ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]

ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]


ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ ಮುಖ್ಯವಾಗಿ ಅಕ್ಕನ ಕೈನೆಟಿಕ್ ನಲ್ಲಿ ೭೦-೮೦ ರ ಸ್ಪೀಡಿನಲ್ಲಿ ಹೋಗುವಾಗ! ಸರ್ಕಾರದ ಕೈಯಲ್ಲಿರುವ ಈ ಅರಣ್ಯ ಹಿಂದಿನ ಕಾಲದಲ್ಲಿ ಹುಲಿಗಳಿಗೆ ಹೆಸರುವಾಸಿ ಆಗಿತ್ತು ಎಂಬುದು ಜನರ ಅಂಬೋಣ. ಪಿಲಿ+ಆರು (ಪಿಲಿ=ಹುಲಿ) ಎಂಬ ಸಂಧಿ/ಸಮಾಸ ಅದಕ್ಕೆ ಪುಷ್ಟಿ ಕೊಡುತ್ತದೆ. ಮತ್ತೆ ಖಾನ ಎಂದು ಹೇಳಿದ್ದು ಸ್ಪೆಲ್ಲಿಂಗು ಕೆಎಚ್ ಇರುವುದರಿಂದ!

 

ಮುಖ್ಯವಾಗಿ ಮಂಗಗಳ ರಾಜ್ಯವಾಗಿರುವ ಈ ಕಾಡಿನಲ್ಲಿ ಕೇರೆ, ಬಡ್ದ, ನಾಗರ ಹಾವು, ಹೆಬ್ಬಾವು, ಕಡಂಬಳ, ಕನ್ನಡಿ ಹಾವು ಇವೇ ಮೊದಲಾದ ಹಾವಿನ ಪ್ರಕಾರಗಳು ಸಿಗುತ್ತವೆ. ಒಟ್ಟಾರೆ ಕಾಳಿಂಗ ಬಿಟ್ಟು ಮತ್ತೆ ಎಲ್ಲಾ ಫೇಮಸ್ ಹಾವುಗಳು ಸಿಗುತ್ತವೆ ಅಂದುಕೊಳ್ಳಿ. ಪ್ರಾಣಿಗಳಲ್ಲಿ ಕಾಡುಹಂದಿ, ಮೊಲ, ಮುಳ್ಳು ಹಂದಿ ಮುಖ್ಯ ಪ್ರಾಣಿಗಳು ಏಕೆಂದರೆ ಇವನ್ನೂ ಬೇಟೆಯಾಡಿ ತಿನ್ನುವ ವಿಷಯ ನನಗೆ ಗೊತ್ತು. ಚಿಕ್ಕಪ್ಪನಿಗೆ ಒಮ್ಮೆ ಹುಲಿ ಮರಿ ಸಿಕ್ಕಿದೆ ಎಂದು ಅಮ್ಮ ಅಂದಿದ್ದು ಮನೆಗೆ ತಡವಾಗಿ ಬರುವ ನನ್ನ ಅಭ್ಯಾಸವನ್ನು ತಪ್ಪಿಸಲು ಹೇಳಿದ್ದೋ ಅಥವಾ ಸತ್ಯವೇ ಹೇಳಿದ್ದೋ ಗೊತ್ತಿಲ್ಲ. ಒಟ್ಟಾರೆ ಭಯಾನಕ ಕಾಡು, ಮನೆಗೆ ಅದರ ಒಂದು ಭಾಗ ಹೊಂದಿಕೊಂಡೇ ಇರುವುದರಿಂದ ಈ ಪ್ರಾಣಿಗಳ ದರ್ಶನ, ಪಕ್ಷಿಗಳೂ ಹೇರಳವಾಗಿದ್ದರೂ ಹೆಸರಿಡಿದು ಹೇಳುವಷ್ಟು ಜ್ಞಾನ ನನಗಿಲ್ಲ, ನವಿಲು ಒಂದಿದೆ ಎಂದು ಧೈರ್ಯವಾಗಿ ಹೇಳಬಲ್ಲೆ. ಮತ್ತೆ ತುಂಬಾ ಹಕ್ಕಿಗಳು ಹಾಡುತ್ತಿದ್ದರೂ ಓದಲೆಂದು ಹೋಗಿ ಮಲಗುತ್ತಿದ್ದ ನನಗೆ ಅವುಗಳನ್ನು ಗುರುತಿಸುವಷ್ಟು ವ್ಯವಧಾನ ಇರಲಿಲ್ಲ.

ಪಿಲಾರುಖಾನ ಈ ರೀತಿ ಕೇವಲ ಜಿಯೋಗ್ರಾಫಿಕ್ ಮಟಿರಿಯಲ್ ಅಲ್ಲ, ಇದಕ್ಕೆ ತನ್ನದೇ ಆದ ಪುರಾಣ ಕೂಡ ಇದೆ. ಭಾರ್ಗವ ಋಷಿ ಇಲ್ಲಿ ತಪಸ್ಸು ಮಾಡಿದ್ದಾರೆಂದು ಹೇಳುತ್ತಾರೆ. ಕೆಲವೊಮ್ಮೆ ಸತ್ಯವಾಗಿರಬಹುದು ಎಂದು ಅನಿಸುವುದೂ ಉಂಟು. ಇಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ತುಂಬಾ ಪ್ರಸಿದ್ಧ ಶಿವ ದೇವಾಲಯ. ದೇವಸ್ತಾನಕ್ಕೆ ಮುಖ್ಯ ರಸ್ತೆಯಿಂದ ಮಣ್ಣಿನ ರಸ್ತೆಯಲ್ಲಿ ಹೋಗಬೇಕು, ಒಮ್ಮೆ ದೇವಸ್ತಾನಕ್ಕೆ ಹೋದರೆ ಅದಕ್ಕಿಂತ ದೊಡ್ಡ ಖುಷಿ ಇಲ್ಲ ನನಗೆ. 'ದೇವರು ಇದ್ದಾನೋ ಇಲ್ಲವೋ ಆದರೆ ನೂರಾರು ಜನ ಒಂದೇ ಕಡೆ ತಮ್ಮ ನಂಬಿಕೆಗಳನ್ನು ಹರಿಯಬಿಟ್ಟರೆ ಅದಕ್ಕೆ ನಿಜವಾಗಿಯೂ ಕಳೆ ಬರುತ್ತದೆ' ಎಂದು ಹೇಳಿದ ಗುರು ಶ್ರೀಧರ ಮೂರ್ತಿಯವರ ಮಾತುಗಳು ಅಕ್ಷರಹಃ ಸತ್ಯ ಎಂದು ಅರ್ಥವಾಗಿದ್ದು ಈ ದೇವಳಕ್ಕೆ ಬಂದ ನಂತರ.



ಪಿಲಾರು ದೇವಸ್ತಾನಕ್ಕೆ ನಾನು ಹೋದರೆ ಅಲ್ಲಿ ತುಂಬಾ ಹೊತ್ತು ಇರಲು ಇಷ್ಟ ಪಡುತ್ತೇನೆ. ಗರ್ಭ ಗುಡಿಯ ಹೊರಗೆ ಕುಳಿತುಕೊಳ್ಳಲು ಇರುವ ಆವರಣದಲ್ಲಿ ದೇವಸ್ತಾನದ ಘಂಟೆಯ ಶಬ್ದ, ಹಕ್ಕಿಗಳ ಕಲರವ, ತಂತ್ರಿಗಳ ಆಗೊಮ್ಮೆ ಈಗೊಮ್ಮೆ ಕೇಳುವ ಮಂತ್ರ - ಒಂದು ರೀತಿಯಲ್ಲಿ ಮನೋಹರ ಭಾವ ಮನದಳೆಯುತ್ತದೆ. ಇದೇ ರೀತಿಯ ಭಾವ ಆಗುವುದು ಮಂಗಳೂರಿನ ಸೋಮೇಶ್ವರ ದೇವಸ್ಥಾನದಲ್ಲಿ. ಇವೆರಡನ್ನೂ ಬಿಟ್ಟು ನನಗೆ ಇಂಥ ಆಧ್ಯಾತ್ಮಿಕ ಭಾವ ತರುವಂತಹ ದೇವಸ್ತಾನಗಳು ಇಲ್ಲ ಎಂದೇ ಹೇಳಬಹುದು. ಅದಕ್ಕಾಗಿ ಕಾನ ದೇವಸ್ತಾನಕ್ಕೆ ಇಲ್ಲ ಹೇಳುವ ಅಭ್ಯಾಸವಿಲ್ಲ. ಕಾಡಿನ ವಿಸ್ತಾರದ ಅರಿವಿಲ್ಲ, ಆದರೂ ಪಿಲಾರುಖಾನ ನನ್ನ ಕಾಡಿನ ಬಗೆಗಿನ ಪ್ರೀತಿಗೆ ಗರಿ ಕೊಟ್ಟಿದೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ. ಅಲ್ಲಿನ ನೆನಪುಗಳಲ್ಲಿ ಆದ ಆಕ್ಸಿಡೆಂಟ್ ಮುಖ್ಯವಾದರೆ ಇನ್ನೊಂದು ಹುಡುಕಿಕೊಂಡು ಹೋದ ಕೆರೆ!

ಮುದ್ದಣನ ಮಂಚದಲ್ಲಿ ಬಿದ್ದುಕೊಂಡು, 'ಬೋರ್ ಹೊಡೀತಾ ಇದೆ. ಎಲ್ಲಿಗಾದರೂ ಹೋಗೋಣ' ಎಂದು ಕಾರ್ತಿಕನಲ್ಲಿ ಹೇಳಿದಾಗ 'ಅಪ್ಪ ಹೋಗಲಿ, ಮತ್ತೆ ಒಂದು ಸ್ಥಳಕ್ಕೆ ಹೋಗೋಣ' ಎಂದ. ಏನೋ ಎಡವಟ್ಟಿನ ಸ್ಥಳವೇ ಎಂದು ಮನದಲ್ಲಿ ಶಂಕೆ ಆಯಿತು. ಅವನಮ್ಮನಿಗೆ ನನ್ನೊಂದಿಗೆ ಸೇರಿ ಅವನು ಹಾಳಾಗುತ್ತಿದ್ದ ಎಂಬ ಶಂಕೆಯಿಂದ ನಾನು ಆದಷ್ಟೂ ಅಮ್ಮನ ಎದುರು ಬರುವುದನ್ನು ತಪ್ಪಿಸಲು ಸೀದಾ ಮನೆಗೆ ಹೋಗುತ್ತಿದ್ದೆ. ಇಲ್ಲವಾದಲ್ಲಿ ಮೊದಲು ಅವರ ಹೋಟೆಲಿನಲ್ಲಿ ಶ್ರೀಧರಣ್ಣ ಮಾಡಿದ ಗೋಳಿ ಬಜೆ ತಿನ್ನುತ್ತಾ ಬೇರೆ ಕಸ್ಟಮರ್ ಬಂದರೂ ನನ್ನ ಸ್ಥಳ ಬಿಟ್ಟು ಕೊಡದೆ ಟಿವಿ ನೋಡುತ್ತಾ ಕುಳಿತಿರುತ್ತಿದ್ದೆ. ಹೆಣ್ಣು ನಿಜವಾಗಿಯೂ ವಿಚಿತ್ರ ಸೃಷ್ಟಿ ಎಂದು ಅರ್ಥ ಮಾಡಿಸಿದ ಮೊದಲ ಮಹಿಳೆ ಆಕೆ.

ಸಾಯಂಕಾಲದ ಹೊತ್ತಿಗೆ 'ಸರಿ ಹೋಗೋಣ' ಎಂದು ಹೇಳಿದ ಕಾರ್ತಿಕನಿಗೆ ಅಪ್ಪ ಹೋದ ನೆಮ್ಮದಿ ಇದ್ದರೆ ನನಗೆ ಮನೆಯಿಂದ ಹೊರಗೆ ಹೋಗುವ ಉನ್ಮಾದ. ಸುಮಾರು ದೂರ ರಸ್ತೆಯಲ್ಲೇ ನಡೆದ ನಾವು ಮತ್ತೆ ಹೊಕ್ಕಿದ್ದು ಕಾಡಿನ ಒಳಗೆ, ಅದೂ ದಾರಿಯಿರದ ಹಾದಿಯಲ್ಲಿ.
'ಎಲ್ಲಿಗೆ ಹೋಗುತ್ತಿದ್ದೇವೆ' ಎಂದು ಕೇಳಿದಕ್ಕೆ ಉತ್ತರ ಬಂತು 'ಕೆರೆಗೆ'!
'ಕೆರೆ, ಇಲ್ಲಿ ಎಲ್ಲಿದೆ ಕೆರೆ?'     ಉತ್ತರ ಸಮಾಧಾನಕರವಾಗಿ ಬಂದರೆ ಚಿಂತೆಯಿಲ್ಲ, ಆದರೆ ಅವನ ಉತ್ತರ ಬಂದಿದ್ದು 'ಗೊತ್ತಿಲ್ಲ! ಇದೆ ಅಂತ ಮೊನ್ನೆ ಹೋಟೆಲಿಗೆ ಬಂದವರು ಹೇಳ್ತಾ ಇದ್ದರು. ಈಗ ನಾವು ಒಳಗೆ ಬಂದೆವಲ್ಲಾ ಅಲ್ಲಿಂದ ಹೋದರೆ ಸಿಗತ್ತೆ ಅಂದಿದ್ರು' ಎಂದು ನನ್ನ ಪೇಚಲು ಮುಖ ನೋಡಿ ಸುಂದರವಾದ ನಗು ಬೀರಿದ. ಮನೆಯಲ್ಲಿ ಸುಮ್ಮನೆ ಪಟ್ಟಾಂಗ ಹೊಡೆಯುವ ಬದಲು ಇದು ಚೆನ್ನ ಅಂದುಕೊಂಡು ನಾನೂ ಹೆಜ್ಜೆ ಹಾಕಿದೆ.

ಸುಮಾರು ಹೊತ್ತು ನಡೆದ ನಂತರ ನನಗೆ ಕೆರೆ ಸಿಗತ್ತೆ ಅನ್ನುವ ನಂಬಿಕೆ ಕ್ಷೀಣವಾಗತೊಡಗಿತ್ತು. ಹಿಂದೆ ತಿರುಗಿ ಹೋದರೆ ರಸ್ತೆ ಹಿಡಿಯುತ್ತೇವೆ ಎಂಬ ಭರವಸೆ ಕೂಡ ಇರಲಿಲ್ಲ. ಆದರೆ ಅವನೂ ಹಿಂದೆ ಹೋಗುವ ಮಾತೆತ್ತಿರಲಿಲ್ಲ. ಯಾವುದೋ ಕೋಲು ಮುರಿದು ನಡೆಯುತ್ತಲೇ ಇದ್ದ. ನಡೆಯುತ್ತಲೇ ನಿಂತ. ನನಗೂ ಕೇಳತೊಡಗಿತ್ತು ನೀರಿನ ಸದ್ದು, ತುಂಬಾ ಸಣ್ಣಗೆ! ಭಾರೀ ನಿರೀಕ್ಷೆಯಿಂದ ಆದ ಉಪಯೋಗವೆಂದರೆ ಹೆಚ್ಚಿನ ವೇಗ! ಒಂದು ಸಣ್ಣ ಆಶಾಕಿರಣ ಸಿಕ್ಕಾಗ ಹೇಗೆ ಆಗುವುದೇ ಇಲ್ಲ ಎಂದುಕೊಂಡದ್ದನ್ನು ಆಗಿಸಲು ಪ್ರೋತ್ಸಾಹ ಸಿಗುವ ಹಾಗೆ ನಾವು ಬೇಗಬೇಗ ನಡೆಯತೊಡಗಿದೆವು. ಸಿಕ್ಕಿತ್ತು ನೀರು.

ಸಾಮಾನ್ಯ ಕೆರೆಯಾಗಿತ್ತು ಅದು. ಅಷ್ಟೇನೂ ದೊಡ್ಡದಲ್ಲ. ಆದರೆ ಅದರ ಆಚೆ ಬದಿಯಲ್ಲಿ ಕಾಣುತ್ತಿತ್ತು ಬಿದಿರಿನ ಮೆಳೆ. ನಮಗೆ ಆಗ ಅದು ಆಕರ್ಷಕವಾಗಿ ಕಂಡಿತ್ತು. ಅದಕ್ಕಾಗಿ ಕೆರೆ ದಾಟಬೇಕಿತ್ತು. ಇಬ್ಬರಿಗೂ ಈಜಲು ಬರುತ್ತಿರಲಿಲ್ಲ. ಹಾವುಗಳು ಏನಾದರೂ ಇದ್ದರೆ ಎಂದು ರಕ್ಷಣೆಗಾಗಿ ಕೋಲು ಒಂದನ್ನು ಎತ್ತಿಕೊಂಡು ಕೆರೆಯಲ್ಲಿ ಇಳಿದೆವು. ತುಸು ಹೊತ್ತು ಆರಾಮವಾಗೆ ನಡೆದೆವು ಕೂಡ. ಮುಂದೆ ಹೋದಂತೆ ಯಾಕೋ ಮಣ್ಣು ಸಾಫ್ಟ್ ಸಾಫ್ಟ್ ಆದಂತೆ ಆಯಿತು.

ಒಂದೆರಡು ಹೆಜ್ಜೆ ಇಟ್ಟಂತೆಯೇ ಕಾಲುಗಳು ಒಳಗೆ ಹೋಗತೊಡಗಿದವು. ಕಾಲುಗಳನ್ನು ಬೇಗ ಬೇಗ ಎತ್ತಿ ಇಟ್ಟರೂ ಕದಡುತ್ತಿರುವ ನೀರು ಮತ್ತು ಹೆಚ್ಚು ಸಿಗುತ್ತಿದ್ದ ಕೆಸರಿನಿಂದ ಇಬ್ಬರೂ ಹೆದರಿದೆವು. ನಾನಂತೂ ಬೀಳಲು ಅನುವಾದಾಗ ಕಾರ್ತಿಕ್ ಹೇಳಿದ 'ವಾಪಾಸ್ ಹೋಗೋಣ'. ಸರಿ ಎಂದು ಬಂದು ಪ್ಯಾಂಟ್ ನೋಡಿದರೆ ಕಪ್ಪು ಕಪ್ಪು! ಕೆಸರಿನಿಂದ ಮುಳುಗಿ ಹೋಗಿತ್ತು. ಆದಷ್ಟು ಅಲ್ಲೇ ತೊಳೆದು ಕೆರೆಯ ಮೇಲೆ ಇನ್ನೊಂದು ನೋಟ ಬೀರಿದೆವು. ನಾವು ಗಲಭೆಯೆಬ್ಬಿಸಿ ಬಂದ ಜಾಗ ಇನ್ನೂ ತನ್ನ ನಿಶಾನೆಯನ್ನು ಉಳಿಸಿಕೊಂಡಿತ್ತು. ಇನ್ನೂ ಮುಂದೆ ಹೋಗಿದ್ದರೆ ಆಳ ಹೆಚ್ಚಾಗಿ ವಾಪಸ್ ಬರದಂತಾಗಿದ್ದರೆ ಎಂದೆನಿಸಿ ನನಗೆ ಭಯವಾಗತೊಡಗಿತು. ಅಂತೂ ಕತ್ತಲೆಯ ಮೊದಲು ಮನೆ ಸೇರಿದೆವು. ಎಂದಿನಂತೆ ಅವನಿಗೂ ನನಗೂ ಮನೆಯಲ್ಲಿ ಮಂಗಳಾರತಿ ಆಗಿತ್ತು.

ಕಾರ್ತಿಕನನ್ನು ಬಿಟ್ಟು ಬೇರೆ ಹೆಚ್ಚಿನವರೊಂದಿಗೆ ನನ್ನ ಒಡನಾಟ ತೀರಾ ನೆಚ್ಚಿನದಾಗಿದ್ದರೂ ಯಾರೊಂದಿಗೂ ಭಾವನಾತ್ಮಕವಾದ ಸಂಬಂಧ ಆಗ ಇರಲಿಲ್ಲ. ಅವನು ಸ್ವಲ್ಪ ಹೆಚ್ಚು ಹತ್ತಿರದವನಾಗಿದ್ದ. ಮನೆಗೂ ಮನಸ್ಸಿಗೂ! ಆದರೆ ನಿಟ್ಟೆಯಲ್ಲಿ ಕಲಿಯತೊಡಗಿದ್ದರಿಂದ ಅವನ ಜೊತೆ ಕಡಿಮೆಯಾಗತೊಡಗಿದ ಸಂಪರ್ಕ ಈಗೀಗ ನಿಂತೇ ಇರುವುದು ದೂರ ಹೇಗೆ ಮನಸ್ಸುಗಳನ್ನು ನಿಜವಾಗಿಯೂ ದೂರ ಮಾಡುತ್ತದೆ ಎಂಬುದರ ಅರಿವು ಮಾಡಿಸುತ್ತದೆ. ಆದರೆ ಮೊನ್ನೆ ತಾನೇ ಆಕ್ಸಿಡೆಂಟ್ ಆಗಿ ಕಾಲು ಕಳೆದುಕೊಂಡವನ ಬಗ್ಗೆ ಎಷ್ಟೋ ವರುಷಗಳ ನಂತರ ಅತ್ತಿದ್ದು ದೂರವಾದಷ್ಟು ಪ್ರೀತಿಯೂ ಹೆಚ್ಚು ಎಂದು ತಿಳಿಸುತ್ತದೆ.          

Rating
No votes yet

Comments