಳಿದು ಬರುತ್ತದೆ. ಆದರೆ ತ್ರೇತಾ ಮತ್ತು ದ್ವಾಪರಾ ಯುಗದಲ್ಲಿನ ನಾಯಕಿಯರ ಪಾಡು ಹೇಗಿತ್ತು? ಸೀತೆ, ದ್ರೌಪದಿ, ಕುಂತಿ, ಊರ್ಮಿಳೆ ಇವರೆಲ್ಲಾ ಅನುಭವಿಸಿದ ಪಾಡು ನೋಡಿದರೆ ಅಯ್ಯೋ ಎನಿಸುತ್ತದೆ. ಸೀತೆಯನ್ನು ಕಾಡಿಗಟ್ಟುವಾಗ ಯಾರು ಈ ಬಗ್ಗೆ ಚಕಾರವೆತ್ತುವುದಿಲ್ಲ. ವಿಚಿತ್ರವಲ್ಲವೇ? ಯಾವನೋ ಒಬ್ಬನ ಮಾತಿಗೆ ಬೆಲೆಕೊಟ್ಟು ರಾಮ ತನ್ನ ಪ್ರಿಯ ಪತ್ನಿಯನ್ನು ಕಾಡಿಗಟ್ಟುವುದೇ? ಹೋಗಲಿ, ಆಕೆಯ ವಾಸ್ತವ್ಯದ ಬಗ್ಗೆ ಏನಾದರೂ ಮಾಡಬಹುದಿತ್ತಲ್ಲವೇ! ಲಕ್ಶ್ಮಿಯ ಅವತಾರವೆಂದು ತಿಳಿಯುವ ಸೀತೆಗೇ ಈ ತರದ ಕಷ್ಟ ಬರಬೇಕಾದರೆ ಉಳಿದ ಮಹಿಳೆಯರ ಪಾಡು ಏನಾಗಿರಬಹುದು?

ಮತ್ತೆ ದ್ವಾಪರದ ನಾಯಕಿ ದ್ರೌಪದಿ, ತುಂಬಿದ ಸಭೆಯಲ್ಲಿ ದುಶ್ಶಾಸನನು ಆಕೆಯ ಸೀರೆಯನ್ನೆಳೆವಾಗ, ಕೃಷ್ಣೆಯ ೫ ಬಲಶಾಲಿ ಪತಿಗಳು ಏನು ಮಾಡುತ್ತಿದ್ದರು! ಧರ್ಮರಾಯ ಎಂದು ಹೆಸರು ಪಡೆದಿರುವ ಯುಧಿಷ್ಟರನಿಗೆ ತಾನು ಸೋತ ಬಳಿಕ ತನ್ನ ಪತ್ನಿಯನ್ನು ಪಣವಿಡುವ ಹಕ್ಕಿತ್ತೇ? ಅಸ್ಥಾನದಲ್ಲಿದ್ದ ಭೀಷ್ಮನು ಈ ಎಲ್ಲಾ ತಮಾಷೆಯನ್ನು ತಡೆಯಬಹುದಿತ್ತಲ್ಲವೇ? ವಿಚಿತ್ರವೆಂದರೆ ಗಂಗೇಯನು ದುರ್ಯೋಧನನ ಉಪ್ಪಿನ ಋಣದಲ್ಲಿ ಬಿದ್ದಿದುರಿಂದ ಮೌನವಾಗಿದ್ದಾನಂತೆ! ದ್ರತರಾಷ್ಟ್ರನಂತೂ ಮೊದಲೇ ಕುರುಡ, ಈಗಂತೂ ಪುತ್ರ ವ್ಯಾಮೋಹದಿಂದ ನ್ಯಾಯದ ಕಣ್ಣನ್ನು ಕಳಕೊಂಡಿದ್ದಾನೆ. ದೇವಾಂಶ ಸಂಭೂತರೆಂದು ತಿಳಿಯುವ ರಾಮ ಕೃಷ್ಣರ ಕಾಲದಲ್ಲಿ ನಡೆದಿದೆಯೆಂದ ಮೇಲೆ ಕಲಿಯುಗದ ಮಹಿಳೆಯ ಪಾಡು ಏನಾಗಿರಬಹುದು? ನಾಯಿಪಾಡು ಎಂದೇ ಹೇಳಬಹುದು. ಆದರೂ ಈಗೀಗ ಮಹಿಳೆಯರು ಎಚ್ಚೆತ್ತುತ್ತಿದ್ದಾರೆ. ತಮ್ಮ ಸ್ಥಾನ ಮಾನಕ್ಕಾಗಿ ಹೋರಾಡುತ್ತಿದ್ದಾರೆ. ನಾನಂತೂ ಆಶಾವಾದಿ, ಖಂಡಿತ ಹತ್ತಿಪ್ಪತ್ತು ವರ್ಷಗಳ ಬಳಿಕ ಮಹಿಳೆಯರಿಗೆ ಅವರಿಗೆ ತಕ್ಕುದಾದ ಸ್ಥಾನ ದೊರಕೀತು!

Rating
No votes yet

Comments